ಬೆಂಗಳೂರು ಹೊರವಲಯದಲ್ಲಿ ಶುರುವಾಯಿತು ಭೂಮಾಫಿಯಾ-ಮರ್ಡರ್ !!
Writing;ಪರಶಿವ ದನಗೂರು
ಆನೇಕಲ್ ನಾಗರೀಕರನ್ನು ಬೆಚ್ಚಿ ಬೀಳಿಸಿದ್ದ ರಾಜಶೇಖರ್ ರೆಡ್ಡಿ ಎಂಬ ಆಂಧ್ರಪ್ರದೇಶದ ಚಿತ್ತೂರು ಮೂಲದ ರಿಯಲ್ ಎಸ್ಟೇಟ್ ಬ್ರೋಕರ್ ಮರ್ಡರ್ ಮಿಸ್ಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಯುವಕರನ್ನು ಬಂಧಿಸಿರುವ ಆನೇಕಲ್ ಪೊಲೀಸರು ಭೂಮಾಫಿಯಾ ಕೈವಾಡವನ್ನು ಬಯಲಿಗೆಳೆದಿದ್ದಾರೆ! ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯ ಮೀಸೆ ಜಯರಾಂ ಮತ್ತು ಆತನ ಮಗ ಶಶಿಕುಮಾರ್ ಒಂದೂ ಕಾಲೂ ಕೋಟಿಗೆ ಸುಫಾರಿ ನೀಡಿ ಕೊಲೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ! ಬೆಂಗಳೂರಿನ ಬಿ.ಟಿ.ಎಂ ಲೇಔಟಿನ ಸುಧಾಕರ್ ರೆಡ್ಡಿ ಹೆಸರಿನಲ್ಲಿ ಇದ್ದ, ಕೋಟ್ಯಂತರ ರೂಪಾಯಿ ಬೆಲೆಬಾಳುವ 32ಗುಂಟೆ ಜಮೀನನ್ನು, ತಮ್ಮನಾಯಕನಹಳ್ಳಿ ಮೀಸೆ ಜಯರಾಂ ಅಗ್ರಿಮೆಂಟ್ ಹಾಕಿಕೊಂಡಿದ್ದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತನಗೇ ರಿಜಿಸ್ಟ್ರೇಷನ್ ಮಾಡಿಕೊಡುವಂತೆ, ಮ್ರತ ಸುಧಾಕರ್ ರೆಡ್ಡಿ ಹೆಂಡತಿ ಪದ್ಮ ಮತ್ತು ಮಕ್ಕಳಲ್ಲಿ ಒತ್ತಾಯಿಸುತ್ತಿದ್ದನಂತೇ! ಇದೇ ಸಮಯದಲ್ಲಿ ಆಂದ್ರ ಮೂಲದ ರಿಯಲ್ ಎಸ್ಟೇಟ್ ಬ್ರೋಕರ್ ರಾಜಶೇಖರ ರೆಡ್ಡಿ ಮಧ್ಯೆ ಪ್ರವೇಶಿಸಿ ಪದ್ಮ ಮತ್ತು ಮಕ್ಕಳ ಪರವಾಗಿನಿಂತು ಮೀಸೆ ಜಯರಾಂಗೆ ಸೆಡ್ಡು ಹೊಡೆದಿದ್ದನಂತೆ. ಹಾಗೆಯೇ ಆನೇಕಲ್ ಸುತ್ತ ಮುತ್ತವಿದ್ದ ಉಳಿದ ಸುಧಾಕರ್ ರೆಡ್ಡಿ ಜಮೀನುಗಳಿಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು , ಬೇಲಿ ಸುತ್ತಿಗುಳುಂ ಮಾಡಲು ರೆಡಿ ಇದ್ದ ಮೀಸೆ ಜಯರಾಂ ಮತ್ತು ಕಾಣದ ಕೈಗಳಿಗೇ ಈಗ ಕೊಲೆಯಾಗಿರುವ ರಾಜಶೇಖರ್ ರೆಡ್ಡಿ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ, ಈ ಸುಫಾರಿ ಕೊಲೆ ನಡೆದಿದೆಯಂತೇ. ಇದು ಸದ್ಯಕ್ಕೆ ಆನೇಕಲ್ ಪೊಲೀಸರು ಹೇಳುತ್ತಿರುವ ಮೊದಲ ಸುತ್ತಿನ ತನಿಖೆಯ ವರದಿ. ಆದರೆ ಆನೇಕಲ್ ಪಟ್ಟಣದಲ್ಲಿ ನಡೆದ ಈ ಸುಫಾರಿ ಕೊಲೆಯ ಹಿಂದೆ ಇನ್ನೂ ಹಲವಾರು ಕಾಣದ ಕೈಗಳಿರುವುದು ಪೊಲೀಸರಿಗೂ ವಾಸನೆ ಹತ್ತಿದೆ. ಅವರನ್ನೂ ಬೆಲೆಗೆ ಕೆಡವಲು ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಮಹಾನಂದ್ ಮತ್ತು ತಂಡ ಕಾರ್ಯಾಚರಣೆಗಿಳಿದಿದೆ. ಈ ಸುಫಾರಿ ಕೊಲೆಯ ಹಿಂದೆ ಬಣ್ಣದ ಜಗತ್ತಿನ ಜನರ ಹೆಸರುಗಳು, ಕರಿಕೋಟಿನ ಕೈವಾಡಗಳೂ ತಳುಕುಹಾಕಿಕೊಂಡು ಹರಿದಾಡುತ್ತಿರುವುದು, ಅಂತವರನ್ನು ಈ ಸುಫಾರಿ ಕೊಲೆ ಪ್ರಕರಣದಿಂದ ಬಚಾವು ಮಾಡಲು ಸ್ಥಳೀಯ ರಾಜಕೀಯ ಪುಡಾರಿಗಳು, ಪುರಸಭಾ ಸದಸ್ಯರು ಫೀಲ್ಡಿಗಿಳಿದಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿವೆ.
ಕೊಲೆಯಾದ ರಾಜಶೇಖರ ರೆಡ್ಡಿ
ಹಾಗೆಯೇ ಈ ಕೊಲೆಯನ್ನು ಒಂದೂ ಕಾಲು ಕೋಟಿ ಹಣಕ್ಕೆ ಸುಫಾರಿ ಪಡೆದಿರುವ ಕೊಲೆಗಾರರನ್ನು ನೋಡುತಿದ್ದರೇ, ಅವರ ಹಿನ್ನೆಲೆಯನ್ನು ಕೆದಕಿದಾಗ ಈ ಕೊಲೆಗಾರರಿಗೇ ಮತ್ಯಾರೋ ಬಾಸ್ ಗಳು ಇರುವ ಸಾಧ್ಯತೆಯೂ ಇದೆ! ಆ ವಿಚಾರ ಕೂಡ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ತನಿಖೆಯಿಂದಷ್ಟೇ ಬಯಲಾಗ ಬೇಕಿದೆ. ಏಕೆಂದರೆ ಈಗ ಆನೇಕಲ್ ಕೇವಲ ಒಂದು ಬೆಂಗಳೂರು ಗ್ರಾಮಾಂತರದ ತಾಲೂಕು ಕೇಂದ್ರವಾಗಿ ಮಾತ್ರ ಉಳಿದಿಲ್ಲ. ಈಗದು ದೊಡ್ಡ ಭೂ ದಂಧೆಯ ಕೇಂದ್ರವಾಗಿ, ಭೂಮಾಫಿಯಾ ನಡೆಸುವವರ ಕಾರಸ್ಥಾನವಾಗಿ ಮಾರ್ಪಾಡಾಗಿದೆ. ಈ ಕ್ರೂರ ವ್ಯವಸ್ಥೆಯೊಳಗೆ ಈಗ ರೌಡಿಗಳು, ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಪೋಲೀಸರು, ಸಂಘಟನೆಗಳ ಮುಖಂಡರು ಎಲ್ಲಾದರೂ ಇದ್ದಾರೆ. ಇತ್ತೀಚೆಗೆ ಬೆಂಗಳೂರಿನ ಗ್ರಾಮಾಂತರ ಪ್ರದೇಶವಾದ ಆನೇಕಲ್ ಸುತ್ತ ಮುತ್ತಲಿನ ಭೂಮಿಗೆ ಬಂಗಾರದ ಬೆಲೆ ಬಂದಿರುವುದರಿಂದ ಇಲ್ಲಿ ಇಂತಹ ಸುಫಾರಿ ಕೊಲೆಗಳು, ಭೂ ವಿವಾದದ ಪ್ರಕರಣಗಳು ವರದಿಯಾಗುತ್ತಿವೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿಭಾಗದ ಊರಾದ ಆನೇಕಲ್ ತಾಲ್ಲೂಕಿನ ಸುತ್ತ ಮುತ್ತ ಹೊಸ ಲೇಔಟ್ ಬಡಾವಣೆಗಳು, ವಿಲ್ಲಾ ಗಳು, ಅಪಾರ್ಟ್ಮೆಂಟ್ಗಳು ತಲೆ ಎತ್ತುತ್ತಿರುವುದರಿಂದ ಬೇರೆ ರಾಜ್ಯಗಳಿಂದ ಹಣ ಹೂಡುವ ಬಿಲ್ಡರ್ ಗಳು, ರಾಜಕಾರಣಿಗಳು ಇಲ್ಲಿ ಬಂದು ಭೂಮಿ ಖರೀದಿಸುತ್ತಿರುವುದರಿಂದ, ಭೂಮಿಯ ಬೆಲೆ ಗಗನಕ್ಕೇರುತ್ತಿದೆ. ಇಲ್ಲಿ ತಲೆ ಎತ್ತಿರುವ ರಿಯಲ್ ಎಸ್ಟೇಟ್ ಮಾಫಿಯಾ ಕಾರಣದಿಂದ, ಬೆಂಗಳೂರಿನ ಹಲವಾರು ಭೂಗತ ಜಗತ್ತಿನ ರೌಡಿಗಳು ಇಲ್ಲಿ ಬಂದು ತಮ್ಮ ಇಲ್ಲೀಗಲ್ ದಂಧೆಗಳನ್ನು ಸುರುಹಚ್ಚಿಕೊಂಡಿದ್ದಾರೆ.
ಸುಪಾರಿ ನೀಡಿದ ಮೀಸೆ ಜಯರಾಂ
ಅಕ್ರಮ ಬಡಾವಣೆಗಳಿಗೆ ಪಾಲುದಾರರಾಗುತ್ತಿರುವ ರೌಡಿಗಳು ಇಲ್ಲೀಗಲ್ ಕಲ್ಲು ಗಣಿಗಾರಿಕೆ ಕ್ರಷರ್ ಗಳು, ಫಿಲ್ಟರ್ ಮರಳು ಮಾಫಿಯಾ ಜಾಲದ ಜೊತೆ ಕೈಜೋಡಿಸಿ ದಂಧೆ ಮಾಡುತ್ತಿರುವ ಮಾಹಿತಿಗಳಿವೆ! ಬೆಂಗಳೂರು, ತಮಿಳು ನಾಡು, ಹೊಸೂರು,ಥಳಿ, ಕ್ರಿಷ್ಣ ಗಿರಿ, ಡೆಂಕಣಿಕೋಟೆಯ ಸುತ್ತ ಮುತ್ತಲಿನ ಕೆಲವು ಕುಖ್ಯಾತ ರೌಡಿಗಳು ಆನೇಕಲ್ ಅನ್ನು ತಮ್ಮ ಅಡಗುದಾಣಗಳಾಗಿ ಮಾಡಿಕೊಂಡು, ಕೊಲೆ ಮಾಡಿಸಿದ ನಂತರ ಇಲ್ಲಿನ ರೆಸಾರ್ಟ್ಗಳು, ಲಾಡ್ಜ್ ಗಳಲ್ಲಿ ಹುಡುಗರನ್ನಿಟ್ಟು, ಪೊಲೀಸರ ಕಣ್ ತಪ್ಪಿಸಿ ನಿರೀಕ್ಷಣಾ ಜಾಮೀನು ಪಡೆಯುತ್ತಾರಂತೇ! ತಮಿಳುನಾಡಿನಲ್ಲಿ ಕೊಲೆಮಾಡಿದರೇ ಆನೇಕಲ್ ಒಳಗೆ ನುಸುಳಿ ಪೊಲೀಸರಿಂದ ತಲೆಮರೆಸಿಕೊಳ್ಳುವ ರೌಡಿಗಳು, ಆನೇಕಲ್ ಸುತ್ತಮುತ್ತ ಕೊಲೆ ಮಾಡಿದರೆ ಮೂರು ಕಿಲೋಮೀಟರುಗಳ ಗಡಿ ದಾಟಿ ತಮಿಳುನಾಡಿನ ಹಳ್ಳಿಗಳಲ್ಲಿ ಬಚ್ಚಿಟ್ಟುಕೊಳ್ಳುವುದು ಇಲ್ಲಿ ಸರ್ವೇ ಸಾಮಾನ್ಯ ವಿಚಾರ! ಇತ್ತೀಚೆಗಂತೂ ಗಾಂಜಾ ನಶೆಯ ಚಟಕ್ಕೆ ಬಿದ್ದಿರುವ ಕೆಲವು ನಿರುದ್ಯೋಗಿ ಆನೇಕಲ್ ವ್ಯಾಪ್ತಿಯ ಮೀಸೆ ಚಿಗುರದ ಯುವಕರು ರೌಡಿಸಂ ಶೋಕಿಗೆ ಬಿದ್ದು ಕೊಲೆ, ಸುಲಿಗೆ, ದರೋಡೆ ಪ್ರಕರಣದಲ್ಲಿ ಸಿಕ್ಕು ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ತಮಿಳು ನಾಡಿನ ಕಾಡುಗಳಿಂದ ಗಡಿಯ ಮೂಲಕ ಬೆಂಗಳೂರು ಪ್ರವೇಶಿಸುವ ಗಾಂಜಾಗೆ ಬೆಂಗಳೂರಿನಲ್ಲಿ ಬಾರಿ ಬೇಡಿಕೆ. ಆನೇಕಲ್ಲಿನಲ್ಲೂ ಹಲವಾರು ಗಾಂಜಾ ಪೆಡ್ಲರ್ ಗಳಿದ್ದಾರೆ.
ಈ ಹಿಂದೆ ದೇವರಾಜ ಎಂಬ ಗಾಂಜಾ ಪೆಡ್ಲರ್ ಒಬ್ಬನ ಕೊಲೆಯಾಗಿ ಆತನ ಕೊಲೆಗೆ ಸುನಿಲ್-ವಿನೂತ್ ಎಂಬ ರೌಡಿಶೀಟರ್ ಗಳ ರಿವೇಂಜ್ ಕಿಲ್ಲಿಂಗ್ ಗಳೂ ಆಗೀ, ಆನೇಕಲ್ ಈಗ ಗಾಂಜಾ ಹುಡುಗರ ಅಂಡರ್ ವರ್ಲ್ಡ್ ತೆಕ್ಕೆಗೆ ಬಿದ್ದು ತನ್ನ ಚಾರಿತ್ರ್ಯವನ್ನು ಕಳೆದು ಕೊಳ್ಳುವ ಹಂತಕ್ಕೆ ಹೋಗುತ್ತಿದೆ. ಒಂದು ಕಾಲಕ್ಕೆ ಹೋರಾಟಗಾರ ತವರು ನೆಲವಾಗಿದ್ದ ಆನೇಕಲ್ ಮೀಸಲು ಕ್ಷೇತ್ರದಲ್ಲಿ ಬಿ. ಗೋಪಾಲ್ , ಜಿಗಣಿ ಶಂಕರ್, ಫಟಾಫಟ್ ನಾಗರಾಜ್ ರಂತಹ ಚಳುವಳಿಗಾರರು, ದಲಿತ ಹೋರಾಟಗಾರರು ಹುಟ್ಟಿಕೊಂಡು ಯುವಕರ ಬದುಕಿಗೊಂದು ಭರವಸೆಯ ಬೆಳಕಿನ ಜ್ಯೋತಿ ಹೊತ್ತಿಸಿದ್ದರು.
ಈಗಲೂ ವಕೀಲರಾದ ಆನಂದ್ ಚಕ್ರವರ್ತಿ ಮತ್ತು ಸಂಗಡಿಗರು ದಾರಿ ತಪ್ಪುತ್ತಿರುವ ಆನೇಕಲ್ ಯುವಕರನ್ನು ಸರಿದಾರಿಗೆ ತರುವ ಚಿಂತನ-ಮಂಥನ ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಆನೇಕಲ್ ನ ಕೆಲವು ಪುಂಡರ, ಸಮಾಜ ಘಾತುಕ ಮನಸ್ಸಿನ ರೌಡಿ ಚಟುವಟಿಕೆಯ ವ್ಯಕ್ತಿಗಳಿಂದ ಕ್ರಿಮಿನಲ್ ಗಳ ತಾಣವಾಗಿ, ಗಾಂಜಾ ವ್ಯಸನಿಗಳ ಅಡ್ಡೆಯಾಗಿ ಪರಿವರ್ತಿತವಾಗುತ್ತಿರುವ ಆನೇಕಲ್ ಕ್ಷೇತ್ರವನ್ನು ಪೊಲೀಸರು ಮತ್ತು ಸಾಮಾಜಿಕ ಕಳಕಳಿಯುಳ್ಳ ಸಂಘಟನೆ ಗಳಷ್ಟೇ ಸರಿದಾರಿಗೆ ತರಲು ಸಾಧ್ಯ. ಏಕೆಂದರೆ ಇತ್ತೀಚೆಗೆ ಆನೇಕಲ್ ನಲ್ಲಿ ರೌಡಿಗಳ ಗ್ಯಾಂಗ್ ವಾರ್ ನಂತಹ ಸಣ್ಣ ಪುಟ್ಟ ಹೊಡೆದಾಟಗಳೂ ವರದಿಯಾಗುತ್ತಿವೆ, ಈ ಹಿಂದೆ ಡ್ಯಾನ್ಸರ್ ಒಬ್ಬನ ಕೊಲೆಯ ವಿಷಯಕ್ಕೆ ಆನೇಕಲ್ ಹೊತ್ತಿ ಉರಿದಿತ್ತು. ತುಂಬಾ ಹಿಂದೆ ಹಳೆಯ ದ್ವೇಷಕ್ಕೆ, ಜಮೀನು ವಿವಾದಕ್ಕೆ ಜೋಡಿ ಕೊಲೆಗಳೂ ಆಗಿ ಜನ ಬೆಚ್ಚಿ ಬಿದ್ದಿದ್ದರು
ಆನೇಕಲ್ ಎಂ.ಎಲ್.ಎ. ಆಗಲು ಹೊರಟಿದ್ದ ಬಿಜೆಪಿ ಯ ಕಿತ್ತಗಾನಹಳ್ಳಿ ವಾಸು ಎಂಬಾತನ ಭೀಕರ ಹತ್ಯೆಯಾಗಿ, ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಣದ ಮೆರವಣಿಗೆಯೇ ನಡೆದಿತ್ತು! ರಾಜಕೀಯ ಹತ್ಯೆಗಳು, ಕೋಮು ದ್ವೇಷದ ಗಲಭೆ-ಕೊಲೆಗಳು, ಸಂಘಟನೆಯ ಮುಖಂಡರ ಸುಫಾರಿ ಕೊಲೆಗಳ ಜೊತೆಗೆ ಇತ್ತೀಚೆಗೆ ಈ ರಾಜಶೇಖರ ರೆಡ್ಡಿಯ ಸುಫಾರಿ ಕೊಲೆಯೂ ಸೇರಿಕೊಂಡು ಆನೇಕಲ್ ಚರಿತ್ರೆಗೆ ಮತ್ತೊಂದು ಕಳಂಕ ಮೆತ್ತಿಕೊಂಡಿದೆ. ಕೇಂದ್ರ ಸರ್ಕಾರದ ಮಂತ್ರಿ ಆನೇಕಲ್ ನಾರಾಯಣ ಸ್ವಾಮಿ ಮನೆ ಮುಂದೆಯೇ ನಡೆದಿದ್ದ ಆಂಧ್ರದ ಚಿತ್ತೂರು ಮೂಲದ ರಾಜಶೇಖರ್ ರೆಡ್ಡಿ ಬ್ರೂಟಲ್ ಮರ್ಡರ್ ನಿಂದ ಇಡೀ ಆನೇಕಲ್ ಬೆಚ್ಚಿ ಬಿದ್ದಿತ್ತು.
ಮೊದಲಿಗೆ ಗುಂಡುಹಾರಿಸಿ ಕೊಲ್ಲಲಾಗಿದೆಯೆಂಬ ವದಂತಿ ಹಬ್ಬಿತ್ತು. ಹಲ್ಲೆ ಆಷ್ಟು ರಣ ಬೀಕರವಾಗಿತ್ತು. ಸುಫಾರಿ ಕಿಲ್ಲರ್ ಗಳು ರಾಜಶೇಖರ್ ರೆಡ್ಡಿಯ 3311 ನಂಬರಿನ ಸ್ವಿಫ್ಟ್ ಕಾರನ್ನು ಅಡ್ಡಗಟ್ಟಿ ಮಚ್ಚು ಲಾಂಗುಗಳಿಂದ ಕತ್ತರಿಸಿ ಕೊಂದು ಯಾವ ಸುಳಿವನ್ನೂ ಬಿಡದೆ ಪರಾರಿಯಾಗಿದ್ದರು. ಆಗ ಈ ನಿಗೂಢ ಕೊಲೆಯ ಬೆನ್ನು ಹತ್ತಿದ ಆನೇಕಲ್ ಡಿವೈಎಸ್ಪಿ ಮಲ್ಲೇಶ್ ಮತ್ತು ಆನೇಕಲ್ ಇನ್ಸ್ಪೆಕ್ಟರ್ ಮಹಾನಂದ್ ರವರ ತಂಡ ಎಸ್ಪಿ ವಂಶಿಕ್ರಷ್ಣರ ಮಾರ್ಗದರ್ಶನದಲ್ಲಿ ಹಗಲು ರಾತ್ರಿ ನಿದ್ದೆಗೆಟ್ಟು ತಮ್ಮ ಚಾಣಾಕ್ಷ ಪೊಲೀಸಿಂಗ್ ಮತ್ತು ಕರ್ತವ್ಯ ನಿಷ್ಠೆಯಿಂದ ಎಲ್ಲಾ ಕೊಲೆಗಾರರನ್ನು ಬಂಧಿಸಿ, ಭೂ ಮಾಫಿಯಾಕಾರಣಕ್ಕೆ ನಡೆದ ಸುಫಾರಿ ಕೊಲೆಯ ರಹಸ್ಯ ವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಲೆಗೆ ಜಮೀನು ವಿವಾದವೇ ಕಾರಣವೆಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದ್ದರೂ, ಇದೊಂದು ಭೂ ಮಾಫಿಯಾದ ಪ್ರಕರಣದಂತೆಯೇ ಒಳಗೆ ವಾಸನೆ ಬರುತ್ತಿದೆ.
ಏಕೆಂದರೆ ಕೊಲೆಗೆ ಸುಫಾರಿ ನೀಡಿರುವ ಆನೇಕಲ್ ನ ತಮ್ಮ ನಾಯಕನ ಹಳ್ಳಿಯ ಮೀಸೆ ಜಯರಾಂ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸ್ರಷ್ಠಿಸುವುದರಲ್ಲಿ ನಿಸ್ಸೀಮ ಎಂಬುದು ಗೊತ್ತಾಗಿದೆ. ಇದೇ ತರಹ ಹಲವು ಭೂ ಮಾಫಿಯಾದ ಭೂಗಳ್ಳರಿಗೇ ಬಡವರ ಜಮೀನಿನ, ಸತ್ತುಹೋಗಿರುವವರ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದ್ದನೆಂಬ ಗುಮಾನಿ ಇದೆ.
ಆ ದಿಕ್ಕಿನಲ್ಲಿಯೂ ತನಿಖೆ ನಡೆಸಬೇಕಿದೆ. ಈ ಮೀಸೆ ಜಯರಾಂ ಹೀಗೆ ಎಷ್ಟು ಜನ ಅಮಾಯಕರ ಜಮೀನುಗಳಿಗೆ ಬೇಲಿ ಸುತ್ತಿ ಗುಳುಂ ಮಾಡಲು ಪ್ಲಾನ್ ಮಾಡಿ, ಯಾವ್ಯಾವ ಸರ್ವೇ ನಂಬರ್ ಗಳಿಗೆ ನಕಲಿ ದಾಖಲೆ ನಕಲಿ ಅಗ್ರಿಮೆಂಟ್ಗಳನ್ನು ಈ ಮೀಸೆ ಜಯರಾಂ ತಯಾರಿಸಿದ್ದಾನೆಂಬುದು ಬಯಲಿಗೆ ಬರಬೇಕು. ಈತನ ಈ ಕ್ರಿಮಿನಲ್ ಚಟುವಟಿಕೆಗಳಲ್ಲಿ ಯಾರು ಪಾಲುದಾರರು ಎಂಬುದು ಪತ್ತೆಯಾಗಬೇಕು. ಏಕೆಂದರೆ ಈಗ ಕೋಲೆಯಾಗಿರುವ ಆಂದ್ರ ಮೂಲದ ರಿಯಲ್ ಎಸ್ಟೇಟ್ ಬ್ರೋಕರ್ ರಾಜಶೇಖರ್ ರೆಡ್ಡಿ, ಸುಧಾಕರ್ ರೆಡ್ಡಿ ಎಂಬ ವ್ಯಕ್ತಿಯ ಜಮೀನುಗಳಿಗೆ ಕಾವಲುಗಾರನಾಗಿ ಕೆಲಸಮಾಡುತ್ತಿದ್ದ. ಮ್ರತ ಸುಧಾಕರ್ ರೆಡ್ಡಿ ಹೆಂಡತಿ ಪದ್ಮ ಮತ್ತು ಮೂವರು ಹೆಣ್ಣು ಮಕ್ಕಳ ಬೆನ್ನಿಗೆ ನಿಂತು ಅವರ ತಂದೆ ಸುಧಾಕರ್ ರೆಡ್ಡಿಯ ಅತ್ತಿಬೆಲೆ, ಮರಸೂರು, ಇಂಡ್ಲಬೆಲೆ ಬಳಿಯ ಜಮೀನುಗಳನ್ನು ನೋಡಿಕೊಳ್ಳುತ್ತಿದ್ದ .
ಇದೇ ಜಮೀನುಗಳಿಗಾಗಿ ಕೊಲೆಗೆ ಸುಫಾರಿ ನೀಡಿದ್ದ ಮೀಸೆ ಜಯರಾಂ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ತನಗೇ ಮಾರಾಟ ಮಾಡುವಂತೆ ಪದ್ಮ ಮತ್ತು ಮೂವರು ಹೆಣ್ಣು ಮಕ್ಕಳಿಗೆ ಹೆದರಿಸುತಿದ್ದನಂತೇ! ಇದಕ್ಕೆ ಅಡ್ಡಗಾಲಾಗಿದ್ದ ಆಂಧ್ರದ ರಾಜಶೇಖರ ರೆಡ್ಡಿಯನ್ನು ಮುಗಿಸಿದರೇ ಸುಧಾಕರ್ ರೆಡ್ಡಿಯ ಎಲ್ಲಾ ಜಮೀನುಗಳೂ ನಮಗೇ ಸಿಗಬಹುದೆಂಬ ದುರಾಸೆಯಿಂದ ಈ ಮೀಸೆ ಜಯರಾಂ ಮತ್ತು ಮಗ ಶಶಿಕುಮಾರ್ ಹಾಗೂ ಸುಫಾರಿ ಪರದೆಯ ಹಿಂದಿರುವ ಇನ್ನೂ ಹಲವು ಜನರು ಆರು ಜನ ಆನೇಕಲ್ ಹುಡುಗರಿಗೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳಿಗೆ ಸುಫಾರಿ ನೀಡಿ ಕೊಲೆ ಮಾಡಲು ಹೇಳಿದ್ದರಂತೆ! ಆನೇಕಲ್ ನಲ್ಲಿ ಕೊಲೆಮಾಡಿದರೇ ತಮ್ಮ ಮೇಲೆ ಅನುಮಾನ ಬರುತ್ತದೆಂದು ಕಾರಣದಿಂದ ಆನೇಕಲ್ ಹೊರತುಪಡಿಸಿ ಬೇರೆ ಯಾವುದಾದರೂ ಜಾಗದಲ್ಲಿ, ಸಾಧ್ಯವಾದರೇ ಬೆಂಗಳೂರು ಸಿಟಿಯಲ್ಲಿ ಅಟ್ಯಾಕ್ ಮಾಡಿ ಕೊಲೆ ಮಾಡುವಂತೆ ನಿರ್ದೇಶನ ನೀಡಿ ಸುಫಾರಿ ಒಪ್ಪಿಸಿದ್ದರಂತೇ! ನಾಲ್ಕು ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದ ಪ್ರತಾಪ್, ಒಂಟೆ ಆನಂದ, ಸಂದೀಪ್, ಆಟೋ ಸೀನಾ, ಕಾರ್ತಿಕ್, ಗಣೇಶ್ ಎಂಬುವರು ಆಂದ್ರ ಮೂಲದ ಚಿತ್ತೂರಿನವನಾದ ಬೆಂಗಳೂರಿನ ಬಿ.ಟಿ.ಎಂ. ಲೇಔಟ್ ನ ಸುಧಾಕರ್ ರೆಡ್ಡಿಯ ಮನೆಯಲ್ಲಿಯೇ ವಾಸವಿದ್ದ ರಾಜಶೇಖರ ರೆಡ್ಡಿಯನ್ನು ದೇವನಹಳ್ಳಿ ಏರ್ ಪೋರ್ಟ್ ಬಳಿ ಹಿಂಬಾಲಿಸಿ ಕೊಲ್ಲಲು ಆಗದೆ ವಾಪಸ್ಸಾಗಿದ್ದಾರೆ. ಚಿಕ್ಕ ಬಳ್ಳಾಪುರದಲ್ಲೂ ಒಮ್ಮೆ ಟ್ರೈ ಮಾಡಿ ಸುಮ್ಮನಾಗಿದ್ದಾರೆ. ಮತ್ತೊಮ್ಮೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಕೊಲ್ಲುವ ಸಂಚು ರೂಪಿಸಿ ಸಾಧ್ಯವಾಗದೇ ಕೈ ಚೆಲ್ಲಿದ್ದಾರೆ. ಕೊನೆಗೆ ಆಕಸ್ಮಿಕವಾಗಿ ಆನೇಕಲ್ ನಲ್ಲಿಯೇ ಕೇಂದ್ರ ಮಂತ್ರಿ ನಾರಾಯಣ ಸ್ವಾಮಿ ಮನೆ ಮುಂದೆಯೇ ಕಾರಿನಲ್ಲಿ ಹೊರಟಿದ್ದ ರಾಜಶೇಖರ್ ರೆಡ್ಡಿ ಯನ್ನು ಅಡ್ಡಹಾಕಿದ ದುಷ್ಕರ್ಮಿ ಸುಫಾರಿ ಕೊಲೆಗಡುಕರ ತಂಡ ಹತ್ಯೆ ಮಾಡಿ ಪರಾರಿಯಾಗಿತ್ತು. ಯಾವ ಸುಳಿವೂ ಬಿಡದೇ ವಾರಗಟ್ಟಲೆ ತಮಿಳುನಾಡಿನ ಗಡಿದಾಟಿ ಹೋಗಿ ತಲೆಮರೆಸಿಕೊಂಡಿದ್ದ ಕೊಲೆಪಾತಕರನ್ನು ಹಿಡಿಯಲು ಆನೇಕಲ್ ಇನ್ಸ್ಪೆಕ್ಟರ್ ಮಹಾನಂದ್ ಬನ್ನೇರುಘಟ್ಟ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಂಜನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಮತ್ತು ಮಹೇಶ್, ನಾಗರಾಜ್, ಶಂಕರ್, ವಿನಯ್, ಹನುಮಂತರಾಜು, ಸತೀಶ್, ಕ್ರಿಷ್ಣ ಮೂರ್ತಿ ಮುಂತಾದ ಎಲ್ಲಾ ಠಾಣೆಗಳ ಟಫ್ ಪೊಲೀಸ್ ತಂಡ ಕಟ್ಟಿಕೊಂಡು ಕೊರೋನಾ ಮೂರನೆ ಅಲೆಯ ಜ್ವರವಿದ್ದರೂ ಲೆಕ್ಕಿಸದೇ ನಾನಾ ಕಡೆ ಹಗಲು ರಾತ್ರಿ ನಿದ್ದೆಗೆಟ್ಟು ತಲೆಕೆಡಿಸಿಕೊಂಡು ಕಾರ್ಯಾಚರಣೆ ನಡೆಸಿ ಸುಫಾರಿ ಕೊಲೆಗಡುಕರ ತಂಡವನ್ನು ಬಂಧಿಸಿ ಆನೇಕಲ್ ಜನರಲ್ಲಿದ್ದ ಆತಂಕವನ್ನು ಸ್ವಲ್ಪ ದೂರ ಮಾಡಿದ್ದಾರೆ. ಆದರೂ ಈ ಆನೇಕಲ್ ವ್ಯಾಪ್ತಿಯಲ್ಲಿ ಮೀಸೆ ಮೂಡದ ಯುವಕರು ಹೀಗೆ ಮಚ್ಚುಹಿಡಿದು ಹಣಕ್ಕಾಗಿ ಸುಫಾರಿ ಕೋಲೆಗಳಿಗೆ, ಹಫ್ತಾ ವಸೂಲಿಗೆ, ಕಿಡ್ನಾಪ್ ರಿವೇಂಜ್ ಕಿಲ್ಲಿಂಗ್ ಗೆ, ಕಂಡಕಂಡವರ ಭೂಮಿಗೆ ಬೇಲಿ ಸುತ್ತುವುದಕ್ಕೆ ಇಳಿದಿರುವುದು ಕಾನೂನು ಪಾಲನೆ ಮಾಡಬೇಕಾದ ಪೊಲೀಸರಲ್ಲೇ ಆತಂಕ ಹುಟ್ಟಿಸಿದೆ! ತಲೆ ಎತ್ತಿ ನಿಂತ ರಿಯಲ್ ಎಸ್ಟೇಟ್ ಮಾಫಿಯಾ ಈ ನಿರುದ್ಯೋಗಿ ಆನೇಕಲ್ ಯುವಕರನ್ನು ಕೈ ಬೀಸಿ ಕರೆಯುತ್ತಿದೆ. ರೌಡಿಸಂನ ಶೋಕಿ , ಹೆಸರು,ಹಣ ಮಾಡುವ ಉಮ್ಮೇದಿಯ ಹುಚ್ಚಿಗೆ ಬಿದ್ದಿರುವ ಆನೇಕಲ್ ಹುಡುಗರಲ್ಲಿ ಬೆಳೆದು ನಿಲ್ಲಲು ಹವಣಿಸುತ್ತಿದ್ದ ಅಂಡರ್ ವರ್ಲ್ಡ್ ನ ಬೇರು ಕತ್ತರಿಸುವ ಸಲುವಾಗಿಯೇ ಈ ಹಿಂದೆ ಆನೇಕಲ್ ಶೆಟ್ಟಿಹಳ್ಳಿ ಗೇಟ್ ಬಳಿ ಕೊಲೆಯಾದ ರೌಡಿ ಶೀಟರ್ ವೀನೂತ್ ನಾ ಕೊಂದಿದ್ದ ನಾಲ್ಕು ಜನ ಕೊಲೆಗಾರರ ಕಾಲುಗಳಿಗೂ ಇದೇ ಆನೇಕಲ್ ಪೊಲೀಸರು ಗುಂಡು ನುಗ್ಗಿಸಿದ್ದರು! ಆನೇಕಲ್ ನಲ್ಲಿ ಪ್ರಾರಂಭವಾಗಿದ್ದ ರಿವೇಂಜ್ ಕಿಲ್ಲಿಂಗ್ ರಕ್ತಚರಿತ್ರೆಗಳಿಗೆ ಹೆದರಿ ಭಯಬೀತರಾಗಿದ್ದ ಜನರಿಗೆ ಧೈರ್ಯ ತುಂಬಲು ಹಲವಾರು ರೌಡಿ ಪೆರೇಡ್ ಗಳನ್ನೂ ನಡೆಸಿ ಆನೇಕಲ್ ವ್ಯಾಪ್ತಿಯ ಮೀಸೆ ಎಲ್ಲಾ ರೌಡಿಗಳಿಗೂ ಖಡಕ್ ವಾರ್ನಿಂಗ್ ಗಳನ್ನು ಕೂಡ ನೀಡಲಾಗಿತ್ತು. ಆದರೂ ಈಗ ಮತ್ತೆ ಈ ಪುಂಡ ಪಡ್ಡೆಗಳು ಸುಫಾರಿ ಕಿಲ್ಲಿಂಗ್ ಮೂಲಕ ಮತ್ತೆ ತಲೆ ಎತ್ತಿದ್ದಾರೆ. ಈ ನಾನ್ ಪ್ರೊಫೇಷನಲ್ ಪಡ್ಡೆಗಳನ್ನು ಜೈಲಿನಲ್ಲೋ, ಮತ್ತಿನೆಲ್ಲೋ ಕುಳಿತು ಬ್ರೈನ್ ವಾಶ್ ಮಾಡಿ ಕೊಲೆಯಂತಹ ಕ್ರಿಮಿನಲ್ ಚಟುವಟಿಕೆಗಳಿಗೆ ಇಳಿಸುತ್ತಿರುವವರನ್ನು ಹೆಡೆಮುರಿ ಕಟ್ಟಿ ತಂದು ಪೊಲೀಸರು ಮೊದಲು ಬೆಂಡೆತ್ತಬೇಕಾಗಿದೆ.
ಆನೇಕಲ್ ಇನ್ಸ್ಪೆಕ್ಟರ್ ಮಹಾನಂದ
ತುಂಬಾ ವರ್ಷಗಳ ಹಿಂದೆಯೇ ಇದೇ ಆನೇಕಲ್ ಕೋರ್ಟ್ ಮುಂಭಾಗದಲ್ಲಿ ಹಾಡುಹಗಲೇ ನಡೆದಿದ್ದ ಕೋಟ್ಯಾದೀಶ ಶಾಂತಕುಮಾರ್ ಎಂಬುವರ ನಿಗೂಢ ಕೊಲೆಯ ಕೇಸು ಈಗಲೂ ಸಿ.ಏ.ಡಿ.ಕಛೇರಿಯಲ್ಲೇ ದೂಳು ತಿನ್ನುತ್ತಿದೆ! ಸುಫಾರಿ ಸಸ್ಪೆನ್ಸ್ ಮರ್ಡರ್ ಮಿಸ್ಟರಿಗೆ ಆನೇಕಲ್ಲಿನಲ್ಲಿ ಅಂತಹ ಕರಾಳವಾದ ಖತರ್ನಾಕ್ ಇತಿಹಾಸವಿದೆ! ಬೆಂಗಳೂರಿನ ಜೈಲಿನಲ್ಲೇ ಕುಳಿತು ಇಲ್ಲಿ ಇಸ್ಪೀಟ್ ರೈಡ್, ಹಫ್ತಾ ವಸೂಲಿ, ಕಿಡ್ನಾಪ್, ನಡೆಸುತ್ತಾ ಆನೇಕಲ್ ಜನರ ನಿದ್ರೆಗೆಡಿಸಿದ್ದ ರೌಡಿ ಬೊಮ್ಮಂಡಳ್ಳಿ ಪ್ರಸನ್ನ ಕೊಲೆಯಾದ ನಂತರ ಸ್ವಲ್ಪ ದಿನ ತಣ್ಣಗಿದ್ದ ಆನೇಕಲ್ ಈಗ ಬೆಂಗಳೂರಿನ ಭೂಗತ ಜಗತ್ತಿನ ರೌಡಿಗಳ ನಂಟಿನೊಂದಿಗೆ ಮತ್ತೆ ಗಾಂಜಾ ಮನು ಅಲಿಯಾಸ್ ಮನೋಜ್ ಕುಮಾರ್ ಎಂಬ ಹೊಸ ರೌಡಿಯ ಹೆಸರಲ್ಲಿ ಚಿಗಿತುಕೊಂಡಿದೆ. ಇಲ್ಲಿನ ಕೆಲವು ರಾಜಕಾರಣಿಗಳು ಕೂಡ ಯುವಕರಿಗೆ ಸರಿಯಾದ ಉದ್ಯೋಗ ಒದಗಿಸುವ ಯಾವುದೇ ಪ್ರಾಜೆಕ್ಟ್-ಪ್ಯಾಕ್ಟರಿ ಮಾಡದೇ ತಮ್ಮ ಚುನಾವಣಾ ಪ್ರಚಾರದ ಅಖಾಡಕ್ಕೆ, ಲಿಟಿಗೇಷನ್ ಜಮೀನುಗಳಿಗೆ ಬೇಲಿ ಸುತ್ತಲು ಬಳಸಿಕೊಂಡು ಫೀಲ್ಡ್ ನ ರುಚಿ ಹತ್ತಿಸಿದ್ದಾರೆ. ಈಗ ಆನೇಕಲ್ ಬೆಂಗಳೂರಿನ ರೌಡಿಗಳ ಪಾಲಿನ ಹುಲುಸಾಗಿ ಬೆಳೆದ ಹುಲ್ಲುಗಾವಲಿನ ಕೃತಿಯಾಗಿದೆ! ಅದಕ್ಕಾಗಿಯೇ ಈಗ ಸುಫಾರಿ ಕಾಸಿಗೆ ಹೆಣಗಳು ಬೀಳುತ್ತವೆ. ಭೂಮಿಯ ಬೆಲೆಯ ಮುಂದೆ ಮನುಷ್ಯನ ಪ್ರಾಣಕ್ಕೆ ಇಲ್ಲಿ ಬೆಲೆ ಇಲ್ಲದಂತಾಗುತ್ತಿದೆ! ಆನೇಕಲ್ ಎಂಬ ಗಡಿನಾಡಲ್ಲಿ ಭೂ ಮಾಫಿಯಾದಿಂದಾಗುತ್ತಿರುವ ಕ್ರೈಂ ಚಟುವಟಿಕೆಗಳನ್ನು ಹತ್ತಿಕ್ಕದಿದ್ದರೇ ಮುಂದೊಂದು ದಿನ ಪಶ್ಚಾತ್ತಾಪ ಪಡುವಂತಾಗಿದೆ.
ಬಡವರ ಮಕ್ಕಳು ಬೀದಿಪಾಲು
ಗಾಂಜಾ ಸಪ್ಲೈ ನಾಡಾಗುತ್ತಿರುವ ಆನೇಕಲ್ ಅನ್ನು ಉದ್ದಾರ ಮಾಡಲು ಇಲ್ಲಿನ ರಾಜಕಾರಣಿಗಳು ಪ್ರಯತ್ನಿಸಬಹುದಿತ್ತು. ಇಂದು ಹಾದಿ ತಪ್ಪಿ ಉದ್ಯೋಗ ವಿಲ್ಲದೆ, ನಿರುದ್ಯೋಗಿಗಳಾಗಿ ರೌಡಿ ಚಟುವಟಿಕೆಯಲ್ಲಿ ಮುಳುಗಿರುವ ಆರ್ಥಿಕವಾಗಿ ಹಿಂದುಳಿದ ಬಡವರ ಮಕ್ಕಳಿಗಾಗಿ ಇಲ್ಲಿನ ರಾಜಕಾರಣಿಗಳು ಕೆಲಸ ಒದಗಿಸುವ ವ್ರತ್ತಿಪರ ಕೋರ್ಸ್ ಗಳ ಕಾಲೇಜುಗಳನ್ನು ತರಬಹುದಿತ್ತು. ತಂದಿಲ್ಲ. ಹೊಟ್ಟೆಗೆ ಊಟಹಾಕುವ ಶಿಕ್ಷಣ ವ್ಯವಸ್ಥೆ ಇಲ್ಲಿಲ್ಲ. ಪುಢಾರಿಗಳ ಹಿಂದೆ ಅಲೆದು ಲೈಫು ಹಾಳುಮಾಡಿಕೊಳ್ಳುತ್ತಿರುವ, ಸಾರ್ಟ್ ಕಟ್ ನಲ್ಲಿ ಸೆಟ್ಲ್ ಆಗಲು ರೌಡಿಸಂನಲ್ಲಿ ಪರಿಹಾರ ಹುಡುಕುತ್ತಿರುವ ಯುವಕರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಬೆಲೆಗಗನಕ್ಕೇರುತ್ತಿವೆ. ಜನರ ಲೈಫ್ ಸ್ಟೈಲ್ ಬದಲಾಗಿದೆ. ದಿನವೊಂದಕ್ಕೆ ಒಬ್ಬ ಯುವಕನಿಗೆ ೨೦೦ರೂಪಾಯಿಯಾದರೂ ಖರ್ಚಿಗೆ ಬೇಕೆಂಬಂತಾಗಿದೆ. ಇಲ್ಲಿ ನಾಲ್ಕು ಇಂಡಸ್ಟ್ರಿಯಲ್ ಏರಿಯಾಗಳಿದ್ದರೂ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ . ಜಿಗಣಿ ,ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ, ಭೂಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾದ ಯಾವುದೇ ಕಾರ್ಖಾನೆಗೆ ಎಡತಾಕಿದರೂ ಆನೇಕಲ್ ಹುಡುಗರಿಗೆ ನೋ ಜಾಬ್ ! ಕಾರಣವನ್ನ ಸ್ಥಳೀಯ ಕನ್ನಡ ಸಂಘಟನೆ ಮುಖಂಡರನ್ನೇ ಕೇಳಬೇಕು. ಊರಿಗೊಬ್ಬ ರಾಜ್ಯಾಧ್ಯಕ್ಷ, ಚಳುವಳಿಗಳ ತವರು ಅನ್ನಿಸಿಕೊಂಡ ಆನೇಕಲ್ಲಿನ ಯುವಕರು ಉದ್ಯೋಗವಿಲ್ಲದೆ ಬೀದಿಪಾಲಾಗಿದ್ದಾರೆ. ಅಲಯನ್ಸ್ ಕಾಲೇಜು ಸುತ್ತಲೂ ನಡೆಯು ಗಾಂಜಾ ವ್ಯಾಪಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದ ಈಗ ಬೇರೆ ಠಾಣೆಗೆ ವರ್ಗಾ ಆಗಿರುವ ಪೊಲೀಸ್ ಒಬ್ಬ ಆನೇಕಲ್ ನ ಹಲವು ಯುವಕರು ಅಡ್ಡದಾರಿ ಹಿಡಿಯಲು ಕಾರಣವೆಂಬ ಮಾಹಿತಿ ಇದೆ. ಇಂತೆಲ್ಲ ಕಾರಣಗಳಿಂದ ಅಂಡರ್ ವರ್ಲ್ಡ್ ಹಾದಿಹಿಡಿದಿರುವ ಹಲವಾರು ಯುವಕರ ಗುಂಪುಗಳನ್ನು ರಿಯಲ್ ಎಸ್ಟೇಟ್ ಕಾಸು, ಗಾಂಜಾವ್ಯಾಪಾರ , ಇಸ್ಪೀಟ್ ಆಟ, ಕಾಂಪೌಂಡ್ ಹಾಕುವ ಕಾಯಕ ಅವರನ್ನು ಕೈಬೀಸಿ ಕರೆದು ಹಾದಿತಪ್ಪಿಸಿವೆ. ಇಲ್ಲಿ ಈಗ ಎದ್ದು ನಿಂತಿರುವ ಅಪರಾಧ ಜಗತ್ತನ್ನು ತಡೆಯುವ ಉಮೇದಿ ಯಾವ ಪೊಲೀಸರಿಗೂ ಉಳಿದಿಲ್ಲ. ಏಕೆಂದರೆ ಹೆಸರಿಗೇ ಔಟ್ ಸ್ಕರ್ಟ್ ಗಳಾದರೂ ಒಂದೊಂದು ಠಾಣೆಯ ಇನ್ಸ್ಪೆಕ್ಟರ್ ಪಟ್ಟವೂ ೩೦ರಿಂದ ೪೦ಲಕ್ಷಕ್ಕೆ ಹರಾಜಿಗಿದೆಯೆಂಬ ಗಾಳಿಮಾತಿದೆ. ಪಾಪ ಪ್ರಾಮಾಣಿಕ ಪೊಲೀಸಿಂಗ್ ಅನ್ನು ನಾವು ಎಲ್ಲಿಂದ ನಿರೀಕ್ಷಿಸುವುದು. ಒಂದು ವರ್ಷದಲ್ಲಿ ಸಮಾಜವನ್ನು ಶುದ್ಧೀಕರಿಸುತ್ತಾರೋ.
. ‘ಯತಾರಾಜತಥಾಪ್ರಜಾ’ ಅನ್ನೋ ರೀತಿ ರಾಜಕಾರಣಿಗಳ ಕೈಗೊಂಬೆಗಳಾಗಿ ದುಡಿಯುತ್ತಾರೋ.. ಒಟ್ಟಿನಲ್ಲಿ ನಮ್ಮ ಪೊಲೀಸರು ಭೂಮಾಫಿಯಾ ಜೊತೆ ಕೈಜೋಡಿಸದಿದ್ದರಷ್ಟೇ ಸಾಕು.