ಬಿಜೆಪಿ ಉದ್ದೇಶಪೂರ್ವಕವಾಗಿ ಲಾಕ್ ಡೌನ್ ಮಾಡಿದೆ ಡಿಕೆಶಿ ಆರೋಪ

Share

ಬೆಂಗಳೂರು, ಜ.7: ರಾಜ್ಯದಲ್ಲಿ ಲಾಕ್ ಡೌನ್ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿಲ್ಲ ಆದರೂ ಬಿಜೆಪಿ ಉದ್ದೇಶಪೂರ್ವಕವಾಗಿ ವೀಕ್ ಎಂಡ್ ಲಾಕ್ ಡೌನ್ ಜಾರಿ ಮಾಡುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ಕೋವಿಡ್ ಹೆಸರಿನಲ್ಲಿ ಸರ್ಕಾರದ ನಿರ್ಬಂಧದ ವಿಚಾರವಾಗಿ ನಮಗೆ ಸಾವಿರಾರು ಕರೆಗಳು ಬರುತ್ತಿದ್ದು, ವೀಕೆಂಡ್ ಕರ್ಫ್ಯೂ ಬಗ್ಗೆ ತಮ್ಮ ನೋವು ಹೇಳಿಕೊಂಡು, ವಿರೋಧ ಪಕ್ಷವಾಗಿ ನೀವು ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿನ ಪಾಸಿಟಿವಿಟಿ ಬಗ್ಗೆ ನಮ್ಮ ಮಾಜಿ ಆರೋಗ್ಯ ಸಚಿವ ಯು.ಟಿ. ಖಾದರ್ ಮತ್ತು ವೈದ್ಯರ ತಂಡ ರಾಜ್ಯದ ಹಲವು ಭಾಗಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ 2% ರಷ್ಟು ಸೋಂಕು ಇಲ್ಲ. ಕರ್ಫ್ಯೂ ಅಥವಾ ಲಾಕ್ಡೌನ್ ಹಾಕಬೇಕಾದರೆ ಸರ್ಕಾರಕ್ಕೆ ತನ್ನದೇ ಆದ ಮಾನದಂಡ ಇದೆ. ಎಷ್ಟು ಸೋಂಕಿತರು, ಎಷ್ಟು ಮಂದಿ ಆಸ್ಪತ್ರೆಗೆ ಸೇರಿದ್ದಾರೆ, ಅವರಲ್ಲಿ ಎಷ್ಟು ಜನ ಐಸಿಯುನಲ್ಲಿ ಇದ್ದಾರೆ ಎಂಬ ಮಾನದಂಡ ಬೇಕು. ಒಟ್ಟಾರೆ ಪಾಸಿಟಿವ್ ದರ, ಆಸ್ಪತ್ರೆಗೆ ಸೇರಿರುವವರ ಲೆಕ್ಕ ಇದೆ. ಒಟ್ಟಾರೆ ನೋಡಿದಾಗ ಕೋವಿಡ್ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ. ಎಲ್ಲ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಎಂದರು.
ರಾಜ್ಯದ ಇತಿಹಾಸದಲ್ಲಿ ಇಂತಹ ದ್ವೇಷದ ರಾಜಕಾರಣ ನಾವು ಎಂದೂ ನೋಡಿಲ್ಲ. ರಾಜ್ಯದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಪರಿಸ್ಥಿತಿ ಗಂಭೀರವಾಗಿದ್ದರೆ ಹೇಳಿ ನಾವು ಕೂಡ ಗೌರವದಿಂದ ಕೇಳುತ್ತೇವೆ. ಏನು ಇಲ್ಲದೇ ಈ ರೀತಿ ರಾಜಕಾರಣ ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಬಿಜೆಪಿ ಸರ್ಕಾರ ವಿಜ್ಞಾನ, ತಾಂತ್ರಿಕತೆ ಬಗ್ಗೆ ಮಾತಾಡುತ್ತಿಲ್ಲ, ಅವರು ಕೇವಲ ರಾಜಕೀಯದ ಬಗ್ಗೆ ಮಾತಾಡುತ್ತಿದ್ದಾರೆ. ಇಡೀ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳ ಬಂದ್ ಇಲ್ಲ. ಕೇವಲ ರಾಮನಗರದಲ್ಲಿ ಮಾತ್ರ ಬಂದ್ ಮಾಡಿದ್ದಾರೆ ಎಂದು ಹೇಳಿದರು.
ರಾಮನಗರದಲ್ಲಿ ಒಂದು ಸಾವಾಗಿದೆಯಾ ಬನ್ನಿ ತೋರಿಸಿ. ಯಾರಾದರೂ ಐಸಿಯುನಲ್ಲಿದ್ದರೆ ತೋರಿಸಿ. ನಿನ್ನೆ 76 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಮಾತ್ರ ಸತ್ತಿದ್ದಾರೆ. ನಾವು ಕೂಡ ಆಸ್ಪತ್ರೆಯ ಪರಿಸ್ಥಿತಿ ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡಿ ಬಂದಿದ್ದೇವೆ. ಕರ್ನಾಟಕದಲ್ಲಿ ಆರ್ಥಿಕತೆ ಹಾಳಾಗುತ್ತಿದ್ದರೂ ಯಾಕೆ ಈ ರೀತಿ ಮಾಡುತ್ತಿದ್ದಾರೆ, ಇವರಿಗೆ ರಾಜಕೀಯವೇ ಹೆಚ್ಚಾಯ್ತಾ? ಎಂದು ದೇಶದ ಜನ ಕೇಳುತ್ತಿದ್ದಾರೆ ಎಂದು ವಿವರಿಸಿದರು

ಪೂರ್ವನಿಗದಿಯಂತೆ ಪಾದಯಾತ್ರೆ ನಡೆಯುತ್ತದೆಯೇ ಎಂಬ ಪ್ರಶ್ನೆಗೆ, ‘ಈ ಪಾದಯಾತ್ರೆಗೆ ನಾವು ನಿಮಗೆ ಆಹ್ವಾನ ಕಳುಹಿಸುತ್ತೇವೆ, ಬಂದು ನಿಮ್ಮ ಕಣ್ಣಾರೆ ನೋಡಿ. ನಾವು ಕೂನೂನು ಬದ್ಧವಾಗಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಪಾದಯಾತ್ರೆ ಮಾಡುತ್ತೇವೆ’ ಎಂದರು.

 

Girl in a jacket
error: Content is protected !!