11,513 ಕೋಟಿ ರೂ.ಗಳ 10 ಯೋಜನೆಗಳಿಗೆ ಅನುಮತಿ

Share

ಬೆಂಗಳೂರು, ಏ,18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 58 ನೇ ಸಭೆಯಲ್ಲಿ

ಒಟ್ಟು 11,513 ಕೋಟಿ ರೂ.ಗಳ 10 ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು. ಇದರಿಂದ 46,984 ಉದ್ಯೋಗ ಸೃಜನೆಯಾಗುವ ನಿರೀಕ್ಷೆ ಇದೆ.

ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪಗುತ್ತಿಗೆ ಮತ್ತು ಗುತ್ತಿಗೆಯ ಅವಧಿಯನ್ನು ಮಿತಿಮೀರಿ ವಿಸ್ತರಿಸಬಾರದು. ಈ ಬಗ್ಗೆ ಸ್ಪಷ್ಟ ನಿಯಮಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಕೈಗಾರಿಕೆಗಳಿಗೆ ನೀಡಲಾಗಿರುವ ಜಮೀನು ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.ವಿದ್ಯುತ್ ಹಾಗೂ ಸ್ಟೀಲ್ ಯೋಜನೆಗಳಿಗೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ನೀರಿನ ಬಳಕೆಯ ಪ್ರಮಾಣ ಹೆಚ್ಚಿರುತ್ತದೆ. ಕೈಗಾರಿಕೆಗಳಲ್ಲಿ ನೀರಿನ ಬಳಕೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.

10-20 ವರ್ಷಗಳ ಹಿಂದೆ ಸ್ಥಳ ಮಂಜೂರಾತಿ ಮಾಡಿಸಿಕೊಂಡಿದ್ದರೂ ಯೋಜನೆಗೆ ಬಳಕೆಯಾಗದೆ ಉಳಿದುಕೊಂಡಿರುವ ಕೈಗಾರಿಕೆಗಳಿವೆ. ಇದನ್ನು ಬೇರೆಯವರಿಗೆ ಕೊಡಲೂ ಸಾಧ್ಯವಿಲ್ಲದ ಸ್ಥಿತಿ ಇದೆ. ಈ ಬಗ್ಗೆ ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪರಿಶೀಲನೆಗಾಗಿ ಪ್ರತ್ಯೇಕವಾಗಿ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ನವೆಂಬರ್ 2 ಮತ್ತು 3 ರಂದು ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಯೋಜನೆಗಳು ಪೂರಕವಾಗಲಿವೆ. ಭೂಮಿ ನೀರು, ವಿದ್ಯುತ್ ಮೂಲಭೂತ ಸೌಕರ್ಯ, ವಿನಾಯತಿ ನೀಡುವುದು, ಹೊಸ ಕೈಗಾರಿಕಾ ನೀತಿ 2025 ರ ಅಡಿಯಲ್ಲಿ ಯಾವ ರೀತಿ ಸೌಲಭ್ಯಗಳನ್ನು ನೀಡಬಹುದು ಎಂಬ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಸತಿ ಸಚಿವ ವಿ.ಸೋಮಣ್ಣ, ಉನ್ನತ
ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐ.ಟಿ. ಬಿ.ಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Girl in a jacket
error: Content is protected !!