ರಾಮನಗರ,ಜ.9- ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡ ಪಾದಯಾತ್ರಗೆ ಕಾಂಗ್ರೆಸ್ ಹಿರಿಯನಾಯಕ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.
ವೀಕ್ ಎಂಡ್ ಕರ್ಫ್ಯೂ ಅಡ್ಡಿಯಾಗಬಹುದು ಎನ್ನುವ ಆತಂಕದ ಮಧ್ಯೆಯೇ ಸಾವಿರಾರು ಜನ ಜಮಾಯಿಸಿದ್ದರು ಆದರೆ ಕರ್ಪ್ಯೂ ಅಡ್ಡಿ ಅಗಲಿಲ್ಲ ಹೀಗಾಗಿ ಮತ್ತಷ್ಟು ಜನಸಾಗರ ಸೇರಿ ಬರುತ್ತಿದೆ.
ಪೊಲೀಸರಿಂದ ಅಡೆತಡೆಗಳು ಎದುರಾಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಇನ್ನಷ್ಟು ಇಮ್ಮಡಿಯಾಗಿತ್ತು. ದ್ವಿಚಕ್ರ ವಾಹನಗಳಲ್ಲಿ, ಖಾಸಗಿ ವಾಹನಗಳಲ್ಲಿ ಪಾದಯಾತ್ರೆ ಆರಂಭದ ಸಂಗಮ ಕ್ಷೇತ್ರಕ್ಕೆ ದಾಂಗುಡಿ ಇಟ್ಟು ಬಂದರು. ಪೆÇಲೀಸರು ಯಾರನ್ನೂ ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟೂರಾದ ದೊಡ್ಡಹಾಲಹಳ್ಳಿನಿಂದ ಸಂಗಮದವರೆಗೂ ಜನ ಕಿಕ್ಕಿರಿದು ತುಂಬಿದ್ದರು.
ನಿಗದಿತ ಕಾರ್ಯಕ್ರಮದಂತೆ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭವಾಗಿದ್ದರೆ, ಬಿಸಲು ಏರುವ ಹೊತ್ತಿಗೆ ಮೇಕೆದಾಟು ಅರಣ್ಯ ಪ್ರದೇಶವನ್ನು ದಾಟಿ ಪಾದಯಾತ್ರೆ ಮುಂದೆ ಹೊರಟು ಹೋಗಿತ್ತು. ಆದರೆ ಸಂಗಮದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರಿಂದ ಸುಮಾರು 11 ಗಂಟೆವರೆಗೂ ಸಮಯ ವ್ಯರ್ಥವಾಯಿತು.
ಬಳಿಕ ಪಾದಯಾತ್ರೆ ಸುಡುಬಿಸಿಲಿನಲ್ಲೇ ಆರಂಭಗೊಂಡಿತು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಲ್ಪ ದೂರ ಸಾಂಕೇತಿಕವಾಗಿ ನಡೆದು ನಂತರ ವಾಹನದಲ್ಲಿ ತೆರಳಿದರು.
ಪಾದಯಾತ್ರೆಯಲ್ಲಿ ಪ್ರತಿಪಕ್ಷದ ನಾಯಕಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ವೀರಪ್ಪ ಮೊಯ್ಲಿ,ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ನಟ ದುನಿಯಾ ವಿಜಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಾನಾ ಮಠಾಧೀಶರು, ಧರ್ಮಗುರುಗಳು, ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.