ಅಪರೂಪದ ಕೋಟಿಲಿಂಗಗಳ ಪ್ರಾಚೀನ ತಾಣ ಓಹಿಲಾಪುರ
೧೯೯೮ನೇ ಇಸವಿ, ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯಕ್ಕಾಗಿ ಶಿಲ್ಪ, ಶಾಸನ, ವೀರಗಲ್ಲು ಮೊದಲಾದ ಪ್ರಾಚೀನ ವಸ್ತುವಿಶೇಷಗಳನ್ನು ಸಂಗ್ರಹಿಸಿ ತರಲೆಂದೇ ನೇಮಕವಾದ ತಂಡ ನಮ್ಮದು. ತಂಡದಲ್ಲಿ ನನ್ನನ್ನು ಸೇರಿದಂತೆ ವಾಸುದೇವ ಬಡಿಗೇರ, ಎಂ. ಕೊಟ್ರೇಶ ಮತ್ತು ನೆರಗಲ್ಲಪ್ಪ ಸೇರಿದ್ದೆವು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಳ್ಳಿಗಳನ್ನು ಸುತ್ತುತ್ತಾ ಅಲ್ಲಿನ ದೇವಾಲಯ, ಮಠ-ಮಂದಿರ, ಕಚೇರಿಗಳನ್ನು ಕಂಡು ಅಲ್ಲಿನ ಮುಖಂಡರು, ಅಧಿಕಾರಿಗಳು ಮತ್ತು ಸ್ಥಳೀಯ ಜನರನ್ನು ಒಪ್ಪಿಸಿ, ಓಲೈಸಿ ವಸ್ತುಗಳನ್ನು ಸಂಗ್ರಹಿಸುವ ಕಾಯಕವದು. ಈ ಸಂದರ್ಭದಲ್ಲಿ ಈ ಜಿಲ್ಲೆಗಳ ಹಳ್ಳಿಗಳನ್ನು ಸುತ್ತಿ ತಂದ ವಸ್ತುವಿಶೇಷಗಳು ಒಂದೇ ಎರಡೇ, ಸುಮಾರು ಮುನ್ನೂರಕ್ಕೂ ಹೆಚ್ಚೆಂಬುದು ಗಮನಾರ್ಹ. ಅವುಗಳಲ್ಲಿ ವಿವಿಧ ಬಗೆಯ ಶಿಲ್ಪ, ಶಾಸನ, ವೀರಗಲ್ಲುಗಳು; ಗೊಂಬೆ, ಮಡಕೆ-ಕುಡಿಕೆಗಳು, ಶಿಲಾಯುಗದ ಉಪಕರಣಗಳು, ಕಬ್ಬಿಣದ ಕಿಟ್ಟಗಳು, ಮರದ ವಿವಿಧ ಗೊಂಬೆಗಳು, ದೇಗುಲದ ರಥ, ಮನೆಯ ಅಡುಗೆ ಮತ್ತು ಕೃಷಿ ಉಪಕರಣಗಳು-ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಸಂಗ್ರಹಿಸುವ ತವಕವದು. ಇದಕ್ಕೆ ಅಂದಿನ ಕುಲಪತಿಗಳಾದ ಚಂದ್ರಶೇಖರ ಕಂಬಾರ ಮತ್ತು ಎಂ.ಎಂ. ಕಲಬುರ್ಗಿ ಅವರ ಪ್ರೇರಕಶಕ್ತಿಯೇ ಕಾರಣವೆನ್ನಬೇಕು.
ಹಳ್ಳಿಗಳ ದೇವಾಲಯ, ಕಟ್ಟೆಗಳ ಬಳಿ ಕೆಲವೆಡೆ ತಿಪ್ಪೆಗುಂಡಿಗಳಲ್ಲಿ ಜನರಿಂದ ಉಪೇಕ್ಷೆಗೆ ಒಳಗಾಗಿದ್ದ ಶಿಲ್ಪಗಳನ್ನು ಅವರ ಸಮ್ಮುಖದಲ್ಲಿ ಲಾರಿಯಲ್ಲಿ ತುಂಬಿಕೊಳ್ಳುತ್ತಿದ್ದೆವು. ಹೀಗೆ ಸುತ್ತುವ ಬರದಲ್ಲಿ ನೋಡಿದ ಗ್ರಾಮ ಪುರ. ಇದನ್ನು ಶಾಸನಗಳಲ್ಲಿ ಓಹಿಲಾಪುರ, ವೋಹಿಲಾಪುರ, ಶ್ರೀಪುರ ಎಂದೆಲ್ಲಾ ಕರೆಯಲಾಗಿದೆ. ನಮ್ಮ ಗಮನವೇನಿದ್ದರೂ ಭಗ್ನ ಶಿಲ್ಪಗಳ ಮೇಲೆ ಇದ್ದುದರಿಂದ ಭಗ್ನ ಮೂರ್ತಿಶಿಲ್ಪಗಳನ್ನು ಸಂಗ್ರಹಿಸುತ್ತಾ ಗಂಗನಾಳ, ಸಂಗನಾಳ ಮಾರ್ಗದ ಮೂಲಕ ಪುರದತ್ತ ಹೊರಟೆವು.
ಆ ಹೊತ್ತಿಗೆ ನಾವು ನೂರಾರು ದೇವಾಲಯಗಳನ್ನೇನೋ ನೋಡಿದ್ದೆವು. ಶಿವಲಿಂಗಗಳುಳ್ಳ ಏಕಕೂಟ, ದ್ವಿಕೂಟ, ತ್ರಿಕೂಟ, ಚತುಷ್ಕೂಟ ದೇವಾಲಯಗಳನ್ನೂ ಓದಿ ತಿಳಿದಿದ್ದೆವು. ಅಂತಹ ದೇವಾಲಯಗಳಲ್ಲಿ ಸಾಮಾನ್ಯವಾಗಿ ಒಂದು ಶಿವಲಿಂಗ ಪ್ರತಿಷ್ಠಾಪಿಸಿರುವುದನ್ನು ಮಾತ್ರ ಕಂಡಿದ್ದೆವು. ಆದರೆ ಪುರದ ಸೋಮನಾಥ ದೇವಾಲಯ ಇದುವರೆಗೆ ನೋಡಿದ ದೇವಾಲಯಗಳಿಗಿಂತ ವಿಭಿನ್ನವಾದದ್ದು. ಈ ದೇವಾಲಯದಲ್ಲಿ ಇರುವ ಶಿವಲಿಂಗಗಳು ಒಂದೆರಡಲ್ಲ, ನೂರಾರು-ಸಾವಿರವಲ್ಲ. ಎಣಿಕೆಗೂ ನಿಲುಕದಷ್ಟೆಂದರೆ ಆಶ್ಚರ್ಯವಾದೀತು. ಸ್ಥಳೀಯರ ಮಾತಲ್ಲಿ ಈ ಲಿಂಗಗಳ ಲೆಕ್ಕವನ್ನು ಕೇಳಿದರೆ ಅತ್ಯಾಶ್ಚರ್ಯವೆನಿಸುತ್ತದೆ.
ಅವರ ಪ್ರಕಾರ ಪುರದ ಸೊಮನಾಥ ದೇವಾಲಯದಲ್ಲಿರುವ ಲಿಂಗಗಳ ಸಂಖ್ಯೆ ಮುನ್ನೂರ ಮೂವತ್ಮೂರು ಕೋಟಿ. ಅಂದರೆ ಅದೆಷ್ಟು ಶಿವಲಿಂಗಗಳಿವೆ ಎಂಬುದನ್ನು ನೀವೇ ಊಹಿಸಿ. ಹಂಪೆಯಲ್ಲಿ ನಾವು ನೋಡಿದಂತೆ ತುಂಗಭದ್ರಾ ನದಿಯ ಚಕ್ರತೀರ್ಥದಲ್ಲಿ ಕೋಟಿಲಿಂಗವಿದೆ. ಅದು ಇರುವುದು ಬಂಡೆಗಳ ಮೇಲಿರುವ ನೂರಾರು ಲಿಂಗಗಳು. ಕಾಶಿಯಲ್ಲೂ ಈ ಬಗೆಯ ಲಿಂಗಗಳನ್ನು ಇಂದಿಗೂ ತಮ್ಮ ಹಾಗೂ ತಮ್ಮವರ ನೆನಪಿಗಾಗಿ ಪ್ರತಿಷ್ಠಾಪಿಸುವ ಪರಿಕ್ರಮವನ್ನು ಅಲ್ಲಿನ ಜಂಗಮವಾಡಿ ಮಠದಲ್ಲಿ ಕಾಣುತ್ತೇವೆ. ಅಲ್ಲದೆ ಈ ಬಗೆಯ ಕೋಟಿಲಿಂಗವಿರುವ ಇನ್ನೊಂದು ಸ್ಥಳವೆಂದರೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರ. ಇದನ್ನು ಕೋಟಿಲಿಂಗಗಳ ನಾಡೆಂದೇ ಕರೆಯುತ್ತಾರೆ. ಇಂದಿಗೂ ಇಲ್ಲಿ ಲಿಂಗಗಳನ್ನು ಭಕ್ತರು ಸ್ಥಾಪನೆ ಮಾಡುತ್ತಲೇ ಬಂದಿದ್ದಾರೆ. ಅಲ್ಲಿರುವುದು ಆಧುನಿಕ ಕಾಲದ ಶಿವಲಿಂಗಗಳು.
ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಾಲಯ ಕರ್ನಾಟಕವೇಕೆ, ಭಾರತದಲ್ಲೇ ಆತ್ಯಂತ ಅಪರೂಪದ ಮತ್ತು ಪ್ರಾಚೀನ ಕಾಲದ ವೈವಿಧ್ಯಮಯವಾದ ಶಿವಲಿಂಗಗಳುಳ್ಳ ದೇವಾಲಯವಾಗಿದೆ. ಪುರವು ಕುಷ್ಟಗಿ ತಾಲೂಕಿನ ಪೂರ್ವಕ್ಕಿರುವ ಗಡಿಗ್ರಾಮ. ಕುಷ್ಟಗಿಯಿಂದ ೩೬ ಕಿ.ಮೀ. ಇದು ತಾವರಗೆರೆಯಿಂದ ೧೧ಕಿ.ಮೀ. ದೂರದಲ್ಲಿದೆ. ಹಾಗೆಯೇ ಕನಕಗಿರಿಯಿಂದ ಹಿರೇತಮ್ಮಿನಾಳ ಮೂಲಕ ೨೫ ಕಿ.ಮೀ. ದೂರದಲ್ಲಿದ್ದು, ಉತ್ತಮ ರಸ್ತೆ ಸಂಪರ್ಕವಿದೆ. ಕಲ್ಯಾಣ ಚಾಲುಕ್ಯ ಕಾಲದಿಂದಲೂ ಸೋಮನಾಥ ದೇವಾಲಯ ಪ್ರಸಿದ್ಧವಾಗಿರುವುದು ಶಾಸನಗಳಿಂದ ಸ್ಪಷ್ಟವಾಗುತ್ತದೆ. ಈ ಗ್ರಾಮಕ್ಕೆ ಓಹಿಲಾಪುರವೆಂಬ ಹೆಸರು ಬಂದದ್ದು ಓಹಿಲ ಎಂಬ ಭಕ್ತನಿಂದ ಎಂಬುದು ಶಾಸನದಿಂದಲೇ ದೃಢವಾಗುವುದು. ಶಾಸನದಲ್ಲಿ “ಸೌರಾಷ್ಟ್ರದ ಸೋಮನಾಥದೇವ ಓಹಿಲಂಗೆ ಕೊಟ್ಟ ಕೆಲಸ ಹಲಿಯ ಹೆಕ್ಕು ದೇಗುಲವ ಮಾಡುವುದು ಸರಿಗೆಯ ಹೆಕ್ಕು ಕೆರೆಯನಗಳುವುದು ಬಾಗಿಲಿಲ್ಲದ ಕೋಟೆ ಸಂಸಾರಕೆ ತರಹುಗಡೆವೇಡ ಓಹಿಲ ಮಾಡಿಸಿದ ಕೋಟಿಲಿಂಗಕ್ಕೆ ಹೇಳಿದೆ. ಅಲ್ಲದೆ ಈ ದೇವಾಲಯಕ್ಕೆ ಅನೇಕ ದಾನದತ್ತಿಗಳನ್ನು ನೀಡಿದ ಶಾಸನಗಳೂ ಇಲ್ಲಿವೆ. ಮುಖ್ಯ ಗರ್ಭಗೃಹದಲ್ಲಿ ಒಂದು ಲಿಂಗವಿದ್ದರೆ ದೇವಾಲಯದ ಸುತ್ತಲೂ ಇರುವ ಹಲವು ಪ್ರಾಕಾರ, ಸಾಲುಮಂಟಪಗಳುದ್ದಕ್ಕೂ ಶಿವಲಿಂಗಗಳ ಸಾಲುಸಾಲುಗಳೇ. ಶಿವಲಿಂಗಗಳೋ ಒಂದೇ ಕಲ್ಲಿನಲ್ಲಿ ಚಿಕ್ಕ ಚಿಕ್ಕದಾಗಿ ಕಡೆಯಲಾದ ಅನೇಕ ಲಿಂಗಗಳು. ಅವುಗಳ ಸಂಖ್ಯೆಯಲ್ಲಿ ಒಂದರಿಂದ ಹಿಡಿದು ೧೪೯, ೧೭೯ರವರೆಗೆ ಒಂದೇ ಶಿಲೆಯಲ್ಲಿ ಕಡೆದಿದ್ದಾರೆ. ಪಾನವಟ್ಟವನ್ನೂ ಬಿಡದೆ ಚಿಕ್ಕ ಲಿಂಗಗಳನ್ನು ಮೂಡಿಸಿರುವುದು ಗಮನಾರ್ಹ. ಅವುಗಳಲ್ಲಿ ಏಕಲಿಂಗ, ತ್ರಿಲಿಂಗ ಪಂಚಲಿಂಗ, ನವಲಿಂಗಗಳ ಮುಂತಾಗಿವೆ. ಒಂಭತ್ತು ಮತ್ತು ಹನ್ನೊಂದು ಸಂಖ್ಯೆಯ ಲಿಂಗಗಳೇ ಅತಿ ಹೆಚ್ಚಾಗಿವೆ. ಇವುಗಳಲ್ಲದೆ ೧೧, ೧೪, ೧೬, ೨೧, ೩೧, ೩೩, ೪೯, ೫೮ ರ ಸಂಖ್ಯೆಯ ಲಿಂಗಗಳೂ ಗುಡಿಯ ಸುತ್ತಲೂ ಪ್ರತ್ಯೇಕವಾಗಿ ಸಾಲುಮಂಟಪಗಳಲ್ಲಿವೆ. ಶಿವಲಿಂಗಗಳಲ್ಲದೆ ಗುಡಿಯಲ್ಲಿ ಗಣೇಶ, ಶಿವಪಾರ್ವತಿ, ನಂದಿ, ಚತುರ್ಮುಖ ನಂದಿ, ಭಕ್ತಶಿಲ್ಪ, ಷಣ್ಮುಖ, ಲಕ್ಷ್ಮೀನರಸಿಂಹ, ಗೋಪಾಲಕೃಷ್ಣ, ಸೂರ್ಯ, ಚಂದ್ರರಲ್ಲದೆ ವಿವಿಧ ಬಗೆಯ ವೀರಗಲ್ಲುಗಳನ್ನೂ ಇಲ್ಲಿ ಪ್ರತಿಷ್ಟಾಪಿಸಿದ್ದಾರೆ. ದೇಗುಲದ ಒಳಗೆ ಆರೇಳು ನೀರಿನ ಬಾವಿಗಳಿರುವುದು ಗಮನಾರ್ಹ.
ಇಲ್ಲಿನ ವಿಶೇಷ ಶಿಲ್ಪಗಳಲ್ಲಿ ನಾಗಶಿಲ್ಪಗಳು ಹೆಚ್ಚಾಗಿವೆ. ಬಿಡಿಬಿಡಿಯಾಗಿರುವ ನಾಗ, ನಾಗಿಣಿಯರ ಶಿಲ್ಪಗಳಲ್ಲದೆ ಲಲಾಟದ ಹತ್ತಾರು ಸರ್ಪಗಳನ್ನು ಚಿತ್ರಿಸಲಾಗಿದೆ. ಅಲ್ಲದೆ ವಿಶಿಷ್ಟ ಮತ್ತು ಅಪರೂಪದ ಮೂರುಕಾಲಿನ ನಾಗಮಂಚವನ್ನು ಇಲ್ಲಿ ಕಾಣಬಹುದು. ವೀರಗಲ್ಲುಗಳಲ್ಲಿ ಗೋಗ್ರಹಣವಲ್ಲದೆ ಇನ್ನೊಂದು ವೀರಗಲ್ಲನ್ನು ದೇವಾಲಯದಲ್ಲಿ ಇರಿಸಲಾಗಿದೆ. ಇದು ಕರ್ನಾಟಕದಲ್ಲೇ ಅಪರೂಪದ ಮತ್ತು ವಿಶಿಷ್ಟವಾದದ್ದಾಗಿದೆ. ಈ ವೀರಗಲ್ಲು ನಾಲ್ಕು ಹಂತಗಳಲ್ಲಿ ರಚನೆಯಾಗಿದೆ. ಕೆಳಭಾಗವು ಘಟನೆಗೆ ಸಂಬಂಧಿಸಿದೆ. ಅದೆಂದರೆ ಎರಡತ್ತಿನ ಚಕ್ಕಡಿ ಬಂಡಿ, ಇಕ್ಕೆಲಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಚಿತ್ರಿಸಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಮಲಗಿದ ಎತ್ತುಗಳು, ಅವುಗಳ ಮಧ್ಯೆ ಪದ್ಮಾಸನದಲ್ಲಿ ಕೈಮುಗಿದು ಕುಳಿತ ವೀರನನ್ನು ಮೂಡಿಸಿದ್ದಾರೆ. ಅವುಗಳ ಮೇಲೆ ಎಂಡು ಶಿವಲಿಂಗಗಳು ಮತ್ತು ಜೀನಿನಿಂದ ಅಲಂಕರಿಸಿದ ಕುದುರೆಯನ್ನು ಚಿತ್ರಿಸಿದ್ದಾರೆ. ಮೇಲ್ಭಾಗದಲ್ಲಿ ಮೂರು ಪೂರ್ಣಕುಂಭಗಳು ಮತ್ತು ಅವುಗಳ ಮಧ್ಯೆ ಕೀರ್ತಿಮುಖದ ಅಲಂಕರಣೆಗಳಿವೆ. ಇದರಿಂದ ಎತ್ತಿನ ಗಾಡಿಯೊಂದು ವೀರನ ಸಮೇತ ಹಳ್ಳವೊಂದರಲ್ಲಿ ಕೊಚ್ಚಿ ಹೋಗಿರುವುದನ್ನು ನೆನಪಿಸುವ ಸ್ಮಾರಕ ಶಿಲ್ಪವಿದು. ಇಲ್ಲಿರುವ ಹಿರೇಹಳ್ಳವು ಹರಹು ಮತ್ತು ಸೆಳವಿನಲ್ಲಿ ಘೋರವಾದದ್ದೇ ಆಗಿದೆ. ಈ ಹಿರೇಹಳ್ಳ ದಾಟುವ ಸಂದರ್ಭದಲ್ಲಿ ಸವಾರನೊಂದಿಗೆ ಎತ್ತಿನ ಗಾಡಿಯು ಕೊಚ್ಚಿಹೋದ ಘಟನೆಯ ಮನಕಲಕುವ ಪ್ರಸಂಗವನ್ನು ಈ ವೀರಗಲ್ಲು ಹೊತ್ತು ನಿಂತಂತಿದೆ. ಇದಕ್ಕೆ ಉದಾಹರಣೆಯಾಗಿ ನಮಗಾದ ಅನುಭವವನ್ನು ನೆನಪಿಸಿಕೊಳ್ಳಲೇಬೇಕು. ಪುರವನ್ನು ಪುರದ ಸೋಮನಾಥ ಮತ್ತು ಅಲ್ಲಿನ ಕೋಟಿಲಿಂಗಗಳನ್ನು ನೋಡಿ ಶಿಲ್ಪ ಸಂಗ್ರಹಕ್ಕಾಗಿ ಮುಂದಿನ ಊರಿನತ್ತ ಹಜ್ಜೆ ಹಾಕಿದೆವು. ಊರನ್ನು ದಾಟಿ ಹಿರೇಹಳ್ಳವನ್ನು ದಾಟಬೇಕಿತ್ತು.
ಹಿರೇಹಳ್ಳವೋ ನೂರೈವತ್ತು ಮೀಟರಿಗೂ ಹೆಚ್ಚು ವಿಸ್ತಾರವಾಗಿ ಹರಿಯುತ್ತಿದ್ದು, ಬೇಸಿಗೆಯ ನೀರಿಲ್ಲದ ಹಳ್ಳದ ತುಂಬೆಲ್ಲಾ ಮರಳಿನ ರಾಶಿಯೇ ತುಂಬಿಕೊಂಡಿತ್ತು. ಆದರೆ ಇಂದು ಹಳ್ಳಕ್ಕೆ ಸೇತುವೆ ಕಟ್ಟಲಾಗಿದ್ದು, ಹಳ್ಳದಲ್ಲಿದ್ದ ಮರಳು ಆಧುನೀಕರಣದ ಭರಾಟೆಗೆ ಕರಗಿಹೋಗಿದೆ. ಈ ಹಳ್ಳವನ್ನು ದಾಟಿಹೋಗಲು ಲಾರಿ ಚಾಲಕನಿಗೆ ಹೇಳಿದೆವು. ಅವನೋ ಹುಡುಗಾಟಿಕೆಯ ಹುಡುಗ. ಗಾಡಿಯನ್ನೇನೋ ಮುನ್ನಡೆಸಿ ಅತ್ತಿತ್ತ ಹೊರಳಿಸಿ ನಡೆದ. ಲಾರಿಯು ಹೋಗಹೋಗುತ್ತಿದ್ದಂತೆ ಮರಳಿನಲ್ಲಿ ಸಿಕ್ಕಿಕೊಳ್ಳಲಾರಂಭಿಸಿತು. ಹಳ್ಳದ ಮಧ್ಯದವರೆಗೂ ಲಾರಿಯು ಪ್ರಯಾಸದಿಂದ ಮುನ್ನಡೆಯುತ್ತಾ ಚಕ್ರಗಳು ಮರಳಿನಲ್ಲಿ ಸಿಕ್ಕಿಕೊಂಡವು. ಏನೆಲ್ಲಾ ಪ್ರಯತ್ನಿಸಿದರೂ ಲಾರಿ ಮುಂದೆ ಹೋಗದಂತಾಯಿತು. ನಮ್ಮ ಕ್ಷೇತ್ರಕಾರ್ಯದ ಕಾಲವಂತೂ ಬೇಸಿಗೆ, ಅದೂ ಮಟಮಟ ಮಧ್ಯಾಹ್ನದ ಬಿರುಬಿಸಿಲು. ಅದರಲ್ಲೂ ಕಾದ ಮರಳಿನ ಜಳ. ಅಬ್ಬಬ್ಬಾ ಬಾಯಾರಿಕೆ, ನೀರು, ಆಹಾರ ಕೇಳತೀರದು. ಆಕಸ್ಮಿಕವೋ ಎಂಬಂತೆ ಲಾರಿ ಸಿಕ್ಕಿಹಾಕಿಕೊಂಡ ಸಮಯ ಮಧ್ಯಾಹ್ನದ ಹನ್ನೆರಡು ಗಂಟೆ, ಜೊತೆಗೆ ಅಂದು ಅಮಾವಾಸ್ಯೆ ಬೇರೆ, ಜನರ ಬಾಯಲ್ಲಿ ಅದನ್ನು ಬೇರೆ ಕೇಳಬೇಕೆ, ಅದನ್ನು ಕೇಳೇ ನಾವೂ ಹೈರಾಣಾದೆವು. ಏನು ಮಾಡುವುದು. ಕೊನೆಗೆ ಲಾರಿಯಲ್ಲಿದ್ದ ಪೈಪು, ಚೈನ್‌ಪುಲ್ಲಿಗಳನ್ನು ಕೆಳಗಿಳಿಸಿ, ಹೂತಿದ್ದ ಲಾರಿಯ ಗಾಲಿಗಳನ್ನು ಮೇಲೆತ್ತುವ ಸಾಹಸಕ್ಕೆ ಕೈಹಾಕಿದೆವು, ಗಾಡಿಯಲ್ಲಿದ್ದ ಮೂರ್ತಿಶಿಲ್ಪ, ವೀರಗಲ್ಲುಗಳನ್ನೂ ಚಕ್ರದ ಅಡಿಗಿಟ್ಟು ಪ್ರಯತ್ನಿಸಿದೆವು, ಆದರೂ ಲಾರಿ ಮುಂದೆ ಸಾಗಲಿಲ್ಲ. ಏನು ಮಾಡುವುದೆಂದು ಬಳಲಿ ಬೆಂಡಾಗಿ ಕುಳಿತಿದ್ದ ನಮ್ಮನ್ನು ನೋಡಿ ಪುರದ ಪುಣ್ಯಾತ್ನನೊಬ್ಬ ಊರ ಜನರ ದಂಡನ್ನೇ ಕರೆತಂದ. ಅವರ ಹೇಳಿಕೆಗಳೋ ಬಗೆಬಗೆಯ ಕಥಾನಕಗಳು. ನಮ್ಮ ಅಪರಾವತಾರಗಳನ್ನು ನೋಡಿದುದಲ್ಲದೆ, ನಮ್ಮ ಹಿನ್ನೆಲೆಯತ್ತ ಕೈಹಾಕಿದರು, ಲಾರಿಯ ಚಕ್ರದ ಕೆಳಗೆ ಹಾಕಿದ್ದ ಮತ್ತು ಲಾರಿಯಲ್ಲಿದ್ದ ದೇವರ ಮೂರ್ತಿಶಿಲ್ಪಗಳನ್ನು ಕಂಡರು. ಊರ ದೇವರುಗಳೆಲ್ಲಾ ಲಾರಿಯಲ್ಲಿವೆ. ಎಲ್ಲ ದೇವರುಗಳನ್ನು ಇವರು ನಿಧಿಗಾಗಿ ಕದ್ದೊಯ್ಯುತ್ತಿದ್ದಾರೆ ಎಂಬ ಭಯಾನಕ ಉದ್ಗಾರಗಳು. ಇದೇನು ಕಾಲ ಬಂತಪ್ಪಾ, ದೇವರನ್ನೇ ಕದಿಯು ಕಳ್ಳರಿವರು ಎಂದೆಲ್ಲಾ ಬೈಯುತ್ತಾ ನಮ್ಮ ಮೇಲೆ ಎರಗುವುದೊಂದೇ ಬಾಕಿ. ಅಷ್ಟರಲ್ಲಿ ಹಿರಿಯ ವ್ಯಕ್ತಿ ಬಳಿಬಂದು ನಮ್ಮ ಅಲವತ್ತನ್ನು ಸಾವದಾನದಿಂದ ಕೇಳಿ, ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದ. ಹಗ್ಗಗಳನ್ನು ತರಿಸಿ ಲಾರಿಯನ್ನು ಹಳ್ಳದಿಂದ ಹೊರಗೆಳೆಯಲು ಹುರಿದುಂಬಿಸಿದ. ಕೊನೆಗೆ ಲಾರಿಯನ್ನು ಹಳ್ಳದಿಂದ ದಂಡೆಗೆ ಎಳೆದು ತಂದದ್ದು ನಮಗೆ ಕೊಂಚ ನಿಟ್ಟುಸಿರು ಬಿಟ್ಟಂತಾಯಿತು.
ಇನ್ನೇನು ಗಾಡಿ ಚಾಲನೆ ಮಾಡಬೇಕು. ಅಷ್ಟರಲ್ಲಿ ಇನ್ನೊಬ್ಬ ಯಜಮಾನ ಊರಿನ ಹುಡುಗರತ್ತ ಕೈಮಾಡಿ ದೇವರುಗಳನ್ನು ಇವರು ಹಳ್ಳದಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಅವುಗಳನ್ನು ಮೊದಲು ಗಾಡಿಯಲ್ಲಿ ಹಾಕ್ರೋ. ಇಲ್ಲದಿದ್ದರೆ ಯಾವ ಊರಿನ ದೇವರುಗಳೋ ಇವು, ಇಲ್ಲಿಯೇ ಇದ್ದರೆ ನಮ್ಮ ಊರಿಗೇ ಕೇಡುಗಾಲ ಎನ್ನುತ್ತಾ ಹಳ್ಳದಲ್ಲಿದ್ದ ಶಿಲ್ಪಗಳೆಲ್ಲವನ್ನೂ ಎತ್ತಿ ತಂದು ಲಾರಿಯಲ್ಲಿ ಹಾಕಿ ನಮ್ಮನ್ನು ಸಾಗುಹಾಕಿದ ಪ್ರಸಂಗ ಜೀವಮಾನದಲ್ಲಿ ಮರೆಯಲಾರದ್ದಾಗಿದೆ.