ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು ಪೆನುಗೊಂಡ
ಹಂಪೆಯನ್ನು ಅನೇಕ ವರ್ಷಗಳಿಂದ ನೋಡಿದ ನನಗೆ ವಿಜಯನಗರ ಸಾಮ್ರಾಜ್ಯದ ಇತರೆ ರಾಜಧಾನಿಗಳನ್ನು ನೋಡುವ, ಹಂಪೆಯ ಕಲ್ಲಿನ ರಥವನ್ನು ನೋಡಿದ ಮೇಲೆ ತಾಡಪತ್ರಿಯ ರಥವನ್ನು ನೋಡಲೇಬೇಕೆನ್ನುವ ತವಕ ತುಂಬಾ ಹಿಂದೆಯೇ ಇತ್ತು. ಆದರೆ ಅದು ಸಾಧ್ಯವಾದದ್ದು ಕಳೆದ ವಾರವಷ್ಟೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಗಳಾಗಿ ಆನೆಗೊಂದಿ, ಹಂಪೆಗಳಲ್ಲದೆ ಪೆನುಗೊಂಡ, ಚಂದ್ರಗಿರಿ, ವೆಲ್ಲೂರುಗಳೂ ಆಡಳಿತದ ರಾಜಧಾನಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಿವೆ. ಇದಕ್ಕೆ ಆಯಾ ಕಾಲಘಟ್ಟಗಳಲ್ಲಾದ ರಾಜಕೀಯ ಅಸ್ತಿರತೆ, ಸಂಘರ್ಷ, ಪ್ರತಿರೋಧ, ಸ್ಥಾನಪಲ್ಲಟಗಳೂ ಕಾರಣವೆನ್ನಿ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಬಹುಭಾಗವನ್ನು ಆಳಿದ ವಿಜಯನಗರ ಸಾಮ್ಯಾಜ್ಯವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಿರಂತರವಾಗಿ ರಾಜಧಾನಿಗಳನ್ನು ಸ್ಥಳಾಂತರ ಮಾಡುತ್ತಲೇ ಹೋದದ್ದು ಇತಿಹಾಸ. ವಿಜಯನಗರದ ಬಗೆಗೆ ತುಸು ಹೆಚ್ಚು ಕುತೂಹಲವಿರುವ ನನಗೆ ಇಂತಹ ರಾಜಧಾನಿಗಳು, ಅವುಗಳ ಭೌಗೋಳಿಕ ಸನ್ನಿವೇಶ, ಅವು ಅರಸರಿಗೆ ಒದಗಿಸಿದ ರಕ್ಷಣೆ, ಅವರು ಆಡಳಿತ ಮತ್ತು ಸಾಮ್ರಾಜ್ಯ ರಕ್ಷಣೆಗೆ ಅನುಸರಿಸಿ ಅಳವಡಿಸಿಕೊಂಡ ಮಾರ್ಗೋಪಾಯಗಳೇನು ಎಂಬಂತಹ ಸಂಗತಿಗಳನ್ನು ತಿಳಿಯುವ ಮತ್ತು ಸ್ಥಳ ನೋಡುವ ಕುತೂಹಲದಿಂದ ಪ್ರವಾಸ ಕೈಗೊಂಡೆನು. ಇಂತಹ ರಾಜಧಾನಿಗಳಲ್ಲಿ ಪೆನುಗೊಂಡವೂ ಒಂದು. ೧೫೬೫ರಲ್ಲಿ ಅಳಿಯ ರಾಮರಾಯನ ಸೇನೆ ರಕ್ಷಸಗಿ-ತಂಗಡಗಿ ಯುದ್ಧದಲ್ಲಿ ಸೋತು ರಾಜಧಾನಿಗೆ ಹಿಂತಿರುಗಿತು. ಅಲ್ಲದೆ ಭವ್ಯ ರಾಜಧಾನಿ ಹಂಪೆಯಲ್ಲಿ ತನ್ನ ರಕ್ಷಣೆ ಮಾಡಿಕೊಳ್ಳದೆ ಪೆನುಗೊಂಡೆಗೆ ಪಲಾಯನ ಮಾಡಿದ್ದುದು ವಿಜಯನಗರದ ಮಟ್ಟಿಗೆ ದುರಂತವೇ ಸರಿ. ಅಲ್ಲಿಯೇ ತಮ್ಮ ರಾಜ್ಯ ರಕ್ಷಣೆಗೆ ಅವಕಾಶವಿದ್ದರೂ, ಯಥೇಚ್ಚವಾದ ಸೇನಾಬಲವನ್ನು ಸಂಘಟಿಸಿ, ಮುನ್ನಡೆಸಿದ್ದರೆ ಜಗತ್ಪ್ರಸಿದ್ದಿಯಾಗಿದ್ದ ರಾಜಧಾನಿಯನ್ನು ಉಳಿಸಿಕೊಳ್ಳಬಹುದಿತ್ತು. ಅದೇ ರಾಜಧಾನಿ ಆಡಳಿತ ಕೇಂದ್ರವಾಗಿ ಮುನ್ನಡೆದಿದ್ದರೆ ವಿಜಯನಗರವೆಂಬ ಮಹಾಪಟ್ಟಣವು ಇಂದು ಹೇಗಿರುತ್ತಿತ್ತೆಂದು ಊಹಿಸಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಂತಹ ಘೋರ ಅಪರಾಧವನ್ನು ಅಂದಿನ ಅರಸರು ಕೈಗೊಳ್ಳಬಾರದಿತ್ತೆನಿಸುತ್ತದೆ. ಇರಲಿ ಅದು ಇತಿಹಾಸ. ಅಂದಿನ ನಿರ್ಧಾರದಿಂದ ವಿಜಯನಗರ, ವಿದ್ಯಾನಗರವೆಂಬ ಅಭಿದಾನದಿಂದ ಭವ್ಯವಾಗಿ ಮೆರೆದ ಹಂಪೆಯು ಭಗ್ನಗೊಂಡು ವಿನಾಶವಾಗಿ ಹಾಳು ಪಟ್ಟಣವಾಯಿತು. ಅಲ್ಲಿಯೇ ನೆಲಸಮವಾದ ಕಟ್ಟಡ, ದೇಗುಲ, ಜನವಸತಿ ಪ್ರದೇಶಗಳನ್ನು ನೋಡಿದರೆ ತಿರುಮಲ ವೆಂಕಟಾದ್ರಿಯರು ತೆಗೆದುಕೊಂಡ ದುಡುಕಿನ ನಿರ್ಧಾರವನ್ನು ಹೀಗಳೆಯಬೇಕೆನ್ನಿಸುತ್ತದೆ.
೧೫೬೫ರ ನಂತರ ರಕ್ಕಸಗಿ-ತಂಗಡಗಿ ಯುದ್ಧದಲ್ಲಿ ವಿಜಯನಗರವು ಷಾಹಿ ಸುಲ್ತಾನರಿಗೆ ಸೋತ ತಿರುಮಲ, ವೆಂಕಟಾದ್ರಿಯರು ರಾಜಧಾನಿಯನ್ನೇ ಬಿಟ್ಟು ತಮ್ಮ ಪರಿವಾರದೊಂದಿಗೆ ಓಡಿಹೋದರು. ಅವರು ಹೋದದ್ದು ಇಂದಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಗೊಂಡಕ್ಕೆ. ಪೆನುಗೊಂಡವು ಅನಂತಪುರದಿಂದ ೮೦ ಕಿ.ಮೀ. ದೂರದಲ್ಲಿರುವ ತಾಲೂಕು ಕೇಂದ್ರ. ಇದು ಚಾರಿತ್ರಿಕ ಸ್ಥಳ. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ೧೫೮೫ರವರೆಗೆ ಮೆರೆದ ಸ್ಥಳ. ಪೆನುಗೊಂಡವು ಇಂದಿಗೂ ಅನೇಕ ಚಾರಿತ್ರಿಕ ಸ್ಮಾರಕಾವಶೇಷಗಳನ್ನು ತನ್ನ ಮಡಿಲಲ್ಲಿ ಜತನದಿಂದ ಕಾಪಿಟ್ಟುಕೊಂಡಿದೆ. ಪೆನುಗೊಂಡವು ವಿಜಯನಗರ ಪೂರ್ವಕ್ಕೆ ಹೊಯ್ಸಳ ಮತ್ತಿತರ ಅರಸು ಮನೆತನದ ಪ್ರಮುಖ ಆಡಳಿತದ ಕೇಂದ್ರವಾಗಿದ್ದಿತು. ಇದಕ್ಕೆ ಇಲ್ಲಿನ ಪಾರ್ಶ್ವನಾಥ, ಅಜಿತನಾಥ ಜಿನಾಲಯ, ಮೊದಲಾದ ಅವಶೇಷಗಳು ಕಾರಣವಾಗಿವೆ. ೧೩೪೦ರಲ್ಲಿ ಹೊಯ್ಸಳ ಬಲ್ಲಾಳನ ಪತನಾನಂತರ ಒಂದನೇ ಬುಕ್ಕರಾಯ ತನ್ನ ಆಡಳಿತ ಕೇಂದ್ರವನ್ನು ಗುತ್ತಿಯಿಂದ ಪೆನುಗೊಂಡೆಗೆ ಸ್ಥಳಾಂತರಿಸಿದ್ದನು. ಇವನ ಕಾಲದಲ್ಲಿ ಶ್ರೀವೈಷ್ಣವರಿಗೂ, ಜೈನರಿಗೂ ಧಾರ್ಮಿಕ ಸಂಘರ್ಷ ನಡೆದದ್ದು, ಅದನ್ನು ಪಾರ್ಶ್ವ ರೀತಿಯಲ್ಲಿ ಪರಿಹರಿಸಿದ್ದು ಇತಿಹಾಸ. ಈ ಹೊತ್ತಿಗೇ ಪೆನುಗೊಂಡೆಯು ಜೈನಧರ್ಮೀಯರ ಬಹುದೊಡ್ಡ ನೆಲೆವೀಡಾಗಿದ್ದಿತು. ಇದು ಇಂದಿಗೂ ಜೀವಂತವಾಗಿದ್ದು, ಜೈನಧರ್ಮೀಯರ ಆರಾಧನಾ ನೆಲೆಯೂ ಆಗಿ ಮುಂದುವರಿದಿದೆ.
ಸಂಗಮ ಅರಸ ಬುಕ್ಕರಾಯನು ತನ್ನ ಮಗನಾದ ವಿರುಪಣ್ಣನನ್ನು ಪೆನುಗೊಂಡದ ಆಳ್ವಿಕೆಯನ್ನು ನೋಡಿಕೊಳ್ಳಲು ನಿಯಮಿಸಿದ್ದನು. ವಿರುಪಣ್ಣನು ಮಂತ್ರಿ ಅನಂತರಸ ಚಿಕ್ಕೊಡೆಯನ ನೆರವಿನಿಂದ ಕೋಟೆಯನ್ನು ಭದ್ರಪಡಿಸಿದ. ಸ್ಥಳದುರ್ಗವಾಗಿದ್ದ ಇಲ್ಲಿನ ಕೋಟೆಗೆ ಬೃಹತ್ ಬಂಡೆಗಲ್ಲುಗಳನ್ನು ಬಳಸಿ ಕಲ್ಲಿನ ಕೋಟೆಯಾಗಿಸಿದ ಕೀರ್ತಿ ಇವರೀರ್ವರಿಗೆ ಸಲ್ಲುತ್ತದೆ. ಅದು ಶಾಸನೋಕ್ತ ಸಂಗತಿ. ಪೆನುಗೊಂಡ ಕೋಟೆಯು ರಚನೆಯ ಹಿನ್ನೆಲೆಯಲ್ಲಿ ಹಂಪೆಯ ಕೋಟೆಯನ್ನೇ ಹೋಲುತ್ತದೆ. ಇದು ರಕ್ಷಣಾತ್ಮಕ ಕೋಟೆಯಾಗಿದ್ದು, ಮಹಾದ್ವಾರ, ಬುರುಜು, ಬತೇರಿ ಮತ್ತು ಕಂದಕಗಳನ್ನು ಆವರಿಸಿದೆ. ಈ ಕೋಟೆಗೆ ಉತ್ತರದಲ್ಲಿ ಎರಮಂಚಿ ಊರವಾಕಿಲಿ, ದಕ್ಷಿಣಕ್ಕೆ ಚೆರುವು ಊರವಾಕಿಲಿ, ಪಶ್ಚಿಮಕ್ಕೆ ಆಂಜನೇಯ ಊರವಾಕಿಲಿ ಅಥವಾ ರೊದ್ದ ಊರುವಾಕಿಲಿ ಎಂಬ ನಾಲ್ಕು ಪ್ರಮುಖ ಮಹಾದ್ವಾರಗಳಿವೆ. ಹಾಗೆಯೇ ಕೋಟೆಯಲ್ಲಿ ಗುಮ್ಮಟ, ಲಕ್ಷ್ಮಣ ಬುರುಜು ಮತ್ತು ರಾಮಬುರುಜುಗಳಿವೆ. ಪೆನುಗೊಂಡ ಎಂಬುದರ ಅರ್ಥ ದೊಡ್ಡ ಬೆಟ್ಟ. ಇದನ್ನು ಘನಗಿರಿ, ಘನಾದ್ರಿ ಎಂದೂ ಕರೆಯುತ್ತಾರೆ. ಇಲ್ಲಿನ ಕೋಟೆಯು ವಿಜಯನಗರ ಶೈಲಿಯಲ್ಲಿದ್ದು, ಬೆಟ್ಟದ ಮೇಲ್ಭಾಗ ಮತ್ತು ಕೋಟೆಯ ಒಳಭಾಗದಲ್ಲಿ ಅರಮನೆ, ಬಂಧಿಖಾನೆ, ವಿವಿಧ ಧರ್ಮಗಳಿಗೆ ಸಂಬಂಧಿಸಿದ ದೇವಾಲಯಗಳಿವೆ. ಹಾಗೆಯೇ ನಗರದ ಜನರಿಗೆ ಅಗತ್ಯವಾದ ನೀರನ್ನು ಒದಗಿಸುವ ಬಾವಿ-ಕೊಳ, ಕೆರೆಗಳಿದ್ದು, ಇದು ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಅತ್ಯಂತ ಸುಸಜ್ಜಿತ ರಾಜಧಾನಿ ನಗರವಾಗಿದ್ದಿತು.
ಪೆನುಗೊಂಡೆಯಲ್ಲಿ ಎಲ್ಲಿ ನೋಡಿದಡಲ್ಲಿ ದೇವಾಲಯಗಳದೇ ಕಾರುಬಾರು. ಅಲ್ಲಿ ನೂರಾರು ದೇವಾಲಯಗಳಿವೆ. ಅವುಗಳಲ್ಲಿ ಕೆಲವು ಹಂಪೆಯ ದೇವಾಲಯಗಳನ್ನೇ ಹೋಲುತ್ತವೆ. ಶ್ರೀರಾಮ ಮತ್ತು ಕಾಶಿವಿಶ್ವೇಶ್ವರ ದೇವಾಲಯಗಳು ಹಂಪೆಯ ವಿರೂಪಾಕ್ಷ, ಹಜಾರರಾಮಚಂದ್ರ ದೇವಾಲಯಗಳಂತೆಯೇ ಗೋಚರಿಸುತ್ತವೆ. ಇವು ಪೆನುಗೊಂಡೆಯ ಬೃಹತ್ತಾದ ಮತ್ತು ವಿಶಾಲವಾದ ದೇವಾಲಯಗಳಾಗಿವೆ. ಅವುಗಳ ಗೋಡೆಗಳಲ್ಲಿ ರಾಮಾಯಣ, ಭಾಗವತ ಮೊದಲಾದ ಕಥೆಗಳುಳ್ಳ ಉಬ್ಬುಶಿಲ್ಪಗಳು ಮೈದುಂಬಿಕೊಂಡಿವೆ.
ಪೆನುಗೊಂಡದ ಪ್ರಮುಖ ಮತ್ತು ಪ್ರಸಿದ್ಧ ಕಟ್ಟಡವೆಂದರೆ ಗಗನಮಹಲ್. ಇದು ಅಂದಿನ ಅರಸರ ಅರಮನೆ. ಇದನ್ನು ೧೫೭೫ರಲ್ಲಿ ಶ್ರೀರಂಗದೇವರಾಯ ನಿರ್ಮಿಸಿದನೆಂಬುದು ವಿದ್ವಾಂಸರ ಅಭಿಮತ. ಇದನ್ನು ನೋಡಿದರೆ ಹಂಪೆಯ ಕಮಲಮಹಲ್, ಆನೆಗೊಂದಿಯ ಗಗನ ಮಹಲ್, ಚಂದ್ರಗಿರಿಯ ರಾಜ ಮತ್ತು ರಾಣಿಮಹಲ್ಗಳನ್ನೆ ನೋಡಿದಂತಾಗುವುದು. ಇದು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿದ್ದು, ೨೦ ಕಮಾನುಗಳನ್ನು ಹೊಂದಿದ ವಿಶಾಲವಾದ ಹಜಾರ, ಮಹಡಿ ಹತ್ತಲು ಮೆಟ್ಟಿಲು ವ್ಯವಸ್ಥೆ ಹಾಗೂ ಎತ್ತರದ ಕಾವಲು ಗೋಪುರವುಳ್ಳ ಅರಮನೆಯಾಗಿದೆ. ಇದನ್ನು ಕಲ್ಲು, ಇಟ್ಟಿಗೆ, ಗಾರೆಗಳನ್ನು ಬಳಸಿ ಕಟ್ಟಿರುವರು.
ಅರಮನೆಯ ಮುಂಭಾಗ ಸ್ವಲ್ಪ ದೂರದಲ್ಲಿ ಕೃಷ್ಣದೇವರಾಯನು ತನ್ನ ಮಹಾಮಂತ್ರಿ ತಿಮ್ಮರಸನನ್ನು ಬಂಧಿಸಿಡಲಾಗಿದ್ದ ಬಂಧಿಖಾನೆ ಎಂದು ಹೇಳುವ ಕಟ್ಟಡವಿದೆ. ಇದೇ ಬಂಧಿಖಾನೆಯಲ್ಲಿ ಸದಾಶಿವರಾಯನನ್ನೂ ಬಂಧಿಸಿಡಲಾಗಿತ್ತೆಂದು ಹೇಳುತ್ತಾರೆ. ಆದರೆ ವಿದ್ವಾಂಸರು ಈ ಕಟ್ಟಡವನ್ನು ನಾಣ್ಯವನ್ನು ಮುದ್ರಿಸುತ್ತಿದ್ದ ಟಂಕಸಾಲೆಯೆಂದು ಗುರುತಿಸಿದ್ದಾರೆ. ಈ ಕಟ್ಟಡವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದು, ಪಶ್ಚಿಮಕ್ಕೆ ಚಿಕ್ಕ ಬಾಗಿಲಿದ್ದು, ಉಳಿದ ಮೂರು ದಿಕ್ಕುಗಳಲ್ಲಿ ಚಿಕ್ಕ ಕಿಟಕಿಗಳಿವೆ. ಇದರ ಮೇಲೆ ಶಿಖರವಿದ್ದು, ಹಂಪೆಯ ಕಮಲ ಮಹಲಿನ ರಚನೆಯನ್ನೇ ಹೋಲುವುದು. ಇದರ ಪಕ್ಕದಲ್ಲಿ ಸುಮಾರು ಹತ್ತು ಅಡಿಗಳೆತ್ತರದ ನೀರಿನ ತೊಟ್ಟಿಯಿದೆ. ಇದರ ವಿಶೇಷತೆಯೆಂದರೆ ಭೂಮಟ್ಟದಿಂದ ಮೇಲ್ಭಾಗದಲ್ಲಿರುವುದು. ಇದಕ್ಕೆ ನೀರನ್ನು ಹೇಗೆ ತುಂಬುತ್ತಿದ್ದರೆಂಬುದೇ ಆಶ್ಚರ್ಯವನ್ನು ಉಂಟುಮಾಡುತ್ತದೆ. ಇದರ ದಕ್ಷಿಣಕ್ಕೆ ಆರು ತಲಗಳುಳ್ಳ ರಾಜಗೋಪುರವಿದೆ. ಇದು ದೇವಾಲಯದ ಮಹಾದ್ವಾರ ಅಥವಾ ರಾಯಗೋಪುರ. ದೇವಾಲಯವೊಂದು ಇಲ್ಲಿ ಇದ್ದುದಕ್ಕೆ ಮೂಕಸಾಕ್ಷಿಯಾಗಿ ನಿಂತಂತಿದೆ.
ಗೋಪುರದ ಉತ್ತರಕ್ಕೆ ಬಸವನ ಬಾವಿ ಮತ್ತು ವಿಸ್ತಾರವಾದ ನಾಟ್ಯಶಾಲೆಗಳಿವೆ. ಬಸವನ ಬಾವಿಯು ಆಳವಾದ ಮೆಟ್ಟಿಲು ಬಾವಿಯಾಗಿದ್ದು, ಇದರ ಪ್ರವೇಶಕ್ಕೆ ನಂದಿಯ ದ್ವಾರವನ್ನು ಗಾರೆಗಚ್ಚಿನಲ್ಲಿ ನಿರ್ಮಿಸಿದ್ದಾರೆ. ಆದಕಾರಣ ಇದನ್ನು ಬಸವನ ಬಾವಿಯೆಂದೇ ಕರೆಯುವರು. ಇವು ವಿಜಯನಗರ ಅರಸರ ಪ್ರಮುಖ ರಚನೆಗಳಾಗಿವೆ. ಬಸವನ ಬಾವಿಯ ಪೂರ್ವಕ್ಕೆ ಅಜಿತನಾಥ ತೀರ್ಥಂಕರ ಜಿನಾಲಯವಿದ್ದು, ಇದು ಇಂದಿಗೂ ಜೈನರ ಪ್ರಮುಖ ಆರಾಧನಾ ಸ್ಥಳವಾಗಿರುವುದು ಗಮನಾರ್ಹ. ಈ ಕೋಟೆಯಲ್ಲಿ ವಿಜಯನಗರೋತ್ತರ ಕಾಲದ ಜಾಮೀ ಮಸೀದಿ, ಶೇರ್ಖಾನ್ ಮಸೀದಿ ಮತ್ತು ಬಾಬಯ್ಯನ ದರ್ಗಾಗಳಿವೆ. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಬಾಬಯ್ಯನ ಉರುಸ್ ಈ ಭಾಗದ ಪ್ರಮುಖ ಆಚರಣೆಯಾಗಿದೆ. ಪೆನುಗೊಂಡವು ಮುಂದೆ ಶಾಹಿ ಸುಲ್ತಾನರು, ಮರಾಠರು, ಮೈಸೂರು ಒಡೆಯರು ಹಾಗೂ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದಿತು.
ಪೆನುಗೊಂಡ ನಗರದಾದ್ಯಂತ ಅನೇಕ ೧೨ಕ್ಕೂ ಹೆಚ್ಚು ಬಾವಿಗಳು ಮತ್ತು ಕೆರೆಗಳಿವೆ. ಕಾಶಿ ವಿಶ್ವೇಶ್ವರ ದೇವಾಲಯದ ಬಳಿ ನಾಗರ ಬಾವಿಯಿದೆ. ಇದು ಕೂಡ ಸುಂದರವಾದ ಕಟ್ಟಡವನ್ನು ಹೊಂದಿದ್ದು, ಅಲ್ಲಲ್ಲಿ ಉಬ್ಬುಶಿಲ್ಪಗಳನ್ನೂ ಕಡೆದಿರುವರು. ಇದಲ್ಲದೆ ಪೆದ್ದನಾಗುಲ ಬಾವಿ, ಚಿನ್ನನಾಗುಲ ಬಾವಿ, ಪಸಿರವಕ್ಕೆರಿ ಮತ್ತು ಪಾಲವಕ್ಕೆರಿ ಬಾವಿಗಳು ಮುಖ್ಯವಾಗಿವೆ.
ಈ ಬಾವಿಗಳಿಗೆ ಕೋಟೆಯ ದಕ್ಷಿಣಕ್ಕಿರುವ ಭೋಗಸಮುದ್ರ ಕೆರಯಿಂದ ನೆಲದೊಳಗೆ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗಿದ್ದಿತು. ಇವುಗಳ ಹೆಚ್ಚುವರಿ ನೀರು ಕಂದಕಕ್ಕೆ ಹರಿಯುವಂತೆ ಮಾಡಲಾಗಿದ್ದಿತು. ಇದು ವಿಜಯನಗರ ಕಾಲದ ನೀರಾವರಿ ತಜ್ಞರ ತಂತ್ತಜ್ಞಾನಕ್ಕೆ ಹಿಡಿದ ಕೈಗನ್ನಡಿ. ಭೋಗಸಮುದ್ರ ಕೆರೆಯು ಕೋಟೆ ಪರಿಸರದ ಬಾವಿ-ಕೊಳಗಳಿಗೆ ಜಲಪೂರಣವೇ ಆಗಿದ್ದಿತು. ಇದನ್ನು ೧೩೮೮ರಲ್ಲಿ ದಶವಿದ್ಯಾ ಚಕ್ರವರ್ತಿ, ಜಲಸೂತ್ರಧಾರ ಸಿಂಗಾಲಭಟ್ಟನು ನಿರ್ಮಿಸಿದನೆಂದು, ಈ ಕೆರೆಗೆ ಪೆನ್ನಾ ನದಿಯಿಂದ ಕಾಲುವೆಯನ್ನು ತೋಡಿ ನೀರನ್ನು ತುಂಬಿಸಿದನೆಂದೂ ಹೇಳಲಾಗಿದೆ. ಕೋಟೆ ಪರಿಸರದಲ್ಲಿ ಇನ್ನೊಂದು ಕೆರೆಯಿದ್ದು ಅದನ್ನು ತಿರುವೆಂಗಳನಾಥನ ಕೆರೆಯೆಂದು ಕರೆಯುವರು. ಒಟ್ಟಿನಲ್ಲಿ ವಿಜಯನಗರದ ಅರಸರು ಪೆನುಗೊಂಡ ಪಟ್ಟಣಕ್ಕೆ ವರ್ಷಪೂರ್ತಿ ನೀರನ್ನು ಒದಗಿಸುವ ಕೆರೆ,ಬಾವಿ, ಕೊಳಗಳನ್ನು ನಿರ್ಮಿಸಿಕೊಂಡಿದ್ದುದು ಗಮನಾರ್ಹ ಸಂಗತಿ.