ಮಗಳ ಬದುಕಿಗೆ ಮಾರಕವಾದ ಕುಂಡಲಿ

Share

ಮಗಳ ಬದುಕಿಗೆ ಮಾರಕವಾದ ಕುಂಡಲಿ

“ಗಂಗಾ, ನಾನು ಹೊರಡುವುದಕ್ಕೆ ತಡವಾಗುತ್ತಿದೆ, ಬೇಗ ನನ್ನ ಬುತ್ತಿಯನ್ನು ಕೊಡು” ಎಂದು ಐಯ್ನೋರ ತಿಪ್ಪಯ್ಯ ಮೇಷ್ಟ್ರು ಅಡುಗೆಮನೆಯಲ್ಲಿದ್ದ ತಮ್ಮ ಧರ್ಮಪತ್ನಿ ಗಂಗಮ್ಮನನ್ನು ಕೂಗಿದ ಸದ್ದು ಮುಂಬಾಗಿಲನ್ನು ಸೀಳಿ ಹೊರಬಂದು ಮೇಷ್ಟ್ರ ಮನೆಯ ಎದುರಿನ ರಸ್ತೆಯಲ್ಲಿ ನಡೆಯತ್ತಾ ಸಾಗಿದ್ದ ನನ್ನ ಕಿವಿಗಳನ್ನು ಅಪ್ಪಳಿಸಿತು. ಅನಿತ ದೂರದಲ್ಲಿಯೇ ಇದ್ದ ಅನಂತಶೆಟ್ಟಿ ಅಂಗಡಿಗೆ ಹೋಗಿ ತಾತನ ಶನಿವಾರದ ತಿರುಪತಿ ತಿಮ್ಮಪ್ಪನ ಪೂಜೆಗೆಂದು ತೆಂಗಿನಕಾಯಿ ತರಬೇಕಾಗಿದ್ದ ಆತುರದಲ್ಲಿದ್ದ ನಾನು ಈ ಮಾತುಗಳನ್ನು ಕೇಳಿಸಿಕೊಂಡು ಒಂದು ಕ್ಷಣ ರಸ್ತೆಯ ನಡುವಲ್ಲೇ ನಿಂತು ಮೇಷ್ಟ್ರ ಮನೆಯ ಒಳಗೆ ಇಣುಕುತ್ತಾ ಅಲ್ಲಿ ಬೆಳ್ಳಂಬೆಳಿಗ್ಗೆ ನಡೆಯುತ್ತಿದ್ದ ಬಿಸಿಬಿಸಿ ವಿದ್ಯಮಾನಗಳಿಗೆ ಸಾಕ್ಷಿ ಎನಿಸಿದೆ.

ತಿಪ್ಪಯ್ಯ ಮೇಷ್ಟ್ರು ಎರಡನೇ ತರಗತಿಯಲ್ಲಿ ನನ್ನ ಗುರುಗಳಾಗಿದ್ದವರು. ಅದೇ ವರ್ಷ ಸೇವೆಯಿಂದ ನಿವೃತ್ತಿ ಹೊಂದಿದ್ದರು ಕೂಡ. “ಶುಭಘಳಿಗೆ ಮೀರಿ ಹೋಗುತ್ತಿದೆ, ಇನ್ನು ಐದು ನಿಮಿಷಗಳ ಒಳಗೆ ನಾನು ಮುಂಬಾಗಿಲನ್ನು ದಾಟಿ ಹೊರನಡೆಯದೆ ಇದ್ದರೆ ಇವತ್ತು ಚಳ್ಳಕೆರೆಗೆ ಹೋಗಲಾಗುವುದಿಲ್ಲ. ಯಾಕಿಷ್ಟು ತಡ ಮಾಡುತ್ತಿದ್ದೀಯ? ನಿನ್ನೆ ಬೆಳಿಗ್ಗೆಯಿಂದಲೇ ನಿನಗೆ ನೂರು ಬಾರಿ ನನ್ನ ಇವತ್ತಿನ ಪ್ರಯಾಣದ ಬಗ್ಗೆ ತಿಳಿಸಿದ್ದೇನೆ” ಎಂದು ಮೇಷ್ಟ್ರು ಏರಿದ ಧ್ವನಿಯಲ್ಲಿ ಗಂಗಮ್ಮನ ಮೇಲೆ ರೇಗಾಡುತ್ತಿರುವ ಹೊತ್ತು ಮೇಷ್ಟ್ರ ಕಿರಿಯ ಮಗ ‘ಗುಬ್ಬಿ’ ಪ್ರಭಾಕರ ಅಡುಗೆಮನೆಯಿಂದ ಓಡಿ ಬಂದವನು ಅಪ್ಪನ ಕೈಗೆ ಬುತ್ತಿಚೀಲವನ್ನು ಮಡುಗಲು, ತಕ್ಷಣದಲ್ಲಿ ಅದನ್ನು ಕಂಕುಳದಲ್ಲಿ ಅವಿತಿಟ್ಟುಕೊಂಡ ತಿಪ್ಪಯ್ಯ ಮೇಷ್ಟ್ರು, “ಹೋಗಿಬರುತ್ತೇನೆ” ಎಂದು ಹೆಂಡತಿಗೆ ಹೇಳುವ ವ್ಯವಧಾನವನ್ನೂ ಮೆರೆಯದೆ ಆತುರಾತುರವಾಗಿ ಮುಂಬಾಗಿಲನ್ನು ದಾಟಿ ಮನೆಯ ಮುಂದಿನ ಟಾರ್ ರಸ್ತೆಗೆ ಇಳಿದರು. ಈ ವೇಳೆಗಾಗಲೇ ಮೇಷ್ಟ್ರ ಮನೆಯನ್ನು ದಾಟಿ ಸ್ವಲ್ಪ ಮುಂದೆ ನಡೆದಿದ್ದ ನಾನು ಬಾಲ್ಯಸಹಜ ಕುತೂಹಲದಿಂದಾಗಿ ಒಮ್ಮೆ ಹಿಂತಿರುಗಿ ನೋಡಿ ಮೇಷ್ಟ್ರ ಕಾಲಲ್ಲಿ ಚಪ್ಪಲಿಗಳು ಎಂದಿನ ಹಾಗೇ ಇಂದೂ ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡೆ.

ಕುಳ್ಳಗೆ, ಕಪ್ಪಾಗಿ, ಒಂಟಿಮೂಳೆಯ ಅಸ್ಥಿಯ ಮೇಲೆ ಕೃಷ ಶರೀರವನ್ನು ಹೊದ್ದಿದ್ದ ತಿಪ್ಪಯ್ಯ ಮೇಷ್ಟ್ರ ನೆನಪು ನನ್ನಲ್ಲಿ ಉಳಿದಿರುವುದಕ್ಕೆ ಮುಖ್ಯಕಾರಣ ಎಂದರೆ ದೀಪಗಳಂತೆ ಬೆಳಗುತ್ತಿದ್ದ ಅವರ ಬಿಳಿಯ ಜೋಡಿಕಣ್ಣುಗಳು. ಕಪ್ಪುಮುಖದ ಹಿನ್ನೆಲೆಯಲ್ಲಿ ದೈದೇಪ್ಯಮಾನವಾಗಿ ಹೊಳೆಯುತ್ತಿದ್ದ ಮೇಷ್ಟ್ರ ಕಣ್ಣುಗಳು ನನ್ನಲ್ಲಿ ಅನೇಕ ಬಾರಿ ಗೊಂದಲಮಿಶ್ರಿತ ಭಯವನ್ನು ಹುಟ್ಟು ಹಾಕಿದ್ದೂ ಉಂಟು. ಸ್ವಭಾವತಃ ಕೋಪಿಷ್ಠ ವ್ಯಕ್ತಿಯೇ ಆದ ಮೇಷ್ಟ್ರು ತಾವು ಯಾವಾಗಲೂ ಕಾಲಿನಿಂದ ನಾಲ್ಕು ಬೊಟ್ಟು ಮೇಲೇ ಇರುವಂತೆ ಧರಿಸುತ್ತಿದ್ದ ಮಕ್ಮಲ್ ಪಂಚೆಯ ಒಂದು ತುದಿಯನ್ನು ಸದಾ ಎಡಗೈನಿಂದ ಹಿಡಿದು ಬಲಕಂಕುಳಲ್ಲಿ ಒಂದು ಬುತ್ತಿಚೀಲವನ್ನು ಸಿಗಿಸಿಕೊಂಡು ಚಪ್ಪಲಿ ಮೆಟ್ಟದ ಕಾಲುಗಳಲ್ಲಿ ವೇಗವಾಗಿ ಪಟಪಟನೆ, ಗಾಳಿಯಲ್ಲಿ ಹಾರಿದಂತೆ ನಡೆಯುತ್ತಾ ಫ್ಲೈಯಿಂಗ್ ಸಿಖ್ ಮಿಲ್ಕಾಸಿಂಗ್ ರನ್ನು ನೆನಪಿಸುತ್ತಿದ್ದರೆ ಬಹಳಷ್ಟು ದೂರದಿಂದಲೇ ಜನ ತಿಪ್ಪಯ್ಯನವರ ಬರುವನ್ನು ಗುರುತಿಸುತ್ತಿದ್ದರು. ಮೈಮೇಲೆ ಜಾಳುಜಾಳಾದ, ದೊಗಲೆಯಾದ ಬಿಳೀಜುಬ್ಬಾ, ಎಡಹೆಗಲ ಮೇಲೊಂದು ಕೆಂಪುವಸ್ತ್ರವನ್ನು ಹೊದ್ದುಕೊಂಡು ಮೇಷ್ಟ್ರು ಬಸ್ ಸ್ಟ್ಯಾಂಡ್ ಕಡೆ ನಡೆದು ಹೋಗುತ್ತಿದ್ದಾರೆ ಎಂದರೆ ಅವರು ಯಾವ ಕಾರ್ಯನಿಮಿತ್ತ ಹೊರಟಿರಬಹುದು ಎಂದು ಊಹೆ ಮಾಡುವ ಅಗತ್ಯ ಊರ ಬಹಳ ಮಂದಿಗೆ ಇರಲಿಲ್ಲ

ನಿವೃತ್ತಿಯ ನಂತರದ ಕಳೆದ ಎರಡು ವರ್ಷಗಳ ಕಾಲ ಮನೆಯಲ್ಲಿ ಬೆಳೆದು ನಿಂತ ಮಗಳು ಸರೋಜಮ್ಮನಿಗೆ ಗಂಡು ಹುಡುಕುವ ಏಕೈಕ ಪ್ರಯತ್ನದಲ್ಲಿ ತಿಪ್ಪಯ್ಯನವರು ನಿರತರಾಗಿರುವುದು ಊರ ಬಹುತೇಕ ಮಂದಿಗೆ ವೇದ್ಯವಾದ ಸಂಗತಿಯೇ ಆಗಿತ್ತು. ಮೇಷ್ಟ್ರು ಮಗಳಿಗಾಗಿ ವರ ಹುಡುಕಿಕೊಂಡು ಅಲೆಯದ ಊರು ಕೇರಿಗಳೇ ಸುತ್ತಲಿನ ನೂರು ಕಿಲೋಮೀಟರ್ ಫಾಸಲೆಯಲ್ಲಿ ಇಲ್ಲ ಎಂದು ಎದೆತಟ್ಟಿ ಹೇಳಬಹುದಿತ್ತು. ಲಿಂಗಾಯತರ ಗುರುಗಳೆಂದೇ ಗಣಿತವಾದ ಜಂಗಮಕುಲಕ್ಕೆ ಸೇರಿದ ಮೇಷ್ಟ್ರು ತಮ್ಮ ಜಾತಿಯ ಗಂಡು ಇಂತಹ ಊರಿನಲ್ಲಿ ಇದ್ದಾನೆ ಎನ್ನುವ ಸಣ್ಣಸುಳಿವು ಸಿಕ್ಕದರೂ ಸಾಕು, ಮರುದಿನವೇ ಶುಭಮುಹೂರ್ತವನ್ನು ನೋಡಿಕೊಂಡು ವರನ ಅನ್ವೇಷಣೆಯಲ್ಲಿ ತೆರಳುತ್ತಿದ್ದರು. ಈ ಎರಡು ವರ್ಷಗಳ ಕಾಲ ಇದ್ದಬದ್ದ ಹತ್ತಿರದ ಹಳ್ಳಿಕೆರೆಗಳೆಲ್ಲವೂ ಮೇಷ್ಟ್ರ ಅವಗಾಹನೆಗೆ ಒಳಗಾಗಿ, ಅಲ್ಲೆಲ್ಲಿಯೂ ಮಗಳಿಗೆ ಸೂಕ್ತ ಸಂಬಂಧ ಇಲ್ಲವೆಂದು ಖಾತ್ರಿಯಾದ ತರುವಾಯ,ಈಗೀಗ ದೂರದ ಊರುಗಳಿಗೆ ವರಾನ್ವೇಷಣೆಯ ನಿಮಿತ್ತ ಹೋಗಬೇಕಾದ ಅನಿವಾರ್ಯ ಪ್ರಸಂಗ ಐಯ್ನೋರಿಗೆ ಎದುರಾಗಿತ್ತು. ಹತ್ತಿರದ ಹಳ್ಳಿಗಳಿಗೆ, ಅಂದರೆ ಹತ್ತು ಹನ್ನೆರೆಡು ಕಿಲೋಮೀಟರ್ ದೂರದ ಸರಹದ್ದಿನ ಒಳಗೇ ಇರುವಂತಹ ಊರುಗಳಿಗೆ ವರಾನ್ವೇಷಣೆಯ ಶುರುವಿನ ದಿನಗಳಲ್ಲಿ ನಡೆದೇ ಹೋಗಿ ಬಂದು ಮಾಡುತ್ತಿದ್ದ ಮೇಷ್ಟ್ರು ದೂರದ ಊರುಪಟ್ಟಣಗಳಿಗೆ ಎಡತಾಕುವ ಕಾರಣದಿಂದಾಗಿ ಇತ್ತೀಚೆಗೆ ಲೈನ್ ಬಸ್ಸುಗಳನ್ನು ಅವಲಂಬಿಸಬೇಕಾಗಿತ್ತು. ಹೋದ ಎಲ್ಲಿಯೂ, ಯಾರ ಮನೆಗಳಲ್ಲಿಯೂ ಒಂದು ಲೋಟ ನೀರನ್ನೂ ಸೇವಿಸದ ಮೇಷ್ಟ್ರು ತಾವು ಮನೆಯಿಂದ ಕಟ್ಟಿಕೊಂಡು ಬಂದ ಮೊಸರನ್ನದ ಬುತ್ತಿಯ ಜೊತೆಗೆ ಕೆಂಪುಚಟ್ನಿ ಮತ್ತು ಗುರೆಳ್ಳುಪುಡಿಗಳನ್ನು ನಂಜಿಕೊಳ್ಳುತ್ತಾ ಯಾವುದಾದರೂ ಮರದ ನೆರಳಿನಲ್ಲಿ ಕೂತು ಮಧ್ಯಾಹ್ನದ ತಮ್ಮ ಭೂರಿಭೋಜನವನ್ನು ಮುಗಿಸಿದರಾದರೆ ಊರಿಗೆ ಮರಳುವವರೆಗೂ ಮತ್ತೇನನ್ನೂ ಸೇವಿಸುತ್ತಿರಲಿಲ್ಲ. ಇಂತಿಪ್ಪ ಮೇಷ್ಟ್ರ ವಿಷಯದಲ್ಲಿ “ಸೂಕ್ತವರನಿಗಾಗಿ ಚಪ್ಪಲಿ ಸವೆಯುವ ಹಾಗೆ ಅಲೆದರು” ಎಂದು ಹೇಳುವುದು ವಾಸ್ತವವಾಗಿ ಕಾಲಲ್ಲಿ ಎಂದೂ ಚಪ್ಪಲಿ ತೊಡದ ತಿಪ್ಪಯ್ಯ ಮೇಷ್ಟ್ರ ವಿಷಯದಲ್ಲಿ ವಸ್ತುನಿಷ್ಠ ವಿವರಣೆ ಅನ್ನಿಸದೇ ಹೋಗುವ ಅಪಾಯವಿದ್ದರೂ, ಒಂದು ಪಕ್ಷ ಮೇಷ್ಟ್ರೆನಾದರೂ ಚಪ್ಪಲಿಗಳನ್ನು ತೊಟ್ಟೇ ವರಾನ್ವೇಷಣೆ ನಡೆಸಿದ್ದಲ್ಲಿ ಹತ್ತಾರು ಜೋಡಿ ಚಪ್ಪಲಿಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸವೆಯುತ್ತಿದ್ದವು ಎನ್ನುವುದು ಮೇಷ್ಟ್ರೇ ಲಾಗಾಯ್ತಿನಿಂದ ನಡೆಸಿಕೊಂಡು ಬಂದ ಸರ್ಕಾರಿ ಶಿಕ್ಷಕವೃತ್ತಿಯ ಮತ್ತೊಂದು ಮಗ್ಗುಲಾದ ಕುಲಕಸುಬಿನ ಪೌರೋಹಿತ್ಯದ ಪ್ರವೃತ್ತಿ ಕಾಯಕದಷ್ಟೆ ದಿಟವಾದದ್ದು ಎನ್ನುವುದನ್ನು ಇಲ್ಲಿ ಒತ್ತಿ ಹೇಳಬೇಕು. ಊರಲ್ಲಿ ಸರಿಸುಮಾರು ನೂರೈವತ್ತು ಮನೆಗಳಿಗಿಂತ ಹೆಚ್ಚಾಗಿದ್ದ ಲಿಂಗಾಯತ ಜಾತಿಯವರ ನಾಮಕರಣ, ಹಿರಿಯರ ಹಬ್ಬ, ಲಿಂಗಧಾರಣೆ, ಮದುವೆಯೇ ಮುಂತಾದ ಶುಭಕಾರ್ಯಗಳ ಒಟ್ಟಿಗೇ ಸಾವು, ಸೂತಕಗಳ ಅಶುಭಕಾರ್ಯಗಳ ವೇಳೆಯೂ ತಿಪ್ಪಯ್ಯ ಮೇಷ್ಟ್ರು ಈ ಸಮಾಜಕ್ಕೆ ಬೇಕಾದ ಅನಿವಾರ್ಯವ್ಯಕ್ತಿಯಾಗಿ ಹೋಗಿದ್ದರು. ಊರಿನಲ್ಲಿ ವೀರಭದ್ರಯ್ಯ ಸ್ವಾಮಿಗಳ ರೂಪದಲ್ಲಿ ಮತ್ತೊಬ್ಬ ಜಂಗಮಗುರುಗಳು ಪೌರೋಹಿತ್ಯದ ಕಾರ್ಯಗಳನ್ನು ಸಂಪನ್ನಗೊಳಿಸುತ್ತಿದ್ದರಾದರೂ ತಿಪ್ಪಯ್ಯನವರು ಲಿಂಗಾಯತ ಮನೆಗಳ ಮೊದಲ ಆಯ್ಕೆಯಾಗಿದ್ದರು.

ಕಾರ್ಯಗಳಿಗೆ ಬೇಕಾದ ವಸ್ತುವಿಶೇಷಗಳ ಕುರಿತು ಹೆಚ್ಚು ಬೇಡಿಕೆಗಳನ್ನು ಇಡದೆ, ಇಂತಹುದೇ ಸಾಮಾಗ್ರಿ ಇಂತಿಷ್ಟೇ ಪ್ರಮಾಣದಲ್ಲಿ ಬೇಕು, ಇಂತಹವರ ಅಂಗಡಿಯಲ್ಲಿ ತಂದಿದ್ದೇ ಆಗಬೇಕು ಎನ್ನುವ ಹಠ ಮಾಡದೆ ಲಭ್ಯವಿದ್ದ ಪರಿಕರಗಳಲ್ಲಿಯೇ ತಕ್ಕಮಟ್ಟಿಗೆ, ಶಾಸ್ತ್ರೋಕ್ತ ರೀತಿಯಲ್ಲಿಯೇ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದ ತಿಪ್ಪಯ್ಯನವರು ಎಂದೂ ದಕ್ಷಿಣೆಯ ವಿಚಾರವಾಗಿ ಕಿರಿಕಿರಿ ಮಾಡಿದವರೇ ಅಲ್ಲ. ವೀರಭದ್ರಯ್ಯ ಸ್ವಾಮಿಗಳ ವ್ಯವಹಾರ ಇದಕ್ಕೆ ತದ್ವಿರುದ್ಧವಾಗಿದ್ದುದರಿಂದ ಬಡರೈತಾಪಿ ಮತ್ತು ಕೆಳಮಧ್ಯಮವರ್ಗದವರಿಂದಲೆ ಕೂಡಿದ ಲಿಂಗಾಯತ ಸಮುದಾಯಕ್ಕೆ ತಿಪ್ಪಯ್ಯ ಮೇಷ್ಟ್ರು ಹೇಳಿ ಮಾಡಿಸಿದ, ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಯೇ ಕರುಣಿಸಿದ ವರದ ಹಾಗಿದ್ದರು.

ತಾವು ನಡೆಸಿಕೊಡುತ್ತಿದ್ದ ವಿವಾಹಗಳಲ್ಲಿ ಲಗ್ನಕ್ಕೆ, ಮುಹೂರ್ತದ ಸಮಯಕ್ಕೆ ಅಂತಹ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡದೇ ಇದ್ದ ತಿಪ್ಪಯ್ಯ ಮೇಷ್ಟ್ರು ತಮ್ಮ ಮಗಳ ಮದುವೆಗಾಗಿ ಗಂಡನ್ನು ಹುಡುಕುವ ವಿಷಯದಲ್ಲಿ ಮಾತ್ರ ಯಾವ ಕಾರಣವರ್ಷದಿಂದಲೋ ಜಾತಕಗಳ ಹೊಂದಾಣಿಕೆಯ ವಿಷಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರು. ಬೆಳ್ಳಗೆ, ಎತ್ತರವಾಗಿ, ಯೌವನಸಹಜ ಸೌಂದರ್ಯದಿಂದ ಬಳುಕುತ್ತಿದ್ದ ಐಯ್ನೋರ ಮಗಳು ಸರೋಜಮ್ಮನಮ್ಮ ಊರಿನ ಅಂದಿನ ಪರಿಸ್ಥಿತಿಯಲ್ಲಿ ಸಾಕಷ್ಟು ಕಲಿತವಳೆ ಆಗಿದ್ದಳು. ಊರಿಲ್ಲಿ ಲಭ್ಯವಿದ್ದ ಹತ್ತನೇ ತರಗತಿವರೆಗಿನ ಶಿಕ್ಷಣವನ್ನು ಸಮರ್ಪಕವಾಗಿ ಪೂರೈಸಿ, ದುರ್ಗದಲ್ಲಿ ಶಿಕ್ಷಕರ ತರಬೇತಿ ಮುಗಿಸಿದ ಸರೋಜಮ್ಮನನ್ನು ನೋಡಿದ ಯಾವ ಗಂಡೇ ಆಗಲಿ ವಿವಾಹಕ್ಕೆ ಸಮ್ಮತಿಸಿದೆ ಇರುವ ಹಾಗಿರಲಿಲ್ಲ. ಆದರೆ ಮೇಷ್ಟ್ರು ಜಾತಕ ಹೊಂದಾಣಿಕೆಯ ವಿಷಯದಲ್ಲಿ “ಮೊಂಡು” ಎಂದೇ ಹೇಳಬಹುದಾದ ಮಟ್ಟದ ಹಠಮಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದ ಕಾರಣದಿಂದಾಗಿ ಹತ್ತಾರು ಯೋಗ್ಯ, ಸಂಭಾವಿತ, ಒಳ್ಳೆಯ ಸರ್ಕಾರಿ ಕೆಲಸಗಳಲ್ಲಿ ಇದ್ದ ಭಾವಿವರರು ಜಾತಕ ಹೊಂದಾಣಿಕೆ ಆಗದ ಏಕೈಕ ಕಾರಣದಿಂದಾಗಿ ಕೈತಪ್ಪಿಹೋದ ಸಂಕಟ ಕೇವಲ ತಾಯಿ ಗಂಗಮ್ಮನನ್ನು ಕಾಡುತ್ತಿದ್ದದ್ದೇ ಅಲ್ಲದೆ ಮಗಳು ಸರೋಜಮ್ಮನೂ ಹಲವಾರು ಬಾರಿ ತಂದೆಯ ಈ ಹಠದ ಕಾರಣದಿಂದಾಗಿ ಸಕಲ ರೀತಿಗಳಲ್ಲಿಯೂ ತನಗೆ ಜೋಡಿಯಾಗಬಹುದಾಗಿದ್ದ ಗಂಡುಗಳು ತಪ್ಪಿ ಹೋಗುತ್ತಿರುವ ದುಃಖವನ್ನು ಮನದಲ್ಲಿಯೇ ಭರಿಸುತ್ತಿದ್ದಳು. ಆದರೆ ತಾಯಿ, ಮಗಳಿಗೆ ತಿಪ್ಪಯ್ಯ ಮೇಷ್ಟ್ರಿಗೆ ಈ ಬಗ್ಗೆ ತಿಳಿ ಹೇಳುವ ಧೈರ್ಯ ಲವಶೇಶವೂ ಇರಲಿಲ್ಲ. ಭದ್ರಾವತಿಯ ಸ್ಟೀಲ್ ಫ್ಯಾಕ್ಟರಿಯಲ್ಲಿ ನೌಕರಿಯಲ್ಲಿ ಇದ್ದ ಹಿರಿಯ ಮಗ ಪ್ರಕಾಶನಿಗೆ ಮೇಷ್ಟ್ರ ಈ ಮನೋಧಾರಣೆಯ ಬಗ್ಗೆ ವಿವರಿಸಿ ಆತನ ಮೂಲಕ ಅಪ್ಪನಿಗೆ ಬುದ್ದಿ ಹೇಳಿಸುವ ಕೆಲಸ ಮಾಡಿದರೂ ‘ತಾವು ಹಿಡಿದಿದ್ದೆ ಹಠ’ ಎನ್ನುವ ಧಾಟಿಯನ್ನು ಪ್ರದರ್ಶಿಸಿದ ಮೇಷ್ಟ್ರು ಒಮ್ಮೆಯಂತೂ “ಸರೋಜನಿಗೆ ಮದುವೆಯಾಗದಿದ್ದರೂ ಪರವಾ ಇಲ್ಲ, ಆದರೆ ಹುಡುಗ ಹುಡುಗಿಯ ಜಾತಕ ಪೂರ್ಣಪ್ರಮಾಣದಲ್ಲಿ ತಾಳೆಯಾಗದೇ ಇದ್ದ ಪಕ್ಷದಲ್ಲಿ ಮಗಳ ಮದುವೆಯನ್ನೇ ಮಾಡುವುದಿಲ್ಲ” ಎನ್ನುವ ಕಠಿಣಾತಿಕಠಿಣ ನಿಲುವನ್ನು ಪ್ರದರ್ಶಿಸುವ ಮಟ್ಟ ತಲುಪಿದ ಮೇಲೆ ಅಪ್ಪನಿಗೆ ಪ್ರೀತಿಯ ಮಗನಾದ ತಾನೂ ಒಂದು ಮಾತು ಹೇಳಿ ನೋಡುತ್ತೇನೆ ಎನ್ನುವ ಹುಮ್ಮಸ್ಸಿನಲ್ಲಿದ್ದ, ದಾವಣಗೆರೆಯಲ್ಲಿ ಕೋರ್ಟ್ ಗುಮಾಸ್ತ ಹುದ್ದೆಯಲ್ಲಿದ್ದ ಎರಡನೇ ಮಗ ಶಿವಕುಮಾರ, ತನ್ನ ಯೋಚನೆಯನ್ನು ಎಳವಿನಲ್ಲಿಯೆ ಚಿವುಟಿ ಹಾಕಿದ್ದ. ಹಾಗಾಗಿ ತಿಪ್ಪಯ್ಯ ಮೇಷ್ಟ್ರು ನಿರಾತಂಕವಾಗಿ ಗಂಡುಗಳ ಅದರಲ್ಲೂ ಬಹಳ ಮುಖ್ಯವಾಗಿ ಮಗಳಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಜಾತಕದ ಗಂಡುಗಳಿಗಾಗಿ ಅವ್ಯಾಹತವಾಗಿ ನಡೆಸುತ್ತಿದ್ದ ತಮ್ಮ ವ್ರತವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರೆಸಿಕೊಂಡು ಹೋಗುತ್ತಲೇ ಇದ್ದರು.

ಚಳ್ಳಕೆರೆಯಿಂದ ಮೇಷ್ಟ್ರು ಹಿಂತಿರುಗಿ ಬರುವಾಗ ಅದಾಗಲೇ ರಾತ್ರಿ ಎಂಟಾಗಿತ್ತು. ಪತಿಯ ಹಾದಿಯನ್ನು ಕಾಯ್ದು ಸುಸ್ತಾದ ಗಂಗಮ್ಮ ಮುದ್ದೆಗೆ ಹೆಸರಿಡಲು ಆಗ ತಾನೇ ಅಡುಗೆಕೋಣೆಗೆ ತೆರಳಿದ್ದರು. ಪಡಸಾಲೆಯಲ್ಲಿ ಕುಳಿತು ತ್ರಿವೇಣಿ ಕಾದಂಬರಿ ಒಂದನ್ನು ಓದುವುದರಲ್ಲಿ ಮಗ್ನಳಾಗಿದ್ದ ಸರೋಜಮ್ಮ ತಂದೆ ಬಂದಿದ್ದನ್ನು ನೋಡಿ ಕೈಕಾಲು ತೊಳೆಯಲು ನೀರು ತರಲು ಬಚ್ಚಲು ಮನೆಗೆ ತೆರಳಿದಳು. ಮುಖ, ಕೈಕಾಲು ತೊಳೆದು ತಮ್ಮ ಹೆಗಲ ಮೇಲಿನ ವಸ್ತ್ರದಿಂದ ಮುಖವನ್ನು ಒರೆಸುತ್ತಾ “ಗಂಗಾ, ಹುಡುಗ ದುರ್ಗದಿಂದ ಬರಲಿಕ್ಕೆ ತಡವಾಯಿತು, ಹಾಗಾಗಿ ನಾನು ಊರಿಗೆ ಬರಲಿಕ್ಕೆ ಲೇಟಾಯಿತು” ಎಂದು ತಮ್ಮ ಮಾತಿನ ಪೀಠಿಕೆ ಶುರುಮಾಡಿದ ಮೇಷ್ಟ್ರು ವರ ಕೆಇಬಿಯಲ್ಲಿ ಇಂಜಿನಿಯರ್ ಆಗಿರುವುದಾಗಿಯೂ ಮತ್ತು ವರನ ಮನೆಯವರು ಭಾರಿ ಗಟ್ಟಿಕುಳವಾಗಿದ್ದು ಹಿರಿಯೂರು-ಬಳ್ಳಾರಿ ಮಾರ್ಗವಾಗಿ ಓಡುತ್ತಿರುವ ಎರಡು ಖಾಸಗಿ ಬಸ್ಸುಗಳೂ ಸೇರಿದಂತೆ ಊರ ಹೊರಗೆ ಇದ್ದ ಒಂದು ದಿಕಾಡಿಕೇಟರ್ , ಒಂದು ಆಯಿಲ್ ಮಿಲ್ ಮತ್ತು ಊರಮಧ್ಯದಲ್ಲಿ ಇದ್ದ ಪೆಟ್ರೋಲ್ ಬಂಕ್ ಅಷ್ಟೇ ಅಲ್ಲದೆ ತಳುಕಿನ ಬಳಿ ಮೂವತ್ತು ಎಕರೆ ಖುಷ್ಕಿ ಜಮೀನು ಹೊಂದಿದ್ದಾರೆ ಎನ್ನುವ ವಿಷಯ ಹೇಳಿದರು. “ಗಂಡು ಕೂಡ ತುಂಬಾ ಲಕ್ಷಣವಾಗಿದ್ದು ನಮ್ಮ ಸರೋಜಾಗೆ ಒಳ್ಳೆಯ ಜೋಡಿ, ದೇವರ ಕೃಪೆಯಿಂದ ಸರೋಜ ಈ ಮನೆ ಸೇರಿದರೆ ರಾಣಿಯ ಹಾಗೆ ಜೀವನ ಕಳೆಯುತ್ತಾಳೆ” ಎಂದು ನುಡಿಯುತ್ತಲೇ ತಮ್ಮ ಜುಬ್ಬಾದ ಬಲಜೇಬಿನಿಂದ ಒಂದು ಕಪ್ಪುಬಿಳುಪಿನ ಪಾಸ್ ಪೋರ್ಟ್ ಅಳತೆಯ ಫೋಟೋ ಒಂದನ್ನು ಹೊರತೆಗೆದ ಮೇಷ್ಟ್ರು ಅದನ್ನು ಹೆಂಡತಿಯ ಕೈಗಿಡುತ್ತಾ “ನೋಡು, ಹುಡುಗ ಎಷ್ಟು ವೈನಾಗಿದ್ದಾನೆ” ಎನ್ನುವ ಶಿಫಾರಸ್ಸಿನ ಮಾತನ್ನೂ ಸೇರಿಸಿದರು. ಆದರೆ ಇದ್ಯಾವುದರಲ್ಲೂ ಹೆಚ್ಚಿನ ಆಸಕ್ತಿ ತೋರದ ಗಂಗಮ್ಮ “ಜಾತಕವನ್ನು ನೋಡಿದಿರಾ?” ಎನ್ನುವ ತಮ್ಮ ಮಾಮೂಲು ಪ್ರಶ್ನೆಯನ್ನು ಎಸೆಯಲು “ಇಲ್ಲ. ಸದ್ಯಕ್ಕೆ ಜಾತಕ ಅವರ ಬಳಿ ಇರಲಿಲ್ಲ. ವೀರಭದ್ರಣ್ಣನವರ ಮಗ ಪಂಚಣ್ಣ ಹುಡುಗನ ತಂದೆಗೆ ಒಳ್ಳೆಯ ಪರಿಚಯವಂತೆ. ಚಳ್ಳಕೆರೆಗೆ ದಿನವೂ ಕೆಲಸದ ನಿಮಿತ್ತ ಹೋಗಿಬರುತ್ತಿರುವ ಪಂಚಣ್ಣನ ಕೈಲಿ ನಾಳೆ ಸಂಜೆಯ ಒಳಗಾಗಿ ಹುಡುಗನ ಕುಂಡಲಿ ಕೊಡುತ್ತಾರಂತೆ” ಎಂದು ತಿಪ್ಪಯ್ಯ ಮೇಷ್ಟ್ರು ನುಡಿಯಲಾಗಿ ದೂಸ್ರಾ ಮಾತಿಲ್ಲದೆ ಕುದಿಯುತ್ತಿದ್ದ ನೀರಿಗೆ ಜೋಳದಹಿಟ್ಟನ್ನು ಕಲೆಸಲು ಗಂಗಮ್ಮ ಅಡುಗೆಮನೆಗೆ ತೆರಳಿದರು. ತಾಯಿ ಪಡಸಾಲೆಯ ಸ್ಟೂಲಿನ ಮೇಲೆ ಇಟ್ಟಿದ್ದ ಫೋಟೋದ ಕಡೆ ಒಮ್ಮೆ ಕಣ್ಣಾಯಿಸಿದ ಸರೋಜಮ್ಮ ಹುಡುಗನ ಭಾವಚಿತ್ರ ಹೋದ ತಿಂಗಳು ದುರ್ಗದ ರೂಪವಾಣಿ ಥಿಯೇಟರ್ ನಲ್ಲಿ ನೋಡಿದ “ನಾಗರಹಾವು” ಚಲನಚಿತ್ರದ ರಾಮಾಚಾರಿಯನ್ನೇ ಥೇಟಾಗಿ ಹೋಲುತ್ತಿದ್ದದ್ದನ್ನು ನೋಡಿ ಒಂದು ಕ್ಷಣ ಮೈ ಮರೆತಳಾದರೂ ಮರುಕ್ಷಣದಲ್ಲಿಯೇ “ಜಾತಕಫಲ” ಚಲನಚಿತ್ರ ಕಣ್ಣಮುಂದೆ ಬಂದಂತಾಗಲು ಊಟ ಬಡಿಸಲು ತಾಯಿಗೆ ನೆರವಾಗುವ ನೆಪದಲ್ಲಿ ಅಡುಗೆಕೋಣೆಗೆ ಜಾರಿದಳು.

ಪಂಚಣ್ಣ ತಂದುಕೊಟ್ಟ ಚಳ್ಳಕೆರೆ ಗಂಡಿನ ಕುಂಡಲಿಯ ಗಂಭೀರ ಅಧ್ಯಯನಕ್ಕೆ ಮೊದಲಾದ ತಿಪ್ಪಯ್ಯ ಮೇಷ್ಟ್ರ ಕಪ್ಪುಮುಖ ಸುಮಾರು ಒಂದು ಅರ್ಧತಾಸಿನ ನಂತರ ಮತ್ತಷ್ಟು ಕಪ್ಪಿಟ್ಟಿತು. “ಗಂಗಾ, ಗಂಡಿನ ಕುಂಡಲಿ ಸರೋಜಳ ಕುಂಡಲಿಯೊಂದಿಗೆ ಸ್ವಲ್ಪವೂ ಹೊಂದಾಣಿಕೆಯಾಗುವುದಿಲ್ಲ. ಕನಿಷ್ಠ ಸಂಖ್ಯೆಯ ಗುಣಗಳೂ ಹೊಂದುವುದಿಲ್ಲ ಎಂದಮೇಲೆ ಈ ಹುಡುಗನ ವಿಚಾರದಲ್ಲಿ ಮುಂದುವರೆಯುವುದು ಅಸಾಧ್ಯ” ಎನ್ನುವ ತಮ್ಮ ಸುಪ್ರೀಂ ನಿರ್ಣಯವನ್ನು ಹೊರಹಾಕಿದರು. ಇಂತಹುದೇ ಅನಾಹುತವನ್ನು ನಿರೀಕ್ಷಿಸಿದ್ದ ಗಂಗಮ್ಮನಿಗೆ ಕುಂಡಲಿಯ ಫಲಿತಾಂಶ ಅಂತಹಾ ನಿರಾಶೆಯನ್ನು ಉಂಟುಮಾಡದೇ ಹೋದರೂ ಅಲ್ಲಿಯೇ ಪಡಸಾಲೆಯ ಮೂಲೆಯಲ್ಲಿ ಕುಳಿತು ಕಸೂತಿ ಕೆಲಸ ಮಾಡುತ್ತಿದ್ದ ಸರೋಜಮ್ಮನ ಮನಸ್ಸು ಮಾತ್ರ ಅಪ್ಪಯ್ಶನ ಈ ನುಡಿಗಳ ಕಾರಣ ಮುದುಡಿಹೋಯಿತು. ಹುಡುಗನ ಫೋಟೋದ ಒಂದು ಝಳಕಿನ ಕಾರಣದಿಂದ ರಾತ್ರಿಯಿಡೀ ನೂರಾರು ಸುಂದರ ಸ್ವಪ್ನಗಳನ್ನು ಹೆಣೆದಿದ್ದ ಸರೋಜಮ್ಮನ ಸುಪ್ತಮನಸ್ಸಿನ ಮೇಲೆ ಜಾತಕದ ಫಲಶ್ರುತಿ ಗಾಯದ ಬರೆಯನ್ನೇ ಎಳೆದಿತ್ತು.

ಹೀಗೆ ಮನೆಯಲ್ಲಿ ಎಲ್ಲರ ಮನಸ್ಸುಗಳೂ ಮುರಿದುಹೋಗಿದ್ದ ಹೊತ್ತು ತಿಪ್ಪಯ್ಯ ಮಾಸ್ತರ ದೂರದ ಸಂಬಂಧಿ ಕೂನಬೇವಿನ ಶಂಕರಪ್ಪಶಾಸ್ತ್ರಿಗಳು ಮಧ್ಯಾಹ್ನದ ಊಟದ ವೇಳೆಗೆ ಕೊಪ್ಪಳ ಮೂಲದ ವರನೊಬ್ಬನ ಕುಂಡಲಿಯ ಸಮೇತ ಐಯ್ನೋರ ಮನೆ ಪ್ರವೇಶಿಸಿದರು.ಈಗಾಗಲೇ ಶಂಕರಪ್ಪಶಾಸ್ತ್ರಿಗಳು ಸರೋಜಮ್ಮನಿಗೆ ಐದಾರು ಸಂಬಂಧಗಳನ್ನು ಹುಡುಕಿ ತಂದಿದ್ದರೂ ತಿಪ್ಪಯ್ಯನವರ ಜಾತಕದ ಹೊಂದಾಣಿಕೆಯ ತಿಕ್ಕಲಾಟದ ಪರಿಣಾಮ ಅವ್ಯಾವ ಸಂಬಂಧಗಳೂ ಫಲಿಸಿರಲಿಲ್ಲ. ಹೀಗಾಗಿ ಸರೋಜಮ್ಮನಿಗೆ ಗಂಡುಗಳನ್ನು ಸೂಚಿಸುವ ಕೆಲಸವನ್ನೇ ತಾತ್ಕಾಲಿಕರೂಪದಲ್ಲಿ ತೊರೆದಿದ್ದ ಶಾಸ್ತ್ರಿಗಳು ಅಕಸ್ಮಾತ್ ಆಗಿ ತಮ್ಮ ಕೈಸೇರಿದ ಕೊಪ್ಪಳದ ಗಂಡಿನ ಕುಂಡಲಿಯನ್ನು ಸರೋಜಮ್ಮನ ಕುಂಡಲಿಯೊಂದಿಗೆ, ತಮಗೆ ಗೊತ್ತಿದ್ದ ಅಷ್ಟೋ ಇಷ್ಟೋ ಜ್ಯೋತಿಷ್ಯದ ಆಧಾರದ ಮೇಲೆ ತಾಳೆಹಾಕಿ, ಇದು “ಅಣ್ಣನವರ ಮಗಳಿಗೆ ಸರಿಹೋದೀತು” ಎನ್ನುವುದನ್ನು ಒಂದು ಹಂತದವರೆಗೆ ಖಾತ್ರಿ ಮಾಡಿಕೊಂಡೇ ಮೇಷ್ಟ್ರ ಮನೆ ಬಾಗಿಲು ತುಳಿದಿದ್ದರು. ಶಾಸ್ತ್ರಿಗಳು ತಂದ ಕುಂಡಲಿಯನ್ನು ತಮ್ಮ ಜಾತಕದ ತೀಕ್ಷ್ಣ ಒರೆಗಲ್ಲಿಗೆ ಉಜ್ಜುತ್ತಾ ಹೋದ ತಿಪ್ಪಯ್ಯ ಮೇಷ್ಟ್ರ ಮುಖ ಅರಳುತ್ತಾ, ಅರಳುತ್ತಾ ಸಾಗಿ ಕೊನೆಗೊಮ್ಮೆ ಊರಗಲವಾಯಿತು. “ಶಹಭಾಷ್, ಈ ಕುಂಡಲಿ ಸರೋಜನ ಜಾತಕಕ್ಕೆ ನೂರಕ್ಕೆ ನೂರರಷ್ಟು ಹೊಂದಿಕೆ ಆಗುತ್ತದೆ” ಎಂದು ಯುರೇಕಾ ಮಾದರಿಯಲ್ಲಿ ಕೂಗಿಕೊಂಡ ಗಂಡನ ಮಾತು ಅಡುಗೆ ಮನೆಯಲ್ಲಿ ಬಂದ ಅತಿಥಿಯ ಭೋಜನದ ತಯಾರಿಯಲ್ಲಿದ್ದ ಗಂಗಮ್ಮನ ಕಿವಿಗಳನ್ನು ತೂರಿತು. ತನ್ನ ಕಿವಿಗಳನ್ನು ತಾನೇ ನಂಬದ ಗಂಗಮ್ಮ ಕೈಯಲ್ಲಿ ಸಾರಿನಸೌಟು ಹಿಡಿದೇ ಪಡಸಾಲೆಗೆ ಬಂದವರು “ಏನಣ್ಣಾ, ಹುಡುಗ ಏನು ಮಾಡಿಕೊಂಡಿದ್ದಾನೆ?” ಎನ್ನುವ ನೇರಪ್ರಶ್ನೆಯನ್ನು ಶಾಸ್ತ್ರಿಗಳಿಗೆ ಹಾಕಲಾಗಿ “ಹುಡುಗ ಡಾಕ್ಟ್ರು, ಗಂಗಾವತಿಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿದ್ದಾನೆ” ಎನ್ನುವ ಶಾಸ್ತ್ರಿಗಳ ಮಾತು ಕೇಳಿ ಗಂಗಮ್ಮನಿಗೆ ಆಕಾಶ ಮೂರೇ ಗೇಣು ಉಳಿದಿತ್ತು. ಅಂತೂ ಇಂತೂ ಮಗಳಿಗೆ ಭಗವಂತ ಒಳ್ಳೆಯ ಕಡೆಯೇ ಸಂಬಂಧ ತಂದಿದ್ದಾನೆ ಎಂದು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಬರುವ ಸೋಮವಾರದ ದಿನ ಕಾರ್ತೀಕದ ಹರಕೆ ಹೊತ್ತುಕೊಂಡ ಗಂಗಮ್ಮ ಗಂಡನ ಕಡೆ ಒಮ್ಮೆ ದೃಷ್ಟಿ ಬೀರಲಾಗಿ ಆನಂದದಲ್ಲಿ ಮುಳುಗಿ ತೇಲುತ್ತಿದ್ದ ಗಂಡನ ಮುಖಕಮಲ ಗಂಗಮ್ಮನಿಗೆ ಮೌನವಾಗಿಯೇ ಸಾವಿರ ಭರವಸೆಗಳ ಉಡುಗೊರೆ ನೀಡಿತ್ತು.

ಮುಂದೆ ಒಂದು ತಿಂಗಳ ಒಳಗೆ ಆಗಬೇಕಾದ ಎಲ್ಲಾ ಕಾರ್ಯಗಳೂ ಹೂವು ಎತ್ತಿದಂತೆ ಸುಸೂತ್ರವಾಗಿ ನಡೆದು ಗಂಡುಹೆಣ್ಣು ಪರಸ್ಪರ ಒಪ್ಪಿ, ಎರಡೂ ಮನೆಯವರೂ ಮನಸಾರೆ ಈ ಸಂಬಂಧವನ್ನು ಹರಸಿ ಆಶೀರ್ವದಿಸಿದ ಕಾರಣ ಮೇಷ್ಟ್ರು ಮಗಳ ನಿಶ್ಚಯ ಕಾರ್ಯವನ್ನೂ ಮುಗಿಸಿ ಮುಂದಿನ ಎರಡು ತಿಂಗಳುಗಳ ಒಳಗೆ, ತಾವೇ ನಿರ್ಧರಿಸಿದ ಶುಭಮುಹೂರ್ತವೊಂದರಲ್ಲಿ ಹುಡುಗನ ಊರು ಕೊಪ್ಪಳದ ಛತ್ರವೊಂದರಲ್ಲಿ ಮಗಳ ವಿವಾಹಕಾರ್ಯವನ್ನು ತಮ್ಮ ಕೈಲಾದ ಮಟ್ಟಿಗಿನ ವಿಜೃಂಭಣೆಯೊಂದಿಗೆ ಸಡಗರದಿಂದ ನೆರವೇರಿಸಿದರು. ಅಂತೂ ಇಂತೂ ತಾವು ಹಿಡಿದ ಹಠ ಫಲಿಸಿ, ಮಗಳಿಗೆ ವಿದ್ಯಾವಂತ, ಸ್ಫುರದ್ರೂಪಿಯಾದ ಅಳಿಯ ಡಾಕ್ಟರ್ ಕೊಟ್ರೇಶ್ ದೊರೆತಿದ್ದು ತಿಪ್ಪಯ್ಯ ಮೇಷ್ಟ್ರ ಖುಷಿಯನ್ನು ನೂರ್ಮಡಿಸಿತ್ತು. ತಾಯಿ ಗಂಗಮ್ಮನ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ಮದುವೆಯ ಕೇವಲ ವಾರದ ಒಳಗೇ ಸರ್ಕಾರಿ ಶಿಕ್ಷಕಿಯ ಹುದ್ದೆ ಸರೋಜಮ್ಮನನ್ನು ಹುಡುಕಿಕೊಂಡು ಬರಲಾಗಿ, ಗಂಗಾವತಿಯಲ್ಲಿಯೇ ತನ್ನ ಮೊದಲ ನೇಮಕಾತಿಯನ್ನು ಗಂಡನ ಕಡೆಯವರ ಪ್ರಭಾವವನ್ನು ಬಳಸುವ ಮೂಲಕ ಸಾಧಿಸಿದ ಸರೋಜಮ್ಮನ ಹೊಸಸಂಸಾರ ಗಂಗಾವತಿಯಲ್ಲಿ ವಾಸ್ತವ್ಯ ಹೂಡಿತು. ವರ್ಷ ಒಪ್ಪತ್ತು ಕಳೆಯುವುದರಲ್ಲಿಯೆ ಮುದ್ದಾದ ಮಗ ವಿಶ್ವನಾಥ ತನ್ನ ಮಡಿಲಿಗೆ ಬಂದು ಬಿದ್ದಾಗ ಸರೋಜಮ್ಮನಿಗೆ ಆದ ಸಂತೋಷಕ್ಕಿಂತ ಸಹಸ್ರಪಾಲು ಹೆಚ್ಚಿನ ಸಂತೋಷ ತಿಪ್ಪಯ್ಯ ದಂಪತಿಗಳ ಪಾಲಿನದಾಯಿತು.

ಆದರೆ ಮೇಷ್ಟ್ರಿಗೆ ಗೊತ್ತಿದ್ದ ವಿಷಯವೊಂದು ವಿಧಿಗೆ ಗೊತ್ತಿರಲಿಲ್ಲ ಅನ್ನಿಸುತ್ತೆ, ಮಗು ಹುಟ್ಟಿದ ಆರು ತಿಂಗಳ ಒಳಗೇ ಚಳಿಜ್ವರ ಎಂದು ಕೇವಲ ಮೂರ್ನಾಲ್ಕು ದಿನ ಮಾತ್ರ ಹಾಸಿಗೆ ಹಿಡಿದ ಡಾಕ್ಟರ್ ಕೊಟ್ರೇಶ್ ತಜ್ಞವೈದ್ಯರ ಶುಶ್ರೂಷೆಯ ಹೊರತಾಗಿಯೂ ಹೆಂಡತಿ, ಮಗುವನ್ನು ಅನಾಥ ಮಾಡಿ ವಿಧಿವಶನಾದ. ನೂರಕ್ಕೆ ನೂರರಷ್ಟು ಹೊಂದುವ ಕುಂಡಲಿಗಳ ಗಂಡುಹೆಣ್ಣುಗಳ ಸಂಸಾರ ಬಂಧನವನ್ನು ಮುರಿಯಬಾರದು ಎನ್ನುವ ಒಂದು ಸಣ್ಣ ನಿಯಮವನ್ನು ವಿಧಿಗೆ ಯಾರೂ ತಿಳಿಸಿ ಹೇಳಿರಲಿಲ್ಲವೇ? ಪ್ರಾಣವನ್ನು ಸೆಳೆಯುವ ಯಮಧರ್ಮನಿಗೂ ಜೋತಿಷ್ಯದ ಪ್ರಾಥಮಿಕ ಜ್ಞಾನ ಇಲ್ಲವಾಯಿತೆ? ಮಗಳಿಗೆ ಬಂದೆರಗಿದ ದುರ್ದೆಸೆ ತಿಪ್ಪಯ್ಯ ಮೇಷ್ಟ್ರ ಜಂಘಾಬಲವನ್ನೇ ಉಡುಗಿಸಿತು. ನೂರಾರು ಊರು ಸುತ್ತಿ, ಎರಡು ವರ್ಷಗಳ ಕಾಲ ಹಂಬಲಿಸಿ, ಅಲೆದು, ಜಾತಕಗಳ ಸಕಲ ಗುಣಗಳೂ ಪರಸ್ಪರ ತಾಳೆಯಾಗುವುದನ್ನು ಖಾತ್ರಿ ಮಾಡಿಕೊಂಡೆ ಜರುಗಿಸಿದ ಮಗಳ ವಿವಾಹದ ಫಲಶ್ರುತಿ ಇದು ಎಂದಾದರೆ ವಿವಾಹಪೂರ್ವ ಜಾತಕಗಳನ್ನು ಹೊಂದಿಸಿ ನೋಡುವುದು ಯಾವ ಪುರುಷಾರ್ಥಕ್ಕೆ? ಇವೆಲ್ಲಾ ತರಲೆ ತಾಪತ್ರಯಗಳು ಯಾವ ಪ್ರಯೋಜನಕ್ಕಾಗಿ? ಜಾತಕ ಫಲಗಳನ್ನೂ ಮೀರಿದ ಹಣೆಬರಹ ಒಂದಿದೆಯಾ? ಭಗವಂತನ ಇಚ್ಛೆಯನ್ನು ಜಾತಕಗಳ ಮೂಲಕ ಮುಂದಾಗಿ ತಿಳಿದುಕೊಳ್ಳುವ ವ್ಯವಸ್ಥೆಯೇ ತಪ್ಪುಗಳಿಂದ ಕೂಡಿದೆಯಾ? ತಲೆತಲಾಂತರಗಳಿಂದ ತಮ್ಮ ಪೂರ್ವಿಕರು ನಂಬಿಕೊಂಡು, ಆಚರಣೆಯಲ್ಲಿ ತಂದ “ಕುಂಡಲಿಸಾಮ್ಯ” ಒಂದು ಭ್ರಮೆ ಮಾತ್ರವಾ? ಜಾತಕ ಹೊಂದಾಣಿಕೆಯ ಗೋಜನ್ನು ಕೈಬಿಟ್ಟು, ಚಳ್ಳಕೆರೆಯ ವರನನ್ನು ವರಿಸಿದ್ದರೆ ಇವತ್ತು ಮಗಳು ವಿಧವಾಪಟ್ಟದಿಂದ ದೂರ ಉಳಿಯುತ್ತಿದ್ದಳೇ? ಹೀಗೇ, ಇಂತಹುದೇ ಅಸಂಖ್ಯ ಪ್ರಶ್ನೆಗಳು ಮೇಷ್ಟ್ರ ಮನಸ್ಸಿನಲ್ಲಿ ಹುತ್ತ ಕಟ್ಟುತ್ತಿರುವಾಗ ನನ್ನ ಇಚ್ಛೆಯನ್ನು ಮೀರಿ, ತಾವು ಕಲಿತ ಗೊಡ್ಡುಶಾಸ್ತ್ರದ ಬೆನ್ನುಹತ್ತಿ, ಮಗಳ ಪಾಲಿಗೆ ಬಂದ ಒಂದಕ್ಕಿಂತ ಒಂದು ಘನವಾದ ಸಂಬಂಧಗಳನ್ನು ನಿರಾಕರಿಸಿದ ಪತಿಯ ಮೇಲಿನ ಗಂಗಮ್ಮನವರ ಮನಸ್ಸಿನ ಒಳಗಿನ ವರುಷಗಳ ಸಿಟ್ಟು ತಾರಕಕ್ಕೇರಿ ಜ್ವಾಲಾಮುಖಿಯಾಗಿ ಒಡೆಯುವುದರಲ್ಲಿತ್ತು. ಗಂಡನ ಶವದ ಮುಂದೆ ರೋಧಿಸುತ್ತಾ ಕುಳಿತ ಸರೋಜಮ್ಮನ ಅತ್ತೂಅತ್ತೂ ಕೆಂಪಾಗಿದ್ದ ಬಟ್ಟಲು ಕಣ್ಣುಗಳು ಮೇಷ್ಟ್ರ ಕಡೆಗೆ ತಿರುಗಲು ಕೆದರಿದ ಕೂದಲು, ಹಣೆಯ ಮೇಲಿನ ದೊಡ್ಡಬಟ್ಟಿನ ಕುಂಕುಮದ ಹಿನ್ನೆಲೆಯಲ್ಲಿ ಮಗಳನ್ನು ಅಶ್ರುಭರಿತ ಕಣ್ಣಾಲಿಗಳಲ್ಲಿ ತುಂಬಿಕೊಂಡ ಐಯ್ನೋರಿಗೆ ಮಗಳ ರೂಪದಲ್ಲಿ ಸಾಕ್ಷಾತ್ ಚಾಮುಂಡಿ ದೇವಿಯ ದರ್ಶನವಾದ ಹಾಗೆ ತೋರಿತು. “ಪ್ರತಿ ಹೆಣ್ಣೂ ನನ್ನ ರೂಪವೇ, ನನ್ನನ್ನು ಸುಮಂಗಲಿ ಮಾಡುವ ಹೊತ್ತು ಕುಂಡಲಿ ಹೊಂದಾಣಿಕೆಯಂತಹ ಬುಡವಿಲ್ಲದ ವಿದ್ಯೆಯ ಆಧಾರದಲ್ಲಿ ಹೆಣ್ಣೊಬ್ಬಳ ಭವಿಷ್ಯದೊಡನೆ ಆಟವಾಡುವ ಪ್ರಯತ್ನವನ್ನು ಇನ್ನಾದರೂ ಬಿಟ್ಟುಬಿಡು” ಎನ್ನುವ ಆದೇಶ ಚಾಮುಂಡಿಯ ಮುಖಮಂಡಲದಿಂದಲೆ ಬಂದಂತಾಗಲು ತಿಪ್ಪಯ್ಯ ಮೇಷ್ಟ್ರು ಮುಂದೆ ಎಂದೂ ಯಾವ ಜಾತಕಗಳನ್ನೂ, ಎಂತಹ ಸನ್ನಿವೇಶಗಳಲ್ಲಿಯೂ, ಹೊಂದಾಣಿಕೆ ಮಾಡುವ ಪ್ರಯತ್ನಗಳು ಒತ್ತಟ್ಟಿಗಿರಲಿ, ಕೈಯಿಂದ ಮುಟ್ಟವ ಸಾಹಸವನ್ನೂ ಮಾಡಲಿಲ್ಲ. ಇಲ್ಲಿಂದ ಮುಂದೆ ಮದುವೆಗಳ ಪೌರೋಹಿತ್ಯವನ್ನು ಶಾಶ್ವತವಾಗಿ ತೊರೆದ ಐಯ್ನೋರ ಮನಸ್ಸಿನಲ್ಲಿ ಸಂಭವಿಸಿರಬಹುದಾದ ‘ಮಹಾಭಾರತ’ ಯುದ್ದಕ್ಕಿಂತ ಭೀಷಣವಾದ ಮಾನಸಿಕ ತುಮುಲವನ್ನು ಸಮಗ್ರರೂಪದಲ್ಲಿ ಅರ್ಥೈಸಿಕೊಳ್ಳುವಲ್ಲಿನ ನನ್ನ ವೈಫಲ್ಯವನ್ನು ನಾನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿದವನಾಗಿದ್ದೇನೆ.

ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್

ನನ್ನ ಬುತ್ತಿಯನ್ನು ಕೊಡು” ಎಂದು ಐಯ್ನೋರ ತಿಪ್ಪಯ್ಯ ಮೇಷ್ಟ್ರು ಅಡುಗೆಮನೆಯಲ್ಲಿದ್ದ ತಮ್ಮ ಧರ್ಮಪತ್ನಿ ಗಂಗಮ್ಮನನ್ನು ಕೂಗಿದ ಸದ್ದು ಮುಂಬಾಗಿಲನ್ನು ಸೀಳಿ ಹೊರಬಂದು ಮೇಷ್ಟ್ರ ಮನೆಯ ಎದುರಿನ ರಸ್ತೆಯಲ್ಲಿ ನಡೆಯತ್ತಾ ಸಾಗಿದ್ದ ನನ್ನ ಕಿವಿಗಳನ್ನು ಅಪ್ಪಳಿಸಿತು. ಅನಿತ ದೂರದಲ್ಲಿಯೇ ಇದ್ದ ಅನಂತಶೆಟ್ಟಿ ಅಂಗಡಿಗೆ ಹೋಗಿ ತಾತನ ಶನಿವಾರದ ತಿರುಪತಿ ತಿಮ್ಮಪ್ಪನ ಪೂಜೆಗೆಂದು ತೆಂಗಿನಕಾಯಿ ತರಬೇಕಾಗಿದ್ದ ಆತುರದಲ್ಲಿದ್ದ ನಾನು ಈ ಮಾತುಗಳನ್ನು ಕೇಳಿಸಿಕೊಂಡು ಒಂದು ಕ್ಷಣ ರಸ್ತೆಯ ನಡುವಲ್ಲೇ ನಿಂತು ಮೇಷ್ಟ್ರ ಮನೆಯ ಒಳಗೆ ಇಣುಕುತ್ತಾ ಅಲ್ಲಿ ಬೆಳ್ಳಂಬೆಳಿಗ್ಗೆ ನಡೆಯುತ್ತಿದ್ದ ಬಿಸಿಬಿಸಿ ವಿದ್ಯಮಾನಗಳಿಗೆ ಸಾಕ್ಷಿ ಎನಿಸಿದೆ. ತಿಪ್ಪಯ್ಯ ಮೇಷ್ಟ್ರು ಎರಡನೇ ತರಗತಿಯಲ್ಲಿ ನನ್ನ ಗುರುಗಳಾಗಿದ್ದವರು. ಅದೇ ವರ್ಷ ಸೇವೆಯಿಂದ ನಿವೃತ್ತಿ ಹೊಂದಿದ್ದರು ಕೂಡ. “ಶುಭಘಳಿಗೆ ಮೀರಿ ಹೋಗುತ್ತಿದೆ, ಇನ್ನು ಐದು ನಿಮಿಷಗಳ ಒಳಗೆ ನಾನು ಮುಂಬಾಗಿಲನ್ನು ದಾಟಿ ಹೊರನಡೆಯದೆ ಇದ್ದರೆ ಇವತ್ತು ಚಳ್ಳಕೆರೆಗೆ ಹೋಗಲಾಗುವುದಿಲ್ಲ. ಯಾಕಿಷ್ಟು ತಡ ಮಾಡುತ್ತಿದ್ದೀಯ? ನಿನ್ನೆ ಬೆಳಿಗ್ಗೆಯಿಂದಲೇ ನಿನಗೆ ನೂರು ಬಾರಿ ನನ್ನ ಇವತ್ತಿನ ಪ್ರಯಾಣದ ಬಗ್ಗೆ ತಿಳಿಸಿದ್ದೇನೆ” ಎಂದು ಮೇಷ್ಟ್ರು ಏರಿದ ಧ್ವನಿಯಲ್ಲಿ ಗಂಗಮ್ಮನ ಮೇಲೆ ರೇಗಾಡುತ್ತಿರುವ ಹೊತ್ತು ಮೇಷ್ಟ್ರ ಕಿರಿಯ ಮಗ ‘ಗುಬ್ಬಿ’ ಪ್ರಭಾಕರ ಅಡುಗೆಮನೆಯಿಂದ ಓಡಿ ಬಂದವನು ಅಪ್ಪನ ಕೈಗೆ ಬುತ್ತಿಚೀಲವನ್ನು ಮಡುಗಲು, ತಕ್ಷಣದಲ್ಲಿ ಅದನ್ನು ಕಂಕುಳದಲ್ಲಿ ಅವಿತಿಟ್ಟುಕೊಂಡ ತಿಪ್ಪಯ್ಯ ಮೇಷ್ಟ್ರು, “ಹೋಗಿಬರುತ್ತೇನೆ” ಎಂದು ಹೆಂಡತಿಗೆ ಹೇಳುವ ವ್ಯವಧಾನವನ್ನೂ ಮೆರೆಯದೆ ಆತುರಾತುರವಾಗಿ ಮುಂಬಾಗಿಲನ್ನು ದಾಟಿ ಮನೆಯ ಮುಂದಿನ ಟಾರ್ ರಸ್ತೆಗೆ ಇಳಿದರು. ಈ ವೇಳೆಗಾಗಲೇ ಮೇಷ್ಟ್ರ ಮನೆಯನ್ನು ದಾಟಿ ಸ್ವಲ್ಪ ಮುಂದೆ ನಡೆದಿದ್ದ ನಾನು ಬಾಲ್ಯಸಹಜ ಕುತೂಹಲದಿಂದಾಗಿ ಒಮ್ಮೆ ಹಿಂತಿರುಗಿ ನೋಡಿ ಮೇಷ್ಟ್ರ ಕಾಲಲ್ಲಿ ಚಪ್ಪಲಿಗಳು ಎಂದಿನ ಹಾಗೇ ಇಂದೂ ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡೆ.

ಕುಳ್ಳಗೆ, ಕಪ್ಪಾಗಿ, ಒಂಟಿಮೂಳೆಯ ಅಸ್ಥಿಯ ಮೇಲೆ ಕೃಷ ಶರೀರವನ್ನು ಹೊದ್ದಿದ್ದ ತಿಪ್ಪಯ್ಯ ಮೇಷ್ಟ್ರ ನೆನಪು ನನ್ನಲ್ಲಿ ಉಳಿದಿರುವುದಕ್ಕೆ ಮುಖ್ಯಕಾರಣ ಎಂದರೆ ದೀಪಗಳಂತೆ ಬೆಳಗುತ್ತಿದ್ದ ಅವರ ಬಿಳಿಯ ಜೋಡಿಕಣ್ಣುಗಳು. ಕಪ್ಪುಮುಖದ ಹಿನ್ನೆಲೆಯಲ್ಲಿ ದೈದೇಪ್ಯಮಾನವಾಗಿ ಹೊಳೆಯುತ್ತಿದ್ದ ಮೇಷ್ಟ್ರ ಕಣ್ಣುಗಳು ನನ್ನಲ್ಲಿ ಅನೇಕ ಬಾರಿ ಗೊಂದಲಮಿಶ್ರಿತ ಭಯವನ್ನು ಹುಟ್ಟು ಹಾಕಿದ್ದೂ ಉಂಟು. ಸ್ವಭಾವತಃ ಕೋಪಿಷ್ಠ ವ್ಯಕ್ತಿಯೇ ಆದ ಮೇಷ್ಟ್ರು ತಾವು ಯಾವಾಗಲೂ ಕಾಲಿನಿಂದ ನಾಲ್ಕು ಬೊಟ್ಟು ಮೇಲೇ ಇರುವಂತೆ ಧರಿಸುತ್ತಿದ್ದ ಮಕ್ಮಲ್ ಪಂಚೆಯ ಒಂದು ತುದಿಯನ್ನು ಸದಾ ಎಡಗೈನಿಂದ ಹಿಡಿದು ಬಲಕಂಕುಳಲ್ಲಿ ಒಂದು ಬುತ್ತಿಚೀಲವನ್ನು ಸಿಗಿಸಿಕೊಂಡು ಚಪ್ಪಲಿ ಮೆಟ್ಟದ ಕಾಲುಗಳಲ್ಲಿ ವೇಗವಾಗಿ ಪಟಪಟನೆ, ಗಾಳಿಯಲ್ಲಿ ಹಾರಿದಂತೆ ನಡೆಯುತ್ತಾ ಫ್ಲೈಯಿಂಗ್ ಸಿಖ್ ಮಿಲ್ಕಾಸಿಂಗ್ ರನ್ನು ನೆನಪಿಸುತ್ತಿದ್ದರೆ ಬಹಳಷ್ಟು ದೂರದಿಂದಲೇ ಜನ ತಿಪ್ಪಯ್ಯನವರ ಬರುವನ್ನು ಗುರುತಿಸುತ್ತಿದ್ದರು. ಮೈಮೇಲೆ ಜಾಳುಜಾಳಾದ, ದೊಗಲೆಯಾದ ಬಿಳೀಜುಬ್ಬಾ, ಎಡಹೆಗಲ ಮೇಲೊಂದು ಕೆಂಪುವಸ್ತ್ರವನ್ನು ಹೊದ್ದುಕೊಂಡು ಮೇಷ್ಟ್ರು ಬಸ್ ಸ್ಟ್ಯಾಂಡ್ ಕಡೆ ನಡೆದು ಹೋಗುತ್ತಿದ್ದಾರೆ ಎಂದರೆ ಅವರು ಯಾವ ಕಾರ್ಯನಿಮಿತ್ತ ಹೊರಟಿರಬಹುದು ಎಂದು ಊಹೆ ಮಾಡುವ ಅಗತ್ಯ ಊರ ಬಹಳ ಮಂದಿಗೆ ಇರಲಿಲ್ಲ.

ನಿವೃತ್ತಿಯ ನಂತರದ ಕಳೆದ ಎರಡು ವರ್ಷಗಳ ಕಾಲ ಮನೆಯಲ್ಲಿ ಬೆಳೆದು ನಿಂತ ಮಗಳು ಸರೋಜಮ್ಮನಿಗೆ ಗಂಡು ಹುಡುಕುವ ಏಕೈಕ ಪ್ರಯತ್ನದಲ್ಲಿ ತಿಪ್ಪಯ್ಯನವರು ನಿರತರಾಗಿರುವುದು ಊರ ಬಹುತೇಕ ಮಂದಿಗೆ ವೇದ್ಯವಾದ ಸಂಗತಿಯೇ ಆಗಿತ್ತು. ಮೇಷ್ಟ್ರು ಮಗಳಿಗಾಗಿ ವರ ಹುಡುಕಿಕೊಂಡು ಅಲೆಯದ ಊರು ಕೇರಿಗಳೇ ಸುತ್ತಲಿನ ನೂರು ಕಿಲೋಮೀಟರ್ ಫಾಸಲೆಯಲ್ಲಿ ಇಲ್ಲ ಎಂದು ಎದೆತಟ್ಟಿ ಹೇಳಬಹುದಿತ್ತು. ಲಿಂಗಾಯತರ ಗುರುಗಳೆಂದೇ ಗಣಿತವಾದ ಜಂಗಮಕುಲಕ್ಕೆ ಸೇರಿದ ಮೇಷ್ಟ್ರು ತಮ್ಮ ಜಾತಿಯ ಗಂಡು ಇಂತಹ ಊರಿನಲ್ಲಿ ಇದ್ದಾನೆ ಎನ್ನುವ ಸಣ್ಣಸುಳಿವು ಸಿಕ್ಕದರೂ ಸಾಕು, ಮರುದಿನವೇ ಶುಭಮುಹೂರ್ತವನ್ನು ನೋಡಿಕೊಂಡು ವರನ ಅನ್ವೇಷಣೆಯಲ್ಲಿ ತೆರಳುತ್ತಿದ್ದರು. ಈ ಎರಡು ವರ್ಷಗಳ ಕಾಲ ಇದ್ದಬದ್ದ ಹತ್ತಿರದ ಹಳ್ಳಿಕೆರೆಗಳೆಲ್ಲವೂ ಮೇಷ್ಟ್ರ ಅವಗಾಹನೆಗೆ ಒಳಗಾಗಿ, ಅಲ್ಲೆಲ್ಲಿಯೂ ಮಗಳಿಗೆ ಸೂಕ್ತ ಸಂಬಂಧ ಇಲ್ಲವೆಂದು ಖಾತ್ರಿಯಾದ ತರುವಾಯ,ಈಗೀಗ ದೂರದ ಊರುಗಳಿಗೆ ವರಾನ್ವೇಷಣೆಯ ನಿಮಿತ್ತ ಹೋಗಬೇಕಾದ ಅನಿವಾರ್ಯ ಪ್ರಸಂಗ ಐಯ್ನೋರಿಗೆ ಎದುರಾಗಿತ್ತು. ಹತ್ತಿರದ ಹಳ್ಳಿಗಳಿಗೆ, ಅಂದರೆ ಹತ್ತು ಹನ್ನೆರೆಡು ಕಿಲೋಮೀಟರ್ ದೂರದ ಸರಹದ್ದಿನ ಒಳಗೇ ಇರುವಂತಹ ಊರುಗಳಿಗೆ ವರಾನ್ವೇಷಣೆಯ ಶುರುವಿನ ದಿನಗಳಲ್ಲಿ ನಡೆದೇ ಹೋಗಿ ಬಂದು ಮಾಡುತ್ತಿದ್ದ ಮೇಷ್ಟ್ರು ದೂರದ ಊರುಪಟ್ಟಣಗಳಿಗೆ ಎಡತಾಕುವ ಕಾರಣದಿಂದಾಗಿ ಇತ್ತೀಚೆಗೆ ಲೈನ್ ಬಸ್ಸುಗಳನ್ನು ಅವಲಂಬಿಸಬೇಕಾಗಿತ್ತು. ಹೋದ ಎಲ್ಲಿಯೂ, ಯಾರ ಮನೆಗಳಲ್ಲಿಯೂ ಒಂದು ಲೋಟ ನೀರನ್ನೂ ಸೇವಿಸದ ಮೇಷ್ಟ್ರು ತಾವು ಮನೆಯಿಂದ ಕಟ್ಟಿಕೊಂಡು ಬಂದ ಮೊಸರನ್ನದ ಬುತ್ತಿಯ ಜೊತೆಗೆ ಕೆಂಪುಚಟ್ನಿ ಮತ್ತು ಗುರೆಳ್ಳುಪುಡಿಗಳನ್ನು ನಂಜಿಕೊಳ್ಳುತ್ತಾ ಯಾವುದಾದರೂ ಮರದ ನೆರಳಿನಲ್ಲಿ ಕೂತು ಮಧ್ಯಾಹ್ನದ ತಮ್ಮ ಭೂರಿಭೋಜನವನ್ನು ಮುಗಿಸಿದರಾದರೆ ಊರಿಗೆ ಮರಳುವವರೆಗೂ ಮತ್ತೇನನ್ನೂ ಸೇವಿಸುತ್ತಿರಲಿಲ್ಲ. ಇಂತಿಪ್ಪ ಮೇಷ್ಟ್ರ ವಿಷಯದಲ್ಲಿ “ಸೂಕ್ತವರನಿಗಾಗಿ ಚಪ್ಪಲಿ ಸವೆಯುವ ಹಾಗೆ ಅಲೆದರು” ಎಂದು ಹೇಳುವುದು ವಾಸ್ತವವಾಗಿ ಕಾಲಲ್ಲಿ ಎಂದೂ ಚಪ್ಪಲಿ ತೊಡದ ತಿಪ್ಪಯ್ಯ ಮೇಷ್ಟ್ರ ವಿಷಯದಲ್ಲಿ ವಸ್ತುನಿಷ್ಠ ವಿವರಣೆ ಅನ್ನಿಸದೇ ಹೋಗುವ ಅಪಾಯವಿದ್ದರೂ, ಒಂದು ಪಕ್ಷ ಮೇಷ್ಟ್ರೆನಾದರೂ ಚಪ್ಪಲಿಗಳನ್ನು ತೊಟ್ಟೇ ವರಾನ್ವೇಷಣೆ ನಡೆಸಿದ್ದಲ್ಲಿ ಹತ್ತಾರು ಜೋಡಿ ಚಪ್ಪಲಿಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸವೆಯುತ್ತಿದ್ದವು ಎನ್ನುವುದು ಮೇಷ್ಟ್ರೇ ಲಾಗಾಯ್ತಿನಿಂದ ನಡೆಸಿಕೊಂಡು ಬಂದ ಸರ್ಕಾರಿ ಶಿಕ್ಷಕವೃತ್ತಿಯ ಮತ್ತೊಂದು ಮಗ್ಗುಲಾದ ಕುಲಕಸುಬಿನ ಪೌರೋಹಿತ್ಯದ ಪ್ರವೃತ್ತಿ ಕಾಯಕದಷ್ಟೆ ದಿಟವಾದದ್ದು ಎನ್ನುವುದನ್ನು ಇಲ್ಲಿ ಒತ್ತಿ ಹೇಳಬೇಕು. ಊರಲ್ಲಿ ಸರಿಸುಮಾರು ನೂರೈವತ್ತು ಮನೆಗಳಿಗಿಂತ ಹೆಚ್ಚಾಗಿದ್ದ ಲಿಂಗಾಯತ ಜಾತಿಯವರ ನಾಮಕರಣ, ಹಿರಿಯರ ಹಬ್ಬ, ಲಿಂಗಧಾರಣೆ, ಮದುವೆಯೇ ಮುಂತಾದ ಶುಭಕಾರ್ಯಗಳ ಒಟ್ಟಿಗೇ ಸಾವು, ಸೂತಕಗಳ ಅಶುಭಕಾರ್ಯಗಳ ವೇಳೆಯೂ ತಿಪ್ಪಯ್ಯ ಮೇಷ್ಟ್ರು ಈ ಸಮಾಜಕ್ಕೆ ಬೇಕಾದ ಅನಿವಾರ್ಯವ್ಯಕ್ತಿಯಾಗಿ ಹೋಗಿದ್ದರು. ಊರಿನಲ್ಲಿ ವೀರಭದ್ರಯ್ಯ ಸ್ವಾಮಿಗಳ ರೂಪದಲ್ಲಿ ಮತ್ತೊಬ್ಬ ಜಂಗಮಗುರುಗಳು ಪೌರೋಹಿತ್ಯದ ಕಾರ್ಯಗಳನ್ನು ಸಂಪನ್ನಗೊಳಿಸುತ್ತಿದ್ದರಾದರೂ ತಿಪ್ಪಯ್ಯನವರು ಲಿಂಗಾಯತ ಮನೆಗಳ ಮೊದಲ ಆಯ್ಕೆಯಾಗಿದ್ದರು. ಕಾರ್ಯಗಳಿಗೆ ಬೇಕಾದ ವಸ್ತುವಿಶೇಷಗಳ ಕುರಿತು ಹೆಚ್ಚು ಬೇಡಿಕೆಗಳನ್ನು ಇಡದೆ, ಇಂತಹುದೇ ಸಾಮಾಗ್ರಿ ಇಂತಿಷ್ಟೇ ಪ್ರಮಾಣದಲ್ಲಿ ಬೇಕು, ಇಂತಹವರ ಅಂಗಡಿಯಲ್ಲಿ ತಂದಿದ್ದೇ ಆಗಬೇಕು ಎನ್ನುವ ಹಠ ಮಾಡದೆ ಲಭ್ಯವಿದ್ದ ಪರಿಕರಗಳಲ್ಲಿಯೇ ತಕ್ಕಮಟ್ಟಿಗೆ, ಶಾಸ್ತ್ರೋಕ್ತ ರೀತಿಯಲ್ಲಿಯೇ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದ ತಿಪ್ಪಯ್ಯನವರು ಎಂದೂ ದಕ್ಷಿಣೆಯ ವಿಚಾರವಾಗಿ ಕಿರಿಕಿರಿ ಮಾಡಿದವರೇ ಅಲ್ಲ. ವೀರಭದ್ರಯ್ಯ ಸ್ವಾಮಿಗಳ ವ್ಯವಹಾರ ಇದಕ್ಕೆ ತದ್ವಿರುದ್ಧವಾಗಿದ್ದುದರಿಂದ ಬಡರೈತಾಪಿ ಮತ್ತು ಕೆಳಮಧ್ಯಮವರ್ಗದವರಿಂದಲೆ ಕೂಡಿದ ಲಿಂಗಾಯತ ಸಮುದಾಯಕ್ಕೆ ತಿಪ್ಪಯ್ಯ ಮೇಷ್ಟ್ರು ಹೇಳಿ ಮಾಡಿಸಿದ, ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಯೇ ಕರುಣಿಸಿದ ವರದ ಹಾಗಿದ್ದರು.

ತಾವು ನಡೆಸಿಕೊಡುತ್ತಿದ್ದ ವಿವಾಹಗಳಲ್ಲಿ ಲಗ್ನಕ್ಕೆ, ಮುಹೂರ್ತದ ಸಮಯಕ್ಕೆ ಅಂತಹ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡದೇ ಇದ್ದ ತಿಪ್ಪಯ್ಯ ಮೇಷ್ಟ್ರು ತಮ್ಮ ಮಗಳ ಮದುವೆಗಾಗಿ ಗಂಡನ್ನು ಹುಡುಕುವ ವಿಷಯದಲ್ಲಿ ಮಾತ್ರ ಯಾವ ಕಾರಣವರ್ಷದಿಂದಲೋ ಜಾತಕಗಳ ಹೊಂದಾಣಿಕೆಯ ವಿಷಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದರು. ಬೆಳ್ಳಗೆ, ಎತ್ತರವಾಗಿ, ಯೌವನಸಹಜ ಸೌಂದರ್ಯದಿಂದ ಬಳುಕುತ್ತಿದ್ದ ಐಯ್ನೋರ ಮಗಳು ಸರೋಜಮ್ಮನಮ್ಮ ಊರಿನ ಅಂದಿನ ಪರಿಸ್ಥಿತಿಯಲ್ಲಿ ಸಾಕಷ್ಟು ಕಲಿತವಳೆ ಆಗಿದ್ದಳು. ಊರಿಲ್ಲಿ ಲಭ್ಯವಿದ್ದ ಹತ್ತನೇ ತರಗತಿವರೆಗಿನ ಶಿಕ್ಷಣವನ್ನು ಸಮರ್ಪಕವಾಗಿ ಪೂರೈಸಿ, ದುರ್ಗದಲ್ಲಿ ಶಿಕ್ಷಕರ ತರಬೇತಿ ಮುಗಿಸಿದ ಸರೋಜಮ್ಮನನ್ನು ನೋಡಿದ ಯಾವ ಗಂಡೇ ಆಗಲಿ ವಿವಾಹಕ್ಕೆ ಸಮ್ಮತಿಸಿದೆ ಇರುವ ಹಾಗಿರಲಿಲ್ಲ. ಆದರೆ ಮೇಷ್ಟ್ರು ಜಾತಕ ಹೊಂದಾಣಿಕೆಯ ವಿಷಯದಲ್ಲಿ “ಮೊಂಡು” ಎಂದೇ ಹೇಳಬಹುದಾದ ಮಟ್ಟದ ಹಠಮಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದ ಕಾರಣದಿಂದಾಗಿ ಹತ್ತಾರು ಯೋಗ್ಯ, ಸಂಭಾವಿತ, ಒಳ್ಳೆಯ ಸರ್ಕಾರಿ ಕೆಲಸಗಳಲ್ಲಿ ಇದ್ದ ಭಾವಿವರರು ಜಾತಕ ಹೊಂದಾಣಿಕೆ ಆಗದ ಏಕೈಕ ಕಾರಣದಿಂದಾಗಿ ಕೈತಪ್ಪಿಹೋದ ಸಂಕಟ ಕೇವಲ ತಾಯಿ ಗಂಗಮ್ಮನನ್ನು ಕಾಡುತ್ತಿದ್ದದ್ದೇ ಅಲ್ಲದೆ ಮಗಳು ಸರೋಜಮ್ಮನೂ ಹಲವಾರು ಬಾರಿ ತಂದೆಯ ಈ ಹಠದ ಕಾರಣದಿಂದಾಗಿ ಸಕಲ ರೀತಿಗಳಲ್ಲಿಯೂ ತನಗೆ ಜೋಡಿಯಾಗಬಹುದಾಗಿದ್ದ ಗಂಡುಗಳು ತಪ್ಪಿ ಹೋಗುತ್ತಿರುವ ದುಃಖವನ್ನು ಮನದಲ್ಲಿಯೇ ಭರಿಸುತ್ತಿದ್ದಳು. ಆದರೆ ತಾಯಿ, ಮಗಳಿಗೆ ತಿಪ್ಪಯ್ಯ ಮೇಷ್ಟ್ರಿಗೆ ಈ ಬಗ್ಗೆ ತಿಳಿ ಹೇಳುವ ಧೈರ್ಯ ಲವಶೇಶವೂ ಇರಲಿಲ್ಲ. ಭದ್ರಾವತಿಯ ಸ್ಟೀಲ್ ಫ್ಯಾಕ್ಟರಿಯಲ್ಲಿ ನೌಕರಿಯಲ್ಲಿ ಇದ್ದ ಹಿರಿಯ ಮಗ ಪ್ರಕಾಶನಿಗೆ ಮೇಷ್ಟ್ರ ಈ ಮನೋಧಾರಣೆಯ ಬಗ್ಗೆ ವಿವರಿಸಿ ಆತನ ಮೂಲಕ ಅಪ್ಪನಿಗೆ ಬುದ್ದಿ ಹೇಳಿಸುವ ಕೆಲಸ ಮಾಡಿದರೂ ‘ತಾವು ಹಿಡಿದಿದ್ದೆ ಹಠ’ ಎನ್ನುವ ಧಾಟಿಯನ್ನು ಪ್ರದರ್ಶಿಸಿದ ಮೇಷ್ಟ್ರು ಒಮ್ಮೆಯಂತೂ “ಸರೋಜನಿಗೆ ಮದುವೆಯಾಗದಿದ್ದರೂ ಪರವಾ ಇಲ್ಲ, ಆದರೆ ಹುಡುಗ ಹುಡುಗಿಯ ಜಾತಕ ಪೂರ್ಣಪ್ರಮಾಣದಲ್ಲಿ ತಾಳೆಯಾಗದೇ ಇದ್ದ ಪಕ್ಷದಲ್ಲಿ ಮಗಳ ಮದುವೆಯನ್ನೇ ಮಾಡುವುದಿಲ್ಲ” ಎನ್ನುವ ಕಠಿಣಾತಿಕಠಿಣ ನಿಲುವನ್ನು ಪ್ರದರ್ಶಿಸುವ ಮಟ್ಟ ತಲುಪಿದ ಮೇಲೆ ಅಪ್ಪನಿಗೆ ಪ್ರೀತಿಯ ಮಗನಾದ ತಾನೂ ಒಂದು ಮಾತು ಹೇಳಿ ನೋಡುತ್ತೇನೆ ಎನ್ನುವ ಹುಮ್ಮಸ್ಸಿನಲ್ಲಿದ್ದ, ದಾವಣಗೆರೆಯಲ್ಲಿ ಕೋರ್ಟ್ ಗುಮಾಸ್ತ ಹುದ್ದೆಯಲ್ಲಿದ್ದ ಎರಡನೇ ಮಗ ಶಿವಕುಮಾರ, ತನ್ನ ಯೋಚನೆಯನ್ನು ಎಳವಿನಲ್ಲಿಯೆ ಚಿವುಟಿ ಹಾಕಿದ್ದ. ಹಾಗಾಗಿ ತಿಪ್ಪಯ್ಯ ಮೇಷ್ಟ್ರು ನಿರಾತಂಕವಾಗಿ ಗಂಡುಗಳ ಅದರಲ್ಲೂ ಬಹಳ ಮುಖ್ಯವಾಗಿ ಮಗಳಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಜಾತಕದ ಗಂಡುಗಳಿಗಾಗಿ ಅವ್ಯಾಹತವಾಗಿ ನಡೆಸುತ್ತಿದ್ದ ತಮ್ಮ ವ್ರತವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರೆಸಿಕೊಂಡು ಹೋಗುತ್ತಲೇ ಇದ್ದರು.

ಚಳ್ಳಕೆರೆಯಿಂದ ಮೇಷ್ಟ್ರು ಹಿಂತಿರುಗಿ ಬರುವಾಗ ಅದಾಗಲೇ ರಾತ್ರಿ ಎಂಟಾಗಿತ್ತು. ಪತಿಯ ಹಾದಿಯನ್ನು ಕಾಯ್ದು ಸುಸ್ತಾದ ಗಂಗಮ್ಮ ಮುದ್ದೆಗೆ ಹೆಸರಿಡಲು ಆಗ ತಾನೇ ಅಡುಗೆಕೋಣೆಗೆ ತೆರಳಿದ್ದರು. ಪಡಸಾಲೆಯಲ್ಲಿ ಕುಳಿತು ತ್ರಿವೇಣಿ ಕಾದಂಬರಿ ಒಂದನ್ನು ಓದುವುದರಲ್ಲಿ ಮಗ್ನಳಾಗಿದ್ದ ಸರೋಜಮ್ಮ ತಂದೆ ಬಂದಿದ್ದನ್ನು ನೋಡಿ ಕೈಕಾಲು ತೊಳೆಯಲು ನೀರು ತರಲು ಬಚ್ಚಲು ಮನೆಗೆ ತೆರಳಿದಳು. ಮುಖ, ಕೈಕಾಲು ತೊಳೆದು ತಮ್ಮ ಹೆಗಲ ಮೇಲಿನ ವಸ್ತ್ರದಿಂದ ಮುಖವನ್ನು ಒರೆಸುತ್ತಾ “ಗಂಗಾ, ಹುಡುಗ ದುರ್ಗದಿಂದ ಬರಲಿಕ್ಕೆ ತಡವಾಯಿತು, ಹಾಗಾಗಿ ನಾನು ಊರಿಗೆ ಬರಲಿಕ್ಕೆ ಲೇಟಾಯಿತು” ಎಂದು ತಮ್ಮ ಮಾತಿನ ಪೀಠಿಕೆ ಶುರುಮಾಡಿದ ಮೇಷ್ಟ್ರು ವರ ಕೆಇಬಿಯಲ್ಲಿ ಇಂಜಿನಿಯರ್ ಆಗಿರುವುದಾಗಿಯೂ ಮತ್ತು ವರನ ಮನೆಯವರು ಭಾರಿ ಗಟ್ಟಿಕುಳವಾಗಿದ್ದು ಹಿರಿಯೂರು-ಬಳ್ಳಾರಿ ಮಾರ್ಗವಾಗಿ ಓಡುತ್ತಿರುವ ಎರಡು ಖಾಸಗಿ ಬಸ್ಸುಗಳೂ ಸೇರಿದಂತೆ ಊರ ಹೊರಗೆ ಇದ್ದ ಒಂದು ದಿಕಾಡಿಕೇಟರ್ , ಒಂದು ಆಯಿಲ್ ಮಿಲ್ ಮತ್ತು ಊರಮಧ್ಯದಲ್ಲಿ ಇದ್ದ ಪೆಟ್ರೋಲ್ ಬಂಕ್ ಅಷ್ಟೇ ಅಲ್ಲದೆ ತಳುಕಿನ ಬಳಿ ಮೂವತ್ತು ಎಕರೆ ಖುಷ್ಕಿ ಜಮೀನು ಹೊಂದಿದ್ದಾರೆ ಎನ್ನುವ ವಿಷಯ ಹೇಳಿದರು. “ಗಂಡು ಕೂಡ ತುಂಬಾ ಲಕ್ಷಣವಾಗಿದ್ದು ನಮ್ಮ ಸರೋಜಾಗೆ ಒಳ್ಳೆಯ ಜೋಡಿ, ದೇವರ ಕೃಪೆಯಿಂದ ಸರೋಜ ಈ ಮನೆ ಸೇರಿದರೆ ರಾಣಿಯ ಹಾಗೆ ಜೀವನ ಕಳೆಯುತ್ತಾಳೆ” ಎಂದು ನುಡಿಯುತ್ತಲೇ ತಮ್ಮ ಜುಬ್ಬಾದ ಬಲಜೇಬಿನಿಂದ ಒಂದು ಕಪ್ಪುಬಿಳುಪಿನ ಪಾಸ್ ಪೋರ್ಟ್ ಅಳತೆಯ ಫೋಟೋ ಒಂದನ್ನು ಹೊರತೆಗೆದ ಮೇಷ್ಟ್ರು ಅದನ್ನು ಹೆಂಡತಿಯ ಕೈಗಿಡುತ್ತಾ “ನೋಡು, ಹುಡುಗ ಎಷ್ಟು ವೈನಾಗಿದ್ದಾನೆ” ಎನ್ನುವ ಶಿಫಾರಸ್ಸಿನ ಮಾತನ್ನೂ ಸೇರಿಸಿದರು. ಆದರೆ ಇದ್ಯಾವುದರಲ್ಲೂ ಹೆಚ್ಚಿನ ಆಸಕ್ತಿ ತೋರದ ಗಂಗಮ್ಮ “ಜಾತಕವನ್ನು ನೋಡಿದಿರಾ?” ಎನ್ನುವ ತಮ್ಮ ಮಾಮೂಲು ಪ್ರಶ್ನೆಯನ್ನು ಎಸೆಯಲು “ಇಲ್ಲ. ಸದ್ಯಕ್ಕೆ ಜಾತಕ ಅವರ ಬಳಿ ಇರಲಿಲ್ಲ. ವೀರಭದ್ರಣ್ಣನವರ ಮಗ ಪಂಚಣ್ಣ ಹುಡುಗನ ತಂದೆಗೆ ಒಳ್ಳೆಯ ಪರಿಚಯವಂತೆ. ಚಳ್ಳಕೆರೆಗೆ ದಿನವೂ ಕೆಲಸದ ನಿಮಿತ್ತ ಹೋಗಿಬರುತ್ತಿರುವ ಪಂಚಣ್ಣನ ಕೈಲಿ ನಾಳೆ ಸಂಜೆಯ ಒಳಗಾಗಿ ಹುಡುಗನ ಕುಂಡಲಿ ಕೊಡುತ್ತಾರಂತೆ” ಎಂದು ತಿಪ್ಪಯ್ಯ ಮೇಷ್ಟ್ರು ನುಡಿಯಲಾಗಿ ದೂಸ್ರಾ ಮಾತಿಲ್ಲದೆ ಕುದಿಯುತ್ತಿದ್ದ ನೀರಿಗೆ ಜೋಳದಹಿಟ್ಟನ್ನು ಕಲೆಸಲು ಗಂಗಮ್ಮ ಅಡುಗೆಮನೆಗೆ ತೆರಳಿದರು. ತಾಯಿ ಪಡಸಾಲೆಯ ಸ್ಟೂಲಿನ ಮೇಲೆ ಇಟ್ಟಿದ್ದ ಫೋಟೋದ ಕಡೆ ಒಮ್ಮೆ ಕಣ್ಣಾಯಿಸಿದ ಸರೋಜಮ್ಮ ಹುಡುಗನ ಭಾವಚಿತ್ರ ಹೋದ ತಿಂಗಳು ದುರ್ಗದ ರೂಪವಾಣಿ ಥಿಯೇಟರ್ ನಲ್ಲಿ ನೋಡಿದ “ನಾಗರಹಾವು” ಚಲನಚಿತ್ರದ ರಾಮಾಚಾರಿಯನ್ನೇ ಥೇಟಾಗಿ ಹೋಲುತ್ತಿದ್ದದ್ದನ್ನು ನೋಡಿ ಒಂದು ಕ್ಷಣ ಮೈ ಮರೆತಳಾದರೂ ಮರುಕ್ಷಣದಲ್ಲಿಯೇ “ಜಾತಕಫಲ” ಚಲನಚಿತ್ರ ಕಣ್ಣಮುಂದೆ ಬಂದಂತಾಗಲು ಊಟ ಬಡಿಸಲು ತಾಯಿಗೆ ನೆರವಾಗುವ ನೆಪದಲ್ಲಿ ಅಡುಗೆಕೋಣೆಗೆ ಜಾರಿದಳು.

ಪಂಚಣ್ಣ ತಂದುಕೊಟ್ಟ ಚಳ್ಳಕೆರೆ ಗಂಡಿನ ಕುಂಡಲಿಯ ಗಂಭೀರ ಅಧ್ಯಯನಕ್ಕೆ ಮೊದಲಾದ ತಿಪ್ಪಯ್ಯ ಮೇಷ್ಟ್ರ ಕಪ್ಪುಮುಖ ಸುಮಾರು ಒಂದು ಅರ್ಧತಾಸಿನ ನಂತರ ಮತ್ತಷ್ಟು ಕಪ್ಪಿಟ್ಟಿತು. “ಗಂಗಾ, ಗಂಡಿನ ಕುಂಡಲಿ ಸರೋಜಳ ಕುಂಡಲಿಯೊಂದಿಗೆ ಸ್ವಲ್ಪವೂ ಹೊಂದಾಣಿಕೆಯಾಗುವುದಿಲ್ಲ. ಕನಿಷ್ಠ ಸಂಖ್ಯೆಯ ಗುಣಗಳೂ ಹೊಂದುವುದಿಲ್ಲ ಎಂದಮೇಲೆ ಈ ಹುಡುಗನ ವಿಚಾರದಲ್ಲಿ ಮುಂದುವರೆಯುವುದು ಅಸಾಧ್ಯ” ಎನ್ನುವ ತಮ್ಮ ಸುಪ್ರೀಂ ನಿರ್ಣಯವನ್ನು ಹೊರಹಾಕಿದರು. ಇಂತಹುದೇ ಅನಾಹುತವನ್ನು ನಿರೀಕ್ಷಿಸಿದ್ದ ಗಂಗಮ್ಮನಿಗೆ ಕುಂಡಲಿಯ ಫಲಿತಾಂಶ ಅಂತಹಾ ನಿರಾಶೆಯನ್ನು ಉಂಟುಮಾಡದೇ ಹೋದರೂ ಅಲ್ಲಿಯೇ ಪಡಸಾಲೆಯ ಮೂಲೆಯಲ್ಲಿ ಕುಳಿತು ಕಸೂತಿ ಕೆಲಸ ಮಾಡುತ್ತಿದ್ದ ಸರೋಜಮ್ಮನ ಮನಸ್ಸು ಮಾತ್ರ ಅಪ್ಪಯ್ಶನ ಈ ನುಡಿಗಳ ಕಾರಣ ಮುದುಡಿಹೋಯಿತು. ಹುಡುಗನ ಫೋಟೋದ ಒಂದು ಝಳಕಿನ ಕಾರಣದಿಂದ ರಾತ್ರಿಯಿಡೀ ನೂರಾರು ಸುಂದರ ಸ್ವಪ್ನಗಳನ್ನು ಹೆಣೆದಿದ್ದ ಸರೋಜಮ್ಮನ ಸುಪ್ತಮನಸ್ಸಿನ ಮೇಲೆ ಜಾತಕದ ಫಲಶ್ರುತಿ ಗಾಯದ ಬರೆಯನ್ನೇ ಎಳೆದಿತ್ತು.

ಹೀಗೆ ಮನೆಯಲ್ಲಿ ಎಲ್ಲರ ಮನಸ್ಸುಗಳೂ ಮುರಿದುಹೋಗಿದ್ದ ಹೊತ್ತು ತಿಪ್ಪಯ್ಯ ಮಾಸ್ತರ ದೂರದ ಸಂಬಂಧಿ ಕೂನಬೇವಿನ ಶಂಕರಪ್ಪಶಾಸ್ತ್ರಿಗಳು ಮಧ್ಯಾಹ್ನದ ಊಟದ ವೇಳೆಗೆ ಕೊಪ್ಪಳ ಮೂಲದ ವರನೊಬ್ಬನ ಕುಂಡಲಿಯ ಸಮೇತ ಐಯ್ನೋರ ಮನೆ ಪ್ರವೇಶಿಸಿದರು.ಈಗಾಗಲೇ ಶಂಕರಪ್ಪಶಾಸ್ತ್ರಿಗಳು ಸರೋಜಮ್ಮನಿಗೆ ಐದಾರು ಸಂಬಂಧಗಳನ್ನು ಹುಡುಕಿ ತಂದಿದ್ದರೂ ತಿಪ್ಪಯ್ಯನವರ ಜಾತಕದ ಹೊಂದಾಣಿಕೆಯ ತಿಕ್ಕಲಾಟದ ಪರಿಣಾಮ ಅವ್ಯಾವ ಸಂಬಂಧಗಳೂ ಫಲಿಸಿರಲಿಲ್ಲ. ಹೀಗಾಗಿ ಸರೋಜಮ್ಮನಿಗೆ ಗಂಡುಗಳನ್ನು ಸೂಚಿಸುವ ಕೆಲಸವನ್ನೇ ತಾತ್ಕಾಲಿಕರೂಪದಲ್ಲಿ ತೊರೆದಿದ್ದ ಶಾಸ್ತ್ರಿಗಳು ಅಕಸ್ಮಾತ್ ಆಗಿ ತಮ್ಮ ಕೈಸೇರಿದ ಕೊಪ್ಪಳದ ಗಂಡಿನ ಕುಂಡಲಿಯನ್ನು ಸರೋಜಮ್ಮನ ಕುಂಡಲಿಯೊಂದಿಗೆ, ತಮಗೆ ಗೊತ್ತಿದ್ದ ಅಷ್ಟೋ ಇಷ್ಟೋ ಜ್ಯೋತಿಷ್ಯದ ಆಧಾರದ ಮೇಲೆ ತಾಳೆಹಾಕಿ, ಇದು “ಅಣ್ಣನವರ ಮಗಳಿಗೆ ಸರಿಹೋದೀತು” ಎನ್ನುವುದನ್ನು ಒಂದು ಹಂತದವರೆಗೆ ಖಾತ್ರಿ ಮಾಡಿಕೊಂಡೇ ಮೇಷ್ಟ್ರ ಮನೆ ಬಾಗಿಲು ತುಳಿದಿದ್ದರು. ಶಾಸ್ತ್ರಿಗಳು ತಂದ ಕುಂಡಲಿಯನ್ನು ತಮ್ಮ ಜಾತಕದ ತೀಕ್ಷ್ಣ ಒರೆಗಲ್ಲಿಗೆ ಉಜ್ಜುತ್ತಾ ಹೋದ ತಿಪ್ಪಯ್ಯ ಮೇಷ್ಟ್ರ ಮುಖ ಅರಳುತ್ತಾ, ಅರಳುತ್ತಾ ಸಾಗಿ ಕೊನೆಗೊಮ್ಮೆ ಊರಗಲವಾಯಿತು. “ಶಹಭಾಷ್, ಈ ಕುಂಡಲಿ ಸರೋಜನ ಜಾತಕಕ್ಕೆ ನೂರಕ್ಕೆ ನೂರರಷ್ಟು ಹೊಂದಿಕೆ ಆಗುತ್ತದೆ” ಎಂದು ಯುರೇಕಾ ಮಾದರಿಯಲ್ಲಿ ಕೂಗಿಕೊಂಡ ಗಂಡನ ಮಾತು ಅಡುಗೆ ಮನೆಯಲ್ಲಿ ಬಂದ ಅತಿಥಿಯ ಭೋಜನದ ತಯಾರಿಯಲ್ಲಿದ್ದ ಗಂಗಮ್ಮನ ಕಿವಿಗಳನ್ನು ತೂರಿತು. ತನ್ನ ಕಿವಿಗಳನ್ನು ತಾನೇ ನಂಬದ ಗಂಗಮ್ಮ ಕೈಯಲ್ಲಿ ಸಾರಿನಸೌಟು ಹಿಡಿದೇ ಪಡಸಾಲೆಗೆ ಬಂದವರು “ಏನಣ್ಣಾ, ಹುಡುಗ ಏನು ಮಾಡಿಕೊಂಡಿದ್ದಾನೆ?” ಎನ್ನುವ ನೇರಪ್ರಶ್ನೆಯನ್ನು ಶಾಸ್ತ್ರಿಗಳಿಗೆ ಹಾಕಲಾಗಿ “ಹುಡುಗ ಡಾಕ್ಟ್ರು, ಗಂಗಾವತಿಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿದ್ದಾನೆ” ಎನ್ನುವ ಶಾಸ್ತ್ರಿಗಳ ಮಾತು ಕೇಳಿ ಗಂಗಮ್ಮನಿಗೆ ಆಕಾಶ ಮೂರೇ ಗೇಣು ಉಳಿದಿತ್ತು. ಅಂತೂ ಇಂತೂ ಮಗಳಿಗೆ ಭಗವಂತ ಒಳ್ಳೆಯ ಕಡೆಯೇ ಸಂಬಂಧ ತಂದಿದ್ದಾನೆ ಎಂದು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಬರುವ ಸೋಮವಾರದ ದಿನ ಕಾರ್ತೀಕದ ಹರಕೆ ಹೊತ್ತುಕೊಂಡ ಗಂಗಮ್ಮ ಗಂಡನ ಕಡೆ ಒಮ್ಮೆ ದೃಷ್ಟಿ ಬೀರಲಾಗಿ ಆನಂದದಲ್ಲಿ ಮುಳುಗಿ ತೇಲುತ್ತಿದ್ದ ಗಂಡನ ಮುಖಕಮಲ ಗಂಗಮ್ಮನಿಗೆ ಮೌನವಾಗಿಯೇ ಸಾವಿರ ಭರವಸೆಗಳ ಉಡುಗೊರೆ ನೀಡಿತ್ತು.

ಮುಂದೆ ಒಂದು ತಿಂಗಳ ಒಳಗೆ ಆಗಬೇಕಾದ ಎಲ್ಲಾ ಕಾರ್ಯಗಳೂ ಹೂವು ಎತ್ತಿದಂತೆ ಸುಸೂತ್ರವಾಗಿ ನಡೆದು ಗಂಡುಹೆಣ್ಣು ಪರಸ್ಪರ ಒಪ್ಪಿ, ಎರಡೂ ಮನೆಯವರೂ ಮನಸಾರೆ ಈ ಸಂಬಂಧವನ್ನು ಹರಸಿ ಆಶೀರ್ವದಿಸಿದ ಕಾರಣ ಮೇಷ್ಟ್ರು ಮಗಳ ನಿಶ್ಚಯ ಕಾರ್ಯವನ್ನೂ ಮುಗಿಸಿ ಮುಂದಿನ ಎರಡು ತಿಂಗಳುಗಳ ಒಳಗೆ, ತಾವೇ ನಿರ್ಧರಿಸಿದ ಶುಭಮುಹೂರ್ತವೊಂದರಲ್ಲಿ ಹುಡುಗನ ಊರು ಕೊಪ್ಪಳದ ಛತ್ರವೊಂದರಲ್ಲಿ ಮಗಳ ವಿವಾಹಕಾರ್ಯವನ್ನು ತಮ್ಮ ಕೈಲಾದ ಮಟ್ಟಿಗಿನ ವಿಜೃಂಭಣೆಯೊಂದಿಗೆ ಸಡಗರದಿಂದ ನೆರವೇರಿಸಿದರು. ಅಂತೂ ಇಂತೂ ತಾವು ಹಿಡಿದ ಹಠ ಫಲಿಸಿ, ಮಗಳಿಗೆ ವಿದ್ಯಾವಂತ, ಸ್ಫುರದ್ರೂಪಿಯಾದ ಅಳಿಯ ಡಾಕ್ಟರ್ ಕೊಟ್ರೇಶ್ ದೊರೆತಿದ್ದು ತಿಪ್ಪಯ್ಯ ಮೇಷ್ಟ್ರ ಖುಷಿಯನ್ನು ನೂರ್ಮಡಿಸಿತ್ತು. ತಾಯಿ ಗಂಗಮ್ಮನ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ಮದುವೆಯ ಕೇವಲ ವಾರದ ಒಳಗೇ ಸರ್ಕಾರಿ ಶಿಕ್ಷಕಿಯ ಹುದ್ದೆ ಸರೋಜಮ್ಮನನ್ನು ಹುಡುಕಿಕೊಂಡು ಬರಲಾಗಿ, ಗಂಗಾವತಿಯಲ್ಲಿಯೇ ತನ್ನ ಮೊದಲ ನೇಮಕಾತಿಯನ್ನು ಗಂಡನ ಕಡೆಯವರ ಪ್ರಭಾವವನ್ನು ಬಳಸುವ ಮೂಲಕ ಸಾಧಿಸಿದ ಸರೋಜಮ್ಮನ ಹೊಸಸಂಸಾರ ಗಂಗಾವತಿಯಲ್ಲಿ ವಾಸ್ತವ್ಯ ಹೂಡಿತು. ವರ್ಷ ಒಪ್ಪತ್ತು ಕಳೆಯುವುದರಲ್ಲಿಯೆ ಮುದ್ದಾದ ಮಗ ವಿಶ್ವನಾಥ ತನ್ನ ಮಡಿಲಿಗೆ ಬಂದು ಬಿದ್ದಾಗ ಸರೋಜಮ್ಮನಿಗೆ ಆದ ಸಂತೋಷಕ್ಕಿಂತ ಸಹಸ್ರಪಾಲು ಹೆಚ್ಚಿನ ಸಂತೋಷ ತಿಪ್ಪಯ್ಯ ದಂಪತಿಗಳ ಪಾಲಿನದಾಯಿತು.

ಆದರೆ ಮೇಷ್ಟ್ರಿಗೆ ಗೊತ್ತಿದ್ದ ವಿಷಯವೊಂದು ವಿಧಿಗೆ ಗೊತ್ತಿರಲಿಲ್ಲ ಅನ್ನಿಸುತ್ತೆ, ಮಗು ಹುಟ್ಟಿದ ಆರು ತಿಂಗಳ ಒಳಗೇ ಚಳಿಜ್ವರ ಎಂದು ಕೇವಲ ಮೂರ್ನಾಲ್ಕು ದಿನ ಮಾತ್ರ ಹಾಸಿಗೆ ಹಿಡಿದ ಡಾಕ್ಟರ್ ಕೊಟ್ರೇಶ್ ತಜ್ಞವೈದ್ಯರ ಶುಶ್ರೂಷೆಯ ಹೊರತಾಗಿಯೂ ಹೆಂಡತಿ, ಮಗುವನ್ನು ಅನಾಥ ಮಾಡಿ ವಿಧಿವಶನಾದ. ನೂರಕ್ಕೆ ನೂರರಷ್ಟು ಹೊಂದುವ ಕುಂಡಲಿಗಳ ಗಂಡುಹೆಣ್ಣುಗಳ ಸಂಸಾರ ಬಂಧನವನ್ನು ಮುರಿಯಬಾರದು ಎನ್ನುವ ಒಂದು ಸಣ್ಣ ನಿಯಮವನ್ನು ವಿಧಿಗೆ ಯಾರೂ ತಿಳಿಸಿ ಹೇಳಿರಲಿಲ್ಲವೇ? ಪ್ರಾಣವನ್ನು ಸೆಳೆಯುವ ಯಮಧರ್ಮನಿಗೂ ಜೋತಿಷ್ಯದ ಪ್ರಾಥಮಿಕ ಜ್ಞಾನ ಇಲ್ಲವಾಯಿತೆ? ಮಗಳಿಗೆ ಬಂದೆರಗಿದ ದುರ್ದೆಸೆ ತಿಪ್ಪಯ್ಯ ಮೇಷ್ಟ್ರ ಜಂಘಾಬಲವನ್ನೇ ಉಡುಗಿಸಿತು. ನೂರಾರು ಊರು ಸುತ್ತಿ, ಎರಡು ವರ್ಷಗಳ ಕಾಲ ಹಂಬಲಿಸಿ, ಅಲೆದು, ಜಾತಕಗಳ ಸಕಲ ಗುಣಗಳೂ ಪರಸ್ಪರ ತಾಳೆಯಾಗುವುದನ್ನು ಖಾತ್ರಿ ಮಾಡಿಕೊಂಡೆ ಜರುಗಿಸಿದ ಮಗಳ ವಿವಾಹದ ಫಲಶ್ರುತಿ ಇದು ಎಂದಾದರೆ ವಿವಾಹಪೂರ್ವ ಜಾತಕಗಳನ್ನು ಹೊಂದಿಸಿ ನೋಡುವುದು ಯಾವ ಪುರುಷಾರ್ಥಕ್ಕೆ? ಇವೆಲ್ಲಾ ತರಲೆ ತಾಪತ್ರಯಗಳು ಯಾವ ಪ್ರಯೋಜನಕ್ಕಾಗಿ? ಜಾತಕ ಫಲಗಳನ್ನೂ ಮೀರಿದ ಹಣೆಬರಹ ಒಂದಿದೆಯಾ? ಭಗವಂತನ ಇಚ್ಛೆಯನ್ನು ಜಾತಕಗಳ ಮೂಲಕ ಮುಂದಾಗಿ ತಿಳಿದುಕೊಳ್ಳುವ ವ್ಯವಸ್ಥೆಯೇ ತಪ್ಪುಗಳಿಂದ ಕೂಡಿದೆಯಾ? ತಲೆತಲಾಂತರಗಳಿಂದ ತಮ್ಮ ಪೂರ್ವಿಕರು ನಂಬಿಕೊಂಡು, ಆಚರಣೆಯಲ್ಲಿ ತಂದ “ಕುಂಡಲಿಸಾಮ್ಯ” ಒಂದು ಭ್ರಮೆ ಮಾತ್ರವಾ? ಜಾತಕ ಹೊಂದಾಣಿಕೆಯ ಗೋಜನ್ನು ಕೈಬಿಟ್ಟು, ಚಳ್ಳಕೆರೆಯ ವರನನ್ನು ವರಿಸಿದ್ದರೆ ಇವತ್ತು ಮಗಳು ವಿಧವಾಪಟ್ಟದಿಂದ ದೂರ ಉಳಿಯುತ್ತಿದ್ದಳೇ? ಹೀಗೇ, ಇಂತಹುದೇ ಅಸಂಖ್ಯ ಪ್ರಶ್ನೆಗಳು ಮೇಷ್ಟ್ರ ಮನಸ್ಸಿನಲ್ಲಿ ಹುತ್ತ ಕಟ್ಟುತ್ತಿರುವಾಗ ನನ್ನ ಇಚ್ಛೆಯನ್ನು ಮೀರಿ, ತಾವು ಕಲಿತ ಗೊಡ್ಡುಶಾಸ್ತ್ರದ ಬೆನ್ನುಹತ್ತಿ, ಮಗಳ ಪಾಲಿಗೆ ಬಂದ ಒಂದಕ್ಕಿಂತ ಒಂದು ಘನವಾದ ಸಂಬಂಧಗಳನ್ನು ನಿರಾಕರಿಸಿದ ಪತಿಯ ಮೇಲಿನ ಗಂಗಮ್ಮನವರ ಮನಸ್ಸಿನ ಒಳಗಿನ ವರುಷಗಳ ಸಿಟ್ಟು ತಾರಕಕ್ಕೇರಿ ಜ್ವಾಲಾಮುಖಿಯಾಗಿ ಒಡೆಯುವುದರಲ್ಲಿತ್ತು. ಗಂಡನ ಶವದ ಮುಂದೆ ರೋಧಿಸುತ್ತಾ ಕುಳಿತ ಸರೋಜಮ್ಮನ ಅತ್ತೂಅತ್ತೂ ಕೆಂಪಾಗಿದ್ದ ಬಟ್ಟಲು ಕಣ್ಣುಗಳು ಮೇಷ್ಟ್ರ ಕಡೆಗೆ ತಿರುಗಲು ಕೆದರಿದ ಕೂದಲು, ಹಣೆಯ ಮೇಲಿನ ದೊಡ್ಡಬಟ್ಟಿನ ಕುಂಕುಮದ ಹಿನ್ನೆಲೆಯಲ್ಲಿ ಮಗಳನ್ನು ಅಶ್ರುಭರಿತ ಕಣ್ಣಾಲಿಗಳಲ್ಲಿ ತುಂಬಿಕೊಂಡ ಐಯ್ನೋರಿಗೆ ಮಗಳ ರೂಪದಲ್ಲಿ ಸಾಕ್ಷಾತ್ ಚಾಮುಂಡಿ ದೇವಿಯ ದರ್ಶನವಾದ ಹಾಗೆ ತೋರಿತು. “ಪ್ರತಿ ಹೆಣ್ಣೂ ನನ್ನ ರೂಪವೇ, ನನ್ನನ್ನು ಸುಮಂಗಲಿ ಮಾಡುವ ಹೊತ್ತು ಕುಂಡಲಿ ಹೊಂದಾಣಿಕೆಯಂತಹ ಬುಡವಿಲ್ಲದ ವಿದ್ಯೆಯ ಆಧಾರದಲ್ಲಿ ಹೆಣ್ಣೊಬ್ಬಳ ಭವಿಷ್ಯದೊಡನೆ ಆಟವಾಡುವ ಪ್ರಯತ್ನವನ್ನು ಇನ್ನಾದರೂ ಬಿಟ್ಟುಬಿಡು” ಎನ್ನುವ ಆದೇಶ ಚಾಮುಂಡಿಯ ಮುಖಮಂಡಲದಿಂದಲೆ ಬಂದಂತಾಗಲು ತಿಪ್ಪಯ್ಯ ಮೇಷ್ಟ್ರು ಮುಂದೆ ಎಂದೂ ಯಾವ ಜಾತಕಗಳನ್ನೂ, ಎಂತಹ ಸನ್ನಿವೇಶಗಳಲ್ಲಿಯೂ, ಹೊಂದಾಣಿಕೆ ಮಾಡುವ ಪ್ರಯತ್ನಗಳು ಒತ್ತಟ್ಟಿಗಿರಲಿ, ಕೈಯಿಂದ ಮುಟ್ಟವ ಸಾಹಸವನ್ನೂ ಮಾಡಲಿಲ್ಲ. ಇಲ್ಲಿಂದ ಮುಂದೆ ಮದುವೆಗಳ ಪೌರೋಹಿತ್ಯವನ್ನು ಶಾಶ್ವತವಾಗಿ ತೊರೆದ ಐಯ್ನೋರ ಮನಸ್ಸಿನಲ್ಲಿ ಸಂಭವಿಸಿರಬಹುದಾದ ‘ಮಹಾಭಾರತ’ ಯುದ್ದಕ್ಕಿಂತ ಭೀಷಣವಾದ ಮಾನಸಿಕ ತುಮುಲವನ್ನು ಸಮಗ್ರರೂಪದಲ್ಲಿ ಅರ್ಥೈಸಿಕೊಳ್ಳುವಲ್ಲಿನ ನನ್ನ ವೈಫಲ್ಯವನ್ನು ನಾನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿದವನಾಗಿದ್ದೇನೆ.

Girl in a jacket
error: Content is protected !!