ವೀರಸೈನಿಕನ ಅಚಾನಕ ಬದುಕಿನ ತಿರುವಿನ ದುರ್ಘಟನೆಯ ಕಥೆ…
ಆ ಹೊತ್ತು ಬೆಳಗಿನಿಂದ ನಾನು ಒಂದೇ ಸಮನೆ ಗೆಳೆಯ ಶಿವಕುಮಾರ್ ಬೆನ್ನು ಬಿದ್ದಿದ್ದೆ. ಒಂದನೇ ತರಗತಿಯಲ್ಲಿ ಕಾಲಿಟ್ಟಾಗಲೇ ಶಾಲೆಯ ನನ್ನ ಮೊತ್ತಮೊದಲ ಒಡನಾಡಿಯಾಗಿ ಬಾಹ್ಯಪ್ರಪಂಚದ ನನ್ನ ‘ಮೊದಲ ಗೆಳೆಯ’ ಎನ್ನುವ ಹೆಗ್ಗಳಿಕೆಗೆ ಪಾತ್ರನಾದವನು ಈ ಬಳ್ಳಾರಿ ಶಿವಕುಮಾರ್. ಶಿವಕುಮಾರ್ ಒಟ್ಟಿಗಿನ ಸ್ನೇಹ ದಿನಕಳೆದಂತೆ ಕಡಿಮೆಯಾಗುತ್ತಾ ನಡೆದಿದ್ದಕ್ಕೆ ಬಹಳ ಪ್ರಮುಖ ಕಾರಣ ಎಂದರೆ ತದನಂತರದ ದಿನಮಾನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಜಾಕೀರ್ ಹುಸೇನ್, ನಾಗರಾಜ್, ಜಕಣಾಚಾರಿ, ಚಿದಾನಂದ್, ಕಾಂತರಾಜ್, ಯತಿರಾಜ್, ರುದ್ರಮುನಿಯೇ ಮೊದಲಾದ ಸ್ನೇಹಿತರು. ನಾನು ಮೂರನೇ ತರಗತಿಗೆ ಹೋಗುವ ವೇಳೆಗೆ ನನ್ನ ಮತ್ತು ಶಿವಕುಮಾರ್ ನಡುವಿನ ಗೆಳೆತನ ಮೊದಲಷ್ಟು ಗಟ್ಟಿಯಾಗಿರಲಿಲ್ಲ. ಈ ಮಧ್ಯೆ ಅವನಿಗೂ ನಿಧಾನವಾಗಿ ಹೊಸಗೆಳೆಯರ ಸಾಂಗತ್ಯ ಸಿದ್ಧಿಸಿತ್ತು. ಸಂಜೆ ಆಟವಾಡಲು ತನ್ನ ಮನೆಯ ಬಳಿಯ ಗೆಳೆಯರನ್ನೇ ಅರಸಿ ಹೋಗುತ್ತಿದ್ದ ಶಿವಕುಮಾರ್ ಮೊದಲಿನ ಹಾಗೆ ಆಟವಾಡಲು ಬಸ್ ಸ್ಟ್ಯಾಂಡ್ ಬಳಿಯ ನನ್ನ ಗೆಳೆಯರ ಬಳಗದ ಸಮೀಪ ಎಡತಾಕುತ್ತಿದ್ದದ್ದನ್ನು ಮೊದಲನೇ ತರಗತಿಯ ಕೊನೆಯ ತಿಂಗಳುಗಳಲ್ಲಿಯೇ ನಿಲ್ಲಿಸಿದ್ದ.
ಆದರೆ ಮೂರನೇ ಇಯತ್ತೆಯ ಉತ್ತರಾರ್ಧದ ಆ ಒಂದು ದಿನ ಶಿವಕುಮಾರ್ ಇದ್ದಕ್ಕಿದ್ದ ಹಾಗೇ ನನಗೆ ಬಹಳ ಬೇಕಾದ ಗೆಳೆಯನಾಗಿ ಹೋಗಿದ್ದ. ಹಿಂದಿನ ದಿನ ಕಡಬನಕಟ್ಟೆ ರಂಗಪ್ಪಮಾಸ್ತರ ಗಣಿತದ ತರಗತಿಯ ನಂತರ ನನ್ನ ಬಳಿ ಸಾರಿದ ಶಿವಕುಮಾರ್ ಮಿಲಿಟರಿ ಸೇವೆಯಲ್ಲಿದ್ದ ತನ್ನ ಸೋದರಮಾಮ ಗಂಗಾಧರ್ ನಾಳೆ ಸಂಜೆ ಊರಿಗೆ ಬರುತ್ತಿರುವುದಾಗಿ ತಿಳಿಸಿದ್ದ. ಸುಮಾರು ಎರಡು ವರ್ಷಗಳ ಹಿಂದೆ ಒಂದನೇ ತರಗತಿಯಲ್ಲಿ ಇದ್ದಾಗ ಹೆಚ್ಚೂಕಡಿಮೆ ದಿನದ ಬಹುಭಾಗವನ್ನು ಶಿವಕುಮಾರ್ ಮನೆಯಲ್ಲಿಯೇ ಕಳೆಯುತ್ತಿದ್ದೆನಾದುದ್ದರಿಂದ ನಾನು “ಮಿಲ್ಟ್ರಿ ಗಂಗಣ್ಣ” ಎಂದು ಪ್ರೀತಿಯಿಂದ ಸಂಭೋದಿಸುತ್ತಿದ್ದ ಬಳ್ಳಾರಿ ಗಂಗಾಧರ್ ನ್ನು ಆತ ಊರಲ್ಲಿ ಇದ್ದ ಸುಮಾರು ಎರಡು ತಿಂಗಳುಗಳ ಕಾಲ ಬಹಳ ಸನಿಯದಿಂದ ನೋಡಿದ ನಾನು ಅಕ್ಷರಶಃ ಆತನನ್ನು ಆರಾಧಿಸತೊಡಗಿದ್ದೆ. ನಾನು “ಪ್ರಜಾವಾಣಿ” ದಿನಪತ್ರಿಕೆಯಲ್ಲಿ ನಿತ್ಯ ತಪ್ಪದೇ ಓದುತ್ತಿದ್ದ ಕಾರ್ಟೂನ್ ನ “ಫ್ಯಾಂಟಮ್ ” ಪಾತ್ರ ನನ್ನ ಕಣ್ಣೆದುರಿಗೇ ಬಂದು ನಿಂತ ಅನುಭೂತಿಯನ್ನು ಗಂಗಣ್ಣನನ್ನು ಕಂಡ ಪ್ರತೀಸಲ ಹೊಂದುತ್ತಿದ್ದೆ. ಊಟತಿಂಡಿಯ ಚಿಂತೆಯಿಲ್ಲದೆ ರಜಾದಿನಗಳಂದು ದಿನಪೂರ್ತಿ ಗಂಗಣ್ಣನ ಹಿಂದೆ ಮುಂದೆ ಶಿವಕುಮಾರ್ ಜೊತೆಗೂಡಿ ಸುಳಿದಾಡಿದರೆ ಏನೋ ದೊಡ್ಡ ಸಾಧನೆಯನ್ನು ಮಾಡಿದ ಆತ್ಮತೃಪ್ತಿ ಸಿಗುತ್ತಿತ್ತು.
ಗಂಗಾಧರ್ ಶಿವಕುಮಾರ್ ತಾಯಿ ಬಳ್ಳಾರಿ ಮೀನಾಕ್ಷಮ್ಮನ ಕೊನೆಯ ಮುದ್ದಿನ ತಮ್ಮ. ಹತ್ತನೇ ತರಗತಿಯವರೆಗೆ ಮಾತ್ರ ಅಂದು ನನ್ನೂರಿನಲ್ಲಿ ಲಭ್ಯವಿದ್ದ ವಿಧ್ಯಾಭ್ಯಾಸವನ್ನು ಹಾಗೋ ಹೀಗೋ ಕಷ್ಟಪಟ್ಟು ಪೂರೈಸಿ ಮನೆಯವರ ವಿರೋಧದ ನಡುವೆಯೂ ಮಿಲಿಟರಿ ಸೇವೆಗೆ ಬಡ್ತಿಯಾಗಿ ಭಾರತೀಯ ಸೇನೆಗೆ ಸೇರಿದ್ದ. ಹದಿನೆಂಟು ವರ್ಷ ತುಂಬುವುದರ ಒಳಗಾಗಿಯೆ ಪೂರ್ಣಪ್ರಮಾಣದ ಸೈನಿಕನಾಗಿ ಹೊರಹೊಮ್ಮಿದ್ದ
ಗಂಗಾಧರ್ ಹೋದಸಲ ಊರಿಗೆ ಬಂದಾಗ ಅದಾಗಲೇ ತನ್ನ ನಾಲ್ಕು ವರ್ಷಗಳ ಯಶಸ್ವಿ ಸೇವಾಪಣಯವನ್ನು ಕ್ರಮಿಸಿದ್ದ. ಹೋದಸಲ ಬಂದಾಗ ಅರುಣಾಚಲ ಗಡಿಭಾಗದಲ್ಲಿ ನಿಯೋಜಿತನಾಗಿದ್ದ ಗಂಗಣ್ಣ ಒಂದು ವರ್ಷ ಮೊದಲಷ್ಟೆ ಕಾಶ್ಮೀರದ ಗಡಿಗೆ ವರ್ಗಾವಣೆಯಾಗಿದ್ದ. ದುರ್ಬಲವಾಗುತ್ತಾ ಸಾಗಿದ್ದ ನಮ್ಮ ಗೆಳೆತನದ ನಡುವೆಯೂ ಗಂಗಣ್ಣನಿಗೆ ಸಂಬಂಧಿಸಿದ ಮುಖ್ಯ ವಿಷಯಗಳನ್ನು ಶಿವಕುಮಾರ್ ಆಗಾಗ ನನ್ನೊಡನೆ ಹಂಚಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ನಾನು ಗಂಗಣ್ಣನನ್ನು ತುಂಬಾ ಹಚ್ಚಿಕೊಂಡಿದ್ದ ವಿಷಯ ಕೇವಲ ಶಿವಕುಮಾರ್ ಗೆ ಮಾತ್ರವಲ್ಲದೆ ಅವನ ಮನೆಯ ಉಳಿದ ಸದಸ್ಯರಿಗೂ ಚೆನ್ನಾಗಿ ತಿಳಿದ ವಿಷಯವೇ ಆಗಿತ್ತು.
ಮಿಲ್ಟ್ರಿ ಗಂಗಣ್ಣ ನನ್ನ ಎಳೆಯ ಮನಸ್ಸಿನ ಮೇಲೆ ಬಹಳ ಆಳ ಹಾಗೂ ಅಗಾಧವಾದ ಪ್ರಭಾವವನ್ನು ಬೀರಿದ್ದ. ಆರು ಆಡಿಗಳಿಗಿಂತಲೂ ತುಸು ಹೆಚ್ಚು ಎತ್ತರವಿದ್ದ ಗಂಗಣ್ಣನ ಬಾಹ್ಯರೂಪದ ವರ್ಣನೆಯ ವಿವರಗಳನ್ನು ಕೊಡಲು ನಾನು ಮುಂದೆ ಮಾಡಬೇಕಾಗಿರುವ ಸರ್ಕಸ್ ನ್ನು ಸುಮಾರು ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಯುದ್ದವಿಮಾನವನ್ನು ಹೊರಡುರುಳಿಸಿದ ಏರ್ ಕಮಾಂಡರ್ ಅಭಿನಂದನ್ ವರ್ಧಮಾನ್ ರ ಅಂದಿನ ಬಾಹ್ಯರೂಪ ಬಹಳಷ್ಟು ಹ್ರಸ್ವಗೊಳಿಸುತ್ತದೆ. ಅಂದು ಅಭಿನಂದನ್ ಅವರನ್ನು ಟೀವಿ ಪರದೆಯ ಮೇಲೆ ನೋಡಿದ ನಾನು ಒಂದು ಕ್ಷಣ ದಂಗಾಗಿ ಹೋಗಿದ್ದೆ. ಈತನನ್ನು ಮೊದಲೆಲ್ಲೋ ನೋಡಿದ್ದೆನಲ್ಲಾ ಎಂದು ಕೆಲವು ನಿಮಿಷಗಳ ಕಾಲ ಯೋಚಿಸಿದವನಿಗೆ ಅದು ಗಂಗಣ್ಣನ ನೆನಪು ಎಂದು ಆನಂತರದಲ್ಲಿ ಅರಿವಾಯಿತು.
ಥೇಟ್ ಅಂದ್ರೆ ಥೇಟ್ ಅಭಿನಂದನ್ ಅವರ ಪ್ರತಿರೂಪದಂತಿದ್ದ ಗಂಗಣ್ಣ ಅಭಿನಂದನ್ ಗಿಂತ ತುಸು ಕಡಿಮೆ ಗೌರ ವರ್ಣದ ದೇಹವನ್ನು ಹೊಂದಿದ್ದ. ಸದಾ ಕಡುಕಂದು ಬಣ್ಣ ಅಥವಾ ಕಪ್ಪುಬಣ್ಣದ ಸಫಾರಿಸೂಟ್ ಧರಿಸುತ್ತಿದ್ದ ಗಂಗಣ್ಣನ ಮೀಸೆ ಅಭಿನಂದನ್ ಮೀಸೆಯ ತದ್ರೂಪು. ತುಂಬಿದ ಕೆನ್ನೆಗಳ ಮೇಲೆ ಕಾಣುವಂತೆ ಅಲ್ಲಲ್ಲಿ ಎದ್ದು ಕಾಣುವಂತಿದ್ದ ಸಣ್ಣಸಣ್ಣ ಗುಳಿಗಳು, ಬಿಳಿಪಿನಲ್ಲಿ ತುಸು ಕಡಿಮೆಯಾದಂತೆ ತೋರುತ್ತಿದ್ದ ಮುಂಭಾಗದ ನಿಮ್ನದಂತಪಂಕ್ತಿಯ ನಾಲ್ಕು ಹಲ್ಲುಗಳು ಈಗ ನನಗೆ ನೆನಪಿರುವ ಹಾಗೆ ಗಂಗಣ್ಣ ಮತ್ತು ಅಭಿನಂದನ್ ನಡುವಿನ ಬಾಹ್ಯರೂಪದಲ್ಲಿನ ಪ್ರಮುಖ ವ್ಯತ್ಯಾಸಗಳು. ಕೈಯಲ್ಲಿ ಸರ್ದಾರ್ಜಿಗಳಂತೆ ಸದಾ ಸ್ಟೀಲ್ ಕಡಗವೊಂದನ್ನು ಧರಿಸುತ್ತಿದ್ದ ಗಂಗಣ್ಣ ನನ್ನ ಮೇಲೆ ಮಾಡಿದ ಮೋಡಿಯಲ್ಲಿ ಈ ಕಡಗದ ಪಾತ್ರವೂ ಬಹಳಷ್ಟಿರುವುದನ್ನು ನಾನಾಗಲೇ ಗುರುತಿಸಿದ್ದೆ. ತುಂಬಾ ಗಂಭೀರವದನನಾಗಿಯೆ ಇರುತ್ತಿದ್ದ ಗಂಗಣ್ಣ ಬಹಳ ಅಪರೂಪಕ್ಕೆ ಮತ್ತು ಅಗತ್ಯವಿದ್ದಾಗ ಮಾತ್ರ ಮಾತನಾಡುತ್ತಿದ್ದ. ಶಿವಕುಮಾರ್ ಒಟ್ಟಿಗೆ ಆತನ ಅಕ್ಕಪಕ್ಕದಲ್ಲಿಯೇ ಆಟವಾಡುತ್ತಿದ್ದ ನನ್ನನ್ನು ಇಡೀ ಎರಡು ತಿಂಗಳುಗಳ ಆತನ ರಜಾ ಅವಧಿಯಲ್ಲಿ ಕೇವಲ ಮೂರುಬಾರಿ ಮಾತ್ರ ಮಾತನಾಡಿಸಿದ್ದ ಎಂದರೆ ಆತ ಎಂತಹ ಮಿತಭಾಷಿ ಎನ್ನುವುದರ ಅರಿವಾದೀತು.
ಎರಡು ವರ್ಷಗಳ ಬಳಿಕ ಮಿಲ್ಟ್ರಿ ಗಂಗಣ್ಣ ಊರಿಗೆ
ಬರುತ್ತಿದ್ದಾನೆ ಎನ್ನುವ ವಿಷಯ ನನ್ನ ಮತ್ತು ಶಿವಕುಮಾರ್ ನಡುವಿನ ದುರ್ಬಲಗೊಂಡಿದ್ದ ಸ್ನೇಹತಂತುಗಳನ್ನು ಒಂದೇ ದಿನದಲ್ಲಿ ಗಟ್ಟಿಗೊಳಿಸಿ, ಗೆಳೆಯತನಕ್ಕೆ ಹಳೆಯ ಲಯವನ್ನು
ಮರಳಿ ತಂದಿತ್ತು. ಅಂಗಡಿಮನೆಯಲ್ಲಿ ಅವ್ವನಿಗೆ ಕಾಣದ ಹಾಗೆ ಎರಡೂ ನಿಕ್ಕರ್ ಜೇಬುಗಳಲ್ಲಿ ಶಿವಕುಮಾರ್ ಗೆ ಪ್ರಿಯವಾದ ಹುರಿದ ಬಟಾಣಿ ಕಾಳುಗಳನ್ನು ತುಂಬಿಕೊಂಡು, ಜೇಬಿನಲ್ಲಿ ಪ್ರಯಾಸದಿಂದ ಒಂದು ಬುಗ್ಗಿಉಂಡೆಯನ್ನು ತುರುಕಿಕೊಂಡು ಶಾಲೆಗೆ ಎಡತಾಕಿದವನು ತರಗತಿ ಆರಂಭವಾಗುವ ಮೊದಲೇ ಶಿವಕುಮಾರನ ಪಾಟೀಚೀಲಕ್ಕೆ ಅಷ್ಟೂ ತಿಂಡಿಗಳನ್ನು ಸುರಿದಿದ್ದೆ. ನನ್ನೆಡೆಗೆ ಮೆಚ್ಚುಗೆಯ ನೋಟ ಹರಿಸಿದ್ದ ಶಿವಕುಮಾರ್ ಹೇಳಿದ “ಮಾಮ ಈ ಹೊತ್ತು ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಬೆಂಗಳೂರಿನಿಂದ ಬರುತ್ತಾನೆ, ಶಾಲೆಯ ನಂತರ ನನ್ನ ಜೊತೆಗೇ ತಾತನ ಮನೆಗೆ ಹೋಗೋಣ” ಎನ್ನುವ
ಮಾತು ಕೇಳಿದ ನನಗೆ ಸ್ವರ್ಗ ಮೂರೇ ಗೇಣು ಉಳಿದಿತ್ತು. ಸ್ಕೂಲು ಯಾವಾಗ ಮುಗಿಯುತ್ತದೋ, ಗಂಗಣ್ಣನನ್ನು ಯಾವಾಗ ನೋಡುತ್ತೇನೆಯೋ ಎನ್ನುವ ಆಸೆ ನನ್ನನ್ನು ಇಡೀ ದಿನ ತುದಿಗಾಲಲ್ಲಿ ನಿಲ್ಲಿಸಿತ್ತು. ಅನ್ಯಮನಸ್ಕನಾಗಿ ತರಗತಿಯ ಪಾಠಪ್ರವಚನದಲ್ಲಿ ಆಸಕ್ತಿಯಿರದೆ ದಿನದೂಡಿದವನು ಈ ಮಧ್ಯೆ ಒಂದೆರೆಡು ಬಾರಿ ಮೇಷ್ಟ್ರ ಕೈಯಿಂದ ಬೈಸಿಕೊಂಡಿದ್ದೂ ಆಗಿತ್ತು.
ಶಾಲೆ ಮುಗಿದಿದ್ದೇ ತಡ ‘ನಾ ಮುಂದೆ, ನೀ ಮುಂದೆ’ ಎಂದು ಪುಸ್ತಕದ ಚೀಲಗಳನ್ನು ಹೆಗಲಿಗೆ ಹೇರಿಕೊಂಡು ಶಿವಕುಮಾರ್ ತಾತನ ಮನೆಗೆ ಬರ್ಕೀಸ್ ಬಿಟ್ಟ ನಮಗೆ ಮನೆಯ ಮುಂಬಾಗಿಲಿನಲ್ಲಿಯೇ ದೇವತಾ ದರ್ಶನವಾಯಿತು. ತನ್ನ ಎಂದಿನ ಕಪ್ಪು ಸಫಾರಿಸೂಟ್ ನಲ್ಲಿ ಕಂಗೊಳಿಸುತ್ತಿದ್ದ ನನ್ನ ಆರಾಧ್ಯದೈವ ಸೈನಿಕ ಗಂಗಣ್ಣನನ್ನು ಒಂದೆರೆಡು ನಿಮಿಷಗಳ ಕಾಲ ನಿಂತಲ್ಲಿಯೇ ನಿಂತು ಕಣ್ತುಂಬಿಕೊಂಡೆ. ಹೋದಸಲಕ್ಕಿಂತ ಸ್ವಲ್ಪ ದಪ್ಪನಾದಂತೆ, ಹೆಚ್ಚು ಗಟ್ಟಿಮುಟ್ಟಾದ, ಹುರಿಗಟ್ಟಿದ ಸ್ನಾಯು ಮತ್ತು ಮಾಂಸಖಂಡಗಳ ಸಮೇತನಾಗಿ ತೋರಿಬಂದ ಗಂಗಣ್ಣ ನನ್ನನ್ನು ನೋಡಿ ನಸುನಗೆ ಬೀರಿದ. ರಾಮಲಿಂಗದೇವರ ಹೆಗಲ ಬಲಭಾಗದ ಮೇಲಿನ ಹೂವೊಂದು ಕಳಚಿಬಿದ್ದು ನನ್ನನ್ನು ಅನುಗ್ರಹಿಸಿದ ಧನ್ಯತಾಭಾವನೆ ನನ್ನಲ್ಲಿ ಸುಳಿಯಿತು. ಈ ಸಲವೂ ಸುಮಾರು ಎರಡು ತಿಂಗಳುಗಳ ಕಾಲದ ರಜಾಅವಧಿಯ ಮೇಲೆ ಊರಿಗೆ ಬಂದಿದ್ದ ಗಂಗಣ್ಣ ವಾರದಲ್ಲಿ ಒಂದೆರಡು ದಿನ ತಪ್ಪದೇ ಬೆಳಗಿನ ಹನ್ನೊಂದು ಗಂಟೆಯ ‘ಜೈಹಿಂದ್ ” ಬಸ್ಸಿಗೆ ದುರ್ಗಕ್ಕೆ ಹೋದವನು ತಡರಾತ್ರಿಯ ಕೊನೆಯ “ಗೀತಾ” ಬಸ್ಸಿಗೆ ಊರಿಗೆ ಮರಳುವ ರಹಸ್ಯ ಮಾತ್ರ ನನ್ನ ಅರಿವಿಗೆ ಬರಲೇ ಇಲ್ಲ. ಗೆಳೆಯ ಶಿವಕುಮಾರ್ ಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದ ಹಾಗೆ ತೋರಲಿಲ್ಲ.
ಊರಿನ ತನ್ನ ವಾರಗೆಯ ಗೆಳೆಯರೊಂದಿಗೆ ಮಿಲ್ಟ್ರಿ ಗಂಗಣ್ಣ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಊರಲ್ಲಿ ಇದ್ದ ದಿನಗಳ ಸಂಜೆಗಳನ್ನ ಹೈಸ್ಕೂಲ್ ಮೈದಾನದಲ್ಲಿ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಆಟಗಳನ್ನು ಶಾಲೆಯ ವಿದ್ಯಾರ್ಥಿಗಳೊಂದಿಗೆ, ಊರಿನ ಯುವಕರೊಂದಿಗೆ ಬೆರೆತು ಆಡುವಲ್ಲಿ ಕಳೆಯುತ್ತಿದ್ದ. ಉಳಿದ ಎಲ್ಲಾ ವಿರಾಮದ ಸಮಯವನ್ನೂ ರಾಮಪ್ಪಶೆಟ್ರ ಮನೆಯ ಪಕ್ಕದಲ್ಲಿದ್ದ ಜಕ್ಕಪ್ಪನವರ ಮನೆಯ ಎದುರಿಗಿನ ದರ್ಜಿ ತಿಪ್ಪೇಸ್ವಾಮಿ ಅವರ ಬಟ್ಟೆ ಹೊಲಿಗೆಯ ಅಂಗಡಿಯಲ್ಲಿ ಕಳೆಯುತ್ತಿದ್ದ. ಗಂಗಣ್ಣನ ಹಿಂದೆ ಹಿಂದೆಯೆ ತಿಪ್ಪೇಸ್ವಾಮಿ ಅಂಗಡಿಗೂ ಲಗ್ಗೆ ಇಡುತ್ತಿದ್ದ ನಾವು ಅಂಗಡಿಯ ಕಟ್ಟೆಯ ಮೇಲೆ ಕುಳಿತು ಗಂಗಣ್ಣ ಮತ್ತು ಆತನ ದರ್ಜಿಮಿತ್ರನ ಮಧ್ಯೆ ನಡೆಯುತ್ತಿದ್ದ ಅನೇಕ ಮಿಲ್ಟ್ರಿ ಸಂಬಂಧಿತ ವಿಷಯಗಳಿಗೆ ಕಿವಿಯಾಗುತ್ತಿದ್ದೆವು. ಅಲ್ಪಸ್ವಲ್ಪ ಹಿಂದಿ ಬಲ್ಲವನಾದ ತಿಪ್ಪೇಸ್ವಾಮಿ ಗಂಗಣ್ಣನ ಅಸ್ಖಲಿತ ಹಿಂದಿಗೆ ಮಾರು ಹೋಗಿದ್ದ. ಹರಳು ಹುರಿದಂತೆ, ಪಟಪಟನೆ ಮಿಲ್ಟ್ರಿ ಹಿಂದಿ ಗಂಗಾಧರ್ ಬಾಯಿಂದ ಓತಪ್ರೋತವಾಗಿ ಹರಿಯುತ್ತಿದ್ದರೆ ಅದನ್ನು ಕೇಳಲೆಂದೆ ಪೋರರ ಒಂದು ದಂಡು ಬಟ್ಟೆ ಅಂಗಡಿಯಲ್ಲಿ ಸಮಾವೇಶಗೊಳ್ಳುತ್ತಿತ್ತು.
ಗಂಗಣ್ಣ ನನ್ನ ಎಳೆಯ ಮನಸ್ಸಿನಲ್ಲಿ ರಾಷ್ಟ್ರಭಕ್ತಿಯ ಬೀಜವನ್ನು ಗಟ್ಟಿಯಾಗಿ ಬಿತ್ತಿದ್ದ. ಬಾಲ್ಯದಲ್ಲಿ ನನ್ನ ಅನೇಕ ಸಹಪಾಠಿಗಳಿಗೆ ಅಲಭ್ಯವೆನಿಸಿದ ಸೈನಿಕರನ್ನು ಕುರಿತಾದ ಅನೇಕ ಮಾಹಿತಿಗಳನ್ನ, ಸಂಗತಿಗಳನ್ನು ನಾನು ಗಂಗಣ್ಣನಿಂದ ಅರಿತೆ. ಗಡಿಗಳಲ್ಲಿ ಇಂದಿನಂತೆ ಅಂದೂ ಪ್ರಕ್ಷುಬ್ದ ವಾತಾವರಣ ಮನೆಮಾಡಿತ್ತು. ಅದೇ ತಾನೇ ಮುಗಿದ ಭಾರತ ಪಾಕಿಸ್ತಾನ ಯುದ್ಧದಲ್ಲಿ ಗೆದ್ದ ಭಾರತ ವಿಜಯೋತ್ಸಾಹದಿಂದ ಬೀಗುತಿತ್ತು. ಸೋತು ಸುಣ್ಣವಾದ ಪಾಕಿಸ್ತಾನ ಪಡೆಗಳು ಗಡಿಯುದ್ದಕ್ಕೂ ತಮ್ಮ ಎಂದಿನ ತರಲೆಯನ್ನು ಯಥಾಪ್ರಕಾರ ಮುಂದುವರೆಸುತ್ತಲೇ ಇದ್ದವು. ಪಾಕಿಸ್ತಾನ ಯುದ್ಧದಲ್ಲಿ ಸ್ವಯಂಭಾಗಿಯಾಗಿದ್ದ ಗಂಗಣ್ಣ ಹೇಳುತ್ತಿದ್ದ ರಣಭೂಮಿಯ ವಿಸಂಗತಿಗಳು ನನ್ನಲ್ಲಿ ಎಷ್ಟರಮಟ್ಟಿಗಿನ ರೋಮಾಂಚನವನ್ನು ಉಂಟು ಮಾಡುತ್ತಿದ್ದವು ಎಂದರೆ ಈ ಕಾರಣ ಆಗಿಂದಾಗ್ಗೆ ಮೈತುಂಬಾ ಏಳುತ್ತಿದ್ದ ನವಿರಾದ ಗುಳ್ಳೆಗಳು ಮಾಯವಾಗುವುದಕ್ಕೆ ಹಲವು ನಿಮಿಷಗಳೇ ಬೇಕಾಗುತ್ತಿದ್ದವು. ಗಂಗಣ್ಣನ ಸ್ನೇಹಿತನೊಬ್ಬ ಸಹಸೈನಿಕರು ಎಷ್ಟು ಹೇಳಿದರೂ ಕೇಳದೆ ಯುದ್ಧದ ವೇಳೆ ಬಂಕರ್ ಒಳಗಿನಿಂದ ತನ್ನ ಊಟದ ತಟ್ಟೆ ಸಮೇತ ಹೊರಬಂದಾಗ ಪಾಕಿ ಯುದ್ದ ವಿಮಾನವೊಂದು ಹಾಕಿದ ಗ್ರೆನೇಡ್ ಆತನ ತಲೆಯನ್ನು ನೂರಾರು ಗಜಗಳ ದೂರ ಹಾರಿಸಿಕೊಂಡು ಹೋದ ಪ್ರಸಂಗವನ್ನು ಆಲಿಸಿದ ಆ ದಿನದ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ಮುಂಡದಿಂದ ಬೇರೆಯಾದ ರುಂಡ ನೆಲಕ್ಕೆ ಬೀಳುವಷ್ಟೂ ಹೊತ್ತು ನಗುತ್ತಲೇ ಇದ್ದ ಭಯಾನಕ ಕಥಾನಕದ ಗುಂಗಿನಿಂದ ಹೊರಬರಲು ನನಗೆ ಕೆಲವು ದಿನಗಳೇ ಬೇಕಾದವು.
ಇಂತಹ ಅನೇಕ ಶೌರ್ಯಭರಿತ ದೃಷ್ಟಾಂತಗಳ ಆಲಿಸುವಿಕೆಯ ಮೂಲಕ ನನಗೆ ಭಾರತೀಯ ಸೈನಿಕರ ಬಗ್ಗೆ ಅತ್ಯಂತ ಹೆಚ್ಚಿನ ಗೌರವ ಮೂಡಲಾರಂಭಿಸಿತು. ತಮ್ಮ ಪ್ರಾಣವನ್ನು ದೇಶಭಕ್ತಿಯ ಯಜ್ಞದಲ್ಲಿ ಆಹುತಿಮಾಡುವ ಸೈನಿಕರ ಮುಂದೆ ನನಗೆ ಜಗತ್ತಿನ ಉಳಿದೆಲ್ಲಾ ಕೆಲಸಗಳೂ ತುಚ್ಛ ಎನ್ನುವ ಭಾವನೆ ಮೂಡಲಾರಂಭಿಸಿತು. ನಾವು ಊಹಿಸಲೂ ಆಗದ ಎತ್ತರದ, ಕಿರಿದಾದ, ಹಿಮಚ್ಛಾದಿತ, ದುರ್ಲಭ ಮತ್ತು ಕ್ಲಿಷ್ಟಕರ ಪ್ರದೇಶಗಳಲ್ಲಿ ಹಗಲೂ ರಾತ್ರಿಯನ್ನು ಒಂದು ಮಾಡಿ ನಡೆಸುವ ಸೈನಿಕ ಕಾರ್ಯಾಚರಣೆಗಳ ಮೂಲಕ ದೇಶದ ಗಡಿಗಳನ್ನು ಸುಭದ್ರಗೊಳಿಸುವ ತನ್ಮೂಲಕ ದೇಶವಾಸಿಗಳಿಗೆ ನೆಮ್ಮದಿಭರಿತ ಜೀವನವನ್ನು ಉಡುಗೊರೆಯಾಗಿ ಕೊಡಮಾಡುವ ಭಾರತಮಾತೆಯ ಸಪುತ್ರರಿಗೆ ಮತ್ತು ಸಪುತ್ರಿಯರಿಗೆ ರಾಷ್ಟ್ರ ಯಾವಾಗಲೂ ಕೃತಜ್ಞವಾಗಿರಲೇಬೇಕು. ಸೈನ್ಯಕ್ಕೆ ಸರ್ಕಾರ ಕೊಡಮಾಡುತ್ತಿರುವ ಸಂಬಳ, ಸವಲತ್ತು, ಪಿಂಚಣಿಗಳು ದೇಶ ಬೆನ್ನುಬಾಗುವಂತೆ ಹೊತ್ತಿರುವ ಸೈನಿಕರ ಋಣದ ಭಾರವನ್ನು ಕಿಂಚಿತ್ತೂ ಕಡಿಮೆ ಮಾಡಲಾರವು. ಸೈನಿಕರ ಋಣಕ್ಕೆ ಒಂದು ಬೆಲೆಕಟ್ಟಿ ತನ್ನನ್ನು ತಾನು ಬೆನ್ನು ತಟ್ಟಿಕೊಳ್ಳುವ ಕೃತಜ್ಞ ರಾಷ್ಟ್ರವೊಂದು ನಿಜವಾದ ಅರ್ಥದಲ್ಲಿ ಸೈನಿಕರ ಋಣಜಾಲದಿಂದ ಎಂದೂ ಹೊರಬರಲಾರದು. ಬಾಲ್ಯದಲ್ಲಿ ಗಂಗಣ್ಣ ನನ್ನ ಮೇಲೆ ಮಾಡಿದ ಪ್ರಭಾವ ಎಷ್ಟು ಪ್ರಬಲವಾದದ್ದು ಎಂದರೆ ನಾನೂ ಕೂಡಾ ಆತನ ಹಾಗೆಯೇ ಭಾರತೀಯ ಸೈನ್ಯ ಸೇರಿ ದೇಶಸೇವೆ ಮಾಡುವ ಘನ ಉದ್ದೇಶವನ್ನು ಮನಸ್ಸಿನಲ್ಲಿ ಆ ಹೊತ್ತಿಗಾಗಲೇ ತಳೆದಿದ್ದೆ. ಎಂಜಿನಿಯರ್ ವಿಧ್ಯಾಭ್ಯಾಸದ ನಂತರ ಭಾರತೀಯ ಭೂಸೇನೆಯಲ್ಲಿ ಆಯ್ಕೆಯಾದೆನಾದರೂ ವೈದ್ಯಕೀಯ ಪರೀಕ್ಷೆಯಲ್ಲಿ ನನ್ನ ಕಣ್ಣುಗಳಲ್ಲಿ ಇದ್ದ ಹೆಚ್ಚಾದ ಸಮೀಪದೃಷ್ಟಿಯ ದೋಷದ ಕಾರಣದಿಂದಾಗಿ ತಿರಸ್ಕರಿಸಲ್ಪಟ್ಟೆ. ಅಂದು ರಾತ್ರಿ ನಿದ್ದೆಯಿಲ್ಲದೆ ಸೇನೆಯ ಜಬಲ್ಪೂರ್ ಬಡ್ತಿಶಿಬಿರದ ದಿಂಬನ್ನು ಹಸಿ ಮಾಡಿದ ನನಗೆ ಮುಂಜಾವಿನ ವೇಳೆಗೆ ಒಂದು ಸತ್ಯದ ಅರಿವಾಗಿತ್ತು. ಸೈನಿಕನಂತಹ ಮಹೋನ್ನತ ಹುದ್ದೆಯನ್ನು ಅಲಂಕರಿಸಲೂ ವಿಶೇಷವಾದ ದೈವಕೃಪೆಬೇಕು, ಸ್ವರ್ಗದಲ್ಲಿ ಯೋಗ್ಯರಿಗಷ್ಟೆ ಭಗವಂತ ಸ್ಥಾನ ಕಲ್ಪಿಸುತ್ತಾನೆ ಎನ್ನುವುದನ್ನು ಅರ್ಥಮಾಡಿಕೊಂಡು ಸುಂಕವಿಲ್ಲದೆ ಊರಿಗೆ ಮರಳಿದ್ದೆ.
ಗಂಗಣ್ಣ ಮಿಲ್ಟ್ರಿಯಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳಿಗೆ ಮೀರಿದ ಸುದೀರ್ಘ ಕಾಲದ ಸೇವೆಯನ್ನು ಮುಗಿಸಿದ್ದ. ಇನ್ನೇನು ನಿವೃತ್ತಿಗೆ ಕೇವಲ ಆರು ತಿಂಗಳು ಬಾಕಿ ಇದೆ ಎನ್ನುವಾಗ ವಿಧಿ ವೀರಸೈನಿಕನ ಬಾಳಲ್ಲಿ ಒಂದು ಕ್ರೂರವಾದ ನಾಟಕವನ್ನು ಆಡಿತ್ತು. ಅತ್ಯಂತ ಬಿಕ್ಕಟ್ಟಿನ ಕೌಟಂಬಿಕ ಕಾರಣಗಳಿಗೋಸುಗ ಅಲ್ಪಾವಧಿಯ ರಜೆಯ ಮೇಲೆ ಊರಿಗೆ ಬಂದಿದ್ದ ಗಂಗಣ್ಣ ಕಾರಣಾಂತರಗಳಿಂದ ಸಕಾಲದಲ್ಲಿ ಸೇನೆಗೆ ಮರಳಲಾಗಲಿಲ್ಲ. ರಜಾ ಅವಧಿಯ ವಿಸ್ತರಣೆಗಾಗಿ ಗಂಗಣ್ಣ ಮಾಡಿದ ಮನವಿ ತಿರಸ್ಕೃತಗೊಂಡ ಬೆನ್ನಲ್ಲೇ ಅನುಮತಿ ಇಲ್ಲದ ರಜೆಯ ಮೇಲಿದ್ದ ಕಾರಣದಿಂದಾಗಿ ಗಂಗಣ್ಣನನ್ನು ಬಂಧಿಸಿ ಸೇನೆಗೆ ಒಪ್ಪಿಸಬೇಕು ಎನ್ನುವ ಸೈನ್ಯದ ತುರ್ತುಆದೇಶ ತುರುವನೂರಿನ ಪೊಲೀಸ್ ಠಾಣೆಗೆ ಬಂತಾದರೂ ಅಲ್ಲಿ ಗಂಗಣ್ಣನಿಗೆ ಪರಿಚಯವಿದ್ದ ಕೆಲಪೇದೆಗಳ ಸಹಾಯದಿಂದ “ಗಂಗಣ್ಣ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪತ್ತೆಯಾಗಿಲ್ಲ, ಆತ ತಲೆ ಮರೆಸಿಕೊಂಡಿದ್ದಾನೆ” ಎನ್ನುವ ವರದಿ ನೀಡಿದ ಪೊಲೀಸ್ ಇನ್ ಸ್ಪೆಕ್ಟರ್ ಸುಧಾಕರ್ ಇಡೀ ಪ್ರಕರಣದಿಂದ ತನ್ನ ಕೈತೊಳೆದುಕೊಂಡ. ಈ ಋಣಾತ್ಮಕ ವರದಿ ಕೈಸೇರುತ್ತಲೇ ಸೇನೆ ಕಾನೂನಿನ ಪ್ರಕಾರ ಗಂಗಣ್ಣನನ್ನು ಸೇವೆಯಿಂದ ವಜಾ ಮಾಡಿತಲ್ಲದೆ ಆತನಿಗೆ ಸಲ್ಲಬೇಕಾದ ಸೇವಾವಧಿಯ ಯಾವ ಹಣವನ್ನೂ ನೀಡಲಿಲ್ಲ. ಅಷ್ಟೇ ಸಾಲದೆಂಬಂತೆ ಗಂಗಣ್ಣ ಸೇವೆಯ ಪಿಂಚಣಿ ಹಣದಿಂದಲೂ ವಂಚಿತನಾದ.
ಅಲ್ಲಿಂದ ಮುಂದೆ ಗಂಗಣ್ಣನ ಬದುಕಿನಲ್ಲಿ ಆದ ಪ್ರಮಾದಗಳನ್ನು ದಾಖಲಿಸಲು ನನ್ನ ಕೈ ನಡುಗುತ್ತಿವೆ. ದೈವದ ಗುಣಗಾನವನ್ನು ಎಗ್ಗಿಲ್ಲದೆ ಮಾಡಬಹುದಾದಲ್ಲಿ ದೈವದೂಷಣೆಯನ್ನು, ದೈವನಿಂದನೆಯನ್ನು ಅದೇ ವಿಸ್ತಾರತೆಯಿಂದ ಮಾಡಲಾಗದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಮಿಲ್ಟ್ರಿಯಲ್ಲಿದ್ದಾಗ ನಿಯಂತ್ರಣದಲ್ಲಿದ್ದ ಮದ್ಯವ್ಯಸನ ಗಂಗಣ್ಣನನ್ನು ಸಂಪೂರ್ಣರೂಪದಲ್ಲಿ ಆಪೋಶನ ತೆಗೆದುಕೊಂಡಿತ್ತು. ದಿನದ ಬಹುವೇಳೆ ಕುಡಿತದ ಅಮಲಿನಲ್ಲಿಯೇ ಕಾಲ ದೂಡುತ್ತಿದ್ದ ಮಾಜಿಸೈನಿಕ ತನಗಾದ ದುರ್ಗತಿಯನ್ನು ಮರೆಯಲು ದಿನರಾತ್ರಿಗಳ ಪರವೆ ಇಲ್ಲದೆ ಮದಿರೆಯ ದಾಸನಾಗುತ್ತಾ ನಡೆದ. ಸಂಸಾರವನ್ನೂ ಕಡೆಗಣಿಸಿ ನಡೆದ ಮಿತಿಮೀರಿದ ಮದಿರಾಸೇವನೆಯ ಕಾರಣವರ್ಷ ಗಂಗಣ್ಣ ನಿಯಮಿತರೂಪದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಆಸ್ಪತ್ರೆಗೆ ಆಗಿಂದಾಗ್ಗೆ ಎಡತಾಕುವಂತಾದ.
ಅದು ತೊಂಬತ್ತನೆ ದಶಕದ ಆರಂಭದ ಒಂದು ವರ್ಷ ಇರಬೇಕು ಅನ್ನಿಸುತ್ತೆ, ನಮ್ಮ ದಾವಣಗೆರೆಯ ಮನೆಗೆ ಬಂದ ತುರುವನೂರು ಹೈಸ್ಕೂಲಿನ ನಿವೃತ್ತ ಹೆಡ್ ಮಾಸ್ಟರ್ ಆರ್. ಎನ್. ನೀಲಕಂಠಪ್ಪ ಅವರು “ಪ್ರಿಯಶಿಷ್ಯನಾದ ಮಿಲ್ಟ್ರಿ ಗಂಗಣ್ಣ ಹದಿನೈದು ದಿನಗಳಿಂದ ತೀವ್ರ ಅನಾರೋಗ್ಯದ ಕಾರಣದಿಂದಾಗಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾನೆ, ಜೀವನ್ಮರಣದ ಮಧ್ಯೆ ತೂಗುಯ್ಯಾಲೆ ಆಡುತ್ತಿದ್ದಾನೆ, ಸೋದರ ಸಂಬಂಧಿ ಮೇಲ್ ನರ್ಸ್ ಬಳ್ಳಾರಿ ಮಲ್ಲಣ್ಣ ಚಿಗಟೇರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿ ಇರುವ ಕಾರಣ ಅಣ್ಣ ತಿಪ್ಪೇಸ್ವಾಮಿ ಆತನನ್ನು ಇಲ್ಲಿಗೇ ಕರೆದುತಂದು ಚಿಕಿತ್ಸೆ ಕೊಡಿಸುತ್ತಿದ್ದಾನೆ, ಗಂಗಣ್ಣನನ್ನು ನೋಡಿಕೊಂಡು ಹೋಗಲು ಬಂದಿದ್ದೇನೆ” ಎನ್ನುವ ಆತಂಕಕಾರಿ ವಿಷಯವನ್ನು ಅರುಹಲಾಗಿ ಇದನ್ನು ಕೇಳಿದ ನನಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ಸ್ವಲ್ಪ ಹೊತ್ತು ಕೈಕಾಲುಗಳೇ ಆಡದ ಪರಿಸ್ಥಿತಿ ಉಂಟಾಯಿತು. ಮೇಷ್ಟ್ರು ನಮ್ಮ ಮನೆಗೆ ಬಂದಾಗ ಅದಾಗಲೇ ಸಂಜೆಯಾಗಿತ್ತು. ಈಗಲೇ
ಆಸ್ಪತ್ರೆಗೆ ಹೋಗಿ ನನ್ನ ರಾಷ್ಟ್ರಭಕ್ತಿಯ ಮೂರ್ತರೂಪದ ಅಂತಿಮ ದರ್ಶನವನ್ನು ಪಡೆಯಬೇಕು ಅಂದುಕೊಂಡವನಿಗೆ ಮೇಷ್ಟು “ನಾಳೆ ಹನ್ನೊಂದು ಗಂಟೆಗೆ ಹೋಗೋಣ. ಇಷ್ಟು ಹೊತ್ತಿನಲ್ಲಿ ಐಸಿಯು ಕೊಠಡಿಗೆ ಸಂದರ್ಶಕರನ್ನು ಬಿಡುವುದಿಲ್ಲ” ಎಂದು ನುಡಿಯಲಾಗಿ ನಿದ್ದೆಯಿಲ್ಲದ ಮತ್ತೊಂದು ರಾತ್ರಿಯನ್ನು ಗಂಗಣ್ಣನ ಖಾತೆಗೆ ಜೋಡಿಸಿದೆ. ದಷ್ಟಪುಷ್ಟವಾಗಿ ಆರೋಗ್ಯದಿಂದ ತುಂಬಿತುಳುಕುತ್ತಿದ್ದ ಸೈನಿಕನನ್ನು ಸಾವು ಬಾಧೀಸೀತೆ? ರಣರಂಗದಲ್ಲಿ ವೈರಿಗಳ ಗುಂಡುಗಳು ಬೇಧಿಸಲು ಅಭೇದ್ಯವೆನಿಸಿದ ಸೈನಿಕನ ಗುಂಡಿಗೆಯನ್ನು ಐಸಿಯುನಲ್ಲಿ ವೈದ್ಯರ ಕಣ್ಗಾವಲಿನಲ್ಲಿ ಯಮಪುರಿಗೆ ಕೊಂಡೊಯ್ಯಲು ಯಾವ ಯಮಧೂತನಿಗೆ ಶಕ್ಯವಿದೆ? ಎಂದು ನನ್ನ ಮನಸ್ಸಿಗೆ ನಾನೇ ಸಮಾಧಾನ ಪಟ್ಟುಕೊಂಡು ನೀಲಕಂಠಪ್ಪ ಮೇಷ್ಟ್ರ ಮಾತುಗಳು ಉತ್ಪ್ರೇಕ್ಷೆ ಏಕಾಗಿರಬಾರದು? ನನ್ನ ಸೈನಿಕನಿಗೆ ಅಂತಹುದೇನೂ ಆಗಲಾರದು, ಆಸ್ಪತ್ರೆಯಿಂದ ಗುಣಮುಖನಾಗಿ ಗಂಗಣ್ಣ ಬಂದೇ ಬರುತ್ತಾನೆ ಎನ್ನುವ ಭರವಸೆಯಲ್ಲಿ ಮುಂಜಾವಿನ ಎರಡು ತಾಸುಗಳ ನೆಮ್ಮದಿಯ ನಿದ್ರೆ ಕಂಡೆ.
ಬೆಳಿಗ್ಗೆ ಬೇಗ ಎದ್ದು ಗಂಗಣ್ಣನನ್ನು ನೋಡುವ ಭರಾಟೆಯಲ್ಲಿ ಆತುರಾತುರವಾಗಿ ಸನ್ನದ್ಧನಾದವನಿಗೆ ಮೇಷ್ಟ್ರ ಕಡೆಯಿಂದ ಫೋನ್ ಬಂದಿತ್ತು. ಆಗಿನ್ನೂ ಬೆಳಗಿನ ಒಂಬತ್ತರ ಸಮಯ, ನಾವು ಆಸ್ಪತ್ರೆಗೆ ತೆರೆಳಬೇಕಾಗಿದ್ದು ಹನ್ನೊಂದು ಗಂಟೆಗಲ್ಲವೇ? ಎಂದುಕೊಂಡು ಫೋನ್ ಎತ್ತಿಕೊಂಡವನಿಗೆ ಶಾಕ್ ಕಾದಿತ್ತು. ಮಿಲ್ಟ್ರಿ ಗಂಗಣ್ಣ ಬೆಳಿಗ್ಗೆ ಆರರ ವೇಳೆಗೇ ಜೀವನವೆಂಬ ರಣರಂಗದಲ್ಲಿ ವೀರಾವೇಶದಿಂದ ಕಾದಾಡುತ್ತಲೇ ವೀರಮರಣವನ್ನು ಹೊಂದಿ ಸ್ವರ್ಗಾರೋಹಿಯಾದ ವಿಷಯ ತಿಳಿದು ಅಲ್ಲಿಯೇ ಇದ್ದ ಸ್ಟೂಲ್ ಮೇಲೆ ಕುಸಿದು ಕುಳಿತೆ. “ಕಳೇಬರವನ್ನು ಹತ್ತು ಗಂಟೆಗೆ ಆಂಬುಲೆನ್ಸ್ ನಲ್ಲಿ ಊರಿಗೆ ಒಯ್ಯುತ್ತಾರೆ, ನೀನು ಈಗಲೇ ಆಸ್ಪತ್ರೆಗೆ ಬಾ, ನಾನೂ ಮನೆಯಿಂದ ಹೊರಡುತ್ತಿದ್ದೇನೆ” ಎನ್ನುವ ಮೇಷ್ಟ್ರ ಮಾತುಗಳನ್ನು ಅರಗಿಸಿಕೊಳ್ಳುವುದಕ್ಕೆ ನನಗೆ ಕೆಲ ನಿಮಿಷಗಳೇ ಬೇಕಾದವು. ನಿಧಾನವಾಗಿ ಸ್ಟೂಲಿಂದ ಮೇಲೆದ್ದವನು ನನ್ನ ದ್ವಿಚಕ್ರವಾಹನವನ್ನೂ ತೆಗೆದುಕೊಳ್ಳದೆ ಮುಖ್ಯರಸ್ತೆಯವರೆಗೆ ನಡೆದೇ ಸೇರಿ ಆಟೋವೊಂದನ್ನು ಹಿಡಿದು ಚಿಗಟೇರಿ ಆಸ್ಪತ್ರೆಗೆ ಧಾವಿಸಿದೆ. ಆ ವೇಳೆಗಾಗಲೇ ಮೇಷ್ಟ್ರು ತಮ್ಮ ಅಳಿಯಂದಿರಾದ ನಾಗರಾಜ್ ಮತ್ತು ಸಿದ್ದೇಶ್ವರ್ ಒಟ್ಟಿಗೆ ಆಸ್ಪತ್ರೆಯ ಅಂಗಣದಲ್ಲಿ ಹಾಜರಿದ್ದರು. ನಾವು ಹೋದ ಸ್ವಲ್ಪ ಸಮಯದಲ್ಲಿಯೇ ಗಂಗಣ್ಣನ ಪಾರ್ಥಿವ ಶರೀರವನ್ನು ಶವಾಗಾರದಿಂದ ತಂದು ಆಂಬುಲೆನ್ಸ್ ನಲ್ಲಿ ಇಡಲಾಯಿತು. ಅಣ್ಣ ತಿಪ್ಪೇಸ್ವಾಮಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಹೆಗಲ ಮೇಲಿನ ಟವೆಲ್ ಸಹಾಯದಿಂದ ಒರೆಸಿಕೊಳ್ಳುವ ವ್ಯರ್ಥಪ್ರಯತ್ನ ಮಾಡುತ್ತಿದ್ದ. ತುಸು ದೂರದಲ್ಲಿದ್ದ ಸಂಕೇಶಿ ಮರವೊಂದರ ಕೆಳಗೆ ನರ್ಸ್ ನ ಬಿಳೀ ಸಮವಸ್ತ್ರದಲ್ಲಿ ಸೋದರಸಂಬಂಧಿ ಮಲ್ಲಣ್ಣ ಮ್ಲಾನವದನನಾಗಿ ನಿಂತಿದ್ದ. ನಾನು ತಂದಿದ್ದ ಹೂಗುಚ್ಚವನ್ನು ಗಂಗಣ್ಣನ ಮೃತ ದೇಹದ ಮೇಲೆ ಇಟ್ಟವನು ಕೊನೆಯ ಬಾರಿಗೆ ಧೈರ್ಯಮಾಡಿ ಸೈನಿಕನ ಮುಖವನ್ನು ದಿಟ್ಟಿಸಿದೆ. ಗಂಗಣ್ಣನ ಮುಖ ಗುರುತು ಸಿಗದ ಹಾಗೆ ಬದಲಾಗಿತ್ತು. ದೇಹ ಇನ್ನಿಲ್ಲದಂತೆ ಕೃಶವಾಗಿತ್ತು. ತ್ರಿವರ್ಣಧ್ವಜ ಹೊದಿಸಿ ಸಕಲ ರಾಷ್ಟ್ರ ಗೌರವಗಳೊಂದಿಗೆ ಬೀಳ್ಕೊಡಬೇಕಾದ ವೀರಸೈನಿಕನ ಕಳೇಬರ ಆಸ್ಪತ್ರೆಯ ಬಿಳೀಚಾದರವನ್ನು ಹೊದ್ದು ಅನಾಥವೆಂಬಂತೆ ಮಲಗಿತ್ತು. ಗಂಗಣ್ಣನ ಜೊತೆಗಿನ ನನ್ನ ಒಡನಾಟದ ಅಮೂಲ್ಯಕ್ಷಣಗಳು ಚಲನಚಿತ್ರದಂತೆ ನನ್ನ ಮನಃಭಿತ್ತಿಯ ಬೆಳ್ಳಿಪರದೆಯ ಮೇಲೆ ಮೂಡಿ ಮಾಯವಾಗುತ್ತಿದ್ದ ಹೊತ್ತು ನನಗರಿವಿಲ್ಲದೆಯೆ ಧುಮ್ಮಿಕ್ಕಿದ ಕಣ್ಣೀರ ಎರಡು ಹನಿಗಳು ಚಾದರ ಆವರಿಸಿದೆ ಬೆತ್ತಲಾಗಿದ್ದ ಸೈನಿಕನ ಪಾದದ್ವಯಗಳನ್ನು ಸ್ಪರ್ಶಿಸಿದವು. ಮುಂದಿನ ಹತ್ತು ನಿಮಿಷಗಳಲ್ಲಿ ತುರುವನೂರಿಗೆ ಮೃತದೇಹದ ಒಟ್ಟಿಗೆ ಚಲಿಸಿದ ಆಂಬುಲೆನ್ಸ್ ವಾಹನ ಉಗುಳಿದ ದಟ್ಟಹೊಗೆಯಲ್ಲಿ ನಾನು ಆರಾಧಿಸುತ್ತಿದ್ದ ಸೈನಿಕನ ಮುಖ ಒಂದರೆ ಕ್ಷಣ ಮೂಡಿ ಮರೆಯಾಯಿತು. ಸ್ವಲ್ಪ ಸಮಯದ ಹಿಂದೆ ನೋಡಿದ ಸೈನಿಕನ ಮುಖಚರ್ಯೆಯನ್ನು ಮನಸ್ಸಿನಿಂದ ಶಾಶ್ವತವಾಗಿ ಕಿತ್ತೆಸೆದ ನಾನು ನನ್ನ ಬಾಲ್ಯಜೀವನದ ಸೈನಿಕನ ಮುಖಚರ್ಯೆಯನ್ನು ನನ್ನ ಎದೆಯಲ್ಲಿ ಪುನಃ ಪ್ರತಿಷ್ಠಾಪಿಸಿದೆ. ನನ್ನ ಮನಸ್ಸಿನಲ್ಲಿ ಗಂಗಣ್ಣನ ಯೌವನಭರಿತ ಮುಖ ಅದೆಷ್ಟರಮಟ್ಟಿಗೆ ಇಂದೂ ಅಚ್ಚೊತ್ತಿದೆ ಎಂದರೆ ಸೈನಿಕರ ವಿಷಯ ಎಲ್ಲಿಯೇ ಪ್ರಸ್ತಾಪವಾಗಲಿ, ನನ್ನ ಮಾದರಿಸೈನಿಕ ನನ್ನ ಕಣ್ಣೆದುರು ಬಂದು ನಿಲ್ಲುತ್ತಾನೆ. ನನ್ನ ಮಟ್ಟಿಗೆ “ಜೈ ಜವಾನ್, ಜೈ ಕಿಸಾನ್ ” ಎನ್ನುವ ಲಾಲ್ ಬಹದ್ದೂರ್ ಶಾಸ್ತ್ರಿಗಳ ಘೋಷಣಾವಾಕ್ಯ ಕೇವಲ ಶುಷ್ಕ ಪದಪುಂಜಮಾತ್ರವಾಗಿ ಉಳಿಯದೆ ಈ ಪ್ರಾತಃಸ್ಮರಣೀಯ ವಾಕ್ಯದ ಪೂರ್ವಾರ್ಧವನ್ನು ಅಕ್ಷರಶಃ ಜೀವಿಸಿದ ಗಂಗಣ್ಣನ ಸೈನಿಕ ಪ್ರವೃತ್ತಿಯನ್ನ ಹತ್ತಿರದ ಕಣ್ಣಾಗಿ ನೋಡಿದ ನನ್ನ ಭಾಗ್ಯ ಎಣೆಯಿಲ್ಲದ್ದು ಎಂದುಕೊಳ್ಳುತ್ತೇನೆ.