ಲಚ್ಚಕ್ಕನ ನಿಸ್ವಾರ್ಥ ಸೇವಾಮನೋಭಾವದ ಮಾದರಿ ಗುಣಗಳು…
ರವಿವಾರದ ದಿನ ಬೆಳಿಗ್ಗೆ ಮನೆಯ ಮಧ್ಯದ ಹಾಲಿನಲ್ಲಿ ಕುಳಿತು, ಅದೇ ತಾನೆ ಏಕಾಂತಪ್ಪ ಮೇಷ್ಟ್ರ ಮಗ ಪೇಪರ್ ಏಜೆಂಟ್ ಉಮ್ಮಣ್ಣನನ್ನು ಕಾಡಿಬೇಡಿ ಎರುವಲು ಆಧಾರದ ಮೇಲೆ ಪಡೆದು ತಂದಿದ್ದ “ಚಂದಮಾಮ” ಮಾಸಿಕಪತ್ರಿಕೆಯನ್ನು ಓದುತ್ತಿದ್ದವನಿಗೆ, ಪಕ್ಕದ ಪಳತದ ರೂಮಿನಿಂದ ತೂರಿಬಂದ ಮಕ್ಕಳ ಕಿರುಚಾಟದಿಂದ, ಮುಂದಿನ ಒಂದು ಗಂಟೆಯೊಳಗಾಗಿ ಚಂದಮಾಮನನ್ನು ಹಿಂತಿರುಗಿಸಬೇಕಾದ ಸಮಯಾಭಾವದ ಅನಿವಾರ್ಯತೆಗೆ ಸಿಲುಕಿ ಏಕಾಗ್ರಚಿತ್ರದಿಂದ ಪತ್ರಿಕೆಯ ಗಂಭೀರ ಅಧ್ಯಯನದಲ್ಲಿ ತೊಡಗಿದ್ದವನಿಗೆ, ಭಂಗ ಉಂಟಾಗಲು, ಮೂಟೆಯಷ್ಟು ಅಸಮಾಧಾನವನ್ನು ಮನಸ್ಸಿನಲ್ಲಿ ಹೊತ್ತುಕೊಂಡೇ, ನನ್ನ ಸ್ಥಾನದಿಂದ ಎದ್ದು ಶಬ್ದ ಬಂದೆಡೆಗೆ ಧಾವಿಸಿದೆ. ಪ್ರತೀ ರಜಾದಿನಗಳ ಹಾಗೆ ಅಂದೂ ಬೆಳ್ಳಂಬೆಳಿಗ್ಗೆಯೇ ನಮ್ಮ ಮನೆಯಲ್ಲಿ ಹುಡುಗಿಯರ ಸಮಾವೇಶವಾಗಿತ್ತು. ವಯಸ್ಸಿನಲ್ಲಿ ಎಲ್ಲರಿಗಿಂತ ಹಿರಿಯಳಾದ ನನ್ನ ತಂಗಿ ಜಯಲಕ್ಷ್ಮಿ, ಅವಳಿಗಿಂತ ಮೂರೋ ನಾಲ್ಕೋ ತಿಂಗಳು ಚಿಕ್ಕವಳಾದ ನನ್ನ ಸೋದರಸಂಬಂಧಿ ಮಹಾಂತೇಶನ ತಂಗಿ ವೇದಾವತಿ, ಎಲ್ಲರಿಗಿಂತ ಚಿಕ್ಕವಳಾದ, ನನ್ನ ತಂಗಿಗಿಂತಲೂ ವಯಸ್ಸಿನಲ್ಲಿ ಸುಮಾರು ಒಂದು ವರ್ಷ ಕಿರಿಯಳಾದ, ನನ್ನ ಸೋದರತ್ತೆ ಮಗಳು ಅನ್ನಪೂರ್ಣ, ನನ್ನ ತಂಗಿಯ ಸ್ನೇಹಿತೆ ಪೊಲೀಸ್ ರಾಮರೆಡ್ಡಿ ಮಗಳು ಸುನಂದ, ಮತ್ತೊಬ್ಬ ಸ್ನೇಹಿತೆ ನರ್ಸ್ ಗೀತಾಬಾಯಿಯ ಮಗಳು ಭಾಗ್ಯಳೂ ಸೇರಿ ನಾನು ತಟ್ಟನೇ ಗುರುತಿಸಲಾರದ ಇನ್ನೂ ಎರಡು ಮೂರು ಸ್ನೇಹಿತರೂ ಸಮ್ಮಿಳಿತವಾದಂತೆ ಸುಮಾರು ಎಂಟತ್ತು ಜನ ಗೆಳತಿಯರು ಯಾವುದೋ ವಿಷಯಕ್ಕಾಗಿ ಪರಸ್ಪರ ಕೂಗಾಡುತ್ತಾ ಏರಿದ ಧ್ವನಿಯಲ್ಲಿ ಜಗಳವಾಡುತ್ತಿದ್ದರು.
ಪಳತದ ರೂಮಿನ ಬಾಗಿಲಲ್ಲಿ ನಿಂತು ಇದನ್ನೆಲ್ಲಾ ಗ್ರಹಿಸಿದ ನಾನು ಹುಡುಗಿಯರನ್ನು ಗದರಿಸಿ ಕೋಣೆಯಿಂದ ಹೊರಗೆ ಅಟ್ಟಬೇಕೆಂದು ಕೊಂಡವನು, ತಟ್ಟನೇ ಅವ್ವನ ನೆನಪಾಗಲು, ಬಾಲ ಮುದುರಿಕೊಂಡ ನಾಯಿಯಂತೆ ಮತ್ತೆ ನನ್ನ ಸ್ವಸ್ಥಾನವನ್ನು ಸೇರಿದೆ. ಈ ಹುಡುಗಿಯರಿಗೆ ಅವ್ವನ ಧಾರಾಳವಾದ ಕೃಪಾಕಟಾಕ್ಷದ ಆಸರೆಯಿತ್ತು. ಹಿಂದೆ ಒಂದೆರೆಡು ಬಾರಿ ಇದೇ ರೀತಿ ರಂಪು ಮಾಡುತ್ತಿದ್ದ ಹುಡುಗಿಯರನ್ನು ಸುಮ್ಮನಿರುವಂತೆ ಗದರಿಕೊಂಡ ಪರಿಣಾಮವಾಗಿ ಕಣ್ಣೀರಕೋಡಿಯನ್ನು ಹರಿಸಿದ್ದ ಈ ಚಂಡಿಯರು, ಅವ್ವನ ಬಳಿ ನನ್ನ ಬಗ್ಗೆ ಉದ್ದವಾದ ದೂರನ್ನೇ ನೀಡಿದ್ದರು. ಈ ಬಗ್ಗೆ ನನ್ನನ್ನು ಕರೆದು, ಸುದೀರ್ಘ ವಿಚಾರಣೆಯ ನಂತರ, ಉಗಿದು ಉಪ್ಪಿನಕಾಯಿ ಹಾಕಿ ನನ್ನನ್ನು ಅಟ್ಟಿದ್ದ ಅವ್ವ ಇನ್ನೆಂದೂ ನಾನು ಹುಡುಗಿಯರ ತಂಟೆಗೆ ಹೋಗದಂತೆ ಬಲವಾದ ತಾಕೀತು ಮಾಡಿದ್ದರು. “ಹೆಣ್ಣುಹುಡುಗಿಯರ ಗಲಾಟೆಯಿಂದ ನಿನಗೆ ತೊಂದರೆಯಾಗುತ್ತಿದೆ ಅನ್ನಿಸಿದರೆ ನೀನು ಬೇರೆ ಕಡೆ ಕುಳಿತು ಓದು, ಅವರ ತಂಟೆಗೆ ಹೋದರೆ ಮಾತ್ರ ನಿನ್ನ ಗ್ರಹಚಾರ ನೆಟ್ಟಗಿರುವುದಿಲ್ಲ. ಹುಡುಗಿಯರನ್ನು ಈ ಪಾಟಿ ಗದರುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಹುಡುಗಿಯರ ಎದುರೇ ನನ್ನನ್ನು ಅವ್ವ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು ಮಂಗಳಾರತಿ ಎತ್ತುತ್ತಿದ್ದರೆ ಹುಡುಗಿಯರ ಕಣ್ಣೀರು ನಸುನಗೆಯಾಗಿ ಪರಿವರ್ತಿತವಾಗುತ್ತಾ ನಡೆದಿತ್ತು. ಅವ್ವ ನನ್ನ ಮಾನ ಮರ್ಯಾದೆಯನ್ನು ಹುಡುಗಿಯರ ಮುಂದೆ ಈ ಪಾಟಿ ಹರಾಜು ಹಾಕಲು ಅವರೆಲ್ಲರಿಗಿಂತ ವಯಸ್ಸಿನಲ್ಲಿ ಮೂರ್ನಾಲ್ಕು ವರ್ಷ ದೊಡ್ಡವನಾದ ನಾನು ಅವರನ್ನು ಇಲ್ಲಿಯವರೆಗೆ ದರ್ಪದಿಂದ ನಡೆಸಿಕೊಳ್ಳುತ್ತಿದ್ದ ರೀತಿರಿವಾಜುಗಳಿಗೆ ಒಂದು ರೀತಿಯ ಶಾಶ್ವತ ಕಡಿವಾಣ ಬಿದ್ದಂತಾಗಿತ್ತು. “ಪ್ರಕಾಶಣ್ಣ, ಪ್ರಕಾಶಣ್ಣ” ಎಂದು ನನಗೆ ಅತಿಯಾದ ಭಯ, ಭಕ್ತಿ, ಗೌರವಗಳನ್ನು ಸಂದಾಯ ಮಾಡುತ್ತಿದ್ದ ಹುಡುಗಿಯರ ಗುಂಪು ಈ ಪ್ರಹಸನದ ನಂತರ ನನ್ನನ್ನು ಅಸಡ್ಡೆಯಿಂದ ಕಾಣಲಾರಂಭಿಸಿತು. ಮೇಲಿನ ಅಹಿತಕರ ಘಟನೆ ನಡೆಯುವ ಪೂರ್ವದಲ್ಲಿ ನಾನು ಅವರು ಕುಳಿತಲ್ಲಿಗೆ ಸುಳಿದರೆ ಸಾಕು, ತಾವು ಮಾಡುತ್ತಿದ್ದ ಗಲಾಟೆಗೆ ತಾತ್ಕಾಲಿಕ ವಿರಾಮ ಹೇಳಿ, ಮೌನದ ಮೊರೆ ಹೋಗುತ್ತಿದ್ದ ಹುಡುಗಿಯರ ಗುಂಪು, ಮೇಲಿನ ಘಟನೆಯಾದ ಬಳಿಕ ನಾನು ಅವರ ಹಿಂಡಿನ ಮಧ್ಯೆ ನುಸುಳಿ ಹೋಗಿ ನಿಂತರೂ, “ಕ್ಯಾರೆ” ಎನ್ನುತ್ತಿರಲಿಲ್ಲ. ಈ ಬಾರಿ ಕೋಣೆಯ ಬಾಗಿಲಿನಲ್ಲಿಯೇ ನಿಂತು “ನಾನು ಬಂದ ದಾರಿಗೆ ಸುಂಕವಿಲ್ಲ” ಎಂಬಂತೆ ನನ್ನ ಜಾಗಕ್ಕೆ ವಾಪಸಾದ ಕಾರಣದ ಹಿನ್ನೆಲೆ ಮೇಲಿನ ಪ್ರಸಂಗದ ಮಾಸದ ನೆನಪು ನನ್ನ ತಲೆಯಲ್ಲಿ ಅಚ್ಹೊತ್ತಿದ್ದೇ ಆಗಿತ್ತು ಅನ್ನಿಸುತ್ತದೆ.
ನನ್ನ ಜಾಗಕ್ಕೆ ಬಂದು, ಅರ್ಧದಲ್ಲಿಯೇ ಬಿಟ್ಟಿದ್ದ ಓದನ್ನು ಮುಂದುವರೆಸಿ ಒಂದು ಐದು ನಿಮಿಷವಾಗಿರಬೇಕು ಅಷ್ಟೆ, ಮುಂದುವರೆಯುತ್ತಲೇ ಸಾಗಿದ್ದ ಹುಡುಗಿಯರ ಗುಂಪಿನ ಜಗಳ ತಾರಕ್ಕೇರಿದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ಇದರಿಂದ ನನಗೇನಾಗಬೇಕಿದೆ? ಎನ್ನುವ ನಿರ್ಲಿಪ್ತಭಾವದಿಂದ ಚಂದಮಾಮದ ರೋಮಾಂಚಕ ಘಟ್ಟ ತಲುಪಿದ ವಿಕ್ರಮ- ಬೇತಾಳದ ಕಥೆಯ ಓದುವಿಕೆಯನ್ನು ಮುಂದುವರೆಸಿದ ನಾನು ಪಳತದ ಕೋಣೆಯಿಂದ ಅವ್ಯಾಹತವಾಗಿ ಕೇಳಿಬರುತ್ತಿದ್ದ ಗದ್ದಲವನ್ನು ಸಹಿಸಿಕೊಳ್ಳಲಾರದೆ, ಮತ್ತೆ ಅಪ್ರಯತ್ನಪೂರ್ವಕವಾಗಿ ರೂಮಿನತ್ತ ನಡೆದೆ. ಕೆಲವೇ ನಿಮಿಷಗಳ ಹಿಂದೆ ಕೇವಲ ಬಾಯಿ ಮಾತಿನ ಜಗಳದಲ್ಲಿ ತೃಪ್ತಿಯನ್ನು ಕಂಡುಕೊಂಡಂತ್ತಿದ್ದ ಮಾರಿಯರು ಈಗ ತಮ್ಮ ಜಗಳದ ಚರಮಸೀಮೆಯನ್ನು ಪ್ರವೇಶಿಸಿದ್ದರು. ಒಬ್ಬರಿಗೊಬ್ಬರು ಪರಸ್ಪರರ ತಲೆಗೂದಲನ್ನು ಹಿಡಿದು ಎಳೆಯುತ್ತಾ, ಜಗ್ಗುತ್ತಾ, ಕೀಳುತ್ತಾ ತಮ್ಮ ಜಂಗೀಕುಸ್ತಿಯನ್ನು ಮುಂದುವರೆಸಿದ್ದರು. ಕಣ್ಣು, ಮುಖ, ಮೂಗು, ಕಿವಿ, ಕೈ, ಮೈ, ಬಟ್ಟೆಬರೆ ಹೀಗೆ ಎಲ್ಲೆಂದರಲ್ಲಿ, ಸಿಕ್ಕ ಕಡೆಗಳಲ್ಲೆಲ್ಲಾ ಉಗುರುಗಳಿಂದ ಪರಚಾಡುತ್ತಾ ಪ್ರತೀ ಹುಡುಗಿಯೂ ದುರ್ಗದ ಒನಕೆ ಓಬವ್ವನನ್ನು ಮೈಮೇಲೆ ಆಹ್ವಾನಿಸಿದವಳಂತೆ ವೀರಾವೇಶಭರಿತಳಾಗಿ ತನ್ನ ಕಾದಾಟಕ್ಕೆ ಅಂತಿಮ ರೂಪುರೇಷೆಗಳನ್ನು ಕೊಡುವ ತಂತಮ್ಮ ಅಪ್ರತಿಮ ಸಾಹಸಪೂರ್ಣ ಕಲೆಯ ಮುಕ್ತ ಪ್ರದರ್ಶನಕ್ಕೆ ಮುಂದಾಗಿದ್ದಳು. ಈ ಘಟನೆಗೆ ಮೂಕಪ್ರೇಕ್ಷಕನಾದ ನನಗೆ ಉಭಯಸಂಕಟ ಮೊದಲಿಟ್ಟಿತು. ಹುಡುಗಿಯರ ಕದನದ ಮಧ್ಯೆ ಪ್ರವೇಶಿಸಿದರೆ ಮತ್ತೆಲ್ಲಿ ಅವ್ವನಿಂದ ಉಗಿಸಿಕೊಳ್ಳಬೇಕಾದೀತೋ ಎನ್ನುವ ಭಯ ಒಂದೆಡೆಯಾದರೆ, ಹುಡುಗಿಯರನ್ನು ಹೀಗೇ ತಮ್ಮ ಶಕ್ತ್ಯಾನುಸಾರ ಕಿತ್ತಾಡಲು ಬಿಟ್ಟು ನೋಡುತ್ತಾ ನಿಂತಲ್ಲಿ ಯಾರಿಗಾದರೂ ಆಗಬಾರದ್ದು ಆಗಿ ಹೋದರೆ ಹೇಗೆ? ಎನ್ನುವ ಆತಂಕ ಮತ್ತೊಂದೆಡೆಗೆ ನನ್ನನ್ನು ಬಾಧಿಸತೊಡಗಿತ್ತು. ಅವ್ವ ಈಗ ಒಂದರ್ಧ ಗಂಟೆಯ ಮೊದಲಷ್ಟೇ ಬ್ರಾಹ್ಮಣರ ಸೀತಮ್ಮನ ಹೋಟೆಲಿಗೆ ಭಾನುವಾರದ ಸ್ಪೆಷಲ್ ಇಡ್ಲಿ ತರುವ ಸಲುವಾಗಿ ಹೋಗಿದ್ದು ನೆನಪಾಗಿ ನನ್ನ ಕರ್ತವ್ಯಪ್ರಜ್ಞೆ ಜಾಗೃತವಾಗಲು, ಮನಸ್ಸು ಗಟ್ಟಿಮಾಡಿ, ಹುಡುಗಿಯರ ಗುಂಪಿನಲ್ಲಿ, ಹರಿಣಿಗಳ ಹಿಂಡಿನಲ್ಲಿ ಹೊಕ್ಕುವ ಸಿಂಹದ ಹಾಗೆ, ನುಗ್ಗಿಯೇ ಬಿಟ್ಟೆ. ಪ್ರಕಾಶಣ್ಣ ಇನ್ನು ನಮ್ಮ ತಂಟೆಗೆ ಎಂದೂ ಬರಲಾರ ಎಂದು ನಿರಾಳವಾದ ಮನಸ್ಸಿನಿಂದ ತಮ್ಮ ಕಾದಾಟದಲ್ಲಿ ನಿರತರಾಗಿದ್ದ ಹುಡುಗಿಯರು ನನ್ನ ಈ ಅಚಾನಕ್ ನಡೆಯಿಂದ ಒಂದು ಕ್ಷಣ ವಿಚಲಿತರಾದರು. ಹುಡುಗಿಯರ ಕೈಗಳನ್ನು ಗೆಳತಿಯರ ಕೂದಲುಗಳಿಂದ ಪ್ರತ್ಯೇಕಿಸಲು ಬಹಳವೆ ಹೆಣಗಾಡಿದ ನಾನು ಹತ್ತುಹದಿನೈದು ನಿಮಿಷಗಳ ಕಠಿಣಶ್ರಮದ ನಂತರ ಪರಸ್ಪರರನ್ನು ಭೌತಿಕವಾಗಿ ಬೇರ್ಪಡಿಸುವ ಕಾರ್ಯದಲ್ಲಿ ಸಿದ್ಧಿ ಸಾಧಿಸಿದೆ. ಪರಸ್ಪರರಿಂದ ದೂರವಾಗಿ, ಗಜಗಳ ದೂರದ ಅಂತರದಲ್ಲಿ ನಿಂತರೂ, ತಮ್ಮ ನಾಗರಹಾವನ್ನು ಹೋಲುವಂತಹ ಬುಸುಗುಟ್ಟುವಿಕೆಯನ್ನು ಅವಿರತವಾಗಿ ಮುಂದುವರೆಸುತ್ತಲೇ ಇದ್ದ ಹುಡುಗಿಯರ ಈ ಗುಂಪನ್ನು ಒಂದು ತಹಬಂದಿಗೆ ತರುವ ಕಾರ್ಯವನ್ನು ನಾನು ಮಾಡಲೇಬೇಕಿತ್ತು. ಈ ಬಜಾರಿಯರನ್ನು ಒಂದು ಹಂತದವರೆಗೆ ಸಮಾಧಾನಿಸಿ ಶಾಂತಗೊಳಿಸದೇ ಹೋದರೆ ನಾನು ರೂಮಿನಿಂದ ಹೊರನಡೆದ ನಂತರ ಬೂದಿ ಮುಚ್ಚಿದ ಕೆಂಡದಂತಿದ್ದ ಅವರ ಕೋಪತಾಪಗಳು ಮತ್ತೆ ತಮ್ಮ ಮುಕ್ತ ಪ್ರದರ್ಶನಕ್ಕೆ ಅಣಿಯಾಗುತ್ತವೆ ಎನ್ನುವ ವಿಷಯದಲ್ಲಿ ಯಾವ ಸಂದೇಹಗಳೂ ಈಗ ನನ್ನಲ್ಲಿ ಉಳಿದಿರಲಿಲ್ಲ.
ಈ ಸಮಯದಲ್ಲಿ ಮತ್ತೊಂದು ಸ್ವಾರ್ಥವೂ ನನ್ನಲ್ಲಿ ಹೆಡೆ ಎತ್ತಿ ಬುಸುಗುಟ್ಟ ಹತ್ತಿತ್ತು. ಅವ್ವನ ಅನುಪಸ್ಥಿತಿಯಲ್ಲಿ ಹುಡುಗಿಯರ ಜಗಳವನ್ನು ಸಮಾಪ್ತಿಗೊಳಿಸಿ, ಈ ವಿಷಯವನ್ನು ಅವ್ವನಿಗೆ ತಿಳಿಸಿ, ನಾನು ಸಾಧಿಸಿದ ಘನಕಾರ್ಯಕ್ಕೆ ಅವಳಿಂದ “ಶಹಬಾಶ್” ಸಂಪಾದಿಸಬೇಕು ಮತ್ತು ತನ್ಮೂಲಕ ಹುಡುಗಿಯರ ವಿಷಯದಲ್ಲಿ ನನ್ನನ್ನು ಸಾಕಷ್ಟು ದೂರವಿಟ್ಟಿದ್ದ ಅವ್ವನ ಮನಃಸ್ಥಿತಿಯಲ್ಲಿ ಕ್ರಾಂತಿಕಾರಕ ಪರಿವರ್ತನೆ ತರಬೇಕು ಎನ್ನುವ ಆಲೋಚನೆ ತಲೆಯಲ್ಲಿ ಮೂಡಿದ್ದೇ ತಡ, ಹುಡುಗಿಯರ ಜಗಳದ ರಾಜೀ ಸಂಧಾನವನ್ನು ಶುರು ಹಚ್ಚಿಕೊಂಡೆ. ಅನ್ನಪೂರ್ಣಳನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಆಗ ತಾನೇ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುವ ಹುಡುಗಿಯರಾಗಿದ್ದರು. ಗುಂಪಿನ ಉಳಿದ ಸದಸ್ಯೆಯರಿಗಿಂತ ವಯ್ಯಸ್ಸಿನಲ್ಲಿ ಒಂದು ವರ್ಷ ಚಿಕ್ಕವಳಾದ ಅನ್ನಪೂರ್ಣ ಮಾತ್ರ ಅದೇ ವರ್ಷ ಮೊದಲನೇ ತರಗತಿಗೆ ಕಾಲಿಟ್ಟಿದ್ದಳು. ಸುನಂದಳನ್ನು ಮೊದಲನೆಯದಾಗಿ ವಿಚಾರಿಸಲು ಪ್ರಾರಂಭಿಸಿದ ನಾನು ಯಾವ ಕಾರಣಕ್ಕಾಗಿ ಹೀಗೆ ಒಬ್ಬರಿಗೊಬ್ಬರು ಬಡಿದಾಡಿಕೊಂಡಿರಿ? ಎನ್ನುವ ಪ್ರಶ್ನೆಯನ್ನು ಆಕೆಯ ಮುಂದಿಟ್ಟೆ. ಉತ್ತರಿಸಲು ಸ್ವಲ್ಪ ತಡವರಿಸಿದಂತೆ ಕಂಡುಬಂದ ಸುನಂದಳ ಸಹಾಯಕ್ಕೆ ಬಂದ ವೃಷಭೇಂದ್ರಪ್ಪಸ್ವಾಮಿ ಮಾಸ್ತರ ಮಗಳು ಚಂದ್ರಕಲಾ (ಬೇಬಿ) “ಪ್ರಕಾಶಣ್ಣ, ನಾವು ಇವತ್ತು ಸ್ಕೂಲಿನ ಆಟವನ್ನು ಆಡಬೇಕೆಂದು ನಿರ್ಧರಿಸಿ ಒಬ್ಬೊಬ್ಬರಿಗೆ ಒಂದೊಂದು ಪಾತ್ರವನ್ನು ಹಂಚಲು ಶುರುಮಾಡಿದೆವು. ನಾನೇ ಪಾತ್ರ ಹಂಚಿಕೆಗೆ ಮೊದಲಾದೆ. ಎಲ್ಲರಿಗೂ ಒಂದೊಂದು ಪಾತ್ರವನ್ನು ಹಂಚುತ್ತಾ ಹೊರಟಾಗ ನಾನು ಕೊಟ್ಟ ರೋಲ್ ಗಳನ್ನು ದೂಸ್ರಾ ಮಾತಿಲ್ಲದೆ ಒಪ್ಪಿಕೊಂಡ ಹುಡುಗಿಯರು ಲಚ್ಚಕ್ಕನ ಪಾತ್ರವನ್ನು ಹಂಚಿಕೆ ಮಾಡುವ ಸಮಯ ಬಂದಾಗ ಮಾತ್ರ ತಕರಾರನ್ನು ಎತ್ತತೊಡಗಿದರು. ಮೊದಲು ತಾವು ಸೈ ಎಂದು ಒಪ್ಪಿದ ಪಾತ್ರಗಳನ್ನು ಬಿಟ್ಟು “ನನಗೇ ಲಚ್ಚಕ್ಕನ ಪಾತ್ರಬೇಕು” ಎನ್ನುವ ಬಲವಾದ ಹಠ ಎಲ್ಲಾ ಹುಡುಗಿಯರಿಂದಲೂ ಬಂತು.
ಎಲ್ಲರಿಗೂ ಒಂದೊಂದು ಸ್ಕೂಲಿನ ಪಾತ್ರವನ್ನು ಹಂಚಿದ ಬಳಿಕ ಉಳಿದ ಲಚ್ಚಕ್ಕನ ಪಾತ್ರವನ್ನು ನಾನು ನನಗೆಂದು ಉಳಿಸಿಕೊಂಡಿದ್ದು ಉಳಿದ ಹುಡುಗಿಯರಿಗೆ ಪಥ್ಯವಾಗಲಿಲ್ಲ. ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ದೊಡ್ಡ ರಾದ್ದಾಂತವಾಯಿತು” ಎನ್ನುವ ವಿಷಯವನ್ನು ಎಳೆಎಳೆಯಾಗಿ ನನ್ನ ಮುಂದೆ ಬಿಚ್ಚಿಡುತ್ತಾ ಸಾಗಿದಳು. ಇದನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡ ನನಗೆ ಜಗಳದ ಮೂಲಕಾರಣ ಸ್ಪಷ್ಟವಾಗುತ್ತಾ ಹೋಯಿತು. “ನಾನು ಎಲ್ಲರಿಗೂ ಪಾತ್ರಗಳನ್ನು ಹಂಚುತ್ತೇನೆ” ಎಂದು ಮುಂದಾಳತ್ವವನ್ನು ವಹಿಸಿಕೊಂಡಿದ್ದ ಐಯ್ನೋರ ಹುಡುಗಿ ಗುಂಪಿನ ಅತಿ ಪ್ರೀತಿಪಾತ್ರ ಪಾತ್ರವಾದ ಲಚ್ಚಕ್ಕನ ಪಾತ್ರವನ್ನು ತನ್ನ ಪಾಲಿಗೆ ಉಳಿಸಿಕೊಂಡಿದ್ದು ಬೇರೆ ಹುಡುಗಿಯರಿಗೆ ಇಷ್ಟವಾಗಿರಲಿಲ್ಲ. ಗುಂಪಿನ ಎಲ್ಲಾ ಹುಡುಗಿಯರೂ ಲಚ್ಚಕ್ಕನ ಪಾತ್ರಧಾರಿಗಳಾಗಬೇಕೆಂದು ಇಚ್ಚಿಸಿದ್ದುದರಿಂದ ಒಂದು ದೊಡ್ಡ ವಿವಾದವೇ ನಡೆದು ಹೋಗಿತ್ತು. ಸ್ಕೂಲಿನ ಮುಖ್ಯೋಪಾಧ್ಯಾಯಿನಿಯಾದ ಗಿಡ್ಡತಿಪ್ಪಣ್ಣನವರ ಧರ್ಮಪತ್ನಿ ಅಕ್ಕನಾಗಮ್ಮ ಮೇಡಂ ಪಾತ್ರಕ್ಕೆ ಇಲ್ಲದ ಬೇಡಿಕೆ ಲಚ್ಚಕ್ಕ ಪಾತ್ರಕ್ಕೆ ಒದಗಿ ಬಂದಿತ್ತು. ಕನ್ನಡ ಚಲನಚಿತ್ರದ ಸುವರ್ಣಯುಗದ ಐವತ್ತು, ಅರವತ್ತನೇ ದಶಕಗಳಲ್ಲಿ ವರನಟ ಅಣ್ಣಾನವರ ಪಾತ್ರಕ್ಕಿಂತ ಮಿಗಿಲಾದ ಬೇಡಿಕೆ ಹಾಸ್ಯನಟ ನರಸಿಂಹರಾಜು ಅವರ ಪಾತ್ರಕ್ಕೆ ಇದ್ದ ವಿಸಂಗತಿಯನ್ನು ಇಲ್ಲಿ ನಮ್ಮ ಮನೆಯಲ್ಲಿ ನಡೆದಿದ್ದ ಹುಡುಗಿಯರ ಗುಂಪುಗದ್ದಲ ನೆನಪು ಮಾಡಿಕೊಟ್ಟಿತ್ತು. ಹುಡುಗಿಯರ ಗುಂಪಿನ ಸಮಸ್ಯೆಗೆ ಸುಲಭದ ಪರಿಹಾರ ನನಗೂ ಆ ಹೊತ್ತಿನಲ್ಲಿ ಗೋಚರಿಸಲಿಲ್ಲ. “ಈವತ್ತು ಬೇಬಿ ಹಂಚಿದ ರೋಲ್ ಮಾಡಿರಿ, ಮುಂದಿನ ವಾರ ಸರದಿಯಂತೆ ಲಚ್ಚಕ್ಕನ ಪಾತ್ರವನ್ನು ಒಬ್ಬೊಬ್ಬರಾಗಿ ಮಾಡುತ್ತಾ ಹೋಗುವಿರಂತೆ” ಎನ್ನುವ ನನ್ನ ಖಾಜಿನ್ಯಾಯ ಹುಡುಗಿಯರ ಮೇಲೆ ನಿರೀಕ್ಷಿತ ಪರಿಣಾಮವನ್ನು ಬೀರಿದ ಹಾಗೆ ತೋರಲಿಲ್ಲ. “ಪ್ರಕಾಶಣ್ಣ, ನೀನು ಹೇಳಿದ್ದು ಸರಿ, ಆದರೆ ನಾನೇ ಇವತ್ತು ಲಚ್ಚಕ್ಕನಾಗುತ್ತೇನೆ, ಮುಂದಿನ ವಾರ ಬೇರೆ ಯಾರಾದರೂ ಲಚ್ಚಕ್ಕನಾಗಲಿ” ಎಂದು ಮುಂದೆ ಬಂದ ಗೌಡರ ಲೋಕಪ್ಪನ ಮಗಳು ಮುಕ್ತಾಯಿಯ ಅಹವಾಲನ್ನು ಕೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಬೇರೆ ಯಾವ ಹುಡುಗಿಯರೂ ಇರಲಿಲ್ಲ. “ಅಣ್ಣಾ, ಈ ಸಲ ನನ್ನನ್ನು ಲಚ್ಚಕ್ಕನನ್ನು ಮಾಡಿಬಿಡಿ, ಮುಂದಿನ ಸಲ ಬೇರೆ ಯಾರಾದರೂ ಲಚ್ಚಕ್ಕನಾಗಲಿ, ಇದಕ್ಕೆ ನನ್ನ ಅಭ್ಯಂತರವಿಲ್ಲ” ಎಂದು ಮುಂದೆ ಬಂದು ನಿಂತು ಕ್ಷೀಣಸ್ವರದಲ್ಲಿ ಉಸುರಿದ ರಾಯ್ನಳ್ಳಿ ನೀಲಕಂಠಪ್ಪ ಮಾಸ್ತರ ಮಗಳು ಅಂಬುಜಾಳ ಮಾತು ಗುಂಪಿನ ಉಳಿದ ಸದಸ್ಯರ ಗಂಟಲುಗಳಲ್ಲಿ ಇಳಿಯಲಿಲ್ಲ. ಹೆಚ್ಚೂಕಡಿಮೆ ಆ ಹೊತ್ತಿಗೆ ಹುಡುಗಿಯರ ದುಪ್ಪಟ್ಟು ವಯ್ಯಸ್ಸಿನವನಾದ ನಾನು ಒಂದು ತೃಪ್ತಿಕರವಾದ ತೀರ್ಪನ್ನು ಗುಂಪಿನ ಒಳಿತನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಕೆಲವೊಮ್ಮೆ ಅತ್ಯಂತ ಒತ್ತಡದ ಪರಿಸ್ಥಿತಿಗಳು “ಅದ್ಭುತ” ಎನ್ನುವಂತ ಪರಿಹಾರಗಳಿಗೆ ದಾರಿ ಮಾಡಿಕೊಡಬಲ್ಲವು ಎನ್ನುವ ಅನುಭವದ ಮಾತು ಪ್ರಸ್ತುತ ಸನ್ನಿವೇಶದಲ್ಲಿ ನಿಜವಾದಂತೆ ತೋರಿತು. ದಿಗ್ಗನೆ ತಲೆಯಲ್ಲಿ ಹೊಳೆದ ಸಮಸ್ಯೆಯ ಪರಿಹಾರ ನನ್ನ ಮುಖಮಂಡಲವನ್ನು ಸಾವಿರ ಕ್ಯಾಂಡಲ್ ಗಳಷ್ಟು ಪ್ರಕಾಶಮಾನವಾದ ಬಲ್ಬ್ ನ ಹಾಗೆ ಬೆಳಗಿಸಲು ನಾನು ಹುಡುಗಿಯರನ್ನು ಕುರಿತು ನನ್ನ ಪರಿಹಾರದ ಸೂತ್ರಗಳನ್ನು ಮುಂದಿಡತೊಡಗಿದೆ. “ನೋಡಿ, ನೀವು ಹೇಗಿದ್ದರೂ ಸ್ಕೂಲಿನ ಅಣಕು ಆಟವನ್ನು ಆಡುತ್ತಿದ್ದೀರಿ, ನೀವೆಲ್ಲರೂ ಲಚ್ಚಕ್ಕ ಪಾತ್ರವನ್ನೇ ಯಾಕೆ ಮಾಡಬಾರದು?” ಎನ್ನುವ ನನ್ನ ಪ್ರಶ್ನೆ ಗುಂಪನ್ನು ಒಂದು ಕ್ಷಣ ತಬ್ಬಿಬ್ಬಾಗುವಂತೆ ಮಾಡಿತು. “ಅಣ್ಣಾ, ಅದು ಹೇಗೆ ಎಲ್ಲರೂ ಲಚ್ಚಕ್ಕನಾಗಲು ಸಾಧ್ಯ? ನಮ್ಮ ಸ್ಕೂಲಿನಲ್ಲಿ ಒಬ್ಬಳೇ ಲಚ್ಚಕ್ಕ ತಾನೇ ಇರುವುದು?” ಎನ್ನುವ ತರ್ಕಬದ್ದ ಸವಾಲನ್ನು ಮುಂದಿಟ್ಟ ಭಾಗ್ಯಳಿಗೆ ಸಮಂಜಸ ಉತ್ತರ ಕೊಡುವಲ್ಲಿ ನಿನ್ನೆ ಹರೀಶ ಟೂರಿಂಗ್ ಟಾಕೀಸ್ ನಲ್ಲಿ ನಾನು ನೋಡಿದ ಅಣ್ಣನವರ ತ್ರಿಪಾತ್ರಗಳ ಭರ್ಜರಿ ಅಭಿನಯವಿದ್ದ “ಕುಲಗೌರವ” ಸಿನೆಮಾ ಸಹಾಯಕ್ಕೆ ಬಂದಿತ್ತು. ರಾಜಕುಮಾರ್ ಅಂತಹಾ ಕಲಾಸಾರ್ವಭೌಮ ನಟರೇ ಮೂರು ವಿಭಿನ್ನ ಪಾತ್ರಗಳನ್ನು ಬೆಳ್ಳಿಪರದೆಯ ಮೇಲೆ ಸುಲಲಿತವಾಗಿ ಅಭಿನಯಿಸುತ್ತಾರೆ ಎಂದಾದರೆ ನೀವು ಅಷ್ಟೂ ಹುಡುಗಿಯರೂ ಲಚ್ಚಕ್ಕನ ಪಾತ್ರ ಮಾಡುವುದರಲ್ಲಿ ಏನು ಅಡಚಣೆ ಇದೆ?”
ಎನ್ನುವ ನನ್ನ ಮಾತು ಕಡೆಗೂ ಗುಂಪಿನ ಹುಡುಗಿಯರ ಅಂತರ್ಯಕ್ಕೆ ಇಳಿಯಿತು. “ಆಯ್ತು ಅಣ್ಣಾ, ನಾವು ಎಲ್ಲರೂ ಲಚ್ಚಕ್ಕನ ಪಾತ್ರವನ್ನೇ ಒಪ್ಪಿಕೊಳ್ಳುತ್ತೇವೆ, ಆದರೆ ಯಾರಾದರೂ ಒಬ್ಬರು ಮಾತ್ರ ಹೆಡ್ ಮಾಸ್ಟರ್ ಆಗಲೇಬೇಕು” ಎನ್ನುವ ಒಟ್ಟಂದದ ಅಭಿಪ್ರಾಯ ಗುಂಪಿನಲ್ಲಿ ಮೂಡಲು ಸಾಮರಸ್ಯದ ಈ ಸುವರ್ಣಾವಕಾಶವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಲು ಇಚ್ಛಿಸದ ನಾನು ಗುಂಪಿನಲ್ಲಿ ಎಲ್ಲರಿಗಿಂತ ಕಿರಿಯಳಾದ ಅನ್ನಪೂರ್ಣಳನ್ನು ಅಕ್ಕನಾಗಮ್ಮ ಟೀಚರ್ ಆಗಲು ಕೋರಿಕೊಂಡೆ. ನನ್ನ ಮಾತನ್ನು ಬಡಪೆಟ್ಟಿಗೆ ಒಪ್ಪದ ಅನ್ನಪೂರ್ಣ “ಇವರೆಲ್ಲಾ ಲಚ್ಚಕ್ಕನ ರೋಲ್ ಮಾಡುತ್ತಾರೆ, ನಾನೊಬ್ಬಳೇ ಮಾತ್ರ ಯಾಕೆ ಬೇರೆ ಪಾತ್ರ ಮಾಡಬೇಕು?” ಎನ್ನುವ ತನ್ನ ತಕರಾರನ್ನು ಮುಂದುವರೆಸಿದಳು. “ಅಲ್ಲಮ್ಮಾ, ಇಷ್ಟು ಜನ ಲಚ್ಚಕ್ಕಗಳು ಇದ್ದಾಗ ಒಬ್ಬ ಮುಖ್ಯೋಪಾಧ್ಯಾಯಿನಿಯಾದರೂ ಬೇಡವೇ? ಹೀಗಿಲ್ಲದೆ ಹೋದರೆ ಈ ಲಚ್ಚಕ್ಕಗಳನ್ನು ಸಂಭಾಳಿಸುವವರು ಯಾರು? ನೀನು ಅಕ್ಕನಾಗಮ್ಮ ಮೇಡಂ ಆಗಲಿಕ್ಕೆ ತಯಾರಿಲ್ಲದಿದ್ದರೆ ಗಿರಿಜಮ್ಮ ಟೀಚರ್ ಆದರೂ ಆಗು. ಯಾವ ಲಚ್ಚಕ್ಕ ಡ್ಯೂಟಿಗೆ ಬಂದಿದ್ದಾಳೆ, ಯಾವ ಲಚ್ಚಕ್ಕ ಕೆಲಸಕ್ಕೆ ಬಂದಿಲ್ಲ ಎನ್ನುವ ಹಾಜರಾತಿಯನ್ನು ಇಡುವವರು ಯಾರಾದರೂ ಒಬ್ಬರು ಶಾಲೆಯವತಿಯಿಂದ ಬೇಕಲ್ಲವೇ?” ಎನ್ನುವ ವಾದವನ್ನು ಅವಳ ಮುಂದೆ ಇಟ್ಟೆನಾದರೂ ಅದರಿಂದ ಅನ್ನಪೂರ್ಣಳಿಗೆ ಸಮಾಧಾನವಾದಂತೆ ತೋರಲಿಲ್ಲ. “ನಾನೇ ಹೆಡ್ ಮೇಡಂ ಯಾಕೆ ಆಗಬೇಕು? ಬೇರೆಯವರು ಆದರೆ ಏನು ತೊಂದರೆ? ನಾನೂ ಲಚ್ಚಕ್ಕನೇ ಆಗುತ್ತೇನೆ” ಎಂದು ರೊಚ್ಚು ಹಿಡಿದ ಅವಳಿಗೆ ನಾನು ನನ್ನ ಬತ್ತಳಿಕೆಯಲ್ಲಿದ್ದ, ಕೊನೆಯ ಅಸ್ತ್ರವಾದ ಬ್ರಹ್ಮಾಸ್ತ್ರವನ್ನೇ ಹೂಡಬೇಕಾಯಿತು. “ಆಯ್ತು, ನೀನು ಅಕ್ಕನಾಗಮ್ಮ ಮೇಡಂನೋ, ಗಿರಿಜಮ್ಮ ಮೇಡಂನೋ ಆಗದೇ ಹೋದರೆ ನಿನ್ನನ್ನು ಇಂದಿನಿಂದ ಆಟದಲ್ಲಿ ಸೇರಿಸುವುದೇ ಇಲ್ಲ, ಮುಂದಿನ ವಾರದಿಂದ ನೀನು ನಿನ್ನ ವಯ್ಯಸ್ಸಿನ ಗೆಳತಿಯರನ್ನು ಹುಡುಕಿಕೊಂಡು ಹೋಗಿ, ಅವರ ಒಟ್ಟಿಗೇ ಆಟ ಆಡಬೇಕಾಗುತ್ತದೆ” ಎನ್ನುವ ಗೊಡ್ಡು ಬೆದರಿಕೆಯನ್ನು ಒಡ್ಡಿದೆ. ನನ್ನ ಮಾತನ್ನು ಕೇಳಿ ವಿಚಲಿತಳಾದಂತೆ ಕಂಡುಬಂದ ಅನ್ನಪೂರ್ಣೆ ಹೆಡ್ ಮೇಡಂ ಪಾತ್ರಧಾರಿಯಾಗಲು ಅರೆಮನಸ್ಸಿನಿಂದ ಒಪ್ಪಿದಳು. ಅವಳನ್ನು ಬೆದರಿಕೆಗೆ ಒಡ್ಡಿ, ಬಂದೂಕಿನ ನಳಿಕೆಯ ತುದಿಯಲ್ಲಿ ಸಮ್ಮತಿ ಪಡೆದ ನನ್ನ ಕಾರ್ಯತಂತ್ರ ಫಲಿಸಿದರೂ ಇದರಿಂದ ಉಂಟಾಗಬಹುದಾದ ಬಹುದೊಡ್ಡ ಅಡ್ಡಪರಿಣಾಮ ನೆನೆದು ನನಗೆ ಕುಕ್ಕಲಾತಿ ಶುರುವಾಯಿತು. ಅವ್ವನ ಮುದ್ದಿನ ಮೊಮ್ಮಗಳಾದ ಅನ್ನಪೂರ್ಣ ಇಲ್ಲಿ ನಡೆದ ವಿಷಯವನ್ನು ಅವ್ವನಿಗೆ ಅರುಹಿದರೆ ಅದು ಎಲ್ಲಿ ಮತ್ತೊಂದು ಪ್ರಮಾದಕ್ಕೆ ದಾರಿ ಮಾಡಿಕೊಡುವುದೋ ಎನ್ನುವ ಆತಂಕ ನನ್ನನ್ನು ಕಾಡತೊಡಗಿತು. “ಇಷ್ಟು ಹುಡುಗಿಯರು ಲಚ್ಚಕ್ಕನ ಪಾತ್ರ ಮಾಡುವಾಗ ಅನ್ನಪೂರ್ಣ ಮಾತ್ರ ಯಾಕೆ ಲಚ್ಚಕ್ಕನ ಪಾತ್ರ ಮಾಡಬಾರದು? ತಾಯಿ ಇಲ್ಲದ ಮಗಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ಕತ್ತೆಯ ವಯಸ್ಸಾದರೂ ನಿನ್ನ ಮತಿಗೆ ತೋಚಲಿಲ್ಲವೆ?” ಎನ್ನುವ ಪುಂಖಾನುಪುಂಖವಾದ ಅವ್ವನ ಬೈಗುಳಗಳು ಕಿವಿಗೆ ಅಪ್ಪಳಿಸಿದಂತಾಗಲು “ಅನ್ನಪೂರ್ಣ, ನೀನೂ ಲಚ್ಚಕ್ಕನ ಪಾತ್ರವನ್ನೇ ಮಾಡಿಬಿಡು” ಎಂದೆ. “ಅದು ಹೇಗೆ ಸಾಧ್ಯ? ಈಗ ತಾನೇ ನೀನೇ ಹೇಳಿದೆ, ಎಲ್ಲರೂ ಲಚ್ಚಕ್ಕಗಳೇ ಆದರೆ ಅವರನ್ನು ನಿಯಂತ್ರಿಸಲು ಯಾರಾದರೂ ಅಕ್ಕನಾಗಮ್ಮ ಮೇಡಂ ಆಗಲೇಬೇಕಲ್ಲವೇ?” ಎನ್ನುವ ಪಾಟೀಸವಾಲನ್ನು ನನ್ನ ತಂಗಿ ಜಯಲಕ್ಷ್ಮಿ ಇಡತೊಡಗಿದಳು. ಅನ್ನಪೂರ್ಣಳ ಬಗ್ಗೆ ಅವಳ ಮನದ ಮೂಲೆಯಲ್ಲಿದ್ದ ಅಸಮಾಧಾನ ಈ ರೂಪದಲ್ಲಿ ಹೊರಬಂದಿತ್ತು. ಹೇಗಾದರೂ ಮಾಡಿ ಅನ್ನಪೂರ್ಣಳನ್ನು ಲಚ್ಚಕ್ಕನ ರೋಲ್ ನಿಭಾಯಿಸುವುದರಿಂದ ದೂರ ಇಡಬೇಕು ಎನ್ನುವ ಜಯಲಕ್ಷ್ಮಿಯ ಮನದ ಅಭಿಲಾಷೆ ಅವಳ ನಾಲಿಗೆಯ ಮೇಲಿನ ಮಾತಾಗಿ ಹೊರಬಂದಿತ್ತು. ಅದ್ಯಾವ ಮಾಯೆಯಿಂದಲೋ ತಟ್ಟನೆ ನನ್ನ ತಲೆಗೆ ಹೊಳೆದ ಮಾತನ್ನು ಗುಂಪಿನ ಮುಂದಿಟ್ಟೆ. “ಇವತ್ತು ಭಾನುವಾರ, ಸ್ಕೂಲಿಗೆ ರಜಾದಿನ, ಹಾಗಾಗಿ ಹೆಡ್ ಟೀಚರ್ ಇಲ್ಲದೆಯೂ ಇಂದಿನ ಆಟ ಮುಂದುವರೆಸಬಹುದು” ಎನ್ನುವ ಸಲಹೆಯನ್ನು ಕೊಟ್ಟೆ. ಇದು ಗುಂಪಿನ ಸರ್ವಸದಸ್ಯರಿಗೂ ಒಪ್ಪಿಗೆಯಾಗಲು, ಖುಷಿಯನ್ನೇ ಹೊದ್ದವರಂತೆ ಕಂಡುಬಂದ ಹುಡುಗಿಯರನ್ನು ಅವರ ಪಾಡಿಗೆ ಆಡಲಿಕ್ಕೆ ಬಿಟ್ಟು ಅವ್ವ ತರುತ್ತಿದ್ದ ಬೆಣ್ಣೆ, ಕಾಯಿಚಟ್ನಿ ಸಮೇತವಾದ ಸೀತಮ್ಮಜ್ಜಿಯ ಬಿಸಿಬಿಸಿ ಅಕ್ಕಿ ಇಡ್ಲಿಗಳ ನಿರೀಕ್ಷೆಯಲ್ಲಿ ತೊಡಗಿದೆ.
ಹೀಗೆ ಹುಡುಗಿಯರ ಮನಸ್ಸಿನಲ್ಲಿ ಲಚ್ಚಕ್ಕ ಇಷ್ಟು ಆಳವಾಗಿ ಬೇರೂರಲು ಏನು ಕಾರಣ? ಎನ್ನುವ ಆಲೋಚನೆ ಅವ್ವ ತಂದ ಇಡ್ಲಿ, ಬೆಣ್ಣೆ ಕಾಯಿಚಟ್ನಿ ಸವಿದು ಚಂದಮಾಮದಲ್ಲಿ ಹುದುಗಿ ಕುಳಿತವನ ಮನಸ್ಸನ್ನು ಕೀಟದಂತೆ ಕೊರೆಯಲಾರಂಭಿಸಿತು. ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಮೀರಿ ಮಕ್ಕಳ ಮನಸ್ಸಿನ ತುಂಬಾ ಆವರಿಸಿಕೊಂಡ ಮೋಡಿಯನ್ನು ಲಚ್ಚಕ್ಕ ಎನ್ನುವ ಸ್ಕೂಲಿನ ಜವಾನಿ ಮಾಡಿರುವುದಕ್ಕೆ ಹೇಗೆ ಸಾಧ್ಯ? ಎನ್ನುವ ಚಿಂತನೆ ನನ್ನ ಮನದಾಳದಲ್ಲಿ ಮೂಡತೊಡಗಿತು. ನಾನು ಶಾಲೆಗೆ ಹೋಗುವ ಸಮಯದಲ್ಲಿ ಲಚ್ಚಕ್ಕ ತಾನೂ ಶಾಲೆಯ ಮಕ್ಕಳನ್ನು ಕರೆದುಕೊಂಡು ರಸ್ತೆಯಲ್ಲಿ ಹೊರಟಿದ್ದನ್ನು ಹಲವಾರು ಬಾರಿ ಕಂಡಿದ್ದೆ. ಸರ್ಕಾರಿ ಹುಡುಗಿಯರ ಶಾಲೆಯ ಜವಾನಿಯಾದ ಲಚ್ಚಕ್ಕ ಯಾವ ಕಾರಣಕ್ಕೂ ನನ್ನ ಗಮನವನ್ನು ವಿಶೇಷರೂಪದಲ್ಲಿ ಸೆಳೆದವಳಲ್ಲ. ನಾನು ಶಾಲೆಗೆ ಹೋಗಲಿಕ್ಕೆ ಮೊದಲಿಟ್ಟ ವೇಳೆಯಲ್ಲಿ ಲಚ್ಚಕ್ಕನ ಹಾಗೆ ಬಾಲಕರಾದ ನಮ್ಮನ್ನು ಶಾಲೆಗೆ ಕರೆದುಕೊಂಡು ಹೋಗುವ ಯಾವ ಪರ್ಯಾಪ್ತ ವ್ಯವಸ್ಥೆಯೂ ಊರಮಟ್ಟದಲ್ಲಿ ಇಲ್ಲದ ಕಾರಣ, ಊರ ಹುಡುಗಿಯರ ಪಾಲಿನ ಭಾಗ್ಯವಷ್ಟೇ ಆದ ಈ ಸವಲತ್ತು ಹುಡುಗ, ಹುಡುಗಿಯರ ಮಧ್ಯದ ತಾರತಮ್ಯದ ಕಾರಣದಿಂದಾಗಿ ನನ್ನಲ್ಲಿ ಎಂತಹುದೋ ಈರ್ಷ್ಯೆಯನ್ನು ಹುಟ್ಟು ಹಾಕಿದ್ದು ನಿಜವಾದರೂ, ನಂತರದ ದಿನಗಳಲ್ಲಿ ಇದು ಅಂತಹ ಮಹತ್ವದ ವಿಚಾರವಾಗಿ ನನ್ನನ್ನು ಕಾಡಿದ್ದಿಲ್ಲ. ದಿನಂಪ್ರತಿ ಒಂದು ಮತ್ತು ಎರಡನೇ ತರಗತಿಯ ಹೆಣ್ಣುಮಕ್ಕಳನ್ನು ಊರಿನ ಪ್ರತಿಯೊಂದು ಮನೆಗಳಿಂದ ಸಂಗ್ರಹಿಸಿ ಶಾಲೆಗೆ ಜೋಪಾನವಾಗಿ ತಲುಪಿಸುತ್ತಿದ್ದ ಮತ್ತು ಶಾಲೆ ಮುಗಿದ ಮೇಲೆ ಅವರವರ ಮನೆಗಳಿಗೆ ಅದೇ ಜತನದಿಂದ ಮರಳಿಸುತ್ತಿದ್ದ ಲಚ್ಚಕ್ಕನ ಕಾರ್ಯವೈಖರಿಯಲ್ಲಿ ನನಗೆ ಅಂತಹಾ ಹೆಚ್ಚುಗಾರಿಕೆ ಏನೂ ಆ ಹೊತ್ತಿಗೆ ತೋರಿಬಂದಿರಲಿಲ್ಲ. ಸರ್ಕಾರಿ ನೌಕರಸ್ತಳಾದ ಲಚ್ಚಕ್ಕ ತನ್ನ ಭಾಗದ ಕೆಲಸವನ್ನಷ್ಟೇ ನಿರ್ವಹಿಸುತ್ತಿದ್ದಾಳೆ ಎಂದೇ ನಾನು ಭಾವಿಸಿದ್ದೆ. ಒಂದರಿಂದ ನಾಲ್ಕು ತರಗತಿಯವರೆಗೆ ಇದ್ದ ಬಾಲಕಿಯರ ಶಾಲೆಯ ಮೊದಲ ಎರಡು ತರಗತಿಗಳ ಮಕ್ಕಳನ್ನಷ್ಟೆ ಅವರ ಮನೆಗಳಿಂದ ಕರೆದುಕೊಂಡು ಹೋಗಿ ಮರಳಿ ತರುವ ಕೆಲಸವನ್ನು ಲಚ್ಚಕ್ಕ ಮೂರು ಮತ್ತು ನಾಲ್ಕನೇ ತರಗತಿಗಳಿಗೆ ವಿಸ್ತರಿಸಲಿಲ್ಲವೇಕೆ? ಎನ್ನುವ ಆಲೋಚನೆಯೂ ಲಚ್ಚಕ್ಕನನ್ನು ನೋಡಿದ ಪ್ರತೀ ಹೊತ್ತೂ ನನ್ನ ಮನದಲ್ಲಿ ಮೂಡಿ ಮರೆಯಾಗುತ್ತಿತ್ತು. ನಮ್ಮ ಮನೆಯಲ್ಲಾದ ಹುಡುಗಿಯರ ಹೊಡೆದಾಟದ ಘಟನೆಯ ನಂತರ ಲಚ್ಚಕ್ಕ ನನ್ನಲ್ಲಿ ಹಲವಾರು ಕಾರಣಗಳಿಗಾಗಿ ವಿಚಿತ್ರ ಕುತೂಹಲದ ಬೀಜಗಳನ್ನು ಬಿತ್ತಿದಳು. ಮಕ್ಕಳ ಮನಸ್ಸಿನಲ್ಲಿ ಇಷ್ಟರಮಟ್ಟಿಗಿನ ಪ್ರಭಾವವನ್ನು ಬೀರಿದ ಈ ಸಾಧಾರಣ ಹೆಂಗಸು ಲಚ್ಚಕ್ಕ ತಾನು ಬಾಹ್ಯದಲ್ಲಿ ತೋರುತ್ತಿದ್ದ ರೀತಿಯನ್ನು ಹೊರತುಪಡಿಸಿದಂತೆ, ಆಂತರ್ಯದಲ್ಲಿ ಏನೋ ವಿಶೇಷವಾದ ಗುಣಗಳ ಒಡತಿಯಾಗಿರಬಹುದು ಎನ್ನುವ ಅಂಶ ನನ್ನ ಬುದ್ದಿಗೆ ಹೊಳೆಯತೊಡಗಿತು. ತತ್ಪರಿಣಾಮವಾಗಿ ಲಚ್ಚಕ್ಕನ ಬದುಕಿನ ರೀತಿನೀತಿಗಳನ್ನು ಹತ್ತಿರದಿಂದ ನೋಡಿ, ಅವುಗಳನ್ನು ಸಮರ್ಥವಾಗಿ ಅರ್ಥೈಸಿಕೊಳ್ಳುವ ಕೆಲಸಕ್ಕೆ ನಾನು ನನ್ನದೇ ಆದ ರೀತಿಯಲ್ಲಿ ತೊಡಗಿಕೊಂಡೆ.
ಶಿಕ್ಷಕ ವೃತ್ತಿಯಲ್ಲಿದ್ದ ನನ್ನ ಅಪ್ಪನಿಂದ ತಿಳಿದು ಬಂದ ಸಂಗತಿ ಎಂದರೆ ಲಚ್ಚಕ್ಕ ಪ್ರತಿನಿತ್ಯ ಮಕ್ಕಳನ್ನು ಕಟ್ಟಿಕೊಂಡು ಶಾಲೆಗೆ ಹೋಗಿ ಬರುವ ಕಾಯಕ ಅವಳ ಸಾಮಾನ್ಯ ಕೆಲಸಕಾರ್ಯಗಳ ದಾಯಿರೆಯಲ್ಲಿ ಬರುವಂತಹದಲ್ಲ. ಈ ಸೇವೆಯನ್ನು ಲಚ್ಚಕ್ಕ ಸ್ವಯಂಪ್ರೇರಿತಳಾಗಿಯೇ ಮಾಡುತ್ತಿದ್ದಾಳೆ ಎನ್ನುವ ಅಂಶ ನನ್ನಲ್ಲಿ ಆಕೆಯ ಬಗೆಗಿದ್ದ ಗೌರವವನ್ನು ನೂರು ಪಟ್ಟು ಹೆಚ್ಚಿಸಿದ್ದವು. ಸರ್ಕಾರಿ ನೌಕರಳಾಗಿ ತನ್ನ ಕೆಲಸವನ್ನು ಶಾಲೆಯ ಆವರಣಕ್ಕಷ್ಟೆ ಸೀಮಿತಗೊಳಿಸಬೇಕಾಗಿದ್ದ ಲಚ್ಚಕ್ಕ ಊರಿನ ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಯ ಕಾರಣ ತನ್ನ ಕರ್ತವ್ಯದ ಸೀಮೋಲ್ಲಂಘನವನ್ನು ಧೀಮಂತ ರೀತಿಯಲ್ಲಿಯೇ ಗೈದಿದ್ದಳು. ಚಿಕ್ಕಚಿಕ್ಕ ಹೆಣ್ಣುಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ, ಅವರನ್ನು ವಾಪಾಸು ಕರೆತರುವ ಕೆಲಸವನ್ನು ಊರಿನ ಎಲ್ಲಾ ಕುಟುಂಬವರ್ಗದವರಿಂದಲೂ ಮಾಡಲು ಸಾಧ್ಯವಿಲ್ಲದ್ದನ್ನು ಗಮನಿಸಿದ ಲಚ್ಚಕ್ಕ ಇದೇ ಕಾರಣಕ್ಕಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬರಬಾರದು ಎನ್ನುವ ಕಾರಣಕ್ಕೆ ತನ್ನದೇ ಆದ ವಿನೂತನ ರೀತಿಯ ಸೇವೆಯ ಮುಖೇನ ಹಳ್ಳಿಗಾಡಿನ, ರೈತಾಪಿ ಕುಟುಂಬಗಳ ಈ ಅನುಗಾಲದ ಸಮಸ್ಯೆಗೆ ಶಾಶ್ವತ ಪರಿಹಾರದ ರೂಪದಲ್ಲಿ ಒದಗಿಬಂದಿದ್ದಳು. ಲಚ್ಚಕ್ಕ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದುಕೊಂಡು ಹೋಗಿ, ಅವರ ಕೂದಲೂ ಕೊಂಕದ ಹಾಗೆ ಮರಳಿ ತಂದು ಸಂಜೆಯ ವೇಳೆಗೆ ಮನೆಗೂಡುಗಳಿಗೆ ತಲುಪಿಸುತ್ತಾಳೆ ಎನ್ನುವ ಏಕೈಕ ಕಾರಣಕ್ಕಾಗಿಯೇ ಹಲವಾರು ರೈತ ಕುಟುಂಬಗಳು ತಮ್ಮ ಹುಡುಗಿಯರನ್ನು ಶಾಲೆಗೆ ದಾಖಲಾತಿಸಿದ ತಥ್ಯ ಕ್ರಮೇಣ ನನ್ನ ಮುಂದೆ ತೆರೆದುಕೊಳ್ಳತೊಡಗಿತು. ಹೀಗೆ ತನ್ನದೇ ಆದ ವಿಶಿಷ್ಟ ಸೇವೆಯ ಮೂಲಕ ಗ್ರಾಮೀಣ ಭಾಗವೊಂದರ ತಳಮಟ್ಟದಲ್ಲಿ ಸ್ತ್ರೀಸಬಲೀಕರಣವನ್ನು ಸಾಕ್ಷಾತ್ಕರಿಸಿದ ಲಚ್ಚಕ್ಕನ ವ್ಯಕ್ತಿತ್ವದ ಕ್ಯಾನ್ವಾಸ್ ನನ್ನ ಊಹೆಗಳನ್ನು ಮೀರಿದ ವಿರಾಟ್ ಸ್ವರೂಪವನ್ನು ಪಡೆದುಕೊಂಡಿದ್ದ ಅಂಶ ನನಗೆ ಮನದಟ್ಟಾಗತೊಡಗಿತು.
ನೋಡಲು ಊರಿನ ಸಾಧಾರಣ ಸ್ತ್ರೀಸಂಕುಲವನ್ನು ಪ್ರತಿನಿಧಿಸುವ ಹಾಗೆಯೇ ಇದ್ದ ಲಚ್ಚಕ್ಕ ತಾನು ತೊಡುತ್ತಿದ್ದ ಮಿರಿಮಿರಿ ಮಿಂಚುವ ಝರಿಭರಿತ ಸೀರೆಗಳ ಕಾರಣದಿಂದಾಗಿಯೇ ಇಂದೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿರುವುದು. ಲಚ್ಚಕ್ಕನ ನೆನಪಿನ ಒಟ್ಟಿಗೇ ಆಕೆ ಹಾಕುತ್ತಿದ್ದ ಅಡ್ಡಗಾಲಿನ ನಡಿಗೆ ಕೂಡ ಆಕೆಯನ್ನು ಕುರಿತ ನನ್ನ ನೆನಪಿನ ಭಾಗವೇ ಆಗಿ ದಾಖಲಾಗಿದೆ. ಆಕೆಯ ಎರಡೂ ಬದಿಯ ಕೊಂಕುಳಗಳಲ್ಲಿ ವಿರಾಜಮಾನರಾಗಿರುತ್ತಿದ್ದ ಊರ ಸಣ್ಣಸಣ್ಣ ಹೆಣ್ಣುಮಕ್ಕಳು ಕೂಡಾ ಈ ನನ್ನ ನೆನಪಿನ ಅವಿಭಾಜ್ಯ ಅಂಗವೇ ಆಗಿ ಇಂದಿಗೂ ಕಾಡುತ್ತಾರೆ. ಇದೇ ಹೊತ್ತು ಕುವೆಂಪು ಅವರ ಬೊಮ್ಮನಹಳ್ಳಿಯ “ಕಿಂದರಜೋಗಿ” ಕವಿತೆಯಲ್ಲಿ ಕಿಂದರಜೋಗಿಯ ಹಿಂದೆ ನಡೆಯುತ್ತಾ ಹೋಗುತ್ತಿದ್ದ ಮಕ್ಕಳ ದೊಡ್ಡ ಗುಂಪೊಂದು ಕಣ್ಣ ಮುಂದೆ ಕಟ್ಟುತ್ತದೆ. ಸಾಧಾರಣ ಮೈಬಣ್ಣ, ಸಾಮಾನ್ಯ ದೇಹಗಾತ್ರದ ಲಚ್ಚಕ್ಕನ ದೊಡ್ಡದಾದ, ತುಸು ತಿಳಿಹಳದಿಗೆ ತಿರುಗಿದ ದಂತಪಂಕ್ತಿ ನೆನಪಾಗುತ್ತಿದೆ. ದಟ್ಟವಾದ, ಎಣ್ಣೆ ಮೆತ್ತಿಕೊಂಡ ಕೇಶರಾಶಿಯನ್ನು ಅವ್ಯವಸ್ಥಿತವಾಗಿ ಕಟ್ಟಿ ತುರುಬು ಹಾಕುತ್ತಿದ್ದ ಲಚ್ಚಕ್ಕ ತನ್ನ ಬಾಹ್ಯರೂಪವನ್ನು ನಾಲ್ಕು ಜನ ನೋಡಿ ಮೆಚ್ಚಬೇಕು ಎನ್ನುವ ವಾಂಛೆಯಿಂದ ಬಹಳ ದೂರವೇ ಉಳಿದವಳು. ಮಕ್ಕಳ ಮೂಗುಗಳನ್ನು ಒರೆಸುವ ಸಲುವಾಗಿ ಒಂದು ದೊಡ್ಡಗಾತ್ರದ, ಶ್ವೇತವರ್ಣದ ಕರ್ಚೀಫನ್ನು ಯಾವಾಗಲೂ ತನ್ನ ಸೊಂಟದಲ್ಲಿ ಸಿಕ್ಕಿಸಿರುತ್ತಿದ್ದ ಲಚ್ಚಕ್ಕ ಬಾಲ್ಯದಲ್ಲಿ ತಾನು ಎಂದೂ ಹತ್ತದ ಶಾಲೆಯ ಮೆಟ್ಟಿಲುಗಳ ಮೇಲೆ ಸಾವಿರದ ಸಂಖ್ಯೆಯಲ್ಲಿ ಊರ ಹೆಣ್ಣು ಸಂತತಿಯ ಪಾದಗಳನ್ನು ಭದ್ರವಾಗಿ ಪ್ರತಿಷ್ಠಾಪಿಸಿದವಳು. ಎರಡು ತಲೆಮಾರಿನ ಹುಡುಗಿಯರಿಗೆ ಆಧುನಿಕ ಶಿಕ್ಷಣದ ಕೊಡುಗೆಯನ್ನು ನೀಡುವಲ್ಲಿ ಪೋಷಕರ, ಶಿಕ್ಷಕರ ಹೆಗಲಿಗೆ ಹೆಗಲಾಗಿ ಅಹರ್ನಿಶಿ ದುಡಿದವಳು. ತಾನು ಎಂತಹ ಘನಕಾರ್ಯದ ಮೂಲಕ ಸಮಾಜದ ಸೇವೆಯನ್ನು ಮಾಡುತ್ತಿದ್ದೇನೆ ಎನ್ನುವುದರ ಕಿಂಚಿತ್ತೂ ಅರಿವಿರದೆ ಬಾಳಪಯಣವನ್ನು ಅದರ ತಾರ್ಕಿಕ ಹಂತಕ್ಕೆ ಕೊಂಡೊಯ್ದವಳು. ಶಾಲೆಗೆ ದಾಖಲಾದ ಪ್ರತೀ ಹೆಣ್ಣು ಮಗುವಿಗೆ ಎರಡನೇ ತಾಯಿಯ ರೂಪದಲ್ಲಿ ಹೃದ್ಗೋಚರವಾದವಳು.
ಮನೆಯ ಮೊದಲ ತಾಯಿಗಿಂತ ಒಂದು ಕೈ ಮಿಗಿಲೋ ಎನ್ನುವ ಮಟ್ಟದ ಪ್ರೀತಿ, ಕರುಣೆ, ವಾತ್ಸಲ್ಯಗಳನ್ನು ಪ್ರತಿ ಮಗುವಿಗೂ ಮೊಗೆಮೊಗೆದು ನೀಡಿದವಳು. ಮಕ್ಕಳನ್ನು ತನ್ನ ಅಪರಿಮಿತ ಕರುಣೆಯ ಸಾಗರದಲ್ಲಿ ಮುಳುಗೇಳಲು ಅನುವು ಮಾಡಿಕೊಟ್ಟವಳು. ಮಾನವ ಸಭ್ಯತೆಯ ಅಭಿವೃದ್ದಿಪಥದಲ್ಲಿ ಮರೆಯದ ಮೈಲುಗಲ್ಲಾದವಳು.
ತಾನು ತುರುವನೂರಿನ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಜವಾನಿಯಾಗಿ ಕರ್ತವ್ಯಕ್ಕೆ ಹಾಜರಾದ ಕೇವಲ ಎರಡೇ ವರ್ಷಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಊರಿನ ಹೆಣ್ಣು ಹುಡುಗಿಯರು ಶಾಲೆಗೆ ನೊಂದಾವಣೆಯಾಗದೇ ಇದ್ದುದ್ದನ್ನು ಗಮನಿಸಿದ ಲಚ್ಚಕ್ಕ ಇದರ ನಿವಾರಣೆಯ ಮಾರ್ಗೋಪಾಯಗಳನ್ನು ಕುರಿತು ಕೆಲವು ತಿಂಗಳುಗಳ ಕಾಲ ಅಹೋರಾತ್ರಿ ಚಿಂತಿಸಿದವವಳು, ಮಂಥಿಸಿದವಳು. ಅಂದುಕೊಂಡಿದ್ದಕ್ಕಿಂತಲೂ ತ್ವರಿತಗತಿಯಲ್ಲಿ ಇದರ ಮೂಲ ಕಾರಣವನ್ನು ಸಂಶೋಧಿಸಿದ ಲಚ್ಚಕ್ಕ ಅದರ ಪರಿಹಾರವನ್ನೂ ತನ್ನ ಸ್ತರದಲ್ಲಿಯೇ ಹುಡುಕಿ ತೆಗೆದವಳು, ಅದನ್ನು ಕಾರ್ಯರೂಪಕ್ಕೂ ಇಳಿಸಿದವಳು. ಚಿಕ್ಕಚಿಕ್ಕ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು ಮತ್ತೆ ಅವರನ್ನು ಮರಳಿ ಮನೆಗೆ ತಲುಪಿಸುವುದು ಹುಡುಗಿಯರ ವಿದ್ಯಾಭ್ಯಾಸದಲ್ಲಿ ಪೋಷಕರಿಗೆ ಎದುರಾಗುವ ಬಹು ದೊಡ್ಡ ಸಮಸ್ಯೆ ಎಂದು ಅರಿತ ಲಚ್ಚಕ್ಕ ಇದರ ಪರಿಹಾರರೂಪದಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲಗಳಲ್ಲಿ ಮಕ್ಕಳನ್ನು ಅವರವರ ಮನೆಯಿಂದ ಕರೆದುತಂದು ಮರಳಿ ಅವರನ್ನು ಮನೆಗೆ ಸೇರಿಸುವ ಸತ್ಸಂಪ್ರದಾಯಕ್ಕೆ ನಾಂದಿ ಹಾಡಿದವಳು. ಕೇವಲ ಮೊದಲ ಎರಡು ವರ್ಷಗಳ ಹುಡುಗಿಯರನ್ನಷ್ಟೇ ತನ್ನ ಈ ಸೇವೆಯ ಫಲಾನುಭವಿಗಳನ್ನಾಗಿಸಿದ ಲಚ್ಚಕ್ಕ ಹುಡುಗಿಯರು ಮೂರನೇ ಇಯತ್ತೆಗೆ ಬಂದ ನಂತರ ತಾವೇ ಯಾರ ಸಹಾಯವೂ ಇಲ್ಲದೆ ಶಾಲೆಗೆ ಬಂದು ಹೋಗುವಷ್ಟು ಪ್ರಭುದ್ಧರಾಗಿರುವುದನ್ನು ಗಮನಿಸಿ ತನ್ನ ಸೇವೆಯನ್ನು ಎರಡನೇ ತರಗತಿಯ ಹಂತದವರೆಗೆ ಮಾತ್ರ ಸೀಮಿತಗೊಳಿಸಿದ್ದಳು. ತನ್ನ ಸೇವೆಯನ್ನು ತಪಸ್ಸಿನ ರೀತಿಯಲ್ಲಿಯೇ ಮುಂದುವರೆಸಿಕೊಂಡು ಹೋದ ಲಚ್ಚಕ್ಕ ತನ್ನ ಸೇವೆಯ ಪ್ರಾರಂಭದ ವರ್ಷಗಳಲ್ಲಿಯೇ ತನ್ನ ಕಾಯಕದ ಕಾರಣದಿಂದಾಗಿ ಶಾಲೆಯ ಮಕ್ಕಳ ದಾಖಲಾತಿ, ಹಾಜರಾತಿಯಲ್ಲಿ ಆದ ಗಣನೀಯ ಪ್ರಮಾಣದ ಹೆಚ್ಚಳದಿಂದ ಸಹಜವಾಗಿಯೇ ಧನ್ಯತೆಯ ಭಾವಕ್ಕೆ ಒಳವಾಗಿದ್ದಳು. ಶಾಲೆಯ ಶಿಕ್ಷಕವರ್ಗದ ಪ್ರತಿಯೊಬ್ಬರೂ ಲಚ್ಚಕ್ಕನ ಈ ಸಾಧನೆಯನ್ನು ಮುಕ್ತಕಂಠದ ಪ್ರಶಂಶೆಗೆ ಪಾತ್ರವಾಗಿಸಿದರೆ ಪೋಷಕರು ದೇವರರೂಪದಲ್ಲಿ ತಮಗೆ ಸಹಾಯಹಸ್ತ ಚಾಚಿದ ಲಚ್ಚಕ್ಕನಿಗೆ ಚಿರಋಣಿಯಾಗಿರುವ ಮಾತುಗಳನ್ನು ಸಮಯ ದೊರೆತಾಗಲೆಲ್ಲಾ ಉದ್ದರಿಸುತ್ತಿದ್ದರು.
ಲಚ್ಚಕ್ಕ ತನ್ನ ಸೇವೆಯ ಮತ್ತೆರೆಡು ವರ್ಷಗಳು ಕಳೆಯುವ ವೇಳೆಗೆ ತಾನು ನಿರೀಕ್ಷಿಸಿದ ಮಟ್ಟದಲ್ಲಿ ಮಕ್ಕಳ ಹಾಜರಾತಿ ಏರದೇ ಇರುವುದನ್ನು ಸೂಕ್ಷ್ಮ ವಾಗಿ ಗಮನಿಸಿದಳು. ತಾನು ಮನೆಮನೆಗೆ ಹೋಗಿ ಮಕ್ಕಳನ್ನು ಕರೆತರುವ ಹೊತ್ತು ಪೋಷಕರಲ್ಲಿ ಮನೆಮಾಡಿದ್ದ ಮತ್ತೊಂದು ಅವ್ಯಕ್ತ ಆತಂಕದೆಡೆಗೂ ಆಕೆಯ ಗಮನ ಹರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ದಿನವಹೀ ಹತ್ತಾರು ಪೋಷಕರು ಯಾವ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ? ಎನ್ನುವ ಅಂಶ ಅವಳ ಚಿಕಿತ್ಸಕ ಮನಸ್ಸನ್ನು ಕಾಡಲಾರಂಭಿಸಿತು. ಬೆಳಿಗ್ಗೆ ಹತ್ತು ಗಂಟೆಗೆ ಪ್ರಾರಂಭವಾಗುತ್ತಿದ್ದ ಶಾಲೆ ಸಾಯಂಕಾಲ ನಾಲ್ಕರ ವೇಳೆಗೆ ಮುಗಿಯುತ್ತಿತ್ತು. ಮಧ್ಯೆ ಒಂದು ಗಂಟೆಯಿಂದ ಎರಡು ಗಂಟೆಯವರೆಗೂ ಭೋಜನ ವಿರಾಮವಿದ್ದರೂ ಮಕ್ಕಳು ಆ ಅವಧಿಯಲ್ಲಿ ಶಾಲೆಯಲ್ಲಿಯೇ ಇದ್ದು ತಾವು ಮನೆಯಿಂದ ತಂದ ಊಟ ತಿಂಡಿಗಳನ್ನು ಶಾಲೆಯ ತರಗತಿಗಳಲ್ಲಿಯೇ ಕುಳಿತು ಮೆಲ್ಲುವುದು ವಾಡಿಕೆ. ಲಚ್ಚಕ್ಕ ಗಮನಿಸಿದ ಹಾಗೆ ಪ್ರತೀದಿನ ಸರಿಸುಮಾರು ಕಾಲುಭಾಗದ ಮಕ್ಕಳು ಊಟದ ವೇಳೆಯಲ್ಲಿ ಏನನ್ನೂ ತಿನ್ನದೆ ಶಾಲೆಯ ಆವರಣದಲ್ಲಿ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು. ಮನೆಯಿಂದ ಭೋಜನವನ್ನು ತರಲು ಆಗದ ಈ ಮಕ್ಕಳು ವಿರಾಮದ ವೇಳೆಯನ್ನು ಹೀಗೆ ಕಳೆಯುತ್ತಿದ್ದರು. ಬೆಳಿಗ್ಗೆ ಮಕ್ಕಳಿಗೆ ಊಟವನ್ನು ಕಟ್ಟಿಕೊಡಲಾಗದ ದಿನ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಇಡೀ ದಿನವನ್ನು ಹಸಿದ ಹೊಟ್ಟೆಯಲ್ಲಿ ತಮ್ಮ ಮಕ್ಕಳು ದೂಡಬೇಕಲ್ಲಾ ಎನ್ನುವ ನೋವಿನೊಟ್ಟಿಗೆ ಬೇರೆ ಮಕ್ಕಳು ಆಹಾರ ಸೇವಿಸುವಾಗ ತಮ್ಮ ಮಕ್ಕಳು ಮಾತ್ರ ಹಸಿದ ಹೊಟ್ಟೆಯಲ್ಲಿ ಇರುವುದು ಊಟವನ್ನು ಪೂರೈಸಲಾಗದ ದಿನಗಳಂದು ಪೋಷಕರ ನೋವಿನ ಮೂಲಕಾರಣವಾಗಿತ್ತು. ಯಾವ ಕಾರಣಕ್ಕೂ ಹುಡುಗಿಯರ ವಿದ್ಯಾಭ್ಯಾಸಕ್ಕೆ ಚ್ಯುತಿ ಬರಬಾರದು ಎಂದೇ ತನ್ನ ಬೆಳಗಿನ ಮತ್ತು ಸಾಯಂಕಾಲದ ಎರಡೆರೆಡು ಅಮೂಲ್ಯ ಗಂಟೆಗಳನ್ನು, ಶಾಲಾವಧಿ ಮೀರಿದಂತೆಯೂ ವ್ಯಯಿಸುತ್ತಿದ್ದ ಲಚ್ಚಕ್ಕನದು ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಮುನ್ನಡೆಯುವ ಅಪರೂಪದ ಬಂಗಾರದಂತಹ ಮನಸ್ಸು. ತನ್ನ ಮುಂದೆ ಧುತ್ತೆಂದು ನಿಂತ ಈ ಸವಾಲನ್ನೂ ಮೆಟ್ಟಿ ನಿಲ್ಲುವ ದೃಢಸಂಕಲ್ಪ ತಾಳಿದ ಲಚ್ಚಕ್ಕ ಶಾಲೆಯ ಉಳಿದ ಐದು ಶಿಕ್ಷಕಿಯರ ಜೊತೆಗೆ ಇದರ ಸಂಬಂಧ ಕೂಲಂಕುಷ ಚರ್ಚೆ ನಡೆಸಿದ ಪರಿಣಾಮ ಸ್ವರೂಪವೋ ಎಂಬಂತೆ ನಮ್ಮ ಊರಿನ ಇತಿಹಾಸದಲ್ಲಿಯೇ, ಹೆಚ್ಚೇಕೆ, ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ, ಪ್ರಪ್ರಥಮ ಬಾರಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ದಿವ್ಯಕಲ್ಪನೆಯೊಂದು ಸಾಕಾರಗೊಂಡಿತು.
ದೇಶದಲ್ಲಿ ಎಲ್ಲಿಯೂ ಈ ಪದ್ಧತಿ ಅನುಷ್ಠಾನದಲ್ಲಿ ಬಾರದ ಹೊತ್ತು ತುರುವನೂರಿನ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಇಂತಹ ನೂತನ ಪ್ರಯೋಗವೊಂದು ಜಾರಿಯಾಗಿದ್ದು ಇಂದೂ ನನ್ನಲ್ಲಿ ತಣಿಯದ ಕುತೂಹಲಕ್ಕೆ ಕಾರಣವಾಗಿದೆ. ದೇಶದ ಶಿಕ್ಷಣತಜ್ಞರಿಗೆ, ಆಡಳಿತಾರೂಢರಿಗೆ, ಶಾಲಾ ಆಡಳಿತ ಮಂಡಳಿಯ ಪ್ರಭೂತಿಗಳಿಗೆ ಇಂತಹ ಒಂದು ಯೋಜನೆ ಹೊಳೆಯುವ ದಶಕಗಳ ಪೂರ್ವದಲ್ಲಿಯೇ ಲಚ್ಚಕ್ಕನಂತಹ ಅನಕ್ಷರಸ್ಥೆಯ ಮತಿಗೆ ಇಂತಹಾ ಒಂದು ಅದ್ಭುತ ಕಲ್ಪನೆ ಬಂದಿದ್ದರ ಮೂಲವನ್ನು ಶತಮಾನಗಳ ಕಾಲ ನಾವು ಕೆದಕುತ್ತಲೇ ಇರಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಸರ್ಕಾರ ನಡೆಸುತ್ತಿರುವ ಇಂದಿನ ಮಧ್ಯಾಹ್ನದ ಬಿಸಿಯೂಟದಷ್ಟು ವಿಸ್ತೃತರೂಪದಲ್ಲಿ ಲಚ್ಚಕ್ಕನ ಬಿಸಿಯೂಟದ ಭೋಜನ ಸಂಪನ್ನವಾಗದೆ ಹೋದರೂ ವರ್ಷಗಳ ಕಾಲ ಶಿಕ್ಷಕಿಯರ, ಆರ್ಥಿಕವಾಗಿ ಸಬಲರಾದ ಪೋಷಕರ, ಊರ ದಾನಿಗಳ, ಮಸ್ಟೂರು ಮಠಾಧೀಶ ಬಸಪ್ಪಸ್ವಾಮಿಗಳ ಆರ್ಥಿಕ ಸಹಾಯದಿಂದ ಆಕೆ ಅನೂಚಾನವಾಗಿ ಶಾಲೆಯ ನೂರಾರು ಮಕ್ಕಳಿಗೆ ಪ್ರತೀ ದಿನವೂ ಉಪ್ಪಿಟ್ಟು, ಅವಲಕ್ಕಿ, ವಾಂಗಿಬಾತ್, ಚಿತ್ರಾನ್ನ, ಮೊಸರನ್ನ ಮುಂತಾದ ಖಾದ್ಯಗಳನ್ನು ಶಾಲೆಯ ಆವರಣದ ಒಂದು ಮೂಲೆಯಲ್ಲಿ ಹೂಡಿದ ಕಟ್ಟಿಗೆ ಒಲೆಯ ಸಹಾಯದಿಂದ ತಯಾರಿಸುವ ಮೂಲಕ ಶಾಲೆಯ ಹಾಜರಾತಿಯನ್ನು ಗರಿಷ್ಠಮಟ್ಟಕ್ಕೆ ಕೊಂಡೊಯ್ದ ಕೀರ್ತಿಗೆ ಭಾಜನಳಾದಳು. ಮಕ್ಕಳಿಗೆ ಬೇಕಾದ ನೀರಿನ ಅನುಕೂಲತೆಯನ್ನು ಶಾಲೆಯ ಹಿಂಭಾಗದಲ್ಲಿದ್ದ ಗೆಳೆಯ ಗೊಲ್ಲರ ಓಬಲೇಶನ ಮನೆಯವರು ಉಚಿತವಾಗಿ ಏರ್ಪಡಿಸುತ್ತಿದ್ದರೆ, ಅಡುಗೆಗೆ ಬೇಕಾದ ಪಾತ್ರೆಪಡುಗಗಳ ಸಂಪೂರ್ಣ ಖರ್ಚನ್ನು ಶಾಲೆಯ ಸಹ ಮುಖ್ಯೋಪಾಧ್ಯಾಯಿನಿ ಹಾಗೂ ಹಿರಿಯ ಶಿಕ್ಷಕಿಯಾದ ಬ್ರಾಹ್ಮಣರ ಗಿರಿಜಮ್ಮ ಮೇಡಂ ವಹಿಸಿಕೊಂಡಿದ್ದರು.
ಶಾಲೆಯ ಮಕ್ಕಳನ್ನು ಅತ್ಯಂತ ಪ್ರೀತಿ, ವಾತ್ಸಲ್ಯಗಳಿಂದ ನೋಡಿಕೊಳ್ಳುತ್ತಿದ್ದ ಲಚ್ಚಕ್ಕ ಇನ್ನೂರಕ್ಕೂ ಮೀರಿದ ಸಂಖ್ಯೆಯಲ್ಲಿದ್ದ ಮಕ್ಕಳಿಗೆ ತಾಯಿ ಸ್ವರೂಪಿಣಿಯಾಗಿದ್ದವಳು. ಶಾಲೆಗೆ ಸೇರಿದ ಹೊತ್ತು, ಆರು ವರ್ಷಗಳ ಮನೆಯ, ಹೊರಜಗತ್ತಿಗೆ ತೆರೆಯದ, ವಾತಾವರಣದಿಂದ ಬೇರ್ಪಟ್ಟ ಕಾರಣದಿಂದ ಖಿನ್ನತೆಗೆ ಒಳಗಾಗುತ್ತಿದ್ದ ಹಲವು ಮಕ್ಕಳ ನೆರವಿಗೆ ಧಾವಂತದಿಂದ ಧಾವಿಸುತ್ತಿದ್ದ ಲಚ್ಚಕ್ಕ ಅವರ ಆರೈಕೆಯಲ್ಲಿ ವಹಿಸುತ್ತಿದ್ದ ಮುತುವರ್ಜಿಯನ್ನು ನೋಡಿಯೇ ಅರಿಯಬೇಕಿತ್ತು. ಮಕ್ಕಳಿಗೆ ಯಾವುದಕ್ಕೂ ಕೊರತೆ ಬಾರದ ಹಾಗೆ ಮತ್ತು ಅವರ ಗಮನ ಕಲಿಕೆಯೆಡೆಗೆ ಮಾತ್ರ ಕೇಂದ್ರೀಕೃತವಾಗಿರುವಂತೆ ಮಾಡಲು ಬೇಕಾದ ಸಕಲ ಸವಲತ್ತುಗಳನ್ನೂ ಕಲ್ಪಿಸಿ ಕೊಡುತ್ತಿದ್ದ ಲಚ್ಚಕ್ಕ ನನ್ನೂರಿನ ಮಟ್ಟಿಗೆ ಮದರ್ ಥೆರೇಸಾಳ ಪ್ರತಿರೂಪವಾಗಿದ್ದವಳು. ಸೇವೆ ತನ್ನ ಮೂಲಸ್ವರೂಪದಲ್ಲಿ ಹೇಗಿರುತ್ತದೆ? ಎನ್ನುವ ಜಿಜ್ಞಾಸೆಯುಳ್ಳ ಮಂದಿಗೆ ಲಚ್ಚಕ್ಕನ ಸೇವೆ, ಸೇವೆಯ ಆಂತರ್ಯದ ಇಂಚಿಂಚನ್ನೂ ಬಗೆದು ತೋರಿಸುವಂತಿತ್ತು. ಮಕ್ಕಳ ಸಿಂಬಳದ ಗೊನ್ನೆಗಳನ್ನು ಒರೆಸುವುದರಿಂದ ಹಿಡಿದು ಅವರಿಗೆ ಊಟದ ಕೈತುತ್ತುಗಳನ್ನು ತಿನ್ನಿಸಿ, ನಿದ್ರಾವಶವಾಗುತ್ತಿದ್ದ ಹಲವು ಮಕ್ಕಳಿಗೆ ನೆಮ್ಮದಿಯ ಮಡಿಲಿನಾಸರೆಯಾಗುತ್ತಿದ್ದದ್ದೇ ಈ ಮಹಾತಾಯಿ. ಊರ ಹೆಣ್ಣುಮಕ್ಕಳು ಓದಿ ವಿದ್ಯಾವಂತರಾಗಬೇಕು ಎನ್ನುವ ಹೆಮ್ಮರದಂತಹ ಬಯಕೆ ಹೊಂದಿದ್ದ ಲಚ್ಚಕ್ಕನಿಗೆ ಈ ಹೊತ್ತು ತಾನು ನೆಟ್ಟು ಬೆಳಸಿದ ಮರ, ಹೆಮ್ಮರವಾಗಿ ಸಮಾಜಕ್ಕೆ ಎಂತಹ ಸ್ವಾದಭರಿತ ಫಲಗಳನ್ನು ನೀಡುತ್ತಿದೆ ಎನ್ನುವ ಕಲ್ಪನೆ ಮಾತ್ರವೂ ಇತ್ತೋ ಇಲ್ಲವೋ ಅರಿಯೆ. ಆದರೆ ಲಚ್ಚಕ್ಕನ ಕಾರಣದಿಂದಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡದೆ ಶಾಲೆಯ ಹಾದಿಯನ್ನು ಅವಳೊಟ್ಟಿಗೇ ಸವೆಸಿದ ಸಾವಿರಾರು ಊರ ಹೆಣ್ಣು ಮಕ್ಕಳು ತಮಗೆ ಯಾವುದೋ ಪೂರ್ವಜನ್ಮದ ಸುಕೃತ ಮಾತ್ರದಿಂದಲೇ ಪ್ರಾಪ್ತಿಯಾದ ಶಿಕ್ಷಣಭಾಗ್ಯವನ್ನು ಲಚ್ಚಕ್ಕನ ಮಧ್ಯಸ್ಥಿಕೆಯ ಮಾಧ್ಯಮದಿಂದ ಪಡೆದು ಮುಂದಿನ ತಮ್ಮ ತಲೆಮಾರುಗಳನ್ನು ಸುಶಿಕ್ಷಿತರನ್ನಾಗಿಸಿದ ಪವಾಡ ನನ್ನ ನೆಲದಲ್ಲಿ ಜರುಗಿದೆ ಎಂದು ಬಡಪೆಟ್ಟಿಗೆ ಒಪ್ಪಿಕೊಳ್ಳಲು ಇಚ್ಛಿಸದ ನನ್ನ ಮನಸ್ಸು ಸೂರ್ಯನ ಅಪರಿಮಿತ ಬಿಸಿಲಿಗೆ, ಎಂದೂ ನಾಲ್ಕು ಹನಿ ಮಳೆ ಸುರಿಸದೆ ಮುಂದೋಡುತ್ತಿದ್ದ ಜಾಳುಜಾಳಾದ ಮೋಡಗಳ ರಾಶಿ ವೀಕ್ಷಣೆಗೆ ಹಗಲಿರುಳೂ ಕಣ್ಣಲ್ಲಿ ಕಣ್ಣಿಟ್ಟು, ಬಳಲಿ ಬೆಂಡಾದ ನನ್ನೂರ ಬರಡು ಬಯಲು ಭೂಮಿಯ ಪವಿತ್ರ ನೆಲದಲ್ಲೂ ಪವಾಡದ ಸೆಲೆ ಉಕ್ಕಿದೆ ಎನ್ನುವ ಸತ್ಯವನ್ನು ನಿಧಾನವಾಗಿಯಾದರೂ ಅರಗಿಸಿಕೊಳ್ಳುತ್ತಿದ್ದೇನೆ. ನಮ್ಮ ಊರ ಪೂರ್ವಿಕರ, ಹಿರಿಯಜೀವಿಗಳ ಪುಣ್ಯ, ಆಶೀರ್ವಾದ, ಹಾರೈಕೆಯ ಕಾರಣದಿಂದಲೋ ಅಥವಾ ಯಾವುದಾದರೂ ಊರ ಸ್ತ್ರೀದೇವತೆಯ ವಿಶೇಷ ಕೃಪಾಕಟಾಕ್ಷದ ಕಾರಣವರ್ಷವೋ ಲಚ್ಚಕ್ಕನ ಎದೆಯಲ್ಲಿ ಮೊಳೆತ ಹುಡುಗಿಯರ ಶಿಕ್ಷಣ ಕುರಿತ ಹಿರಿದಾದ ಕನಸು ನನ್ನೂರಿನ ಕ್ರಾಂತಿಕಾರಿ ಕಲ್ಯಾಣಗಳ ಯಾದಿಯಲ್ಲಿ ಪ್ರಥಮವಾಗಿ ನಿಲ್ಲಬೇಕಾದ ಸಂಗತಿಯಾಗಿದ್ದು, ಸಾರ್ವತ್ರಿಕ ಸಮ್ಮತಿಯ ಮುದ್ರೆಯುಳ್ಳದ್ದು ಎಂದೇ ನನ್ನ ಅಭಿಮತ.
ಲಚ್ಚಕ್ಕನನ್ನು ಹಲವಾರು ತಿಂಗಳುಗಳ ಕಾಲ ನೆರಳಿನಂತೆ ಹಿಂಬಾಲಿಸಿ ಅವಳ ಕಲ್ಯಾಣಕಾರಿ ಸಮಾಜಸೇವೆಯ ಎಲ್ಲಾ ಮಗ್ಗಲುಗಳನ್ನೂ ಬಹಳ ಹತ್ತಿರದಿಂದ ನೋಡಿದ ನಂತರ ನಮ್ಮ ಮನೆಯಲ್ಲಿ ಹುಡುಗಿಯರು ಲಚ್ಚಕ್ಕನ ಪಾತ್ರಧಾರಿಗಳಾಗಲು ನಡೆಸಿದ ಮೇಲಾಟ ಅಸ್ವಾಭಾವಿಕ ರೂಪದ್ದು ಎಂದೆನಿಸದೆ ಆ ಹೊತ್ತು ನನ್ನೂರಿನ ಬಾಲಕಿಯರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಯಾರಿಗಾದರೂ ಸಹಜವೆನ್ನುವಂತೆ ಮೂಡುವ ಮನದಿಂಗಿತವೇ ಆಗಿತ್ತು ಎನ್ನುವುದರಲ್ಲಿ ನನಗೆ ಈ ಹೊತ್ತು ಯಾವ ಸಂಶಯವೂ ಉಳಿದಿಲ್ಲ. ನನ್ನ ಮನೆಯ ಹುಡುಗಿಯರ “ಸಮೂಹಸನ್ನಿ”ಯ ಪ್ರಖರತೆಯನ್ನು ನೋಡಿಯೇ ದಂಗಾದ ನನಗೆ ಮುಂದೆ ಅಂತಹ ಅನೇಕ ಸಂಗತಿಗಳನ್ನು ಅನಿವಾರ್ಯವಾಗಿ ಅರಗಿಸಿಕೊಳ್ಳಬೇಕಾದ ಸಂದರ್ಭಗಳು ಬಂದೊದಗಿದವು. ನಾನು ಕೇಳಲ್ಪಟ್ಟ ಇಂತಹ ಪ್ರತಿಯೊಂದು ಘಟನೆಯೂ ಲಚ್ಚಕ್ಕ ಮತ್ತು ಮಕ್ಕಳ ನಡುವಿನ ಗಟ್ಟಿಯಾದ ಅಸೀಮ ಭಾವನಾತ್ಮಕ ಬಾಂಧವ್ಯಕ್ಕೆ ಸಾಕ್ತಿಯಾಗುತ್ತದೆ. ಲಚ್ಚಕ್ಕ ಮದುವೆಗೆ ಬಾರದೆ, ತಬ್ಬಲಿಯಾದ ನನ್ನನ್ನು ಧಾರೆ ಎರೆಯದೆ, ಹಸೆಮಣೆಯನ್ನು ಏರಲಾರೆ ಎಂದು ಹಟಕ್ಕೆ ಬಿದ್ದ ಲಚ್ಚಕ್ಕನ ಫಲಾನುಭವಿ ಹುಡುಗಿಯೊಬ್ಬಳ ಘಟನೆ ಒಂದೆಡೆಯಾದರೆ, ಪರರಾಜ್ಯದಲ್ಲಿ ನೌಕರಿ ಮಾಡುತ್ತಿದ್ದ ಊರ ಹುಡುಗಿಯೊಬ್ಬಳು ಬರೋಬ್ಬರಿ ಎರಡು ವರ್ಷಗಳ ಮೇಲೆ ಊರಿಗೆ ಬಂದಾಗ ತನ್ನ ಮನೆಗೆ ತೆರಳುವ ಮೊದಲು ಲಚ್ಚಕ್ಕನ ಮನೆಗೆ ಭೇಟಿಕೊಟ್ಟು ಆಕೆಯನ್ನು ಸಿಹಿ, ಸೀರೆಗಳ ಭರ್ಜರಿ ಕೊಡುಗೆಗಳ ಮುಖಾಂತರ ಸತ್ಕರಿಸಿ ತನ್ನ ಕೃತಜ್ಞತೆಗಳನ್ನು ಅರ್ಪಿಸಿದ್ದು ಸದಾ ಮನದಂಗಳದಲ್ಲಿ ಹಸಿರಾಗಿಯೇ ಉಳಿಯತಕ್ಕದ್ದು. ಲಚ್ಚಕ್ಕ ನಿವೃತ್ತಿಯ ನಂತರದ ತನ್ನ ಬಹುಪಾಲು ಸಮಯವನ್ನು ಪರ ಊರುಗಳಲ್ಲಿ ನೆಲಸಿದ ತನ್ನ ಶಿಷ್ಯೆಯರ ಒತ್ತಾಯಕ್ಕೆ ಕಟ್ಟುಬಿದ್ದು ಅವರ ಮನೆಗಳಲ್ಲಿ ತಿಂಗಳುಗಳ ಕಾಲ ನಿಂತು, ಹೆತ್ತತಾಯಿಗೆ ಸಲ್ಲುವ ರೀತಿಯ ಆತಿಥ್ಯಕ್ಕೆ ಭಾಜನಳಾಗಿ ದಿನಗಳನ್ನು ದೂಡುತ್ತಿದ್ದ ಕಥೆ ಮನಕಲಕುವ ಘಟನಾಕ್ರಮಗಳ ಬಹು ಉದ್ದವಾದ ಶ್ರೇಣಿಯಾಗಿಯೇ ಉಳಿಯುತ್ತದೆ. ದಶಕಗಳ ಕಾಲ ಲಚ್ಚಕ್ಕ ಅನೂಚಾನವಾಗಿ ನಡೆಸಿಕೊಂಡು ಬಂದ ಮಧ್ಯಾಹ್ನದ ಬಿಸಿಯೂಟಕ್ಕೆ ತಮ್ಮ ಕೈಲಾದ ದೇಣಿಗೆಯನ್ನು ಕೊಡುವ ಪ್ರಥೆಯನ್ನು ಊರ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿನಿಯರು ಪ್ರಾರಂಭಿಸಿದ ನಂತರ ಲಚ್ಚಕ್ಕನ ದಾಸೋಹಕ್ಕೆ ಎಷ್ಟು ದೊಡ್ಡ ಮಟ್ಟದಲ್ಲಿ ಹಣ ಒಳಹರಿದು ಬಂತು ಎಂದರೆ ಬಾಲಕಿಯರ ಶಾಲೆಯಲ್ಲಿ ಶುರುವಾದ ಮಧ್ಯಾಹ್ನದ ಬಿಸಿಯೂಟದ ಪರಿಪಾಠ, ಹಣದ ಯಥೇಚ್ಚ ಪೂರೈಕೆಯಿಂದಾಗಿ, ಬಾಲಕರ ಪ್ರಾಥಮಿಕ ಶಾಲೆಗೂ ವಿಸ್ತರಿಸಲ್ಪಟ್ಟಿತು. “ಕೆರೆಯ ನೀರನ್ನು ಕೆರೆಗೆ ಚೆಲ್ಲು”ವ ಮೂಲಕ ತಮ್ಮಲ್ಲಿ ಮಡುಗಟ್ಟಿದ ಧನ್ಯತಾಭಾವವನ್ನು ಹಣದ ರೂಪದ ದೇಣಿಗೆಯ ಮೂಲಕ ಹರಿಯಲು ಬಿಟ್ಟ, ಊರಿನ ಶಾಲೆಯಲ್ಲಿ ಕಲಿತು ಆರ್ಥಿಕವಾಗಿ ಸ್ವಾವಲಂಬಿಗಳಾದ ಯುವತಿಯರ ಆರ್ಥಿಕ ನೆರವಿನಿಂದ, ಶಿಕ್ಷಕರೂ ಸೇರಿದಂತೆ ಉಳಿದವರು ಲಚ್ಚಕ್ಕನ ದಾಸೋಹದಕ್ಕೆ ಮಾಡುತ್ತಿದ್ದ ಹಣ ಸಹಾಯಕ್ಕೆ ಶಾಶ್ವತರೂಪದಲ್ಲಿ ಬೀಗಮುದ್ರೆ ಬೀಳುವಂತಾಯಿತು. ಲಚ್ಚಕ್ಕನ ಮಹತ್ಕಾರ್ಯದಿಂದ ಉಪಕೃತರಾದ ಊರಿನ ಹೆಣ್ಣುಮಕ್ಕಳ ಪಟ್ಟಿ ಎಷ್ಟು ದೊಡ್ಡದಿದೆ ಎಂದರೆ ಇಂತಹ ಫಲಾನುಭವಿಗಳು ತಾವೇ ಸ್ವತಃ ಮುಂದೆ ಬಂದು ಲಚ್ಚಕ್ಕನನ್ನು ಕುರಿತಾದ ತಮ್ಮ ಕಥೆಗಳಿಗೆ ಧ್ವನಿಯಾಗದೇ ಹೋದಲ್ಲಿ ಇದನ್ನು ಒಂದೆಡೆ ಸಂಗ್ರಹಿಸಿಡುವುದೂ ಅಸಾಧ್ಯವಾದ ಮಾತೇ ಸರಿ.
ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಸುಶಿಕ್ಷಿತರು, ವಿದ್ಯಾವಂತರು, ಅಕ್ಷರಸ್ಥರು ಎಂದು ಸಮಾಜ ಒಪ್ಪಿಕೊಂಡ ಜನಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಶಾಲೆಯ ಮುಖವನ್ನೇ ಕಾಣದ, ಅಕ್ಷರಜಗತ್ತಿಗೆ ಅಪರಿಚಿತರಾಗಿಯೇ ಉಳಿದ ನಿರಕ್ಷರ ಕುಕ್ಷಿಗಳಿಂದ ಹೆಚ್ಚಿನ ಸೇವೆ ಸಂದಾಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾರು ಜೀವನದಲ್ಲಿ ಸಮಾಜವತಿಯಿಂದ ಪ್ರಕೃತಿದತ್ತವಾಗಿ, ನ್ಯಾಯಬದ್ಧವಾಗಿ ದೊರೆಯಬೇಕಾದ ಮೂಲಭೂತ ರೂಪದ ಸವಲತ್ತುಗಳನ್ನು ಪಡೆಯಲು ವಿಫಲರಾಗಿರುತ್ತಾರೋ ಅದರ ಕೊರತೆ ಮುಂದೆ ಅವರನ್ನು ಜೀವನಪರ್ಯಂತ ದುಃಸ್ವಪ್ನವಾಗಿ ಕಾಡುವುದಷ್ಟೆ ಅಲ್ಲದೆ, ಅಂತಹುದೇ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದ ಸಮಾಜದ ಮತ್ತಿತರ ವ್ಯಕ್ತಿಗಳ ಕಲ್ಯಾಣದತ್ತ ಸೆಳೆಯುತ್ತದೆ. ನನಗೆ ಕಾರಣಾಂತರಗಳಿಂದ ಲಭ್ಯವಾಗದೇ ಹೋದ ಸವಲತ್ತು ಬೇರೆಯವರಿಗೆ ಸುಲಭವಾಗಿ, ಉಚಿತವಾಗಿ ದೊರೆಯಬೇಕು ಎನ್ನುವ ಕಳಕಳಿ, ಕಾಳಜಿ ಇಂತಹವರನ್ನು ಸಮಾಜ ಸೇವೆಯೆಡೆಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇಂದು ನಮ್ಮ ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ಉಚಿತ ಊಟ, ವಸತಿಯ ವ್ಯವಸ್ಥೆಗಳು, ಉಚಿತ ವಿದ್ಯಾರ್ಥಿನಿಲಯಗಳು, ಉಚಿತ ವಿದ್ಯಾಭ್ಯಾಸದ ವ್ಯವಸ್ಥೆಗಳು, ಸಾಮೂಹಿಕ ವಿವಾಹದಂತಹ ಹಲವಾರು ಕಲ್ಯಾಣಕಾರಿ ಯೋಜನೆಗಳ ಹಿಂದೆ ಇಂತಹ ಸೌಲಭ್ಯಗಳಿಂದ ತಮ್ಮ ಬಾಳಿನಲ್ಲಿ ವಂಚಿತರಾದ ಪುಣ್ಯವಂತರ ನೆರಳು ಇಣುಕಿ ಹಾಕುತ್ತಿರುತ್ತದೆ. ವ್ಯಕ್ತಿಗತರೂಪದಲ್ಲಿ ಆದ ಅನ್ಯಾಯಕ್ಕೆ ಸಮಷ್ಟಿಮಟ್ಟದಲ್ಲಿ ನ್ಯಾಯ ದೊರಕಿಸುವ ಇಂತಹವರ ಪ್ರಯತ್ನಗಳ ಕಾರಣ ಮಾತ್ರದಿಂದ ಸಮಾಜವೊಂದು ಸಮೃದ್ಧವಾಗಿ ಬೆಳೆಯುತ್ತದೆ, ತನ್ನ ನಿಜನೆಲೆಗಳನ್ನು ಆವಿಷ್ಕರಿಸುತ್ತದೆ ಮತ್ತು ತನ್ನ ಕ್ಷಿತಿಜಗಳ ಯಾವತ್ತೂ ವಿಸ್ತರಣೆಯಲ್ಲಿ ವ್ಯಸ್ತವಾಗಿರುತ್ತದೆ ಎಂದು ನಾನು ಬಲವಾಗಿ ಭಾವಿಸಿದ್ದೇನೆ. ಲಚ್ಚಕ್ಕನ ದಶಕಗಳ ಸೇವೆಯನ್ನೂ ನಾವು ಇದೇ ತಿಳುವಳಿಕೆಯ ಬೆಳಕಿನಲ್ಲಿ ನೋಡಬೇಕಾಗುತ್ತದೆ, ಅರ್ಥೈಸಿಕೊಳ್ಳುವ ಪ್ರಯತ್ನಕ್ಕೆ ನಾಂದಿ ಹಾಡಬೇಕಾಗುತ್ತದೆ. ಸಮಾಜಸೇವೆಯನ್ನು ದೈವಾರ್ಚನೆಯ ಮಟ್ಟಕ್ಕೆ ಕೊಂಡೊಯ್ದ ನಮ್ಮೂರಿನ ಹತ್ತು ಹಲವು ಪ್ರಭೂತಿಗಳಲ್ಲಿ ತನ್ನ ನಿಸ್ವಾರ್ಥ ಸೇವೆಯ ಕಾರಣದಿಂದಾಗಿ ಲಚ್ಚಕ್ಕನೂ ಹೊಳೆಯುತ್ತಿರುವ ಸೇವಾಕಾಶದಲ್ಲಿ ಧ್ರುವ ನಕ್ಷತ್ರದಂತಹ ಬೆಳಕನ್ನು ಮೂಡಿಸಿದ್ದಾಳೆ ಎಂದೆನಿಸುತ್ತಿದೆ.
ನಮ್ಮ ಮನೆಯಲ್ಲಿ ನಡೆದ ಹುಡುಗಿಯರ ಗಲಾಟೆ ವೇಳೆ ಎಲ್ಲ ಹುಡುಗಿಯರಿಗೂ ಲಚ್ಚಕ್ಕನ ಪಾತ್ರವನ್ನು ನೀಡುವ ಮೂಲಕ ಅವರ ಉದ್ರಿಕ್ತ ಭಾವನೆಗಳನ್ನು ತಣ್ಣಗಾಗಿಸಿದ ನನ್ನ ನ್ಯಾಯಮತ್ತೆಗೆ ಇವತ್ತು ನನ್ನ ಎದೆಯಲ್ಲಿ ಹೆಮ್ಮೆ ಮಡುಗಟ್ಟಿದೆ. ಭಗವಂತ “ತಥಾಸ್ತು” ಎಂದರೆ ಜಗತ್ತಿನ ಎಲ್ಲಾ ಹೆಣ್ಣುಮಕ್ಕಳೂ “ಲಚ್ಚಕ್ಕನಾಗಲಿ” ಎಂದು ಹರಸುವ ಮೂಲಕ ಎಲ್ಲಾ ದೇಶಕಾಲಗಳ ಹೆಣ್ಣು ಸಂತತಿಯನ್ನು ಪೂರ್ಣಮಟ್ಟದ ವಿದ್ಯಾವಂತರನ್ನಾಗಿಸಿ, ವಿಶ್ವವನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಬರದಿಂದ ಶಾಶ್ವತಮುಕ್ತಿಯತ್ತ ಕೊಂಡೊಯ್ಯುವ ಹಗಲುಗನಸನ್ನು ಕಾಣುತ್ತಲೇ ಲಚ್ಚಕ್ಕನ ಆತ್ಮಕ್ಕೆ ಅನಂತಾನಂತ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸುವ ಮೂಲಕ ನನ್ನ ಗೌರವವನ್ನು ವೃದ್ದಿಸಿಕೊಳ್ಳುತ್ತಿದ್ದೇನೆ.