ಮೈಸೂರು,ಮಾ,೨೨:ಕರ್ನಾಟಕ ರತ್ನ ದಿ.ಪುನೀತ್ ರಾಜ್ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ೧೦೨ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪುನೀತ್ ರಾಜ್ಕುಮಾರ್ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಎಲ್ ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು. ಪುನೀತ್ ರಾಜ್ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡರು. ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ೪೬ ವರ್ಷಗಳ ಹಿಂದೆ ಮೈಸೂರು ವಿವಿ ನೀಡಿತ್ತು ಎಂಬುದು ಸ್ಮರಣೀಯ.
ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಹಾಗೂ ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಅದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಶ್ವಿನಿ ಪುನೀತ ರಾಜ್ಕುಮಾರ್, ”ಕುಟುಂಬ, ಗೆಳೆಯರು ಹಾಗೂ ಅವರ ಅಭಿಮಾನಿಗಳ ಪರವಾಗಿ ಪುನೀತ್ ರಾಜ್ಕುಮಾರ್ ಪರವಾಗಿ ಗೌರವ ಡಾಕ್ಟರೇಟ್ ಗೌರವ ಸ್ವೀಕರಿಸಿರುವುದು ಖುಷಿಯಾಗಿದೆ. ಈ ಗೌರವವನ್ನು ಪ್ರೀತಿಪೂರ್ವಕವಾಗಿ ನೀಡಿದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಪುನೀತ್ ರಾಜ್ಕುಮಾರ್ ಅಗಲಿಕೆಯ ಬಳಿಕ ಮಡದಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮೇಲೆ ಹಲವು ಜವಾಬ್ದಾರಿಗಳು ಹೆಗಲೇರಿವೆ. ಹಾಗಾಗಿಯೇ ಸಾಧ್ಯವಾದಷ್ಟು ಸ್ಥಿತಪ್ರಜ್ಞರಾಗಿ ಅಶ್ವಿನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಪುನೀತ್ ಅಗಲಿಕೆಯ ಬಳಿಕ ಪಿಆರ್ಕೆ ಆಡಿಯೋ ಹಾಗೂ ಪಿಆರ್ಕೆ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ಅಶ್ವಿನಿ ಹೊತ್ತುಕೊಂಡಿದ್ದಾರೆ. ಪುನೀತ್ ಕನಸುಗಳನ್ನು ಒಂದೊಂದಾಗಿ ನನಸು ಮಾಡುವ ನಿರ್ಧಾರ ತಳೆದಿದ್ದಾರೆ.