ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ
ಯುಜಿಸಿಯು ೨೦೧೦ರ ನಂತರ ಪಿಎಚ್.ಡಿ.ಗೆ ‘ಕೋರ್ಸ್ವರ್ಕ್ ಎಂಬ ಅಧ್ಯಯನ ಕ್ರಮವನ್ನು ಅಳವಡಿಸಿತು. ಆದರೆ ಕನ್ನಡ ವಿಶ್ವವಿದ್ಯಾಲಯವು ಈ ಬಗೆಯ ಕೋರ್ಸ್ವರ್ಕ್ ಹಾಗೂ ಈಗಿನ ಗುಣಾಂಕ ಪದ್ಧತಿಯನ್ನು ಆರಂಭದಿಂದಲೇ ಅಳವಡಿಸಿಕೊಂಡಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಸಂಶೋಧನೆಗೆಂದೇ ಮೀಸಲಾದ ಈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪ್ರವೇಶ ಪಡೆದ ನಂತರ ಒಂದು ವಾರದ ಸಂಶೋಧನ ಕಮ್ಮಟ, ಅದರಲ್ಲಿ ವಿಷಯತಜ್ಞರ ಮೂಲಕ ಸಂಶೋಧನಾ ತರಬೇತಿ; ಆರು ತಿಂಗಳವರೆಗೆ ಸಂಶೋಧನೆಯ ವಿಧಿ-ವಿಧಾನ, ಅಧ್ಯಯನ ವಿಷಯ, ಅಂತರಶಿಸ್ತು ಮತ್ತು ಬಹುಶಿಸ್ತೀಯ ಅಧ್ಯಯನಗಳ ಆಳ-ಅರಿವುಗಳನ್ನು ಅರ್ಥಮಾಡಿಕೊಳ್ಳುವುದೇ ಆಗಿದ್ದಿತು. ಆರು ತಿಂಗಳ ಬಳಿಕ ನಿರ್ದಿಷ್ಟ ಗುಣಾಂಕಗಳನ್ನು ಪಡೆಯುವ ಮೂಲಕ ಮುಂದಿನ ಅಧ್ಯಯನಕ್ಕೆ ಅವಕಾಶ ನೀಡುವ ನಿಯಮವಿತ್ತು. ಇದು ಎಂ.ಫಿಲ್. ಪದವಿಗೂ ಅನ್ವಯಿಸಿತ್ತು. ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ, ಸಂಶೋಧನಾ ಚರ್ಚೆ, ಉಪನ್ಯಾಸಗಳು ಎಲ್ಲ ನಿಕಾಯಗಳನ್ನು ಒಳಗೊಂಡಂತೆ ನಡೆಯುತ್ತಿದ್ದವು. ಕೋರ್ಸ್ವರ್ಕ್ ಕೊನೆಯಲ್ಲಿ ಯಾವುದಾದರೊಂದು ಕ್ಷೇತ್ರಾಧಾರಿತ ಸಂಶೋಧನ ಪ್ರಬಂಧವನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ಈ ನಿಟ್ಟಿನಲ್ಲಿ ನಾನು ತೆಗೆದುಕೊಂಡ ವಿಷಯ ನಮ್ಮದೇ ಪರಿಸರದ “ಪ್ರಾಗಿತಿಹಾಸ ಕಾಲದ ಆವಾಸಸ್ಥಾನವಾಗಿ ಜನಗಿಹಳ್ಳ. ಇದಕ್ಕಾಗಿ ಚಿತ್ರದುರ್ಗ ತಾಲೂಕು ಪರಿಸರದಲ್ಲಿ ಹುಟ್ಟಿ ಮುಂದೆ ಸಾಗುವ ಜನಗಿಹಳ್ಳದ ಎರಡೂ ದಂಡೆಗಳ ಮೇಲೂ ಗೆಳೆಯರ ನೆರವಿನಿಂದ ಕ್ಷೇತ್ರಕಾರ್ಯ ಕೈಗೊಳ್ಳುತ್ತಾ ಹೊರಟೆ. ಈ ಸುತ್ತಾಟದಲ್ಲಿ ಅನೇಕ ಪ್ರಾಚೀನ ನೆಲೆಗಳು ಕಂಡುಬಂದವು. ಗೊಡಬನಾಳು ಪರಿಸರದಿಂದ ಹಿಡಿದು ಹುಲ್ಲೂರು, ಕಾತ್ರಾಳು, ರುಮ್ಮಾಗಟ್ಟ, ಚಿಪ್ಪಿನಕೆರೆ, ಚಿಕ್ಕಗೊಂಡನಹಳ್ಳಿ, ಯಳವರ್ತಿ, ಕಲ್ಲೇದೇವಪುರ, ಆಕನೂರು-ಹೀಗೆ ಅನೇಕ ನೆಲೆಗಳನ್ನು ಗುರುತಿಸುತ್ತಾ ಹೊರಟೆವು. ಈ ಮಧ್ಯೆ ಬಾಲ್ಯದ ತಿರುಗಾಟದಲ್ಲಿ ಜನಗಿಹಳ್ಳ, ಮರಡಿ, ಮಟ್ಟಿ, ಗೋಸಿರಪ್ಪನ ಗುಡ್ಡ, ಸರ, ಕಣಿವೆಗಳು ಪರಿಚಯವಾಗಿದ್ದವು. ಪ್ರತಿದಿನದ ಈ ಸುತ್ತಾಟದಲ್ಲಿ ಪ್ರಾಚೀನ ಮಾನವನ ವಾಸದ ನೆಲೆ, ಅವನು ಬಳಸಿ ಬಿಟ್ಟುಹೋದ ಮಡಕೆ-ಕುಡಿಕೆ, ಶಿಲಾಯುಧ, ಗೋರಿ, ಗೀರು ಮತ್ತು ವರ್ಣಚಿತ್ರಗಳನ್ನು ಪತ್ತೆಹಚ್ಚುವುದೇ ಆಗಿತ್ತು.
ಸಂಗ್ರಹಿಸಿದ ವಸ್ತುಗಳನ್ನು ಮನೆಗೆ ತಂದಾಗ ಅವುಗಳನ್ನು ನೋಡಿದ ನನ್ನ ತಂದೆಯದು, “ನಿನ್ನ ಕೆಲಸ ಸೋರೆ-ಬೋಕಿ, ಕಲ್ಲು, ಎಲುಬುಗಳನ್ನು ಹುಡುಕುತ್ತಾ ಅಲೆಯುವುದಾ? ಎನ್ನುವುದಾಗಿತ್ತು. ಹೀಗೆ ನಡೆಸುತ್ತಿದ್ದ ತಿರುಗಾಟದಲ್ಲಿ ನಮ್ಮ ಕಣ್ಣು ಮತ್ತು ಮನಸ್ಸುಗಳು ಈ ಮೇಲಿನ ವಸ್ತುಗಳನ್ನು ಹುಡುಕುವುದರಲ್ಲೇ ಗಮನಹರಿಸಿದ್ದವು. ಅದು ಎಷ್ಟರಮಟ್ಟಿಗೆ ಎಂದರೆ ಕನಸಲ್ಲೂ ಕಲ್ಲುಬೋಕಿಗಳೇ ಗೋಚರಿಸುತ್ತಿದ್ದವು. ಇದೇ ಅವಧಿಯಲ್ಲಿ ಒಂದು ರಾತ್ರಿ ಕನಸು ಬಿತ್ತು. ಅಂದಿನ ಕನಸಿನಲ್ಲಿ ನಮ್ಮೂರಿನ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಗೋಸಿರೆಪ್ಪನ ಗುಡ್ಡ, ಗುಡ್ಡದ ತಪ್ಪಲಿನಲ್ಲಿ ಕಲ್ಲುಬಂಡೆಗಳ ದೊಡ್ಡ ಗುಂಪು, ಆ ಗುಂಪಿನಲ್ಲಿ ಹೆಸರನ್ನು ಕುಟ್ಟಿ ದಾಖಲಿಸಲು ಬಂಡೆಗಳ ಹುಡುಕಾಟ ನಡೆಸುತ್ತಿದ್ದೆವು. ಹಾಗೆ ಹುಡುಕುತ್ತಿರುವಾಗ ಕಲ್ಲುಬಂಡೆಗಳ ಮೇಲೆ ಕೊರೆದ, ಗೀರಿದ, ಕುಟ್ಟಿಮೂಡಿಸಿದ ಗೂಳಿಗಳ ಸಾಲು, ಸಾಲುಗಳೇ ಹರಡಿಕೊಂಡಿದ್ದವು. ಈ ಬಗೆಯ ಕನಸಿಗೆ ದಿನನಿತ್ಯವೂ ಕೈಗೊಳ್ಳುತ್ತಿದ್ದ ಕ್ಷೇತ್ರಕಾರ್ಯ ಮತ್ತು ಅಲ್ಲಿ ಕಂಡುಬರುತ್ತಿದ್ದ ಚಿತ್ರಣಗಳೂ ಕಾರಣವೆನ್ನಿ. ಅದೇನೆ ಇರಲಿ ಈ ಕನಸನ್ನು ಬೆಂಬೆತ್ತಿ ನಮ್ಮೂರಿನ ಹಳ್ಳಕೊಳ್ಳ, ಬೆಟ್ಟ-ಕಣಿವೆಗಳನ್ನು ಗೆಳೆಯರೊಂದಿಗೆ ತಡಕಾಡಿದ್ದಿದೆ.
ಹೀಗೆ ಒಮ್ಮೆ ನಾಲ್ಕೈದು ಕಿ.ಮೀ. ದೂರವಿರುವ ನನ್ನ ತಂಗಿಯ ಹಾಗೂ ಭಾವಿ ಪತ್ನಿಯ ಮನೆಗೆ ಹೋದೆ. ಉಪಚಾರ ಮುಗಿಸಿ ಅಲ್ಲಿಗೆ ಹತ್ತಿರವಿರುವ ಮನೆದೇವರಾದ ಯಳವರ್ತಿ ಆಂಜನೇಯನ ದರ್ಶನಕ್ಕೆ ಸೋದರ ರಮೇಶನೊಂದಿಗೆ ಹೊರಟೆ. ದರ್ಶನದ ಬಳಿಕ ಅಲ್ಲಿಯೇ ಇದ್ದ ಕೆರೆಯನ್ನೂ ನೋಡುವುದೆಂದು ಮುನ್ನಡೆದೆವು. ಈ ಕೆರೆಯನ್ನು ಮೈಸೂರು ಒಡೆಯರ ಕಾಲದಲ್ಲಿ ಮಂತ್ರಿಯಾಗಿದ್ದ ಜಗಲೂರಿನ ಇಮಾಂ ಸಾಹೇಬರು ಒಡೆಯರ ಮನವೊಲಿಸಿ ನಿರ್ಮಿಸಿ, ಈ ಭಾಗದ ಜನರಿಗೆ ಆಸರೆಯಾದವರು. ಈ ಕೆರೆಯನ್ನು ಸಂಗೇನಹಳ್ಳಿಯ ಬಳಿ ಕಟ್ಟಿದ ಕಾರಣ ಸಂಗೇನಹಳ್ಳಿಕೆರೆಯೆಂದೇ ಕರೆಯುತ್ತೇವೆ. ಕೆರೆಯ ನಿರ್ಮಾಣಕ್ಕೂ ಮುಂಚೆ ಇದರ ಆಯಕಟ್ಟಿನಲ್ಲಿ ಯಳವರ್ತಿ, ಬೊಗಳೇರಹಟ್ಟಿ(ಹಿಂದೆ ಓಬಳಾಪುರ) ಮೊದಲಾದ ಗ್ರಾಮಗಳಿದ್ದವು. ಅವು ಇಂದು ದಂಡೆಗೆ ಸ್ಥಳಾಂತರಗೊಂಡಿವೆ. ಇದು ಮೈದುಂಬಿ ಅರ್ಧ ವೃತ್ತಾಕಾರದ ಕೋಡಿಯಲ್ಲಿ ದುಮ್ಮಿಕ್ಕುವಾಗ ನೋಡುವುದೇ ಚೆಂದ, ಆನಂದ. ಅಂದಿನಮಟ್ಟಿಗೆ ನಮಗೆ ಅದು ಜೋಗದ ಜಲಪಾತವೇ ಆಗಿತ್ತು. ಕೆರೆಯ ಕೋಡಿಯನ್ನು ನೋಡಲು ಎಡದಂಡೆ ಹಿಡಿದು ಹೊರಟಾಗ ಕಲ್ಲುಬಂಡೆಗಳ ದೊಡ್ಡ ಗುಂಪೊಂದು ಕಾಣಿಸಿತು. ಕೆರೆಯಲ್ಲಿ ನೀರು ತುಂಬಿದಾಗ ಇದು ಸಹಜವಾಗಿಯೇ ಮುಳುಗಿರುತ್ತಿತ್ತು. ಸದ್ಯ ನಾವು ಹೋದಾಗ ನಾಲ್ಕೈದು ವರ್ಷಗಳಿಂದ ಮಳೆಬರದೆ ಕೆರೆಯಲ್ಲಿ ನೀರು ತಳಕಂಡಿತ್ತು. ಕಾರಣ ಈ ಶಿಲಾಸಮೂಹ ಗೋಚರಿಸಿತ್ತು. ಬಂಡೆಗಲ್ಲುಗಳನ್ನು ಕಂಡದ್ದೇ ತಡ ನೋಡಬೇಕೆಂಬ ಕುತೂಹಲ. ಒಂದೊಂದೇ ಬಂಡೆಯನ್ನು ನೋಡುತ್ತಾ ಸಾಗಿದೆ. ಮುಂದೆ ಕಂಡದ್ದು ಬಂಡೆಗಲ್ಲಿನ ಮೈಮೇಲೆಲ್ಲಾ ಕುಟ್ಟಿ ಮೂಡಿಸಿದ ಗೂಳಿಚಿತ್ರಗಳ ರಾಶಿಯೋ ರಾಶಿ. ಹಿಂದೆ ಕಂಡಿದ್ದ ಕನಸು ನೆನಪಾಯಿತು. ಕನಸಲ್ಲಿ ಕಂಡ ಅದೇ ಕಲ್ಲಿನ ಗುಂಪು, ಅದೇ ರೀತಿಯ ನೂರಾರು ಗೂಳಿಗಳ ಚಿತ್ರಗಳೇ ಇಲ್ಲೂ ಕಂಡದ್ದು. ಒಂದೆಡೆ ನನಗೆ ಆಶ್ಚರ್ಯ, ಆನಂದ ಒಟ್ಟಿಗೇ ಆದವು. ಇದು ನಿಜವೋ ಸುಳ್ಳೋ, ಕಾಕತಾಳೀಯವೋ ? ರಾತ್ರಿ ಕಂಡ ಕನಸು ಹೀಗೂ ನನಸಾಗಬಹುದಾ? ಈ ಕಲ್ಪನೆಯೇ ಇರಲಿಲ್ಲ. ಯಾವುದೇ ವಿಷಯ ಕುರಿತು ನಿರಂತರ ಆಲೋಚನೆ, ಮಂಥನ, ಮನನಗಳಿದ್ದರೆ ಅವು ಕನಸಲ್ಲೂ ಕಾಡುತ್ತವೆ ಎಂಬುದು ಅನುಭವದ ಮಾತು. ಅಂತೆಯೇ ಕನಸಿನಲ್ಲಿ ಕಂಡ ಬಂಡೆಗಲ್ಲು, ಅವುಗಳ ಮೇಲೆಲ್ಲಾ ಹರಡಿದ ಗೂಳಿಗಳ ಸಮೂಹ ನನಗೂ ಹೀಗೆ ಗೋಚರಿಸಿರಬೇಕು. ಇದರಿಂದ ಕೆರೆಯನ್ನು ಸಮಗ್ರವಾಗಿ ನೋಡಲು ಸಾಧ್ಯವಾಯಿತು. ಈ ಕೆರೆಯ ಮಧ್ಯೆ ಮರಗಳ ಗುಂಪುಳ್ಳ ಸುಮಾರು ಹದಿನೈದು-ಇಪ್ಪತ್ತು ಎಕರೆಗಳಷ್ಷು ಎತ್ತರದ ದಿಬ್ಬವಿದೆ. ಇದನ್ನು ಸ್ಥಳೀಯರ ಓಬಳಾಪುರ ಗಡ್ಡೆಯೆಂದೇ ಕರೆಯುತ್ತಾರೆ. ಕೆರೆ ಕಟ್ಟುವ ಮುನ್ನ ಬೊಗಳೇರಹಟ್ಟಿಯ ಜನರ ವಾಸದ ನೆಲೆ ಇದೇ ಆಗಿತ್ತು. ಈ ದಿಬ್ಬವನ್ನು ಕಂಡ ನಾವು ಅದರ ಹತ್ತಿರವಾಗುತ್ತಿದ್ದಂತೆ ಕ್ರಿ.ಶ.೧೧-೧೨ನೆಯ ಶತಮಾನದ ಗೋಗ್ರಹಣ ವೀರಗಲ್ಲುಗಳು ಮೊದಲಿಗೆ ಕಂಡುಬಂದವು.
ಹಾಗೆಯೇ ಮುಂದುವರಿದಾಗ ಪ್ರಾಗಿತಿಹಾಸ ಕಾಲದ ನವಶಿಲಾಯುಗದ ಬೂದಿದಿಬ್ಬ ಗೋಚರಿಸಿತು. ಈ ಬೂದಿದಿಬ್ಬ ಮಾನವನ ಪಶುಪಾಲನಾ ಸಂಸ್ಕೃತಿಯ ಬಹುದೊಡ್ಡ ಕುರುಹು. ಕೃಷಿ ಆರಂಭಕ್ಕೂ ಮುನ್ನ ದನಗಳ ಸಾಕಾಣಿಕೆಯಿಂದ ಉಂಟಾದ ದಿಬ್ಬವಿದು. ಬೂದಿದಿಬ್ಬಕ್ಕೂ ಮತ್ತು ಕನಸು ನನಸಾಗಿ ಕಂಡುಬಂದಿದ್ದ ಗೂಳಿಚಿತ್ರಗಳಿಗೂ ಇರುವ ಸಂಬಂಧದ ನೆನಪಾಯಿತು. ಹಾಗೆಯೇ ಓಬಳಾಪುರಗಡ್ಡೆಯನ್ನು ಸಂಪೂರ್ಣವಾಗಿ ಸುತ್ತಿದೆವು. ನಮ್ಮ ತಂಡಕ್ಕೆ ನವಶಿಲಾಯುಗದ ಕವಣೆಕಲ್ಲು, ಬಡಿಗಲ್ಲು, ಮಡಕೆಗಳು ಕಂಡುಬಂದವು. ನವಶಿಲಾಯುಗದ ಕೊಡಲಿಯೊಂದು ನನಗೆ ದೊರೆತದ್ದು ಎಲ್ಲಿಲ್ಲದ ಸಂತಸ ತಂದಿತು. ಬೂದಿದಿಬ್ಬ, ಗೂಳಿಚಿತ್ರಗಳು ನವಶಿಲಾಯುಗದ ಆರಂಭಿಕ ಜೀವನಕ್ರಮ ಪಶುಪಾಲನೆಯನ್ನು ಸೂಚಿಸಿದ್ದರೆ, ಕೊಡಲಿಯು ಕೃಷಿಯ ಆರಂಭದ ಸಂಕೇತವಾಗಿ, ಪ್ರಾಚೀನ ಮಾನವನ ನಿರಂತರ ವಾಸದ ನೆಲೆ ಇದಾಗಿತ್ತೆಂಬುದನ್ನು ದೃಢಪಡಿಸಿತು
. ಮುಂದುವರೆದು ೨೦೧೬ರಲ್ಲಿ ನನ್ನ ಪಿಎಚ್.ಡಿ. ವಿದ್ಯಾರ್ಥಿ ಶರತ್ಬಾಬು ಜೊತೆಗೆ ಮತ್ತೊಮ್ಮೆ ಈ ಪರಿಸರದಲ್ಲಿ ಕ್ಷೇತ್ರಕಾರ್ಯ ಕೈಗೊಳ್ಳುವ ಅವಕಾಶ ದೊರೆಯಿತು. ಎಂದಿನಂತೆಯೇ ಗೂಳಿಚಿತ್ರಗಳನ್ನು ನೋಡುವುದೆಂದು ಇಬ್ಬರೂ ಹೊರಟೆವು. ಈ ಬಾರಿ ಕೆರೆಯ ಕೋಡಿಯಿಂದ ಆರಂಭಗೊಂಡಿತ್ತು ನಮ್ಮ ಕ್ಷೇತ್ರಕಾರ್ಯ. ಮತ್ತೇನಾದರೂ ಆಯುಧೋಪಕರಣಗಳು ಸಿಗಬಹುದೇ ಎಂದು ನೆಲದ ಮೇಲೆ ಹರಡಿದ್ದ ಕಲ್ಲುಗಳತ್ತ ಕೇಂದ್ರೀಕರಿಸಿ ದಂಡೆಯುದ್ದಕ್ಕೂ ಸುತ್ತಿದೆವು. ಹೀಗೆ ಸುತ್ತುತ್ತಿರುವಾಗ ನನಗೆ ಆಯುಧ ರೂಪದ ಕಲ್ಲು ಗೋಚರಿಸಿತು. ನೋಡಿದರೆ ಹಳೆ ಶಿಲಾಯುಗದ ಆಯುಧವದು. ಅದರಲ್ಲೂ ಮಧ್ಯ ಹಳೆ ಶಿಲಾಯುಗ ಅಂದರೆ ೪೦,೦೦೦ ವರ್ಷಗಳಿಗೂ ಹಿಂದಿನ ಕಾಲದ್ದು. ಉರಿಬಿಸಿಲಿನಲ್ಲಿ ಸುತ್ತಿದ ಅದುವರೆಗೆ ಪಟ್ಟ ಶ್ರಮಕ್ಕೆ ಸಾರ್ಥಕತೆ ದೊರೆತಂತಾಯಿತು. ಕೊನೆಗೆ ಆಯುಧ, ಗೂಳಿಚಿತ್ರ, ಬೂದಿದಿಬ್ಬ ಮತ್ತು ಇಡೀ ಪರಿಸರದ ನೆಲೆಯನ್ನು ಆಧರಿಸಿ ಪ್ರಬಂಧವನ್ನು ರಚಿಸಿದೆ. ಧಾರವಾಡದಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಿದೆ. ಅದೂ ಕರ್ನಾಟಕದ ಪ್ರಾಗಿತಿಹಾಸಕ್ಕೆ ಹೊಸ ಹೊಳಪನ್ನು ನೀಡಿದ್ದ ಪ್ರೊ. ಕೆ. ಪದ್ದಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ. ಅದಕ್ಕಿಂತ ಖುಷಿ ಬೇರೆ ಇದೆಯೇ? ಅದೇ ಸಮ್ಮೇಳನದಲ್ಲಿ ಪ್ರಾಗಿತಿಹಾಸ ಕುರಿತು ಮಂಡಿಸಿದ ಉತ್ತಮ ಪ್ರಬಂಧಕ್ಕೆ “ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್ ನೀಡಲು ಅವರು ಘೋಷಿಸಿದ್ದರು. ಕೊನೆಗೆ ಸದರಿ ಸಾಲಿನ ಪ್ರಬಂಧಗಳಲ್ಲಿ ನಾನು ಮಂಡಿಸಿದ “ಸಂಗೇನಹಳ್ಳಿಕೆರೆ ಪರಿಸರದಲ್ಲಿ ಹಳೆಯ ಶಿಲಾಯುಗದ ಕೈಕೊಡಲಿ ಪತ್ತೆ ಪ್ರಬಂಧವು ಪ್ರಶಸ್ತಿಗೆ ಆಯ್ಕೆಯಾಯಿತು. ಇದಕ್ಕೆ ಏನು ಹೇಳುವುದು? ಸಂಶೋಧನೆಯ ತಿರುಗಾಟ ಹಾಗೂ ಬಾಲ್ಯದ ಅಲೆದಾಟದ ಸಂಗತಿಗಳು ಕೂಡಿ, ಕನಸಲ್ಲಿ ಮೂಡಿದ್ದುದೇ? ಒಟ್ಟಿನಲ್ಲಿ ಕನಸೊಂದು ನನಸಾಗಿ ಪ್ರಶಸ್ತಿ ಹೊತ್ತು ತಂದದ್ದು ಕೂಡ ನನಗೆ ಇಂದಿಗೂ ಕನಸಿನಂತೆಯೇ ಕಣ್ಕಟ್ಟಿ ನಿಂತಿದೆ.