ಆತ್ಮ ಗೌರವ ಎಂಬ ಅನಿವಾರ್ಯತೆಗಾಗಿ..

Share

ಆತ್ಮ ಗೌರವ ಎಂಬ ಅನಿವಾರ್ಯತೆಗಾಗಿ..

ಅಂಬೇಡ್ಕರ್ ಭಾರತೀಯ ಚರಿತ್ರೆಯ ಯುಗ ನಿರ್ಮಾಪಕ. ಅಪೂರ್ವ ಸಾಧಕ.ಅವರ ಕಾಡುವ ಕದಡುವ ಚಿಂತನೆಗಳು ಹೇಗೆ ನಮ್ಮೊಳಗೆ ಸುತ್ತುತ್ತವೆ?ಎಂಬುದನ್ನ ನಮಗೆ ನಾವೇ ವಿವರಿಸಿಕೊಳ್ಳುವ ಅಗತ್ಯವಿದೆ.ಈ ವಿವರವನ್ನ 1)ಬಯಲರೂಪ 2) ಪಠ್ಯ ರೂಪ 3) ಮನೋರೂಪ ಎಂದು ಬಿಡಿ ಬಿಡಿಯಾಗಿ ವಿವರಿಸಿಕೊಳ್ಳಬಹುದು.
1)ಬಯಲುರೂಪ: ಅಂಬೇಡ್ಕರರ ಬದುಕು ಮತ್ತು ಚಿಂತನೆಗಳು ಈ ಹೊತ್ತಿಗೆ ಎಚ್ಚರಿಕೆಯಂತೆಯೂ ಭವಿಷ್ಯಕ್ಕೆ ಮಾರ್ಗ ಸೂಚಿಯಂತೆಯೂ ಕಾಣಬಲ್ಲವು.ಅಂಬೇಡ್ಕರ ಎಂಬ ಬಯಲು ಪಠ್ಯದ ಶಿಲ್ಪ ಒಂದು ಕೈಯಲ್ಲಿ ಪುಸ್ತಕ ಹಿಡಿದು ಮತ್ತೊಂದು ಕೈಯ ತೋರು ಬೆರಳನ್ನ ಸಂಸತ್ ಭವನದ ಕಡೆ ತೋರುವ ಮೂರ್ತಿ. ಈ ಮೂರ್ತಿ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನ ಅದನ್ನ ಬಲಗೊಳಿಸುವ ಜ್ಞಾನದ ಬೆಳಕನ್ನ ತೋರುವ ಸಂಕೇತದಂತಿದೆ.ಇದೇ ಮೂರ್ತಿಯು ನಗರಗಳ ಆಯಕಟ್ಟಿನಲ್ಲಿ ಬಂದು ನಿಂತ ಬಗೆಯು ಈಗೀಗ ಸಾಂಸ್ಕøತಿಕ ಚಹರೆಗಿಂತ ರಾಜಕೀಯ ಚಹರೆಯನ್ನ ಪಡೆದುಕೊಂಡಂತೆ ಕಾಣುತ್ತದೆ.ಇದು ರಾಜಕಾರಣದ ಶಕ್ತಿ ಕೇಂದ್ರದಂತೆಯೂ ದಲಿತ ಶಕ್ತಿಯ ರೂಪಕದಂತೆಯೂ ಕಾಣುತ್ತದೆ.
ಸ್ಪಲ್ಪ ವಿಚಾರ ಶೀಲ ನೋಟದಿಂದ ಇದನ್ನ ಗಮನಿಸಿದಾಗ ಇದೇ ಮೂರ್ತಿಯು ಪ್ರತಿನಿಧಿಸುವ ಸಾಮಾಜಿಕ ಆವರಣದಲ್ಲಿ ಆಯಾ ಸಮುದಾಯಗಳು ಚಲನಶೀಲಗೊಳ್ಳದೆ ಯಾಕೆ ಹಾಗೇ ಬರೀ ಮೂರ್ತಿಯಂತೆಯೇ ನಿಶ್ಚಲವಾಗಿ ನಿಂತ ಕೆಲವರ ಚಲನಶೀಲತೆಯ ನಿಶ್ಚಲ ಸ್ಥಿತಿಯನ್ನ ತೋರುವಂತಿದೆ.
ಮೂರ್ತಿಯು ಕಿಡಿಗೇಡಿಗಳಿಗೆ ಸಿಕ್ಕು ಹಾನಿಯಾಗಬಾರದೆಂದು ಕಬ್ಬಿಣ ಸಲಾಕೆಗಳ ವೃತ್ತ ಪಡೆದ ಈ ಮೂರ್ತಿಯು ಆಳದ ಆ ಜನಾಂಗಗಳ ಬಲಾಢ್ಯ ಗುಂಪನ್ನೂ ಆ ಗುಂಪನ್ನು ಮಣಿಸಲು ನಡೆಸೋ ಜನರ ಕ್ರಿಯೆಯು ಅದರೆದುರ ಕಬ್ಬಿಣದ ಬೇಲಿಯೊಳಗಿನ ಮೂರ್ತಿಯ ಮಂದಹಾಸವೂ ಅಂಗುಲಿಮಾಲನೆದುರ ಬುದ್ಧನ ನಗೆಯಂತೆಯೇ ಕಾಣುತ್ತದೆ.ಆಗಾಗ ಸಿಂಗಾರಗೊಳ್ಳುವ ಈ ಮೂರ್ತಿ ಲೋಕದ ಕಣ್ಣಿನ ಬರಿ ಮೂರ್ತಿಮಾತ್ರವಲ್ಲ ಇದು ಅನ್ನ,ಹಣ,ಅಧಿಕಾರ,ಕೀರ್ತಿ ಮತ್ತು ಪ್ರತಿಭಟಿಸುವ ಕೆಚ್ಚನ್ನ ತುಂಬುವ ಮಹಾನ್ ಬಯಲ ಸ್ಫೂರ್ತಿಯೂ ಹೌದು.

 


2) ಪಠ್ಯ ರೂಪ : ಅಂಬೇಡ್ಕರ್ ಎಂಬ ಹೆಸರಿನ ಒಳಗೇ ಭಾರತೀಯ ಚರಿತ್ರೆಯ ಐತಿಹಾಸಿಕ ರೂಪಗಳಿವೆ.ಅಪ್ಪ ರಾಮ್ ಜಿ ಅಮ್ಮ ಭೀಮಾಬಾಯಿ.ಭೀಮಾಬಾಯಿಯ ಹದಿನಾಲ್ಕನೇ ಮಗನೇ ಅಂಬೇಡ್ಕರ. ಐದನೇ ವರ್ಷಕ್ಕೇ ಅವರ ತಾಯಿ ತೀರಿದ್ದರಿಂದ ಅಂಬೇಡ್ಕರ್ ಸೋದರತ್ತೆ ಮೀರಾಬಾಯಿಯ ಮಡಿಲಲ್ಲೇ ಬೆಳೆಯಬೇಕಾಯಿತು.ಹದಿನಾಲ್ಕು ಮಕ್ಕಳಲ್ಲಿ ಉಳಿದವರು ಐದು ಜನ ಮಾತ್ರ ಎಂಬ ವಿಚಾರವೇ ಆ ಕಾಲದ ತಳವರ್ಗದ ಬಡಮಕ್ಕಳ ದೀನ ಸ್ಥಿತಿಯನ್ನ ತೋರುತ್ತದೆ.ಮುಂದೆ ಅಂಬೇಡ್ಕರರ ನಾಲ್ಕು ಮಕ್ಕಳೂ ತೀರುವುದು ಕಾಲಾಂತರದಲ್ಲೂ ಬದಲಾಗದ ದಮನಿತರ ಮಕ್ಕಳ ಸಾವುಗಳ ಈ ಸ್ಥಿತಿಯನ್ನೇ ತೋರುತ್ತದೆ.ಶಿಕ್ಷಣದ ತಾರತಮ್ಯ ಮಾಡುತ್ತಿದ್ದ ವ್ಯವಸ್ಥೆಯೊಳಗೇ ಅಂಬೇಡ್ಕರ್ ಅವರಿಗೆ ಬ್ರಾಹ್ಮಣ ಗುರು ತಮ್ಮ ಹೆ¸ರನ್ನೇ ಧಾರೆಯೆರದದ್ದು ಗಮನೀಯ.(ಅಂಬೇವಾಡ್ಕರ್/ಅಂಬೇಡ್ಕರ್ ಆದದ್ದು)
ಮುಂಬೈ ಮಹಾನಗರದ ಸ್ಲಮ್ ನಿಂದ ಬೆಳೆದ ಅಂಬೇಡ್ಕರ್ ಅಸ್ಪøಶ್ಯ ಭಾರತದ ಮೊದಲ ಮೆಟ್ರಿಕ್ಯುಲೇಷನ್ ಮತ್ತು ಪದವಿ ಪಡೆದವರು.ಅಂಬೇಡ್ಕರರು ಮಹಾರಾಜ ಸೈಯ್ಯಾಜಿರಾವ್ ಗಾಯಕವಾಡರ ಸಹಾಯದಿಂದಾಗಿ ನ್ಯೂಯಾರ್ಕನಲ್ಲಿ ಎಂ.ಎ.ಪದವಿಯನ್ನು ಲಂಡನ್ ನಲ್ಲಿ ಪಿ.ಹೆಚ್.ಡಿ. ಪದವಿಯನ್ನೂ ಪಡೆದ ಮೊದಲ ಭಾರತೀಯ ಎನಿಸಿದರು.
ಓದಿ ವಾಪಾಸಾದ ಅಂಬೇಡ್ಕರರನ್ನ ಮಹಾರಾಜರು ಹಣಕಾಸಿನ ಮಂತ್ರಿಯಾಗಿ ನೇಮಿಸಲು ಬಯಸಿದರೆ ಜಾತಿವಾದಿ ದಿವಾನರು ಬಿಡಲಿಲ್ಲ.ಕೊನೆಗೆ ಮಹಾರಾಜರು ಇವರನ್ನ ಸೇನಾ ಕಾರ್ಯದರ್ಶಿಯನ್ನಾಗಿ ನೇಮಿಸಿದರು.ಆದರೂ ಅಂಬೇಡ್ಕರರಿಗೆ ಅಪಮಾನಗಳು ತಪ್ಪಲಿಲ್ಲ.ಅವರ ಕೈಕೆಳಗಿನ ಯಾರೂ ಅವರ ಆದೇಶಗಳನ್ನ ಪಾಲಿಸುತ್ತಿರಲಿಲ್ಲ.ಡಿ ದರ್ಜೆಯ ಸಹಾಯಕರೂ ಕೂಡ ಪೈಲುಗಳನ್ನ ಅವರ ಮೇಜಿಗೆ ತಂದಿಡದೆ ದೂರದಿಂದಲೇ ಎಸೆಯುತ್ತಿದ್ದರು.ದೊಡ್ಡ ಹುದ್ದೆಯ ಅಂಬೇಡ್ಕರರಿಗೆ ವಾಸಿಸಲಿಕ್ಕೆ ಬಾಡಿಗೆ ಮನೆಯೂ ದೊರೆಯದೆ ಕೊನೆಗೆ ಪಾರ್ಸಿಯೊಬ್ಬರ ಹೋಟೇಲಿನಲ್ಲಿ ಉಳಿದುಕೊಳ್ಳಬೇಕಾಯಿತು.ಅವರ ಏಳ್ಗೆಯನ್ನ ಸಹಿಸದ ಜಾತಿವಾದಿ ಮತಾಂಧರು ಅಲ್ಲೂ ಬಿಡದೆ ಉಳಿದು ಕೊಂಡ ಹೋಟೇಲಿಗೆ ನುಗ್ಗಿ ಅಂಬೇಡ್ಕರರನ್ನ ಥಳಿಸಿ ಅವರ ಪುಸ್ತಕಗಳಿದ್ದ ಪೆಟ್ಟಿಗೆಯನ್ನ ಹೊರಗೆ ಎತ್ತಿ ಬಿಸಾಕಿ ಅವರನ್ನ ದರದರ ಎಳೆತಂದು ಹೊರನೂಕಿದರು. ಇದರಿಂದ ತೀವ್ರ ಅಪಮಾನಗೊಂಡ ಅಂಬೇಡ್ಕರರು ತೀವ್ರವಾಗಿ ನೊಂದರು. ದಿಕ್ಕು ದಿಕ್ಕಿಗೆ ಬಿದ್ದ ಪುಸ್ತಕಗಳನ್ನೆಲ್ಲಾ ಆರಿಸಿ ತಮ್ಮ ಟ್ರಂಕಿಗೆ ತುಂಬಿಕೊಂಡು ಊರ ಹೊರಗಿನ ಮರವೊಂದರ ಕೆಳಗೆ ಕುಳಿತು ಗಳ ಗಳನೆ ಅತ್ತುಬಿಟ್ಟರು! ನನ್ನಂತಹ ಉದ್ಯೋಗಸ್ಥ ವಿದ್ಯಾವಂತನನ್ನೇ ಈ ರೀತಿ ನಡೆಸಿಕೊಳ್ಳುವ ಈ ಮತಾಂಧರು ಇನ್ನು ಅಮಾಯಕ ಜನರನ್ನ ಎಷ್ಟು ಹೀನವಾಗಿ ಕಾಣಲಿಕ್ಕಿಲ್ಲ!?ಎಂದು ಪ್ರಶ್ನಿಸಿಕೊಂಡರು.ಮುಂದೆ ಅಂಬೇಡ್ಕರರು‘ಮೂಕನಾಯಕ’ ಎಂಬ ಪತ್ರಿಕೆ ಆರಂಭಿಸಿದರು,ಈ ಪತ್ರಿಕೆ ದಮನಿತ ಜನರಿಗೆ ತಿಳಿಯಬೇಕೆಂದು ಶಾಹು ಮಹಾರಾಜರು ಓದಿ ಹೇಳಲು ಹಳ್ಳಿ ಹಳ್ಳಿಗೆ ಯುವಕರನ್ನ ಕಳಿಸಿ ಇಪ್ಪತ್ತು ರೂಪಾಯಿ ಭತ್ಯೆ ನೀಡಿದರು. ಮುಂದೆಯೂ ಅಂಬೇಡ್ಕರ್ ಅವರು ಜನ ಹಿತಕ್ಕಾಗಿ ‘ಬಹಿಷ್ಕøತ ಭಾರತ’ಮತ್ತು ‘ಸಮತಾ’ ಎಂಬ ಪತ್ರಿಕೆಗಳನ್ನ ನಡೆಸಿದರು. ಈ ಮಧ್ಯೆ ತಮಗೆ ಪ್ರಿಯವಾದ ಅಧ್ಯಾಪಕ ಹುದ್ದೆಯನ್ನೂ ನಿರ್ವಹಿಸಿದರು. ಅಂಬೇಡ್ಕರರು ಮತ್ತೆ ವಿದೇಶಕ್ಕೆ ತೆರಳಿ ರಾಜಕೀಯ ಅರ್ಥಶಾಸ್ತ್ರದಲ್ಲಿ ಪದವಿಯನ್ನ ಜರ್ಮನ್ ದೇಶದಲ್ಲೂ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಪಿ.ಹೆಚ್.ಡಿ. ಪದವಿಯನ್ನೂ ಪಡೆದರು. ಹಾಗೇ ಕಾನೂನು ಶಾಸ್ತ್ರದ ಬಾರ್ ಅಟ್ ಲಾ ಪದವಿಯನ್ನೂ ಪಡೆದರು.ಅಂಬೇಡ್ಕರರಿಗೆ ಆಗ ಕೇವಲ ಮುವತ್ತು ವರ್ಷ ಮಾತ್ರ!. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಮೇರಿಕಾ,ಇಂಗ್ಲೆಂಡ್,ಜರ್ಮನ್ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದ ಮತ್ತೊಬ್ಬ ಭಾರತೀಯನಿಲ್ಲ ಎಂಬುದೇ ಗಮನಾರ್ಹ.

ಜನರ ನೊವು ಸಂಕಟಗಳಿಗೆ ಸ್ಪಂದಿಸಬೇಕೆಂದೇ ಅವರು ವಕೀಲವೃತ್ತಿ ಆರಂಭಿಸಿ ಅತ್ಯಂತ ಅಲ್ಪ ಅವಧಿಯಲ್ಲೇ ಪ್ರಸಿದ್ದರಾದರು. ಅಂಬೇಡ್ಕರರು ಮುಂದೆ ಚೌಡರ್ ಕೆರೆಯ ಪ್ರವೇಶ ಚಳುವಳಿ ನಡೆಸಿದರು. ‘ನಾಯಿ ನರಿಗಳು ನೀರು ಕುಡಿಯಲು ಅವಕಾಶವಿದ್ದರೂ ಮನುಷ್ಯರಾದ ನಮಗೇಕೆ ನೀರು ಬೇಡ’ ಎಂಬ ಪ್ರಶ್ನೆ ಹಾಕಿ ನೀರು ಕುಡಿವ ಚಳುವಳಿಗಿಳಿದರು.ಇಲ್ಲಿ ಅಂಬೇಡ್ಕರ್ ಅವರ ಅನುಯಾಗಿಗಳನ್ನೂ ಅಮಾನುಷವಾಗಿ ಥಳಿಸಿದ ಸವರ್ಣೀಯರು ಅಂಬೇಡ್ಕರರ ಮೇಲೂ ಮಾರಣಾಂತಿಕ ಹಲ್ಲೆಯನ್ನೂ ನಡೆಸಲು ಬಂದರು ಈ ಅವಘಡವನ್ನ ಆಗ ತಡೆದದ್ದೇ ಕ್ರೈಸ್ತ ಎಸ್.ಪಿ. ಎಂಬುದೂ ಉಲ್ಲೇಖನೀಯ.ಅಂಬೇಡ್ಕರ್ ಸುತ್ತಲೂ ಅನೇಕ ಸದೃಢ ತರುಣರ ಗುಂಪಿದ್ದರೂ ಅವರು ಪ್ರತಿಭಟನೆಗೆ ಹಿಂಸೆಯನ್ನ ಬಳಸಲಿಲ್ಲ.ವಿಮೋಚನೆಗೆ ಗನ್ ಗಿಂತಲೂ ಪೆನ್ ಒಂದನ್ನೇ ಅಸ್ತ್ರದಂತೆ ಬಳಸಿದರು.
ಅಂಬೇಡ್ಕರರ ಹೋರಾಟದ ಮತ್ತೊಂದು ಮಜಲೇ ಪೂನಾ ಒಪ್ಪಂದ. ದಲಿತರ ಓಟಿನ ಪ್ರತ್ಯೇಕತೆಯು ಭಾರತವನ್ನೂ, ಹಿಂದು ಧರ್ಮವನ್ನೂ ಒಡೆವುದೆಂದು ಹೇಳಿದ ಗಾಂಧೀಜಿ ಅಂಬೇಡ್ಕರರ ವಿರುದ್ಧ ಯರವಾಡ ಜೈಲಿನಲ್ಲಿ ಉಪವಾಸ ಆರಂಭಿಸಿದರು. ಕೋಮುವಾದಿಗಳು ‘ಗಾಂಧೀಜಿ ಅವರ ಪ್ರಾಣಕ್ಕೆ ತೊಂದರೆಯಾದರೆ ದೇಶದ ಎಲ್ಲಾ ಅಸ್ಪøಶ್ಯರನ್ನ ಸುಟ್ಟು ಹಾಕಿಬಿಡುವುದಾಗಿ’ ಬೆದರಿಕೆ ಒಡ್ಡಿದ್ದರಿಂದ ಪೂನಾ ಒಪ್ಪಂದಕ್ಕೆ ಅಂಬೇಡ್ಕರರು ಸಹಿಹಾಕಬೇಕಾಯಿತು. ಇದನ್ನ ಅಂಬೇಡ್ಕರರು ಬಲವಂತದ ಒಪ್ಪಂದವೆಂದೇ ಕರೆದರು.
ಐತಿಹಾಸಿಕ ಎಂದು ಕರೆಸಿಕೊಂಡದ್ದು ಅವರ 1935ರ ಜಾತಿವಿನಾಶ ಎಂಬ ಸುಪ್ರಸಿದ್ಧ ಭಾಷಣ. ಮುಂದೆ ಅಂಬೆಡ್ಕರರು ಮಂತ್ರಿಯಾದರು. ಕಾರ್ಮಿಕರ ಕೆಲಸದ ಅವಧಿಯನ್ನ ಹನ್ನೆರಡು ಗಂಟೆಯಿಂದ ಎಂಟು ಗಂಟೆಗೆ ಇಳಿಸಿದರು.ಸ್ತ್ರೀಯರಿಗೆ ಹೆರಿಗೆ ಭತ್ಯೆ ಮತ್ತು ಹೆರಿಗೆ ರಜೆ ನೀಡುವ ಕಾನೂನು ತಂದರು.ಅಂಬೇಡ್ಕರರು ಪ್ರತಿಪಾದಿಸಿದ ‘ಹಿಂದೂ ಕೋಡ್ ಬಿಲ್’ನ್ನ ನೆಹರು ಮಂತ್ರಿ ಮಂಡಲ ವಾಪಾಸು ಪಡೆದ್ದನ್ನ ವಿರೋಧಿಸಿ ಕಾನೂನು ಮಂತ್ರಿ ಪದವಿಗೇ ರಾಜಿನಾಮೆ ನೀಡಿ ಹೊರಬಂದರು.ಹಿಂದೂ ಕಂದಾಚಾರಿಗಳ ಒತ್ತಡಕ್ಕೆ ಮಣಿದ ನೆಹರು ಅಂಬೇಡ್ಕರರು ಪ್ರತಿಪಾದಿಸಿದ ಮಹಿಳೆಯರ ಆಸ್ತಿ ಹಕ್ಕು,ವಿಚ್ಚೇದನಾ ಹಕ್ಕು,ದತ್ತು ಸ್ವೀಕಾರದ ಸಮಾನ ಹಕ್ಕು,ಮೊದಲಾದ ಮಹಿಳಾ ಪರ ನಿಲುವುಗಳನ್ನೇ ನಿರಾಕರಿಸಿಬಿಟ್ಟರು. ಮುಂದಿನ ಎರಡು ಚುನಾವಣೆಗಳಲ್ಲಿ ಇಂತಹ ಅಂಬೇಡ್ಕರರನ್ನೇ ಸೋಲಿಸಿದ್ದು ಭಾರತೀಯ ರಾಜಕೀಯ ರೀತಿಗೆ ಹಿಡಿದ ಕನ್ನಡಿ ಎನ್ನಬಹುದು.


ಅಂಬೇಡ್ಕರರು ಎಂದಿಗೂ ವ್ಯಕ್ತಿ ವಿರೋಧಿಯಲ್ಲ ಜೀವವಿರೋಧಿ ನಿಲುವುಗಳನ್ನ ಅವರು ವಿರೋಧಿಸುತ್ತಿದ್ದರು.ಜಿನ್ನ ತಳೆದ ದೇಶ ವಿಭಜನೆಯ ನಿಲುವನ್ನ ,ಮನುಸ್ಮøತಿ ನಿರಾಕರಣೆಯನ್ನ ಈ ನೆಲೆಯಿಂದಲೇ ನಾವು ನೋಡಬೇಕು.ತಮ್ಮ ತೀಕ್ಷ್ಣವಾದ ತರ್ಕದಿಂದ ಅಪಾರ ಓದಿನ ಸಹಾಯದಿಂದ ವಿರೋಧಿಗಳ ಬಾಯಿ ಮುಚ್ಚಿಸುತ್ತಿದ್ದ ಅಂಬೇಡ್ಕರರು ಎಷ್ಟೋ ರಾತ್ರಿಗಳನ್ನ ದಮನಿತರ ವಿಮೋಚನೆಗಾಗಿ ಪುಸ್ತಕಗಳಲ್ಲಿ ಮುಳುಗಿ ಕಳೆದರು.ಮಹಾನ್ ಪುಸ್ತಕ ಪ್ರೇಮಿಯಾದ ಅವರು ಐವತ್ತು ಸಾವಿರ ಪುಸ್ತಕಗಳನ್ನ ಹೊಂದಿದ್ದಲ್ಲದೆ ಅವನ್ನೆಂದೂ ಶೋಕಿಗಾಗಿ ಇಟ್ಟಿರಲಿಲ್ಲ.ತಮ್ಮ ಜೀವಿತದ ಕೊನೆ ಕ್ಷಣವನ್ನೂ ಓದೆಂಬ ಉಸಿರಿಗೇ ಮೀಸಲಿಟ್ಟರು.ಯಾವ ಸಮಾಜವು ಪುಸ್ತಕದಿಂದಲೇ ತಾರತಮ್ಯ ಸೃಷ್ಟಿಸಿತ್ತೋ ಆ ಸಮಾಜಕ್ಕೇ ಜನರನ್ನೆಲ್ಲಾ ಒಂದುಗೂಡಿಸುವ ಮಹಾನ್ ಸಂವಿಧಾನವನ್ನ ಕೊಟ್ಟರು.


3) ಅಂಬೇಡ್ಕರ್ ಎಂಬ ಮನೋರೂಪ : ಅಂಬೇಡ್ಕರ್ ಎಂಬ ಚಿತ್ರ ತೊಂಭತ್ತರ ದಶಕಕ್ಕೂ ಇಂದಿಗೂ ಪರಿಣಾಮದ ದೃಷ್ಟಿಯಲ್ಲಿ ತುಂಬಾ ಬೆಳೆದಿದೆ. ಈಗೀಗ ಅಂಬೇಡ್ಕರರು ಎಲ್ಲಾ ಊರ ಹಬ್ಬಗಳಲ್ಲೂ ಸಿನಿಮಾತಾರೆಯರ ಜೊತೆಗೆ ಪ್ಲಕ್ಸಗಳಲ್ಲಿ ವಿಸ್ತರಿಸಿಕೊಳ್ಳುತ್ತಿರುವುದು ಗಮನಾರ್ಹ.
ಇತ್ತೀಚೆಗೆ ಯಾವ ದಲಿತರು ತಮ್ಮ ಮನೆಗಳಲ್ಲಿ ಅಂಬೇಡ್ಕರರ ಪೋಟೋ ಹಾಕಿಕೊಂಡರೆ ದಲಿತರೆಂದು ದೂರವಿಡುತ್ತಾರೆಂದು ದೂರವಿರುತ್ತಿದ್ದರೋ(ನಗರದಲ್ಲಿ ಬಾಡಿಗೆ ಮನೆಯೂ ಸಿಗದೆಂಬ ಭಯದಿಂದ) ಅಂತಹವರ ಮನೆಗಳಲ್ಲೂ ಮೆಲ್ಲಗೆ ಇಂದು ಅಂಬೇಡ್ಕರ್ ನಿಲ್ಲುತ್ತಿದ್ದಾರೆ.ಈಗೀಗ ಅಂಬೇಡ್ಕರ್ ಜಾತಿಗಿಂತಲೂ ದೇಶದ ಶ್ರೇಷ್ಟ ಸಾಧಕನೆಂದು ಸರ್ಕಾರಗಳು ಎಲ್ಲಾ ಶಾಲಾ ಕಛೇರಿಗಳಲ್ಲಿ ಪೋಟೋ ಕಡ್ಡಾಯ ಗೊಳಿಸಿರುವುದರ ಪರಿಣಾಮ ಅವರ ಪೋಟೋ ಎಲ್ಲರ ಕಣ್ಣಿಗೂ ಸಹನೀಯವೆನಿಸುತ್ತಿದೆ.
ಯಾಕೋ ಏನೋ .. ಅಂಬೇಡ್ಕರರ ಮೇಲಿನ ಆವೇಶವು ಚಿಂತನೆಗಳಲ್ಲಿ ಮರೆಯಾಗುತ್ತಿರುವುದು ವಿಷಾದನೀಯ…ಅಂಬೇಡ್ಕರರ ಹೆಸರಲ್ಲಿ ಮೇಲೆ ಬಂದವರೂ ಕೂಡಾ ಸ್ವಹಿತಾಸಕ್ತಿಗಳಲ್ಲಿ ಮೈಮರೆತು ಅಂಬೇಡ್ಕರರ ಚಿಂತನೆಗಳಿಂದ ದೂರ ಸರಿಯುತ್ತಿರುವುದನ್ನೂ ವಸ್ತು ನಿಷ್ಟವಾಗಿಯೇ ಖಂಡಿಸಬೇಕಾಗಿದೆ.1946ರಲ್ಲಿ ನಡೆದ ಸಂವಿಧಾನ ರಚನಾ ಸಭೆಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಅಂಬೇಡ್ಕರರನ್ನ ಸೋಲಿಸಿತು.

ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಬೆಂಬಲದಿಂದಾಗಿ ಅವರು ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗ ಬೇಕಾಯಿತು. ಎಂಬ ಸುಕ್ಷ್ಮ ಅಂಶ ಹೋರಾಟಗಾರರನ್ನ ವಿಶಾಲಗೊಳಿಸಬೇಕಿದೆ.
ದಲಿತರ ಒಳಗಿನ ಅನೇಕ ದೈವಗಳನ್ನ ಒಕ್ಕಲೆಬ್ಬಿಸಿ ಏಕದೈವ ಮತ್ತು ಏಕ ಸಂಸ್ಕøತಿಯೇ ಶ್ರೇಷ್ಟವೆಂದು ಬಲಾಢ್ಯರ ಗುಂಪುಗಳು ಬಿಂಬಿಸುವ ಬಗೆಯನ್ನೂ ಎಚ್ಚರದಿಂದಲೇ ನಿಭಾಯಿಸಬೇಕಾಗಿದೆ.“ಬದುಕಿ ಉಳಿಯುವುದೇ ದೊಡ್ಡ ಸಾಧನೆಯಲ್ಲ ಬದುಕಿ ಉಳಿಯುವ ಅನೇಕ ರೀತಿಗಳಿವೆ ಆದರೆ ಎಲ್ಲಾ ತರದ ಬದುಕು ನಮ್ಮ ಗೌರವ ಹಾಗೂ ಹೆಮ್ಮೆಗೆ ಅರ್ಹವಲ್ಲ ಒಬ್ಬ ವ್ಯಕ್ತಿಯಾಗಲಿ ಅಥವಾ ಒಂದು ಸಮಾಜವಾಗಲಿ ಸುಮ್ಮನೆ ಜೀವಂತವಾಗಿ ಉಳಿಯುವುದಕ್ಕು ಘನತೆ ಗೌರವದಿಂದ ಬಾಳಿ ಬದುಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ” ಎಂದ ಅಂಬೇಡ್ಕರರ ಜೀವಪರ ನಿಲುವೇ ಅನೇಕರ ದಾರಿಯಾಗಬೇಕಿದೆ.ಇಲ್ಲಿ ಅಸ್ಪøಷ್ಯತೆಯ ಅರಿವು ಅನೇಕರಿಗಾಗುತ್ತಿದೆ.ಇದು ಅವರಲ್ಲಿ ಕರುಣೆ,ಪ್ರೀತಿಯ ಹುಟ್ಟಿಗೆ ಕಾರಣವೂ ಆಗಿದೆ.ಆದರೆ ಅಸ್ಪøಷ್ಯರ ಅನುಭವ ಅದು ವಿವರಗಳ ಆಚೆಗೂ ನಿಲ್ಲ ಬಹುದಾದ ನೋವು,ಸಂಕಟ.ಇಲ್ಲಿ ಕೆಳವರ್ಗಗಳ ಅಸ್ಪøಷ್ಯತೆಯ ಜೊತೆಗಿನ ಹೊಂದಾಣಿಕೆ ಹೊರ ರೂಪಿಯಾಗಿ ವಿಸ್ತಾರವಾದಂತೆ ಕಂಡರೂ ಒಳಗಿನ ತಾರತಮ್ಯದ ಅಂತರವೂ ಅಷ್ಟೇ ಬೆಚ್ಚಿ ಬೀಳಿಸುವಷ್ಟು ಬೆಳೆಯುತ್ತಿದೆ.
ಇಲ್ಲಿ ತಳವರ್ಗಗಳೇ ಅಸ್ಪøಷ್ಯ ಕುಲಗಳೆಡೆಗೆ ತೋರುವ ಒಳ ಒಳಗಿನ ಅನಾದಾರಗಳ ಸ್ವರೂಪವೇ ಗಮನಾರ್ಹ.ಆತ್ಮ ಗೌರವ ತೋರದ ಇಂತಹ ಕರುಳ ಬಳ್ಳಿಗಳ ಎದರೂ ಈಗ ಅಸ್ಪøಷ್ಯರು ಶಿಕ್ಷಣ ಎಂಬ ದಿವ್ಯಾಸ್ತ್ರದ ಮೂಲಕವೇ ತಲೆ ಎತ್ತಿ ನಿಲ್ಲಬೇಕಿದೆ.ಮನುಷ್ಯತ್ವ ತೋರದ ನೆಲೆಗಳು ಯಾವುದಾದರೇನು ಅವನ್ನ ದಾಟಲು ಅವರೇ ತೋರಿದ ಹಾಯಿ ಹಿಡಿದು ಆತ್ಮಗೌರವದ ದಡ ಕಾಣಬೇಕಿದೆ.ಅಂಬೇಡ್ಕರ್ ಎಂದಿಗೂ ಧರ್ಮವಿರೋಧಿಯಲ್ಲ ಜಾತಿ ತಾರತಮ್ಯ ಸೃಷ್ಟಿಸುವ ಮನಸುಗಳ ವಿರೋಧಿ ಎಂದು ಒಳಗೊಳಗೇ ಹೊರಗಿಡುವವರಿಗೆ ಸದಾ ತಿಳಿಸಿ ಹೇಳಬೇಕಿದೆ.

Girl in a jacket
error: Content is protected !!