ಸಕ್ರಜ್ಜಿ ಬದುಕಿನ ನೈಜತೆಯ ಕಥೆ…!

Share

 

ಸಕ್ರಜ್ಜಿ ಬದುಕಿನ ನೈಜತೆಯ ಕಥೆ…!

ಆಗಷ್ಟೇ ನಾಚುತ್ತಲೇ ದಾಂಗುಡಿಯಿಡುತ್ತಿದ್ದ ಚಳಿಗಾಲದ ದಿನವೊಂದರ ಚುಂಚುಂ ಮುಂಜಾನೆ. ಹೊರಗೆ ಇನ್ನೂ ಮಬ್ಬುಗತ್ತಲು ಕವಿದಿತ್ತು. ರಾತ್ರಿ ಎಂಟರ ವೇಳೆಗೆ, ಎಂದಿಗಿಂತ ಮುಂಚಿತವಾಗಿಯೇ ಹಾಸಿಗೆ ಸೇರಿದವನು, ಬೆಳಿಗ್ಗೆ ಐದರ ವೇಳೆಗೇ ಎಚ್ಚರವಾಗಲು, ಮತ್ತೆ ನಿದ್ದೆ ಬಾರದೆ, ಕಣ್ಣು ಬಿಟ್ಟುಕೊಂಡೇ ಹಾಸಿಗೆಯ ಮೇಲೆ ಬಿದ್ದುಕೊಂಡು ಹೊರಳಾಡುತ್ತಿದ್ದೆ. ಹೊರಗೆ ಹಕ್ಕಿಗಳು “ವಿಪರೀತ” ಎನ್ನುವ ಮಟ್ಟಕ್ಕೆ ತಮ್ಮ “ಚಿಲಿಪಿಲಿ” ಗಾನದ, ಪ್ರಾತಃಕಾಲದ ಉದಯರಾಗವನ್ನು, ಅದಾಗಲೇ ಶುರುವಿಟ್ಟುಕೊಂಡು, ಆಲಾಪದ ತಾರಕಕ್ಕೇರಿದ್ದವು. ನನಗಿಂತ ಎರಡು ತಾಸುಗಳ ಮುಂಚೆಯೇ ಎದ್ದಿದ್ದ ಅವ್ವ ತನ್ನ ಎಂದಿನ ದಿನಚರಿಯಲ್ಲಿ ನಿರತಳಾಗಿದ್ದಳು. ಅಂಗಳವನ್ನು ಗುಡಿಸಿ, ನೀರು ಚಿಂಪಡಿಸಿ, ರಂಗೋಲಿ ಹಾಕಿ, ದನದ ಕೊಟ್ಟಿಗೆಯಲ್ಲಿ ಎಮ್ಮೆ ಹಾಲನ್ನು ಹಿಂಡುತ್ತಿದ್ದಳು. ಹಾಸಿಗೆಯಿಂದ ಎದ್ದೇಳಲು, ಆಲಸ್ಯದ ಕಾರಣದಿಂದ ಮೀನಾಮೇಷ ಎಣಿಸುತ್ತಿದ್ದ ನಾನು, ಮತ್ತೊಮ್ಮೆ ರಗ್ಗನ್ನು ತಲೆಯ ಮೇಲೆ ಪೂರ್ತಿ ಮುಚ್ಚುವಂತೆ ಎಳೆದುಕೊಂಡು, ಅಲ್ಲಲ್ಲಿ ತೂತು ಬಿದ್ದಿದ್ದ ಹೊದಿಕೆಯ ರಂಧ್ರಗಳಿಂದ, ರೂಮಿನ ಕಿಟಕಿಯಿಂದ ತೂರಿ ಬರುತ್ತಿದ್ದ ಸೂರ್ಯನ ಬೆಳಕಿನೊಂದಿಗೆ ಆಟವಾಡುವ ಪ್ರಯತ್ನ ಮಾಡುತ್ತಿದ್ದೆ. ಅವ್ವ ಹಾಲು ಕರೆದಾದ ಮೇಲೆ ನಾಲ್ಕಾರು ಮನೆಯವರಿಗೆ ವರ್ತನೆಯ ಹಾಲನ್ನು ಚಳಿಯಲ್ಲಿ ನಡುಗುತ್ತಾ ನಡೆದು ಹೋಗಿ ತಲುಪಿಸಬೇಕಾದ ದಿನದ ಮೊದಲ ಅನಿವಾರ್ಯ ಕೆಲಸದ ನೆನಪು ನನ್ನಲ್ಲಿ ಬೆವರನ್ನು ಮೂಡಿಸುತ್ತಿತ್ತು. ಚಳಿಗಾಲದಲ್ಲಿ ಧಾರಾಳವಾಗಿ ಬೀಳುತ್ತಿದ್ದ ಸೂಡ್ರು ಉಂಟು ಮಾಡುತ್ತಿದ್ದ, ಮೈ ಕೊರೆಯುವಂತಿದ್ದ ಚಳಿಯ ಅನುಭವ, ನನ್ನ ಮಟ್ಟಿಗೆ ಸಹಿಸಲು ಅಸಾಧ್ಯವೇ ಆಗಿತ್ತು.

ಇದೇ ಹೊತ್ತಿಗೆ ಮನೆಯ ಅಂಗಳದಲ್ಲಿ ಅವ್ವ ಯಾರೊಟ್ಟಿಗೋ ಜೋರಾಗಿ ಮಾತನಾಡುತ್ತಿದ್ದ ಧ್ವನಿ ಕೇಳ ಬರಹತ್ತಿತು. “ಬೆಳ್ಳಂಬೆಳಿಗ್ಗೆಯೇ ಯಾರು ಬಂದಿರಬಹುದು?” ಎಂದು ಧ್ವನಿಯ ಮೂಲದ ಕಡೆ ಮಲಗಿದ್ದಲ್ಲಿಂದಲೆ ಕಿವಿಯಾದವನಿಗೆ ಬಂದವರು ಯಾರು? ಎನ್ನುವುದರ ಗುರುತು ಹತ್ತಲಿಲ್ಲ. ಮಾತು ಸಾಗುತ್ತಿದ್ದ ಹಾಗೆಯೇ ಅವ್ವ ಜೋರು ಧನಿಯಲ್ಲಿ ಅಳಲು ಮೊದಲು ಮಾಡಿದ್ದು ಕೇಳಿದ ನಾನು ಹಾಸಿಗೆಯಿಂದ ಚಂಗನೆ ಜಿಗಿದು ಒಂದೇ ನೆಗೆತದಲ್ಲಿ ಮನೆಯ ಅಂಗಳ ಸೇರಿದೆ. ಬಳ್ಳಾರಿ ಐಯ್ಯಜ್ಜಿಯ ಮೂರನೇ ಮಗ ಶಿವಶಂಕರಿ ಅಂಗಳದ ಒಂದು ತುದಿಯಲ್ಲಿ ಪೆಚ್ಚಾಗಿ ನಿಂತಿದ್ದ. ಅವನಿಗೆ ಒಂದೆರೆಡು ಮಾರು ದೂರದಲ್ಲಿ ನಿಂತು ರೋಧಿಸುತ್ತಿದ್ದ ಅವ್ವ, ತನ್ನ ಕೈಲಿದ್ದ ಖಾಲಿ ಪಾತ್ರೆಯನ್ನು ಅಂಗಳದ ಮೇಲೆ ಕುಕ್ಕಿ, ಶಿವಶಂಕರಿಯ ಕೈಯನ್ನು ಹಿಡಿದು, ಅವನನ್ನು ಎಳೆಯುತ್ತಲೇ, ಉಟ್ಟ ಸೀರೆಯಲ್ಲಿಯೇ, ತಲೆಯ ಮೇಲೆ ಮುಸುಕನ್ನು ಎಳೆದುಕೊಂಡು, ಆತುರಾತುರವಾಗಿ ರಸ್ತೆಗಿಳಿದವಳು, ನಡಿಗೆ ಮತ್ತು ಓಟದ ಮಧ್ಯದ್ದು ಎನ್ನಬಹುದಾದ ತೀವ್ರತೆಯ ನಾಗಾಲೋಟವೊಂದಕ್ಕೆ ಚಾಲನೆ ನೀಡಿದಳು. ಅವ್ವನ ನಡಿಗೆಯೋ, ಓಟವೋ ಒಂದೂ ಗೊತ್ತಾಗದ ರೀತಿಯ ಚಲನೆಯನ್ನು ಸರಿಗಟ್ಟಲು ಆಯಾಸ ಪಡುವಂತೆ ಕಾಣುತ್ತಿದ್ದ ಶಿವಶಂಕರಿ ಅಕ್ಷರಶಃ ಓಡಲಿಕ್ಕೇ ಮೊಡಲಿಟ್ಟಿದ್ದ. ಅವ್ವ ಅರಚುತ್ತಲೇ ರಸ್ತೆಯನ್ನು ಕ್ರಮಿಸುತ್ತಿದ್ದರೆ, ತೀರಾ ಸಪ್ಪೆಮುಖ ಹೊತ್ತ ಶಿವಶಂಕರಿ ಮಾತ್ರ ತಾನು ಅರುಹಿದ ವಿಷಯ ಅವ್ವನ ಮೇಲೆ ಬೀರಿದ ಈ ಪರಿ ಪ್ರತಿಕ್ರಿಯೆಗೆ ಅವ್ವಕ್ಕಾಗಿದ್ದ. ವಿಷಯದ ತಲೆಬುಡ ತಿಳಿಯದ ನಾನು ನನಗರಿವಿಲ್ಲದಂತೆಯೆ ಅವ್ವನನ್ನು ಹಿಂಬಾಲಿಸುತ್ತಾ ಓಟ ಕಿತ್ತೆ.

ಊರಿನ ಮುಖ್ಯರಸ್ತೆಯಲ್ಲಿ ಬರುವ ಪೊಲೀಸ್ ಸ್ಟೇಷನ್ ದಾಟಿ, ಕಲ್ಲಪ್ಪದೇವರ ದೇವಸ್ಥಾನವನ್ನು ಹಾಯ್ದು, ಕೆನರಾ ಬ್ಯಾಂಕ್ ಬಿಲ್ಡಿಂಗ್ ಹಿಂದಕ್ಕಿಟ್ಟು, ಬ್ಯಾಂಕಿನ ಹಿಂದೆ ಸುಮಾರು ಇಪ್ಪತ್ತು ಮೀಟರ್ ದೂರದಲ್ಲಿ ಎಡಕ್ಕಿದ್ದ ಒಂದು ಸಣ್ಣ ಓಣಿಯನ್ನು ಹೊಕ್ಕು, ಓಣಿಯ ಎಡಭಾಗದಲ್ಲಿದ್ದ ಸಣ್ಣಮನೆಯೊಂದರ ತೆರೆದೇ ಇದ್ದ ಬಾಗಿಲನ್ನು ಹಾರಿಕೊಂಡೆ ಒಳಹೊಕ್ಕ ಅವ್ವ, ಹೊಸ್ತಿಲು ದಾಟುತ್ತಲೇ ಮೈ ಮೇಲೆ ದೆವ್ವ ಬಂದವರಂತೆ ವರ್ತಿಸುತ್ತಾ, ಮನೆಯ ಪಡಸಾಲೆಯ ಮುಂದಿದ್ದ ಗೋದಲಿಯ ಮಧ್ಯದಲ್ಲಿ, ಚಾವಣಿಯಿಂದ ಇಳಿಬಿದ್ದಿದ್ದ ಹಳೆಯ ಸೀರೆಯೊಂದಕ್ಕೆ ಕೊರಳೊಡ್ಡಿ, ನೇತಾಡುತ್ತಿದ್ದ ಹೆಂಗಸಿನ ಪಾದಗಳನ್ನು ಹಿಡಿದು ಹೊರಡಿಸಿದ ಆರ್ತನಾದಕ್ಕೆ ಅದಾಗಲೇ ಜೀರ್ಣಾವಸ್ಥೆಯನ್ನು ತಲುಪಿದ್ದ, ತೆಂಗಿನಗರಿಗಳ ಮೇಲ್ಛಾವಣಿ, ಯಾವ ಕ್ಷಣದಲ್ಲಿಯಾದರೂ, ಕಿತ್ತು ಕಳಚಿ ಬೀಳುವ ಭಯ ನನ್ನನ್ನು ಆವರಿಸತೊಡಗಿತ್ತು. ಆ ಹೊತ್ತಿಗಾಗಲೇ ಐಯ್ಯಜ್ಜಿ, ಕಮಲಜ್ಜಿ, ಚಂದ್ರಕ್ಕ, ಬಸವರಾಜಣ್ಣ, ಮಲ್ಲಣ್ಣ, ಗಿಡ್ಡರಾಮಜ್ಜ ಮೊದಲಾದವರು ಸೇರಿದಂತೆ ಹದಿನೈದು ಇಪ್ಪತ್ತು ಜನರ ಗುಂಪೇ ನೆರೆದಿತ್ತು. “ಸಕ್ರಮ್ಮನನ್ನು ಮೊದಲು ಇಳಿಸಿಕೊಳ್ಳಿ” ಎನ್ನುವ ಗಿಡ್ಡರಾಮಜ್ಜನ ಅಣತಿಗೆ ತಲೆಬಾಗಿದ, ಅಲ್ಲಿದ್ದ ಒಂದಿಬ್ಬರು ರೆಡ್ಡಿ ಯುವಕರು ಗೋದಲಿಯ ಮೇಲೆ ಹತ್ತಿ, ಸಾವಕಾಶವಾಗಿ ಸಕ್ರಜ್ಜಿಯ ಕೊರಳ ಕುಣಿಕೆಯನ್ನು ಬಿಡಿಸಿ, ಗುಬ್ಬಜ್ಜಿಯ ಗಾತ್ರಕ್ಕೆ ಇಳಿದು ಹೋಗಿದ್ದ ಮೃತದೇಹವನ್ನು ಜತನದಿಂದ ಇಳಿಸಿ, ಪಡಸಾಲೆಯ ಮೇಲೆ ಹಾಸಿದ್ದ ಕಡ್ಡಿ ಚಾಪೆಯ ಮೇಲೆ ಮಲಗಿಸಿದರು. ಇಷ್ಟು ವೇಳೆಗಾಗಲೇ ಬಳ್ಳಾರಿ ಸಕ್ರಜ್ಜಿ ನೇಣು ಹಾಕಿಕೊಂಡು ಸತ್ತ ವಿಷಯ ಲಿಂಗಾಯಿತರಿದ್ದ ಕೋಟೆ, ಗಣೇಕಲ್ ಓಣಿಯ ತುಂಬೆಲ್ಲಾ ಕಾಡ್ಗಿಚ್ಚಿನಂತೆ ಹರಡಿದ್ದುದರಿಂದ, ಮೃತಳ ಸಂಬಂಧಿಕರು, ನೆಂಟರಿಷ್ಟರು ಹಿಂಡುಹಿಂಡಾಗಿ ಬರಲಿಕ್ಕೆ ಪ್ರಾರಂಭಿಸಿದ್ದರು. ಬಹಳ ಸಣ್ಣದಾದ ಮನೆಯಲ್ಲಿ, ನಿಲ್ಲಲೂ ಜಾಗವಿಲ್ಲದಂತಾಗಿ, ನನಗೆ ಉಸಿರು ಕಟ್ಟಲಿಕ್ಕೆ ಪ್ರಾರಂಭವಾಗಲು, ಕಷ್ಟಪಟ್ಟು ಗುಂಪನ್ನು ಸೀಳಿ ಹೊರಬಂದವನು, ಓಣಿಯನ್ನ ದಾಟಿ ಮುಖ್ಯರಸ್ತೆಗೆ ಬಂದು ನಿಂತೆ. ಅಷ್ಟರಲ್ಲಿಯೇ ಕೈಯಲ್ಲಿ ವಾಚು ಕಟ್ಟಿ, ತಂಬಿಗೆ ಹಿಡಿದು ಬಹಿರ್ದೆಸೆಗೆ ಹೊರಟಿದ್ದ ವ್ಯಕ್ತಿಯೊಬ್ಬರಿಂದ ಸಮಯವನ್ನು ಕೇಳಿ ತಿಳಿದವನು, ಶಾಲೆಗೆ ಲೇಟಾಗುತ್ತದೆ ಎನ್ನುವ ಕಾರಣಕ್ಕೆ, ಅವ್ವನನ್ನು ಸಕ್ರಜ್ಜಿಯ ಮನೆಯಲ್ಲೇ ಬಿಟ್ಟು, ಮನೆಯ ಕಡೆಗೆ ಬರ್ಕೀಸ್ ಕಿತ್ತೆ. ಇದಾದ ಸುಮಾರು ಒಂದು ಗಂಟೆಯ ನಂತರ ಸಕ್ರಜ್ಜಿಯ ಮನೆಯ ಮುಂದೆಯೇ ಹಾದು ಸ್ಕೂಲು ಸೇರಿದವನಿಗೆ ಬೆಳಗಿನ ಜನಗಳ ಗುಂಪು ಮೂರ್ನಾಲ್ಕು ಪಟ್ಟಿಗಿಂತಲೂ ಹೆಚ್ಚಿನ ಪ್ರಮಾಣಕ್ಕೆ ಹಿಗ್ಗಿದ್ದು ಕಂಡುಬಂದಿತು.

ಇಡೀ ದಿನ ಶಾಲೆಯಲ್ಲಿ ನನ್ನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ತರಗತಿಯ ಕಪ್ಪುಹಲಗೆಯ ಕಡೆ ನೋಡಿದರೆ ಅಲ್ಲಿ ಮಾಳಿಗೆಯಿಂದ ಜೋತು ಬಿದ್ದಿದ್ದ ಸಕ್ರಜ್ಜಿಯ ಮೃತ ದೇಹವೇ ಕಾಣಿಸಿದ ಹಾಗಾಗುತ್ತಿತ್ತು. ಮುಂದಿದ್ದ ಮರದ ಮಣೆಯ ಮೇಲಿದ್ದ ಶಾಲಾ ಪುಸ್ತಕಗಳನ್ನು ತಿರುವಿ ಹಾಕುವ ಹೊತ್ತೂ, ನಾಲಿಗೆಯನ್ನು ಹೊರಚಾಚಿ, ಬಾಗಿದ ಕುತ್ತಿಗೆ ಹೊತ್ತು, ಅಗಲವಾಗಿ ತೆರೆದ ಕಣ್ಣುಗಳ ಭಯಾನತೆಯನ್ನು ಸಾರುವಂತೆ ನೇತಾಡುತ್ತಿದ್ದ ಸಕ್ರಜ್ಜಿಯ ಶವದ ನೆನಪೇ ಕಾಡುತ್ತಿತ್ತು. ಹಾಗೂ, ಹೀಗೂ ಮಧ್ಯಾಹ್ನದ ಊಟದ ವೇಳೆಯವರೆಗೂ ಸ್ಕೂಲಿನಲ್ಲಿ ಸಮಯ ಕಳೆದವನು, ಊಟಕ್ಕೆಂದು ಮನೆಗೆ ಹೊರಟಾಗ ಸಕ್ರಜ್ಜಿಯ ಮನೆ ಮುಂದೆ ಹಾದು ಹೋಗುತ್ತಿದ್ದ ನನ್ನ ಮಾಮೂಲಿ ರಸ್ತೆಯನ್ನು ಬಿಟ್ಟು ಹೊಸ ಬಸ್ ಸ್ಟಾಂಡಿನ ಮೂಲಕ ಕೋಟೆಯ ಹೊರಗಿದ್ದ ದೊಡ್ಡ ಹುಣಸೇಮರದ ಅಡಿಯಲ್ಲಿ ಸಾಗಿಹೋಗುತ್ತಿದ್ದ ಊರ ಹೊರ ರಸ್ತೆಯನ್ನು ಹಿಡಿದೇ ಮನೆ ಸೇರಿದೆ. ಹುಣಸೇಮರದಲ್ಲಿ ಇರಬಹುದಾದ ದೆವ್ವಪಿಶಾಚಿಗಳ ಭಯದ ಹತ್ತು ಪಟ್ಟು ಭಯ ಬೆಳಿಗ್ಗೆ ನೋಡಿದ ಸಕ್ರಜ್ಜಿಯ ಮೃತದೇಹ ಉಂಟು ಮಾಡಿತ್ತು. ಹುಣಸೇ ಮರದ ದೆವ್ವಗಳನ್ನು ನಾನು ಈವರೆಗೂ ಕಂಡಿರಲಿಲ್ಲ, “ದೆವ್ವಗಳು ಇದ್ದಾವೆ” ಎಂದು ಗೆಳೆಯರು ಹೇಳಿದ ಮಾತುಗಳನ್ನು ನಂಬಿ ಶಾಲೆಗೆ ಬಂದು ಹೋಗಲು ತುಸು ಹತ್ತಿರವೇ ಎನ್ನಬಹುದಾದ ಈ ರಸ್ತೆಯನ್ನು ಶಾಶ್ವತವಾಗಿ ತೊರೆದು ಊರ ಮುಖ್ಯರಸ್ತೆಯನ್ನೇ ನೆಚ್ಚಿಕೊಂಡಿದ್ದೆ. ಆದರೆ ಇವತ್ತು ಮಾತ್ರ ಪ್ರತ್ಯಕ್ಷರೂಪದಲ್ಲಿ ನೋಡಿದ ಸಕ್ರಜ್ಜಿಯ ಶವ ನನ್ನಲ್ಲಿ ಹುಟ್ಟುಹಾಕಿದ್ದ ಭಯ ಹುಣಸೇಮರದಲ್ಲಿರಬಹುದಾದ ಭೂತ ಪಿಶಾಚಿಗಳ ಭಯದ ಎದುರು ಬಹಳ ಹೆಚ್ಚು ಅನ್ನಿಸಿತ್ತು.

ಈ ಹೊತ್ತಿಗಾಗಲೇ ಮನೆ ಸೇರಿದ್ದ ಅವ್ವನ ಕಣ್ಣಾಲಿಗಳು ಅತ್ತೂ ಅತ್ತೂ ಬೆಂಕಿಯುಂಡೆಗಳಂತೆ ಕೆಂಪಾಗಿದ್ದವು. ತಲೆಯ ಮೇಲಿನ ಕಪ್ಪುಮಿಶ್ರಿತ ಬಿಳಿ ಕೂದಲುಗಳು ಕೆದರಿ, ಎರಡು ಬೆಟ್ಟುಗಳ ಎತ್ತರಕ್ಕೆ ನಿಮಿರಿ ನಿಂತಿದ್ದವು. ಹಣೆಯ ಮೇಲಿಟ್ಟಿದ್ದ ದೊಡ್ಡ ಗಾತ್ರದ ಕುಂಕುಮ, ತುಸು ಅಳಿಸಿ, ಅಡ್ಡಾದಿಡ್ಡಿ ಹರಡಿ, ಹಣೆಯ ಅರ್ಧಭಾಗವನ್ನು ತನ್ನ ವಿಚಿತ್ರ ಆಕಾರದೊಂದಿಗೆ ಆವರಿಸಿಕೊಂಡಿತ್ತು. ಅವ್ವನ ಮುಖ ಎಂದಿಗಿಂತ ಸ್ವಲ್ಪ ಹೆಚ್ಚು ಊದಿದ ಹಾಗೆ ತೋರಿತು. “ಹೋಗು, ಊಟ ಮಾಡು” ಎಂದು ಪ್ರಯಾಸಪಟ್ಟು ಅವ್ವ ನನನ್ನು ಕುರಿತು ಹೇಳುವಾಗ ಬೆಳಗ್ಗಿನಿಂದ ಅತ್ತೂ ಕರೆದು ಅವಳ ಸ್ವರ ಕಟ್ಟಿ ಹೋಗಿದ್ದು ನನ್ನ ಗಮನಕ್ಕೆ ಬಂತು. ಸಂಬಂಧದಲ್ಲಿ ಸಕ್ರಜ್ಜಿ ಅವ್ವನ ಚಿಕ್ಕಮ್ಮ. ಅಂದರೆ ತಾಯಿ ನಾಗಮ್ಮನ ಸ್ವಂತ ತಂಗಿ. ಆದರೆ ವಾಡಿಕೆಯಲ್ಲಿ ಅವರ ಮಧ್ಯೆಗಿನ ಸಂಬಂಧ, ಒಡನಾಟ ಈ ರಕ್ತಸಂಬಂಧ ತರಬಹುದಾದ ಸಲಿಗೆಗಿಂತ ನೂರು ಪಟ್ಟು ಹೆಚ್ಚಾಗಿತ್ತು. ಅವ್ವನೆಂದರೆ ಪ್ರಾಣ ಬಿಡುತ್ತಿದ್ದ ಚಿಕ್ಕಮ್ಮನನ್ನು ಅವ್ವನೂ ವಿಪರೀತವಾಗಿ ಹಚ್ಚಿಕೊಂಡಿದ್ದಳು. “ಸಕ್ರಮ್ಮ ಸಣ್ಣಮ್ಮಾ”, ಸಕ್ರಮ್ಮ ಸಣ್ಣಮ್ಮಾ” ಎನ್ನುತ್ತಾ ಸಕ್ರಜ್ಜಿಯನ್ನು ಆದರಿಸಿ, ತನ್ನ ತಿಂಡಿ ಅಂಗಡಿಯ ಮೈಸೂರುಪಾಹಲವಾರು ಖಾದ್ಯಗಳನ್ನ, ಮನೆಗೆ ಬಂದ ಸಣ್ಣಮ್ಮನಿಗಪ್ಲೇಟುಗಳ ತುಂಬಾ ನೀಡಿದಷ್ಟೂ ಅವ್ವನ ಮನಸ್ಸು ತಣಿಯುತ್ತಿರಲಿಲ್ಲ. ಸಕ್ರಜ್ಜಿಯಾದರೂ ಅಷ್ಟೆ, ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳ ಬಹುಪಾಲನ್ನು ಪುಟ್ಟಿಗಳಲ್ಲಿ ತುಂಬಿ ತನ್ನ ಪ್ರೀತಿಯ ಮಗಳಿಗಾಗಿ ಪ್ರತೀವಾರ ತಪ್ಪದೇ ತಂದು ಕೊಡುತ್ತಿದ್ದಳು.

 

ಸ್ವಂತ ತಾಯಿಗಿಂತ ಹೆಚ್ಚಿನ ಮಮತೆ, ಸಲುಗೆಯನ್ನು ತೋರಿಸುತ್ತಿದ್ದ ಸಕ್ರಜ್ಜಿಯ ವಾತ್ಸಲ್ಯದ ಸಂಕೋಲೆಯಲ್ಲಿ ಅವ್ವ ಭದ್ರವಾಗಿ ಬಂಧಿಸಲ್ಪಟ್ಟಿದ್ದಳು. ತನ್ನ ತಂಗಿ ಐಯ್ಯಕ್ಕನನ್ನು ಬಳ್ಳಾರಿಯವರ ಮನೆಯ ಮಗನಾದ ಮೂಕ ನಿಂಗಪ್ಪನಿಗೆ ಧಾರೆ ಎರೆದುಕೊಟ್ಟಿದ್ದರೂ ಮತ್ತು ಸಕ್ರಜ್ಜಿ, ಐಯ್ಯಕ್ಕನ ನಡುವಿನ ಸಂಬಂಧ ಪೂರ್ತಿಯಾಗಿ ಹಳಸಿ ಹೋಗಿದ್ದರೂ ಇದರ ಲವಷೇಶ ಪರಿಣಾಮವೂ ತಾಯಿ ಮಗಳ ಸಂಬಂಧದ ಮೇಲಿನ ಕರಿನೆರಳಾಗಿ ಕಾಡದೇ ಇದ್ದದ್ದು ಈ ಹೊತ್ತಿಗೂ ನನ್ನ ಪಾಲಿನ ಬತ್ತದ ಸೋಜಿಗದ ಸೆಲೆಯಾಗಿಯೇ ಉಳಿದಿದೆ. ಅತ್ಯಂತ ಸಿರಿವಂತ ಕುಟುಂಬದ ಕುಡಿಯಾದ ಸಕ್ರಜ್ಜಿ ಮತ್ತು ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅವ್ವನಿಗೂ ಇದ್ದ ಹಣಕಾಸಿನ ಅಂತಸ್ತಿನ ಅಂತರ ಎಂದೂ ರಕ್ತಸಂಬಂಧವನ್ನು ತಿಳಿಯಾಗಿಸದೇ ಇದ್ದದ್ದು ಸೋಜಿಗದ ಮತ್ತೊಂದು ಮುಖವಾಗಿ ಕಾಡುತ್ತಿರುವುದೂ ಸುಳ್ಳಲ್ಲ. ಮನೆಗೆ ಬಂದ ಹೊತ್ತಿನಲ್ಲಿ, ಗಂಟೆಗಳ ಕಾಲ ಮಗಳೊಟ್ಟಿಗೆ ಹರಟಿ, ಮತ್ತೊಬ್ಬ ಮಗಳು ಐಯ್ಯಮ್ಮ ಕೊಡುವ ಕೀಟಲೆಗಳನ್ನು ನೆನೆಯುತ್ತಾ ನಾಲ್ಕು ಹನಿ ಕಣ್ಣೀರು ಸುರಿಸಿ, ಅಳಿಯ ಮೂಕಪ್ಪ ತೋರುವ ಪ್ರೀತ್ಯಾದರಗಳಿಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾ, ದಿನದ ಅರ್ಧದಷ್ಟು ವೇಳೆಯನ್ನು, ವಾರಕ್ಕೆ, ಏನಿಲ್ಲವೆಂದರೂ, ಮೂರು ಬಾರಿ ಕಳೆಯುತ್ತಿದ್ದ ಸಕ್ರಜ್ಜಿ ನನ್ನ ಬಾಲ್ಯಕಾಲದ ನೆನಪುಗಳ ಬುಟ್ಟಿಯ ಬಹಳಷ್ಟು ಜಾಗವನ್ನು ಅನಾಯಾಸವಾಗಿ ಆಕ್ರಮಿಸಿಕೊಂಡಿದ್ದಾಳೆ.

ಸಕ್ರಜ್ಜಿಯದು ಹಳ್ಳಿಗಾಡಿನ, ಇಂದಿಗೂ ಸಹಸ್ರಗಳ ಸಂಖ್ಯೆಯಲ್ಲಿರುವ, ಮಹಿಳೆಯರ ಬವಣೆಯ ನೈಜರೂಪದ ಕಥೆಯೇ. ಪ್ರಚಾರಕ್ಕೆ ಬಾರದೆ, ಗಂಧದ ಕೊರಡುಗಳಂತೆ ತಮ್ಮನ್ನು ತಾವು ತೇಯ್ದುಕೊಳ್ಳುತ್ತಾ, ಅನಂತ ವ್ಯಥೆಗಳನ್ನು ಒಡಲಲ್ಲಿ ಹುದುಗಿಸಿಟ್ಟುಕೊಂಡು, ತಮ್ಮ ಸುತ್ತಮುತ್ತಲ ಪರಿವಾರ ಜನರಿಗೆ ಶ್ರೋಯೋಭಿವೃದ್ದಿಯನ್ನು ಸದಾ ಹರಸುತ್ತಲೇ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ಹೆಂಗಳೆಯರಿಗೆ, ಜೀವನದ ಕೊನೆಯ ಪಯಣದವರೆಗೆ “ತಮ್ಮದು” ಎಂದು ಹೇಳಿಕೊಳ್ಳವ ಯಾವುದೂ ಇರುವುದಿಲ್ಲ. ಕೇವಲ ತ್ಯಾಗ, ನಿಷ್ಠೆ, ಸ್ವಾಮಿಭಕ್ತಿ, ಪ್ರಾಮಾಣಿಕತೆ, ಮಮತೆ, ಕರುಣೆಗಳ ಸಾಗರವಾಗಿಯಷ್ಟೇ ಬಾಳಿ, ಬದುಕಿ, ಶಿವನಪಾದ ಸೇರುವ ಈ ನಿಗೂಢ ಜಿಂದಗಿಗಳ ಒಡತಿಯರು ತಮ್ಮ ಇರುವಿನ ಜಾಡನ್ನೂ ಮುಂದಿನ ಪೀಳಿಗೆಗಳಿಗೆ ಬಿಡದೆ ಲೋಕನಾಟಕದಿಂದ ನಿಶ್ಶಬ್ದವಾಗಿ ನಿರ್ಗಮಿಸಿತ್ತಾರೆ. ವಿಶ್ವ ದಿಗ್ದರ್ಶಕ ಇಂತಹ ಪಾತ್ರಗಳನ್ನು ಯಾವ ಕಾರಣಕ್ಕಾಗಿ ತನ್ನ ನಾಟಕದಲ್ಲಿ ಪದೇ ಪದೇ ಅಳವಡಿಸುತ್ತಾನೆ? ಇದು ತಲೆ ಕೆಡಿಸಿಕೊಂಡಷ್ಟೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿಯುತ್ತದೆ. ನಾಡಿನ ಯಾವ ಶಾಸನಗಳೂ, ವೀರಗಲ್ಲುಗಳೂ, ಕೋಟೆ ಕೊತ್ತಲಗಳೂ, ಸಮಾಧಿಗಳೂ ಇಂತಹವರ ನೆನಪನ್ನು ಪುನರ್ಜೀವನಗೊಳಿಸಲು, ಗುಣಗಾನ ಮಾಡಲು ಉಳಿದಿಲ್ಲ. ಯಾವ ಚಾರಿತ್ರಿಕ ಮಹತ್ವದ ದಾಖಲೆಗಳಲ್ಲಿಯೂ ಇಂತಹವರ ಹೆಸರುಗಳು ರುಜುವಾತಾಗಿಲ್ಲ. ಕಾಡ ಕುಸುಮದಂತೆ, ಬನದ ಕೋಗಿಲೆಯಂತೆ ಬದುಕು ಸವೆಸಿ ತಾವು ಹುಟ್ಟಿದ ಮನೆಯ ಅನ್ನದ ಋಣ ತೀರಿಸುವ ಈ “ಕಾಡುಪಾಪ”ಗಳ ಬಗ್ಗೆ ಆಧುನಿಕ ಸುಶಿಕ್ಷಿತ ಸಮಾಜ ತನ್ನ ಸಂವೇದನೆಯನ್ನು ಮಿಲಿಯಪಟ್ಟು ಹೆಚ್ಚಿಸಿಕೊಳ್ಳಬೇಕಿದೆ.

ಮದುವೆಯಾದ ಅನಿತರಲ್ಲಿಯೆ “ವಿಧವಾಪಟ್ಟ”ವನ್ನು ಹೊತ್ತು ಅಣ್ಣ, ಊರಿನ ಆಗರ್ಭ ಶ್ರೀಮಂತ, ಬಳ್ಳಾರಿ ಮಲ್ಲಣ್ಣನ ಮನೆ ಸೇರಿದ ಸಕ್ರಮ್ಮ ಸಂತಾನ ವಂಚಿತೆ. ಮಗಳಿಗಿಂತ ಹೆಚ್ಚಿನ ಪ್ರೀತಿ, ವಿಶ್ವಾಸಗಳನ್ನು ತಂಗಿಯ ಪಾಲಿಗೆ ಧಾರೆ ಎರೆದ ಬಳ್ಳಾರಿ ಮಲ್ಲಣ್ಣನ ಮುದ್ದಿನ ತಂಗಿಯಾಗಿ, ಆ ಹೊತ್ತಿನ ಊರಿನ ದೊಡ್ಡ ಮನೆತನಗಳಲ್ಲಿ ಒಂದೆನಿಸಿದ ಅಣ್ಣನ ತುಂಬು ಕುಟುಂಬದ ಸಕಲ ಜವಾಬ್ದಾರಿಗಳನ್ನೂ ತನ್ನ ಎಳೆಯ, ಕೃಶವಾದ ಭುಜಗಳ ಮೇಲೆ ಹೊತ್ತು ಅತ್ಯಂತ ದಕ್ಷ ರೀತಿಯಲ್ಲಿ ಅಣ್ಣ ತನ್ನ ಮೇಲಿಟ್ಟ ವಿಶ್ವಾಸಕ್ಕೆ ನೂರ್ಮಡಿ ಹೆಚ್ಚಾದ ಬೆಲೆಯನ್ನು ಒದಗಿಸಿಕೊಟ್ಟವಳು ಸಕ್ರಮ್ಮ. ಮನೆತನದ ಸಂಪೂರ್ಣ ಜವಾಬ್ದಾರಿ ಮತ್ತು ಅಪರಿಮಿತ ಅಧಿಕಾರಗಳಿಗೆ ಭಾಜನಳಾದ ಹೊತ್ತೂ ತನ್ನ ಅತ್ತಿಗೆಯಂದಿರಿಗೆ ಅವರಿಗೆ ಸಲ್ಲಬೇಕಾದ ಗೌರವಗಳನ್ನ, ಪ್ರಾಮುಖ್ಯತೆಯನ್ನು ನೀಡಿ ಅವರನ್ನು ಸದಾ ಮುದದಲ್ಲಿ ಇಟ್ಟವಳು ಸಕ್ರಮ್ಮ. ಮನೆಯ ವ್ಯವಹಾರಗಳನ್ನಷ್ಟೇ ಅಲ್ಲದೆ, ಹೊಲ,ಗದ್ದೆ,ತೋಟಗಳ ಬಾಹ್ಯ ವ್ಯವಹಾರಗಳನ್ನೂ ಸಮರ್ಥವಾಗಿ ನಿಭಾಯಿಸಿದವಳು ಸಕ್ರಮ್ಮ. ಅಣ್ಣನ, ಸುತ್ತಮುತ್ತಲ ಹತ್ತೂರು, ಹಳ್ಳಿಗಳಲ್ಲಿ ಹರಡಿದ, ಬಹುದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರಗಳನ್ನೂ ಕುಶಲತೆಯಿಂದ ಸಂಭಾಳಿಸಿದವಳು ಸಕ್ರಮ್ಮ. ವಿಧಿವಿಲಾಸದಿಂದ ಕೊಟ್ಟ ಮನೆಯನ್ನು ಬೆಳಗಲಾಗದೆ ಹೋದರೂ ಹುಟ್ಟಿದ ಮನೆಯನ್ನು ತನ್ನ ಶಕ್ತಿ ಮೀರಿ ಬೆಳಗಿಸಿದವಳು ಸಕ್ರಮ್ಮ. ಅಣ್ಣನ ಎರಡು ಕೈಗಳನ್ನು ನಾಲ್ಕನ್ನಾಗಿಸಿದವಳು ಸಕ್ರಮ್ಮ. ಅಣ್ಣನ ಭುಜಕ್ಕೆ ಭುಜ ಕೊಟ್ಟು ಆತನ ಹೇರಳ ಸಂಪತ್ತನ್ನು ದಿನದಲ್ಲಿ ದ್ವಿಗುಣ, ರಾತ್ರಿಯಲ್ಲಿ ನಾಲ್ಕು ಗುಣ ವೃದ್ಧಿಗೊಳಿಸಿದವಳು ಸಕ್ರಮ್ಮ. ತಂಗಿಯ ಲೋಕಜ್ಞಾನಕ್ಕೆ ಮಾರು ಹೋಗಿದ್ದ ಮಲ್ಲಣ್ಣ ಕೆಲವೊಮ್ಮೆ ತಂಗಿಯ ವಿಧವಾಪಟ್ಟ, ತನಗೆ ನೆರವಾಗಲೆಂದೆ ಪರಮಾತ್ಮ ಕರುಣಿಸಿದ ವರವೇನೋ ಎಂದುಕೊಂಡಿದ್ದೂ ಉಂಟು. ಮೂರ್ನಾಲ್ಕು ದಶಕಗಳ ಕಾಲ ಬಳ್ಳಾರಿ ಮಲ್ಲಜ್ಜನ ವಿಶಾಲವಾದ, ಪೂರ್ವಜರ ಮನೆಯ ಹೊರಬಾಗಿಲಿಗೆ ಯುಗಾದಿ ಹಬ್ಬದಂದು ನೇತು ಹಾಕುತ್ತಿದ್ದ ಮಾರುದ್ದದ ಮಾವಿನ ತೋರಣದ ಎಲೆಗಳೂ ಕೂಡ ಸಕ್ರಜ್ಜಿಯ ಅನುಮತಿಯಿಲ್ಲದೆ ಕಳಚಿ ಬೀಳಲಾರದಾಗಿದ್ದವು ಎನ್ನುವುದು ಆ ಹೊತ್ತು ಸಕ್ರಮ್ಮ ಯಾವ ರೀತಿಯಲ್ಲಿ ಅಣ್ಣನ ಮನೆತನದ ಸರ್ವ ಸಂಗತಿಗಳನ್ನೂ ತನ್ನ ವಜ್ರಮುಷ್ಟಿಯಲ್ಲಿ ಬಂಧಿಸಿಟ್ಟು, ನಿಯಂತ್ರಿಸುತ್ತಿದ್ದಳು ಎನ್ನುವುದರ ಒಂದು ಸಣ್ಣ ಪುರಾವೆಯನ್ನು ಓದುಗರಿಗೆ ಕೊಟ್ಟೀತು. ಮನೆಯ ಧಣಿ ಮಲ್ಲಜ್ಜನೂ ಮನೆಯಿಂದ ಹೊರ ಹೋಗುವ ಹೊತ್ತು ತಂಗಿಯನ್ನು ಒಂದು ಮಾತು ಕೇಳಿಯೇ ಹೊಸ್ತಿಲನ್ನು ದಾಟುತ್ತಿದ್ದ ಎನ್ನುವ ಸಂಗತಿ ಸಕ್ರಜ್ಜಿ ಆ ವೇಳೆಯಲ್ಲಿ ಯಾವ ಪ್ರಮಾಣದಲ್ಲಿ ಬಳ್ಳಾರಿ ಮನೆತನದ ಮನೆಮನಗಳನ್ನು ಪೂರ್ಣವಾಗಿ ಆವರಿಸಿದ್ದಳು ಎನ್ನುವುದರ ದ್ಯೋತಕವಾದೀತು. ಪ್ರಾಯಶಃ ನನ್ನ ತರುಣ ಓದುಗರನ್ನು ಈ ವಿಷಯದ ವಿವರಣೆಯಲ್ಲಿ ಶೀಘ್ರರೂಪದಲ್ಲಿ ತಲುಪಲಿಕ್ಕೆ ನಾನು ಒಂದು ಉಪಮೆಯ ಮೊರೆ ಹೋದಲ್ಲಿ ಸಕ್ರಜ್ಜಿಯ ಬಗ್ಗೆ ಇಲ್ಲಿ ನಾನು ಉಲ್ಲೇಖಿಸುತ್ತಿರುವ ವಿಷಯದ ಬಗ್ಗೆ ಹೆಚ್ಚು ಸ್ಪಷ್ಟನೆ ದೊರಕೀತು ಎನ್ನಿಸುತ್ತದೆ. “ಬಾಹುಬಲಿ” ಚಲನಚಿತ್ರದಲ್ಲಿ “ಮಾಹಿಷ್ಮತಿ” ಸಾಮ್ರಾಜ್ಯದ ಸಾಮ್ರಾಜ್ಞಿ ಶಿವಗಾಮಿನಿ ನುಡಿಯುತ್ತಿದ್ದ “ನನ್ನ ಮಾತೇ ಶಾಸನ” ಎನ್ನುವ ಸಂಭಾಷಣೆ ಬಳ್ಳಾರಿ ಮಲ್ಲಜ್ಜನ ಕುಟುಂಬದಲ್ಲಿ ಸಕ್ರಜ್ಜಿಯ ಆ ಹೊತ್ತಿನ ಪಾತ್ರದ ಕಲ್ಪನೆಯನ್ನು ನಿಖರವೆಂಬಂತೆ ಕಟ್ಟಿಕೊಡಬಲ್ಲದು. ಸಕ್ರಜ್ಜಿ ಎಂದೂ ಶಿವಗಾಮಿನಿಯಂತೆ ತನ್ನ ಸ್ಥಿತಿಯ ವೈಭವೀಕರಣದ ವಾಚ್ಯ ಮಾಡಿದವಳಲ್ಲ. ಹೆಚ್ಚಿನದನ್ನು ಹೇಳದೆಯೇ ತನ್ನ ಸಂಪೂರ್ಣ ನಿಯಂತ್ರಣವನ್ನು ತವರುಮನೆಯಲ್ಲಿ ಸಾಧಿಸಿದ್ದವಳು ಸಕ್ರಮ್ಮ. ಬಳ್ಳಾರಿ ಮಲ್ಲಜ್ಜನ ಕುಟುಂಬದ ಅನಭಿಷಿಕ್ತ ಸಾಮ್ರಾಜ್ಞಿಯಾದರೂ, ಆ ರಾಣಿಪಟ್ಟ ತಂದುಕೊಟ್ಟ ಸಕಲ ವೈಭೋಗಗಳಿಂದ ದೂರವಿದ್ದು, “ಯೋಗಿ”ಯ ಮಾದರಿಯಲ್ಲಿ ತನ್ನ ಜೀವನವನ್ನು ವ್ಯಥಿಸಿದವಳು ಸಕ್ರಜ್ಜಿ. ಆ ಕಾಲಕ್ಕೇ ಲಕ್ಷಗಳ ಸಂಪತ್ತಿನ ಒಡತಿಯಾಗಿದ್ದರೂ, ಕಾಲಬುಡದಲ್ಲಿ ಹೊರಳಾಡುತ್ತಿದ್ದ ಲಕ್ಷಗಳ ಬಗ್ಗೆ ಅಲಕ್ಷ್ಯ ಧೋರಣೆಯನ್ನು ತಾಳಿದವಳು ಸಕ್ರಮ್ಮ. ತನ್ನ ಅಧಿಕಾರದ ಸಿಂಹಾಸನಕ್ಕೆ ಬಂಧಿಯಾಗದೆ ಅಣ್ಣನ ತೋಟ, ಹೊಲ, ಗದ್ದೆಗಳ ಬಿರುಬಿಸಿಲಿಗೆ, ಮಳೆಗಾಳಿಗೆ, ಮೂಳೆಗಳನ್ನು ಕೊರೆಯುವ ಸೂಡ್ರಿಗೆ ಮೈ ಒಡ್ಡಿದವಳು ಸಕ್ರಮ್ಮ. ಮೃಷ್ಟಾನ್ನವನ್ನು ಉಂಡು ಸುಖಿಸಬೇಕಾದ ಹೊತ್ತು ಕೂಲಿಗಳ ಜೊತೆಗೆ ಮುದ್ದೆ ಮುರಿದವಳು ಸಕ್ರಮ್ಮ. ರೇಷ್ಮೆ ಜರಿತಾರಿ ಸೀರೆಗಳಿಂದ ದೇಹವನ್ನು ಮುಚ್ಚುವಷ್ಟು ಭಾಗ್ಯವಿದ್ದರೂ, ತಮ್ಮ ಜಮೀನುಗಳಲ್ಲಿ ಕೂಲಿನಾಲಿ ಮಾಡುವ ಮಹಿಳೆಯರು ಉಡುತ್ತಿದ್ದ ಮಾಮೂಲಿ ಹತ್ತಿಬಟ್ಟೆಯ ಸೀರೆಗಳಿಗೇ “ಜೈ” ಎಂದವಳು ನಮ್ಮ ಸಕ್ರಮ್ಮ. ಅಣ್ಣನ ಸಾಮ್ರಾಜ್ಯದ ತಳಪಾಯದ ಪ್ರತೀ ಕಲ್ಲುಗಳನ್ನೂ, ಭದ್ರತೆಯ ದೃಷ್ಟಿಯಿಂದ ತೀಡಿ, ತಿಕ್ಕಿ, ಅವುಗಳ ಗುಣಮಟ್ಟದ ಖಾತ್ರಿ ಮಾಡಿಕೊಂಡವಳು ಸಕ್ರಮ್ಮ. ಅಣ್ಣನ, ಊರ ನಾಲ್ಕೂ ದಿಕ್ಕಿಗೂ ಮೈತೆರೆದುಕೊಂಡು ಮಲಗಿದ್ದ ಅಪಾರ ಭೂಸಂಪತ್ತಿಗೆ ಎರಡನೇ ಬೇಲಿಯ ರೂಪದಲ್ಲಿ ಭದ್ರತೆ ಒದಗಿಸಿದವಳು ಸಕ್ರಮ್ಮ. ಬಳ್ಳಾರಿ ಮಲ್ಲಜ್ಜನನ್ನು ಸಾಲಸೋಲ ಕೇಳಿಕೊಂಡು ಬಂದ ಮಂದಿ ತಲುಪುತ್ತಿದ್ದದ್ದು ಸೀದಾ ಸಕ್ರಜ್ಜಿಯ ಬಳಿಯೇ. ಸಾಲಗಾರರಿಗೆ ಹಣ ಕೊಡುವಾಗ ಜರೂರಾಗಿ ತೆಗೆದುಕೊಳ್ಳಬೇಕಾದ ಎಲ್ಲಾ ಭದ್ರತೆಗಳನ್ನೂ ಚಾಚೂ ತಪ್ಪದಂತೆ ಪಾಲಿಸುತ್ತಾ, ಸಾಲಗಾರರಿಂದ ಬರಬೇಕಾದ ಒಂದೊಂದು ಕಾಸನ್ನೂ, ಊರು ಕೇರಿಗಳನ್ನ ಅಲದಲೆದು ವಸೂಲು ಮಾಡಿ ಅಣ್ಣನ ತಿಜೋರಿಯಲ್ಲಿಟ್ಟು ಭದ್ರಗೊಳಿಸಿದವಳು ಸಕ್ರಮ್ಮ. ಮಲ್ಲಜ್ಜನ ಮನೆಯಲ್ಲಿದ್ದ ಮೂರು ಜವಾರಿ ನಾಯಿಗಳ ಜೊತೆಗೆ ನಾಲ್ಕನೇ ನಾಯಿಯಂತೆ ಅಣ್ಣನ ಸಾಮ್ರಾಜ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವಳು ಸಕ್ರಮ್ಮ. ಮನೆಯ ಸರ್ವಸದಸ್ಯರಲ್ಲಿ ಅಸಮಾಧಾನದ ಒಂದೆಳೆಯೂ ಏಳದಂತೆ ನಿಗಾ ವಹಿಸಿದವಳು ಸಕ್ರಮ್ಮ.

ಅತುಲ ಸಂಪತ್ತಿನ ಒಡತಿಯಾದರೂ “ಈ ಸಂಪತ್ತು ನನ್ನದಲ್ಲ, ನಾನು ಇದರ ಪಾರುಪತ್ಯಗಾರ್ತಿ ಮಾತ್ರ, ಇದು ನನ್ನ ಅಣ್ಣನ ಸಂತಾನದ ಸ್ವತ್ತು” ಎನ್ನುವ ಅರಿವನ್ನು ಸದಾ ತನ್ನ ತಲೆಯಲ್ಲಿ ಧರಿಸಿದ್ದವಳು ಸಕ್ರಮ್ಮ. ಅಣ್ಣನ ಖಜಾನೆಯ ಒಂದು ಬಿಡಿಗಾಸನ್ನೂ ವ್ಯರ್ಥವಾಗಿ ಪೋಲು ಮಾಡಿದವಳಲ್ಲ ನಮ್ಮ ಸಕ್ರಮ್ಮ.

ನೋಡಲಿಕ್ಕೆ ಕುಳ್ಳಿಯೇ ಆಗಿದ್ದ ಸಕ್ರಜ್ಜಿ ಮೊದಲ ನೋಟಕ್ಕೆ ಸಿಡುಕು ಮತ್ತು ಗಂಟುಮುಖದ ಒಡತಿ ಎಂದೇ ಹೇಳಬೇಕಾದ ರೀತಿಯ ಅಭಿಪ್ರಾಯವನ್ನು ನೋಡುಗರಲ್ಲಿ ಕಟ್ಟಿ ಕೊಡುತ್ತಿದ್ದಳು. ನನಗೆ ಬುದ್ಧಿ ಬರುವ ವೇಳೆಗೆ ಸುಮಾರು ಅರವತ್ತರ ಹರೆಯ ದಾಟಿದ್ದ ಸಕ್ರಜ್ಜಿ, ವಯ್ಯಸ್ಸಿಗಿಂತಲೂ ಹೆಚ್ಚಾದ ಪ್ರಮಾಣದಲ್ಲಿ, ತನ್ನ ಮುಖದ ಮೇಲೆ ಮೂಡಿದ್ದ ಸುಕ್ಕು ಗೆರೆಗಳಿಂದಲೇ ನನ್ನ ಮನಸ್ಸಿನಲ್ಲಿ ಇಂದೂ ಆಳವಾಗಿ ಬೇರೂರಿದ್ದಾಳೆ. ಜೀವನ ತಂದೊಡ್ಡಿದ ಕಷ್ಟಕಾರ್ಪಣ್ಯಗಳೊಂದಿಗೆ ಸಕ್ರಜ್ಜಿ ನಡೆಸುತ್ತಲೇ ಬಂದ ಅವಿರತ ಹೋರಾಟಗಳ ಅಳಿಯದ ಗುರುತುಗಳು
ಆಕೆಯ ಮುಖದ ಮೇಲಿನ ನೀಳ ಮತ್ತು ಆಳಗೆರೆಗಳಲ್ಲಿ ಕಣ್ಣಿಗೆ ರಾಚುವಂತೆ ಪ್ರತಿಫಲಿಸುತ್ತಿದ್ದವು. ಮೊಣಕೈವರೆಗೆ ಬರುವ ಹಾಗಿದ್ದ ತೋಳುಗಳ ಬಿಳಿರವಿಕೆ ತೊಡುತ್ತಿದ್ದ ಸಕ್ರಜ್ಜಿ ಪಾದಗಳ ಮೇಲೆ ಬರುವ ಹಾಗೆ ಸೀರೆ ಉಡುತ್ತಿದ್ದಳು. ತಲೆಯ ಮೇಲೆ ಮಧ್ಯಾಹ್ನದ ಊಟದ ದೊಡ್ಡದಾದ ಬುತ್ತಿಗಂಟನ್ನು ಹೊತ್ತು, ಅದು ಜರುಗದ ಹಾಗೆ ಬಲಗೈಯಿಂದ ಗಟ್ಟಿಯಾಗಿ ಹಿಡಿದು, ದಪ್ಪ, ಒರಟಾದ ಚರ್ಮದ ಕರಿ ಪಾದುಕೆಗಳನ್ನು ತೊಟ್ಟು, ಬಿರಬಿರನೆ ತೋಟಕ್ಕೆ ಹೋಗುತ್ತಿದ್ದ ಸಕ್ರಜ್ಜಿಯ ಎಂದೂ ಅಳಿಯದ ವ್ಯಕ್ತಿ ಚಿತ್ರವೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಇಂದೂ ಬೆಂಬಿಡದೆ ಕಾಡುತ್ತಿದೆ. ಮನೆಯ ನೆರಳಲ್ಲಿ ಹಾಯಾಗಿ ಕುಳಿತು, ಆಳುಕಾಳುಗಳಿಂದ ಸೇವೆಯನ್ನು ಮಾಡಿಸಿಕೊಳ್ಳುವ ಅತುಲ್ಯ ಸೌಭಾಗ್ಯ ಪ್ರಾಪ್ತವಿದ್ದರೂ, ಹೊಲಗದ್ದೆಗಳಲ್ಲಿ ಆಳುಕಾಳುಗಳ ಜೊತೆಗೂಡಿ ಅಣ್ಣನ, ಲಕ್ಷ್ಮಿಯೇ ಕಾಲು ಮುರಿದುಕೊಂಡು ಬಿದ್ದಂತ್ತಿದ್ದ ಸಾಮ್ರಾಜ್ಯಕ್ಕೆ, ತನ್ನ ದೇಹದ ಬೆವರಿನ ಹನಿಗಳ ಕಪ್ಪವನ್ನು ದಿನವಹಿಯ ಕಾಣಿಕೆಯ ರೂಪದಲ್ಲಿ ನೀಡುತ್ತಿದ್ದ ಸಕ್ರಜ್ಜಿ ತನ್ನ ತವರಿಗಾಗಿ ಮಾಡಿದ ತ್ಯಾಗಗಾಥೆಯ ಸಂಪೂರ್ಣ ಚಿತ್ರಣ ಮಾಡುವಲ್ಲಿ ನನ್ನ ಲೇಖನಿ ಸೋಲುತ್ತಿದೆ. ತನ್ನ ಕರುಳ ಕುಡಿಯಿಲ್ಲದ ಹೊತ್ತು, ಸ್ವಾರ್ಥದ ಲವಶೇಶವೂ ಇಲ್ಲದೆ, ಕೇವಲ ಅಣ್ಣ ಮತ್ತು ಆತನ ಸಂತಾನಕ್ಕೆ ತನ್ನ ಜೀವವನ್ನೇ ತೇಯ್ದ ಸಕ್ರಜ್ಜಿಯಂತಹ ಒಂದು ಹೆಣ್ಣು ತಾನು ಹುಟ್ಟಿದ ಮನೆಯನ್ನು ಪಾವನಗೊಳಿಸುವ ದಿವ್ಯ ಶಕ್ತಿಯಾಗಿ ಸಾಬೀತಾದಾಳು ಎನ್ನುವ ಸಂಗತಿಯೇ ಹಳ್ಳಿಗಾಡಿನ ಮಹಿಳೆಯ ಅಂತಃಶಕ್ತಿಯನ್ನು ಜಗಜ್ಜಾಹೀರು ಮಾಡುತ್ತದೆ. ಶಕ್ತಿದೇವತೆಗಳ ಆರಾಧನೆಯ ಹಿನ್ನೆಲೆಯ ಮಹತ್ವವಾಗಿ ನನ್ನನ್ನು ಈ ಹೊತ್ತು ಕಾಡುತ್ತಿರುವುದು ಗ್ರಾಮೀಣ ಮಹಿಳೆಯರ ಶಕ್ತಿಯ ಈ ಅಸಾಧಾರಣ ರೂಪವೇ. ಶಕ್ತಿದೇವತೆಗಳ ಆರಾಧನೆಯ ಅರ್ಥಪೂರ್ಣತೆಯ ಕುರುಹಾಗಿ ನಿಲ್ಲುವ ಸಕ್ರಜ್ಜಿಯಂತಹ ಹೆಣ್ಣುಮಕ್ಕಳು ಭಗವಂತ ಪ್ರಕಟವಾಗದ ಈ ಜಗದ ಬದುಕಿನ ಬವಣೆಯ ಬಹುಪಾಲನ್ನು ನಗಣ್ಯವಾಗಿಸುವ ಶಕ್ತಿಯನ್ನು ತನ್ನ ಆಂತರ್ಯದಲ್ಲಿ ಯಾವತ್ತೂ ಧಾರಣೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ.

ತನ್ನ ಅಧಿಕಾರದ ಉತ್ತುಂಗದಲ್ಲಿಯೂ ಅವ್ವನನ್ನು ಸಕ್ರಜ್ಜಿ ಎಂದೂ ಉಪೇಕ್ಷಿಸಿದವಳಲ್ಲ. ಬಳ್ಳಾರಿ ಮಲ್ಲಜ್ಜನ ಮನೆಯ ಯಾವ ಮೂಲೆಗಾದರೂ ನಿರ್ಭೀಡೆಯಿಂದ ಪ್ರವೇಶಿಸುವ ಅನುಮತಿ ಇದ್ದದ್ದು ಅವ್ವನಿಗೆ ಮಾತ್ರವೇ. ಕುಟುಂಬದ ಯಾವೊಬ್ಬ ಸದಸ್ಯರ ನಸೀಬಿಗೂ ಇಲ್ಲದಿದ್ದ ಈ ಸ್ವಾತಂತ್ರ್ಯವನ್ನು ತನ್ನ ಮಗಳಿಗೆ ಕೊಟ್ಟ ತಂಗಿಯ ನಿರ್ಧಾರವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ಮಲ್ಲಜ್ಜನಿಗೂ ತನ್ನ ಸೊಸೆಯನ್ನು ಕಂಡರೆ ಅತೀವವಾದ ಪ್ರೀತಿ, ವಿಶ್ವಾಸ. ಆ ಹೊತ್ತಿನಲ್ಲಿ ಮಲ್ಲಜ್ಜನ ಬಳಿ ಇದ್ದ ಅಗಣಿತ ಸಂಪತ್ತಿನ ಝಳಕುಗಳು ಅವ್ವನ ಕಣ್ಣಿಗೆ ಬಿದ್ದ ಮಟ್ಟದಲ್ಲಿ ಮಲ್ಲಜ್ಜನ ಬಲಗೈ ಭಂಟ ಮತ್ತು ಮುಖ್ಯ ಸಲಹೆಗಾರನಾದ ರೆಡ್ಡಿ ಜನಾಂಗದ ಗಿಡ್ಡರಾಮಜ್ಜನ ಕಣ್ಣಿಗೂ ಬಿದ್ದಿರಲಿಕ್ಕಿಲ್ಲ. ಅದೊಂದು ದಿನ ಮಲ್ಲಜ್ಜನ ಕೋಣೆಯ ಮುಚ್ಚಿದ ಬಾಗಿಲನ್ನು, ಸಣ್ಣಮ್ಮನನ್ನು ಹುಡುಕುವ ತವಕದಲ್ಲಿ, ತಳ್ಳಿ ಒಳಹೋದ ಅವ್ವನಿಗೆ, ಅಲ್ಲಿ ಅಣ್ಣ, ತಂಗಿ ನೆಲದ ಮೇಲೆ ಸುರುವಿಕೊಂಡು ಎಣಿಸುತ್ತಿದ್ದ ಬಂಗಾರದ ಉಂಗುರಗಳ ರಾಶಿ ನೋಡಿ ಗರ್ರನೆ ತಲೆ ಸುತ್ತಿ ಬಂದಿತ್ತು. ತಮ್ಮ ಹೊಲದ ಖಣದಲ್ಲಿ ಇಷ್ಟು ಮಟ್ಟದಲ್ಲಿ ಎದ್ದು ನಿಂತಿದ್ದ ಬಿಳಿಜೋಳದ ರಾಶಿಯನ್ನು ಎಂದೂ ಕಾಣದಿದ್ದ ಅವ್ವನಿಗೆ ಈ ದೃಶ್ಯ ವಿಪರೀತ ಮಟ್ಟದ ಮುಜುಗರವನ್ನು ತಂದಿತ್ತು. ಅವ್ವನನ್ನು ನೋಡಿದ ಸಕ್ರಜ್ಜಿ ಏನನ್ನೂ ನುಡಿಯದೆ, ಉಂಗುರಗಳ ಎಣಿಕೆಯಾದ ನಂತರ ಅವುಗಳನ್ನು ಆರು ದೊಡ್ಡ ಮಣ್ಣಿನ ಹೂಜಿಗಳಿಗೆ ತುಂಬುವ ಕಾರ್ಯದಲ್ಲಿ ಅವ್ವನನ್ನು ಪಾಲುದಾರಳನ್ನಾಗಿಸಿದ್ದು ಅವರಿಬ್ಬರ ನಡುವೆ ಇದ್ದ ವಿಶ್ವಾಸ, ಭರವಸೆಗೆ ದೊರೆಯಬಹುದಾದ ಒಂದು ಸಣ್ಣ ಉಲ್ಲೇಖವಷ್ಟೆ. ಅವ್ವನಿಗೆ ಹಣಕಾಸು ಬೇಕು ಎಂದಾಗ ಹಿಂದೆ ಮುಂದೆ ನೋಡದೆ ಹಣ ಸಂದಾಯ ಮಾಡುತ್ತಿದ್ದ ಸಕ್ರಜ್ಜಿ ಎಂದೂ ಈ ಅಸಲಿನ ಮೇಲೆ ಬಡ್ಡಿಯನ್ನು ಅವ್ವನಿಂದ ಪಡೆಯುತ್ತಿರಲಿಲ್ಲ. ಊರಿಗೆ ಒಂದು ಕಿ.ಮೀ. ದೂರದ ಇಪ್ಪತ್ತು ಎಕರೆ ಎರೆ ಹೊಲವನ್ನು ಖರೀದಿಸಬೇಕು ಎಂದು ಹೊರಟ ತಾತನಿಗೆ ಸಕ್ರಜ್ಜಿ ಉದಾರವಾದ ಹಣದ ಸಹಾಯವನ್ನು ಮಾಡದೇ ಇದ್ದಲ್ಲಿ ಇಂದು ಕೂನಬೇವಿನ ರಸ್ತೆಯಲ್ಲಿರುವ ನಮ್ಮ ಹೊಲ ನಮ್ಮದಾಗಿರುತ್ತಿರಲಿಲ್ಲ. ಮನೆಯ ಜಗುಲಿಯಲ್ಲಿ ಒಂದು ಸಣ್ಣ ಚಿಲ್ಲರೆ ಅಂಗಡಿಯನ್ನು ತೆರೆಯಬೇಕು, ಪಟ್ಟಣದಲ್ಲಿ ಓದುತ್ತಿರುವ ಮಗ ಚಂದ್ರಣ್ಣನ ಹಣ ಪೂರೈಕೆಗೆ ಇದರಿಂದ ಸಹಾಯವಾದೀತು ಎನ್ನುವ ಪ್ರಸ್ತಾವವನ್ನು ಸಣ್ಣಮ್ಮನ ಮುಂದೆ ಅವ್ವ ಇಟ್ಟಾಗ ಅದಕ್ಕೆ ಒತ್ತಾಸೆಯಾಗಿ ನಿಂತು ಅವಶ್ಯವಿದ್ದ ಹಣಕಾಸಿನ ವಿಷಯದಲ್ಲಿ ಧಾರಾಳರೂಪದ ನೆರವಿನ ಹಸ್ತವನ್ನು ಚಾಚಿದ್ದೂ ಸಕ್ರಜ್ಜಿಯೇ. ಹೀಗಾಗಿ ಬಳ್ಳಾರಿ ಮನೆತನದ ಈ ಹೆಂಗಸಿನ ಋಣಭಾರ ನನ್ನ ಮನೆತನದ ಮೇಲೆ ಹೆಚ್ಚಾಗಿಯೇ ಇದೆ.

ಅಣ್ಣ ಮಲ್ಲಜ್ಜನ ಮೃತ್ಯುವಿನ ನಂತರದಲ್ಲಿ, ಕಾಲಕ್ರಮೇಣ ಸಕ್ರಜ್ಜಿಗೆ ತನ್ನ ಕುಟುಂಬದ ಮೇಲಿದ್ದ ಹಿಡಿತ ಕಡಿಮೆಯಾಗುತ್ತಾ ನಡೆದಿತ್ತು. ತಾನೇ ಮೆಚ್ಚಿ ತಂದಿದ್ದ, ಗೌಡರ ರೇವಜ್ಜನ ಮಗಳು ಐಯ್ಯಮ್ಮ, ವಿವೇಕ, ವಿವೇಚನೆ, ನಮ್ಮವರು, ತಮ್ಮವರು ಎನ್ನುವ ಭಾವುಕತೆಯ ಕೊರತೆಯಿಂದಾಗಿ ಚಿಕ್ಕಮ್ಮನ ಮೇಲೆ ಒಳಗಿಂದ ಒಳಗೇ ಕತ್ತಿ ಮಸೆಯುವುದಕ್ಕೆ ಪ್ರಾರಂಭಿಸಿದಳು. ಅತ್ತಿಗೆ ಗಂಗಜ್ಜಿ ಮನೆಯ ಹೆಂಗಳೆಯರ ಮಧ್ಯದ ಯಜಮಾನಿಕೆ ಕುರಿತಾದ ಈ ಮೇಲಾಟದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿದಂತೆ ಮೇಲ್ನೋಟಕ್ಕೆ ಕಂಡುಬಂದರೂ, ಮನೆಯ ಯಜಮಾನಿಕೆಯನ್ನು ತನ್ನ ಕೈಗೆ ತೆಗೆದುಕೊಳ್ಳಬೇಕು ಎನ್ನುವ ಹುನ್ನಾರ ನಡೆಸಿದ್ದ ಐಯ್ಯಜ್ಜಿಯ ಬೆನ್ನ ಹಿಂದೆ ಮನೆಯ ಮತ್ತೊಬ್ಬ ಸೊಸೆಯಾದ ಕಮಲಮ್ಮ ಗಟ್ಟಿಯಾಗಿ ನಿಂತಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಅಣ್ಣನ ಮನೆಯಲ್ಲಿ ಇರುವಷ್ಟು ದಿನ ತನ್ನ ಮಾತಿಗೆ ಪ್ರತಿ ಮಾತು ನುಡಿದ ಯಾರನ್ನೂ ನೋಡದ ಸಕ್ರಜ್ಜಿಗೆ ಸಹಜವಾಗಿಯೇ ತನ್ನ ಪಾರುಪತ್ಯಕ್ಕೆ ನೇರ ಸವಾಲಾಗಿ ನಿಂತ ಐಯ್ಯಕ್ಕನ ನಡೆ ಇಷ್ಟವಾಗಲಿಲ್ಲ. ಈ ಹೊತ್ತಿನಲ್ಲಿ ನನ್ನ ಅವ್ವನ ಬಳಿ ಸಕ್ರಜ್ಜಿ ಗಂಟೆಗಳ ಕಾಲ ಅವ್ವನ ತಂಗಿಯ ಬಗ್ಗೆಯೇ ದೂರು ಮಾಡಿದ್ದಿದೆ. ತನ್ನ ಬೆನ್ನ ಹಿಂದೆ ಭದ್ರವಾಗಿ ನಿಂತ ಅಣ್ಣನ ಅಭಯ ಹಸ್ತದ ಅಡಿಯಲ್ಲಿ ನೆಮ್ಮದಿಯಾಗಿ, ಕದಲದೆ ನಿಂತು ಮನೆತನವನ್ನು ನಡೆಸಿದ ಸಕ್ರಜ್ಜಿಗೆ ಅಣ್ಣನಿಲ್ಲದ ಅಭಾಸದ ಅರಿವು ಮೊದಲ ಬಾರಿಗೆ ಕಾಡತೊಡಗಿತ್ತು. ಅಣ್ಣನಿದ್ದಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹೆದರುತ್ತಿದ್ದ ಐಯ್ಯಕ್ಕ ಈಗ ತನ್ನ ಪಾರುಪತ್ಯಕ್ಕೇ ಸವಾಲು ಎಸೆಯುವ ಮಟ್ಟಕ್ಕೆ ಬಂದು ತಲುಪಿದ್ದು ಸಕ್ರಜ್ಜಿಯ ಆತ್ಮಾಭಿಮಾನಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿತ್ತು. ಅಣ್ಣನ ಆಸ್ತಿಪಾಸ್ತಿಯಲ್ಲಿ ಚಿಕ್ಕಾಸೂ ಬಯಸದ ಸಕ್ರಜ್ಜಿ ಮನೆಯಲ್ಲಿ ತನ್ನ ಪಾಲಿಗಿದ್ದ ಸ್ಥಾನಮಾನದ ಅಭಾದಿತ ಮುಂದುವರಿಕೆಯನ್ನಷ್ಟೆ ಬಯಸಿದ್ದವಳು. ತನ್ನ ತಂಗಿಗೆ ಬುದ್ದಿವಾದವನ್ನು ಹೇಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ ಅವ್ವನ ಮಾತನ್ನು ಐಯ್ಯಜ್ಜಿ ಸ್ವಲ್ಪವೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅವ್ವನಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ ತಂಗಿಯ ಗಂಡ ಮೂಕಪ್ಪನಿಂದ ಆತನ ಹೆಂಡತಿಗೆ ತಿಳಿ ಹೇಳುವ ಪ್ರಯತ್ನವೂ ವಿಫಲವಾಗಲು ಈ ಕಾರ್ಯ ತನ್ನಿಂದ ಅಸಾಧ್ಯವೆಂದು ಮೂಕಪ್ಪ ಕೈ ಚೆಲ್ಲಿ ಕುಳಿತ. ಅವ್ವ ಗಂಗಜ್ಜಿ ಮುಖಾಂತರವೂ ಐಯ್ಯಜ್ಜಿಗೆ ಬುದ್ದಿ ಹೇಳಿಸುವ ಪ್ರಯತ್ನ ಮಾಡಿದಳು. ಅವ್ವನ ಉಳಿದ ಉಪಾಯಗಳಂತೆ ಇದೂ ನೆಲಕಚ್ಚಲು ಅವ್ವ ತಂಗಿಯನ್ನು ಸರಿದಾರಿಗೆ ತರುವ ಎಲ್ಲಾ ಪ್ರಯತ್ನಗಳಿಗೂ ಎಳ್ಳುನೀರು ಬಿಟ್ಟಳು.

ದಿನಗಳು ಉರುಳಿದಂತೆ ಮನೆಯಲ್ಲಿ ಸಕ್ರಜ್ಜಿಯ ಸ್ಥಿತಿಗತಿಗಳು “ಹೀನಾಯ” ಎನ್ನಬಹುದಾದ ಹಂತವನ್ನು ತಲುಪತೊಡಗಿದವು. ಮೊದಲಾದರೆ, ಬರಿಯ ಕಣ್ಸನ್ನೆಯಿಂದ ಮನದ ಬಯಕೆಗಳನ್ನು ತಿಳಿದು ಕೆಲಸ ಮಾಡುತ್ತಿದ್ದ ಮನೆಯ ಆಳುಕಾಳುಗಳು ಈಗೀಗ ಸಕ್ರಜ್ಜಿ ಚಾವಣಿ ಹಾರುವಂತೆ ಕೂಗುತ್ತಿದ್ದರೂ ಕಿವಿಗೆ ಹಾಕಿಕೊಳ್ಳಲು ಹೋಗುತ್ತಿರಲಿಲ್ಲ. ಅವರಿಗೆ ಐಯ್ಯಕ್ಕನ ಬೆಂಬಲ ಪ್ರತ್ಯಕ್ಷರೂಪದಲ್ಲಿಯೇ ಸಿಗಲು ಆರಂಭಿಸಿದ ಕಾರಣ ಸಕ್ರಜ್ಜಿ ಎನ್ನುವ “ಸಿಂಹಿಣಿ” ತನ್ನ “ಗುಹೆ”ಯಲ್ಲಿಯೇ ಇಂತಹ ಅನೇಕ ಅನಿರೀಕ್ಷಿತ ಅಪಮಾನಗಳನ್ನು ನುಂಗಬೇಕಾಗಿ ಬಂದಿತು. ಇದರಿಂದ, ದಿನದ ವೇಳೆ, ಮನೆಯಲ್ಲಿರುವುದನ್ನು ಬಿಟ್ಟು ತೋಟ ಸೇರಿದ ಸಕ್ರಜ್ಜಿ ಬೆಳಗಿನ ನಸುಗಿನಲ್ಲಿ ಮನೆ ಬಿಟ್ಟವಳು, ಸಂಜೆ ಕತ್ತಲಾದ ಮೇಲೆಯೇ ಮನೆ ಸೇರುತ್ತಿದ್ದಳು. ಅನೇಕ ದಿನಗಳು ದಾರಿಯಲ್ಲಿ ಬರುವ ನಾಗಪ್ಪಶೆಟ್ಟಿಯ ಅಂಗಡಿಯಿಂದ ಕೊಂಡುಕೊಂಡು ಹೋದ ತಿಂಡಿಗಳನ್ನು ತಿಂದು ದಿನದ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರೆ ಕೆಲವು ದಿನಗಳು ತೋಟದ ಕೆಲಸಕ್ಕೆ ಬರುತ್ತಿದ್ದ, ಸಕ್ರಜ್ಜಿಯ ಪರಿಸ್ಥಿತಿಗೆ ಮರುಗುತ್ತಿದ್ದ, ಹೆಣ್ಣಾಳುಗಳು ತರುತ್ತಿದ್ದ ಬುತ್ತಿಗಳನ್ನು ಹಂಚಿಕೊಂಡು ಉಣ್ಣುವ ಮೂಲಕ ಹಸಿವಿನ ಅಗ್ನಿಯನ್ನು ತಣಿಸುವ ಸಾಹಸ ಮಾಡುತ್ತಿದ್ದಳು. ಶನಿವಾರ, ಭಾನುವಾರಗಳಂದು ಅವ್ವ ಸಕ್ರಜ್ಜಿಗೆ ಮನೆಯಿಂದ ಬುತ್ತಿ, ನಾಗಪ್ಪಶೆಟ್ಟರ ಮನೆಯಿಂದ ತಿಂಡಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೂ ಇದೆ. ಇಂತಹ ಹಲವಾರು ಸಂದರ್ಭಗಳಲ್ಲಿ ಅವ್ವನ ಈ ಯಾತ್ರೆಯ ಭಾಗವಾಗಿದ್ದ ನನಗೆ, ತೋಟದ ಮನೆಯ ಪಂಪು ರೂಮಿನಲ್ಲಿ ಕುಳಿತುಕೊಂಡು, ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡೇ, ಅವ್ವ ತಂದ ಆಹಾರವನ್ನು ಗಂಟಲ ಒಳಗೆ ದೂಡುತ್ತಿದ್ದ ಸಕ್ರಜ್ಜಿಯ ವೇದನಾಭರಿತ ಮುಖ ಕಣ್ಣ ಮುಂದೆ ಕಟ್ಟುತ್ತಿದೆ.

ಹೀಗೆ “ಮನೆಯ ಸಹವಾಸವೇ ಬೇಡ” ಎಂದು ತೋಟವನ್ನು ಸೇರಿ, ಅಲ್ಲಿನ ಕೆಲಸದ ಮೇಲ್ವಿಚಾರಣೆಯನ್ನು ನೋಡಿಕೊಂಡು ಹೋಗುತ್ತಿದ್ದ ಸಕ್ರಜ್ಜಿಯ ಬೆನ್ನನ್ನು ಐಯ್ಯಕ್ಕ ಬಿಡಲೇ ಇಲ್ಲ. ಸಕ್ರಜ್ಜಿ ಸಂಜೆ ಮನೆ ಸೇರಿದ ಮೇಲೂ ಒಂದಲ್ಲ ಒಂದು ನೆವ ತೆಗೆದು ಅವಳೊಡನೆ ಜಗಳವಾಡುತ್ತಿದ್ದ ಐಯ್ಯಜ್ಜಿ ಬಹಳಷ್ಟು ದಿನ ಸಕ್ರಜ್ಜಿ ಊಟವಿಲ್ಲದೇ ಹಾಸಿಗೆಯ ಪಾಲಾಗುವ ಹಾಗೆ ನೋಡಿಕೊಳ್ಳುತ್ತಿದ್ದಳು. ಜಗಳದ ಕಾರಣದಿಂದ ಕೆಲ ರಾತ್ರಿಗಳು ಮುನಿಸುಪಟ್ಟು ಊಟ ಬಿಟ್ಟು ಸಕ್ರಜ್ಜಿ ಮಲಗಿದರೆ ಮತ್ತೆ ಹಲವು ದಿನ ಸಕ್ರಜ್ಜಿಗೆ ಊಟ ನೀಡುವಲ್ಲಿ ವಿಳಂಬ ನೀತಿಯನ್ನು ಅನುಸರಿಸಿ ವೃದ್ಧೆ ಚಿಕ್ಕಮ್ಮನನ್ನು ಐಯ್ಯಜ್ಜಿ ನಿದ್ದೆಯ ಮಡಿಲಿಗೆ ತಳ್ಳುತ್ತಿದ್ದಳು. ಕೊನೆಗೊಮ್ಮೆ ಈ ರೀತಿಯ ಬದುಕಿನಿಂದ ಬೇಸತ್ತ ಸಕ್ರಜ್ಜಿ ಕೆನರಾಬ್ಯಾಂಕಿನ ಹಿಂದಿದ್ದ, ಅಣ್ಣನಿಗೇ ಸೇರಿದ್ದ ಒಂದು ಸಣ್ಣ ಮನೆಗೆ ಸ್ಥಳಾಂತರ ಹೊಂದಿದ್ದಳು. ಜೀವಮಾನದಲ್ಲಿ ಎಂದೂ ಅಡುಗೆ ಮಾಡಿಯೇ ಗೊತ್ತಿರದ ಸಕ್ರಜ್ಜಿ ಎಪ್ಪತ್ತು ಮೀರಿದ ಇಳಿವಯಸ್ಸಿನಲ್ಲಿ ಬೇರೆ ಸಂಸಾರವನ್ನು ಹೂಡಿ ತನ್ನ ಅಡುಗೆಯನ್ನು ತಾನೇ ಬೇಯಿಸಿಕೊಳ್ಳಬೇಕಾದ ಪರಿಸ್ಥಿತಿಗೆ ದೂಡಲ್ಪಟ್ಟಳು. ಚಿಕ್ಕಮ್ಮ ಮನೆ ಬಿಟ್ಟು ಹೋಗುವುದನ್ನೇ ಕಾಯುತ್ತಿದ್ದ ಐಯ್ಯಕ್ಕನಾಗಲೀ, ಮನೆಯ ಮತ್ತೆ ಯಾವ ಸದಸ್ಯರೇ ಆಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಹಾಗೂ ಸಕ್ರಜ್ಜಿ ಎಲ್ಲಿ ಹೋಗಿದ್ದಾಳೆ? ಏನು ಮಾಡುತ್ತಿದ್ದಾಳೆ? ಎನ್ನುವುದನ್ನು ಅರಿಯುವ ಗೊಡವೆಗೂ ಹೋಗಲಿಲ್ಲ. ತನ್ನ ಹೊಸ ಮನೆಯಲ್ಲಿ ಮೊದಲ ರಾತ್ರಿಯನ್ನು ಅಣ್ಣನ ನೆನಪಿನ “ಶಿವರಾತ್ರಿ”ಯನ್ನಾಗಿ ಆಚರಿಸಿದ ಸಕ್ರಜ್ಜಿ ಅಣ್ಣ ಜೀವಂತವಿದ್ದಾಗ ತಾನು ಈ ರೀತಿ ಮನೆ ತೊರೆದಿದ್ದರೆ ಆತ ನನ್ನನ್ನು ಹೊಸ್ತಿಲು ದಾಟಲಿಕ್ಕೆ ಬಿಡುತ್ತಿದ್ದನೇ? ಎನ್ನುವುದನ್ನು ನೆನೆದೂ ನೆನೆದೂ ಮುದಿ ಕಣ್ಣುಗಳಲ್ಲಿ ಸಂಗ್ರಹವಾಗಿದ್ದ, ಇದ್ದಬದ್ದ ಅಶ್ರುಧಾರೆಯನ್ನು ಹರಿಸುತ್ತಾ ತಲೆದಿಂಬನ್ನು ಮುಂಜಾವಿನ ವೇಳೆಗೆ ನೀರಿನಲ್ಲಿ ತೊಯ್ದಿದೆಯೇನೋ ಎನ್ನುವ ಮಟ್ಟಕ್ಕೆ ಹಸಿಮಾಡಿದ್ದಳು. ಅಂದಿನಿಂದ ಮುಂದೆ ಸಕ್ರಜ್ಜಿ ಅಳಲೇ ಇಲ್ಲ. ಇದರರ್ಥ ಅವಳಿಗೆ ಆಳು ಬರಲೇ ಇಲ್ಲ ಎಂದಲ್ಲ ಆದರೆ ಆಳು ಬಂದ ಹೊತ್ತು ಕಣ್ಣೀರು, ಬತ್ತಿಹೋದ ಕಾರಣದಿಂದ, ಅವಳ ಅಳುವಿಗೆ ಕಣ್ಣೀರಿನ ಸಾಥ್ ಸಿಗುತ್ತಿರಲಿಲ್ಲ. ಕಣ್ಣೀರು ಹರಿಸದೆ ಆಳುವ ಹೆಣ್ಣಿನ ರೋಧನಕ್ಕೆ ಅರ್ಥವಾದರೂ ಎಲ್ಲಿದೆ? ಕಣ್ಣೀರ ಸಾಥ್ ಇಲ್ಲದೆ ಹೆಂಗಸೊಬ್ಬಳು ಎಷ್ಟು ಹೊತ್ತು ಅತ್ತಾಳು? ಕಣ್ಣೀರು ಹೆಣ್ಣಿನ ಅಳುವಿಗೆ ಸಂಗೀತ ಕಚೇರಿಯ “ಜುಗಲ್ ಬಂದಿ” ಇದ್ದ ಹಾಗೆ, ಈ “ಜುಗಲ್ ಬಂದಿ” ಸಾಥ್ ಇಲ್ಲದಿದ್ದರೆ ಮಹಾನ್ ಗಾಯಕರೂ “ಸಪ್ಪೆ” ಎನಿಸಿಬಿಡುತ್ತಾರೆ.

ಚಿಕ್ಕಮ್ಮನ ಸ್ಥಿತಿಗೆ ಮಮ್ಮಲ ಮರುಗುತ್ತಿದ್ದ ಅವ್ವ ಅವಳನ್ನು ಈ ಸ್ಥಿತಿಗೆ ತಂದ ತಂಗಿಯ ಹೆಸರನ್ನು ಕೇಳಿದರೆ ನಿಗಿನಿಗಿ ಕೆಂಡವಾಗುತ್ತಿದ್ದಳು. ಚಿಕ್ಕಮ್ಮನ ಹೊಸ ಬದುಕು ಪಟರೆಯ ಮೇಲೆ ಬರಲಿಕ್ಕೆ ಶಕ್ತಿ ಮೀರಿ ಸಹಾಯ ಮಾಡಿದ ಅವ್ವ, ಸಕ್ರಜ್ಜಿಗೆ ಬೇಕಾದ ಪಾತ್ರೆ ಪಡುಗಗಳನ್ನು, ಆಹಾರ ಪದಾರ್ಥಗಳನ್ನು, ಒಂದು ಸೀಮೆಎಣ್ಣೆ ಒಲೆಯನ್ನು ಒದಗಿಸಿಕೊಟ್ಟು, ತಾನೇ ಮುಂದೆ ನಿಂತು ಅವುಗಳನ್ನು ಸಕ್ರಜ್ಜಿಯ ಹೊಸ ಶ್ರೀನಿವಾಸದ ಅಡುಗೆಮನೆಯಲ್ಲಿ ನೀಟಾಗಿ ಜೋಡಿಸಿದಳು. ಸಕ್ರಜ್ಜಿಯ ಮನೆಯ ಮೊದಲ ಊಟವನ್ನೂ ಅವ್ವನೇ ಮಾಡಿ ಸಣ್ಣಮ್ಮನಿಗೆ ಬಡಿಸಿದಳು. “ಗೌರಾ, ಎಷ್ಟೋ ದಿನಗಳ ನಂತರ ಇವತ್ತು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೇನೆ ನೋಡು. ನಿನ್ನ ಹೊಟ್ಟೆ ತಣ್ಣಗಿರಲವ್ವ” ಎಂದು ಅವ್ವನನ್ನು ಹರಸುತ್ತಿದ್ದರೆ, ಬೇರೆಡೆಗೆ ಮುಖ ತಿರುಗಿಸಿಕೊಂಡು ತನ್ನ ಸೆರಗಿನ ತುದಿಯಿಂದ, ಉದುರುತ್ತಿದ್ದ ಕಣ್ಣೀರುಗಳನ್ನು ಒರಸಿಕೊಂಡ ಅವ್ವನ ಕ್ರಿಯೆ ಅಲ್ಲಿಯೇ ಪಕ್ಕದಲ್ಲಿ ಕುಳಿತು ಮುಂದಿದ್ದ ತಟ್ಟೆಯಲ್ಲಿನ ಅನ್ನ, ಸೊಪ್ಪಿನ ಸಾರನ್ನು ಕರಿದ ಸಂಡಿಗೆ, ಹಸೀ ಮೆಣಸಿನಕಾಯಿ ಹಾಕಿ ರುಬ್ಬಿದ್ದ ಹುಣಸೇಕಾಯಿ ಚಟ್ನಿಯೊಟ್ಟಿಗೆ ನಂಜಿಕೊಂಡು ಹೊಟ್ಟೆಗೆ ಇಳಿಸುತ್ತಿದ್ದ ನನ್ನ ಕಣ್ಣುಗಳ ಸೂಕ್ಷ್ಮದೃಷ್ಟಿಯಿಂದ ತಪ್ಪಿಸಿಕೊಳ್ಳಲಾಗಳಿಲ್ಲ. ತನ್ನ ಹೊಸ ಮನೆ ಸೇರಿದ ನಂತರ ಸಕ್ರಜ್ಜಿ ತೋಟದ ಕಡೆಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಳು.

“ತಾನಾಯ್ತು, ತನ್ನ ಮನೆಯಾಯ್ತು” ಎಂದು ದಿನದ ಬಹುಪಾಲನ್ನು ತನ್ನ ಮನೆಯಲ್ಲಿಯೇ ಕಳೆಯುತ್ತಿದ್ದಳಾದರೂ ಹುಟ್ಟಿದ ಮನೆಯ ನೆನಪು ಅತೀವವಾಗಿ ಕಾಡಿದ ದಿನಗಳ ಸಂಜೆಯ ವೇಳೆ ಹತ್ತು ನಿಮಿಷಗಳ ದೂರದಲ್ಲಿಯೇ ಇದ್ದ ತವರುಮನೆಗೆ, ಕೋಲೂರುತ್ತಾ ನಡೆದು ಹೋಗುತ್ತಿದ್ದಳು. ಅಣ್ಣನ ಮನೆಯ ಹೊಸ್ತಿಲು ತುಳಿದು ಒಳಬಂದ ಸಕ್ರಜ್ಜಿಗೆ ಸ್ವಾಗತ ನೀಡಲು ಯಾರೂ ಇರುತ್ತಿರಲಿಲ್ಲ. ಸಕ್ರಜ್ಜಿಯನ್ನು ನೋಡಿದರೆ ಸಾಕು ಮೂಗು ಮುರಿದು ಮನೆಯ ಒಳಗೆ ಮಾಯವಾಗುತ್ತಿದ್ದ ಐಯ್ಯಜ್ಜಿಯಿಂದ ಸಕ್ರಜ್ಜಿ ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆಯ ನಿರೀಕ್ಷೆ ಇಟ್ಟವಳಲ್ಲ. ಜಗುಲಿಯ ಮೇಲೆ ಕುಳಿತು ಅತ್ತಿಗೆ ಗಂಗಜ್ಜಿಯೊಂದಿಗೆ ನಾಲ್ಕು ಅಲ್ಲಿಯ, ಇಲ್ಲಿಯ ಮಾತನಾಡಿ, ಊರುಗೋಲನ್ನು ಹಿಡಿದು ನಿಧಾನವಾಗಿ ಮತ್ತೆ ತನ್ನ ಮನೆಯ ಕಡೆ ಹೊರಟ ಒಡತಿಯನ್ನು ಅಣ್ಣನ ಮೂರು ಸಾಕು ನಾಯಿಗಳು ಬಿಡುತ್ತಿರಲಿಲ್ಲ. ಸಕ್ರಜ್ಜಿಯನ್ನು ಸುತ್ತುವರೆದು, ಅವಳ ಕಾಲುಗಳನ್ನು ನೆಕ್ಕುತ್ತಾ, ಅವಳನ್ನು ಹೊಸ್ತಿಲು ದಾಟದಂತೆ ತಡೆಯುವ ಪ್ರಯತ್ನವನ್ನು ಈ ನಾಯಿಗಳು ಪ್ರತೀ ಬಾರಿಯೂ ಮಾಡುತ್ತಲೇ ಇದ್ದವು. ಸತ್ತ ಅಣ್ಣನೇನಾದರೂ ನಾಯಿಗಳ ಆತ್ಮಗಳಲ್ಲಿ ಬೆರತಿರುವನೇ? ಎನ್ನುವ ಸಂಶಯಕ್ಕೂ ಈ ವೇಳೆಗಳಲ್ಲಿ ಒಳಗಾಗುತ್ತಿದ್ದ ಸಕ್ರಜ್ಜಿ ತನ್ನ ಹನಿರಹಿತ ಶೋಕಾಚರಣೆಯ ಮೂಲಕ ಮನದಲ್ಲಿನ ದುಗುಡವನ್ನು ಮರೆಮಾಚುತ್ತಲೇ ಮನೆ ಸೇರುತ್ತಿದ್ದಳು. ಕೆಲವೊಮ್ಮೆ, ಅಣ್ಣನಿದ್ದಾಗ, ಅಣ್ಣನೊಟ್ಟಿಗೆ ಗಂಟೆಗಟ್ಟಲೆ ಸಂಜೆಯ ವೇಳೆಯಲ್ಲಿ ಕೂರುತ್ತಿದ್ದ, ಮುಂಬಾಗಿಲಿನ ಹೊರಗಿದ್ದ ಬೆಣಚುಕಲ್ಲು ಹೊದಿಸಿದ್ದ ಕಟ್ಟೆಯ ಮೇಲೆ ಒಂದರ್ಧ ತಾಸು ಕಳೆದು, ಅಣ್ಣ ಯಾವಾಗಲೂ ಕೂರುತ್ತಿದ್ದ ಜಾಗವನ್ನು ಕೈಯಿಂದ ಸವರುತ್ತಲೇ ಒಂದು ರೀತಿಯ ವಿಚಿತ್ರ ಸಮಾಧಾನಕ್ಕೆ ಒಳಗಾಗುತ್ತಿದ್ದಳು ನಮ್ಮ ಸಕ್ರಜ್ಜಿ.

ಚಿಕ್ಕಮ್ಮ ಹೊಸ ಮನೆ ಸೇರಿದ ನಂತರ ಅವಳೊಂದಿಗಿನ ನನ್ನ ಅವ್ವನ ಒಡನಾಟ ಬಹಳವೇ ಹೆಚ್ಚಾಯಿತು. ಪ್ರತೀ ದಿನ ಬೆಳಿಗ್ಗಿನ ಊಟದ ನಂತರ ಸಕ್ರಜ್ಜಿ ಮನೆ ಸೇರುತ್ತಿದ್ದ ಅವ್ವ, ಸಂಜೆಯವರೆಗೂ ಸಣ್ಣಮ್ಮನೊಂದಿಗೆ ಚೌಲವನ್ನು ಆಡುತ್ತಲೇ ಕಾಲ ಕಳೆಯುತ್ತಿದ್ದಳು. ಐದಾರು ಗಂಟೆಗಳ ಕಾಲ ನಡೆಯುತ್ತಿದ್ದ ದಿನನಿತ್ಯದ ಈ ಆಟಗಳಲ್ಲಿ ಅಕ್ಕಪಕ್ಕದ ರೆಡ್ಡಿ ಮಹಿಳೆಯರೂ ಉತ್ಸಾಹದಿಂದಲೇ ಭಾಗವಹಿಸುತ್ತಿದ್ದರು. ಸಕ್ರಜ್ಜಿ ರೊಟ್ಟಿ ಮಾಡಿ ಬೆಳಗಿನ ಊಟ ಮುಗಿಸಿದ್ದರೆ, ಮಧ್ಯಾಹ್ನದ ಊಟವನ್ನು ಅವ್ವನೇ ಮಾಡಿ ಬಡಿಸುತ್ತಿದ್ದಳು. ಮಧ್ಯಾಹ್ನದ ಹೊತ್ತು ಜೋಳದ ಮುದ್ದೆ ಮತ್ತು ಯಾವುದಾದರೂ ಸೊಪ್ಪಿನ ಸಾರನ್ನು ಮಾಡುತ್ತಿದ್ದ ಅವ್ವ, ಸಣ್ಣಮ್ಮನ ಮುದ್ದೆಯ ಕುಣಿಗೆ ಒಂದು ದೊಡ್ಡ ಚಮಚದಲ್ಲಿ ತಾನೇ ಮನೆಯಿಂದ ತಂದುಕೊಟ್ಟ ತುಪ್ಪವನ್ನು ಮರೆಯದೇ ಬಡಿಸುತ್ತಿದ್ದಳು. ಸಕ್ರಜ್ಜಿಗೆ ರಾತ್ರಿಯ ಊಟಕ್ಕೆ ಬೇಕಾದ ಅಕ್ಕಿಅನ್ನವನ್ನೂ ಮಾಡಿಟ್ಟೇ ಮನೆಗೆ ಮರಳುತ್ತಿದ್ದಳು. ಈ ದಿನಗಳಲ್ಲಿ ನಾನು ಸಂಜೆಯ ವೇಳೆ, ಶಾಲೆಯಿಂದ ಸೀದಾ ಸಕ್ರಜ್ಜಿಯ ಮನೆಗೆ ಹೋಗಿ, ಅಲ್ಲಿಯೇ ಸ್ವಲ್ಪ ಹೊತ್ತು ಆಟವಾಡುತ್ತಿದ್ದು ಬಳಿಕ ಅವ್ವನನ್ನು ಕರೆದುಕೊಂಡೇ ನಮ್ಮ ಮನೆ ಸೇರುತ್ತಿದ್ದೆ. ಈ ವೇಳೆಗಾಗಲೇ ಸ್ವಲ್ಪ ಮಂದವಾಗಿದ್ದ ಕಣ್ಣುಗಳಿಂದಲೆ, ಅಡುಗೆ ಮನೆಯಲ್ಲಿದ್ದ ಡಬ್ಬಗಳನ್ನ ತಡವಿ, ಕೊಡವಿ ಏನಾದರೂ ತಿಂಡಿಯನ್ನು, ಒಂದು ದಿನವೂ ಬಿಡದ ಹಾಗೆ, ನನ್ನ ಜೇಬಿಗೆ ಸೇರಿಸುತ್ತಿದ್ದ ಸಕ್ರಜ್ಜಿಯ ನನ್ನ ಮೇಲಿಟ್ಟಿದ್ದ ಪ್ರೀತಿಗೆ ಇಂದಿಗೂ ನನ್ನ ಕಣ್ಣುಗಳು ಮಂಜಾಗುತ್ತಿವೆ.

ಹೀಗೆ ಸಕ್ರಜ್ಜಿ ತನ್ನ ಹೊಸ ಮನೆಯಲ್ಲಿ ಸಂಸಾರ ಹೂಡಿ ಒಂದು ವರ್ಷವೂ ಕಳೆದಿರಲಿಲ್ಲ ಎನ್ನಿಸುತ್ತದೆ. ಅದೊಂದು ದಿನ, ಪ್ರತಿ ದಿನದಂತೆ ಅವ್ವ ಸಣ್ಣಮ್ಮನ ಮನೆಗೆ ಹೋದಾಗ ಸಕ್ರಜ್ಜಿ ಮಾಮೂಲಿನ ಹಾಗೆ ಕಂಡುಬರಲಿಲ್ಲ. “ಸಣ್ಣಮ್ಮ, ಏನಾಗಿದೆ? ಮೈ ಹುಷಾರಿಲ್ಲವೇ? ಡಾಕ್ಟರ್ ಕಡೆಗೆ ಹೋಗೋಣವೇ?” ಎಂದು ಪರಿಪರಿಯಾಗಿ ಅವ್ವ ಗೋಗೆರೆದರೂ “ಗೌರ, ನನಗೇನಾಗಿದೆ? ಆರಾಮವಾಗಿ ಇದ್ದೀನಲ್ಲ?” ಎನ್ನುತ್ತಲೇ ತನ್ನ ಮನಸ್ಸಿನ ಗುಟ್ಟನ್ನು ಬಿಟ್ಟುಕೊಡದ ಸಕ್ರಜ್ಜಿ ಮಧ್ಯಾಹ್ನ ಊಟವಾದ ಬಳಿಕ ನಿಧಾನವಾಗಿ ತನ್ನ ಮನದ ದುಗುಡವನ್ನು ಪ್ರೀತಿಯ ಮಗಳ ಮುಂದೆ ಬಿಚ್ಚಿಡತೊಡಗಿದಳು. “ಗೌರ, ನಾಳೆಗೆ ಅಣ್ಣ ಹೋಗಿ ಹತ್ತು ವರ್ಷ ತುಂಬುತ್ತದೆ. ನಾಡಿದ್ದಲ್ಲ, ಆಚೆ ನಾಡಿದ್ದು ದೀಪಾವಳಿ ಅಮವಾಸ್ಯೆ. ಅಮವಾಸ್ಯೆಗೆ ಮೂರು ದಿನ ಮುಂಚಿತವಾಗಿ ಮಲ್ಲಣ್ಣ ತೀರಿಕೊಂಡ. ನೋಡು ಈ ಹತ್ತು ವರ್ಷಗಳಲ್ಲಿ ಹೇಗಿದ್ದವಳು ಹೇಗಾಗಿ ಹೋದೆ? ತನ್ನ ಕಣ್ಣಿನ ರೆಪ್ಪೆಗಳಿಗಿಂತ ಹೆಚ್ಚು ಹುಷಾರಾಗಿ ನೋಡಿಕೊಳ್ಳುತ್ತಿದ್ದ ಅಣ್ಣ ಸತ್ತ ನಂತರ ನಾನು ಯಾರಿಗೂ ಬೇಡವಾದೆ. ಹುಟ್ಟಿ ಬೆಳೆದ ತವರುಮನೆ ನನ್ನನ್ನು ದೂರ ತಳ್ಳಿತು, ನಾನೇ ಹೊತ್ತು ಬೆಳಸಿದ ಅಣ್ಣನ ಮಕ್ಕಳು ನನ್ನನ್ನು ದೂರ ಮಾಡಿದರು, ಮಗಳಂತೆ ನೋಡಿಕೊಂಡ ನಿನ್ನ ತಂಗಿ ಕೂಡ ನನ್ನ ವಿರುದ್ಧ ಕತ್ತಿ ಮಸೆದಳು” ಎಂದು ತನ್ನ ಒಡಲ ಸಂಕಟವನ್ನು ಪುಂಖಾನುಪುಂಖವಾಗಿ ಹೊರಗೆಡವುತ್ತಿದ್ದರೆ, ಏನು ಮಾತನಾಡಬೇಕು ಎಂದು ತಿಳಿಯದೆ ಪೆಚ್ಚಾಗಿ ಕಣ್ಣುಕಣ್ಣು ಬಿಡುವ ಪರಿಸ್ಥಿತಿ ನನ್ನ ಅವ್ವನದಾಗಿತ್ತು. ಅಂದು ಸಂಜೆ ಮನೆ ಸೇರಿದ ಬಳಿಕ, ಪೋಸ್ಟ್ ಆಫೀಸ್ ಕಟ್ಟೆಯ ಮೇಲಿನ ತನ್ನ ಎಂದಿನ ಸಹಪಾಠಿಗಳ ಬೈಠಕ್ ಮುಗಿಸಿ ಸುಮಾರು ಎಂಟರ ವೇಳೆಗೆ ಮನೆಗೆ ಬಂದ, ತಾತನನ್ನು ಕಂಡವಳೆ “ಸಕ್ರಮ್ಮ ಸಣ್ಣಮ್ಮನನ್ನು ನೆನಸಿಕೊಂಡರೆ ಯಾಕೋ ಭಯವಾಗುತ್ತಿದೆ, ಇವತ್ತು ಮಲ್ಲಪ್ಪ ಮಾಮನನ್ನು ನೆನಸಿಕೊಂಡು ತುಂಬಾನೇ ಬೇಜಾರಾಗಿದ್ದಳು” ಎಂದು ಅವಲತ್ತು ಪಟ್ಟುಕೊಂಡಳು. “ನೀವೂ ನಾಳೆ ನನ್ನ ಜೊತೆಗೆ ಸಣ್ಣಮ್ಮನ ಮನೆಗೆ ಬನ್ನಿ, ಅವಳ ಹತ್ತಿರ ಹೋಗಿ ಮಾತನಾಡೋಣ, ಅವಳಿಗೆ ತನ್ನ ಮನೆಯಲ್ಲಿರುವುದು ಕಷ್ಟವಾದರೆ ನಮ್ಮ ಮನೆಗೇ ಬಂದು ಇರುವಂತೆ ಕೇಳಿಕೊಳ್ಳೋಣ. ಅವಳ ಹೊಟ್ಟೆಯೇನೂ ಪಟ್ಟಣವಲ್ಲ, ಹೇಗೋ ದೇವರಿಟ್ಟಿದ್ದು ಆಗುತ್ತದೆ” ಎನ್ನುವ ಅವ್ವನ ಮಾತಿಗೆ ಮೂಲತಃ ಅಂತಃಕರಣದ ಧಣಿಯಾದ ತಾತ ಧ್ವನಿಗೂಡಿಸಿದ.

ಅವ್ವನ ನಾಲಗೆ ಮೇಲೆ ಕರಿ ಮಚ್ಚೆ ಇತ್ತು ಅನ್ನಿಸುತ್ತಿದೆ, ಮಾರನೇ ದಿನ ಸಕ್ರಜ್ಜಿಗಾಗಿ “ದೇವರು ಇಟ್ಟಿದ್ದು” ಆಗಿಯೇ ಹೋಗಿತ್ತು. ಅವ್ವ ಮನೆಗೆ ಹಿಂತಿರುಗಿದ ನಂತರ ಅತಿಯಾಗಿ ಕಾಡತೊಡಗಿದ ಅಣ್ಣನ ನೆನಪು ರಾತ್ರಿ ಯಾವ ಹೊತ್ತಿನಲ್ಲಿಯೋ ಸಕ್ರಜ್ಜಿಯನ್ನು ಸೀರೆಯ ಕುಣಿಕೆಗೆ ಕೊರಳನ್ನು ಒಡ್ಡುವ ಹಾಗೆ ಮಾಡಿತ್ತು. ಬೆಳಿಗ್ಗೆ ಸುದ್ದಿ ತಿಳಿದ ಒಡನೆಯೇ ರೋಧಿಸುತ್ತಲೇ ಸಕ್ರಜ್ಜಿಯ ಮನೆ ಸೇರಿದ ಅವ್ವ ಮೂರ್ನಾಲ್ಕು ಗಂಟೆಗಳ ನಂತರ ಮನೆಗೆ ಬಂದವಳು ಮತ್ತೆ ತಾತನ ಒಡಗೂಡಿ ಸಣ್ಣಮ್ಮನ ಮನೆ ತಲುಪಿದಳು. ತಾತನೊಂದಿಗೆ ಸೇರಿ “ನಮ್ಮ ಮನೆಗೆ ಬಂದು ಇರಬೇಕು” ಎಂದು ಸಕ್ರಜ್ಜಿಯನ್ನು ಬಿನ್ನವಿಸಲು ಹೋಗಬೇಕೆಂದಿದ್ದ ದಂಪತಿಗಳು ಅಂದು ಸಂಜೆಯ ವೇಳೆಗೆ ಒಟ್ಟಾಗಿಯೇ ಸಕ್ರಜ್ಜಿಯನ್ನು, ಮಲ್ಲಜ್ಜನ ಸಮಾಧಿಯ ಪಕ್ಕದಲ್ಲಿ ತೋಡಿದ್ದ ಗೋರಿಯಲ್ಲಿ ಕುಳ್ಳರಿಸಿ, ಅವಳು ಶಾಶ್ವತ ರೂಪದಲ್ಲಿ ಇರಲು ಬಯಸಿದ ಅಣ್ಣನ ಪಕ್ಕದಲ್ಲಿದ್ದ ಖಾಲಿ ಜಾಗದ ಪಾಲಾಗಿಸಿ, ಅವಳ ನೆನಪುಗಳ ಭಾರವನ್ನಷ್ಟೇ ಹೊತ್ತು ಮನೆ ಸೇರಿದರು. “ಸಕ್ರಮ್ಮ ಸಣ್ಣಮ್ಮನನ್ನು ಕೊನೆಗೂ ಮನೆಗೆ ಕರೆ ತರಲಾಗಲಿಲ್ಲವಲ್ಲ” ಎನ್ನುವ ಉಕ್ಕಿ ಬರುತ್ತಿದ್ದ ದುಃಖದ ನಡುವೆಯೂ ಸಣ್ಣಮ್ಮನ ಕಷ್ಟಗಳು ಕೊನೆಗೂ ನಿವಾರಣೆಯಾದವಲ್ಲ ಎನ್ನುವುದನ್ನು ಸುಪ್ತ ಮನದಲ್ಲಿಯೇ ಯೋಚಿಸಿ ಹಗುರಾದ ಅವ್ವನಿಗೆ ತಾನು ಇಷ್ಟು ನಿರಾಳವಾಗಲಿಕ್ಕೆ ಕಾರಣವೇನು ಎನ್ನುವುದು ಕೊನೆಗೂ ಅರಿವಿಗೆ ಬರಲೇ ಇಲ್ಲ.

Girl in a jacket
error: Content is protected !!