ಭಾರತೀಯರ ಪ್ರಾಣ ಹಿಂಡುತ್ತಿರುವ ಲೈಂಗಿಕ ಸುಲಿಗೆಯೆಂಬ ಬ್ಲಾಕ್ ಮೇಲ್ ಬಿಸಿನೆಸ್!
writing-ಪರಶಿವ ಧನಗೂರು
ಭಾರತದಲ್ಲಿ ಈಗ ಸದ್ದಿಲ್ಲದೆ ದುಡ್ಡುಮಾಡುತ್ತಿರುವ ಸೆಕ್ಸ್ ಟಾರ್ಶನ್ ಮಾಫಿಯಾ ಹಲವಾರು ಅಮಾಯಕರ ಪ್ರಾಣ ಬಲಿಪಡೆದುಕೊಂಡು ತನಿಖಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ!
ಲೈಂಗಿಕತೆಯ ಕೆಟ್ಟ ಕುತೂಹಲಕ್ಕೆ ಬಾಯಿ ತೆರೆದಿರುವ ವ್ಯಕ್ತಿಗಳು, ಒಂಟಿ ಬದುಕಿಗೆ ಬೇಸತ್ತು ಲೈಂಗಿಕ ಏಕತಾನತೆ ನೀಗಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ಯುವಕರು-ಮಧ್ಯವಯಸ್ಕರು ಲೈಂಗಿಕ ಸುಲಿಗೆಯೆಂಬ ಸೆಕ್ಸ್ ಟಾರ್ಶನ್ ಮಾಫಿಯಾಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ!
ಮೊಬೈಲ್ ಬಳಸುತ್ತಿರುವ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪುರುಷರು, ಮಹಿಳೆಯರು ಇಬ್ಬರೂ ಎಚ್ಚರವಾಗಿರಬೇಕಾದ ಕಾಲ..!
ಕೋಲಾರದ ಡೆಪ್ಯೂಟಿ ತಹಸೀಲ್ದಾರ್ ಗೌತಮ್ ಎಂಬುವರನ್ನು ಹನಿಟ್ರಾಪ್ ಖೆಡ್ಡಾಕ್ಕೆ ಕೆಡವಿ ೨೫ ಲಕ್ಷರೂಪಾಯಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಕೊಡಿಗೇಹಳ್ಳಿ ಗಣಪತಿ ನಾಯಕ್, ಕಿಶನ್, ರಾಮೇಗೌಡ ಎಂಬ ಮೂವರನ್ನು ಬಂಧಿಸಿರುವ ಕೆ.ಆರ್.ಪುರಂ ಠಾಣೆಯ ಪೊಲೀಸರು ಗದಗ ಮೂಲದ ನಿಖಿತಾ ಎಂಬಾಕೆಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಉಪ ತಹಸೀಲ್ದಾರ್ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಲೇ ಬೆಲೆಗೆ ಬೀಳಿಸಿಕೊಂಡಿದ್ದ ನಿಖಿತಾ ಗೌತಮ್ ನನ್ನು ಹೋಟೆಲ್ ಗೆ ಕರೆದು, ಜ್ಯೂಸ್ ನಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಬೆತ್ತಲೆ ಮಾಡಿ ತನ್ನಜೊತೆಗೆ ಮಲಗಿಸಿಕೊಂಡು, ವೀಡಿಯೋ ಮಾಡಿಕೊಂಡು ೨೫ ಲಕ್ಷಕ್ಕೆ ಬ್ಲಾಕ್ ಮೇಲ್ ಮಾಡುತ್ತಿ ತಂಡದ ಹಿಂದೆ ಇದ್ದಳು!
ಲೈಂಗಿಕ ಸುಲಿಗೆ ಎಂಬ ಬಿಸಿನೆಸ್
ಲೈಂಗಿಕ ಸುಲಿಗೆ! ಈಗ ಎಲ್ಲಾಕಡೆ ತಲೆಎತ್ತಿರುವ ಹೊಸ ಬಿಸಿನೆಸ್! ಸೆಕ್ಸ್ ಟಾರ್ಶನ್ ಮಾಫಿಯಾ ಸದ್ದಿಲ್ಲದೆ ದುಡ್ಡು ಮಾಡುತ್ತಿದೆ! ಪ್ರಾಣಗಳನ್ನೂ ತೆಗೆಯುತ್ತಿದೆ! ಸೆಕ್ಸ್ ಟ್ರಾಪ್ ಗಳಿಂದ ಮಾನ ಮರ್ಯಾದೆಗೆ ಅಂಜಿ ಹಲವಾರು ಜನರು ಆತ್ಮಹತ್ಯೆ ಮಾಡಿಕೊಂಡು ಉಸಿರುಚೆಲ್ಲುತ್ತಿದ್ದಾರೆ. ಇತ್ತೀಚೆಗಂತೂ ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ. ಕಳೆದ ಜನವರಿಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಬಳಿ ಯ ರೈಲ್ವೆ ಹಳಿ ಮೇಲೆ ತಲೆಯಿಟ್ಟು ಮಲಗಿ ಆತ್ಮ ಹತ್ಯೆ ಮಾಡಿಕೊಂಡ ೨೪ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೂ ಕೂಡ ಈ ಲೈಂಗಿಕ ಸುಲಿಗೆಯ ಬಲಿಪಶು. ಭೂಪಾಲ್ ನಲ್ಲಿ ಕುಳಿತು ಹುಡುಗಿಯ ವೇಷದಲ್ಲಿ ಚಾಟ್ ಮಾಡಿ ಡಾಕ್ಟರ್ ಒಬ್ಬನನ್ನು ಬಟ್ಟೆ ಬಿಚ್ಚಿಸಿ ವೀಡಿಯೋ ಮಾಡಿಕೊಂಡಿದ್ದ ಸೈಬರ್ ಸುಲಿಗೆಕೋರರ ಸೆಕ್ಸ್ ಟಾರ್ಶನ್ ಕಿರುಕುಳಕ್ಕೆ ಒಳಗಾಗಿ ೨೦೨೧ರ ಆಗಸ್ಟ್ ನಲ್ಲಿ ಕೆಂಗೇರಿ ಹೆಜ್ಜಾಲದಲ್ಲಿ ರೈಲಿಗೆ ತಲೆ ಕೊಟ್ಟು ವೈದ್ಯರೂಬ್ಬರು ಪ್ರಾಣ ಬಿಟ್ಟಿದ್ದರು! ಎಂಬಿಎ, ಇಂಜಿನಿಯರಿಂಗ್ ಪದವಿದರರು, ವೈದ್ಯಕೀಯ ವಿದ್ಯಾರ್ಥಿಗಳು ಸರ್ಕಾರಿ ನೌಕರರು, ಬಿಸಿನೆಸ್ ಮ್ಯಾನ್ ಗಳು ಕೂಡ ೨೦೦೬ ರಿಂದೀಚೆಗೆ ಈ ಲೈಂಗಿಕ ಸುಲಿಗೆಯ ಮಾಫಿಯಾಕ್ಕೆ ಸಿಕ್ಕು ಪ್ರಾಣ ಬಿಟ್ಟಿದ್ದಾರೆ. ಮನೆತನದ ಗೌರವಕ್ಕೆ ಹೆದರಿ, ವೈಯಕ್ತಿಕ ಮರ್ಯಾದೆಗೆ ಅಂಜಿ ಪ್ರಾರಂಭದಲ್ಲಿ ಲಕ್ಷಾಂತರ ರೂಪಾಯಿ ಹಣ ನೀಡಿದ್ದರೂ, ಮತ್ತೆ ಮತ್ತೆ ಹಣದಾಸೆಗೆ ಸೆಕ್ಸ್ ಟ್ರಾಪರ್ ಗಳು ಕೊಡುವ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ.ಇತ್ತೀಚೆಗೆ ನಡೆಯುತ್ತಿರುವ ನಿಗೂಢ ಆತ್ಮಹತ್ಯೆಗಳಲ್ಲಿ ಬಹುಪಾಲು ಈ ಸೆಕ್ಸ್ ಟಾರ್ಶನ್ ಪ್ರಕರಣಗಳಿಗೆ ತಳುಕುಹಾಕಿಕೊಂಡಿವೆ. ಮಾನ ಮರ್ಯಾದೆಗೆದರಿ ನೂರಾರು ಪ್ರಕರಣಗಳು ನಿಗೂಢವಾಗಿಯೇ ಮುಚ್ಚಿ ಹೋಗುತ್ತಿವೆ. ಹಾಗೆ ಲೈಂಗಿಕ ಸುಲಿಗೆಯ ಮಾಫಿಯಾಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿರುವವರು, ಪ್ರಾಣ ಕಳೆದುಕೊಳ್ಳುತ್ತಿರುವವರು ಹೆಚ್ಚಿನವರು ಯುವಜನರೆ ಎಂಬುದು ಮಾತ್ರ ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ.
ಅಪರಿಚಿತರಿಂದ ದೂರವೇ ಇರಿ
ದೇಶದ ಭವಿಷ್ಯದ ದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆಯಾಗಿದೆ. ’ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರು ನೀಡುವ ಆಹ್ವಾನ ಗಳಿಂದ ಆದಷ್ಟು ದೂರವೇ ಇರಿ. ಆತ್ಮಹತ್ಯೆ ಮಾಡಿಕೊಳ್ಳಬೇಕಿನಿಸುವ ಪರಿಸ್ಥಿತಿಯೇ ಎದುರಾದರೇ ಮೊದಲು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ. ಮಾನಸಿಕ ವೈದ್ಯರ ಸಲಹೆ-ಸಮಾಲೋಚನೆ ಪಡೆಯಿರಿ’ ಎಂದು ಮನೋವೈದ್ಯಕೀಯ ತಜ್ಞರು ಸಾರ್ವಜನಿಕರಿಗೆ ಎಚ್ಚರಿಸುತ್ತಿದ್ದಾರೆ. ಆದರೂ ನಮ್ಮ ಮೂರ್ಖ ಜನರು ಮೈಮರೆತು ಮತ್ತೆ ಮತ್ತೆ ಶ್ರಂಗಾರದೆಸರಲ್ಲಿ ಸುಲಿಗೆಗೆ ಇಳಿದಿರುವ ಸೆಕ್ಸ್ ಟಾರ್ಶನ್ ಮಾಫಿಯಾ ಜಾಲದ ಬೆಲೆಗೆ ಬೀಳುತ್ತಲೇ ಇದ್ದಾರೆ.
ಭಾರತದಲ್ಲಿ ಈಗ ಹುಡುಗಿಯರ ಮುಖವಾಡ ಧರಿಸಿ, ಹುಡುಗಿಯರನ್ನೇ ಬಳಸಿಕೊಂಡು ನಿಮ್ಮನ್ನು ಯಾಮಾರಿಸಿ-ವಂಚಿಸಿ ದೋಚಲು ’ಬೆತ್ತಲೆ ಗ್ಯಾಂಗ್’ಗಳು ಸಕ್ರಿಯವಾಗಿವೆ! ಫೇಸ್ಬುಕ್ನಲ್ಲಿ, ಇನ್ಸ್ಟಾಗ್ರಾಂನಲ್ಲಿ ಗಾಳಹಾಕಿ ನಿಮ್ಮನ್ನು ಖೆಡ್ಡಾಕ್ಕೆ ಕೆಡವಲು ಕಾದು ಕುಳಿತಿರುವ ದಂಧೆಕೋರರು, ಆನ್ ಲೈನ್ ವೆಬ್ಸೈಟ್ ಗಳ ಮೂಲಕ ಆಯುರ್ವೇದಿಕ್ ಮಸಾಜ್ ಹೆಸರಿನಲ್ಲೂ, ಆರೋಗ್ಯಕ್ಕೆ ಒಳ್ಳೆಯದ್ದಾಗುವ ಅಪ್ಲಿಕೇಶನ್ ಆಫರ್ ಗಳ ಜಾಲದ ಬಲೆಬೀಸಿ ಸೆಳೆಯುತ್ತಿದ್ದಾರೆ! ಈ ಅಂತರ್ಜಾಲದ ಅಂತರ್ ರಾಜ್ಯ ಡಕಾಯಿತರ ಗುರಿ ಹಣವೊಂದೆ. ಹಣ ಮಾಡಲು ಈ ಲೈಂಗಿಕ ಸುಲಿಗೆಯ ಕಳ್ಳವಂಚಕರು ಈಗ ಎಲ್ಲಾಕಡೆ ನುಸುಳಿದ್ದಾರೆ. ಸೂಪರ್ ಸ್ಪೆಷಾಲಿಟಿ ಸ್ಪೈ ಕ್ಯಾಮೆರಾ ಗಳ ರೀತಿ ರೆಸಾರ್ಟು, ಲಾಡ್ಜುಗಳಲ್ಲಿ ಹಿಡನ್ ಕ್ಯಾಮೆರಾ ಗಳನ್ನು ಬಚ್ಚಿಟ್ಟು ಹನಿಟ್ರಾಪ್ ಮಾಡೀ, ಅಂತರ್ಜಾಲದಲ್ಲೂ ಅವಿತುಕೊಂಡು, ನಾನಾ ಮುಖವಾಡ-ವೇಶಗಳನ್ನು ಧರಿಸಿ ಹುಡುಗಿಯರಂತೆ ಸೆಕ್ಸ್ ಚಾಟ್ ಮಾಡಿ, ಮಾನಸಿಕವಾಗಿ ಉದ್ರೇಕಿಸಿ ನಿಮ್ಮನ್ನು ಬೆತ್ತಲಾಗಿಸಿ ವೀಡಿಯೋ ಚಿತ್ರೀಕರಣ ಮಾಡಿಟ್ಟುಕೊಂಡು ವಂಚಿಸುವ ಲೈಂಗಿಕ ಸುಲಿಗೆಯ ಮಾಫಿಯಾ ಜಾಲಗಳು ದೇಶದೆಲ್ಲೆಡೆ ಈಗ ಸಕ್ರಿಯವಾಗಿವೆ. ಈ ಸೈಬರ್ ಯುಗದ ಆನ್ ಲೈನ್ ಸುಲಿಗೆಕೋರರು ಸುಂದರ ಯುವತಿಯರ ಮುಖಚಿತ್ರವಿರುವ ಫೋಟೋ ಗಳನ್ನು ಕದ್ದು ನಕಲೀ ಫೇಸ್ಬುಕ್ನಲ್ಲಿ, ಇನ್ಸ್ಟಾಗ್ರಾಂ ಖಾತೆಗಳಲ್ಲಿ ಹಾಕಿ ಚೆಂದದ ಹುಡುಗಿ ಹೆಸರು ಬರೆದು ಅಕೌಂಟ್ ತೆರೆದು, ನಂತರ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ನಟರು, ವಿವಿಧ ಕ್ಷೇತ್ರಗಳಲ್ಲಿನ ಸಾರ್ವಜನಿಕರನ್ನೂ ಫೇಸ್ಬುಕ್ನಲ್ಲಿ ಗುರುತಿಸಿ ಪ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ, ಸ್ನೇಹ ಸಂಪಾದಿಸುತ್ತಾರೆ!
ಅಸಲೀ ಆಟ ಆಗಲೇ ಸುರುವಾಗುವುದು. ಸುಂದರ ಯುವತಿಯರ ಫೊಟೋ ಫ್ರೇಮಿಗೆ ಮನಸೋತು ಅಪರಿಚಿತ ಯುವತಿಯ ಪ್ರೆಂಡ್ಸ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುವ ಗಂಡಸರಿಗೆ ಅ ನಕಲಿ ಯುವತಿ ಕಡೆಯಿಂದ ಇದ್ದಕ್ಕಿದ್ದಂತೆ ಮೆಸ್ಸೆಂಜರ್ ನಲ್ಲಿ ಸೆಕ್ಸ್ ಚಾಟಿಂಗ್ ಸುರಿಮಳೆಯಾದರೆ ಇತ್ತ ಪುರುಷರ ಪಾಡು ಏನಾಗಿರಬೇಡ! ಸಲುಗೆಯಿಂದಲೇ ಚಾಟ್ ಮಾಡುತ್ತಾ , ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಾ, ಪೋಲಿ ಮೆಸೇಜುಗಳ ಗಾಳಹಾಕಿ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಿದ ಬಳಿಕ ಇದ್ದಕ್ಕಿದ್ದಂತೆ ರಾತ್ರೋರಾತ್ರಿ ನಿಮ್ಮ ಮೋಬೈಲಿಗೇ ವೀಡಿಯೋ ಕಾಲಿಂಗ್ ಬರುತ್ತದೆ! ನೀವೂ ಕಾಲ್ ರಿಸೀವ್ ಮಾಡುತ್ತೀರಿ. ನಿಮ್ಮ ಮೊಬೈಲ್ ಒಳಗಡೆ ಬೆತ್ತಲೆ ಹುಡುಗಿ! ನಿಮ್ಮ ಪರಿಸ್ಥಿತಿ ಈಗ ಹೇಗಾಗಿರಬೇಡ.? ಕೊನೆಗೆ ನಿಮ್ಮನು ಪ್ರಚೋದಿಸಿ ಬಟ್ಟೆ ಬಿಚ್ಚಿಸಿ ಬೆತ್ತಲೆಮಾಡುವ ಸೈಬರ್ ವಂಚಕರ ಈ ’ಬೆತ್ತಲೆ ಗ್ಯಾಂಗ್’ ನಿಮಗೆ ತಿಳಿಯದಂತೆ ನಿಮ್ಮ ಮತ್ತು ಮೊಬೈಲ್ ಒಳಗಡೆ ಇರುವ ಹುಗುಗಿಯ ಬೆತ್ತಲೆ ದೇಹದ ಸಂಪೂರ್ಣ ವೀಡಿಯೊವನ್ನು ಚಿತ್ರೀಕರಣ ಮಾಡಿಟ್ಟುಕೊಂಡು ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ವಾಟ್ಸಾಪ್ಗೆ ಕಳುಹಿಸಿ ಹಣ ಕೇಳುತ್ತದೇ!!
ಬೆತ್ತಲೆ ಮಾಡಿ ಹಣಕೀಳುತ್ತಾರೆ
ರೈಲು ಪ್ಲಾಟ್ ಫಾರಂ ಬಿಟ್ಟ ಮೇಲೆ ನಿಮ್ಮ ಕೈಗೆ ಟಿಕೆಟ್ಟು ಬಂದಿರುವುದರಿಂದ ನೀವು ದಂಡೆ ತೆರಲೇಬೇಕಾಗಿರುತ್ತದೇ!! ನಿಮ್ಮ ಮೊಬೈಲ್ ಫೋನ್ ಗೆ ನಿಮ್ಮದೇ ಬೆತ್ತಲೆ ವೀಡಿಯೋ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ಕಣ್ಣಿಗೆ ಕಾಣದ ಈ ಬೆತ್ತಲೆ ಗ್ಯಾಂಗ್ ಎಲ್ಲಿಯೋ ಕುಳಿತು ನಿಮ್ಮನ್ನು ಹೆದರಿಸುತ್ತಾರೆ. ನಿಮ್ಮ ಬೆತ್ತಲೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆ! ನಿಮ್ಮ ಸ್ನೇಹಿತರಿಗೆ, ನಿಮ್ಮ ಸಂಬಂದಿಕರ ಮೊಬೈಲುಗಳಿಗೆ ಬೆತ್ತಲೆ ವೀಡಿಯೋ ಸೆಂಡ್ ಮಾಡಬಾರದೆಂದರೇ ಈಗಲೇ ಇಂತಿಷ್ಟು ಹಣ ಫೋನ್ ಫೇ, ಗೂಗಲ್ ಫೇ.ಪೇಟಿಎಂ. ಮಾಡಿ ಎಂದು ಬ್ಲಾಕ್ ಮೇಲ್ ಮಾಡಿ ಧಮ್ಕಿ ಹಾಕುತ್ತಾರೆ. ಮಾನ ಮರ್ಯಾದೆಗೆ ಅಂಜುವ ಜನ ಕೈಲಿದ್ದಷ್ಟು ಹಣಕಟ್ಟಿ ತೆಪ್ಪಗಾಗುತ್ತಾರೆ. ಹಣದ ರುಚಿಗೆ ಬಿದ್ದ ಬೆತ್ತಲೆ ಗ್ಯಾಂಗ್ ಮತ್ತೊಮ್ಮೆ ಅದೇ ವ್ಯಕ್ತಿಗೆ ಇನ್ನೂ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸುತ್ತದೆ. ಹಣವಿಲ್ಲದವರು ಮೊದಲಿಗೆ ಸಾಲಮಾಡಿಯೋ-ಒಡವೆ ಅಡವಿಟ್ಟೊ ಮತ್ತಷ್ಟು ಹಣಕೊಟ್ಟು ನಿಟ್ಟುಸಿರಾಗುತ್ತಾರೆ! ಪದೇ ಪದೇ ಲೈಂಗಿಕ ಸುಲಿಗೆಯ ವಂಚಕರು ಹಣ ಕೊಟ್ಟವರನ್ನೇ ಟಾರ್ಗೆಟ್ ಮಾಡಿ ಮತ್ತೆ ಮತ್ತೆ ಹಣಕೇಳಲು ತೊಡಗಿದರೆ ಈ ಕಿರುಕುಳದಿಂದ ನೊಂದು ಹೆದರಿದ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಷ್ಟೇ! ನಿಜಾ..ಇಂತಹ ಅಮಾನವೀಯ ವಾದ ಅಸಹ್ಯಕರವಾದ ಘಟನೆಯೊಂದು ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಕಳೆದ ವರ್ಷ ನಡೆದಿತ್ತು. ಈ ಬೆತ್ತಲೆ ಗ್ಯಾಂಗಿನ ಕಿರುಕುಳಕ್ಕೆ ಬೇಸತ್ತು ಮನನೊಂದು, ಮನೆಯವರ ಬಳಿ ಹೇಳಿಕೊಂಡರೆ ಮಾನ ಮರ್ಯಾದೆ ಹೋಗುತ್ತದೆಂದು, ಬಿಸಿನೆಸ್ ಮ್ಯಾನ್ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಪಾಪ ಈ ಸೆಕ್ಸ್ ಟಾರ್ಶನ್ ಮಾಫಿಯಾದ ಬ್ಲಾಕ್ ಮೇಲ್ ಗೆ ಬೆಳೆದ ಮಗನನ್ನು ಕಳೆದುಕೊಂಡ ಮರ್ಯಾದಸ್ಥರ ತುಂಬಿದ ಕುಟುಂಬ ತತ್ತರಿಸಿ ಹೋಗಿತ್ತು.
ಲೈಂಗಿಕ ಸುಲಿಗೆ ಮಾಫೀಯಾ
ಹೌದು ಈಗ ಇಡೀ ದೇಶವೇ ಈ ಸೆಕ್ಸ್ ಟಾರ್ಶನ್ (ಲೈಂಗಿಕ ಸುಲಿಗೆ) ಮಾಫಿಯಾ ಹಾವಳಿಯಿಂದ ತತ್ತರಿಸಿ ಹೋಗುತ್ತಿದೆ! ಇಂತಹ ನೂರಾರು ಪ್ರಕರಣಗಳು ದೇಶದಾದ್ಯಂತ, ರಾಜ್ಯಾದ್ಯಂತ ದಿನನಿತ್ಯವೂ ಸದ್ದಿಲ್ಲದೆ ಜರುಗುತ್ತಿವೆ. ಆದರೆ ಮಾನ ಮರ್ಯಾದೆಗೆ ಬೆದರಿ ಬೆಳಕಿಗೆ ಬರುತ್ತಿಲ್ಲ! ಕೆಲವರು ಮಾತ್ರ ಇತ್ತೀಚೆಗೆ ಧೌರ್ಯವಾಗಿ ವಂಚನೆಯ ವಿರುದ್ಧ ದೂರು ಕೊಡಲು ಮುಂದೆ ಬರುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿ-೧೮ರಂದು ಹುಬ್ಬಳ್ಳಿಯ ಮಾಜಿ ಶಾಸಕರ ಮಗನೊಬ್ಬನಿಗೆ ಇದೇ ರೀತಿ ಇದ್ದಕ್ಕಿದ್ದಂತೆ ಅಶ್ಲೀಲ ವೀಡಿಯೋ ಕಾಲ್ ಮಾಡಿದ ನಂತರ ಸ್ಕ್ರೀನ್ ಸೇವ್ ಮಾಡಿಕೊಂಡು, ಶಾಸಕರ ಮಗನ ಮುಖವನ್ನು ಮಾರ್ಫಿಂಗ್ ಮಾಡಿ ಆತನಿಗೆ ವಾಪಸ್ಸು ವೀಡಿಯೋ ಕಳುಹಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಮರ್ಯಾದೆ ತೆಗೆಯುವುದಾಗಿ ಸೆಕ್ಸ್ ಟ್ರಾಪ್ ಗ್ಯಾಂಗ್ ಬ್ಲಾಕ್ ಮೇಲ್ ಮಾಡಿ ೧೩ಸಾವಿರ ರೂಪಾಯಿ ಫೋನ್ ಫೇ ಮಾಡಿಸಿಕೊಂಡಿತ್ತು. ಮತ್ತೆ ಮತ್ತೆ ಲೈಂಗಿಕ ಸುಲಿಗೆಯ ಸೈಬರ್ ಚೀಟರ್ಸ್ ಹುಬ್ಬಳ್ಳಿ ಶಾಸಕರ ಪುತ್ರನಿಗೆ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಆತ ಹೆದರಿ ತನ್ನ ತಂದೆಯ ಮೂಲಕ ಸೈಬರ್ ಠಾಣೆಗೆ ದೂರು ನೀಡಿ ಹಣ ಕೇಳಿ ಕರೆ ಬರುತ್ತಿದ್ದ ಆ ನಂಬರ್ ಬ್ಲಾಕ್ ಮಾಡಿ ನಿಟ್ಟುಸಿರಾಗಿದ್ದ. ’ಬೇರೆಯವರಾಗಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು! ಸಾರ್ವಜನಿಕರು ಸಾಧ್ಯವಾದಷ್ಟು ಹುಸಾರಾಗಿರಿ!” ಎಂದು ಆ ವಿದ್ಯಾರ್ಥಿ ಹೇಳಿಕೆ ನೀಡಿ ಜನರನ್ನು ಎಚ್ಚರಿಸಿದ್ದ. ಇತ್ತೀಚೆಗೆ ಹಣವಂತರ ಜೊತೆಗೆ ಅಮಾಯಕರು ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಹನಿ ಟ್ರಾಪ್ ಎಂಬುದು ಪಕ್ಕಾ ಈಸೀ ಮನೀಟ್ರಾಫ್ ದಂಧೆ! ಅತಿ ಸುಲಭವಾಗಿ-ವೇಗವಾಗಿ ಹಣಮಾಡಲು ಸೈಬರ್ ವಂಚಕರು ಕಂಡುಕೊಂಡಿರುವ ಹೊಸ ತಂತ್ರ. ಇದೀಗ ಎಲ್ಲಾ ಕಡೆ ಚಾಲ್ತಿಯಲ್ಲಿದೆ! ಕರ್ನಾಟಕದಲ್ಲಿಯೂ ಹುಡುಗಿಯರನ್ನಿಟ್ಟುಕೊಂಡು ಈ ಲೈಂಗಿಕ ಸುಲಿಗೆಯ ದಂಧೆ ಕೋರರ ಮಾಫಿಯಾ ಜಾಲ ಕಾರ್ಯಾಚರಣೆ ಗಿಳಿದಿದೆ ಎನ್ನಲಾಗುತ್ತಿದೆ! ಸಾಮಾಜಿಕ ಜಾಲತಾಣದಲ್ಲಿ ಮುಳುಗೇಳುತ್ತಿರುವ, ತರಾವರಿ ತಾಣಗಳಲ್ಲೇ ತಳವೂರಿ ತಪ್ಪುದಾರಿ ಹಿಡಿಯುತ್ತಿರುವ ಬಳಕೆದಾರರು ಕ್ಷಣಿಕ ಸುಖದ ಆಸೆಗೆ ಬಿದ್ದು ಪ್ರಚೋದನೆಗೆ-ಆಮಿಷಗಳಿಗೆ ಒಳಗಾಗಿ, ತಮ್ಮ ಬಟ್ಟೆ ಬಿಚ್ಚಿ ಮೈಮರೆತು ಅಪರಿಚಿತರೊಡನೆ ವೀಡಿಯೋ ಚಾಟಿಂಗ್ ಮಾಡುವುದನ್ನು ದಯಮಾಡಿ ನಿಲ್ಲಿಸಬೇಕೆಂದು ಪೊಲೀಸ್ ಅಧಿಕಾರಿಗಳು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಸೆಕ್ಸ್ ಟಾರ್ಶನ್ ಮಾಫಿಯಾ ಜಾಲ
ಈ ಹಿಂದೆಯೂ ಇದೇ ರೀತಿ ಬೆತ್ತಲೆ ವೀಡಿಯೋ ಚಿತ್ರೀಕರಿಸಿಕೊಂಡು ರಾಜ್ಯದ ಜನರನ್ನು ವಂಚಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ವಿಶ್ವದ ಮೊದಲ ಅತ್ಯಾಧುನಿಕ ಸೆಕ್ಸ್ ಟಾರ್ಶನ್ ಮಾಫಿಯಾ ಜಾಲ ಫಿಲಿಪ್ಪೀನ್ಸ್ ನಗರದಿಂದಲೇ ಕಾರ್ಯಾಚರಣೆ ನಡೆಸುತ್ತಿತ್ತು. ಈ ಲೈಂಗಿಕ ಸುಲಿಗೆಯಂತಹ ವಂಚನೆಗಳ ಮೂಲ ವಿದೇಶಿ ಮೆದುಳುಗಳಿಂದಲೇ ಬಂದಿರುವುದು. ಆದರೆ ಈಗ ಕಾರ್ಯಾಚರಣೆಗಿಳಿದಿರುವುದು ಪಕ್ಕಾ ದೇಸೀ ಗ್ಯಾಂಗ್ ಗಳು!
ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಬೆತ್ತಲೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆಗಿಳಿದಿರುವ ರಾಜಸ್ಥಾನ, ಒರಿಸ್ಸಾ, ಉತ್ತರ ಪ್ರದೇಶ, ಮದ್ಯ ಪ್ರದೇಶ,ಹರಿಯಾಣದ ಮೇವಾಠ್,ಭಾರತ್ ಪುರ, ಅಲ್ವಾರ್ ಪಟ್ಟಣಗಳ ಗ್ಯಾಂಗುಗಳ ಮೇಲೆ ರಾಜ್ಯದ ವಿವಿದೆಡೆ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿಯೂ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಅರ್ಧಕ್ಕೇ ವಿಧ್ಯಾಭ್ಯಾಸ ನಿಲ್ಲಿಸಿದ ಡ್ರಾಪೌಟ್ ಸ್ಟೂಡೆಂಟ್ ಗಳು, ಕುತಂತ್ರ ಬುದ್ದಿಯ ಖತರ್ನಾಕ್ ಕ್ರಿಮಿನಲ್ ಸೈಬರ್ ಹ್ಯಾಕರ್ಸ್ ಗಳು ಮಾಸ್ಟರ್ ಮೈಂಡ್ ಗಳಂತೆ ಈ ಸೆಕ್ಸ್ ಟಾರ್ಶನ್ ಮಾಫಿಯಾ ಜಾಲವನ್ನು ನಿಭಾಯಿಸುತ್ತಿದ್ದಾರೆ! ೧೦ರಿಂದ ೨೦ ಜನರ ತಂಡ ಕಟ್ಟಿಕೊಂಡು ಲೈಂಗಿಕ ಸುಲಿಗೆಯ ಜಾಲದ ಮಾಫಿಯಾ ನಡೆಸುತ್ತಿರುವ ಸೈಬರ್ ವಂಚಕರು ಮುಂದೊಂದು ದಿನ ಇಡೀ ದೇಶಕ್ಕೆ ತಲೆನೋವಾಗಿ ಪರಿಣಮಿಸುವ ಕಾಲ ದೂರವಿಲ್ಲ. ಹಲವಾರು ದೇಶಗಳಿಗೂ ವ್ಯಾಪಿಸಿರುವ ಇವರ ಸೆಕ್ಸ್ ಟ್ರಾಪ್ ಸುಲಿಗೆ ಸಂಚುಗಳಿಗೆ ಪ್ರಪಂಚದಾದ್ಯಂತ ಸಾವಿರಾರು ಜನರು ಪ್ರಾಣತೆತ್ತಿದ್ದಾರಂತೇ!
ರಾಜಕಾರಣಿಗಳಲ್ಲದೇ ಪೊಲೀಸರನ್ನೂ ಇವರು ತಮ್ಮ ಬಲೆಗೆ ಬೀಳಿಸಿಕೊಂಡು ಬ್ಲಾಕ್ ಮೇಲ್ ಮಾಡಿ ಬಲಿಹಾಕಿದ್ದಾರಂತೇ! ಭಾರತದೇಶದಲ್ಲಿಯೇ ದಿನವೊಂದಕ್ಕೆ ಸಾವಿರಾರು ಲೈಂಗಿಕ ಸುಲಿಗೆಯ ಪ್ರಕರಣಗಳು ದಾಖಲಾಗುತ್ತಿವೆಯೆಂದರೆ ಇವರ ವಾರ್ಷಿಕ ಆದಾಯ ಎಷ್ಟು ಕೋಟಿ ಇರಬಹುದು ಎಂದು ನೀವೇ ಊಹಿಸಿಕೊಳ್ಳಿ. ಜನಸಂಖ್ಯಾ ಲೆಕ್ಕದಲ್ಲಿ ಭಾರತವನ್ನು ಸೆಕ್ಸ್ ಟಾರ್ಶನ್ ಮಾಫಿಯಾ ಟಾರ್ಗೆಟ್ ಮಾಡಿಕೊಂಡು ಸುಲಿಗೆಗಿಳಿದಿದೆ! ಜನರು ಅಪರಿಚಿತರಿಂದ ಬರುವ ವೀಡಿಯೋ ಕಾಲ್ ಗಳನ್ನು ತೆಗೆಯದಿರುವುದು ಉತ್ತಮವೆಂದು ಪೊಲೀಸರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಹಾಗೆಯೇ ಅಪರಿಚಿತ ಯುವತಿಯರ ಫೊಟೋ ಗಳಿರುವ ನಕಲೀ ಫೇಸ್ಬುಕ್ ಖಾತೆಗಳಿಂದ ಬರುವ ಪ್ರೆಂಡ್ಸ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿ ಬಚಾವಾಗುವಂತೆ ಮನವಿ ಮಾಡುತ್ತಿದ್ದಾರೆ! ಇಲ್ಲದಿದ್ದರೆ ಈ ಸೆಕ್ಸ್ ಪ್ರಾಪರ್ ಗಳು ತಮ್ಮ ವಂಚನೆಯ ಚಾಳಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನಾವೇ ಲೈಂಗಿಕ ಸುಲಿಗೆಕೋರರಿಗೆ ವೀಳ್ಯ ಕೊಟ್ಟಂತಾಗುತ್ತದೆ.
ವಯಸ್ಸಿನ ಅಂತರವಿಲ್ಲದೆ ಎಲ್ಲಾ ವಯೋಮಾನದವರೂ ಈ ಸೆಕ್ಸ್ ಟ್ರಾಪ್ ಮಾಫಿಯಾಕ್ಕೆ ಬಲಿಯಾಗುತ್ತಿರುವುದು ಕಾಣುತ್ತಿದೆ. ಎಲ್ಲಿ ತಮ್ಮ ಬೆತ್ತಲೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿ ಜಗತ್ತಿನೆದುರು ನಮ್ಮ ಮಾನ ಹರಾಜಾಗಿ ಆತ್ಮಹತ್ಯೆ ಮಾಡಿ ಕೊಳ್ಳಬೇಕಾಗುತ್ತದೆಯೋ ಎಂದು ಹೆದರಿ ಹಲವಾರು ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ನೆಲಮಂಗಲದ ೫೪ವರ್ಷ ವಯಸ್ಸಿನ ಮುದುಕನೊಬ್ಬ ಈ ಬೆತ್ತಲೆ ಗ್ಯಾಂಗ್ ನ ವಂಚಕರ ವೀಡಿಯೋ ಕಾಲ್ ಗೆ ಬಲಿಯಾಗಿ-ಬೆತ್ತಲಾಗಿ ಹಣ ಕಳೆದುಕೊಂಡು ಪದೇ ಪದೇ ಬ್ಲಾಕ್ ಮೇಲ್ ಗೊಳಗಾಗಿ ಕೊನೆಗೆ ಮನನೊಂದು ಸಿ.ಐ.ಡಿ.ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದ, ಇದನ್ನೇ ಗಂಭೀರವಾಗಿ ಪರಿಗಣಿಸಿದ್ದ ಸಿ.ಐ.ಡಿ.ಸೈಬರ್ ಎಸ್ಪಿ .ಎಂ.ಡಿ.ಶರತ್ ರವರು ತಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇನ್ಸ್ಪೆಕ್ಟರ್ ನಯಾಜ್ ಅಹಮದ್ ತಂಡ ಹಗಲು ರಾತ್ರಿ ಕಷ್ಟಪಟ್ಟು, ದೂರದ ರಾಜ್ಯ ರಾಜಸ್ಥಾನದ ಹಳ್ಳಿಗಳಲ್ಲಿ ಅಲೆದು-ಊಟ ನಿದ್ರೆ ತೊರೆದು ಸಾಹುನ್, ಶಾರುಖ್ ಖಾನ್, ನಾಸಿರ್, ನಹೀದ್ ಅನ್ವರ್, ಎಂಬ ಬೆತ್ತಲೆ ಗ್ಯಾಂಗಿನ ನಾಲ್ವರು ಪ್ರಮುಖ ಸದಸ್ಯರನ್ನು ಎಳೆದು ತಂದು ಪರಪ್ಪನ ಅಗ್ರಹಾರ ಬಂದೀಖಾನೆಗಟ್ಟಿದ್ದರು.
ಜನರ ಸೈಕಾಲಜಿಯೊಂದಿಗೆ ಸಲ್ಲಾಪಕ್ಕಿಳಿದು ’ಆನ್ಲೈನ್ ಹನೀ ಟ್ರಾಪ್’ ನಡೆಸಿ ಕುಂತಲ್ಲೇ ಕಾಸು ಮಾಡುವ ಸ್ಕೀಮು ಇದು. ಪ್ರಪಂಚದ ಪ್ರತಿಷ್ಠಿತ ವ್ಯಕ್ತಿಗಳು, ಪತ್ರಕರ್ತರು, ರಾಜಕಾರಣಿಗಳು ಸಿನಿಮಾ ರಂಗದವರು ಈ ಲೈಂಗಿಕ ಸುಲಿಗೆಯ ಮಾಫಿಯಾಕ್ಕೆ ಸಿಕ್ಕು ಬಲಿಪಶು ಗಳಾಗಿದ್ದಾರೆ. ಈ ಬ್ಲಾಕ್ ಮೇಲಿಂಗ್ ಬಿಸಿನೆಸ್ ನ ಬೆಲೆಗೆ ಮುಂಬೈನ ಶಿವಸೇನೆಯ ಶಾಸಕರೊಬ್ಬರು ಬಲಿಯಾಗಿದ್ದರು! ಆಡಳಿತಾರೂಢ ಶಾಸಕರನ್ನು ಬಲೆಗೆ ಕೆಡವಲು ಕೃತಕ ಬುದ್ದಿ ಮತ್ತೆ (ಡೀಪ್ ಫೇಕ್) ತಂತ್ರಜ್ಞಾನ ಬಳಸಿದ್ದ ರಾಜಸ್ಥಾನದ ಖತರ್ನಾಕ್ ಸೆಕ್ಸ್ ಟ್ರಾಪರ್ ಮಹಮದ್ ಖಾನ್ ೩೦೦ ಜನರನ್ನು ಲೈಂಗಿಕ ಸುಲಿಗೆ ಹೆಸರಲ್ಲಿ ಶೋಷಿಸಿ ೨೦ ಲಕ್ಷಕ್ಕೂ ಹೆಚ್ಚಿನ ಹಣಮಾಡಿದ್ದನಂತೇ! ರಾಜಸ್ಥಾನದ ಸಚಿವರು, ಬಿಜೆಪಿ ಸಂಸದರನ್ನೂ ಬಿಡದೆ ಕಾಡಿದ್ದ ರಾಜಸ್ಥಾನದ ಸೈಬರ್ ವಂಚಕರಾದ ವಾರಿಸ್ ಖಾನ್, ರವಿನ್ ಖಾನ್ ತಮ್ಮ ಬಳಿ ಕೆಲವರ ಅಶ್ಲೀಲ ಸಿಡಿಗಳಿವೆಯೆಂದು ಹೇಳಿಕೆ ನೀಡಿ ಭಾರತೀಯ ರಾಜಕೀಯ ನಾಯಕರಲ್ಲಿ ನಡುಕ ಹುಟ್ಟಿಸಿದ್ದ! ಗುಜರಾತಿನ ಕ್ಯಾಬಿನೆಟ್ ಸಚಿವರೊಂದಿಗೆ ಹುಡುಗಿಯ ಹೆಸರಲ್ಲಿ ಅಶ್ಲೀಲ ಚಾಟಿಂಗ್ ನಡೆಸಿ ಬಟ್ಟೆ ಬಿಚ್ಚಿಸಿ ವೀಡಿಯೋ ಮಾಡಿಕೊಂಡಿದ್ದ ಹಕೀಮುದ್ದೀನ್ ಎಂಬ ಮತ್ತೊಬ್ಬ ಸೆಕ್ಸ್ ಟಾರ್ಶನ್ ಮಾಫಿಯಾದ ಸುಲಿಗೆಕೋರನನ್ನು ನೆನೆಸಿಕೊಂಡು ಭಾರತದ ಕೆಲವು ರಾಜಕಾರಣಿಗಳು ನೀರುಕುಡಿಯುತ್ತಾರಂತೇ! ಸಚಿವರಿಗೆ ಮಾಡಿದ್ದ ಒಂದೇ ಕಾಲ್ ನಲ್ಲಿ ಮೂರು ಲಕ್ಷ ಬ್ಲಾಕ್ ಮೇಲ್ ಮಾಡಿಕೊಂಡಿದ್ದ ಸೈಬರ್ ಸುಲಿಗೆ ಕೋರ ಈ ಹಕೀಮುದ್ದೀನ್. ಇವೆಲ್ಲಾ ಭಾರತದಲ್ಲಿ ಇತ್ತೀಚೆಗೆ ಜರುಗುತ್ತಿರುವ ಲೈಂಗಿಕ ಸುಲಿಗೆಯ ಸ್ಯಾಂಪಲ್ ಗಳಷ್ಟೇ. ಈ ದುರುದ್ದೇಶ ಪೂರಿತ ಆನ್ ಲೈನ್ ಸೈಬರ್ ಅಪರಾಧಕ್ಕೆ ಈಗ ದೇಶದ ಜನ ತತ್ತರಿಸಿ ತರಗುಟ್ಟುತ್ತಿರುವುದು ನಿಜ. ಸಹಜ ಲೈಂಗಿಕತೆ ಬಗ್ಗೆ, ನೈತಿಕ ಮೌಲ್ಯ ಗಳ ಬಗ್ಗೆ, ಸರಿಯಾದ ಶಿಕ್ಷಣ-ತಿಳುವಳಿಕೆಯ ಕೊರತೆ ಇರುವುದರಿಂದ, ಭಾರತೀಯ ಸಮಾಜದಲ್ಲಿ ಇರುವ ಲೈಂಗಿಕತೆಯನ್ನು ನೋಡುವ ರೀತಿ, ಅದರ ಕಟ್ಟುಪಾಡು ನೀತಿಗಳಿಂದ,ಗೊಂದಲಗಳಿಂದ, ಲೈಂಗಿಕ ಸುಲಿಗೆ ಕೋರರಿಗೆ ವಂಚಿಸಲು ಸುಲಭ ಸಾಧ್ಯವಾಗುತ್ತಿದೆ. ೭೦ ಕೋಟಿಗೂ ಹೆಚ್ಚಿರುವ ಮೊಬೈಲ್ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಸೆಕ್ಸ್ ಟಾರ್ಶನ್ ಮಾಫಿಯಾಕ್ಕೆ ವರದಾನವಾಗಿದೆ. ಸರಿಯಾಗಿ ಮೊಬೈಲ್ ಫೋನ್ ಬಳಸಲು ಬಾರದ ಅಮಾಯಕರು ಸ್ಕ್ರೀನ್ ರೆಕಾರ್ಡಿಂಗ್ ಅಪ್ಲಿಕೇಶನ್ಗಳನ್ನು ಗೊತ್ತಿಲ್ಲದೆ ಡೌನ್ಲೋಡ್ ಮಾಡಿಕೊಂಡು, ಹ್ಯಾಕರ್ಸ್ ಗಳ ತಂತ್ರ ಗಳಿಗೆ ಬಲಿಯಾಗಿ ನೇಕೆಡ್ ವೀಡಿಯೋ ಚಿತ್ರೀಕರಣಕ್ಕೆ ಒಳಗಾಗಿ ಎಷ್ಟೋ ಬಾರಿ ಬ್ಲಾಕ್ ಮೇಲ್ ಬಲಿಪಶುಗಳಾಗಿದ್ದಾರೆ! ಫೋಟೋ ಮಾರ್ಫಿಂಗ್, ಡೀಪ್-ನ್ಯೂಡ್ ಟೆಕ್ನಾಲಜಿ, ಢೀಪ್-ಫೇಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಆನ್ ಲೈನ್ ಸೆಕ್ಸ್ ಚಾಟ್ ವೀಡಿಯೋ-ಫೋಟೋ ಸ್ರಷ್ಠಿಸಬಹುದೆನ್ನುವುದು ಎಷ್ಟೋ ಜನರಿಗೆ ಇನ್ನೂ ತಿಳಿದೇ ಇಲ್ಲ! ಅಸಲೀ ವೀಡಿಯೋ ಗಳಂತೆಯೆ ಕಾಣುವ ಇಂತಹ ಅತ್ಯಾಧುನಿಕ ತಂತ್ರಜ್ಞಾನ ಮಾರ್ಫಿಂಗ್ ವೀಡಿಯೋ ಗಳನ್ನಿಟ್ಟುಕೊಂಡೆ ಈಗ ಸೆಕ್ಸ್ ಟಾರ್ಶನ್ ಮಾಫಿಯಾ ಕಾರ್ಯಾಚರಣೆ ನಡೆಸುತ್ತಿದೆ! ಆದಕಾರಣದಿಂದ ಸುರಕ್ಷಿತ ಆನ್ ಲೈನ್ ಬಳಕೆ ನಮ್ಮ ಆದ್ಯತೆ ಆಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರಿಂದ ಬರುವ ವೀಡಿಯೋ ಕಾಲ್ ಗಳಿಗೆ ಉತ್ತರಿಸದೇ ಇರುವುದು ಕ್ಷೇಮ. ನಮ್ಮ ಹೆಚ್ಚಿನ ವೀಡಿಯೋ- ಫೋಟೋ ಗಹನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರುವುದೇ ಉತ್ತಮ. ಸೆಕ್ಸ್ ಟಾರ್ಶನ್ ಕಿರುಕುಳಕ್ಕೆ ಅಂಜದೆ ತಕ್ಷಣವೇ ಪೊಲೀಸರಿಗೆ ದೂರು ನೀಡುವುದು ನಮ್ಮ ಕರ್ತವ್ಯ. ಈಗ ಸದ್ದಿಲ್ಲದೆ ಸದ್ದುಮಾಡುತ್ತಿರುವ ಸೆಕ್ಸ್ ಟಾರ್ಶನ್ ಮಾಫಿಯಾ ಜಾಲದ ಬಗ್ಗೆ ಗಂಡುಮಕ್ಕಳಿಗೂ-ಹೆಣ್ಣು ಮಕ್ಕಳಿಗೂ ಸೂಕ್ತ ತಿಳಿವಳಿಕೆ ನೀಡುವ ಜವಾಬ್ದಾರಿ ನಮ್ಮದಾಗಿದೆ.