Writing- ಪರಶಿವ ಧನಗೂರು
ಸರ್ಕಾರ ಗಾಂಜಾಗೆ ಜೈ ಎಂದಿದ್ದೇಕೇ?
ಮಾದಕ ವಸ್ತುಗಳ ಸಾಗಾಣಿಕೆ-ಮಾರಾಟ-ಸೇವನೆ ವಿರುದ್ಧ ಜಗತ್ತಿನ ಎಲ್ಲಾ ದೇಶಗಳ ಜೊತೆ ಸೇರಿಕೊಂಡು 1960ರಲ್ಲೇ ಸಮರ ಸಾರಿದ್ದ ನಮ್ಮ ಭಾರತ ದೇಶ, ಯುದ್ಧ ಘೋಷಿಸಿ ಗೆಲ್ಲುವ ಮೊದಲೇ ಸೋಲೊಪ್ಪಿಕೊಳ್ಳುತ್ತಿರುವ ಕಾರಣವೇನೆಂದು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರ ಈಗ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ “ಸಣ್ಣ ಪ್ರಮಾಣದ ಮಾದಕ ವಸ್ತು ಸೇವಿಸುವ, ಇಟ್ಟುಕೊಳ್ಳುವ ವ್ಯಕ್ತಿಗಳಿಗೆ ಶಿಕ್ಷೆ ಬೇಡ!” ಎಂಬ ಆದೇಶ ಹೊರಡಿಸಿ ತಮ್ಮ ಕೆಳಹಂತದ ಇಲಾಖೆಗಳಿಗೆ, ಕಂದಾಯ ಇಲಾಖೆಗೆ ಶಿಫಾರಸ್ಸು ಮಾಡಿರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಭಾರತದಲ್ಲಿ ಈ ಡ್ರಗ್ಸ್ ದಂಧೆಯಿಂದ ಹಲವಾರು ಜನ ಪ್ರಾಣ ಕಳೆದು ಕೊಂಡಿದ್ದಾರೆ. ಸಾವಿರಾರು ಜನ ಮಾನಸಿಕ ನೆಮ್ಮದಿಯನ್ನು, ದೈಹಿಕ ಆರೋಗ್ಯವನ್ನು ಕೆಡಿಸಿಕೊಂಡು ನರಳುತ್ತಿದ್ದಾರೆ. ಸುಮಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಡ್ರಗ್ಸ್ ಸೇವನೆಯ ದಾಸರಾಗುವ ಯುವಜನತೆ ಕ್ರೂರಿಗಳಾಗಿ-ಕ್ರಿಮಿನಲ್ ಗಳಾಗಿ, ಹಣಕ್ಕಾಗಿ ಅಪರಾಧ ಕ್ರತ್ಯಗಳಿಗೆ ಇಳಿಯುವ ಹಂತಕ್ಕೆ ಬಂದಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ಡ್ರಗ್ಸ್ ಪೂರೈಕೆ ಮತ್ತು ಬಳಕೆಯಂತೂ ಮಿತಿಮೀರುತ್ತಿದೆ. ಸಿನಿಮಾ ರಂಗದ ಲೇಟ್ ನೈಟ್ ಪಾರ್ಟಗಳು, ಪಬ್ಬು-ಕ್ಲಬ್ಬು, ಡಿಸ್ಕೋಥೆಕ್ ಗಳು, ನಿಗೂಢ ಕಾಟೇಜ್ ರೆಸಾರ್ಟ್ಗಳು, ರೇವ್ ಪಾರ್ಟಿಗಳು, ಕಾಲೇಜು ಕ್ಯಾಂಪಸ್ಸಿನಲ್ಲಿ, ಎಲ್ಲೆಂದರಲ್ಲಿ, ಕಾಳಸಂತೆಯಲ್ಲಿ, ಬೀದಿ ಬೀದಿಗಳಲ್ಲಿಯೂ ಸುಲಭವಾಗಿ ಸಿಗುತ್ತಿರುವ ಸಿಂಥೆಟಿಕ್ ಡ್ರಗ್ಸ್, ಗಾಂಜಾ, ಚರಸ್ಸು-ಹಶೀಷು ಯುವಜನತೆಯ ಬದುಕನ್ನು ನಾಶ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಜಾಲವನ್ನು ಹೊಂದಿರುವ ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ, ಸ್ಥಳೀಯ ಡ್ರಗ್ಸ್ ಸಪ್ಲೈಯರ್ ಗಳು, ದೇಶಾದ್ಯಂತ ತಮ್ಮದೇ ಇಲ್ಲೀಗಲ್ ನೆಟ್ವರ್ಕ್ ನಿರ್ಮಿಸಿಕೊಂಡು, ಡ್ರಗ್ಸ್ ಮಾರಾಟ ಜಾಲವನ್ನು, ನಿಯಂತ್ರಣದಲ್ಲಿಟ್ಟುಕೊಂಡು ಹಣದಾಸೆಗೆ ಇಡೀ ಯುವ ಜನಾಂಗವನ್ನೇ ನಶೆಯ ಗುಂಗಿನಲ್ಲಿ ತೇಲಿಸುವ, ಸಾಮಾಜಿಕ ವ್ಯವಸ್ಥೆಯನ್ನೇ ಹಾಳುಮಾಡುವ, ದುಷ್ಕೃತ್ಯವನ್ನು ಮಾಡುತ್ತಿದ್ದಾರೆ. ಭಾರತದ ಭವಿಷ್ಯವಾಗಿರುವ ಯುವಜನತೆಯ ಹಾದಿತಪ್ಪಿಸಿ, ಹಾಳುಮಾಡುತ್ತಿರುವ, ದೇಶದ ಆರ್ಥಿಕ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿರುವ ಡ್ರಗ್ಸ್ ಪೆಡ್ಲರ್ ಗಳಿಗೆ ಸಿಂಹ ಸ್ವಪ್ನ ವಾಗಬೇಕಿದ್ದ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ (ಎನ್.ಡಿ.ಪಿ.ಎಸ್)ಗಳಂತಹ ಕಾನೂನುಗಳ ಹುಲ್ಲು ಕಿತ್ತು ಹಾಳುಮಾಡುವುದರಿಂದ ಕೇಂದ್ರ ಸರ್ಕಾರವು ಯಾವ ಸಾಧನೆಯನ್ನು ಮಾಡಿದಂತಾಗುವುದಿಲ್ಲ. ದೇಶದ ಪ್ರಗತಿಗೆ ಕಂಟಕಪ್ರಾಯವಾಗುವ ಈ ಮಾದಕ ವ್ಯಸನದ ಪಿಡುಗನ್ನು, ಬೇರು ಸಮೇತ ಕಿತ್ತೊಗೆಯಲು ಟೊಂಕಕಟ್ಟಿ ನಿಲ್ಲಬೇಕಾದ ನಮ್ಮನ್ನಾಳುವ ಸರ್ಕಾರಗಳು, ಸಚಿವಾಲಯಗಳು ದೇಶದ ಜನರ ಮುಂದೆ ಹೊಸ ಕಾನೂನುಗಳನ್ನು ತಿದ್ದುಪಡಿಗಿಟ್ಟು, ಚರ್ಚಿಸಿ, ಸಲಹೆ ಪಡೆದು ಜಾರಿಗೊಳಿಸಿದ್ದರೇ ಅದರ ಸಾಧಕ-ಬಾದಕಗಳನ್ನು ಪರಿಶೀಲಿಸಿ ಆದೇಶಿಸಿ ಶಿಫಾರಸ್ಸು ಮಾಡಿದ್ದರೇ ಅದಕ್ಕೊಂದು ಅರ್ಥ ವಿರುತ್ತಿತ್ತು.
ಈಗ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಏಕಾಏಕಿ ಗೆಜೆಟ್ ಆದೇಶ ಹೊರಡಿಸಿ ಕೆಳಹಂತದ ಸಂಬಂಧಪಟ್ಟ ಇಲಾಖೆಗಳು ಈ ಹೊಸ ಕಾನೂನನ್ನು ಶಿರಸಾವಹಿಸಿ ಪಾಲಿಸಿ ಎಂದರೆ ಇವರ ಉದ್ದೇಶವೇನೆಂದು ತಿಳಿಯಬೇಕು? ಇದು ಯಾರ ಪರವಾದ ಡ್ರಗ್ಸ್ ಕಾಯಿದೆ? ಯಾರನ್ನು ಕಾಪಾಡಲು-ಮೆಚ್ಚಿಸಲು ಈ ಹೊಸ ಹಲ್ಲಿಲ್ಲದ ಮಾದಕ ವಸ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಲು, ಶಿಫಾರಸು ಮಾಡಲಾಗಿದೆ ಎಂಬುದನ್ನು ನಾವು ನಾನಾ ವಿಧದಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ.
ಮನೆಗೊಂದು ಗಾಂಜಾ ಕ್ಲಿನಿಕ್!
ಇದು ಹೀಗೆಯೇ ಆದರೇ ಈಗ ಕೇಂದ್ರ ಸರ್ಕಾರ ತನ್ನದೇ ಲೆಕ್ಕಾಚಾರದಲ್ಲಿ ಭಾರತದಾದ್ಯಂತ ಜಾರಿಗೆ ತರಲು ಮುಂದಾಗಿರುವ “ಸಣ್ಣ ಪ್ರಮಾಣದ ಗಾಂಜಾ ಮತ್ತು ಚರಸ್-ಹಶೀಷ್ ಇಟ್ಟುಕೊಳ್ಳುವುದೂ ಸೇವಿಸುವುದೂ ಅಪರಾಧವಲ್ಲ!” ಎಂಬ ಎನ್.ಡಿ.ಪಿ.ಎಸ್.ಆಕ್ಟ್ (27) ಕೇವಲ ಹಲ್ಲಿಲ್ಲದ ಹಾವಾಗಿ ಉಳಿಯುತ್ತದೆ ಅಷ್ಟೇ. ಈಗ ಶಿಫಾರಸು ಮಾಡಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪತ್ರದಲ್ಲಿ 1000ಗ್ರಾಂ ಗಾಂಜಾವನ್ನು ಒಬ್ಬ ವ್ಯಕ್ತಿ ಇಟ್ಟುಕೊಳ್ಳಲು-ಸೇವಿಸಲು ಅಭ್ಯಂತರ ವಿಲ್ಲದಿರುವುದರಿಂದ ಮುಂದೆ ಮನೆಗೊಂದು ‘ಗಾಂಜಾ ಕ್ಲಿನಿಕ್!’ ಓಪನ್ ಆಗುವುದು ಗ್ಯಾರಂಟಿ ಆಗಿದೆ. 100ಗ್ರಾಂ ಚರಸ್-ಹಶೀಷ್ ಇಟ್ಟುಕೊಳ್ಳಲು ಸೇವಿಸಲೂ ಅನುಮತಿಸಲಾಗಿದೆ! ಈ ಹಿಂದೆ ಕೇವಲ 100, ಗ್ರಾಂ ಗಾಂಜಾ ಇಟ್ಟುಕೊಂಡಿದ್ದರೂ, 100ಗ್ರಾಂ ಯಾವುದೇ ಸಿಂಥೆಟಿಕ್ ಡ್ರಗ್ಸ್ ಇಟ್ಟುಕೊಂಡಿದ್ದರೂ ಸೆಕ್ಷನ್ (27)ಎನ್.ಡಿ.ಪಿ.ಎಸ್ ಆಕ್ಟ್ ಆಡಿ ಒಂದು ವರ್ಷದಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಜೊತೆಗೆ ಇಪ್ಪತ್ತು ಸಾವಿರ ರೂಪಾಯಿ ದಂಡ ಬೀಳುತ್ತದೆಂದು ಹೆದರುತ್ತಿದ್ದರು.
ಈಗ 1000 ಗ್ರಾಂ ಮೇಲ್ಪಟ್ಟು 20 ಕೆ.ಜಿ ಇದ್ದರೇ ಮಾತ್ರ ಅದನ್ನು ‘ಕಮರ್ಷಿಯಲ್ ಗಾಂಜಾ!’ ಎಂದು ಪರಿಗಣನೆ ಮಾಡಿ ಕೇಸು ದಾಖಲಿಸಲಾಗುತ್ತದಂತೆ! ಚರಸ್-ಹಶೀಷ್ ಒಂದು ಕೆಜಿ ಮೇಲಿದ್ದರೇ ಮಾತ್ರ ಡ್ರಗ್ಸ್ ಕೇಸ್ (ಮಾದಕ ವಸ್ತು ನಿಯಂತ್ರಣ ಕಾಯ್ದೆ) ಅಡಿ ಕೇಸು ದಾಖಲಾಗಿರುತ್ತದೆ! ನಮ್ಮ ದೇಶದಲ್ಲಿ ಈಗ ಡ್ರಗ್ಸ್ ದಂಧೆ ಮಾಡುತ್ತಿರುವ ಸಪ್ಲೈಯರ್ಸ್ ಗಳಿಗೆ ಗಾಂಜಾ ಮೂಟೆಯನ್ನು ಕರಗಿಸಿ 500 ಗ್ರಾಂ 1000ಗ್ರಾಂ ಪೊಟ್ಟಣ (ಪ್ಯಾಕೆಟ್) ಮಾಡಿ ಮಾರುವ ತಂತ್ರಜ್ಞಾನ ಗೊತ್ತಿಲ್ಲ ವೆಂದು ಈ ಸರ್ಕಾರ ಭಾವಿಸಿಕೂತಿದೆ! ಇದನ್ನು ನಾವೆಲ್ಲ ನಂಬಬೇಕು. ಡ್ರಗ್ಸ್ ಮಾಫಿಯಾದ ವ್ಯಾಪಾರಸ್ಥರೊಂದಿಗೆ ‘ಸಾವಿರಗ್ರಾಂ ಸೀಕ್ರೆಟ್!’ ಎಂಬ ಒಳ ಒಪ್ಪಂದ ಮಾಡಿಕೊಂಡರಬಹುದೇ? ಎಂಬ ಅನುಮಾನಗಳು ಕೆಲವು ವಿರೋಧ ಪಕ್ಷಗಳಿಗೂ ಬಂದಿವೆಯಂತೆ! ಡ್ರಗ್ಸ್ ತವರು ನೆಲವಾದ ಆಫ್ಘಾನಿಸ್ತಾನದಿಂದ ಭಾರತದ ಶ್ರೀಮಂತರ ಬಂದರು ಗಳಿಗೆ, ಹಡಗುಗಳ ತುಂಬಾ ಬಂದಿಳಿಯುವ ಮಾರಕ ಡ್ರಗ್ಸ್ ಪದಾರ್ಥಗಳು 500ಗ್ರಾಂ 1000ಗ್ರಾಂಗಳ ಸಣ್ಣ ಪ್ಯಾಕೇಟ್ ಗಳಾಗಿ ಭಾರತದಾದ್ಯಂತ ಪೆಡ್ಲರ್ ಗಳ ಜೇಬುಗಳಲ್ಲಿ ಕುಳಿತು ಹಾಡು ಹಗಲೇ ಸಂಚರಿಸಿದರೇ ಇವರ ಎನ್.ಡಿ.ಪಿ.ಎಸ್. ಆಕ್ಟ್ (27 )ಯೆಂಬ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವೇ? ಡ್ರಗ್ಸ್ ಜಾಲದ ಕರಾಳ ದಂಧೆಗೆ ಕಡಿವಾಣ ಹಾಕುವ ಮನಸ್ಸಿಲ್ಲದ ಸರ್ಕಾರ ಕೇವಲ ‘ರಿಹಾಬ್ ಸೆಂಟರ್ ಗಳಿಗೆ ಗಾಂಜಾ ಗಿರಾಕಿಗಳನ್ನು ಸೇರಿಸಿ!’ ‘ಪೆಡ್ಲರ್ ಗಳನ್ನು ಡೀ-ಅಡಿಕ್ಷನ್ ಕೇಂದ್ರದಲ್ಲಿ ಕೌನ್ಸೆಲಿಂಗ್ ಮಾಡೀ!’ ‘ಆಸ್ಪತ್ರೆಯಲ್ಲಿ ಡ್ರಗ್ಸ್ ತಿನ್ನೊರನ್ನು ಹಾಕಿ ಚಿಕಿತ್ಸೆ ನೀಡಿ!’ ಎಂದು ಬಿಟ್ಟಿ ಸಲಹೆ ಸೂಚನೆಗಳನ್ನು ನೀಡಿದರೇ ಏನು ಪ್ರಯೋಜನ? ಈ ಪಳಗಿದ ಪೆಡ್ಲರ್ ಗಳನ್ನು, ಆಸ್ಪತ್ರೆಯ ಬೆಡ್ ಮೇಲೆ ಅಂಗಾತ ಮಲಗಿಸಿ ಪರಿವರ್ತಿಸುತ್ತೇವೆ ಎಂದು, ಕಣ್ಣೊರೆಸುವ ಪರಿಪರಿಯಾದ ನಾಟಕಮಾಡುತ್ತಿರುವುದರ ಹಿಂದಿನ ಮರ್ಮವೇನು? ಎಂಬುದು ಈ ದೇಶದ ಪ್ರಜೆಗಳಿಗೆ ಅರ್ಥವಾಗಬೇಕಿದೆ.
ಶ್ರೀಮಂತರು, ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು, ಕ್ರೀಡಾ ಪಟುಗಳು, ಇತ್ತೀಚೆಗೆ ಹೆಚ್ಚಾಗಿ ಭಾರತದಲ್ಲಿ ಡ್ರಗ್ಸ್ ಬಳಕೆಯ, ಸಾಗಾಣಿಕೆಯ, ಮಾರಾಟದ ಜಾಲದಲ್ಲಿ ಪೊಲೀಸರ ಬಲೆಗೆ ಬಿದ್ದು ಜೈಲುಗಳ ಪಾಲಾಗುತ್ತಿದ್ದಾರೆ! ಆದ ಕಾರಣದಿಂದಲೇ ಬೆಚ್ಚಿ ಬಿದ್ದಿರುವ ಈ ಸೋ ಕಾಲ್ಡ್ ಸೆಲೆಬ್ರಿಟಿಗಳೂ ಮುಜುಗರದಿಂದ, ಮಾನ ಮರ್ಯಾದೆಗೆದರಿ, ಜೈಲುವಾಸ ತಪ್ಪಿಸಿಕೊಳ್ಳಲು ಈ ಹೊಸ ಕಾನೂನಿನ ತಿದ್ದುಪಡಿ ನಾಟಕಕ್ಕೆ ನೀರೆರೆದು ಕೇಂದ್ರ ಸಚಿವಾಲಯದ ಮೂಲಕ ತಮ್ಮ ಬೇಳೆಕಾಳು ಬೇಯಿಸಿ ಕೊಳ್ಳುತ್ತಿರುವ ವಾಸನೆಬರುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಹೊಸ ಎನ್.ಡಿ.ಪಿ.ಎಸ್.ಆಕ್ಟ್ ತಿದ್ದುಪಡಿಯಿಂದ, ಭಾರತದಾದ್ಯಂತ ಡ್ರಗ್ಸ್ ಮಾಫಿಯಾ ಮತ್ತಷ್ಟು ಜಾಲ ವಿಸ್ತರಿಸಿಕೊಂಡು, ಬಲಿಷ್ಠವಾಗಿ ಬೆಳೆದು ಬಡ ಮದ್ಯಮ ವರ್ಗದ ಮಕ್ಕಳನ್ನು ಡ್ರಗ್ಸ್ ದಾಸರನ್ನಾಗಿ ಮಾಡಿ ಬಲಿಪಶು ಮಾಡುವ ಕಾಲ ದೂರವಿಲ್ಲ.
ಕಾಶ್ಮೀರದ ಗಡಿಗಳಿಂದ ಅರಬ್ಬಿ ಸಮುದ್ರದ, ಕರಾವಳಿ ಕಡಲ ತೀರಗಳಿಂದ, ಭಾರತದೊಳಕ್ಕೆ ಡ್ರಗ್ಸ್-ಗಾಂಜಾ ಮಾದಕವಸ್ತು ಕಳ್ಳಸಾಗಾಣಿಕೆ ಮಾಡಿ ತಂದು ದೇಶದ ಆರ್ಥಿಕತೆ-ಯುವಜನತೆ ಎರಡನ್ನೂ ಹಾಳು ಮಾಡುತ್ತಿರುವ ಪಾಕಿಸ್ತಾನದ ಸಂಚಿಗೆ ಈಗ ಜಾರಿಯಾಗುತ್ತಿರುವ ಬದಲಾದ ಹೊಸ ಎನ್.ಡಿ.ಪಿ.ಎಸ್.ಆಕ್ಟ್ (27,) ಕಾನೂನು ಸಹಕಾರಿಯಾಗಿದೆ! ಮಾದಕ ವಸ್ತು ಮಾರಾಟ ಮತ್ತು ಬಳಕೆಯ ವಿರುದ್ಧದ ಕಾನೂನು ನಮ್ಮದೇ ಆದರೂ ಈಗ ಅದರ ಸಂಪೂರ್ಣ ಫಲಾನುಭವಿ ಪಾಪಿ ಪಾಕಿಸ್ತಾನದ ಪೆಡ್ಲರ್ ಗಳು ಎನ್ನುವಂತಾಗಿದೆ! ಜಾಗತಿಕವಾಗಿ ಗಂಡಾಂತರ ಕಾರಿಯಾಗಿರುವ, ಭಾರತದ ಭವಿಷ್ಯಕ್ಕೆ ಮಾರಕವಾಗಿರುವ, ಈ ಮಾದಕ ವ್ಯಸನದ ಪಿಡುಗನ್ನು ಕಿತ್ತೊಗೆಯಲು, ಇನ್ನೂ ಬಲಿಷ್ಠವಾದ ಕಾನೂನು ಬೇಕು ಎನ್ನುತ್ತಿದ್ದ ಸಮಯದಲ್ಲೇ, ಹೀಗೇ ನಮ್ಮ ಕೇಂದ್ರ ಸರ್ಕಾರವೇ ಇದ್ದ ಕಾನೂನನ್ನೇ ಢಮ್ಮಿ ಮಾಡಿ, ಸಡಿಲಗೊಳಿಸಿ ಡ್ರಗ್ಸ್ ದಂಧೆ ಕೋರರಿಗೆ ಅನುಕೂಲ ಮಾಡಿಕೊಟ್ಟರೇ ದೇಶದ ಯುವ ಜನತೆಯನ್ನು ಕಾಪಾಡುವವರಾರು? ನಾವು ಎಂತಹ ಸಮಾಜ ನಿರ್ಮಾಣ ಮಾಡಲು ಹೊರಟಿದ್ದೇವೆ? ಕಾನೂನು ಜಾರಿಗೊಳಿಸುವ ನಮ್ಮ ದೇಶದ ರಾಜಕಾರಣಿಗಳ ಮಿದುಳಿನೊಳಗೇ ಏನಿದೇ? ಡ್ರಗ್ಸ್ ಎಂಬ ಅಷ್ಟು ದೊಡ್ಡ ಕ್ರಿಮಿನಲ್ ಅಪೆನ್ಸ್ ಒಂದನ್ನು ಗ್ರಾಂ ಗಳ ಲೆಕ್ಕದಲ್ಲಿ ಅಳೆದು ತೂಗಿ ಈಗ ಹೊಸ ಕ್ರಿಮಿನಲ್ ಕಾನೂನು ರಚಿಸಿ ಶಿಫಾರಸು ಮಾಡಿರುವ ನಮ್ಮನ್ನಾಳುವ ಸರ್ಕಾರಗಳು ಇದಕ್ಕಿಂತಲೂ ಹಿಂದೆ 1985 ರಲ್ಲಿ ನಿಷೇಧಿಸಿ ಜಾರಿಗೆ ತರಲಾಗಿದ್ದ ಡ್ರಗ್ಸ್ ಪೂರೈಕೆ-ಸಾಗಾಣಿಕೆ-ಬಳಕೆಯ ಹಳೆಯ ಕಾನೂನಿನ ಬಲಿಷ್ಠ ಕೋಟೆಯನ್ನೇ ಕುಟ್ಟಿ ಕೆಡವಿ ಬಿಟ್ಟಿವೆ! ಈ ಹಿಂದೆ ಡ್ರಗ್ಸ್ ಸೇವಿಸಿದವರಿಗೂ, ಇಟ್ಟುಕೊಂಡಿದ್ದವರಿಗೂ ಶಿಕ್ಷೆ ಯಾಗುತ್ತಿತ್ತು. ಈಗ 1000 ಗ್ರಾಂ ಡ್ರಗ್ಸ್ ಇಟ್ಟುಕೊಂಡಿದ್ದರೂ ಸೇವಿಸಿದರೂ ಶಿಕ್ಷೆ ಯಾಗುವುದಿಲ್ಲ! ಅದು ಅಪರಾಧವೇ ಅಲ್ಲ! ಅಂದರೆ ಈಗ ಮನೆಯ ಒಳಗೇ ಹೂ ಕುಂಡಗಳಲ್ಲಿ ಖಾಸಗಿ ಸೇವನೆಗೆಂದು 1000 ಗಾಂಜಾ ಬೆಳೆದುಕೊಳ್ಳುವವರಿಗೆ ಭರ್ಜರಿ ಹಬ್ಬ!
ಕಳ್ಳತನದಲ್ಲಿ ಮನೆಯ ಟೆರೇಸ್ ಮೇಲೆ ಬೆಳೆಯುವ ಗಾಂಜಾ ಸೊಪ್ಪಿನ್ನು 500 ಗ್ರಾಂ ಗಾಂಜಾ ಪ್ಯಾಕೇಟ್ ಗಳಾಗಿ ಮಾಡಿ ‘ಸಿಹಿ ತುಳಸಿ!’ ಹೆಸರಲ್ಲಿ ಆಯುರ್ವೇದಿಕ್ ಔಷಧಿಗಳ ಲೈಬಲ್ ಕೆಳಗೆ ಅಮೆಜಾನ್ ಅಂತರ್ ಜಾಲ ತಾಣಗಳಲ್ಲಿ ಹರಾಜು ಹಾಕುವವರಿಗೂ ಹಬ್ಬ ಈಗ! ಒಟ್ಟಾರೆ ಸರ್ಕಾರದ ಒಂದು ಸಣ್ಣ ತಿದ್ದುಪಡಿ ಯಡವಟ್ಟಿನಿಂದ ಈಗ ಗಾಂಜಾ ದಂಧೆ ವಿಚಿತ್ರ ತಿರುವು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಇನ್ನು ಕಾಲೇಜು ಕಾರಿಡಾರುಗಳಲ್ಲಿ, ದೇಶದ ವಿವಿಧ ಜೈಲಿನ ಕೋಣೆ ಕೋಣೆಗಳಲ್ಲಿ ಗಾಂಜಾ ಮತ್ತಿನದೇ ಗಮ್ಮತ್ತು; ಡ್ರಗ್ಸ್ ಪೆಡ್ಲರ್ ಗಳ ಜೇಬಿನಲ್ಲಿ ಕಾಸಿನ ಕಾರುಬಾರು ಬಲು ಜೋರು!
ಈ ಹಿಂದೆ ಮಾದಕ ವಸ್ತು ಸೇವಿಸಿದರೆರೇ ಒಂದರಿಂದ ಹತ್ತು ವರ್ಷಗಳ ವರೆಗೂ ಜೈಲುಶಿಕ್ಷೆ ಇದೆ ಎಂದು ಗೊತ್ತಿದ್ದಾಗಲೇ ಭಾರತದಲ್ಲಿ ಡ್ರಗ್ಸ್ ಮಾಫಿಯಾ ಜಾಲ ಉತ್ತುಂಗದಲ್ಲಿತ್ತು. ಡ್ರಗ್ಸ್ ಅಡಿಕ್ಟ್ ಗಳೂ ಸಾಕಷ್ಟಿದ್ದರು. ಇನ್ನು ‘ಸಣ್ಣ ಪ್ರಮಾಣ’ ದ ಗಾಂಜಾ(1000 ಗ್ರಾಂ)ಇಟ್ಟುಕೊಂಡು ಸೇವಿಸಿದರೇ ಶಿಕ್ಷೆಯೇ ಇಲ್ಲ ಎಂಬ ‘ಕುರುಡು ಕಾನೂನು’ ಸರ್ಕಾರಗಳಿಂದಲೇ ಜಾರಿಯಾದರೇ ಕಾದು ಕುಳಿತಿರುವ ಮಾದಕ ವ್ಯಸನಿ ಚಟದಾಸರಿಗೆ ವರದಾನವಾದಂತಲ್ಲವೇ? ದೇಶದ ಪ್ರಜ್ಞಾವಂತ ನಾಗರಿಕರು ‘ಡ್ರಗ್ಸ್ ಮಾಫಿಯಾ ಜಾಲವನ್ನು ಬುಡಸಮೇತ ಕಿತ್ತೊಗೆಯಿರಿ ಕಠಿಣ ಕಾನೂನುಗಳನ್ನು ರೂಪಿಸಿ ಜಾರಿಗೆ ತನ್ನಿ’ ಎಂದು ಬಹಿರಂಗವಾಗಿ ಪ್ರತಿಭಟಿಸಿ ಸರ್ಕಾರ ಗಳಿಗೆ ಎಚ್ಚರಿಸಿ ಧ್ವನಿ ಎತ್ತುತ್ತಿರುವಾಗಲೇ ಹೀಗೆ ಇದ್ದ ಒಂದು ಕಾನೂನನ್ನು ಸಡಿಲಿಸಿ ಅಂತರ್ ಜಾಲದಲ್ಲಿ ಕುಳಿತು ಕೊರಿಯರ್ ಮೂಲಕ ಡ್ರಗ್ಸ್ ಮಾರುವ ಡಾರ್ಕ್ ನೆಟ್ ಕಳ್ಳರಿಗೆ, ಭಾರತೀಯರನ್ನು ಕೊಲ್ಲಲು, ಬಂದೂಕು ಬಾಂಬುಗಳನ್ನು ಕೊಳ್ಳಲು, ಭಾರತದೊಳಗೆ ಡ್ರಗ್ಸ್ ದಂಧೆ ನಡೆಸಿ ಹಣ ಮಾಡುವ ಭಯೋತ್ಪಾದಕರಿಗೆ ಅನುಕೂಲ ವಾಗುವಂತಹ ಸಾಧ್ಯತೆಗಳಿರುವ ಈ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹೊಸ ಕಾನೂನು ಈ ದೇಶಕ್ಕೆ ಮಾರಕವಾಗಿದೆ. ಮಾದಕ ವಸ್ತು ನಿಯಂತ್ರಣ ದಳ (ಎನ್.ಸಿ.ಬಿ) ದ ಅಧಿಕಾರಿಗಳು ಹಗಲು ರಾತ್ರಿ ನಿದ್ದೆಗೆಟ್ಟು ನಡೆಸುವ ಡ್ರಗ್ಸ್ ದಂಧೆ ವಿರುದ್ಧದ ಕಾರ್ಯಾಚರಣೆ ಗಳು, ಪೊಲೀಸರು ಡ್ರಗ್ಸ್ ವ್ಯಸನದ ಅರಿವು ಮೂಡಿಸುವ ಕ್ಯಾಂಪೇನ್ ಗಳು, ಇನ್ನು ಮುಂದೆ ಅರ್ಥಹೀನ ವೆನಿಸಿಕೊಂಡು ನಗೆಪಾಟಲಿಗೀಡಾಗುತ್ತವೆ!
ಇಪ್ಪತ್ತು ಸಾವಿರ ಕೋಟಿಗೂ ಅಧಿಕ ಬೆಲೆಯ ಮಾದಕವಸ್ತುಗಳು ದೇಶದ ಪ್ರತಿಷ್ಠಿತ ವ್ಯಕ್ತಿಗಳ ಖಾಸಗಿ ಬಂದರುಗಳಿಗೆ ಸ್ಮಗ್ಲಿಂಗ್ ಮೂಲಕ ಬಂದಿಳಿಯುತ್ತಿರುವ ಹೊತ್ತಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಮೂಲಕ ದೇಶಾದ್ಯಂತ ಮೆರಿಜುವಾನ ಡ್ರಗ್ಸ್, ಗಾಂಜಾ, ಚರಸ್ಸು-ಹಶೀಷು. ಎಲ್ ಎಸ್ಡೀ ಹೆವೀ ಕಿಕ್ ಸ್ಟಾಂಪ್ ಪೇಪರ್ ಡ್ರಗ್ಸ್, ಸಪ್ಲೈ ಆಗುತ್ತಿರುವ ಕಾಲದಲ್ಲಿ, ಅಂತರ್ ಜಾಲ ತಾಣಗಳೇ ಡ್ರಗ್ಸ್ ಪೆಡ್ಲಿಂಗ್ ಆನ್ ಲೈನ್ ನಿಲ್ದಾಣವಾಗಿ ಪರಿವರ್ತಿತ ವಾಗಿರುವ ಸಮಯದಲ್ಲಿ , ಸಿಸಿಬಿ ಪೊಲೀಸರು ದಿನಕ್ಕೊಬ್ಬರಂತೆ ವಿದೇಶಿ ಡ್ರಗ್ಸ್ ಪೆಡ್ಲರ್ ಗಳನ್ನು ಹೆಡೆಮುರಿ ಕಟ್ಟಿ ತಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದೂಡುತ್ತಿರುವ ವಾಸ್ತವದೆದುರೂ, ನಮ್ಮ ಗವರ್ನಮೆಂಟ್ ಗಾಂಜಾಗೆ ಜೈ ಎಂದು ಹೇಳುವ ಅನಿವಾರ್ಯತೆ-ಅವಶ್ಯಕತೆ ಏನಿತ್ತು ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.