ಶಿವಾಜಿ ಗಣೇಶನ್ ಅಭಿನಯದ ಪಂತುಲು ನಿರ್ಮಾಣದ ಮಕ್ಕಳ ರಾಜ್ಯ
ಬಿ.ಆರ್.ಪಂತುಲು ನಿರ್ಮಿಸಿ ನಿರ್ದೇಶಿಸಿದ ಕಪ್ಪು-ಬಿಳುಪು ಜಾನಪದ ಕಥಾ ಹಂದರದ ‘ಮಕ್ಕಳ ರಾಜ್ಯ‘ ಚಲನಚಿತ್ರ ೧೯೬೦ರಲ್ಲಿ ತೆರೆಗೆ ಬಂದಿತು. ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಜೊತೆಯಲ್ಲಿ ಎಂ.ವಿ.ರಾಜಮ್ಮನವರ ಎಂ.ವಿ.ಆರ್ ಪ್ರೊಡಕ್ಷನ್ಸ್ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದರು, ಮಕ್ಕಳ ಪಾತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾದ ಮೊದಲ ಚಿತ್ರ ಇದು. ಈ ಚಿತ್ರದಲ್ಲಿ ಹಿರಿಯ ನಟರ ಅಭಿನಯಕ್ಕಿಂತಲೂ ಮಕ್ಕಳ ಅಭಿನಯವೇ ಪ್ರಮುಖವಾಗಿತ್ತು. ಆ ಕಾಲಕ್ಕೆ ಇದೊಂದು ಪ್ರಯೋಗಾತ್ಮಕ ಚಿತ್ರವೆಂದೇ ಹೇಳಬಹುದಿತ್ತು. ಎಸ್.ಆರ್.ಪುಟ್ಟಣ್ಣ ಕಣಗಾಲ್ ಹಾಗೂ ಸಿಂಗಮುತ್ತು ಸಹಾಯಕ ನಿರ್ದೇಶಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದರು.
‘ಕಥಾಸಂಗಮ‘ ಚಿತ್ರದ ಮೂಲಕ ಗಮನ ಸೆಳೆದ ನಟ ಎಂ.ಎಸ್.ಉಮೇಶ್ ಬಾಲ ನಟರಾಗಿ ಈ ಚಿತ್ರದ ನಾಯಕ ಪಾತ್ರದಲ್ಲಿ ಅಭಿನಯಿಸಿದರು. ಬಿ.ಆರ್.ಪಂತುಲು ಹಾಗೂ ಶಿವಾಜಿ ಗಣೇಶನ್ ಅವರ ನಡುವೆ ಇದ್ದ ಗಾಢ ಸ್ನೇಹದ ಪರಿಣಾಮವಾಗಿ ‘ಸ್ಕೂಲ್ ಮಾಸ್ಟರ್‘ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದ ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಈ ಚಿತ್ರದಲ್ಲಿ ಸಹ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡರು. ಶಿವಾಜಿ ಗಣೇಶನ್ ಅವರು ಈ ಚಿತ್ರದಲ್ಲಿ ವಿಜ್ಞಾನಿಯ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದರು. ಉಮೇಶ್ ಹಾಗೂ ಮುಖ್ಯ ಬಾಲ ನಟಿಯಾಗಿ ಲಕ್ಷ್ಮಿ ನಟಿಸಿದ ಈ ಚಿತ್ರದಲ್ಲಿ ಎಂ.ವಿ.ರಾಜಮ್ಮ, ಬಿ.ಆರ್.ಪಂತುಲು, ನರಸಿಂಹರಾಜು, ಢಿಕ್ಕಿ ಮಾಧವರಾವ್, ಹನುಮಂತಾಚಾರ್, ಬಾಲಕೃಷ್ಣ, ರಾಮಚಂದ್ರಶಾಸ್ತ್ರಿ, ಜಾರ್ಜ್ ಇಂದಿರಾ, ಚಿ.ಉದಯಶಂಕರ್, ಪಾಪಮ್ಮ, ಕಾಂಚನಾ, ಎಂ.ಎನ್.ಲಕ್ಷ್ಮಿದೇವಿ, ಕಲಾ ಮುಂತಾದವರು ಅಭಿನಯಿಸಿದರು. ಈ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ ಕಲಾವತಿ ಮುಂದೆ ದೇವರು ಕೊಟ್ಟ ತಂಗಿ ಚಿತ್ರದಲ್ಲಿ ನಟಿಸಿದರು.
ಚಂದ್ರಲೋಕಕ್ಕೆ ರಾಕೆಟ್ ಕಳುಹಿಸುವ ದೃಶ್ಯ ಈ ಚಿತ್ರದಲ್ಲಿದ್ದು, ಈ ಚಿತ್ರ ಬಿಡುಗಡೆ ಆದ ಸಂದರ್ಭಕ್ಕೆ ಪ್ರೇಕ್ಷಕರಲ್ಲಿ ಸೋಜಿಗವನ್ನು ತಂದಿತು. ಭಾಗಶಃ ಬಣ್ಣದಲ್ಲಿ ಸಿದ್ಧಗೊಂಡ ಈ ಚಿತ್ರ ಜಾನಪದ ಕಥೆಯೊಂದರ ಸ್ಫೂರ್ತಿಯಿಂದ ದಾದಾ ಮೀರಾಸಿಯವರು ಮಕ್ಕಳಿಗಾಗಿಯೇ ರಚಿಸಿದ ಕಥಾ ಹಂದರನ್ನು ಒಳಗೊಂಡಿತ್ತು. ಚಿ.ಸದಾಶಿವಯ್ಯ ಸಂಭಾಷಣೆ ರಚಿಸಿದರು. ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ ಈ ಚಿತ್ರಕ್ಕಾಗಿ ಕಣಗಾಲ್ ಪ್ರಭಾಕರಶಾಸ್ತ್ರಿ ಹಾಗೂ ಚಿ.ಸದಾಶಿವಯ್ಯ ಗೀತೆಗಳನ್ನು ರಚಿಸಿದರು. ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಜಿಕ್ಕಿ, ಜಮುನಾರಾಣಿ, ರಾಜೇಶ್ವರಿ, ಕೆ.ಕಮಲ, ಪದ್ಮ, ಜಾನಕಿ ಹಾಗೂ ಶಿರ್ಕಾಳಿ ಗೋವಿಂದರಾಜನ್ ಗೀತೆಗಳನ್ನು ಹಾಡಿದ್ದಾರೆ. ಡಬ್ಲ್ಯೂ.ಆರ್.ಸುಬ್ಬರಾವ್ ಹಾಗೂ ಎಂ.ಕರಣನ್ ಜಂಟಿಯಾಗಿ ಛಾಯಾಗ್ರಹಣ ನೀಡಿದ ಮಕ್ಕಳ ರಾಜ್ಯ ಚಿತ್ರಕ್ಕಾಗಿ ಆರ್.ದೇವರಾಜ್ ಸಂಕಲನ ಕಾರ್ಯ ನೆರವೇರಿಸಿದ್ದಾರೆ. ಈ ಚಿತ್ರ ಮದರಾಸಿನ ಭರಣಿ ಹಾಗೂ ಫಿಲ್ಮ್ಸೆಂಟರ್ ಸ್ಟುಡಿಯೊದಲ್ಲಿ ಚಿತ್ರೀಕರಣಗೊಂಡಿತು. ೧೪೩೯೪ ಅಡಿ ಉದ್ದದ ಈ ಚಿತ್ರ ೧೯೬೦ರ ಜುಲೈ ೨೬ರಂದು ಸೆನ್ಸಾರ್ ಅಯಿತು.
ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಹಾಸ್ಯನಟರಾಗಿ ರೂಪುಗೊಂಡ ಉಮೇಶ್ ಈ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಟ ಉಮೇಶ್ ಅವರು ಈ ಚಿತ್ರದಲ್ಲಿ ಅಭಿನಯಿಸಿದ ಹೀಗೆ ನೆನಪಿಸಿಕೊಳ್ಳುತ್ತಾರೆ: “ಮರೆಯಲಾಗದ ಘಟನೆಯೆಂದರೆ, ೧೯೫೯ರಲ್ಲಿ ತಿಪಟೂರಿನಲ್ಲಿ ನಾಟಕ ಕಂಪೆನಿಯೊಂದರಲ್ಲಿ ಯೋಗಾನರಸಿಂಹ ಅವರು ರಚಿಸಿದ ‘ಚಂದ್ರಹಾಸ‘ ನಾಟಕದಲ್ಲಿ ನಾನು ಚಂದ್ರಹಾಸನ ಪಾತ್ರ ನಿರ್ವಹಿಸುತ್ತಿದ್ದೆ. ಒಂದು ದಿನ ನಾಟಕ ಪ್ರದರ್ಶನವಾಗುತ್ತಿದ್ದಾಗ ಒಬ್ಬರು ಬಂದು ನಾಟಕವನ್ನು ವೀಕ್ಷಿಸಿ, ನಂತರ ನನ್ನನ್ನು ಕರೆದು ಮಾತನಾಡಿಸಿದರು. ನಂತರ ಅವರು ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಎಂದು ತಿಳಿಯಿತು. ಪಂತುಲು ಅವರು ತೆಗೆಯಲಿದ್ದ ಮಕ್ಕಳರಾಜ್ಯ ಚಿತ್ರಕ್ಕೆ ಅವರು ಬಾಲ ಕಲಾವಿದರೊಬ್ಬರ ಅನ್ವೇಷಣೆಯಲ್ಲಿದ್ದರು. ನಾನು ಆ ಚಿತ್ರಕ್ಕೆ ಆಯ್ಕೆಯಾಗಿದ್ದು, ತಮ್ಮೊಂದಿಗೆ ಮದರಾಸಿಗೆ ಬರಲು ತಿಳಿಸಿದರು.
ಬೇರೆ ಬಟ್ಟೆ ಇಲ್ಲದ್ದರಿಂದ ಹರಿದು ಹೋಗಿದ್ದ ಉಟ್ಟ ಬಟ್ಟೆಯಲ್ಲೇ ಅವರೊಂದಿಗೆ ಹೊರಟುಬಿಟ್ಟೆ. ಬೆಂಗಳೂರಿಗೆ ಕರೆ ತಂದ ಪುಟ್ಟಣ್ಣನವರು ನನಗೆ ಹೊಸ ಬಟ್ಟೆ, ಚಪ್ಪಲಿ ಕೊಡಿಸಿ ರೈಲಿನಲ್ಲಿ ಮದರಾಸಿಗೆ ಕರೆದುಕೊಂಡು ಹೋದರು. ಪಂತುಲು ಅವರು ನನ್ನನ್ನು ನೋಡಿ ಪಾತ್ರಕ್ಕೆ ಸೂಕ್ತ ಹುಡುಗ ಎಂದು ನನ್ನನ್ನು ಆರಿಸಿಕೊಂಡರು. ನಾನು ಇಂದು ಚಿತ್ರರಂಗದಲ್ಲಿ ನೆಲೆಯೂರಿರಬೇಕಾದರೆ ಅದಕ್ಕೆ ಪ್ರಮುಖ ಕಾರಣಕರ್ತರು ಬಿ.ಆರ್.ಪಂತುಲು ಹಾಗೂ ಪುಟ್ಟಣ್ಣ ಕಣಗಾಲ್