ಮಲ್ಲಣ್ಣನ ಏಕಾಂಗಿ ಹೋರಾಟದ ಸಾಧನೆಯ ಹಾದಿ..

Share

 

ಮಲ್ಲಣ್ಣ ನ ಏಕಾಂಗಿ ಹೋರಾಟದ ಸಾಧನೆಯ ಹಾದಿ…

 

ಅಂದು ಸೆಪ್ಟೆಂಬರ್ ತಿಂಗಳ ಒಂದು ಶನಿವಾರ, ಮುಂಜಾನೆಯ ಒಪ್ಪತ್ತಿನ ಶಾಲೆಗೆ ಆತುರಾತುರದಲ್ಲಿ ತಯಾರಾಗಿ ಮನೆ ಬಿಟ್ಟವನು, ಊರಿನ ಮುಖ್ಯರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದ ಮುಂದಿನಿಂದ ಸಾಗಿ, ಪೊಲೀಸ್ ಸ್ಟೇಷನ್ ಬಲಕ್ಕೆ ತಿರುಗಿ, ಊರ ಮುಖ್ಯರಸ್ತೆಯನ್ನು ಕುರುಬರ ಕೇರಿಗೆ ಜೋಡಿಸುತ್ತಿದ್ದ ವಿಶಾಲವಾದ ರಸ್ತೆಯಲ್ಲಿ ಮುನ್ನಡೆಯುತ್ತಾ, ರಸ್ತೆಯ ಬಲಬದಿಗೆ ಬರುತ್ತಿದ್ದ ಭದ್ರಪ್ಪಶೆಟ್ಟಿಯವರ ಅಂಗಡಿಯನ್ನು ದಾಟಿ, ಪಕ್ಕದಲ್ಲಿಯೇ ಇದ್ದ ಕುಂಬಾರ ಏಕಾಂತಮ್ಮನ ಹೋಟೆಲ್ ಸಮೀಪಿಸಲು,
ಹೆಗಲಿಗೆ ನೇತು ಹಾಕಿದ ಸ್ಕೂಲ್ ಬ್ಯಾಗ್ ನೊಂದಿಗೆ ಹೊಟೇಲಿನ ಮುಂಬಾಗದ ಕಟ್ಟೆಯ ಮೇಲೇ ನಿಂತು ನನ್ನ ಬರುವನ್ನು ಜಾತಕಪಕ್ಷಿಯಂತೆ ಕಾಯುತ್ತಿದ್ದ, ಹೋಟೆಲ್ ಮಾಲಕಿ ಏಕಾಂತಮ್ಮನ ಏಕೈಕ ಪುತ್ರ ಗೆಳೆಯ ಮಂಜುನಾಥನೊಟ್ಟಿಗೆ, ರಸ್ತೆಯನ್ನು ಇಳಿಯುತ್ತಾ, ಮುಂದೆ ಬಂದ ಮೊದಲನೇ ಎಡತಿರುವಿನಲ್ಲಿ ಒಳನುಗ್ಗಿ, ಮತ್ತೋರ್ವ ಸ್ನೇಹಿತ ಕುರುಬರ ಉಜ್ಜಯನಿ ರೇವಣ್ಣನ ಮಗ ಕಾಂತರಾಜ್ ಮನೆಯ ಮುಂದೆ ಬಂದು ನಿಂತೆ.

 

ವಾಡಿಕೆಯಂತೆ ಇಲ್ಲಿಂದ ಗೆಳೆಯ ಕಾಂತರಾಜ್ ಜೊತೆಗೆ ಅವನ ಮನೆ ಹಿಂಬಾಗದಲ್ಲಿದ್ದ ಆತನ ಸೋದರ ಸಂಬಂಧಿ ತಿಪ್ಪೇಸ್ವಾಮಿ ಹಾಗೂ ಎದುರು ಮನೆಯಲ್ಲಿದ್ದ ಮತ್ತೋರ್ವ ಸಹಪಾಠಿ ರಾಮಾಂಜನೇಯನನ್ನೂ ಕೂಡಿಕೊಂಡು, ಮಹಾಭಾರತದ ಪಂಚಪಾಂಡವರ ಶೈಲಿಯಲ್ಲಿ ಶಾಲೆಯ ಕುರುಕ್ಷೇತ್ರವೆಂಬ ವಿದ್ಯಾರಂಗಣಕ್ಕೆ ಭರ್ಜರಿ ಪ್ರವೇಶವನ್ನು ಮಾಡುವುದು ನನ್ನ ಮಾಧ್ಯಮಿಕ ಶಾಲೆಯ ಮೂರು ವರ್ಷಗಳ ದಿನಚರಿಯಾಗಿತ್ತು. ಆದರೆ ಇಂದು ಕಾಂತರಾಜ್ ಮನೆಯ ಸುತ್ತಮುತ್ತಲ ವಾತಾವರಣ ಪ್ರತಿನಿತ್ಯದ ಹಾಗೆ ತೋರಿಬರದೆ, ಅಲ್ಲಿ ಸುಮಾರು ಮೂವತ್ತು ನಲ್ವತ್ತರಷ್ಟಿದ್ದ ಜನರ ದೊಡ್ಡ ಗುಂಪೊಂದು ಕಂಡುಬಂದಿತು.

ಕಾಂತರಾಜನನ್ನು ಕರೆಯಲು ಸೀದಾ ಅವನ ಮನೆಯ ಒಳಗೇ ನುಗ್ಗಿ, ಆ ವೇಳೆಗಾಗಲೇ ತನ್ನ ಕಂಬಳಿ ನೇಯುವ ಮಗ್ಗದ ಕುಣಿಯಲ್ಲಿ ಇಳಿದು ತನ್ನ ಕರ್ಮದಲ್ಲಿ ವ್ಯಸ್ತನಾಗಿರುತ್ತಿದ್ದ ಕಾಂತರಾಜ್ ಅಣ್ಣ, ನಮಗಿಂತಲೂ ವಯಸ್ಸಿನಲ್ಲಿ ಐದಾರು ವರ್ಷ ಹಿರಿಯನಾದ ಶಂಕರಪ್ಪನನ್ನು ನೋಡಿದರೆ, ನನಗೆ ಎಂತಹುದೋ ಸಮಾಧಾನ ಸಿಗುತ್ತಿತ್ತು. ಇಂದು ಮುಂಬಾಗಿಲಿನಲ್ಲಿದ್ದ ಜನಜಂಗುಳಿಯ ಕಾರಣದಿಂದ ಮನೆಯ ಒಳಗೆ ಹೋಗುವುದಿರಲಿ, ಮನೆಯ ಒಳಗೆ ಇಣುಕಿ ನೋಡಲೂ ಸಾಧ್ಯವಿಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದ್ದ ಕಾರಣ, ಗುಂಪಿನ ಹಿಂದೆಯೇ ನಿಂತು, ಗುಂಪಿನ ಗದ್ದಲದ ಹಿನ್ನೆಲೆಯನ್ನೂ ಮೀರುವಂತೆ, ಒಳಗಿರಬಹುದಾದ ಗೆಳೆಯನ ಕರ್ಣಪಟಲಗಳಿಗೆ ತಾಗುವ ಹಾಗೆ ಜೋರು ಧ್ವನಿಯಲ್ಲಿ “ಕಾಂತ, ಕಾಂತ” ಎಂದು ಕೂಗಲು ಮೊದಲಿಟ್ಟೆ. ಮೂರು ದಿನಗಳ ಹಿಂದೆ, ನನ್ನ ಮನೆಯ ಹತ್ತಿರವೇ ಇದ್ದ ಕಲ್ಲಪ್ಪನ ತೇರನ್ನು ನಿಲ್ಲಿಸಿದ್ದ ಕಟ್ಟಡದ ಮುಂದಿನ ಬಯಲಲ್ಲಿ, ಊರ ಯುವಕರು ಆಡಿದ “ಕೃಷ್ಣಾರ್ಜುನ” ನಾಟಕದಲ್ಲಿ ಸುಭದ್ರೆಯ ಪಾತ್ರಧಾರಿಯಾಗಿದ್ದ ಕುಂಬಾರ ರುದ್ರಣ್ಣ ಅರ್ಜುನನನ್ನು ಕುರಿತು ಮಾಡಿದ “ಕಾಂತ, ಕಾಂತ” ಎನ್ನುವ ಆಲಾಪವನ್ನು ಹೋಲುತ್ತಿದ್ದ ನನ್ನ ಈ ಕೂಗಿನಿಂದ ನನಗೇ ನಾಚಿಕೆಯಾಗಿ, ಕೂಗುವುದನ್ನು ನಿಲ್ಲಿಸಿ, ಕಾಂತನ ದಾರಿ ಕಾಯುತ್ತಾ ಅಲ್ಲಿಯೇ ನಿಂತಿದ್ದೆ. ಈ ವೇಳೆಗೆ ಸರಿಯಾಗಿ ಕಾಂತರಾಜ್ ಮನೆಯ ಹಿಂಭಾಗದಿಂದ ಸ್ನೇಹಿತ ತಿಪ್ಪೇಸ್ವಾಮಿ ನಿಧಾನವಾಗಿ ಮನೆಯ ಮುಂಭಾಗದಲ್ಲಿದ್ದ ನನ್ನ ಬಳಿ ಸಾರಿ, ನನ್ನ ರೆಟ್ಟೆಗಳನ್ನು ಬಲವಾಗಿ ಹಿಡಿದು, ಎಳೆಯುತ್ತಲೇ ಮನೆಯ ಮುಂದಿನ ರಸ್ತೆಯ ಮಧ್ಯಕ್ಕೆ ತಂದು ನಿಲ್ಲಿಸಿದ. ಶಾಲೆಗೆ ಬರಲು ತಯಾರಾದಂತೆ ತೋರದ ತಿಪ್ಪೇಸ್ವಾಮಿ ತಾನು ಹೆಗಲ ಮೇಲೆ ಹಾಕಿದ್ದ ಒಂದು ಉದ್ದವಾದ, ದೊಗಳೆ ಚೀಲದಿಂದ ಒಂದು ಕಾಗದದ ಪೊಟ್ಟಣವನ್ನು ನನಗೆ ತೆಗೆದುಕೊಟ್ಟು, “ಇದು ಲಾಡಿನ ಪಟ್ಟಣ, ನಿನಗಾಗಿ ಕಾಂತರಾಜ್ ಅಮ್ಮ ಕಳುಹಿಸಿದ್ದಾಳೆ, ಇವತ್ತು ಕಾಂತರಾಜ್ ಮತ್ತು ನಾನು ಶಾಲೆಗೆ ಬರುತ್ತಿಲ್ಲ, ಮನೆಯಲ್ಲಿ ತುಂಬಾ ಕೆಲಸವಿದೆ” ಎಂದು ಆತುರದಿಂದ ಪುನಃ ಕಾಂತರಾಜನ ಮನೆಯನ್ನು ಪ್ರವೇಶಿಸಲು ಮುಂದಾದ. ತಿಪ್ಪೇಸ್ವಾಮಿಯಿಂದ ಲಾಡಿನ ಪೊಟ್ಟಣವನ್ನು ತೆಗೆದುಕೊಂಡವನು, “ಯಾಕೆ? ಯಾವ ಕಾರಣಕ್ಕಾಗಿ ನೀನು ಮತ್ತು ಕಾಂತರಾಜ್ ಶಾಲೆಗೆ ಬರುತ್ತಿಲ್ಲ? ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಏಕೆ ಇಲ್ಲಿ ಸೇರಿದ್ದಾರೆ?” ಎನ್ನುವ ಪ್ರಶ್ನೆಗಳನ್ನು ಅವನಿಗೆ ಎಸೆದೆನಾದರೂ ನನ್ನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುವಷ್ಟು ವ್ಯವಧಾನ ಮತ್ತು ಸಮಯದ ಧಾರಾಳ ಅಭಾವ ತಿಪ್ಪೇಸ್ವಾಮಿಯ ಬಳಿ ಇದ್ದಂತೆ ತೋರಿತು. “ಕಾಂತರಾಜನ ಮನೆಯಲ್ಲಿ ಲಾಡಿನ ವ್ಯಾಪಾರ ನಡೆದಿದೆ, ಹಿಂಡುಹಿಂಡಾಗಿ ಬಂದು ಲಾಡನ್ನು ಕೇಜಿಗಳ ಲೆಕ್ಕದಲ್ಲಿ ಖರೀದಿಸಿ ಹೋಗುತ್ತಿರುವ ಊರ ಜನರ ಸಂಖ್ಯೆ ಬೆಳಗ್ಗಿನಿಂದ ಹಿಗ್ಗುತ್ತಲೇ ಇದೆ. ಶಂಕರಣ್ಣ, ಕಾಂತರಾಜ್, ನಾನು, ಕಾಂತರಾಜ್ ಅಪ್ಪ, ಅಮ್ಮ, ಅಕ್ಕ, ಮಾಮ ಮತ್ತು ತಂಗಿ ಎಲ್ಲರೂ ಸೇರಿ ಲಾಡನ್ನು ಮಾರಾಟ ಮಾಡುತ್ತಿದ್ದರೂ ಜನರ ಗುಂಪನ್ನು ನಿಭಾಯಿಸಲು ಕಷ್ಟವಾಗುತ್ತಿದೆ” ಎಂದಷ್ಟೇ ಉಸುರಿ ಜಾಗ ಖಾಲಿ ಮಾಡಿದ ತಿಪ್ಪೇಸ್ವಾಮಿ ಓಡುತ್ತಾ ಹೋಗಿ ಮನೆಯ ಪಕ್ಕದ ಬಾಗಿಲಿನಿಂದ ಕಾಂತರಾಜ್ ಮನೆ ಹೊಕ್ಕ. ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಜನಜಂಗುಳಿಯ ನಡುವೆ ಇನ್ನು ಇಲ್ಲಿ ನಿಂತು ಯಾವ ಪ್ರಯೋಜನವೂ ಇಲ್ಲ ಎಂದುಕೊಂಡವನು, ನಮಗಾಗಿ ತನ್ನ ಮನೆಯ ಜಗುಲಿ ಕಟ್ಟೆಯ ಮೇಲೆ ಸುಮಾರು ಹೊತ್ತಿನಿಂದ ಕಾಯುತ್ತಾ ಕುಳಿತಿದ್ದ ರಾಮಾಂಜನೇಯನೊಂದಿಗೆ, ತಾತ್ಕಾಲಿಕವಾಗಿ ನಿಂತಿದ್ದ ನಮ್ಮ ಶಾಲಾ ಪಯಣವನ್ನು ಮತ್ತೆ ಮುಂದುವರೆಸಿದೆವು.

ಮುಂದೆ ಸುಮಾರು ದೂರದವರೆಗೆ ಕಿರಿದಾದ, ಸುತ್ತಮುತ್ತಲ ಮನೆಗಳ ಬಚ್ಚಲುಕೋಣೆಗಳ ಕೊಳಕು ನೀರಿನ, ಬೆಳಗಿನ ಆ ಹೊತ್ತಿಗಾಗಲೆ ಮೈತುಂಬಿ ಹರಿಯುತ್ತಿದ್ದ, ಹಲವಾರು ಟಿಸಿಲುಗಳನ್ನು ಮೈಹೊದ್ದು ಮಲಗಿದ್ದ, ಓಣಿಗಳನ್ನು ದಾಟಿ, ಕುರುಬರಕೇರಿಯ ದೊಡ್ಡ ಹುಣಸೇಮರದ ಮಗ್ಗುಲಿನ ರಸ್ತೆಯನ್ನು ರೆಡ್ಡಿಯವರ ಕೇರಿಗೆ ಸೇರಿಸುವ ಅಗಲವಾದ ರಸ್ತೆಗೆ ಬಂದು ಸೇರಿದ ನಂತರ, ತಿಪ್ಪೇಸ್ವಾಮಿ ಕೊಟ್ಟ ಲಾಡಿನ ಪೊಟ್ಟಣವನ್ನು ಬಿಚ್ಚಿ, ನಾವು ನಾಲ್ಕು ಜನ ಗೆಳೆಯರು ಲಾಡನ್ನು ಸವಿಯಲು ಮುಂದಾದೆವು. ಧಾರಾಳವಾಗಿ ಒಣದ್ರಾಕ್ಷಿ, ಗೋಡಂಬಿ, ಲವಂಗಗಳ ಸಮೇತ, ಕೈಗೆ ಅಂಟಿ ಜಿಡ್ಡನ್ನು ಉಂಟುಮಾಡುವ ಮಟ್ಟಕ್ಕೆ ವನಸ್ಪತಿ ಎಣ್ಣೆಯನ್ನು ಯಥೇಚ್ಚವಾಗಿ ಬಳಸಿ ತಯಾರಿಸಿದ್ದ, ಘಮಘಮ ವಾಸನೆಯನ್ನು ಸುತ್ತಲೂ ಹರಡುತ್ತಿದ್ದ ಬೂಂದಿಲಾಡು, ಸ್ವಲ್ಪ ಹೆಚ್ಚೇ ಎನ್ನುವ ಮಟ್ಟಕ್ಕೆ ಸಿಹಿಯಾಗಿದ್ದಾರೂ, ತುಂಬಾ ರುಚಿಕಟ್ಟಾಗಿತ್ತು. ನಾನು ಪೊಟ್ಟಣ ಬಿಚ್ಚಿ, ಬಲಗೈಯಲ್ಲಿ ಹಿಡಿದ, ತೆರೆದ ವರ್ತಮಾನ ಪತ್ರಿಕೆಯ ಕಾಗದದ ಮೇಲಿಂದ , ತನ್ನ ಮುಂದಿನ ಮೂರು ತುದಿಬೆರಳುಗಳಿಗೆ ಎಟುಕುವಷ್ಟೆ ಮಾತ್ರದ ಹತ್ತೆಂಟು ಲಾಡಿನ ನ ಹೆಕ್ಕಿ ಬಾಯಿಗೆ ಹಾಕಿಕೊಂಡ ರಾಮಾಂಜನೇಯ, ತಾನು ಬೆಳ್ಳಂಬೆಳಿಗ್ಗೆಯೇ ಕಾಂತರಾಜ್ ಮನೆಗೆ ಹೋಗಿ ಎರಡು ಕೇಜಿಯಷ್ಟು ಲಾಡನ್ನು ಕೊಂಡು ತಂದಿರುವುದಾಗಿಯೂ, ಈಗಾಗಲೇ ಬೆಳಗಿನ ತಿಂಡಿಯ ರೂಪದಲ್ಲಿ ಒಂದು ಪ್ಲೇಟಿನ ತುಂಬಾ ಲಾಡನ್ನು ತಿಂದಿರುವುದಾಗಿಯೂ ಮತ್ತು ಸ್ಕೂಲಿಗೂ ಸಾಕಷ್ಟು ಪರ್ಯಾಪ್ತ ಮಾತ್ರದಲ್ಲಿ ಲಾಡನ್ನು ಚೀಲದಲ್ಲಿ ಹೊತ್ತು ತಂದಿರುವುದಾಗಿಯೂ, ಹತ್ತೂವರೆ ಗಂಟೆಯ ರೀಸಸ್ ಸಮಯದಲ್ಲಿ ನಾವೆಲ್ಲರೂ ಕೂಡಿ ತಾನು ತಂದಿರುವ ಲಾಡನ್ನು ಸವಿಯೋಣ ಎಂದೂ ನುಡಿದನು.

ನಮ್ಮೂರ ಮಟ್ಟಿಗೆ ಲಾಡು ಬಹಳ ಅಪರೂಪವಾಗಿದ್ದ ಸಿಹಿತಿಂಡಿಗಳ ರಾಜನೋ, ರಾಣಿಯೋ ಆಗಿದ್ದ ಕಾಲಘಟ್ಟವದು. ಕಡಲೆಬೇಳೆ ಅಥವಾ ಗೋಧಿನುಚ್ಚಿನ ಹುಗ್ಗಿ, ಬೇಳೆ ಹೋಳಿಗೆಗಳು ಮದುವೆಯಂತಹ ಶುಭ ಸಂದರ್ಭಗಳಲ್ಲಿ ತಮ್ಮ ದಶಕಗಳ ಸ್ಥಾಪಿತಸ್ಥಾನವನ್ನು ಕ್ರಮೇಣ ಲಾಡಿಗೆ ಬಿಟ್ಟು ಕೊಡುತ್ತಿದ್ದ ಪರ್ಯಾಯ ಸಮಯವದು. “ಏನಪ್ಪಾ, ಯಾವಾಗ ಹೋಳಿಗೆ ಊಟ ಹಾಕಿಸುತ್ತೀಯಾ?” ಎಂದು ವಿವಾಹಯೋಗ್ಯ ಮಕ್ಕಳಿದ್ದ ಪೋಷಕರನ್ನು ಚುಡಾಯಿಸುತ್ತಿದ್ದ ಊರಮಂದಿ ಇತ್ತೀಚೆಗೆ “ಏನಯ್ಯಾ, ಯಾವಾಗ ಲಾಡು ಹಾಕಿಸುತ್ತೀಯಾ?” ಎನ್ನುವ ಮಟ್ಟಿಗೆ ತಮ್ಮ ಮಾತುಗಳನ್ನು ಮಾರ್ಪಡಿಸಿಕೊಳ್ಳುವ ಹಾಗೆ ಅದಾಗಲೇ ಲಾಡಿನ ಮಹಾತ್ಮೆ ಜನಗಳ ಮೇಲೆ ಮೋಡಿ ಮಾಡಿತ್ತು.

ರಾಮಾಂಜನೇಯನ ಮಾತುಗಳನ್ನು ಕೇಳಿದ ಬಳಿಕ ಕುತೂಹಲವನ್ನು ಅದುಮಿಟ್ಟುಕೊಳ್ಳಲಾಗದ “ಕಾಂತರಾಜ್ ಮನೆಯಲ್ಲಿ ಆ ಪ್ರಮಾಣದ ಲಾಡು ಬಂದಿದ್ದು ಹೇಗೆ?” ಎನ್ನುವ ನನ್ನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡಲು ಕೊಂಚ ತಡವರಿಸಿದಂತೆ ಕಂಡು ಬಂದ ರಾಮಾಂಜನೇಯ “ಮೂರು ದಿನಗಳ ಮೊದಲಷ್ಟೇ ಕಾಂತರಾಜ್ ಅಣ್ಣನ ಮದುವೆ ಇತ್ತು. ಇದೇ ಕಾರಣಕ್ಕಾಗಿ ಕಾಂತರಾಜ್ ಕಳೆದ ಎರಡು ಮೂರು ದಿನಗಳಿಂದ ಶಾಲೆಗೆ ಹಾಜರಾಗಿಲ್ಲದಿದ್ದು ನಿನಗೂ ತಿಳಿದಿದೆ. ಶಿವಮೊಗ್ಗಕ್ಕೆ ಮದುವೆಗೆಂದು ತೆರಳಿದ್ದ ಮದುವೆ ದಿಬ್ಬಣ, ನೆಂಟರಿಷ್ಟರನ್ನು ಕರೆದೊಯ್ದಿದ್ದ “ಗೀತಾ” ಬಸ್ ಮುಹೂರ್ತದ ದಿನ ಮಧ್ಯಾಹ್ನದ ವೇಳೆಗೇ ಊರಿಗೆ ವಾಪಾಸು ಬಂದಿದ್ದು, ಯಾವ ಕಾರಣಕ್ಕಾಗಿಯೋ ಮದುವೆ ಮುರಿದುಬಿದ್ದ ಹಾಗೆ ಕಾಣುತ್ತದೆ. ಮುಹೂರ್ತದ ನಂತರ ಎರಡು ದಿನಗಳಲ್ಲಿ ತುರುವನೂರಿನಲ್ಲಿ ಹುಡುಗಿಯನ್ನು “ಮನೆದುಂಬಿಸಿ”ಕೊಳ್ಳುವ ಕಾರ್ಯಕ್ರಮವಿದ್ದು, ಬರುವ ಬೀಗರ ಮತ್ತು ಊರಜನರ ಭೋಜನಕ್ಕಾಗಿ ತಯಾರಿಸಿದ್ದ ಮಣಗಟ್ಟಲೆ ಲಾಡು ಹಾಗೆಯೇ ಉಳಿದಿದ್ದ ಕಾರಣದಿಂದಾಗಿ ಕಾಂತರಾಜ್ ಅಮ್ಮ ಲಾಡನ್ನು ಊರಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಹಂಚುವ ನಿರ್ಧಾರಕ್ಕೆ ಬಂದಿದ್ದಾಳೆ. ಈ ವಿಷಯ ಕಾಳ್ಗಿಚ್ಚಿನಂತೆ ಕುರುಬರ ಕೇರಿಯನ್ನು ಆವರಿಸಿ, ಪಕ್ಕದ ರೆಡ್ಡಿಯವರ ಕೇರಿಯ ಹನುಮಂತಪ್ಪನ ಗುಡಿಯವರೆಗೂ ಹರಡಿದ ಕಾರಣ ಇಂದು ಬೆಳಿಗ್ಗೆ ಐದು ಗಂಟೆಯ ವೇಳೆಯಿಂದಲೇ ಜನ ತಮ್ಮ ಕೈಗೆ ಸಿಕ್ಕ ಪಾತ್ರೆ ಪಡುಗಗಳನ್ನು ಹಿಡಿದುಕೊಂಡು ಕಾಂತರಾಜ್ ಮನೆ ಮುಂದೆ ಜಮಾಯಿಸಲು ಶುರು ಮಾಡಿದ್ದಾರೆ” ಎಂದು ಹೇಳಿದ. “ದೊಡ್ಡ ಪ್ರಮಾಣದಲ್ಲಿ ತಯಾರಿಸಿದ್ದ ಲಾಡನ್ನು ಹಾಳು ಮಾಡಿ ಮುಸುರೆಗೆ ಎಸೆಯಲು ಇಷ್ಟವಿಲ್ಲದ ಕಾಂತರಾಜ್ ಅಮ್ಮ, ಮಾರುಕಟ್ಟೆಯ ಬೆಲೆಯ ಅರ್ಧಕ್ಕೂ ಕಡಿಮೆ ದರದಲ್ಲಿ ಲಾಡನ್ನು ಊರಜನರಿಗೆ ಹಂಚುತ್ತಿದ್ದಾರೆ” ಎನ್ನುವ ಸಮರ್ಪಕ ಸಮಜಾಯಿಷಿಯನ್ನೂ ಜೊತೆಗೆ ಲಗತ್ತಿಸಿದ.

ಕಾಂತರಾಜ್ ದೊಡ್ಡ ಅಣ್ಣ ಮಲ್ಲಣ್ಣನನ್ನು ನಾನು ಎರಡೋ ಮೂರೋ ಬಾರಿ, ಕಾಂತರಾಜನನ್ನು ಶಾಲೆಗೆ ಕರೆದೊಯ್ಯುವ ಸಮಯದಲ್ಲಿ, ಅವನ ಮನೆಯನ್ನು ಹೊಕ್ಕಾಗ ನೋಡಿದ್ದ ನೆನಪು. ವಯಸ್ಸಿನಲ್ಲಿ ನನಗಿಂತ ಸುಮಾರು ಹದಿನೈದು ವರ್ಷ ದೊಡ್ಡವರಾದ ಮಲ್ಲಣ್ಣ ನಮ್ಮೂರಿನಲ್ಲಿ ಇದ್ದಾಗಿನ ನೆನಪು ಸಹಜವಾಗಿಯೇ ನನಗಿರಲಿಲ್ಲ. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಬಿಕಾಂ ಪದವೀಧರ ಮಲ್ಲಣ್ಣನ ಬೆನ್ನ ಹಿಂದಿನ ಒಬ್ಬ ಅಕ್ಕ, ಮತ್ತೋರ್ವ ಅಣ್ಣ ಶಂಕರಪ್ಪನನ್ನೂ ಸೇರಿದಂತೆ ಒಬ್ಬ ತಮ್ಮ ವಿರೂಪಾಕ್ಷ ಹಾಗೂ ಒಬ್ಬ ತಂಗಿಯನ್ನು ಹೊಂದಿದ್ದ ಕಾಂತರಾಜ್ ಒಟ್ಟಿನಲ್ಲಿ ಒಬ್ಬ ಅಕ್ಕ, ಇಬ್ಬರು ಅಣ್ಣಂದಿರು, ಒಬ್ಬ ತಮ್ಮ ಮತ್ತು ಒಬ್ಬಳು ತಂಗಿಯಿಂದ ಕೂಡಿದ ತುಂಬು ಕುಟುಂಬದ ಹಿನ್ನೆಲೆಯಲ್ಲಿ ಬಂದವನು. ಹೇಳಿಕೊಳ್ಳುವಂತಹ ಆಸ್ತಿಯಿಲ್ಲದ ಕಾಂತರಾಜ್ ತಂದೆ ರೇವಣ್ಣ ಕಂಬಳಿ ನೇಯುವ ಮಗ್ಗವನ್ನೇ ಜೀವನಕ್ಕಾಗಿ ಆಶ್ರಯಿಸಿದ್ದವರು. ಬಡತನದಲ್ಲಿಯೇ ಹುಟ್ಟಿ, ಬೆಳೆದ ಮಲ್ಲಣ್ಣ ಬಹಳ ಕಷ್ಟಪಟ್ಟು, ದಾವಣಗೆರೆಯ ಉಚಿತ ವಿದ್ಯಾರ್ಥಿನಿಲಯ, ಕುರುಬರ ಹಾಸ್ಟೆಲ್ ನಲ್ಲಿ ನಿಂತು, ಪೂರ್ಣಗೊಳಿಸಿದ ತನ್ನ ಪದವಿಯ ನಂತರ ಉದ್ಯೋಗವನ್ನು ಮಾಡಲೇಬೇಕಾದ ಅನಿವಾರ್ಯತೆಯ ಕಾರಣದಿಂದಾಗಿ, ಓದಿನಲ್ಲಿ ಹುಷಾರಾಗಿದ್ದರೂ, ಮನೆಯ ಆರ್ಥಿಕ ಸಂಕಷ್ಟದ ಕಾರಣ ಎಂಕಾಂ ಮುಂದುವರೆಸಲು ಆಗಿರಲಿಲ್ಲ. ಬೆಂಗಳೂರಿನ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ದೊರೆತ ಕೆಲಸವನ್ನು ತನ್ನ ಎರಡೂ ಕೈಗಳಿಂದ ಬಾಚಿ ತಬ್ಬಿದ್ದ ಮಲ್ಲಣ್ಣ ತನಗೆ ದೊರೆತ ನೌಕರಿ ಕಾರಣದಿಂದಾಗಿ ಮನೆಯ ಪರಿಸ್ಥಿತಿ ಸುಧಾರಿಸೀತು ಎನ್ನುವ ಕನಸನ್ನು ಕಾಣತೊಡಗಿದ್ದ. ಮಲ್ಲಣ್ಣ ತನ್ನ ದೊಡ್ಡ ತಂಗಿಯ ಮದುವೆಯನ್ನು ತಾನು ಕೆಲಸಕ್ಕೆ ಸೇರಿದ ಎರಡು ವರ್ಷ ಕಳೆಯುವುದರೊಳಗೇ, ಊರಿನ ತನ್ನ ತಂದೆಯ ಕಡೆಯ ಗಂಡಿನೊಟ್ಟಿಗೆ, ತಕ್ಕಮಟ್ಟಿಗೆ ಎನ್ನುವಂತೆ ಮಾಡಿ ಮುಗಿಸಿದ್ದ. ತಮ್ಮ ಶಂಕರಪ್ಪ ಎರಡು ಮೂರು ಹೆಚ್ಚುವರಿ ವರ್ಷಗಳನ್ನು ತೆಗೆದುಕೊಂಡು ಊರಿನಲ್ಲಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತಿಣುಕುತ್ತಲೇ ಮುಗಿಸಿದ್ದ ಕಾರಣ ಶಂಕರಣ್ಣನ ಮುಂದಿನ ವಿದ್ಯಾಭ್ಯಾಸ ಸಾಧ್ಯವಿಲ್ಲ ಎಂದು ಅರಿತ ಮಲ್ಲಣ್ಣ, ಮನೆಯಲ್ಲಿ ಇದ್ದ ತಂದೆಯ ಕೈಮಗ್ಗದ ಮಗ್ಗುಲಲ್ಲೇ ಮತ್ತೊಂದು ಕಂಬಳಿ ನೇಯುವ ಮಗ್ಗವನ್ನು ಶಂಕರಪ್ಪನಿಗಾಗಿ ಹಾಕಿಕೊಟ್ಟಿದ್ದ.

ಕಾಂತರಾಜ್ ಮತ್ತು ಅವನ ತಮ್ಮ ವಿರೂಪಾಕ್ಷ ಓದಿನಲ್ಲಿ ಸಾಕಷ್ಟು ಹುಷಾರಾಗಿದ್ದುದ್ದು ಮಲ್ಲಣ್ಣನಿಗೆ ಸಮಾಧಾನವನ್ನು ತಂದಿತ್ತು. ಮಲ್ಲಣ್ಣ ನೌಕರಿ ಸೇರಿದ ನಂತರ ನಿಧಾನವಾಗಿ ಉತ್ತಮಗೊಳ್ಳುತ್ತಲೇ ನಡೆದ ಕಾಂತರಾಜ್ ಮನೆಯ ಆರ್ಥಿಕ ಪರಿಸ್ಥಿತಿ, ಶಂಕರಪ್ಪನ ಮಗ್ಗದ ಸ್ಥಾಪನೆಯ ನಂತರ, ದ್ವಿಗುಣಗೊಂಡ ಆದಾಯ ಮೂಲದ ಕಾರಣದಿಂದಾಗಿ ಮತ್ತಷ್ಟು ಸುಧಾರಿಸುತ್ತಾ ಸಾಗಿತ್ತು. ಆರ್ಥಿಕ ವಿಷಯಗಳೂ ಸೇರಿದಂತೆ ಮನೆಯ ಸಕಲ ವ್ಯವಹಾರಗಳನ್ನು ತನ್ನ ಕಪಿಮುಷ್ಟಿಯಲ್ಲಿಯೇ ಇಟ್ಟುಕೊಂಡಿದ್ದ ಕಾಂತರಾಜ್ ಅಮ್ಮನ ಕೈ ಹಣಕಾಸು ವಿಷಯದಲ್ಲಿ ಬಲವಾಗುತ್ತಾ ಹೋಗುತ್ತಿದ್ದ ಸಂಗತಿಯ ಪರೋಕ್ಷ ಅರಿವು ಕಾಂತರಾಜನ ಜೇಬಿನಲ್ಲಿ ಇತ್ತೀಚೆಗೆ ಝಣಝಣ ಗುಟ್ಟುತ್ತಿದ್ದ ನಾಣ್ಯಗಳ ಸದ್ದಿನಲ್ಲಿ ಪ್ರತಿಧ್ವನಿಸುತ್ತಿತ್ತು. ಶಂಕರಣ್ಣ ಮಗ್ಗ ನೇಯುವ ವೇಳೆ ಆತನಿಗೆ ಹಿನ್ನೆಲೆ ಸಂಗೀತದ ರಸದೌತಣ ನೀಡುತ್ತಿದ್ದ, ಪಡಸಾಲೆಯ ಮೇಲಿನ ಕಟ್ಟಿಗೆ ಸ್ಟ್ಯಾಂಡ್ ಒಂದರ ಮೇಲಿಟ್ಟಿದ್ದ, ದೊಡ್ಡ ಗಾತ್ರದ ಫಿಲಿಪ್ಸ್ ರೇಡಿಯೋ ಮತ್ತು ತಂದೆ, ಮಗನ ಕೈಮಗ್ಗಗಳ ಮೇಲೆ ಸಣ್ಣದಾಗಿ ಬೆಳಗಿನಿಂದ ಸಾಯಂಕಾಲದವರೆಗೆ ತಿರುಗುತ್ತಿದ್ದ, ಜಂತಿಗಳ ಸೂರಿನಿಂದ ಇಳಿಬಿಟ್ಟಿದ್ದ ಬಜಾಜ್ ಸೀಲಿಂಗ್ ಫ್ಯಾನ್ ಮಲ್ಲಣ್ಣನ ಮನೆಯ ಬದಲಾದ ಆರ್ಥಿಕ ಪರಿಸ್ಥಿತಿಯನ್ನು ಸಂಕೇತಿಸುತ್ತಿತ್ತು. ಎರಡು ಮೂರು ವರ್ಷಗಳ ಮೊದಲು ಭದ್ರಶೆಟ್ಟಿಯ ಅಂಗಡಿಯ ಹೊಸ್ತಿಲನ್ನು ದಾಟದ ಕಾಂತರಾಜ್ ಈಗ ಶೆಟ್ಟಿ ಅಂಗಡಿಯ ಖಾಯಂ ಗಿರಾಕಿಯಾಗಿ ಪರಿವರ್ತಿತನೆಗೊಂಡಿದ್ದ. ಇಷ್ಟೇ ಸಾಲದೆಂಬಂತೆ, ಗೆಳೆಯರಾದ ನಮ್ಮನ್ನೂ ಎರಡು ಮೂರು ವಾರಗಳಿಗೊಮ್ಮೆ ಶೆಟ್ಟಿ ಅಂಗಡಿಗೆ ಕರೆದೊಯ್ದು ಪ್ರತಿಯೊಬ್ಬರ ಬೊಗಸೆ ತುಂಬುವಂತೆ ಬಟಾಣಿಕಾಳುಗಳ ಭರ್ಜರಿ ಪಾರ್ಟಿಯನ್ನು ನೀಡುತ್ತಿದ್ದ.

ಈ ಘಟನೆಯ ನಂತರದ ಮುಂದಿನ ಸೋಮವಾರದಿಂದ ಶಾಲೆಗೆ ನಿಯಮಿತ ರೂಪದಲ್ಲಿ ಹಾಜರಾಗತೊಡಗಿದ ಕಾಂತರಾಜ್ ಅಣ್ಣನ ವಿವಾಹ ಮುರಿದುಬಿದ್ದ ಕಾರಣಗಳ ಬಗ್ಗೆ ಹೆಚ್ಚು ಮಾತನಾಡಲು ಹೋಗಲಿಲ್ಲ. ಮದುವೆಯ ಲಾಡನ್ನು ಅಂದುಕೊಂಡಿದ್ದಕ್ಕಿಂತ ಮೊದಲೇ ಮಾರಾಟ ಮಾಡಿ ಮುಗಿಸಿ, ತನ್ಮೂಲಕ ಭರ್ಜರಿಯಾಗಿ ಹಣ ಸಂಪಾದಿಸಿದ ವಿಚಾರವನ್ನೇ ಪ್ರಮುಖವಾಗಿ ಪ್ರಸ್ತಾವ ಮಾಡುತ್ತಿದ್ದ. ಕನ್ಯೆಯ ಕಣ್ಣುದೃಷ್ಠಿ ಸರಿಯಿಲ್ಲವೆಂದು ಯಾವ ಮೂಲಗಳಿಂದಲೋ ಮದುವೆಯ ಹಿಂದಿನ ಮಧ್ಯರಾತ್ರಿ ವೇಳೆಗೆ ಅರಿತ ಮಲ್ಲಣ್ಣ ಬೆಳಗಿನ ಜಾವವೇ ಮದುವೆ ಛತ್ರದಿಂದ ಹೇಳದೆ ಕೇಳದೆ ಪರಾರಿ ಆಗಿದ್ದ. ವರನು ಕಾಣೆಯಾದ ಕಾರಣದಿಂದ ಮದುವೆ ಛತ್ರದಲ್ಲಿ ಉಂಟಾದ ದೊಡ್ಡಮಟ್ಟದ ರಂಪಾಟ ಮತ್ತು ಕೋಲಾಹಲದ ನಡುವೆ ಅದೇಗೋ ಭಾವಿ ಬೀಗರಿಂದ ತಪ್ಪಿಸಿಕೊಂಡು ಊರಕಡೆ ದೌಡಾಯಿಸಿದ ಮದುವೆಯ ದಿಬ್ಬಣದ ಬಹಳ ಮಂದಿಗೆ ಅಲ್ಲಿ ನಡೆದಿದ್ದೇನು? ಎನ್ನುವ ಸ್ಪಷ್ಟಚಿತ್ರಣ ಸಿಕ್ಕಿರಲಿಲ್ಲ. ಬೆಳಗಿನ ಸುಮಾರು ಏಳು ಗಂಟೆ ವೇಳೆಗೇ ತಿಂಡಿಗೆಂದು ಭೋಜನಶಾಲೆಯಲ್ಲಿ ಕುಳಿತು ಬಿಸಿಬಿಸಿ ಉಪ್ಪಿಟ್ಟು ಮತ್ತು ಕೇಸರಿಬಾತ್ ನಿರೀಕ್ಷೆಯಲ್ಲಿದ್ದ ಊರಜನರನ್ನು, ಉದ್ವಿಗ್ನಸ್ಥಿತಿಯಲ್ಲಿ ಅಲ್ಲಿಗೆ ಧಾವಿಸಿದ ಕಾಂತರಾಜ್ ಅಮ್ಮ, ಆತುರಾತುರವಾಗಿ ಜಾಗ ಖಾಲಿ ಮಾಡುವಂತೆ ವಿನಂತಿಸಿಕೊಂಡಳಲ್ಲದೆ, “ಶೀಘ್ರವೇ ಹೋಗಿ ಬಸ್ಸಿನಲ್ಲಿ ಕುಳಿತುಕೊಳ್ಳಿ, ಇಲ್ಲವಾದರೆ ಅಪಾಯ ಕಾದಿದೆ” ಎನ್ನುವ ಖಡಕ್ ನಿರ್ದೇಶನವನ್ನೂ ಕೊಟ್ಟ ಹಿನ್ನೆಲೆಯಲ್ಲಿ ತಂತಮ್ಮ ಮುಂದೆ ಬಡಿಸಿದ್ದ ಎಲೆಯ ಮೇಲಿನ ತಿಂಡಿಯನ್ನು ಹಾಗೆಯೇ ಮಡಿಚಿ, ಜತನವಾಗಿ ಕೈಯಲ್ಲಿ ಹಿಡಿದುಕೊಂಡೇ ಬಸ್ಸಿನ್ನು ಏರಿದ ಮಂದಿ ಚಲಿಸುವ ಬಸ್ಸಿನಲ್ಲಿಯೇ ತಮ್ಮ ಮದುವೆಯ ಉಪಹಾರವನ್ನು ಮುಗಿಸಿದ್ದರು. ಇದು ಊರಿನ ಬಹುತೇಕ ಗಂಡಸರ ಕಥೆಯಾದರೆ, ಭೋಜನಶಾಲೆಗೆ ಅಷ್ಟು ಹೊತ್ತಿಗೆ ಬರಲಾಗದ ಹೆಂಗಸರು ಮತ್ತು ಮಕ್ಕಳು ಹೊಟ್ಟೆ ಹಸಿವಿನ ಕಾರಣದಿಂದಾಗಿ ಬಸ್ಸಿನಲ್ಲಿ ಎಬ್ಬಿಸಿದ ರಂಪದ ಕಾರಣಕ್ಕೆ ಸುಮಾರು ಹತ್ತು ಗಂಟೆಯ ವೇಳೆಗೆ ಚಿತ್ರದುರ್ಗವನ್ನು ತಲುಪಿದ ದಿಬ್ಬಣಕ್ಕೆ ಸಂತೆಹೊಂಡದ ಬಳಿಯ, ಆಲದಮರದ ಕೆಳಗಿನ, ಗೋಪಾಲ ಹಳ್ಳೂರರ, “ಗಣೇಶಭವನ”ದಲ್ಲಿ ಮಸಾಲೆದೋಸೆಯ ಉಪಹಾರವನ್ನು ಕಾಂತರಾಜ್ ತಾಯಿ ಏರ್ಪಡಿಸಲೇಬೇಕಾದ ಒತ್ತಡಕ್ಕೆ ಸಿಲುಕಿದಳು. ಗಡದ್ದಾದ ತಿಂಡಿಯ ನಂತರ ಊರ ಹಾದಿ ಹಿಡಿದ ಮದುವೆ ಬಸ್ ಹನ್ನೆರೆಡು ಗಂಟೆಯ ಒಳಗೇ ಊರು ಸೇರಿತ್ತು. ಮಾರನೇ ದಿನ ಬೆಳಿಗ್ಗೆಯೇ ಲಾಡಿನ ವಿತರಣೆಯನ್ನು ಹಮ್ಮಿಕೊಂಡಿದ್ದ ಕಾಂತರಾಜ್ ಅಮ್ಮ, ಬಸ್ಸಿನಲ್ಲಿ ಮದುವೆಗೆ ಬಂದ ಪ್ರತೀ ಮನೆಯವರಿಗೂ ಒಂದರ್ಧ ಕೇಜಿ ಲಾಡನ್ನು ಉಚಿತವಾಗಿ ವಿತರಿಸುವ ಮುಖೇನ ತಮ್ಮ ಹೃದಯವಂತಿಕೆಯನ್ನೂ, ನ್ಯಾಯಪರತೆಯನ್ನೂ ಮೆರೆದಿದ್ದರು. ಅಂತೂ,ಇಂತೂ ತಪ್ಪಿದ ಮದುವೆಯ ಕಾರಣದಿಂದಾಗಿ, ಲಾಡೂಟದಿಂದ ನೆಂಟರಿಷ್ಟರನ್ನು, ಬಂಧುಬಳಗವರನ್ನು, ಆಪ್ತೇಷ್ಟರನ್ನು ವಂಚಿತರನ್ನಾಗಿ ಮಾಡದ ಕಾಂತರಾಜ್ ಅಮ್ಮನ ಹೃದಯವೈಶಾಲ್ಯತೆಯನ್ನು ಕೊಂಡಾಡುವ ನೆಂಟರಿಷ್ಟರ, ಬಂಧುಬಳಗ, ಸಂಬಂಧಿಗಳ ಜೊತೆಗೆ, ಅತ್ಯಂತ ಕಡಿಮೆದರದಲ್ಲಿ ದೊರೆತ ಲಾಡಿನ ಫಲಾನುಭವಿಗಳಾಗಿ, ಈ ಘಟನೆಯ ಅನಿತರಲ್ಲಿಯೆ ಬಂದ ಮಹಾನವಮಿ ಹಬ್ಬದವರೆಗೂ ದುಡ್ಡುಕೊಟ್ಟು ತಂದ ಲಾಡನ್ನು ಜೋಪಾನವಾಗಿರಿಸಿ, “ಧೂಮ್ ಧಾಮ್” ಎಂದು ದಸರೆಯ ಹಬ್ಬ ಆಚರಿಸಿದ ಊರ ಕೆಲಮಂದಿಯೂ ಧ್ವನಿಗೂಡಿಸಿದ್ದರು.

ಇದಾದ ನಂತರ ಕೆಲವು ವರ್ಷಗಳ ಕಾಲ ಊರ ಮುಖವನ್ನೇ ನೋಡದ ಮಲ್ಲಣ್ಣ ಈ ಮಧ್ಯೆ ಮೈಸೂರಿನಲ್ಲಿ ಮದುವೆಯಾದ ಸುದ್ದಿಯನ್ನು ಕಾಂತರಾಜ್ ನಮಗೆ ಹೇಳಿದಾಗಲೇ ತಿಳಿದಿದ್ದು. ಕೇವಲ ಪರಿವಾರ ಜನರ ಸಮಕ್ಷಮದಲ್ಲಿ ಸಾಕಾರಗೊಂಡ ಈ ವಿವಾಹದ ನಂತರ ತನ್ನ ಪತ್ನಿಯೊಡಗೂಡಿ ಬೆಂಗಳೂರಿನಲ್ಲಿ ಅಣ್ಣ ಸಂಸಾರ ಹೂಡಿದ ವಿಷಯವೂ ಕಾಂತರಾಜ್ ನಿಂದಲೇ ನನಗೆ ತಿಳಿದುಬಂದಿತ್ತು. ಮದುವೆಯ ನಂತರವೂ ಊರಿನ ತನ್ನ ಮನೆಯ ಶ್ರೇಯೋಭಿವೃದ್ಧಿಗೆ ಕಂಕಣಬದ್ದನಾದ ರೀತಿಯಲ್ಲಿ ವ್ಯವಸ್ಥಿತವಾದ ಆಲೋಚನೆ ಮತ್ತು ಯೋಜನೆಗಳ ಮೂಲಕ ಮನೆಯ ಸ್ಥಿತಿಗತಿಗಳನ್ನು ಸತತವಾಗಿ ಊರ್ಧ್ವಮುಖಗೊಳಿಸುತ್ತಲೇ ಸಾಗಿದ್ದ ಮಲ್ಲಣ್ಣ ನಾವು ಹೈಸ್ಕೂಲಿನ ಒಂಬತ್ತನೇ ತರಗತಿಯಲ್ಲಿ ಇರುವ ವೇಳೆ ಶಾಲೆಯಲ್ಲಿ ನಡೆದ ಒಂದು ಅಹಿತಕರ ಘಟನೆಯ ಕಾರಣದಿಂದ ತಮ್ಮ ಕಾಂತರಾಜನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿನ ಶಾಲೆಯೊಂದಕ್ಕೆ ಸೇರಿಸಿದ. ಸಮಾಜಶಾಸ್ತ್ರ ತರಗತಿಯಲ್ಲಿ ಗಲಾಟೆ ಮಾಡಿದ ಎನ್ನುವ ಕಾರಣಕ್ಕಾಗಿ ಕಾಂತರಾಜನನ್ನು ಬೆತ್ತದಿಂದ ಮನಸಾರೆ ಥಳಿಸಿದ್ದ ಜಿ.ಬಸಪ್ಪ ಮಾಸ್ತರರ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಅಂದು ಬಸಪ್ಪ ಮಾಸ್ತರು ತಂಗಿದ್ದ ನಾಯಕರ ಓಣಿಯ ಅವರ ಮನೆಯ ಮುಂದೆ ಕಾಂತರಾಜ್ ಸಂಬಂಧಿಯೊಬ್ಬರು ಮಾಡಿದ ವಿಪರೀತ ಗಲಾಟೆಯ ಕಾರಣದಿಂದಾಗಿ ಇನ್ನು ಕಾಂತರಾಜ್ ತುರುವನೂರಿನ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದು ಮಲ್ಲಣ್ಣನಿಗೆ ಪಥ್ಯವಾಗದ ಕಾರಣ ಅವನ ಮುಂದಿನ ಅಭ್ಯಾಸದ ಸ್ಥಳ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು.

ಬೆಂಗಳೂರಿನ ಜೆಪಿ ನಗರದ ಹೈಸ್ಕೂಲೊಂದರಲ್ಲಿ ಎಸ್ಸೆಸ್ಸೆಲ್ಸಿಯನ್ನು ಎರಡನೇ ದರ್ಜೆಯಲ್ಲಿ ಮುಗಿಸಿದ ಕಾಂತರಾಜ್ ಮುಂದಿನ ಡಿಪ್ಲೋಮಾ ವ್ಯಾಸಂಗಕ್ಕಾಗಿ ಕೊಡಗಿನ ಕುಶಾಲನಗರದ ಸರ್ಕಾರಿ ಡಿಪ್ಲೋಮಾ ಕಾಲೇಜಿಗೆ ತೆರಳಿದ. ಮೊದಲನೇ ವರ್ಷದ ಎಲೆಕ್ಟ್ರಿಕಲ್ಸ್ ವಿಭಾಗದ ಪರೀಕ್ಷೆಯ ನಂತರ ಅಣ್ಣನ ಅವಿರತ ಪ್ರಯತ್ನದ ಫಲವಾಗಿ ಬೆಂಗಳೂರಿನ ಶೇಷಾದ್ರಿರಸ್ತೆಯ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿಗೆ ವರ್ಗಾವಣೆ ಪಡೆದುಕೊಂಡ ಕಾಂತರಾಜ್, ಅಣ್ಣನ ವಿಜಯನಗರದ ಹತ್ತಿಗುಪ್ಪೆಯ, ಮಾರುತಿ ಟೂರಿಂಗ್ ಟಾಕೀಸ್ ಬಳಿಯಲ್ಲಿದ್ದ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡಿಪ್ಲೋಮಾ ಪದವಿಯನ್ನು ಉತ್ತಮ ಅಂಕಗಳಿಂದ ತೇರ್ಗಡೆ ಮಾಡಿದ. ಅಂದಿನ ಅವಿಭಾಜಿತ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ, ಮಲೆನಾಡಿನ ಸಹ್ಯಾದ್ರಿ ತಪ್ಪಲಿನ ದಟ್ಟ ಕಾನನದ ನಡುವಿದ್ದ “ಮಾಸ್ತಿಕಟ್ಟೆ”ಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಖಾಯಂ ಕೆಲಸವೊಂದಕ್ಕೆ ಸೇರಿದ ಕಾಂತರಾಜ್, ಕೆಲಸಕ್ಕೆ ಹಾಜರಾಗುವ ಹೊತ್ತು ಅಣ್ಣ ಮತ್ತು ಅತ್ತಿಗೆಗೆ ದೀರ್ಘದಂಡ ನಮಸ್ಕಾರ ಹಾಕಿಯೇ ಮನೆಯಿಂದ ಹೊರಬಿದ್ದಿದ್ದ. ಈ ಪರಿಯಾಗಿ ಕಾಂತರಾಜನನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ ಮಲ್ಲಣ್ಣನ ಗಮನ ಈಗ ಶಂಕರಪ್ಪನ ಕಡೆ ತಿರುಗಲಾಗಿ, ಊರಿನಲ್ಲಿ ಮಗ್ಗ ನೇಯ್ದುಕೊಂಡಿದ್ದ ಆತನನ್ನು ಮೈಸೂರಿನಲ್ಲಿ ಒಂದು ತಕ್ಕಮಟ್ಟಿಗಿನ, ಆತನ ವಿದ್ಯಾರ್ಹತೆಗೆ ಹೊಂದುವಂತಹ, ಸರ್ಕಾರಿ ಕೆಲಸಕ್ಕೆ ಸೇರಿಸುವಲ್ಲಿ ತಾನು ಹಿಡಿದ ಹಟವನ್ನು ಕೊನೆಗೂ ಸಾಧಿಸಿದ ಮಲ್ಲಣ್ಣ, ಶಂಕರಪ್ಪನ ಭವಿಷ್ಯದ ಸುಖೀಜೀವನದ ಬುನಾದಿಯನ್ನು ಭದ್ರಗೊಳಿಸಿದ. ಈ ಮಧ್ಯೆ ವಿವಾಹಯೋಗ್ಯ ವಯ್ಯಸ್ಕಳಾದ ಸಣ್ಣ ತಂಗಿಯ ಮದುವೆಯ ಕಡೆಗೆ ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿ, ಈ ವೇಳೆಗಾಗಲೇ ತನ್ನ ಎರಡನೇ ಹುಟ್ಟೂರು ಎಂದೇ ಪರಿಗಣಿತವಾದ ಮೈಸೂರಿನಲ್ಲಿ ಒಬ್ಬ ಸೂಕ್ತ, ಸರ್ಕಾರಿ ಉದ್ಯೋಗಸ್ಥ ವರನನ್ನು ಹುಡುಕಿ, ವಿಜೃಂಭಣೆಯಿಂದಲೆ ವಿವಾಹ ಮಾಡಿಕೊಟ್ಟ. ತನ್ನ ವಿವಾಹದ ವೇಳೆ ಊರ ನೆಂಟರಿಷ್ಟರಿಗೆ, ಬಂಧುಬಳಗದವರಿಗೆ ಆದ ನಿರಾಶೆಯನ್ನು ಮರೆಸುವ ರೀತಿಯಲ್ಲಿ ಸಂಪನ್ನವಾದ ಈ ವಿವಾಹದ ದೆಸೆಯಿಂದಾಗಿ ಮಲ್ಲಣ್ಣ ತನ್ನ ಮನೆಯ ಅಭಿವೃದ್ದಿ ಪಥದಲ್ಲಿ ಮತ್ತೊಂದು ಮೈಲಿಗಲ್ಲನ್ನು ಗಟ್ಟಿಯಾಗಿ ನೆಟ್ಟ ಅಪೂರ್ವ ಅನುಭೂತಿಗೆ ಒಳಗಾದ. ಇನ್ನು ಉಳಿದಿದ್ದು ಕೊನೆಯ ತಮ್ಮ ವಿರೂಪಾಕ್ಷನ ಜವಾಬ್ದಾರಿ ಮಾತ್ರ. ಈ ವೇಳೆಗಾಗಲೇ ಬೆಂಗಳೂರಿನ ಅಣ್ಣನ ಮನೆಯಲ್ಲಿದ್ದುಕೊಂಡೇ ಬಿಕಾಂ ಪದವಿಯನ್ನು ಮುಗಿಸಿದ್ದ ವಿರೂಪಾಕ್ಷನಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ತಾಕೀತು ಮಾಡಿ, ಅದಕ್ಕೆ ಅಗತ್ಯವಿದ್ದ ಸಕಲ ಸೌಲತ್ತುಗಳನ್ನೂ ಧಾರಾಳವಾಗಿ ಒದಗಿಸಿದ ಮಲ್ಲಣ್ಣ, ವಿರೂಪಾಕ್ಷನೂ ಕರ್ನಾಟಕ ಲೋಕಸೇವಾ ಆಯೋಗದ ಅರ್ಹತಾ ಪರೀಕ್ಷೆಯೊಂದರಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಒಂದು ಒಳ್ಳೆಯ ಸರ್ಕಾರಿ ಹುದ್ದೆಗೆ ಆಯ್ಕೆಯಾಗುವ ಹಾಗೆ ನೋಡಿಕೊಂಡ. ತನ್ನ ಈ ಕಡೆಯ ಜವಾಬ್ದಾರಿಯೂ ತೃಪ್ತಿಕರ ರೀತಿಯಲ್ಲಿ ಮುಗಿದ ಕಾರಣ ತನ್ನ ಕುಲದೇವತೆ ಗುಡ್ಡದ ಮಲ್ಲಪ್ಪನಿಗೆ ಮನದಲ್ಲಿಯೇ, ತಾನು ನಿಂತ ನೆಲದಿಂದಲೇ, ಸಹಸ್ರ ಕೃತಜ್ಞತೆಗಳನ್ನು ಅರ್ಪಿಸಿದ ಮಲ್ಲಣ್ಣ ಒಂದು ರೀತಿಯ ಅನನ್ಯ ಧನ್ಯತಾಭಾವಕ್ಕೆ ಒಳಗಾಗಿದ್ದು ಸುಳ್ಳಲ್ಲ.

ತಮ್ಮಂದಿರು ಉದ್ಯೋಗರಂಗದಲ್ಲಿ ನಿಶ್ಚಿತ ಎನ್ನಬಹುದಾದ ನೆಲೆಗಳನ್ನು ಕಂಡುಕೊಂಡ ತರುವಾಯ ಅವರ ಮದುವೆ ಕಾರ್ಯಗಳ ಬಗ್ಗೆ ಮಲ್ಲಣ್ಣನ ಗಮನ ಹರಿದಿತ್ತು. ಶಂಕರಣ್ಣ, ಕಾಂತರಾಜ್ ಮತ್ತು ವಿರೂಪಾಕ್ಷರಿಗೆ ಮೈಸೂರು ಮೂಲದ ಸಂಬಂಧಗಳನ್ನೇ ಹುಡುಕಿ ತಂದು, ಅವರನ್ನು ವಿವಾಹ ಬಂಧನಗಳಲ್ಲಿ ಸಿಲುಕಿಸಿದ ಮಲ್ಲಣ್ಣ ಮಾತ್ರ ಇನ್ನೂ ಸಂತಾನವಂಚಿತನಾಗಿದ್ದ. ಮದುವೆಯ ತರುವಾಯ ಸುಮಾರು ಹದಿನೆಂಟು ವರ್ಷಗಳ ನಂತರ ಒಂದು ಸುಂದರವಾದ ಹೆಣ್ಣು ಮಗುವಿನ ತಂದೆಯಾದ ಮಲ್ಲಣ್ಣ ಈ ಬಾರಿ ತಾನು ನಿಂತ ನೆಲದಿಂದ ಗುಡ್ಡದ ಮಲ್ಲಪ್ಪನಿಗೆ ಸಮರ್ಪಣಾ ಭಾವದ ಕೃತಜ್ಞತೆಗಳನ್ನು ಹೇಳದೆ, ಅಪ್ಪ, ಅಮ್ಮ, ಪತ್ನಿ, ಪುತ್ರಿ, ತಂಗಿ, ತಮ್ಮಂದಿರನ್ನು, ಅವರವರ ಸಂಸಾರಗಳ ಸಮೇತ ಕುಲದೇವತೆಯ ಸನ್ನಿಧಿಗೆ ಕರೆದೊಯ್ದು ತನ್ನ ಬಹುವರ್ಷಗಳ ಹರಕೆಯನ್ನು ತೀರಿಸುವ ಮೂಲಕ ತನ್ನೆಲ್ಲಾ ಅಭಿಲಾಷೆಗಳಿಗೆ ಪೂರಕಶಕ್ತಿಯಾಗಿ ನಿಂತ ಏಳುಗುಡ್ಡಗಳ ಒಡೆಯನಿಗೆ ತನ್ನ ಅಲ್ಪಋಣವನ್ನು ಸಂದಾಯ ಮಾಡಿದ ಆತ್ಮತೃಪ್ತಿಗೆ ಭಾಜನನಾದ. ತನ್ನ ಎಲ್ಲಾ ತಂಗಿ, ತಮ್ಮಂದಿರುಗಳಿಗೆ ಅವರು ನೆಲೆ ನಿಂತ ಊರುಗಳಲ್ಲಿಯೇ, ಅವರವರ ಯೋಗ್ಯತೆಯ ಅನುಸಾರ, ಸೂಕ್ತ ವಾಸಯೋಗ್ಯ ಗೃಹಗಳನ್ನು ನಿರ್ಮಿಸುವ ಕಾರ್ಯದಲ್ಲಿಯೂ ಹೆಗಲಿಗೆ ಹೆಗಲು ಜೋಡಿಸಿದ ಮಲ್ಲಣ್ಣ ತನ್ಮೂಲಕ ತನ್ನ ರಕ್ತವನ್ನು ಹಂಚಿಕೊಂಡು ಒಡಹುಟ್ಟಿದ ಯಾರೂ, ಯಾವ ಕಾರಣಕ್ಕೂ, ಹುಟ್ಟಿದೂರಿನ ತನ್ನ ಕುಲಬಾಂಧವರ ತುಲನೆಯಲ್ಲಿ ಹಿಂದುಳಿಯಬಾರದು ಎನ್ನುವ ಏಕೈಕ ಗುರಿಯಿಂದ ಪ್ರೇರಿತನಾಗಿ ತನ್ನೊಟ್ಟಿಗೆ ತಾಯಿಯ ಮಡಿಲನ್ನು ಹಂಚಿಕೊಂಡು ಹುಟ್ಟಿದ ಒಡಹುಟ್ಟಿದವರಿಗೆ “ತಮ್ಮ ಜನ್ಮ ಸಾರ್ಥಕವಾಯಿತು” ಎನ್ನುವ ಭಾವನೆಯನ್ನು ಬಲವಾಗಿ ಬಿತ್ತುವಲ್ಲಿ ಬಹಳ ದೊಡ್ಡ ಮಟ್ಟದ ಯಶಸ್ಸನ್ನು ಕಂಡ.

ತನ್ನ ತಲೆಮಾರನ್ನು, ಲೌಕಿಕದೃಷ್ಟಿಯಲ್ಲಿ ಸುರಕ್ಷಿತಗೊಳಿಸಿದ ಮಲ್ಲಣ್ಣ ತನ್ನ “ಒಡಹುಟ್ಟಿದವರ ಸುರಕ್ಷತಾ ಅಭಿಯಾನ”ವನ್ನು ಅವರ ಮುಂದಿನ ಪೀಳಿಗೆಗಳಿಗೂ ವಿಸ್ತರಿಸಿದ. ತುರುವನೂರಿನಲ್ಲಿ ನೆಲೆಸಿದ್ದ ದೊಡ್ಡ ತಂಗಿಯ ಮಗನನ್ನು ಊರಲ್ಲಿನ ಹತ್ತನೇ ತರಗತಿಯ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಕರೆದುಕೊಂಡು ಹೋಗಿ, ವರ್ಷಗಳ ಕಾಲ ತನ್ನ ಮನೆಯಲ್ಲಿಟ್ಟುಕೊಂಡೇ ಆರೈಕೆ ಮಾಡಿ, ಆತನಿಗೂ ಒಂದು ಖಾಯಂ ಉದ್ಯೋಗ, ವಸತಿ, ವಿವಾಹಗಳನ್ನು ಮಾಡಿದ. ಎರಡನೇ ತಂಗಿಯ, ಎರಡೂ ಗಂಡುಮಕ್ಕಳಿಗೆ ತನ್ನಿಂದಾದ ಎಲ್ಲಾ ವಿಧದ ಆರ್ಥಿಕ, ಆರ್ಥಿಕೇತರ ಸಹಾಯ ಮಾಡುವ ಮುಖಾಂತರ ಅವರ ಬಾಳದಾರಿಯಲ್ಲೂ ಎಂದೂ ಆರದ ಹಾಗೆ ದೀಪಗಳನ್ನು ಪ್ರಜ್ವಲಿಸಿದ. ಮಲ್ಲಣ್ಣನ ಈ “ಲೋಕೋಪಕಾರಿ ಗುಣ” ತನ್ನ ಮನೆಯವರಿಗಷ್ಟೇ ಸೀಮಿತವಾಗದೆ, ತನ್ನ ಸೋದರ ಸಂಬಂಧಿ, ನನ್ನ ಸಹಪಾಠಿ, ತಿಪ್ಪೇಸ್ವಾಮಿಯನ್ನು ಬೆಂಗಳೂರಿನ ಲಾಲ್ ಬಾಗ್ ತೋಟಗಾರಿಕೆ ವಿಭಾಗಕ್ಕೆ ಸೇರಿಸಿ, ಆತನಿಗೂ ವಿವಾಹ ಭಾಗ್ಯ, ವಸತಿಭಾಗ್ಯಗಳನ್ನು ಕಲ್ಪಿಸಿ ಕೊಡುವಲ್ಲಿಯವರೆಗೂ ಹರಡಿತ್ತು. ಹೀಗೆಯೇ ತನ್ನ ಸಂಪರ್ಕಕ್ಕೆ ಬಂದ ಎಲ್ಲಾ ಸಂಬಂಧಿಗಳ “ಬೇಕು- ಬೇಡ”ಗಳಿಗೆ ಪ್ರಾಂಜಲ ಹಾಗೂ ಸಂವೇದನಾಶೀಲ ಮನಸ್ಸಿನಿಂದ ಸ್ಪಂದಿಸಿದ ಮಲ್ಲಣ್ಣನಿಂದ ಉಪಕೃತರಾಗದ ಆತನ ಬಂಧು-ಬಳಗದವರೇ ಇಲ್ಲವೆನ್ನಬೇಕು. ಮಲ್ಲಣ್ಣನ ಈ ಪರೋಪಕಾರಿ ಬುದ್ದಿಯ ಕಿರುಪರಿಚಯ, ಆತನ ಹೃದಯ ವೈಶಾಲ್ಯತೆಯ ಒಂದು ಝಳಕು ತೊಂಬತ್ತನೆ ಶತಕದ ಕೊನೆಯ ಭಾಗದಲ್ಲಿ ನನಗೂ ಆಯಿತು. ನನಗೆ ವೈಯಕ್ತಿಕ ಮಟ್ಟದಲ್ಲಿ ಪರಿಚಿತನಲ್ಲದ, ಆ ಹೊತ್ತಿಗೆ ನೃಪತುಂಗ ರಸ್ತೆಯ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಣ್ಣನನ್ನು, ನನ್ನ ಕಾರ್ಯಾಲಯದ ಒಂದು ತುರ್ತಾದ ವಿದೇಶಿ ವಿನಿಮಯ ಕೆಲಸವೊಂದಕ್ಕೆ ಹುಡುಕಿಕೊಂಡು ಹೋಗಿ ಭೆಟ್ಟಿಯಾದವನಿಗೆ ಸಖೇದಾಷ್ಚರ್ಯ ಕಾದಿತ್ತು.

ಅತ್ಯಂತ ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡ ಮಲ್ಲಣ್ಣನಿಗೆ ಈಗಾಗಲೇ ನಾನು ಆತನನ್ನು ಭೇಟಿಯಾಗುವ ವಿಷಯವನ್ನು ಕಾಂತರಾಜನ ಮೂಲಕ ಸೂಕ್ಷ್ಮವಾಗಿ ತಲುಪಿಸಿದ್ದ ಕಾರಣ ನನ್ನ ಬಳಿ ಹೆಚ್ಚು ವಿವರಗಳನ್ನು ಕೇಳುವ ಗೋಜಿಗೆ ಹೋಗದೆ, ಕ್ಲಿಷ್ಟಕರವೆನ್ನುವ ಕೆಲಸವನ್ನು ಒಂದರ್ಧ ದಿನದ ಒಳಗೇ ಮಾಡಿಕೊಟ್ಟ ಮಲ್ಲಣ್ಣ ಅಂದು ತನ್ನ ಬಾಲ್ಯದ ಬಗ್ಗೆ ನನಗೆ ತಿಳಿಯದ ಅನೇಕ ವಿವರಗಳನ್ನು ನನ್ನೊಟ್ಟಿಗೆ ಹಂಚಿಕೊಂಡಿದ್ದ. ತಾನು, ನನ್ನ ಸಂಬಂಧಿಯಾದ ಗೌಡರ ಸುಶೀಲಮ್ಮನ ಮಗ, ವೇದಮೂರ್ತಿಯ ಸಹಪಾಠಿಯೆನ್ನುವ ವಿಷಯವನ್ನು ಆತ ಆರುಹಿದ್ದು ಈಗಲೂ ನನಗೆ ಚೆನ್ನಾಗಿಯೇ ನೆನಪಿದೆ. ನನ್ನ ಕೆಲಸವಾದ ನಂತರದಲ್ಲಿ ತನ್ನ ಕಚೇರಿಯ ರಸ್ತೆಯಲ್ಲಿರುವ, “ಯವನಿಕಾ” ಕಟ್ಟಡದ ಪಕ್ಕದ ಹೋಟೆಲೊಂದಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ಪುಷ್ಕಳ ಭೋಜನವನ್ನು ಮಾಡಿಸಿ ಬೀಳ್ಕೊಟ್ಟ ಮಲ್ಲಣ್ಣನ ಆರ್ದ್ರತೆಗೆ ನಾನು ಮೂಕನಾಗಿ ಹೋಗಿದ್ದೆ. ನನ್ನ ಆರ್ಬಿಐ ಕೆಲಸ ಮುಗಿಯಲು ಕನಿಷ್ಟ ಮೂರು ದಿನಗಳಾದರೂ ಬೇಕಾದೀತು ಎಂದು ಲೆಕ್ಕ ಹಾಕಿ ಕುಳಿತಿದ್ದ ನನ್ನ ಬಾಸ್ ಸಚ್ಚಿದಾನಂದಸ್ವಾಮಿಯವರಿಗೆ ನಾನು ಅರ್ಧ ದಿನದಲ್ಲಿಯೇ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ನಂಬಲು ಅಸಾಧ್ಯವಾದ ಸಂಗತಿಯಾಗಿಯೇ ಕಾಡಿತ್ತು. ಅಂದಿನಿಂದ ಅರ್ಬಿಐಗೆ ಸಂಬಂಧಿಸಿದ ಯಾವುದೇ ಕೆಲಸವಿರಲಿ, ನನ್ನನ್ನೇ ಅಲ್ಲಿಗೆ ಕಳುಹಿಕೊಡುತ್ತಿದ್ದ ಸ್ವಾಮಿಯವರ ನಂಬಿಕೆಯ ಕಾರಣದಿಂದಾಗಿ, ನನ್ನ ಪ್ರಥಮ ಭೇಟಿಯ ನಂತರದ ಮುಂದಿನ ಮೂರು ವರ್ಷಗಳಲ್ಲಿ ಏನಿಲ್ಲವೆಂದರೂ ಒಂದು ಡಜೆನ್ ಸಲ ಮಲ್ಲಣ್ಣನನ್ನು ಆತನ ಆಫೀಸಿನಲ್ಲಿ ಭೆಟ್ಟಿಯಾಗಿದ್ದೇನೆ. ಈ ಪರಿಚಯದ ಕಾರಣ, ತನ್ನ ಎಲ್ಲಾ ತಮ್ಮಂದಿರಿಗೆ ಸ್ವಂತದ ಸೂರುಗಳನ್ನ ಕಲ್ಪಿಸಿಕೊಟ್ಟ ನಂತರದಲ್ಲಿ ತಾನೂ ಚಂದ್ರಾ ಲೇಔಟ್ ನ ಬಿಡಿಎ ಸೈಟಿನಲ್ಲಿ ನಿರ್ಮಿಸಿದ್ದ, ಸ್ವಗೃಹಕ್ಕೆ ನಾಲ್ಕಾರು ಬಾರಿ ಗೆಳೆಯ ಕಾಂತರಾಜನೊಂದಿಗೆ ಹೋಗಿದ್ದೂ ಇದೆ. ಆಫೀಸಿನಲ್ಲಿ ಭೇಟಿ ಮಾಡಿದ ಹೊತ್ತೇ ಆಗಲಿ, ಮನೆಯಲ್ಲಿ ಸಿಕ್ಕ ಸಮಯದಲ್ಲಿಯೇ ಆಗಲಿ, ನನ್ನೆಡೆಗೆ ಅತ್ಯಂತ ನಿಷ್ಕಲ್ಮಶ ಪ್ರೀತಿಯನ್ನೇ ಧಾರೆ ಎರೆದಿದ್ದ ಮಲ್ಲಣ್ಣನ ಸಂಪರ್ಕ ನಂತರದ ವರ್ಷಗಳಲ್ಲಿ ಆತನ ಭೇಟಿ ನಾನು ಬೆಂಗಳೂರು ತೊರೆದ ಕಾರಣದಿಂದ ಸಾಧ್ಯವಾಗದೇ ಹೋಯಿತು. ನನ್ನ ಪ್ರತಿ ಭೇಟಿಯಲ್ಲೂ ದೊಡ್ಡಣ್ಣನ ರೀತಿಯ ಕಾಳಜಿಯನ್ನೇ ಪ್ರದರ್ಶಿಸಿದ್ದ ಮಲ್ಲಣ್ಣ ನನ್ನ ಹೃದಯದಲ್ಲಿ ಬಹಳ ದೊಡ್ಡ ಪ್ರಮಾಣದ ಧನಾತ್ಮಕ ಭಾವನೆಯೊಂದನ್ನು ಸಂಚಲಿತಗೊಳಿಸಿದ್ದ. ಇಂತಹ ಅಣ್ಣನನ್ನು ಪಡೆದ ಸ್ನೇಹಿತ ಕಾಂತರಾಜನ ಭಾಗ್ಯವನ್ನು ನೆನೆದು ನಾನು ಆ ದಿನಗಳಲ್ಲಿ ಮನದಲ್ಲಿಯೇ ಕರುಬಿದ್ದೂ ಇದೆ.

 

ಮಕ್ಕಳು ಜನ್ಮಿಸಿದಾಗ ತಂದೆತಾಯಿಗಳು ಸಂತೋಷದಿಂದ ಹಿರಿಹಿರಿ ಹಿಗ್ಗುವುದು ಲೋಕಾರೂಢಿ. ಅದರಲ್ಲೂ ಭಗವಂತ ಗಂಡು ಸಂತಾನವನ್ನು ಕರುಣಿಸಿದ ಎಂದರೆ ಹಿಗ್ಗಿ ಹೀರೇಕಾಯಿಯಾಗುವ ಪೋಷಕರಿಗೂ ನಮ್ಮಲ್ಲಿ ಕೊರತೆಯೇನಿಲ್ಲ. ಗಂಡು ಮಗುವನ್ನು “ವಂಶೋದ್ಧಾರಕ”, “ಕುಲದೀಪಕ”, “ಕುಲೋದ್ಧಾರಕ”, “ಮನೆಯ ಕೀರ್ತಿಯನ್ನು ಬೆಳಗಿಸುವವನು” ಹೀಗೆ ನಾನಾ ವಿಧದ ವಿಶೇಷ ವಾಚಕ ಪದಪುಂಜಗಳ ಮೂಲಕ ಹೆಸರಿಸಿ ಕರೆಯುವುದು ನಮ್ಮಲ್ಲಿರುವ ರೂಢಿಗತ ಪದ್ಧತಿ. ಆದರೆ ಹುಟ್ಟಿದ ಈ ಗಂಡು ಸಂತಾನಗಳಲ್ಲಿ ಎಷ್ಟು ಮಂದಿ ತಮ್ಮ ತಂದೆ ತಾಯಿಗಳ ಋಣಭಾರವನ್ನು ಇಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತಾರೆ? ತಾನು ಹುಟ್ಟಿದ ಮನೆಗೆ, ಮೆಟ್ಟಿದ ಹೊಸ್ತಿಲಿಗೆ ಯಾವ ಪ್ರಮಾಣದ ನ್ಯಾಯ ಇವರಿಂದ ಸಲ್ಲುತ್ತದೆ? ಗಂಡು ಮಗು ಹುಟ್ಟಿದಾಗ ಇದ್ದ ಸಂತಸದ ಪರಿ ಅವರು ಬೆಳೆದು ದೊಡ್ಡವರಾಗಿ, ವಯ್ಯಸ್ಸಾದ ತಂದೆ ತಾಯಂದಿರ ಆರೈಕೆ ಮಾಡುವ ಹೊತ್ತು ಹೆತ್ತವರಿಗೆ ಇರುತ್ತದೆಯೇ? ಈ ಸಂತಸ ಸಾಕಷ್ಟು ಕಡಿಮೆಯಾಗಿದೆ ಅಥವಾ ಸಂತೋಷ ದುಃಖಕ್ಕೆ ದಾರಿ ಮಾಡಿಕೊಟ್ಟಿದೆ ಎಂದರೆ ಇಲ್ಲಿ ಮಕ್ಕಳು ಎಡವಿದರೆಂದೇ ಅರ್ಥವಲ್ಲವೇ? ಜನ್ಮ ಕೊಟ್ಟ ತಂದೆತಾಯಿಗಳ ನಿರೀಕ್ಷೆಯ ಮಟ್ಟವನ್ನು ಮುಟ್ಟಲಾಗದ ಮಗ ಸಮಾಜದ, ಸಮಷ್ಟಿಯ, ಜಂಗಮದ ನಿರೀಕ್ಷೆಗಳನ್ನು ಈಡೇರಿಸುವುದಾದರೂ ಹೇಗೆ? ಎಲ್ಲಿಂದ? ಯಾವ ರೀತಿ? “ಮನೆಯನ್ನು ಗೆದ್ದು ಮಂದಿಯನ್ನು ಗೆಲ್ಲು” ಎನ್ನುತ್ತಾರೆ, ಮನೆಯ ಮಟ್ಟದಲ್ಲಿಯೇ ಸೋತು ಸುಣ್ಣವಾದ ಅಯೋಗ್ಯ ಗಂಡು ಸಂತಾನದ ಅಭಿಲಾಷೆ ತಂದೆತಾಯಿಗಳಿಗೆ ಏತಕ್ಕಾಗಿ ಬೇಕು? ತಮ್ಮ ವೃದ್ಧಾಪ್ಯದ ಹೊತ್ತಿನಲ್ಲಿ ತುತ್ತುಕೂಳಿಗೆ ಆಸರೆಯಾದಾನು ಎನ್ನುವ ದೂರದ ನಿರೀಕ್ಷೆಯಲ್ಲಿ ತಮ್ಮ ಜೀವನದ ಸರ್ವಸ್ವವನ್ನೂ ಧಾರೆಯೆರೆಯುವ ಹಿರಿಯರಿಗೆ ಇಂತಹ ಲಜ್ಜೆಗೆಟ್ಟ ನಪುಂಸಕ ಸಂತಾನ ಎಂತಹ ಸುಖ, ನೆಮ್ಮದಿ, ಶಾಂತಿಯನ್ನು ಋಣಸಂದಾಯದ ರೂಪದಲ್ಲಿ ನೀಡೀತು? ಗಂಡುಮಗು ಹುಟ್ಟಿದಾಗ ತಲೆಯೆತ್ತಿ ಸರಿಕರ ಮುಂದೆ ಮೆರೆದಾಡಿದ ಪೋಷಕರು ಮಗ ಸೂಕ್ತ ವಯ್ಯಸ್ಸಿಗೆ ಬಂದಾಗ ಆತನ ಕೃಕೃತ್ಯಗಳ ಕಾರಣದಿಂದ ಶಾಶ್ವತವಾಗಿ ಸಮಾಜದೆದುರು ತಲೆಬಗ್ಗಿಸಿ ನಿಲ್ಲಬೇಕಾದ ಶಿಕ್ಷೆಯನ್ನು ಕೊಡುವ ಅಧಿಕಾರ ಸಂತಾನಕ್ಕೆ ಇದೆಯೇ? ಜೀವಂತವಿದ್ದಾಗಲೇ ತಂದೆತಾಯಿಗಳಿಗೆ ಚಿತೆಗಳಿಗೆ ಅಗ್ನಿಸ್ಪರ್ಶ ಮಾಡುವ ಇಂತಹ “ಕುಲದೀಪಕರು” ಹುಟ್ಟಬೇಕಾದರೂ ಯಾವ ಪುರುಷಾರ್ಥಕ್ಕಾಗಿ? ಇಂತಹವರನ್ನು, ಜನ್ಮಕೊಟ್ಟ ಆ ಜಗದೀಶನಾದರೂ ಕ್ಷಮಿಸಿಯಾನೆ? ಇಂತಹ ಕೊನೆಮೊದಲಿಲ್ಲದ, ಈ ಲೇಖನವನ್ನು ಬರೆಯುವ ವೇಳೆ ಉಕ್ರೇನ್ ಮೇಲೆರಗುತ್ತಿರುವ ಅಸಂಖ್ಯ ಮಿಸೆಲ್ ಗಳ ರೂಪದಲ್ಲಿ ನನ್ನ ಮನಸ್ಸನ್ನು ಘಾಸಿಗೊಳಿಸುತ್ತಿರುವ, ಪುಂಖಾನುಪುಂಖ ಸವಾಲುಗಳಿಗೆ ಮಲ್ಲಣ್ಣನಂತಹ ಸುಪುತ್ರನ ನೆನಪು ಸೂಕ್ತವಾದ ಉತ್ತರರೂಪದಲ್ಲಿ ನಿಲ್ಲುತ್ತಲೇ, ತಂಗಾಳಿಯ ತಂಪನ್ನು ರಾಚುತ್ತದೆ, ಬೆಳದಿಂಗಳ ಶೀತಲತೆಯನ್ನು ಪ್ರಧಾನ ಮಾಡುತ್ತದೆ, ಮುಂಗಾರಿನ ಮೊದಲನೆಯ ಮಳೆಯ ತುಂತರು ಹನಿಗಳೊಟ್ಟಿಗೆ ನಾಕವನ್ನು ಸೀಳಿ ಒಳತೂರುವ ಮಣ್ಣಿನ ಆಹ್ಲಾದತೆಯ ಪರಿಚಯ ಮಾಡಿಕೊಡುತ್ತದೆ, ಬಿರುಬಿಸಿಲಿನ ಮರಳುಗಾಡಿನ ಓಯಸಿಸ್ ಎನ್ನಿಸುತ್ತದೆ, ಕಾರ್ಮೊಡಗಳ ಅಂಚಿನ ಬೆಳ್ಳಿಗೆರೆಯಾಗಿ ಅಭಯ ನೀಡುತ್ತದೆ, ಮಳೆಗೆ ರೆಕ್ಕೆ ಬಿಚ್ಚಿ ನಿಂತು ನೃತ್ಯಗೈಯುವ ಮಯೂರ ದರ್ಶನದ ಹರ್ಷದ ಅನುಭೂತಿಗೆ ಕಾರಣವಾಗುತ್ತದೆ. ನಾನು ಪಿಯುಸಿಯಲ್ಲಿರುವಾಗ ಓದಿದ ಇಂಗ್ಲಿಷ್ ಪಠ್ಯವೊಂದರ ಸಾಲುಗಳು ನನ್ನನ್ನು ಯಾವಾಗಲೂ ಕೆಣಕುತ್ತವೆ. “ಯಾರ ಜನ್ಮ ಸಾರ್ಥಕ?” ಎಂದು ಕೇಳುವ ಲೇಖಕ ಮುಂದುವರೆದು ತಾನು ಹುಟ್ಟಿದ ಪರಿಸರವನ್ನು, ತಾನು ಹುಟ್ಟಿದಾಗ ಇರುವ ಸ್ಥಿತಿಗಿಂತ ಮರಣಿಸುವ ಹೊತ್ತಿನಲ್ಲಿ ಉತ್ತಮ ಸ್ಥಿತಿಯಲ್ಲಿ ಬಿಟ್ಟು ಹೋಗುವ ವ್ಯಕ್ತಿಯದು ಶ್ರೇಷ್ಠ, ಸಾರ್ಥಕ ಬದುಕು” ಎನ್ನುತ್ತಾನೆ. ಇಲ್ಲಿನ ಕವಿಯ ಪರಿಸರಪ್ರಜ್ಞೆ ಮನುಷ್ಯನ ಹುಟ್ಟಿದ ಮನೆ, ಜನ್ಮ ಕೊಟ್ಟ ತಂದೆತಾಯಿಯರು, ರಕ್ತ ಹಂಚಿಕೊಂಡು ಬೆಳೆದ ಅಣ್ಣತಮ್ಮಂದಿರು, ಅಕ್ಕತಂಗಿಯರು, ಸಂಬಂಧಿಗಳು, ಅಕ್ಕಪಕ್ಕದವರು, ಹುಟ್ಟಿದ ಊರು, ಬೆಳೆದ ಪರಿಸರ, ಓದಿದ ಶಾಲೆ, ಅಕ್ಷರ ಕಲಿಸಿದ ಗುರುಗಳು, ತನ್ನ ರಾಜ್ಯ, ದೇಶಗಳ ಎಲ್ಲೆಯನ್ನೂ ಮೀರಿದಂತೆ ಬ್ರಹ್ಮಾಂಡದ ಅನಂತಾನಂತವನ್ನೂ ತನ್ನೊಳಗೆ ಸಮೀಕರಿಸಿಕೊಳ್ಳುವಂತಹುದು. ಜಗತ್ತಿನ ಕಲ್ಯಾಣಕ್ಕೆ ಕೆಲವೇ ವ್ಯಕ್ತಿವಿಶೇಷಗಳನ್ನು ಆಯ್ಕೆ ಮಾಡಿಕೊಂಡಂತೆ ತೋರಿಬರುವ ಮುಕ್ಕಣ್ಣ ತನ್ನ ತಕ್ಷಣದ ಪರಿಸರವನ್ನು ಸುಧಾರಿಸುವ ಎಡೆಯಲ್ಲಿ ದುಡಿಯುವ ಶಕ್ತಿಯನ್ನು ಎಲ್ಲಾ ಜೀವಿಗಳಲ್ಲಿಯೂ ಪರ್ಯಾಪ್ತ ಮಟ್ಟದಲ್ಲಿ ತುಂಬಿರುತ್ತಾನೆ. ಹಾಗಾಗಿ ಸಮಾಜದಸೇವೆ ಮಾಡುವ, ಜಂಗಮಕ್ಕೆ ಅರ್ಪಿತವಾಗುವ ಯೋಗದಿಂದ ವಂಚಿತರಾಗುವ ಹೊತ್ತು, ತನ್ನ ಮನೆಮಂದಿಯನ್ನು ಉದ್ಧರಿಸುವ ಕಾಯಕದಿಂದ ಆ ಪರಮಾತ್ಮನೂ ನಮ್ಮನ್ನು ವಿಮುಖಗೊಳಿಸಲಾರ. ವಸ್ತುಸ್ಥಿತಿ ಹೀಗಿರುವಾಗ ತನ್ನ ಮನೆಯನ್ನು, ಮನೆಮಂದಿಯನ್ನು ತಾನು ಹುಟ್ಟಿದಾಗ ಅವರು ಇದ್ದ ಮಟ್ಟಕ್ಕಿಂತಹ ಹೆಚ್ಚಿನ ಮಟ್ಟದಲ್ಲಿ ತಾನು ಕಣ್ಮುಚ್ಚುವ ವೇಳೆಗೆ ಬಿಟ್ಟು ಹೋಗದೇ ಇದ್ದರೆ ಅಂತಹ ಜನ್ಮ ವ್ಯರ್ಥವಲ್ಲದೆ ಸಾರ್ಥಕತೆಯ ಮುಖವಾಡವನ್ನು ಹೇಗೆ ಧರಿಸೀತು?

ಮೇಲಿನ ಅರ್ಥದಲ್ಲಿ ಮಲ್ಲಣ್ಣನ ಬದುಕಿನ ವಿಮರ್ಶೆಗೆ ಇಳಿದಾಗ ನಮಗೆ ಆತನ ಸಾರ್ಥಕ ಬದುಕಿನ ಅನೇಕ ಮುಖಗಳು ಮುಖಾಮುಖಿಯಾಗುತ್ತವೆ. ಮಲ್ಲಣ್ಣ ಎದುರಿಸಬೇಕಾಗಿ ಬಂದ ಸವಾಲುಗಳು, ಅವುಗಳಿಗೆ ಆತನೇ ಹುಡುಕಿದ ಪರಿಹಾರಗಳು, ತನ್ನ ಮನೆಯನ್ನು ಶತಾಯಗತಾಯ ಉದ್ದಾರ ಮಾಡಬೇಕು ಎಂದು ಆತ ಹಿಡಿದ ಹಠ, ಗುಡ್ಡದ ಮಲ್ಲಪ್ಪನ ಅಪರಂಪಾರ ಅನುಗ್ರಹದ ಕಾರಣ ಅಂದುಕೊಂಡಿದ್ದನ್ನೆಲ್ಲವನ್ನೂ ಸಾಧಿಸಿದ್ದು ಪವಾಡ ಸದೃಶ್ಯ ರೀತಿಯಲ್ಲಿ ಕಣ್ಣ ಮುಂದೆ ಕಟ್ಟುತ್ತದೆ. ಮನೆಯಲ್ಲಿ ಹಿರಿಯನಾದ ಮಲ್ಲಣ್ಣ ತಾನು ಒಂದು ಅನುಕೂಲಸ್ಥ ಕೆಲಸವನ್ನು ಅರಸಿದ ನಂತರ ಸ್ವಾರ್ಥಿಯಾಗಿ ತನ್ನ ಒಡಹುಟ್ಟಿದವರನ್ನು ಅವರ ಪಾಡಿಗೆ ಅವರನ್ನು ಬಿಡುವ ಮುಖೇನ ತನ್ನ ಪಾಡಿಗೆ ತಾನು ಆರಾಮವಾದ ಬದುಕನ್ನು ಕಟ್ಟಿಕೊಳ್ಳಬಹುದಿತ್ತು. ಆದರೆ ಮನೆಯ ಶ್ರೇಯಸ್ಸಿಗೆ, ಮನೆಯವರ ಕಲ್ಯಾಣಕ್ಕೆ ಕಟೀಬದ್ದನಾಗಿ, ಕಂಕಣ ಕಟ್ಟಿ ನಿಂತ ಮಲ್ಲಣ್ಣ ತನ್ನ ಒಡಹುಟ್ಟಿದವರ ಏಳಿಗೆಗಾಗಿ ಗಾಣದ ಎತ್ತಿನಂತೆ ಜೀವನವಿಡೀ ಅವರ ಚಿಂತೆಯ ಎಣ್ಣೆಯ ಕೊಪ್ಪರಿಗೆಗೆ ತನ್ನ ಶ್ರಮದ ತೈಲವನ್ನು ಸುರಿಯುತ್ತಲೇ ಸಾಗಿದವನು. ಒಂದಾದ ಮೇಲೆ ಒಂದರಂತೆ ಬಂದೆರಗುತ್ತಿದ್ದ ಜವಾಬ್ದಾರಿಗಳೆಂಬ ಘನಭಾರಗಳನ್ನು ಸಲೀಸಾಗಿ ಎತ್ತಿ, ಹೊತ್ತು “ಗಾಣಯಾತ್ರೆ”ಯನ್ನು ಮುಂದುವರೆಸಿದವನು. ತಾಳ್ಮೆಯ ಪ್ರತಿರೂಪವಾದ ಮಲ್ಲಣ್ಣ ಎಂದೂ ದುಡುಕದೆ, ಸಿಟ್ಟಿಗೆ ಮತಿಯನ್ನು ಅರ್ಪಿಸದೆ, ತಣ್ಣನೆಯ ಮನಸ್ಸಿನಿಂದ ತನ್ನ ಕಾಯಕದ ಜ್ಯೋತಿಯನ್ನು ಅಹೋರಾತ್ರಿ ಆರದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಲೇ ಕುಳಿತು ರಾತ್ರಿಯ ಅಂಧಕಾರವನ್ನು ಉಷೆಯ ಹೊಂಗಿರಣದ ಮುಂಜಾವನ್ನಾಗಿಸಿದವನು. ತಮ್ಮಂದಿರ ಪ್ರಗತಿಯ ಪ್ರತಿಯೊಂದು ಮೆಟ್ಟಿಲನ್ನೂ ತಾನೇ ನಿರ್ಮಿಸಿ, ಆ ಮೆಟ್ಟಿಲುಗಳನ್ನು ಅವರು ಯಶಸ್ವಿಯಾಗಿ ಎತ್ತಿ ಸಾಗುವುದನ್ನು ನೋಡಿ, ಅಗತ್ಯ ಬಿದ್ದಾಗ ಅವರನ್ನು ಹಿಡಿದೇ ಮೆಟ್ಟಿಲುಗಳ ಆರೋಹಣವನ್ನು ಮಾಡಿಸುತ್ತಾ, ಅವರ ಗಮ್ಯದತ್ತ ತನ್ನ ಚಿತ್ತಭಿತ್ತಿಯನ್ನು ನೆಟ್ಟವನು. ರಕ್ತ ಹಂಚಿಕೊಂಡವರಿಗೆ ಮಾತೃಸಮಾನವಾದ ಪ್ರೀತಿ, ವಿಶ್ವಾಸ, ಪ್ರೇಮಗಳನ್ನು ಮೊಗೆಮೊಗೆದು ನೀಡಿದವನು. ಕೇವಲ ತಮ್ಮಂದಿರ ಯೋಗಕ್ಷೇಮದ ಜವಾಬ್ದಾರಿಯಷ್ಟೇ ಅಲ್ಲದೆ ತಂಗಿಯರ ಯೋಗಕ್ಷೇಮವನ್ನೂ ಭಲೇಭಾತಿ ಸಂಪನ್ನಗೊಳಿಸಿದವನು. ತಂದೆತಾಯಿಗಳಿಗೆ, ಅವರು ಜೀವಂತವಿದ್ದಾಗ, ಬಹುದೊಡ್ಡ ಆಸರೆಯಾಗಿದ್ದವನು, ದೂರದ ಬೆಂಗಳೂರಿನಲ್ಲಿದ್ದುಕೊಂಡೇ ಸಕಲ ಮನೆವಾರ್ತೆಯ ಮೇಲೂ ಅಹರ್ನಿಶಿ ನಿಗಾ ಇಟ್ಟವನು, ತನ್ನ ಮನೆಯ ಸದಸ್ಯರ ಉದ್ಧಾರದ ಸಲುವಾಗಿ ಎಂತಹ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಲು ರವಷ್ಟೂ ಹಿಂದೆಮುಂದೆ ನೋಡದವನು, ತನ್ನೆಲ್ಲಾ ಸಾಧನೆಯನ್ನು ಬೆಟ್ಟದ ಮಲ್ಲಪ್ಪನ ಮಡಿಲಿಗೆ ಹಾಕಿ, “ಆತ ಕೊಡಮಾಡಿದ ಶಕ್ತಿಯ ಅನುಸಾರ ಕೆಲಸ ಮಾಡಿದ್ದೇನೆ, ಅಷ್ಟೇ” ಎನ್ನುವ ನೆಮ್ಮದಿಯ ಶ್ವಾಸವನ್ನಷ್ಟೆ ತನ್ನ .ಪಾಲಾಗಿಸಿಕೊಂಡವನು, ಇಡೀ ಕುಲಕ್ಕೆ ಮಹಾವೃಕ್ಷರೂಪದ ನೆರಳನ್ನೂ, ನೆಮ್ಮದಿಯ ವಾಸ್ತವ್ಯವನ್ನೂ ನೆಲೆಗೊಳಿಸಿದವನು.

ಇಂದು ಮಲ್ಲಣ್ಣ ಹುಟ್ಟಿ ಬೆಳೆದ ಮನೆ ಆತನ ಆರಾಧ್ಯದೈವ ಬೆಟ್ಟದ ಮಲ್ಲಪ್ಪನ ಗುಡಿಯ ರೂಪದಲ್ಲಿ ಊರಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ಸುಮಾರು ಒಂದು ದಶಕದ ಹಿಂದಿನವರೆಗೂ, ಊರಮನೆಯಲ್ಲಿ ಒಂಟಿಯಾಗಿಯೇ ವಾಸವಿದ್ದ, ಮಲ್ಲಣ್ಣನ ತಾಯಿ ಸ್ವರ್ಗಸ್ಥಳಾದ ನಂತರ ಊರಮನೆಯನ್ನು, ತಮ್ಮಂದಿರ ಜೊತೆಗಿನ ಸಮಾಲೋಚನೆಯ ನಂತರ, ಕುಲದೇವತೆಯ ದೇವಸ್ಥಾನವನ್ನಾಗಿ ಪರಿವರ್ತಿಸಿದವನು ಮಲ್ಲಣ್ಣನೇ. ಕುಲದೇವರ ನಿತ್ಯಪೂಜೆಗೆ ಅನುವು ಮಾಡಿಕೊಡುವ ಮೂಲಕ ಊರ ಜನರಲ್ಲಿ ಆಧ್ಯಾತ್ಮಿಕತೆಯನ್ನು ಬಿತ್ತಿದವನು, ತನ್ನ ಕುಟುಂಬದ ಶ್ರೇಯದಲ್ಲಿ ಸಮಾಜದ ಪಾಲೂ ಇದೆ ಎನ್ನುವ ಅಚಲ ನಂಬಿಕೆಯ ದ್ಯೋತಕವೋ ಎನ್ನುವಂತೆ ಜಂಗಮಕ್ಕೆ ಮಂದಿರವನ್ನು ಅರ್ಪಿಸುವ ಮೂಲಕ “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಕೃತಾರ್ಥವಾದವನು. ತನ್ನ ಸೀಮಿತ ಜೀವನಾವಧಿಯಲ್ಲಿ ಊರ ಸರಿಕರ ಪೈಕಿ ಯಾರೂ ಊಹಿಸದ ಮಟ್ಟದ ಔನ್ನತ್ಯಕ್ಕೆ ತನ್ನ ಕುಟುಂಬವನ್ನು ತಂದು ನಿಲ್ಲಿಸಿದವನು. ಮಲ್ಲಣ್ಣ ನಿಜ ಅರ್ಥದಲ್ಲಿ ಕುಲ ದೀಪಕನಾದವನು, ವಂಶೋದ್ಧಾರಕ ಎನ್ನುವ ಉಪಮೆಗೆ ನೂರಕ್ಕೆ ನೂರರಷ್ಟು ಹೊಂದುವವನು, ಮನೆತನದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದವನು. ಮುಗಿಲಿನಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿರುವ ಪಟದ ಸೊಬಗನ್ನು ನೆಲದ ಮೇಲೇ ನಿಂತು ಗಗನಕ್ಕೆ ಕಣ್ಣಾಗಿ ಆಸ್ವಾದಿಸಿದವನು. “ಪತಾಕೆ ಮತ್ತಷ್ಟು ಮೇಲೇರಲಿ” ಎನ್ನುವ ಆಶೆಯನ್ನು ತನ್ನ ಎದೆಗೂಡಿನಲ್ಲಿ ಯಾವತ್ತೂ ಭದ್ರವಾಗಿ ಅವಿತಿಸಿಟ್ಟುಕೊಂಡವನು.

ತನ್ನ ಕುಲವನ್ನು ಉದ್ಧರಿಸಿದ ಮಲ್ಲಣ್ಣ ನಮ್ಮ ಊರಿನ ಮಟ್ಟದಲ್ಲಿ ಏಕಾಂಗಿಯೇ? ಮಲ್ಲಣ್ಣನ ಸಾಧನೆಯನ್ನು ಸರಿಗಟ್ಟುವ ಪ್ರಭೂತಿಗಳು ನಮ್ಮ ಊರಿನಲ್ಲಿಯೇ ಇಲ್ಲವೇ? ಇದ್ದಾರೆ, ಖಂಡಿತಾ ಮಲ್ಲಣ್ಣನನ್ನು ಸರಿಗಟ್ಟುವ ಮಟ್ಟಕ್ಕೆ ತಂತಮ್ಮ ಸಂಸಾರಗಳನ್ನು ಊರ್ಧ್ವಮುಖಿಯಾಗಿಸಿದ ಹಲವು ಬೇರೆ ವ್ಯಕ್ತಿವಿಶೇಷಗಳೂ ನಮ್ಮ ಮಧ್ಯೆ ಇದ್ದು ಊರಿಗೆ ಕಲಶಪ್ರಾಯರಾಗಿದ್ದಾರೆ. ಆಶ್ಚರ್ಯವೆಂಬಂತೆ ಇದರಲ್ಲಿ ಮಹಿಳಾಮಣಿಗಳೂ ಶಾಮೀಲಾಗಿದ್ದಾರೆ. ಇಂತಹವರ ಜೀವನ ಸಾಧನೆಗಳನ್ನು ಒಕ್ಕಣಿಸುತ್ತಾ ಹೋಗುವುದೇ ನನಗೆ ಅತಿಹೆಚ್ಚಿನ ಮಟ್ಟದ ಆತ್ಮರತಿಯನ್ನು ನೀಡುವಂತಹುದು. ಇಂತಹ ಹತ್ತಾರು ಪವಿತ್ರಾತ್ಮರ ಬಗ್ಗೆ ಸಮಯ ಸಿಕ್ಕಾಗ ಬರೆಯುವ ಮನದಿಂಗಿತದೊಂದಿಗೆ ಈ ವಾರದ ಅಂಕಣಕ್ಕೆ ತಾತ್ಕಾಲಿಕ ವಿರಾಮ ಹಾಕುತ್ತಿದ್ದೇನೆ.

 

Girl in a jacket
error: Content is protected !!