ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್ ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್

Share

ಕತ್ತಿವರಸೆಯಲ್ಲ್ಲಿ ವಿಸ್ಮಯ ಮೂಡಿಸಿದ ರಾಜಕುಮಾರ್ 
ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್

ಗಿರಿಜಾ ಮತ್ತು ಸೂರ್ಯಪ್ರಭಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೬೦ರಲ್ಲಿ ಬಿಡುಗಡೆಗೊಂಡ ರಾಣಿ ಹೊನ್ನಮ್ಮ ಕಪ್ಪು ಬಿಳುಪು ಜಾನಪದ ಚಿತ್ರವನ್ನು ಟಿ.ಎಸ್.ಕರಿಬಸಯ್ಯ ನಿರ್ಮಿಸಿದರು. ಕು.ರ.ಸೀತಾರಾಮಶಾಸ್ತ್ರಿ ನಿರ್ದೇಶಿಸಿದ ಈ ಚಿತ್ರಕ್ಕೆ ಎಸ್.ರಾಮನಾಥನ್ ಮತ್ತು ಬಿ.ಎಸ್. ವಿಶ್ವನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ರಾಜಕುಮಾರ್, ಲೀಲಾವತಿ, ಲಲಿತಾರಾವ್, ಬಾಲಕೃಷ್ಣ, ನರಸಿಂಹರಾಜು, ಲಕ್ಷ್ಮಿ, ವೀರಭದ್ರಯ್ಯ, ಈಶ್ವರಪ್ಪ, ಸುಬ್ಬಣ್ಣ, ರಾಮಚಂದ್ರಶಾಸ್ತ್ರಿ, ಗುಗ್ಗು, ಜಿ.ವಿ.ಅಯ್ಯರ್, ಶಿವಾಜಿರಾವ್ ಅಭಿನಯಿಸಿದರು. ಕು.ರ.ಸೀತಾರಾಮಶಾಸ್ತ್ರಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ವಿಜಯಭಾಸ್ಕರ್ ಸಂಗೀತ ನೀಡಿದ್ದ ಚಿತ್ರದಲ್ಲಿ ಹಾರುತ ದೂರ ದೂರ ಮೇಲೇರುವ ಬಾರಾ.. ಒಳಗೊಂಡಂತೆ ೯ ಹಾಡುಗಳನ್ನು ಅಳವಡಿಸಲಾಗಿತ್ತು. ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಹಾಗೂ ಪಿ.ಸುಶೀಲ ಗೀತೆಗಳಿಗೆ ದನಿಯಾಗಿದ್ದರು.

ಬಾಲ್ ಜಿ.ಯಾದವ್ ಮತ್ತು ಎಂ.ತಾತಯ್ಯ ಸಂಕಲನ, ಕೆ.ಪ್ರಭಾಕರ್ ಹಾಗೂ ಬಾಬುಲ್ನಾ.ಥ್ ಛಾಯಾಗ್ರಹಣ, ಎಸ್.ಅಮ್ಮೆಯಪ್ಪನ್ ಕಲೆ, ಕೆ.ತಂಗಪ್ಪನ್ ನೃತ್ಯ ನಿರ್ದೇಶನ ಚಿತ್ರಕ್ಕಿತ್ತು. ಮದರಾಸಿನ ಫಿಲಂ ಸ್ಟುಡಿಯೊದಲ್ಲಿ ಚಿತ್ರೀಕರಣಗೊಂಡ ಚಿತ್ರ ೧೬,೧೫೦ ಅಡಿ ಉದ್ದ ಇದ್ದು, ೧೯೬೦ರ ಏಪ್ರಿಲ್ ೮ರಂದು ಸೆನ್ಸಾರ್ ಆಯಿತು.

ಹೊನ್ನಮ್ಮನಾಗಿ ಲೀಲಾವತಿ ಪಾತ್ರಕ್ಕೆ ಜೀವ ತುಂಬಿದ್ದು, ವೀರಣ್ಣನ ಪಾತ್ರದಲ್ಲಿ ರಾeಕುಮಾರ್ ಲವಲವಿಕೆಯಿಂದ ಪಾತ್ರ ನಿರ್ವಹಿಸಿದ್ದಾರೆ. ರಾಜಕುಮಾರ್ ಅಭಿನಯದಲ್ಲಿ ಕತ್ತಿವರಸೆ, ಸಂಭಾಷಣೆಯ ಏರಿಳಿತ, ಕುದುರೆ ಸವಾರಿ, ಹಾಡಿನ ದೃಶ್ಯಗಳಲ್ಲಿನ ಮಧುರ ಭಾವ ಎಲ್ಲದರಲ್ಲೂ ಒಂದು ಲಯವಿದೆ. ನರಸಿಂಹರಾಜು ಚಿತ್ರದುದ್ದಕ್ಕೂ ನಾಯಕನ ಗೆಳೆಯನಾಗಿ ರಂಜಿಸಿದರೆ, ನರಸಿಂಹರಾಜು ಜೋಡಿಯಾಗಿ ಎಂ.ಎನ್.ಲಕ್ಷ್ಮೀದೇವಿ ಮನಸೆಳೆಯುತ್ತಾರೆ. ಲೀಲಾವತಿ ತಂದೆಯ ಪಾತ್ರದಲ್ಲಿ ರಾಮಚಂದ್ರಶಾಸ್ತ್ರಿ, ಅರಮನೆಯ ಕಾವಲು ಭಂಟನಾಗಿ ಚಿ. ಉದಯಶಂಕರ್ ಅಭಿನಯಿಸಿದ್ದಾರೆ. ಆರಂಭಿಕ ದೃಶ್ಯದಲ್ಲಿ ಚಿತ್ರದ ಕಥೆಯನ್ನು ದಾರಿಹೋಕನಿಗೆ ಹೇಳುವ ದೇವಸ್ಥಾನದ ಅರ್ಚಕನ ಪಾತ್ರದಲ್ಲಿ ಜಿ.ವಿ.ಅಯ್ಯರ್ ನಟಿಸಿದ್ದು, ದೇವಸ್ಥಾನದ ಇತಿಹಾಸದಿಂದ ಇಡೀ ಚಿತ್ರಣ ಕಟ್ಟಿಕೊಡುವ ಪ್ರಯತ್ನ ವಿಭಿನ್ನವಾಗಿದೆ.

ದಳವಾಯಿಯ ಕಾಟದಿಂದ ತಪ್ಪಿಸಿಕೊಂಡ ಚೆಲುವೆ, ಅಪವಾದಗಳ ಸಾಲುಸಾಲೇ ಎದುರಾದಾಗ ದಿಟ್ಟವಾಗಿ ನಿಲ್ಲುತ್ತಾಳೆ. ವಿವಾಹವಾದ ಬಳಿಕ ಗಂಡನನ್ನು ಅಪ್ಸರೆಯೊಬ್ಬಳು ಮಾಯ ಮಾಡುತ್ತಾಳೆ. ಬಂದ ಅಪವಾದ, ಕಾಡಿನವಾಸ ಎಲ್ಲವನ್ನೂ ನಿವಾರಿಸಿಕೊಂಡು ಹೆತ್ತ ಮಗ ನಿಂದಲೇ ಸೇಡು ತೀರಿಸಿಕೊಳ್ಳುತ್ತೇನೆಂದು ತನ್ನ ಶಪಥವನ್ನು ಪೂರೈಸಿ, ಗಂಡನನ್ನು ಹೊಂದುವ ಪತಿವ್ರತೆಯ ಕಥೆ.

ಮದರಾಸಿನಲ್ಲಿ ಕಲಾವಿದರಿಗೆ ಆಶ್ರಯ ನೀಡಿದ್ದ ಗುಗ್ಗುಮಹಲ್

ಕಮೇಡಿಯನ್ ಗುಗ್ಗು ಎಂದೇ ಕನ್ನಡ ಚಿತ್ರರಂಗದಲ್ಲಿ ಹೆಸರಾದ ಮಾಕಂ ಅಶ್ವತ್ಥನಾರಾಯಾಣಶೆಟ್ಟಿ ೧೯೧೮ರ ಮಾರ್ಚ್ ೧೮ರಂದು ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿಯಲ್ಲಿ ಜನಿಸಿದರು. ತಂದೆ ಮಾಕಂ ಕೃಷ್ಣಯ್ಯಶೆಟ್ಟಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಕೆ.ಹಿರಣ್ಣಯ್ಯನವರ ನಾಟಕ ಕಂಪೆನಿಯಲ್ಲಿ ಬಣ್ಣ ಹಚ್ಚಿದ ಶೆಟ್ಟರಿಗೆ ಹಿರಣ್ಣಯ್ಯನವರು ?ಪಂಗನಾಮ?ನಾಟಕದಲ್ಲಿ ಗುಗ್ಗು ಪಾತ್ರ ನೀಡುವ ಮೂಲಕ ಜನಪ್ರಿಯಗೊಳಿಸಿದರು. ೧೯೫೪ರಲ್ಲಿ ತೆರೆ ಕಂಡ ನಟಶೇಖರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಿಸಿದರು. ಮುಂದೆ ಚಿತ್ರ ಕ್ಷೇತ್ರದಲ್ಲಿ ಗುಗ್ಗು ಎಂದೇ ಪರಿಚಿತರಾದರು.

ಮದರಾಸಿನಲ್ಲಿ ತಂಗಿದ ಅವರು ತ್ಯಾಗರಾಜನಗರದಲ್ಲಿ ಒಂದು ಮನೆಯನ್ನು ಕೊಂಡು ಅದನ್ನ್ಕು ‘ಗುಗ್ಗು ಮಹಲ್‘ ಎಂದು ಹೆಸರಿಸಿದರು. ಅವರ ಸಣ್ಣ ಮನೆ ’ಗುಗ್ಗು ಮಹಲ್’ ಕನ್ನಡ ಕಲಾವಿದರ ಸ್ವಂತ ಮನೆಯಂತಿತ್ತು. ಅನೌಪಚಾರಿಕವಾಗಿ ಕಲಾವಿದರ ಸ್ವಂತದಂತೆ ಆಗಿದ್ದ ಈ ’ಮಹಲ್’ ಕಲಾವಿದರ ಆಶ್ರಯತಾಣವಾಗಿತ್ತು. ಸಹಾಯ ಗುಣದ ಗುಗ್ಗು ಮದರಾಸಿಗೆ ಬರುವ ಕನ್ನಡ ಕಲಾವಿದರು, ತಂತ್ರಜ್ಞರಿಗೆ ಆಸರೆ ನೀಡುತ್ತಿದ್ದರು. ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಅಂತಹ ನಟರು ಗುಗ್ಗು ಮಹಲಿನಲ್ಲಿ ತಂಗಿದ್ದರು. ’ಗುಗ್ಗು ಮಹಲ್’ ಗುಗ್ಗು ಅವರ ಪ್ರೀತಿ, ಸ್ನೇಹಗಳ ಪ್ರತೀಕವಾದದ್ದು. ಕನ್ನಡ ಚಿತ್ರರಂಗದ Pಹಳೆಯ ತಲೆಮಾರಿನ ಪ್ರಮುಖ ಕಲಾವಿದರೆಲ್ಲರೂ ಗುಗ್ಗು ಮಹಲ್ನ ಲ್ಲಿ ಅವರ ಆತಿಥ್ಯವನ್ನು ಸವಿದಿದ್ದಾರೆ.

’ಗುಗ್ಗು’ ನೋಡಲು ಸುಂದರರಲ್ಲ, ಸಣ್ಣ ಪುಟ್ಟ ಪಾತ್ರಗಳಿಗೆ ತಮ್ಮನ್ನು ಸೀಮೀತಗೊಳಿಸಿಕೊಂಡರು. ರಾಜಕುಮಾರ್ ಅಭಿನಯದ ಭಕ್ತ ವಿಜಯ ಚಿತ್ರದಿಂದ ಆರಂಭಿಸಿ, ಮಯೂರ, ನಾ ನಿನ್ನ ಮರೆಯಲಾರೆ ಮುಂತಾದ ಚಿತ್ರಗಳಲ್ಲಿ ಗುಗ್ಗು ಪಾತ್ರ ಮಾಡಿದರು. ಕಳಸಾಪುರದ ಹುಡುಗರು ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿ ತಮ್ಮ ಬಹು ದಿನಗಳ ಕನಸು ನನಸು ಮಾಡಿಕೊಂಡರು. ಕನ್ನಡ ಚಿತ್ರರಂಗ ಮದರಾಸಿನಿಂದ ಕರ್ನಾಟಕಕ್ಕೆ ಬರಬೇಕೆಂಬ ಆಶಯ ಹೊಂದಿದ್ದ ಗುಗ್ಗು ೧೯೭೬ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೈಸೂರು ಮೂವಿಟೋನ್ ಸಂಸ್ಥೆಯನ್ನು ಹುಟ್ಟು ಹಾಕಿದರು. ನಿರ್ದೇಶಕ ಸಿ.ವಿ.ಶಿವಶಂಕರ್ ‘ಸಂಭಾವಿತ ನಟ ಗುಗ್ಗು‘ ಪುಸ್ತಕ ರಚಿಸಿದ್ದಾರೆ.


ಸುಮಾರು ೨೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಗುಗ್ಗು ಅಭಿನಯದ ಕೊನೆಯ ಚಿತ್ರ ೧೯೮೫ರಲ್ಲಿ ತೆರೆ ಕಂಡ ಗೂಂಡಾಗುರು. ೧೯೮೪ರ ಜೂನ್ ೨೨ರಂದು ತಮ್ಮ ೬೬ನೆಯ ವಯಸ್ಸಿನಲ್ಲಿ ನಿಧನರಾದರು.

 

Girl in a jacket
error: Content is protected !!