ಉದ್ಯಮ ಶೀಲತೆ ಅಭಿವೃದ್ಧಿಗೆ ಮಾನವ ಸಂಬಂಧಗಳ ಕೊರತೆ
ದಾವಣಗೆರೆ ನಗರದ ಹೃದಯಭಾಗದಲ್ಲಿರುವ ಶಾಂತಿಟಾಕೀಸ್ ಮಾರ್ಗವಾಗಿ ಅಣಜಿ, ಬಿಳಿಚೋಡು, ಜಗಳೂರಿನ ರಸ್ತೆಗೆ ಏರಿ, ರಸ್ತೆಯ ಅಷ್ಟೂ ಅಗಲವನ್ನು ಅತಿಕ್ರಮಿಸುತ್ತಾ, ದಟ್ಟವಾದ ಕಪ್ಪುಹೊಗೆ ಮತ್ತು ಧೂಳನ್ನು ಕಾರುತ್ತಾ, ನಿಧಾನಗತಿಯಿಂದ ಚಲಿಸುತ್ತಿದ್ದ ಬೋರ್ವೆಲ್ ಲಾರಿಯ ಕ್ಯಾಬಿನ್ ನಲ್ಲಿ ಕುಳಿತು ಕಿಟಕಿಯಿಂದ ತಲೆಯನ್ನು ಹೊರಹಾಕಿ, ಹಿಂದಿರುಗಿ ನೋಡುತ್ತಾ ನನ್ನ ಕಡೆಗೆ ಕೈ ಬೀಸುತ್ತಲೇ ಸಾಗಿದ ಗೌಡ್ರ ಪರಮಶಿವಣ್ಣ ಮಾಮ ನನ್ನ ಕಣ್ಣೋಟದಿಂದ ಪೂರ್ತಿಮರೆಯಾಗುವವರೆಗೂ ನಾನೂ ಕೈ ಬೀಸುತ್ತಲೇ ಇದ್ದೆ. ಮಾಮನ ಜೊತೆ ಊರಿಗೆ ಹೋಗಿ ಆತ ಕೊರೆಸಲಿರುವ ಬೋರ್ವೆಲ್ ಗಳ ಫಲಶ್ರುತಿ ಏನಾಗಬಹುದು ಎನ್ನುವುದನ್ನು ತಿಳಿದುಕೊಳ್ಳುವ ಆದುಮಿಡಲಾಗದ ಕುತೂಹಲದ ಮಧ್ಯೆ ನಾಳೆ ಬೆಳಿಗ್ಗೆ ಪ್ರೊಫೆಸರ್ ಭಂಡಾರಿಯವರ ಎಲೆಕ್ಟ್ರಿಕಲ್ಸ್ ಲ್ಯಾಬ್ ಪರೀಕ್ಷೆಯಿದ್ದ ಕಾರಣ ಅನಿವಾರ್ಯವಾಗಿ ದಾವಣಗೆರೆಯಲ್ಲಿ ಉಳಿದುಕೊಂಡೆ. ಆ ರಾತ್ರಿಯೇ ಮಾಮನ ಹೊಲದಲ್ಲಿ ಬೋರ್ವೆಲ್ ಕೊರೆಸುವ ಕಾರ್ಯಯೋಜನೆ ಇತ್ತಾದ್ದರಿಂದ ನಾಳಿನ ಪರೀಕ್ಷೆಯ ತಯಾರಿಯಲ್ಲಿ ಬೆಳಗಿನ ಜಾವ ಮೂರು ಗಂಟೆಯವರೆಗೂ ಓದುತ್ತಾ ಕುಳಿತ ನನ್ನ ಮನಸ್ಸು ಬೋರ್ವೆಲ್ ನ ಯಶಸ್ಸಿನ ಬಗ್ಗೆಯೇ ಚಿಂತಿಸುತ್ತಿತ್ತು. ಈ ವೇಳೆಗಾಗಲೇ ಬೋರ್ವೆಲ್ ನಲ್ಲಿ ನೀರು ಬಿದ್ದಿರಬಹುದಲ್ಲವೆ? ಎಂದು ನನ್ನನ್ನು ನಾನೇ ನೂರಾರು ಬಾರಿ ಸಂತೈಸಿಕೊಂಡಿದ್ದರೂ ನಿಜ ಸಂಗತಿಯನ್ನು ತಿಳಿದುಕೊಳ್ಳುವ ಯಾವ ಸುಲಭವಿಧಾನವೂ ಇಂದಿನಂತೆ ಅಂದು ಉಪಲಬ್ದವಿರದ ಕಾರಣ ಮನಸ್ಸಿನಲ್ಲಿ ಮಾತ್ರ ಮಂಡಿಗೆ ಸವಿಯುತ್ತಿದ್ದೆ. ಇಂದು ಒಂದು ಮೊಬೈಲ್ ಫೋನ್ ನಿಂದ ಊರಿನ ತತ್ಕಾಲೀನ ವಿಷಯಗಳನ್ನು ಸುಲಭದಲ್ಲಿ ಅರಿತುಕೊಳ್ಳುವ ಸಾಧ್ಯತೆಗಳು ಇರುವ ಮಟ್ಟಕ್ಕೆ ಎಂಬತ್ತರ ದಶಕದ ಮಧ್ಯಭಾಗದ ಅಂದಿನ ದಿನಗಳ ತಾಂತ್ರಿಕತೆ ಬೆಳೆದಿರಲಿಲ್ಲ. ಬೋರ್ವೆಲ್ ನ ಫಲಶ್ರುತಿ ಅರಿಯಲು ಸುಮಾರು ಒಂದು ವಾರದ ಕಾಲವಾದರೂ ನಾನು ಕಾಯಲೇಬೇಕಿತ್ತು. ತುರುವನೂರು ಹೈಸ್ಕೂಲಿನಲ್ಲಿ ಗುಮಾಸ್ತರಾಗಿದ್ದ ದಾವಣಗೆರೆಯರೇ ಆದ ಬಸವರಾಜ್ ಮುಂದಿನ ಶನಿವಾರ ಊರಿನಿಂದ ತಮ್ಮ ವಾರಾಂತ್ಯದ ರಜೆಗೆಂದು ದಾವಣಗೆರೆಗೆ ಬಂದಾಗ, ಮಾಮನ ಹೊಲದಲ್ಲಿ ಕೊರೆಸಿದ ಬೋರ್ವೆಲ್ ನ ಫಲಿತಾಂಶದ ಸಮಗ್ರವರದಿಯನ್ನು ಓಂಕಾರಪ್ಪ ಮಾಮನ ಬಾಯಿಂದ ಕೇಳಿದ್ದ ಪಕ್ಷದಲ್ಲಿ ಮಾತ್ರ ನಾನು ಇದರ ಕುರಿತಾದ ಮಾಹಿತಿಯನ್ನು ಬಸವರಾಜ್ ಮುಖೇನ ತಿಳಿಯುವ ಏಕೈಕ ಸಾಧ್ಯತೆಯೊಂದೇ ಆ ಹೊತ್ತಿನಲ್ಲಿ ನನ್ನ ಪಾಲಿಗೆ ದಟ್ಟವಾಗಿದ್ದದ್ದು.
ಮೂರ್ನಾಲ್ಕು ದಿನಗಳ ಹಿಂದೆ ಸಾಯಂಕಾಲದ ಆರು ಗಂಟೆಯ ಹೊತ್ತಿಗೆ ದಾವಣಗೆರೆಯ ಎಂಸಿಸಿ “ಬಿ” ಬ್ಲಾಕಿನಲ್ಲಿದ್ದ ನಮ್ಮ ಬಾಡಿಗೆ ಮನೆಯನ್ನು ಹೊಕ್ಕ ಗೌಡ್ರ ಪರಮಶಿವಣ್ಣ ಮಾಮ “ಏನವ್ವಾ ಇಂದ್ರಕ್ಕಾ, ಚೆನ್ನಾಗಿದ್ದೀಯಾ?” ಎಂದು ಅಡುಗೆಕೋಣೆಯಲ್ಲಿ ರಾತ್ರಿಯ ಊಟದ ತಯಾರಿಯಲ್ಲಿದ್ದ ನನ್ನ ಅಮ್ಮನ ಹೆಸರನ್ನು ಕೂಗುತ್ತಾ ಹಾಲಿನಲ್ಲಿದ್ದ ಸ್ಟೀಲ್ ಫೋಲ್ಡಿಂಗ್ ಕುರ್ಚಿಯೊಂದರಲ್ಲಿ ಆಸೀನರಾಗಲು, ಸೀರೆಯ ಸೆರಗಿನ ತುದಿಗೆ ಕೈಗಳನ್ನು ಒರಸುತ್ತಲೆ ಅಡುಗೆ ಮನೆಯಿಂದ ಹೊರಬಂದ ಅಮ್ಮ “ಅಣ್ಣಾ, ಬಾ, ಯಾವಾಗ ಬಂದೆ? ಮನೆಯಲ್ಲಿ ಎಲ್ಲರೂ ಹುಷಾರಾಗಿದ್ದಾರೆಯೇ?” ಎಂದು ಕೇಳಲಾಗಿ “ಇವತ್ತು ಮಧ್ಯಾಹ್ನ ಊರಿಂದ ಬಂದೆ. ಹೂಂ ಕಣವ್ವಾ ಮನೆಯಲ್ಲಿ ಎಲ್ಲರೂ ಆರಾಮವಾಗಿದ್ದಾರೆ” ಎನ್ನುವ ಮಾರುತ್ತರ ಕೊಟ್ಟರು. “ಅಣ್ಣಾ, ಒಂದು ನಿಮಿಷ, ಟೀ ತರುತ್ತೇನೆ, ನಿಲ್ಲು” ಎಂದು ಮತ್ತೆ ಅಡುಗೆಕೋಣೆಗೆ ಬಿರಬಿರನೆ ಅಮ್ಮ ಹೆಜ್ಜೆ ಹಾಕಲು, ಒಳಗಿನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದ ನಾನು ಹಾಲ್ ಗೆ ಬಂದು ಮಾಮನ ಒಟ್ಟಿಗೆ ಮಾತನಾಡತೊಡಲು ಮೊದಲುಮಾಡಿದೆ.
ಗೌಡ್ರ ಪರಮಶಿವಣ್ಣ ಮಾಮ ನನ್ನ ಅಮ್ಮನ ಬಹಳ ಹತ್ತಿರದ ಸೋದರ ಸಂಬಂಧಿ. ಚಿಕ್ಕಂದಿನಲ್ಲಿ ಒಂದೇ ಮನೆಯಲ್ಲಿ ಒಟ್ಟಾಗಿ ಬೆಳೆದಿದ್ದ ಕಾರಣ ನನ್ನ ಅಮ್ಮನೊಂದಿಗೆ ಹೆಚ್ಚು ಸಲಿಗೆಯನ್ನು ಹೊಂದಿದ್ದ ಮಾಮ ಯಾವುದೇ ಕಾರಣಕ್ಕೆ ದಾವಣಗೆರೆಗೆ ಬಂದವರು ನಮ್ಮ ಮನೆಗೆ ಬರದೆ ಊರಿಗೆ ಮರಳುತ್ತಿರಲಿಲ್ಲ. ಕೇವಲ ಎರಡು ತಿಂಗಳುಗಳ ಹಿಂದೆಯಷ್ಟೇ ಕಿರಿಯಮಗ ಎರಡು ವರ್ಷದ ನಾಗಭೂಷಣನ ತುಸು ನಿತ್ರಾಣಗೊಂಡಂತಿದ್ದ ಕಾಲುಗಳನ್ನು ಪರೀಕ್ಷೆ ಮಾಡಿಸಲು ನಗರದ ಹೆಸರಾಂತ ಶಿಶುತಜ್ಞವೈದ್ಯ ಭೂಸನೂರಮಠ ಅವರ ಬಳಿ ಬಂದಿದ್ದ ಮಾಮ ಮತ್ತು ಅವರ ಹೆಂಡತಿ ಜಯವಾಣಿ ಅತ್ತೆಯವರು ಮಗುವಿನ ಚಿಕಿತ್ಸೆಗಾಗಿ ಸುಮಾರು ಒಂದು ವಾರದ ಕಾಲ ನಮ್ಮ ಮನೆಯಲ್ಲೇ ಉಳಿದಿದ್ದರು. ಈ ವೇಳೆಗೆ ಕೈಯಲ್ಲಿ ಟೀ ಲೋಟವನ್ನು ಹಿಡಿದು ಹಾಲ್ ಪ್ರವೇಶಿಸಿದ ಅಮ್ಮ “ಅಣ್ಣ, ನಾಗ ಈಗ ಹೇಗಿದ್ದಾನೆ?” ಎಂದು ಮಾಮನನ್ನು ಕುರಿತು ಪ್ರಶ್ನಿಸಲಾಗಿ “ಪರವಾಗಿಲ್ಲ ಕಣಮ್ಮಾ, ಗೋಡೆಗಳನ್ನು ಹಿಡಿದು, ಬೀಳದಂತೆ ನಿಧಾನವಾಗಿ ಮನೆಯ ತುಂಬಾ ಓಡಿಯಾಡುತ್ತಾನೆ” ಎಂದ ಗೌಡ್ರು ತಾವು ಈ ಬಾರಿ ದಾವಣಗೆರೆಗೆ ಬಂದ ಉದ್ದೇಶವನ್ನು ಆರುಹಲು ಮೊದಲಿಟ್ಟರು.
ಊರಿನ ಪಶ್ಚಿಮಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ, ಬಂಗಾರಕ್ಕನಹಳ್ಳಿ ರಸ್ತೆಯ ಬದಿಗೇ ಬರುವ, “ಗಾಮಜ್ಜಿಕುಣಿ” ಗೆ ಹೊಂದಿಕೊಂಡಂತೆ ಇರುವ ತಮ್ಮ ಏಳು ಎಕರೆ ಫಲವತ್ತಾದ ಎರೆಹೊಲದಲ್ಲಿ ಬೋರ್ ಹಾಕಿಸುವ ತಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಈ ಬಾರಿ ದಾವಣಗೆರೆಗೆ ಬಂದಿದ್ದ ಮಾಮ ಈ ಬಗ್ಗೆ ಈಗಾಗಲೇ ಜಗಳೂರು ರಸ್ತೆಯ, ಶಾಂತಿ ಟಾಕೀಸ್ ಪಕ್ಕದ ಹೋಟೆಲ್ ಒಂದರಲ್ಲಿ ಖಾಯಂ ರೂಪದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ ಬೋರ್ವೆಲ್ ಕೊರೆಯುವ ಯಂತ್ರ ಹೊಂದಿದ್ದ ವ್ಯಾಪಾರಿ ಮಣಿಸೆಲ್ವಂನನ್ನು, ನಮ್ಮ ಮನೆಗೆ ಎಡತಾಕುವ ಪೂರ್ವದಲ್ಲಿ ಭೇಟಿಯಾಗಿ ಬಂದಿರುವುದಾಗಿಯೂ ತಿಳಿಸಿದರು. ಹದಿನೈದು ದಿನಗಳ ಹಿಂದೆ ಬಾಗೇನಾಳ್ ನಿಂದ ಬಂದ, ಭೂಮಿಯೊಳಗಿನ ನೀರು ಸಿಗಬಹುದಾದ ಸೆಲೆಗಳನ್ನು ಗುರುತಿಸುವ ಕಾಯಕದ ವ್ಯಕ್ತಿಯೊಬ್ಬ, ಕವಣೆಕೋಲು ಹಿಡಿದುಕೊಂಡು ಪರಮಶಿವಣ್ಣನವರ ಹೊಲದಲ್ಲಿ ಮೂರು ಗುರುತುಗಳನ್ನು ಮಾಡಿಕೊಟ್ಟು ಹೋಗಿರುವುದಾಗಿ, ಆ ಮೂರು ಗುರುತುಗಳ ಪೈಕಿ ಯಾವುದಾದರೂ ಒಂದು ಪಾಯಿಂಟ್ ನಲ್ಲಿ ಬೋರ್ವೆಲ್ ತೆಗೆಸಿದ್ದೇ ಆದರೂ ಏಳು ಎಕರೆಗಳಿಗೂ ಯಥೇಚ್ಚವಾಗಿ ನೀರುಣಿಸಿ ಇನ್ನೂ ಮಿಗುವಷ್ಟು ಮಟ್ಟಿಗಿನ ನೀರು ಲಭ್ಯವಾಗುತ್ತದೆ ಎಂದು ಭರವಸೆ ನೀಡಿರುವುದನ್ನೂ ತಿಳಿಸಿದರು. ಬಾಗೇನಾಳ್ ವ್ಯಕ್ತಿ ಈಗಾಗಲೇ ಊರಿನಲ್ಲಿ ಏಳೆಂಟು ಮಂದಿಗೆ ಈ ತರಹದ ಪಾಯಿಂಟ್ ಗಳನ್ನ ತೋರಿಸಿ ಕೊಟ್ಟಿರುವುದಾಗಿಯೂ, ಈ ಪಾಯಿಂಟ್ ಗಳ ಪೈಕಿ ಕುರುಬರ ಕೊಳ್ಳಿಶಿವಣ್ಣನ ಹೊಲದಲ್ಲಿ ತೋರಿಸಿದ ಒಂದು ಪಾಯಿಂಟ್ ಫೇಲಾಗಿದ್ದು ಬಿಟ್ಟರೆ ಬೇರೆಲ್ಲಾ ಕಡೆ ಮೂರರಿಂದ ನಾಲ್ಕು ಇಂಚುಗಳಷ್ಟು ನೀರು ಲಭ್ಯವಾಗಿರುವುದನ್ನೂ ಒತ್ತಿ ಹೇಳಿದರು. ಈ ಎಲ್ಲಾ ಬೋರ್ವೆಲ್ ಗಳನ್ನೂ ದಾವಣಗೆರೆ ಮೂಲದ ತಮಿಳುನಾಡು ವ್ಯಾಪಾರಿ ಮಣಿಸೆಲ್ವಂನೇ ಕೊರೆದಿರುವುದರಿಂದ ತಾನೂ ಕೂಡಾ ಈ ವ್ಯಕ್ತಿಗೇ ಬೋರ್ ಕೊರೆಯುವ ಕೆಲಸವನ್ನು ವಹಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಮಾರನೆಯದಿನ ಭಾನುವಾರವಾದ್ದರಿಂದ ನನ್ನನ್ನೂ ತಮ್ಮ ಜೊತೆ, ಬೆಳಗಿನ ಇಡ್ಲಿ, ಚಟ್ನಿಯ ಭರ್ಜರಿ ಉಪಹಾರದ ನಂತರ, ಬೋರ್ವೆಲ್ ವ್ಯಾಪಾರಿ ತಂಗಿದ್ದ ಹೋಟೆಲ್ ಗೆ ಕರೆದೊಯ್ದ ಮಾಮನ ಜೊತೆ ಇಡೀ ದಿನವನ್ನು ಕಳೆದೆ. ಸೆಲ್ವಂ ತನ್ನ ಸಾಧನೆಯ ಪಟ್ಟಿಯ ವಿವರಗಳನ್ನು ತನಗೆ ಗೊತ್ತಿದ್ದ ಹರುಕುಮುರುಕು ತಮಿಳುಮಿಶ್ರಿತ ಕನ್ನಡದಲ್ಲಿ ಕಟ್ಟಿಕೊಡುತ್ತಾ ಇದ್ದರೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚಾದ ವಿಷಯಗಳು ನನಗೆ ತಿಳಿಯಲೇ ಇಲ್ಲ. ಮಣಿಯ, ಮಳೆಗಾಲದ ಸ್ವಾತಿ ಮಳೆಯ ಆರ್ಭಟವನ್ನು ನೆನಪು ಮಾಡಿಕೊಡುವಂತಿದ್ದ, ಧಾರಾಕಾರ ಪ್ರವರದ ಒಟ್ಟಂಶದ ಸಾರಾಂಶ ಎಂದರೆ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಬೋರ್ ಗಳನ್ನು ಕಳೆದ ಒಂದು ದಶಕದ ಅವಧಿಯಲ್ಲಿ ದಕ್ಷಿಣಭಾರತದ ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ ದೂರದ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿಯೂ ರೈತಾಪಿ ವರ್ಗದವರಿಗಾಗಿ ಆತ ಕೊರೆದುಕೊಟ್ಟಿರುವುದರ ಕೊನೆಮೊದಲಿಲ್ಲದ ಅಭೂತಪೂರ್ವ ಗಾಥೆ. ಕಪ್ಪು ದಢೂತಿದೇಹ ಮತ್ತು ಬಿಳಿಮಿಶ್ರಿತ ಕಪ್ಪಗಿನ ದಟ್ಟ ಗುಂಗುರು ಕೂದಲಿನ ಒಡೆಯನಾದ ಮಣಿ ಬಿಳಿಯ ತೋಳುರಹಿತ ಬನಿಯನ್ ಧರಿಸಿ ಅದರ ಮೇಲೆ ತನ್ನ ಗುಡಾಣಿ ಹೊಟ್ಟೆಯ ಅರ್ಧಕ್ಕಿಂತ ಹೆಚ್ಚು ಮೇಲೆ ಬರುವ ಹಾಗೆ ಗಾಢ ಹಸಿರು ಮತ್ತು ಕೆಂಪು ಬಣ್ಣಗಳ ಅಗಲ ಪಟ್ಟಿ ಇದ್ದ ಬಣ್ಣದ ಲುಂಗಿಯೊಂದನ್ನು ನಾಲ್ಕು ಬೆಟ್ಟುಗಳ ಗಾತ್ರವಿದ್ದ ಕಪ್ಪು ಚರ್ಮದ, ಫಳಫಳ ಹೊಳೆಯುತ್ತಿದ್ದ ಅಂಗೈಅಗಲ ದೊಡ್ಡದಾದ ಸ್ಟೀಲ್ ಬಕಲ್ ಇದ್ದ ಬೆಲ್ಟ್ ಸಹಾಯದಿಂದ ಬಿಗಿದು ಕಟ್ಟಿದ್ದ. ತನ್ನ ಬಲೂನಿನಂತ ಗುಡಾಣಾಕಾರದ ಡೊಳ್ಳು ಹೊಟ್ಟೆಯ ಗಾತ್ರವನ್ನು ಅನಿತವಾದರೂ ಅದುಮಿ ಇಡಬೇಕೆನ್ನುವ ಹೆಬ್ಬಯಕೆ ಸೆಲ್ವಂನ ಈ ಹುನ್ನಾರದ ಹಿಂದಿನ ಉದ್ದೇಶವಾಗಿದ್ದೀತು. ಮಣಿಯ ಅವತಾರವನ್ನು ನೋಡಿದ ತಕ್ಷಣದಲ್ಲಿ “ಈತ ತಮಿಳರವ” ಎಂದು ಯಾರಾದರೂ ಸುಲಭದಲ್ಲಿ ಊಹಿಸಬಹುದಾದ ಸೆಲ್ವಂನ ಧ್ವನಿ ಮಾತ್ರ ಹೆಣ್ಣು ಧ್ವನಿಯ ಹಾಗೆ ಕೀರಲು ಕೀರಲಾಗಿತ್ತು. ಗಂಟೆಗೊಮ್ಮೆ ಚಹಾ ಸೇವಿಸುತ್ತಾ, ಎರಡು ಚಹಾ ಸೇವನೆಯ ಮಧ್ಯೆ ಚಕ್ಲಿ, ಕೋಡುಬಳೆ, ಮಿಕ್ಸ್ಚರ್, ನರ್ಗೀಸ್, ನಿಪ್ಪಟ್ಟೇ ಮೊದಲಾದ ಕುರುಕುಲು ತಿಂಡಿಗಳನ್ನು ನಿಧಾನಗತಿಯಿಂದ ಮೆಲ್ಲುತ್ತಾ, ನಮ್ಮನ್ನು ಮಾತನಾಡಲೂ ಬಿಡದೆ, ಒಂದೇ ಸಮನೆ ತನ್ನ ಸಾಧನೆಯ ತುತ್ತೂರಿಯನ್ನು ತನ್ನ ಕೀರಲು ಸ್ವರದ ಉತ್ತುಂಗದಲ್ಲಿ ಮಣಿ ಊದುತ್ತಿದ್ದರೆ ಆತ ನನಗೆ ಭಾನುವಾರದ ಭರಪೂರ ಮನೋರಂಜನೆಯನ್ನು ಪುಗುಸಟ್ಟೆಯಾಗಿ ದಯಪಾಲಿಸಿದ ಎಂದುಕೊಳ್ಳುತ್ತಾ ಕುಳಿತಿದ್ದವನಿಗೆ ದಿನ ಕಳೆದಿದ್ದೆ ಗೊತ್ತಾಗಲಿಲ್ಲ
. ಮಧ್ಯಾಹ್ನದ ಊಟ ಮತ್ತು ಸಂಜೆಯ ಟೀಯನ್ನೂ ಮಣಿಯ ಜೊತೆಗೆ ಹೋಟೆಲ್ ನಲ್ಲಿಯೇ ಮುಗಿಸಿ ಮನೆಗೆ ಮರಳಿದಾಗ ಸಮಯ ಸಂಜೆ ಏಳರ ಗಡಿ ದಾಟಿತ್ತು. ಸಾಯಂಕಾಲ ಎರಡೆರೆಡು ಬಾರಿ ಗಟ್ಟಿ ಪಕೋಡವನ್ನು, ಸಿಹಿ ಅವಲಕ್ಕಿಕಾರದೊಂದಿಗೆ ಸವಿದಿದ್ದ ಮಾಮ ಅಮ್ಮನ ಇನ್ನಿಲ್ಲದ ಬಲವಂತದ ಹೊರತಾಗಿಯೂ ರಾತ್ರಿಯ ಊಟವನ್ನು ಸೇವಿಸದೆ ಒಂದು ಲೋಟ ಸಕ್ಕರೆ ಬೆರೆಸಿದ ಹಾಲನ್ನು ಕುಡಿದು ಮಲಗಿದರು. ಸದ್ಯಕ್ಕೆ ಬೋರ್ವೆಲ್ ಚೆನ್ನಗಿರಿ ತಾಲ್ಲೂಕಿನ ಕಾರಿಗನೂರು ಸಮೀಪದ ಮುತ್ತುಗದಹಳ್ಳಿಯ ರೈತರೊಬ್ಬರ ಹೊಲದಲ್ಲಿ ಬೋರ್ ಕೊರೆಯುವುದಕ್ಕಾಗಿ ತೆರಳಿರುವ ಕಾರಣ ಇನ್ನೂ ಎರಡು ಮೂರು ದಿನಗಳ ಕಾಲ ಲಭ್ಯವಿಲ್ಲ ಎಂದು ಮಾಮ ಅಮ್ಮನಿಗೆ ಅರುಹಿದಾಗ ಮಣಿ ಈ ವಿಷಯವನ್ನು ಮಾಮನಿಗೆ ಯಾವಾಗ ತಿಳಿಸಿದ ಎಂದು ತಲೆ ಕೆರೆದುಕೊಳ್ಳುವ ಸರದಿ ನನ್ನದಾಗಿತ್ತು. ಆದರೆ ಬೋರ್ವೆಲ್ ಯಂತ್ರದ ಜೊತೆಗೇ ಊರಿಗೆ ಹೋಗಬೇಕು ಎನ್ನುವ ಸಂಕಲ್ಪದಲ್ಲಿದ್ದ ಗೌಡ್ರು ಇನ್ನೂ ಎರಡು ಮೂರು ದಿನ ದಾವಣಗೆರೆಯಲ್ಲಿ ಇದ್ದೇ ಬೋರ್ವೆಲ್ ಲಾರಿಯ ಸಮೇತ ಊರಿಗೆ ಹೋಗುವ ಅಚಲ ನಿರ್ಧಾರಕ್ಕೆ ಬಂದಿದ್ದರು.
ಪರಮಶಿವಣ್ಣಗೌಡರೇ ಹಾಗೆ. ಹಿಡಿದ ಹಟವನ್ನು ಎಂದೂ ಬಿಡುವ ಜಾಯಮಾನದವರೇ ಅಲ್ಲ. ಈ ಲೇಖನವನ್ನ ಓದುತ್ತಿರುವ ಯಾರಾದರೂ ಓದುಗಮಿತ್ರರಿಗೆ ಗೌಡ್ರ ಕೇವಲ ಪರಿಚಯ ಮಾತ್ರ ಇದ್ದ ಪಕ್ಷದಲ್ಲಿ ನಾನು ಗೌಡ್ರ ವಿಷಯದಲ್ಲಿ ಮೇಲೆ ಉಲ್ಲೇಖಿಸಿದ ಹಠಮಾರಿತನ ಕುರಿತಾದ ಹೆಚ್ಚಿನ ವಿವರಣೆಯಿಂದ ದೂರ ಉಳಿಯುವುದು ಸೂಕ್ತ ಅನ್ನಿಸುತ್ತೆ. ಅಂತಹ ಓದುಗರು ನನ್ನ ಬರಹದ ಮುಂದಿನ ಹತ್ತಾರು ವಾಕ್ಯಗಳನ್ನು ಓದದೇ ಲೇಖನದ ವಾಚ್ಯವನ್ನು ಮುಂದುವರೆಸಿದರೂ ಅಡ್ಡಿಯಿರದು. ಮಾಮನ ಬಗ್ಗೆ ನನಗೆ ಈ ಹೊತ್ತಿನಲ್ಲಿ ಇರುವ ಎಲ್ಲಾ ನೆನಪುಗಳಲ್ಲಿಯೂ ಗಾಢವಾದ ನೆನಪು ಎಂದರೆ ಅವರ ಕೋಪವನ್ನು ಕುರಿತಾಗಿದ್ದು. ಅಭಿನವ ದೂರ್ವಾಸಮುನಿಯನ್ನು ಹೋಲುವಂತಿದ್ದ ಪರಮಶಿವಣ್ಣನವರ ಕೋಪಕ್ಕೆ ಒಂದು ವೇಳೆ ಶಾಪವನ್ನು ಕೊಡುವ ಶಕ್ತಿ ಏನಾದರೂ ಇದ್ದಿದ್ದರೆ ಇಂದು ನನ್ನೂರಿನ ಹಾದಿಬೀದಿಗಳಲ್ಲಿ, ರಸ್ತೆಕೇರಿಗಳಲ್ಲಿ, ಹೊಲಗದ್ದೆಗಳಲ್ಲಿ, ಗೋಮಾಳ, ಭೂಮಾಳಗಳಲ್ಲಿ ಹಾಗೂ ಎಲ್ಲೆಂದರಲ್ಲಿ ಊರಿನ ಅಂದಿನ ತಲೆಮಾರಿನ ಅಸಂಖ್ಯಾತ ಹೆಣ್ಣುಗಂಡುಗಳ, ವಿವಿಧ ಭಂಗಿಯ ಕಲ್ಲಿನ ಮೂರ್ತಿಗಳನ್ನು ನೋಡಬಹುದಿತ್ತು. ಚಂಡೀಗಢದ ರಾಕ್ ಗಾರ್ಡನ್ ನಲ್ಲಿ ಇರುವ ದೇವಾನುದೇವತೆಗಳ ಮೂರ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯ ಮಾನವಶಿಲ್ಪಗಳಿರುವ ಖ್ಯಾತಿಗೆ ನನ್ನೂರು ಪಾತ್ರವಾಗುತ್ತಿತ್ತು ಎಂದೆನಿಸುತ್ತದೆ.
ಗೌಡರ ಕೋಪವೇ ಅಂತಹುದು. ಜ್ವಾಲಾಮುಖಿಯ ಲಾವಾದಂತಹ ಮಾಮನ ಕೋಪದ ಓತಪ್ರೋತ ಪ್ರವಾಹ ಆಪೋಶನ ತೆಗೆದುಕೊಳ್ಳದೇ ಬಿಟ್ಟ ಆ ತಲೆಮಾರಿನ ಹಿರಿತಲೆಗಳ ಗಣನೆಯನ್ನು ಕೈಬೆರಳುಗಳ ಸಹಾಯದಿಂದ ಮಾಡಬಹುದು. ತಲೆಯ ಮೇಲೆ ನಾಲ್ಕು ಇಂಚಿನಷ್ಟು ಎತ್ತರಕ್ಕೆ ಸೆಟೆದು ನಿಂತ, ವರ್ಷಗಳ ಕಾಲ ಎಣ್ಣೆ ಕಾಣದ, ದಟ್ಟ ಪೊದೆಯಂತ ಬಿಳಿಗೂದಲ ರಾಶಿ, ಕೆಂಪಾಗಿ, ಸದಾಕಾಲ ಬೆಂಕಿಯ ಉಂಡೆಗಳನ್ನು ಉಗುಳುವಂತೆ ತೋರುತ್ತಿದ್ದ ಸ್ವಲ್ಪ ಸಣ್ಣವೇ ಎಂದು ಹೇಳಬಹುದಾದ ತೀಕ್ಷ್ಣ ನೇತ್ರದ್ವಯಗಳು, ಮೊಣಕೈ ಮೇಲೆ ಬರುವಂತೆ ಏರಿಸಿ ಮಡಿಚಿದ ಹಳೆಯದಾದ ಶರ್ಟೊಂದರ ತೋಳುಗಳು, ಮೊಣಕಾಲು ಮೇಲೆ ಬರುವಂತೆ ಮೇಲಕ್ಕೆತ್ತಿ ಸುತ್ತಿದ್ದ ಬಿಳಿಲುಂಗಿ ಇವು ನೋಡುಗರಲ್ಲಿ ಒಂದು ಹಂತದ ಭಯವನ್ನು ಮೊದಲ ನೋಟದಲ್ಲಿಯೇ ಸಲೀಸಾಗಿ ಹುಟ್ಟಿಸುತ್ತಿದ್ದವು. ಥೇಟ್ ತಾಯಿ ನೀಲಜ್ಜಿಯನ್ನೇ ಹೋಲುತ್ತಿದ್ದ ಮಾಮ ನಮ್ಮ ಕಡೆ ಅಪರೂಪವೆನ್ನುವ ಗೌರದೇಹವರ್ಣದ, ಸುಮಾರು ಐದು ಅಡಿ ಏಳು ಇಂಚುಗಳಿಗೆ ಸಮನಾದ ಎತ್ತರ ಹೊಂದಿದ್ದರು. ತಮ್ಮ ಯೌವನದಲ್ಲಿ “ಸ್ಪುರದ್ರೂಪಿ” ಎಂದೇ ಹೇಳಬಹುದಾದ ಬಾಹ್ಯ ಶರೀರದ ಮಾಲೀಕರಾಗಿದ್ದ ಗೌಡ್ರು ಒಂದು ರೀತಿಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿಷಯ ಅವರನ್ನು ಸ್ವಲ್ಪ ಗಮನವಿಟ್ಟು ನೋಡಿದ ಯಾರಿಗಾದರೂ ಕ್ಷಣದಲ್ಲಿಯೇ ವೇದ್ಯವಾಗುತ್ತಿತ್ತು. ರೆಡ್ಡಿ ಜನಾಂಗದ ಆರೆ ವಿರುಪಣ್ಣರೆಡ್ಡಿಯವರನ್ನು ಬಿಟ್ಟರೆ ಊರಲ್ಲಿ ಬೇರೆ ಯಾವ ಸ್ನೇಹಿತರನ್ನೂ ಹೊಂದಿರದ ಪರಮಶಿವಣ್ಣ ತನ್ನ ಬಂಧುಬಳಗದ ಯಾರ ಜೊತೆಯೂ ಬೆರೆಯದೇ ತಮ್ಮ ಪಾಡಿಗೆ ತಾವೇ ಇರುತ್ತಿದ್ದದ್ದು ಊರಿಗೇ ಗೊತ್ತಿದ್ದ ಗುಟ್ಟಿನ ವಿಷಯವಾಗಿತ್ತು. ಊರ ತುಂಬಾ ನೆಂಟರು ಇದ್ದರೂ, ನೆಂಟರ ಮನೆಗಳ ಹೊಸ್ತಿಲುಗಳನ್ನು ತುಳಿಯುವ ಮಾತು ಒತ್ತಟ್ಟಿಗಿರಲಿ, ರಕ್ತಸಂಬಂಧಿಗಳ ವಿವಾಹ ಮತ್ತು ಇತರ ಶುಭಕಾರ್ಯಗಳಿಗೂ, ಕಡೆಗೆ ಸೋದರ ಸಂಬಂಧಿಗಳು ಸತ್ತಾಗ ಕೂಡ ಮಣ್ಣುಕೊಡಲೂ ಹೋಗದ, ಒಂದು ರೀತಿಯಲ್ಲಿ “ತ್ರಿವಿಕ್ರಮ” ಎನ್ನಬಹುದಾದ, ಗೌಡರು ಖುದ್ದಾಗಿ ತಮ್ಮ ಮೇಲೆ ತಾವೇ ಹೇರಿಕೊಂಡ ಸಮಾಜಬಹಿಷ್ಕಾರದ ವಿನೂತನ ಸಾರ್ವಕಾಲಿಕ ದಾಖಲೆ ಅನೂಚಾನವಾಗಿ ಇಂದೂ ಕೂಡಾ ಅವರ ಹೆಸರಿನಲ್ಲಿಯೇ ವರ್ಷದಿಂದ ವರ್ಷಕ್ಕೆ ಮುಕ್ಕಾಗದೆ ಮುಂದುವರೆಯುತ್ತಿರುವುದು ಮಾತ್ರ ಸುಳ್ಳಲ್ಲ. ಮಾಮನ ವ್ಯಕ್ತಿತ್ವದ ಹೈಲೈಟ್ ಎಂದರೆ ಅವರ, ಯಾರ ಊಹೆಗೂ ನಿಲುಕದ, ವಿಲಕ್ಷಣ ನಡವಳಿಕೆ. ಬೆಳಿಗ್ಗೆ ದಾರಿಯಲ್ಲಿ ಸಿಕ್ಕಾಗ ಅವ್ವಯನ್ನು ಚೆನ್ನಾಗಿಯೇ ಮಾತನಾಡಿಸಿದ್ದ ಪರಮಶಿವಣ್ಣ ಅವ್ವ ಅದೇ ದಿನ ಸಂಜೆ ವೇಳೆ ನೀಲಜ್ಜಿಯ ಜೊತೆ ಚೌಲ ಆಡಲು ಅವರ ಮನೆಗೆ ತೆರಳಿದ ಹೊತ್ತು ನೋಡಿಯೂ ನೋಡದಂತೆ ಇರುತ್ತಿದ್ದ ಘಟನೆಗಳು ನಿಯಮಿತವಾಗಿ ನಡೆಯುತ್ತಲೇ ಇದ್ದವು. ಇದಕ್ಕೆಲ್ಲಾ ಸುಲಭದಲ್ಲಿ ಸೊಕ್ಕು ಹಾಕದ, ಜಗತ್ತನ್ನು ಮಾಮನಿಗಿಂತ ಹೆಚ್ಚಾಗಿಯೇ ನೋಡಿದ್ದ ನನ್ನ ಅವ್ವ “ಅಹಂಕಾರಕ್ಕೆ ಉದಾಸೀನವೇ ಮದ್ದು” ಎನ್ನುವ ಗಾದೆಯ ಹಾಗೆ ಇಂತಹ ಸಂದರ್ಭಗಳಲ್ಲಿ ಏನೂ ಅರಿಯದವಳ ಹಾಗೆ ಮುಗುಂ ಆಗಿರುತ್ತಿದ್ದಳು. “ಇವತ್ತು ಪರಮಶಿವಣ್ಣ ನನ್ನನ್ನು ಮಾತನಾಡಿಸಿಬಿಟ್ಟ” ಎಂದು ಅತ್ತೆ ಶಕುಂತಲಮ್ಮ ಅವ್ವನ ಬಳಿ ಉಲಿಯುತ್ತಿದ್ದರೆ ಅಲ್ಲಿ ತಮ್ಮವರು ಮಾತನಾಡಿಸಿದಾಗ ಆಗುವ ಸಹಜ ಆನಂದದ ಮನಃಸ್ಥಿತಿಯಿತ್ತೋ ಅಥವಾ ಬಹಳ ದಿನಗಳ ನಂತರ ಎದುರಿಗೆ ಸಿಕ್ಕ ಸಂಬಂಧಿ ಇವತ್ತು ಮಾತನಾಡಿಸಿದ ಕಾರಣ ಏನಾದರೂ ಅನಿಷ್ಟ ಕಾದಿದೆಯೋ? ಎನ್ನುವ ಭಯಗ್ರಸ್ತ ಮನಃಸ್ಥಿತಿಯಿತ್ತೋ ಇದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನನ್ನ ಅಂದಿನ ಎಳೆಯ ಮನಸ್ಸಿಗೆ ಸಾಧ್ಯವಾಗದೆ ಹೋಗುತ್ತಿತ್ತು. ‘ಅವನನ್ನು ಕಟ್ಟಿಕೊಂಡು ಏನು ಮಾಡುತ್ತೀಯಾ? ಒಂದು ದಿನ ಹೀಗಿದ್ದರೆ ಮತ್ತೊಂದು ದಿನ ಹಾಗಿರುತ್ತಾನೆ. ಆತನೇ ಬಂದು ಮೇಲೆ ಬಿದ್ದು ಮಾತನಾಡಿಸಿದರೆ ಮಾತನಾಡು, ಇಲ್ಲವಾದರೆ ಅವನ ಕಡೆ ನೋಡಲಿಕ್ಕೂ ಹೋಗಬೇಡ” ಎನ್ನುವ ಬುದ್ಧಿವಾದವನ್ನು ಅತ್ತೆಗೆ ಯಾವ ಕಾರಣಕ್ಕಾಗಿ ಅವ್ವ ನೀಡಿರಬಹುದು ಎನ್ನುವ ಜಿಜ್ಞಾಸೆ ನನ್ನನ್ನು ಬಹಳ ಕಾಲ ಕಾಡಿದ್ದೂ ಉಂಟು. ಎಲ್ಲಿಯಾದರೂ, ಯಾರ ಜೊತೆಯಾದರೂ, ಯಾವ ಕಾರಣಕ್ಕಾದರೂ, ದಿನದ ಯಾವ ವೇಳೆಯಲ್ಲಿಯಾದರೂ, ಸುಲಭದಲ್ಲಿ ಕ್ಯಾತೆ, ಜಗಳ ತೆಗೆಯುತ್ತಿದ್ದ ಪರಮಶಿವಣ್ಣನವರ ಕಣ್ಣು ತಪ್ಪಿಸಿ ಓಡಿಯಾಡುತ್ತಿದ್ದ ಜನರ ಸಂಖ್ಯೆ ಕೇವಲ ಅವರ ನೆಂಟರಿಷ್ಟರಲ್ಲಿ, ಬಂಧುಬಳಗದವರಲ್ಲಿ ಮಾತ್ರ ಅಲ್ಲದೆ ಊರ ಉಳಿದ ಜನಸಮುದಾಯದಲ್ಲಿಯೂ ವ್ಯಾಪಕವಾಗಿಯೆ ಇತ್ತು ಎಂದರೆ ಗೌಡರ ಗುಣಸ್ವಭಾವದ ಪರಿಚಯ ಊರಲ್ಲಿ ಆ ದಿನಮಾನಗಳಲ್ಲಿ ಎಷ್ಟರಮಟ್ಟಿಗೆ ಪ್ರಚಲಿತದಲ್ಲಿತ್ತು ಎನ್ನುವುದನ್ನು ಸುಲಭದಲ್ಲಿ ಊಹಿಸಬಹುದು.
ಗೌಡರ ಸಂಸಾರದಲ್ಲಿಯೂ ಅವರ ವಿಲಕ್ಷಣ ಸ್ವಭಾವ ತನ್ನ ಗಾಢ ಕರಿನೆರಳು ಚಾಚಿತ್ತು. ಪತ್ನಿ ಜಯವಾಣಿ ಒಟ್ಟಿಗೆ “ಮಾತನಾಡಿದರೆ ಮಾತನಾಡಿದ, ಬಿಟ್ಟರೆ ಬಿಟ್ಟ” ಎನ್ನುವಂತಿದ್ದ ಗೌಡ್ರು ಜಗತ್ತಿನಲ್ಲಿ, ತಮ್ಮ ಅಂತರ್ವಾಣಿಯನ್ನು ಹೊರತುಪಡಿಸಿ, ಬೇರೆ ಯಾರಾದರೂ ದೂಸ್ರಾ ವ್ಯಕ್ತಿಯ ಮಾತುಗಳಿಗೆ ಕಿವಿಯಾಗುತ್ತಿದ್ದರು ಮತ್ತು ತಲೆದೂಗುತ್ತಿದ್ದರು ಎಂದರೆ ಅದು ತಮ್ಮ ಏಕೈಕ ಪರಮ ಸ್ನೇಹಿತ ವಿರುಪಣ್ಣರೆಡ್ಡಿಯವರ ಬುದ್ಧಿವಾದ ಮತ್ತು ಸಲಹೆಗಳಿಗೆ ಮಾತ್ರ. ಮೊದಲನೇ ಮಗ ತಿಪ್ಪೇಶಿಯನ್ನು ಮುಷ್ಟೂರ ಕಾಲೇಜಿಗೆ ಶಿಕ್ಷಣವಿಷಯದ ಎರಡು ವರ್ಷಗಳ ಪಿ.ಯು.ಸಿ. ಕೋರ್ಸ್ ಗೆ ಸೇರಿಸುವ ವಿಷಯದಲ್ಲಿಯೇ ಆಗಲಿ ಅಥವಾ ಎರಡನೇ ಮಗ ನಾಗನನ್ನು ಬೆಂಗಳೂರಿನ ಬಳ್ಳಾರಿ ಮಲ್ಲಯ್ಯನವರ ಒಡೆತನದ ನರ್ಸಿಂಗ್ ಕಾಲೇಜಿಗೆ ಸೇರಿಸುವ ಬಾಬತ್ತಿನಲ್ಲಿಯೇ ಆಗಲಿ, ತಾಯಿ ನೀಲಜ್ಜಿ ಮತ್ತು ಸೊಸೆ ಮತ್ತು ಮೊಮ್ಮಗಳು ಎರಡೂ ಆದ ಜಯವಾಣಿ, ವಿರುಪಣ್ಣರೆಡ್ಡಿಯವರ ಸಹಾಯಕೋರಿದ್ದು ನನ್ನ ಅಜ್ಜಿಯ ಮಧ್ಯಸ್ಥಿಕೆಯಲ್ಲಿಯೇ ಜರುಗಿತ್ತು ಎನ್ನುವ ಕಾರಣದಿಂದ ನಾನು ಇದರ ಬಗ್ಗೆ ಅಧಿಕೃತ ಮುದ್ರೆಯನ್ನು ಒತ್ತಬಲ್ಲೆ. ಹಿರಿಯ ಮಗ ತಿಪ್ಪೇಶಿಯನ್ನ ಬಹಳ ಬೇಗ ಅಂದರೆ ಅವನ ಇಪ್ಪತ್ಮೂರು ವರ್ಷಗಳಲ್ಲಿಯೇ, ಅತ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿಯ ಕಡೆಯ ವರ್ಷದಲ್ಲಿ ಇರುವಾಗ, ಹೊಸವರ್ಷದ ಮುನ್ನಾ ರಾತ್ರಿ ಜರುಗಿದ ರಸ್ತೆ ಅಪಘಾತದ ಒಂದರಲ್ಲಿ ಕಳೆದುಕೊಂಡ ಪರಮಶಿವಣ್ಣನ ಮನಸ್ಸು ವಿಲವಿಲ ಒದ್ದಾಡಿದ ಪರಿಸ್ಥಿತಿ ಯಾವ ಶತ್ರುಗಳಿಗೂ ಬರುವುದು ಬೇಡ. ದುಷ್ಟ ಸ್ನೇಹಿತರ ಸಹವಾಸದ ಶಿಕಾರಿಯಾಗಿ ದುಶ್ಚಟಗಳಿಗೆ ದಾಸನಾಗಿ ಹೋದ ಎರಡನೇ ಮಗ ನಾಗನೂ ಇಂತಹ ಕ್ಲಿಷ್ಟಪರಿಸ್ಥಿತಿಯಲ್ಲಿ ತಂದೆಗೆ ತುಂಬಬೇಕಾಗಿದ್ದ ಮಟ್ಟದ ಮಾನಸಿಕ ಸ್ಥೈರ್ಯವನ್ನ, ಸುಖಶಾಂತಿಯನ್ನು ಒದಗಿಸಿ ಕೊಡುವಲ್ಲಿ ಇನ್ನಿಲ್ಲದಂತೆ ವಿಫಲನಾದ. ಹೀಗಾಗಿ ಸಂಸಾರದ ವಿಷಯದಲ್ಲಿ ಗೌಡ್ರನ್ನು “ಅದೃಷ್ಟಹೀನ” ಎಂದೇ ಬಣ್ಣಿಸಬೇಕು. ಇದರಲ್ಲಿ ಗೌಡರ ಸ್ವಯಂಕೃತ ಅಪರಾಧಗಳ ಪಾಲೇ ಹೆಚ್ಚಿನದು ಎನ್ನುವ ವಾದವೊಂದಕ್ಕೆ ಇಲ್ಲಿ ವಿಫುಲ ಅವಕಾಶಗಳಿದ್ದಾಗ್ಯೂ ಸುಖಸಂಸಾರ ಗೌಡರ ಪಾಲಿಗೆ ಕೊನೆಯವರೆಗೂ ಬಿಸಿಲ್ಗುದುರೆಯಾಗೆ ಉಳಿದಿದ್ದು ಮಾತ್ರ ವಿಧಿವಿಲಾಸದ ಕಾರಣದಿಂದ ಎಂದು ನಾನು ಬಲವಾಗಿ ನಂಬಿದ್ದೇನೆ.
ಇಂತಹ ಅನೇಕ ಋಣಾತ್ಮಕ, ನೇತ್ಯಾತ್ಮಕ ಸ್ವಭಾವಜನ್ಯ ನ್ಯೂನ್ಯತೆಗಳ ಹೊರತಾಗಿಯೂ ಪರಮಶಿವಣ್ಣ ಅವರದು ಅತ್ಯಂತ ಉದ್ಯಮಶೀಲ ಮನಸ್ಸು. ಸದಾ ಹೊಸತೇನನ್ನಾದರೂ ಮಾಡಬೇಕು ಎಂದು ತುಡಿಯುತ್ತಿದ್ದ ಮನಸ್ಸಿನ ಮಾಲೀಕರು ಅವರು. ಅಷ್ಟೇನೂ ಓದಿಕೊಂಡಿರದ, ಕನ್ನಡಭಾಷೆಯನ್ನು ತಕ್ಕಮಟ್ಟಿಗೆ ಮಾತ್ರ ಓದಲು, ಬರೆಯಲಷ್ಟೆ ಶಕ್ತರಾಗಿದ್ದ ಪರಮಶಿವಣ್ಣ ಒಳ್ಳೆಯ ವ್ಯವಹಾರಜ್ಞಾನವನ್ನು ಹೊಂದಿದ್ದರು. ದೇವರು ಇವರನ್ನು ಲೋಕಜ್ಞಾನದಿಂದ ವಂಚಿತನಾಗಿ ಮಾಡಿದ್ದ ಅನ್ನಿಸಿದರೆ ಅದೇ ದೇವರು ಹೋಲಿಕೆಯಲ್ಲಿ ಅದಕ್ಕಿಂತ ಮಿಗಿಲಾದ ಪ್ರಮಾಣದ ವ್ಯವಹಾರಜ್ಞಾನವನ್ನು ಗೌಡರಿಗೆ ಧಾರಾಳವಾಗಿ ಧಾರೆ ಎರೆದಿದ್ದ. ಇದು ಅವರಿಗೆ ತಮ್ಮ ಪೂರ್ವಿಕರ ಪೈಕಿ ಯಾರ ಕಡೆಯಿಂದ ಸಂದ ಬಳುವಳಿಯೋ ಎನ್ನುವುದು ಗೌಡರ ವಂಶವೃಕ್ಷದ ಅಲ್ಪಜ್ಞಾನ ಮಾತ್ರವೇ ಇರುವ ನನಗೆ ತಿಳಿದ ವಿಷಯವಲ್ಲ. ಮಾಮನ ಎಂದೂ ತೀರದ ಉದ್ಯಮಶೀಲತೆಯ ಫಲಶ್ರುತಿಯಾಗಿಯೇ, ಗೌಡರು ಊರಿನ ಮೂರ್ನಾಲ್ಕು ಸಮಾನಮನಸ್ಕರೊಂದಿಗೆ ಸೇರಿ ತುರುವನೂರಿನಲ್ಲಿ, ಆ ಕಾಲಕ್ಕೆ ದುರ್ಗವನ್ನು ಬಿಟ್ಟರೆ ಸುತ್ತಮುತ್ತಲ ಐವತ್ತು ಕಿಲೋಮೀಟರ್ ಫಾಸಲೆಯಲ್ಲಿ ಎಲ್ಲೂ ಇಲ್ಲದ, “ಹರೀಶ ಟೂರಿಂಗ್ ಟಾಕೀಸ್” ನಿರ್ಮಾಣಕ್ಕೆ ಮುಂದಾಗಿದ್ದರು. ಸುಮಾರು ಊರುಗಳನ್ನು ಅಲೆದು, ತಿಪಟೂರಿನಿಂದ ಸೆಕೆಂಡ್ ಹ್ಯಾಂಡ್ ಸಿನೆಮಾ ಪ್ರೊಜೆಕ್ಟರ್ ಒಂದನ್ನು ಖರೀದಿಸಿ ತಂದು, ಅದನ್ನು ಸಮರ್ಥವಾಗಿ ಸ್ಥಾಪಿಸಿ, ದೋಷರಹಿತವಾಗಿ ನಡೆಸಿಕೊಂಡು ಹೋಗಲು ಬೆಂಗಳೂರಿನ ಆಗತಾನೇ ಕಣ್ಣು ಬಿಡುತ್ತಿದ್ದ ಇಂದಿನ ಚಂದ್ರಾಲೇಔಟ್ ನಲ್ಲಿದ್ದ “ಮಾರುತಿ ಟೂರಿಂಗ್ ಟಾಕೀಸ್” ನ ಆಪರೇಟರ್ ಆಗಿದ್ದ ಸಿದ್ದಪ್ಪ ಅವರಿಗೆ ಹೆಚ್ಚಿನ ಸಂಭಾವನೆಯ ಅಮಿಷ ಒಡ್ಡಿ, ಊರಿಗೆ ಕರೆದುಕೊಂಡು ಬಂದು, ತಮ್ಮ ಮನೆಯಲ್ಲಿಯೇ ಹತ್ತಾರು ವರ್ಷಗಳ ಕಾಲ ಮೂರೂ ಹೊತ್ತಿನ ಕೂಳನ್ನು ಹಾಕಿ ಮನೆಯ ಮಗನ ಹಾಗೆ ಗೌಡರು ಪೊರೆದಿದ್ದರು ಎಂದರೆ ಅವರ ಉದ್ಯಮಶೀಲತೆಯ ಕಿರುಪರಿಚಯ ಓದುಗರಿಗೆ ಆದೀತು. ಊರಿನಲ್ಲಿ ಮೊತ್ತಮೊದಲ ಕುಕಿಂಗ್ ಗ್ಯಾಸ್ ಏಜೆನ್ಸಿ ಪಡೆಯುವುದಕ್ಕೂ ತೀವ್ರ ಪ್ರಯತ್ನ ನಡೆಸಿ ಕಡೆಗೆ ಊರಿನವರೇ ಆದ ಸುಬ್ಬಣ್ಣಶೆಟ್ರು ಮತ್ತು ಬುದ್ದಿಗೌಡ್ರ ವಿರುಪಣ್ಣ ಅವರ ಜೋಡಿ ಲಾಬಿ ಎದುರು ಸೋತ ಗೌಡರ ಕ್ರಿಯಾಶೀಲತೆಯನ್ನು, ವ್ಯವಹಾರ ಕುಶಲತೆಯನ್ನು ಬಿಜಿನೆಸ್ ಪ್ರತಿಸ್ಪರ್ಧಿಯಾದ ಸುಬ್ಬಣ್ಣಶೆಟ್ಟರೇ ತಮ್ಮ ಗೆಳೆಯರ ಬಳಗದ ಸಮಕ್ಷಮ ಬಾಯ್ತುಂಬಾ ಹಾಡಿ ಹೊಗಳಿದ್ದು ಶೆಟ್ಟರ ಅಂಗಡಿಯಲ್ಲಿ ಕಾಫಿಪೌಡರ್ ಖರೀದಿಸುವುದಕ್ಕೆಂದು ತೆರಳಿದ್ದ ವೇಳೆ ನನ್ನ ಕರ್ಣಪಟಲಗಳಿಗೆ ಎಷ್ಟು ಜೋರಾಗಿ ಅಪ್ಪಳಿಸಿತ್ತು ಎಂದರೆ ಅದರ ನೆನಪು ಇನ್ನೂ ಹಚ್ಚಹಸಿರಾಗಿದೆ.
ಊರಹೊರಗಿನ, ದುರ್ಗದ ರಸ್ತೆಯಲ್ಲಿರುವ, ಕರೆಂಟು ಆಫೀಸು ಪಕ್ಕದ ತಮ್ಮ ಎರಡೂವರೆ ಎಕರೆಗಳ ಕೆಂಗಲು ಭೂಮಿಯಲ್ಲಿ, ಮುಖ್ಯರಸ್ತೆಗೆ ಬರುವ ಮೂಲೆಯೊಂದರಲ್ಲಿ ಹತ್ತು ಕೋಣೆಗಳ, ಮಂಗಳೂರು ಕೆಂಪು ಹೆಂಚು ಹೊದಿಸಿದ, ಹೈಸ್ಕೂಲಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬರುವ ಸುತ್ತಮುತ್ತಲ ಹೆಣ್ಣು ಮಕ್ಕಳಿಗೋಸುಗ, ಹಾಸ್ಟೆಲ್ ಒಂದರ ನಿರ್ಮಾಣ ಮಾಡಿದ ಗೌಡರು ಅಂದಿನ ಕಾಲಕ್ಕೇ ಸ್ಟ್ರೀಸಬಲತೆಯ ಪರವಾದ ಗಟ್ಟಿಧ್ವನಿಯಾಗಿದ್ದರು ಎಂದರೆ ತಪ್ಪಿಲ್ಲ. ನಾಲ್ಕಾರು ವರ್ಷಗಳ ಕಾಲ ಹಾಸ್ಟೆಲ್ ನ್ನು ಚೆನ್ನಾಗಿಯೇ ನಡೆಸಿಕೊಂಡು ಹೋದ ಪರಮಶಿವಣ್ಣ ತದನಂತರದಲ್ಲಿ ಅದೇ ಕಟ್ಟಡದ ಒಂದು ಭಾಗದಲ್ಲಿ ಊರಿನ ಮೊತ್ತಮೊದಲ ಉದ್ಯಮ ಎಂದೇ ಖ್ಯಾತಿವೆತ್ತ “ಪೂಜಾ” ಬೆಂಕಿಪೊಟ್ಟಣದ ಕಾರ್ಖಾನೆಯನ್ನು ಸ್ಥಾಪಿಸಿ ಕೈಸುಟ್ಟುಕೊಂಡಿದ್ದೂ ನನ್ನೂರಿನ ಔದ್ಯೋಗಿಕ ಇತಿಹಾಸದ ಸುವರ್ಣಪುಟವೇ. ಈ ಉದ್ಯಮ ಎಳೆಯ ಬಾಲಕನ ಜೀವಬಲಿಯಲ್ಲಿ ದುರಂತ ಅಂತ್ಯ ಕಾಣಬೇಕಾಗಿ ಬಂದ ವಿಸಂಗತಿ ಮಾತ್ರ ಇಂದೂ ಅಂದಿನಂತೆಯೇ ಕರಳನ್ನು ಕಿವಿಚುತ್ತಿದೆ.
ಬೆಂಕಿಪೊಟ್ಟಣದ ಉದ್ಯಮದ ನಂತರದಲ್ಲಿ ಅದೇ ಜಾಗದಲ್ಲಿ ಅಗರಬತ್ತಿ, ದೀಪದ ಬತ್ತಿ, ಅರಿಶಿಣ, ಕುಂಕುಮವೇ ಸೇರಿದಂತೆ ಹತ್ತಾರು ಪೂಜಾಸಾಮಾಗ್ರಿಗಳ ಉತ್ಪಾದನೆಗೆ ಗೌಡರು ಮೊದಲಿಟ್ಟರಾದರೂ ಅಂದಿನ ದಿನಗಳ ಕುಗ್ಗಿದ್ದ ಮಾರುಕಟ್ಟೆಯ ಬೇಡಿಕೆಯ ಕಾರಣವರ್ಷ ಬಹಳ ಬೇಗನೇ ಈ ಉದ್ಯಮಕ್ಕೆ ಇತಿಶ್ರೀ ಹಾಡಬೇಕಾಗಿ ಬಂದಿತು. ನಂತರದ ದಿನಗಳಲ್ಲಿ ಹಾಸ್ಟೆಲ್ ಕಟ್ಟಡವನ್ನು ಉತ್ತರಕರ್ನಾಟಕದ ಗದಗಮೂಲದ ಹರಿಕಥೆದಾಸರಾದ ಚಂದ್ರಶೇಖರಶಾಸ್ತ್ರಿಗಳಿಗೆ ವಾಸಮಾಡಲು ಅನುವು ಮಾಡಿಕೊಟ್ಟು ಅವರ ಸಹಭಾಗಿತ್ವದಲ್ಲಿ ಕಟ್ಟಡದ ಶೇಷಕೋಣೆಗಳಲ್ಲಿ ಸಂಸ್ಕೃತ ಮತ್ತು ಹಿಂದೂಸ್ತಾನಿ ಸಂಗೀತದ ತರಗತಿಗಳನ್ನು ಆರಂಭಿಸಿದ್ದೂ ಗೌಡರ ಉದ್ಯಮಶೀಲತೆಯ ಮುಂದುವರೆದ ಮಗದೊಂದು ಭಾಗವಷ್ಟೇ ಆಗಿರದೆ ಸನಾತನ ಶಿಕ್ಷಣಕ್ಕೆ ಅವರು ಕೊಟ್ಟ ಒತ್ತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಹರಿಕಥೆದಾಸರು ಊರು ತೊರೆದ ಉತ್ತರದಲ್ಲಿ ಬೆಂಗಳೂರಿನಿಂದ ಬಿಎಸ್ ಸಿ ಬ್ರ್ಯಾಂಡಿನ ಸೈಕಲ್ ಬಿಡಿಭಾಗಗಳನ್ನು ತಂದು, ಅವುಗಳನ್ನು ಬೆಂಗಳೂರಿನ ಫ್ಯಾಕ್ಟರಿಯಲ್ಲಿ ತರಬೇತಿ ಹೊಂದಿದ ಸ್ಥಳೀಯ ಕಾರ್ಮಿಕರ ಸಹಾಯದಿಂದ ಜೋಡಿಸಿ, ಪೂರ್ಣಪ್ರಮಾಣದ ಸೈಕಲ್ಲುಗಳಾಗಿ ಪರಿವರ್ತಿಸಿ, ನಮ್ಮ ಊರಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದ್ದೂ ಮಾಮನ ಉದ್ಯಮಶೀಲತೆಗೆ ಸಲ್ಲುವ ಮತ್ತೊಂದು ಪರಿಮಾಣ. ಉಜ್ಜನಿಯ ಸಿದ್ದಲಿಂಗಸ್ವಾಮಿಗಳ ಸುಮಾರು ನಾಲ್ಕು ಸಾವಿರ ಕ್ಯಾಲೆಂಡರ್ ಗಳನ್ನು ತಮಿಳುನಾಡಿನ ಶಿವಕಾಶಿಯ ಹೆಸರಾಂತ ಮುದ್ರಣಾಗಾರ ಒಂದರಲ್ಲಿ ಒಪ್ಪವಾಗಿ ಮುದ್ರಿಸಿ, ಕಾರಣಾಂತರಗಳಿಂದ ಆ ಚಿತ್ರಪಟಗಳನ್ನು ಸೂಕ್ತಬೆಲೆಗೆ ಮಾರಲು ಆಗದ ಕಾರಣ ಊರ ಜನರಿಗೆ, ಪರ ಊರುಗಳ ಭಕ್ತರಿಗೆ ಪುಕ್ಕಟೆಯಾಗಿ ಹಂಚಿ ಧನ್ಯತೆಯ ಭಾವವನ್ನು ಹೊಂದಿದ್ದೂ ಗೌಡರ ಉದ್ಯಮಶೀಲತೆಯ ಮತ್ತೊಂದು ದ್ಯೋತಕವೇ ಸರಿ. ಈ ಕ್ಯಾಲೆಂಡರ್ ಗಳನ್ನು ಎಂತಹ ಉಚ್ಚಗುಣಮಟ್ಟದ ಕಾಗದ ಮತ್ತು ವರ್ಣಗಳಲ್ಲಿ ಮುದ್ರಿಸಲಾಗಿತ್ತು ಎಂದರೆ ಅನೇಕ ಮಂದಿ ಈ ಚಿತ್ರಪಟಗಳಿಗೆ ಫೋಟೋ ಫ್ರೇಮ್ ಹಾಕಿಸಿ ತಂತಮ್ಮ ಮನೆಗಳ ದೇವರಕೋಣೆಯಲ್ಲಿಯೋ ಅಥವಾ ಜಗುಲಿಯ ಗೋಡೆಗಳ ಮೇಲೋ ನೇತು ಹಾಕಿರುವುದನ್ನು ಊರ ಹಲವು ಮನೆಗಳಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಹಳ್ಳಿಗಳಲ್ಲೂ ಇಂದೂ ಕಾಣಬಹುದಾಗಿದೆ. ದೇವರೂ ಪರಮಶಿವಣ್ಣನವರ ಉದ್ಯಮಶೀಲತೆಯ ಅಭಿಮಾನಿ ಅನ್ನಿಸುತ್ತದೆ, ಸಾಮಾನ್ಯವಾಗಿ ಬರಗಾಲದ ವರ್ಷಗಳನ್ನೇ ನೋಡುತ್ತಿದ್ದ ಊರಿನ ರೈತಾಪಿವರ್ಗದ ಮಧ್ಯೆ ಗೌಡರ ಬೆಳೆ ಎಂದೂ “ತೀರಾಕನಿಷ್ಠ” ಎನ್ನುವ ಮಟ್ಟವನ್ನು ತಲುಪಿದ್ದು ನನ್ನ ನೆನಪಿನಲ್ಲಿಯೇ ಇಲ್ಲ. “ಈ ವರ್ಷದ ಬೆಳೆ ತೀರಾ ಸುಮಾರು” ಎಂದು ಕೃಷಿಕ ವರ್ಗದ ಅನೇಕರು ನಿಟ್ಟುಸಿರಿಡುವ ಹೊತ್ತು ಜೇಜು ತುಂಬುವಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದ ಪರಮಶಿವಣ್ಣನವರಿಗೆ ಈ ವಿಷಯದಲ್ಲಿ ಹೇರಳವಾದ ದೈವಕೃಪೆ ಇತ್ತು ಎಂದೇ ದಾಖಲಿಸಬೇಕು.
ನಾಗರೀಕ ಸಮಾಜ ತನ್ನ ಅಭಿವೃದ್ದಿಯ ಹಾರಾಟದಲ್ಲಿ ಈ ಹೊತ್ತಿನ ಹಂತದ ಎತ್ತರವನ್ನು ಅವರೋಹಣ ಗೈದಿರುವುದು ಉದ್ಯಮಶೀಲತೆಯ ರೆಕ್ಕೆಗಳ ಆಧಾರದ ಬಲದಿಂದಲೇ ಎನ್ನುವುದು ಸರ್ವವಿದಿತ. ಹಾಗಾಗಿ ಉದ್ಯಮಶೀಲತೆಗೆ ಜಗತ್ತಿನ ಸಮಾಜಗಳಲ್ಲಿ ಎಲ್ಲಕ್ಕಿಂತ ಹೆಚ್ಚಿನ ಮೌಲ್ಯವಿದೆ. ನೀವು ಜಗತ್ತಿನ ಯಾವ ಕುಶಲತೆಯನ್ನು ಬೇಕಾದರೂ ಸೂಕ್ತ ಶಿಕ್ಷಣ, ತರಬೇತಿಗಳ ಮೂಲಕ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ವರ್ಗಾಯಿಸಬಹುದು ಆದರೆ ಉದ್ಯಮಶೀಲತೆಯನ್ನು ಹೀಗೆ ಕಲಿಸಿಕೊಡಲಾಗುವುದಿಲ್ಲ. ಉದ್ಯಮಶೀಲತೆಯನ್ನು ಎದೆಯಲ್ಲಿ ಇಟ್ಟುಕೊಂಡೇ ಅವಿರ್ಭವಿಸುವ ಬಹಳ ಕಡಿಮೆ ಸಂಖ್ಯೆಯ ವ್ಯಕ್ತಿಗಳಷ್ಟೇ ಉದ್ಯಮಶೀಲರಾಗಿ ಬೆಳೆದಾರು. ಇಂದಿನ ಸಮಾಜದ ಸಕಲ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸುವ ತಾಕತ್ತು ಇರುವುದು ಉದ್ಯಮಶೀಲತೆಗೆ ಮಾತ್ರ. ಉದ್ಯಮಶೀಲತೆ ಯಾರೊಬ್ಬರ ಖಾಸಗಿ ಸ್ವತ್ತೂ ಅಲ್ಲ. ಉದ್ಯಮಪತಿಯ ಮಗ ಮಾತ್ರ ಉದ್ದಿಮೆಗಳನ್ನು ಹೊಂದಬೇಕು ಎನ್ನುವ ಲಿಖಿತ ನಿಯಮವೂ ಇಲ್ಲ. ಜ್ಞಾನಾರ್ಜನೆಯ ಹೊಸ ದಿಗಂತಗಳು ತೆರೆಯುತ್ತಿರುವ ಈ ಹೊತ್ತು ಎಂತಹ ಸಾಮಾನ್ಯ ಹಿನ್ನೆಲೆಯಲ್ಲಿ ಬಂದ ವ್ಯಕ್ತಿಯೂ ತನ್ನ ಉದ್ಯಮಶೀಲತೆಯ ಕಾರಣ ಉದ್ಯಮ ಜಗತ್ತಿನಲ್ಲಿ ಅಳಿಸದ ಸಾಧನೆ ತೋರುವುದಕ್ಕೆ ವಿಫುಲ ಅವಕಾಶಗಳಿವೆ. ಇದಕ್ಕೆ ಹಳ್ಳಿಗಾಡಿನ ಸಾಮಾನ್ಯ ರೈತವರ್ಗವೂ ಹೊರತಾಗಿಲ್ಲ. ಜಗತ್ತು ಬೆರಳು ಕಚ್ಚುವ ರೀತಿಯ ಆವಿಷ್ಕಾರಗಳು, ಉದ್ಯಮಶೀಲತೆಗಳಿಂದ ಪೋಷಿತವಾದ ನವನವೀನ ವಿಕ್ರಮಗಳು ನಮ್ಮ ನಾಡಿನ ಮೂಲೆ ಮೂಲೆಯಿಂದಲೂ ಅವಿರತವಾಗಿ ಹೊರಹೊಮ್ಮುತ್ತಿರುವ ಪ್ರಕ್ರಿಯೆಗೆ ನಾಡಜನತೆ ಸಾಕ್ಷಿಯಾಗಿದ್ದಾರೆ. ಆದರೆ ಗೌಡರು ಬೆಳೆಯುತ್ತಿದ್ದ ಕಾಲಕ್ಕೆ ಇಂತಹ ಪ್ರೋತ್ಸಾಹಕರ ವಾತಾವರಣವಿರಲಿಲ್ಲ. ಉದ್ಯಮಶೀಲತೆಯನ್ನು ಗುರುತಿಸಿ, ಬೆಳೆಸಿ, ಹೆಮ್ಮರವನ್ನಾಗಿಸುವ ಯಾವ ಸಾಂಸ್ಥಿಕ ಪ್ರಯತ್ನಗಳೂ ಅಂದಿನ ಸರ್ಕಾರದ, ಸಮಾಜದವತಿಯಿಂದ ಜರುಗುತ್ತಿರಲಿಲ್ಲ. ಆದರೂ ತಮ್ಮ ಇತಿಮಿತಿಯ ಒಳಗೆ, ಜ್ಞಾನಕ್ಷಿತಿಜದ ಪರಧಿಯಲ್ಲಿ ಪರಮಶಿವಣ್ಣ ಗೌಡರಂತಹ ಪ್ರಭೃತಿಗಳು ಮಾಡಿರುವ ಸಾಧನೆ, ಗ್ರಾಮೀಣ ಪ್ರತಿಭೆಗಳಿಗಾಗಿ ತೋರಿಸಿರುವ ಹಾದಿ ಅತ್ಯಂತ ಸ್ತುತ್ಯಾರ್ಹವಾದದ್ದು ಎಂದು ನಾನಾದರೂ ಭಾವಿಸುತ್ತೇನೆ. ಈ ದೃಷ್ಟಿಕೋನದಲ್ಲಿ ತಮ್ಮ ಹಲವು ಹತ್ತಾರು ಮಿತಿಗಳ ಒಳಗೇ ಗೌಡರು ಆರಾಧನೆಗೆ ಅರ್ಹರಾದ ವ್ಯಕ್ತಿವಿಶೇಷವಾಗಿ ಕಾಡುತ್ತಾರೆ, ತಮ್ಮ ಕನಸುಗಳ ಮೂಲಕ ಯುವಹೃದಯಗಳಲ್ಲಿ ಸದಾ ಮಿಡಿಯುತ್ತಿರುತ್ತಾರೆ.
ಇಂತಹ ಎಂದೂ ಬತ್ತದ ಉದ್ಯಮಶೀಲತೆಯ ಮುಂದುವರೆದ ಭಾಗವಾಗಿ ಹೊಲದಲ್ಲಿ ಬೋರ್ವೆಲ್ ಹೊಡೆಸಿ, ತನ್ಮೂಲಕ ನೀರಿನ ಸೌಲಭ್ಯವನ್ನು ಹೊಂದಿ ಮಳೆಯೊಡಗಿನ ಜೂಜಾಟಕ್ಕೆ ಶಾಶ್ವತರೂಪದಲ್ಲಿ ವಿದಾಯ ಹೇಳಬೇಕು ಎಂದಿದ್ದ ಗೌಡ್ರ ಹುನ್ನಾರಕ್ಕೆ ದೈವದ ಒಲವಿರಲಿಲ್ಲ ಎನ್ನಬೇಕು, ಒಂದಲ್ಲ ಮೂರು ಬೋರ್ವೆಲ್ ಗಳನ್ನ ನಾಲ್ಕು ದಿನಗಳ ಕಾಲ ಸತತವಾಗಿ ಹೊಡೆಸುವ ಪ್ರಯತ್ನ ಮಾಡಿದರೂ ಒಂದು ಇಂಚೂ ನೀರು ಬೀಳದ ಕಾರಣ ಪರಮಶಿವಣ್ಣ ಹತಾಶೆಯಿಂದ ಕೈಚೆಲ್ಲಬೇಕಾಯಿತು. ಬೋರ್ವೆಲ್ ಕೊರೆಯುವ ಕೆಲಸ ಪ್ರಾರಂಭಿಸುವ ಮೊದಲು ಕುಲದೈವ ವೀರಭದ್ರನಿಗೆ ಜೋಡಿಕಾಯಿ ಒಡೆದು, ಗೋಧಿಹುಗ್ಗಿಯ ಪ್ರಸಾದ ವಿತರಣೆದೊಂದಿಗೆ ಶುಭಕಾರ್ಯಕ್ಕೆ ದೈವಸಮ್ಮತಿಯನ್ನು ಕೋರಿದ ಗೌಡರ ಮನೋಕಾಮನೆ ಕಡೆಗೂ ಈಡೇರಲಿಲ್ಲ. ಆ ಕಾಲಕ್ಕೇ ಅಂದರೆ ಎಂಬತ್ತರ ದಶಕದ ಮಧ್ಯಭಾಗದಲ್ಲಿ ಬೋರ್ವೆಲ್ ಗಾಗಿ ಏಳೆಂಟು ಸಾವಿರ ರೂಪಾಯಿಗಳನ್ನು ವ್ಯಯಿಸಿದ ಗೌಡರು ತೀವ್ರನಿರಾಶೆಯನ್ನು ಅನುಭವಿಸುವಂತಾಯಿತು. ಹಗಲೂ ರಾತ್ರಿಯೆನ್ನದೆ ಗೆಳೆಯನ ಹೆಗಲಿಗೆ ಹೆಗಲಾಗಿ ಧೈರ್ಯ ತುಂಬಿದ ವಿರುಪಣ್ಣರೆಡ್ಡಿ ನೀಡಿದ ಮನೋಸ್ಥೈರ್ಯದ ದೆಸೆಯಿಂದಾಗಿ ತಿಂಗಳೊಪ್ಪತ್ತಿನಲ್ಲಿಯೆ ಈ ಆಘಾತದಿಂದ ಚೇತರಿಸಿಕೊಂಡ ಪರಮಶಿವಣ್ಣ ಮೊದಲಿನಂತಾಗಲು ಹೆಚ್ಚು ಸಮಯ ಬೇಡಲಿಲ್ಲ. ಮ್ಯಾನೇಜ್ಮೆಂಟ್ ಪಠ್ಯಗಳ ಪ್ರಕಾರ ವ್ಯವಹಾರಗಳಲ್ಲಿ ಆದ ಹಿನ್ನಡೆಯಿಂದ ತ್ವರಿತವಾಗಿ ಚೇತರಿಕೆ ಹೊಂದುವುದು ಉದ್ಯಮಶೀಲತೆಯ ಮತ್ತೊಂದು ಹೆಗ್ಗುರುತು. ಇಂತಹ ಒಂದು ಅನನ್ಯ ಲಕ್ಷಣ ನನ್ನ ಮಾಮನ ಪಾಲಿನದಾಗಿತ್ತು ಎನ್ನುವುದು ಹೆಮ್ಮೆಯ ವಿಷಯ. ಬೋರ್ವೆಲ್ ಪ್ರಸಂಗ ನನಗೆ ವೈಯಕ್ತಿಕ ಮಟ್ಟದಲ್ಲಿ ಬಹಳಷ್ಟು ದುಃಖವನ್ನ, ಪೇಚನ್ನು, ಮುಜುಗರವನ್ನು ಉಂಟುಮಾಡಿತ್ತಾದರೂ ನನ್ನ ದೈನಂದಿನ ಕಾಲೇಜು ಅಭ್ಯಾಸದ ಹಿನ್ನೆಲೆಯಲ್ಲಿ ಇದನ್ನು ಹೆಚ್ಚೂ ಕಡಿಮೆ ಮರೆತೇಬಿಟ್ಟಿದ್ದೆ.
ಸುಮಾರು ಆರು ತಿಂಗಳುಗಳ ನಂತರದ ಮಳೆಗಾಲದ ಒಂದು ದಿನ ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಬಂದವನಿಗೆ ಮನೆಯಲ್ಲಿ ಕೂತು ಅಮ್ಮನೊಂದಿಗೆ ಖುಷಿಯಾಗಿ ಹರಟುತ್ತಿದ್ದ ಪರಮಶಿವಣ್ಣ ಮಾಮ ಭೇಟಿಯಾದರು. ಅದೂ, ಇದೂ, ಅಲ್ಲಿನ, ಇಲ್ಲಿನ ಮಾತುಕತೆಗಳ ನಂತರ ತಾವು ಊರಿನ ಹೊರವಲಯದಲ್ಲಿ, ಹೈಸ್ಕೂಲ್ ಪಕ್ಕದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಒಂದನ್ನು ಹಾಕಬೇಕು ಎಂದು ಯೋಜಿಸಿರುವುದಾಗಿ ಮತ್ತು ಈ ನಿಮಿತ್ತ ದಾವಣಗೆರೆ ವಿಜಯಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸಾನಿಕಂ ಗೋವಿಂದರೆಡ್ಡಿಯನ್ನು ಸ್ನೇಹಿತ ವಿರುಪಣ್ಣರೆಡ್ಡಿಯ ಸಲಹೆಯ ಮೇರೆಗೆ ಇಂದು ಸಂಜೆ ಭೇಟಿಯಾಗಿ ದುಡ್ಡುಕಾಸಿನ ವಿಷಯದಲ್ಲಿ ಮಾತುಕತೆ ನಡೆಸುತ್ತಿರುವುದಾಗಿಯೂ ಮತ್ತು ಈ ಭೇಟಿಯ ವೇಳೆ ನಾನೂ ಉಪಸ್ಥಿತನಿದ್ದರೆ ಒಳಿತು ಎನ್ನುವ ಅಭಿಪ್ರಾಯವನ್ನೂ ಹೊರಗೆಡಹಿದರು. ತುಸುಹೊತ್ತು ಗಂಭೀರ ಆಲೋಚನೆಗೆ ಬಿದ್ದ ನಾನು “ಮಾಮ, ನನಗೆ ಸಂಜೆ ಮುಖ್ಯವಾದ ತರಗತಿಗಳಿವೆ, ಆದ ಕಾರಣ ಕಾಲೇಜು ತಪ್ಪಿಸುವದಕ್ಕಾಗುವುದಿಲ್ಲ.
ನೀವು ಹೋಗಿಬನ್ನಿ” ಎಂದು ನುಣುಚಿಕೊಳ್ಳುವ ಮುಖೇನ ಮುಂದೆ ಉಂಟಾಗಬಹುದಾದ ಸಂದಿಗ್ಧತೆ ಮತ್ತು ಮುಜುಗರದಿಂದ ನನ್ನನ್ನು ನಾನು ಖಾಯಂ ರೂಪದಲ್ಲಿ ರಕ್ಷಿಸಿಕೊಳ್ಳುವ ಪ್ರಯತ್ನಮಾಡಿದೆನೇ? ಈ ಘಟನೆ ನಡೆದು ದಶಕಗಳ ಬಳಿಕವೂ ಉತ್ತರ ನನಗೆ ಮರೀಚಿಕೆಯಾಗಿಯೇ ಉಳಿದಿದೆ.
ತಾವು ಯೋಚಿಸಿದ, ಯೋಜಿಸಿ ಜಾರಿಗೆ ತಂದ ಯಾವ ಉದ್ಯಮಗಳಲ್ಲೂ ಅಂದುಕೊಂಡಷ್ಟು ಮಟ್ಟದ ಯಶಸ್ಸನ್ನು ಸಾಧಿಸಲಾಗದೆ ಅತೃಪ್ತ ಆತ್ಮವಾಗಿಯೇ ಇಹಲೋಕವನ್ನು ತ್ಯಜಿಸಿದ ಗೌಡರ ವಿಷಯದಲ್ಲಿ ಅವರು ಒಂದೇ ಮಟ್ಟದಲ್ಲಿ ಕಾಪಾಡಿಕೊಳ್ಳಲು ಆಗದ ಮಾನವ ಮತ್ತು ಸಮಾಜದ ಕುರಿತಾದ ಸಂಬಂಧಗಳ ಕೊರತೆ ಬರಿಗಣ್ಣಿಗೆ ಎದ್ದುಕಾಣುವಷ್ಟು ದೊಡ್ಡದಾಗಿದೆ. ಉದ್ಯಮದಲ್ಲಿನ ಯಶಸ್ಸು ಒಂದು ಒಳ್ಳೆಯ ಅಡುಗೆಯ ತಯಾರಿಗೆ ಸಮನಾದದ್ದು. ಅಲ್ಲಿ ಮಾನವ ಸಂಬಂಧಗಳೆನ್ನುವ ಉಪ್ಪು ಇಲ್ಲದೇ ಹೋದಲ್ಲಿ ಉದ್ಯಮಶೀಲತೆ ತನ್ನ ರುಚಿಯನ್ನು ಸಮಾಜಕ್ಕೆ ಉಣಬಡಿಸಲಾಗದು. ಗೌಡರ ಉದ್ಯಮಶೀಲತೆಯ ಸೊಬಗನ್ನು ಅವರು ಊರಜನರ ಅದರಲ್ಲೂ ನೆಂಟರಿಷ್ಟರ, ಸಂಬಂಧಿಗಳ ಒಡನೆ ವಿನಾಃಕಾರಣ ಕಟ್ಟಿಕೊಂಡ ದ್ವೇಷ, ಅಸೂಯೆಗಳೆನ್ನುವ ಸಣ್ಣಸಣ್ಣ ಮಸಿಯ ಚುಕ್ಕಿಗಳು ನುಂಗಿ ಹಾಕಿದ್ದು ಸರ್ವಥಾ ವಿಷಾದನೀಯವೇ ಸರಿ.
ಮನುಷ್ಯನೊಬ್ಬ ಅಳಿಯುತ್ತಾನೆ, ಆದರೆ ಆ ವ್ಯಕ್ತಿ ತನ್ನ ಜೀವಿತಕಾಲದಲ್ಲಿ ತೋರಿದ ಎದೆಗಾರಿಕೆಗೆ ಸಾವಿಲ್ಲ. ಹಾಗೆಯೇ ತನ್ನ ನಟನಾಸಮಯದ ನಂತರ ನಿಧಾನವಾಗಿ ತೆರೆಯಮರೆಗೆ ಸರಿದ ಪರಮಶಿವಣ್ಣಗೌಡರ ಉದ್ಯಮಶೀಲ ಚೇತನಕ್ಕೆ ಎಂದೂ ಸಾವಿಲ್ಲ ಎಂದು ನಾನು ಪರಿಭಾವಿಸಿದ್ದೇನೆ. ಅಪ್ಪ ಹಾಕಿದ ಆಲಕ್ಕೆ ನೇತು ಹಾಕಿಕೊಂಡೂ, ತನ್ನತನದ ಕಾರಣವರ್ಷದಿಂದ ವಿಭಿನ್ನ ನೆಲೆಯನ್ನು ತಮ್ಮ ಸುತ್ತಲೂ ನಿರ್ಮಿಸಿಕೊಳ್ಳುವ ಸಾಮರ್ಥ್ಯವಿರುವ ಯುವಪಡೆಯ ಅವಶ್ಯಕತೆ ಹಳ್ಳಿಗಾಡುಗಳಿಗೆ ಗೌಡರ ಸಮಯದಲ್ಲಿ ಇದ್ದುದ್ದಕಿಂತಲೂ ಈ ಕಾಲಘಟ್ಟದಲ್ಲಿ ಹೆಚ್ಚಾಗಿದೆ ಎನ್ನುವ ಮಾತನ್ನು ಯಾರಾದರೂ ಒಪ್ಪಲೇಬೇಕು.