ಅಪ್ಪು ಅನ್ನ ಸಂತರ್ಪಣೆಗೆ ಹರಿದು ಬಂದ ಜನಸಾಗರ

Share

ಬೆಂಗಳೂರು,ನ,೦9: ನಾಡಿನಾದ್ಯಂತ ಮತ್ತೆ ಹರಿದು ಬಂದು ಒಂದೆಡೆ ಸೇರಿದ ಅಭಿಮಾನದ ಹೊಳೆ. ಮೇರೆ ಮೀರಿದ ಜಯಘೋಷ, ಅಭಿಮಾನದ ಹರಿವಿಗೆ ಸಾವಿರಾರು ನದಿಗಳು… ಎಂಬ ಹೊಸ ಭಾವನಾತ್ಮಕ ರೂಪಕಕ್ಕೆ ಪುನೀತ್ ಪುಣ್ಯಸ್ಮರಣೆಯ ೧೨ನೇ ದಿನ ಸಾಕ್ಷಿಯಾಯಿತು ಪುಣ್ಯಸ್ಮರಣೆಯ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಗರದ ಅರಮನೆ ಮೈದಾನದ ‘ತ್ರಿಪುರವಾಸಿನಿ’ ಅಂಗಣದಲ್ಲಿ ನಡೆಯಿತು.

.ಪುನೀತ್ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು. ಬಳಿಕ ಶಿವರಾಜ್‌ಕುಮಾರ್ ರಕ್ತದಾನ ಮಾಡಿದರು.

 

ಅನ್ನಸಂತರ್ಪಣೆಗೆ ಚಾಲನೆ ನೀಡಿದ ಬಳಿಕ ಭಾವುಕರಾದ ಅಶ್ವಿನಿ ಮನೆಗೆ ವಾಪಸಾದರು.ಊಟ ಮಾಡುತ್ತಿದ್ದ ಅಭಿಮಾನಿಗಳನ್ನು ಖುದ್ದಾಗಿ ಮಾತನಾಡಿಸಿದ ಶಿವರಾಜ್‌ಕುಮಾರ್, ‘ಸಾವಕಾಶವಾಗಿ ಊಟ ಮಾಡಿ’ ಎಂದು ಕೋರಿದರು.ಪುನೀತ್ ಮಕ್ಕಳಾದ ಧೃತಿ, ವಂದನಾ ಸೇರಿದಂತೆ ಡಾ.ರಾಜ್ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿದ್ದರು.
‘ಪುನೀತ್ ಹೆಸರಲ್ಲಿ ಈ ರೀತಿ ಊಟ ಹಾಕಬೇಕಾಗುತ್ತದೆ ಎಂಬ ಪರಿಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ. ಬಹುಶಃ ದೇವರ ಇಚ್ಛೆ ಅದೇ ಆಗಿತ್ತೇನೋ. ಪುನೀತ್‌ನಂತಹ ತಮ್ಮನನ್ನು ಪಡೆಯಬೇಕಾದರೆ ನಾನು ಪುಣ್ಯ ಮಾಡಿದ್ದೇನೆ. ಪುನೀತ್‌ನ ಒಳ್ಳೆಯ ಕೆಲಸಗಳು ಸ್ವತಃ ಕುಟುಂಬಕ್ಕೇ ಗೊತ್ತಿರಲಿಲ್ಲ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ’ ಎಂದು ಶಿವರಾಜ್‌ಕುಮಾರ್ ಹೇಳಿದರು.‘ಅಭಿಮಾನಿಗಳನ್ನು ದೇವರು ಎಂದು ಇದೇ ಕಾರಣಕ್ಕೆ ಅಪ್ಪಾಜಿ ಹೇಳಿದ್ದರು. ಅಭಿಮಾನಿಗಳು ಇದ್ದರೆ ಮಾತ್ರ ನಾವು. ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೇವೆ. ಎಷ್ಟು ಜನಕ್ಕೆ ಆಗುತ್ತೋ ಅಷ್ಟು ಜನಕ್ಕೆ ಭೋಜನದ ವ್ಯವಸ್ಥೆ ಮಾಡುತ್ತೇವೆ. ಯಾರೂ ಕೂಡಾ ಗೊಂದಲಕ್ಕೆ ಒಳಗಾಗಬಾರದು’ ಎಂದರು.
ರಾಘವೇಂದ್ರ ರಾಜ್‌ಕುಮಾರ್ ಕೂಡಾ ಶಿವರಾಜ್ ಕುಮಾರ್ ಮಾತನ್ನೇ ಪುನರುಚ್ಛರಿಸಿ, ‘ಅಭಿಮಾನಿಗಳಿಗೆ ಊಟ ಹಾಕಬೇಕು ಎಂಬುದು ಅಪ್ಪು ಅವರ ಕನಸೂ ಆಗಿತ್ತು’ ಎಂದರು.ಸುಮಾರು ೩೦ ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು. ಸಸ್ಯಾಹಾರ, ಮಾಂಸಾಹಾರ ಎರಡು ವಿಭಾಗಗಳಿದ್ದವು. ಮಾಂಸಾಹಾರ ಭೋಜನ ವಿಭಾಗದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚು ಇತ್ತು. ಅಪ್ಪು ಅವರಿಗೆ ಪ್ರಿಯವಾದ ಖಾದ್ಯಗಳನ್ನೇ ಅಭಿಮಾನಿಗಳಿಗೆ ಬಡಿಸಲಾಯಿತು.ನೂರಾರು ಪೊಲೀಸರು ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಬ್ಯಾರಿಕೇಡ್, ಭದ್ರತಾ ವ್ಯವಸ್ಥೆ ಮಾಡಿದ್ದರು.

Girl in a jacket
error: Content is protected !!