ಗ್ರಾಮೀಣ ಪ್ರದೇಶದಲ್ಲಿನ ನಾಟ್ಯಕಲಾ ಸಂಘಗಳ ಬವಣೆ
ನಾನು ಹೈಸ್ಕೂಲಿನ ಮೊದಲನೇ ವರ್ಷದಲ್ಲಿದಾಗ ನಮ್ಮೂರಿಗೆ ಆಗಮಿಸಿದ ಉತ್ತರಕರ್ನಾಟಕ ಮೂಲದ ಸಂಗಮೇಶ್ವರ ನಾಟ್ಯ ಕಲಾಸಂಘವು ಬಯಲುಸೀಮೆಯ ಬರಡುಭೂಮಿಗೆ ಕಲಾಗಂಗೆಯನ್ನು ಹರಿಸಿದ ಭಗೀರಥಸ್ವರೂಪದ ಉಜ್ವಲಪ್ರಯತ್ನಕ್ಕೆ ಪ್ರೇರಕರೂಪಿಯಾಗಿತ್ತು. ಆ ಹೊತ್ತು ಕಲೆಯ ವಿಷಯದಲ್ಲಿ ನಮ್ಮೂರು ಬಡತನದಿಂದ ಬಳಲುತ್ತಿತ್ತು ಎಂದೇ ಹೇಳಬೇಕು. ಆರ್ಥಿಕವಾಗಿ ಸಬಲವಲ್ಲದ ಊರೊಂದು ಸಾಂಸ್ಕೃತಿಕವಾಗಿ ಶ್ರೀಮಂತ ಎಂದು ಕರೆಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎಂದೇ ನಾನು ಭಾವಿಸುತ್ತೇನೆ. ಹೊಟ್ಟೆ ತುಂಬಾ ಉಂಡು, ಮೈತುಂಬಾ ಬಟ್ಟೆ ಹೊದ್ದುಕೊಂಡ ತರುವಾಯವೆ ಮನುಷ್ಯಜೀವ ಕಲೆಯ ನೆಲೆಯೊಂದನ್ನು ಅರಸುವುದಕ್ಕೆ ಮೊದಲಿಡುತ್ತದೆ. ದಿನನಿತ್ಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಜೀವಜಾತನಿಗೆ ಕಲೆಯಂತಹ ಸಾಂಸ್ಕೃತಿಕ ನೆಲೆಗಟ್ಟುಗಳ ಅನಾವರಣ ಸುಲಭದಲ್ಲಿ ಸಿದ್ದಿಸುವಂತಹುದಲ್ಲ. ಅಲ್ಲೊಮ್ಮೆ, ಇಲ್ಲೊಮ್ಮೆ, ಮೂಲಂಗಿ ಹೇಮಣ್ಣನಂತಹ ಅಭಿಜಾತ ಪ್ರತಿಭೆಗಳು ಹಳ್ಳಿಗಾಡಿನ ಶುಷ್ಕಸಾಂಸ್ಕೃತಿಕ ವಲಯವನ್ನು ಆರ್ದ್ರವಾಗಿ ಇಡುವ ಏಕಾಂಗಿ ಪ್ರಯತ್ನಗಳನ್ನು ಮಾಡಿದ ಹೊತ್ತೂ, ಊರಿನ ಕಲಾವಲಯದಲ್ಲಿ ಅದರಿಂದ ಉಂಟಾದ ಒಟ್ಟಂದದ ಫಲಶ್ರುತಿ ನಗಣ್ಯ ಎಂದೇ ಹೇಳಬೇಕು. ವರ್ಷಕ್ಕೆ ಒಮ್ಮೆ ನಡೆಯುವ ಸಾರ್ವತ್ರಿಕ ಗಣೇಶೋತ್ಸವಗಳನ್ನು ಹೊರತುಪಡಿಸಿದರೆ ವರ್ಷದ ಉಳಿದಕಾಲದಲ್ಲಿ ಊರ ಸಾಂಸ್ಕೃತಿಕರಂಗ ಕಳೆ ಕಳೆದುಕೊಂಡು, ಮೂಗುತಿಯಿಲ್ಲದ ಹೆಂಗಳೆಯ ಮೂಗಿನಂತೆ, ಭಣಭಣಗುಟ್ಟುತ್ತಿತ್ತು. ನಾವು ಬಹಳ ಚಿಕ್ಕವರಿದ್ದಾಗ ನೋಡಸಿಗುತ್ತಿದ್ದ ಬಯಲಾಟ ಪ್ರಸಂಗಗಳು ಅದ್ಯಾವ ಕಾರಣಕ್ಕೋ ನಿಂತುಹೋಗಿದ್ದವು. ಊರ ಉತ್ಸಾಹಿ ತರುಣತಂಡಗಳು ವರ್ಷಕ್ಕೆ ಒಂದರಂತೋ, ಎರಡರಂತೋ ದೀಪಾವಳಿ ಅಥವಾ ಯುಗಾದಿ ಹಬ್ಬಗಳ ಸಮಯಗಳಲ್ಲಿ ಪ್ರದರ್ಶಿಸುತ್ತಿದ್ದ ಪೌರಾಣಿಕ, ಐತಿಹಾಸಿಕ ಯಾ ಸಾಮಾಜಿಕ ನಾಟಕಗಳು ನಿಂತುಹೋಗಿ ವರ್ಷಗಳೇ ಉರುಳಿದ್ದವು.
ಸಂಗೀತ ಮಾಸ್ಟರ್ ನ್ನು ಕಷ್ಟಪಟ್ಟು ಹುಡುಕಿ ತಿಂಗಳುಗಟ್ಟಲೆ ಪ್ರತಿರಾತ್ರಿ ಹನ್ನೆರಡರ ವೇಳೆಯವರೆಗೆ ಪ್ರಾಕ್ಟೀಸ್ ಮಾಡಿ, ಹೆಣ್ಣು ಪಾತ್ರಗಳಿಗೆ ಬೆಂಗಳೂರಿನಿಂದ ಹೆಸರಾಂತ ಕಲಾವಿದೆಯರನ್ನು ದುಬಾರಿ ಮೊತ್ತದ ಹಣ ನೀಡಿ ಕರೆಸಿ, ತಮ್ಮ ಜೇಬಿನ ಕಾಸನ್ನು ಭರ್ಜರಿ ಎನ್ನುವಂತೆ ಖರ್ಚಿಸಿ, ಊರಜನರಿಗೆ ನಾಟಕಗಳ ರಸದೌತಣ ಉಣಬಡಿಸುತ್ತಿದ್ದ ಪರ್ವಕಾಲವೂ ತನ್ನ ಅವನತಿಯ ಅಂಚಿನತ್ತ ತೀವ್ರಗತಿಯಲ್ಲಿ ಸಾಗಿತ್ತು. ಆ ಕಾಲದ ಹಲವಾರು ಹೆಸರಾಂತ ಚಲನಚಿತ್ರ ನಟಿಮಣಿಗಳೂ ನನ್ನೂರಿನ ಹವ್ಯಾಸಿ ನಾಟಕರಂಗದ ಕಲಾವಿದರ ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದು ನನಗೆ ನೆನಪಿದೆ. ಈ ನಟಿಮಣಿಯರ ಸಾಲಿಗೆ ‘ವಿಜಯಕಲಾ’ ಎನ್ನುವ ಆ ಹೊತ್ತಿನ ಹೆಸರಾಂತ ಕನ್ನಡ ಚಿತ್ರನಟಿಯೂ ಸೇರಿದ್ದ ಅಂಶ ನನ್ನೂರಿನ ಕಲಾಭಿಮಾನಿಗಳು ಬಹಳ ವರ್ಷಗಳ ಕಾಲ ಹೆಮ್ಮೆಯಿಂದ ನೆನಪಿನ ತಿಜೋರಿಯಲ್ಲಿ ಜೋಪಾನವಾಗಿ ಇಟ್ಟುಕೊಳ್ಳುವಂತಹ ಕಾಣಿಕೆಯೆನಿಸಿತ್ತು.
ಸಂಗಮೇಶ್ವರ ನಾಟ್ಯ ಕಲಾಸಂಘ ನನ್ನ ಊರಿನಲ್ಲಿ ಝಂಡಾ ಊರಿದ್ದ ಸುಮಾರು ನಾಲ್ಕೈದು ತಿಂಗಳುಗಳ ಅವಧಿಯಲ್ಲಿ ದಿನಂಪ್ರತಿ ರಾತ್ರಿ ಒಂಬತ್ತರಿಂದ ಒಂದರ ಸುಮಾರಿನವರೆಗೆ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಹೆಚ್ಚಾಗಿ ಸಾಮಾಜಿಕ ನಾಟಕಗಳೇ ಜನಪ್ರಿಯತೆ ಪಡೆದಿದ್ದ ಕಾಲವದು. ಆಗೊಮ್ಮೆ, ಈಗೊಮ್ಮೆ ನಡುವಿನಲ್ಲಿ ಐತಿಹಾಸಿಕ, ಪೌರಾಣಿಕ ನಾಟಕಗಳ ಪ್ರದರ್ಶನವೂ ನಡೆಯುತ್ತಿದ್ದದುಂಟು. ಈ ಮೊದಲು ಊರಯುವಕರು ಪ್ರದರ್ಶಿಸುತ್ತಿದ್ದ ಬಯಲಾಟಗಳೇ ಮೊದಲಾದ ಸಾಮಾಜಿಕ, ಪೌರಾಣಿಕ ನಾಟಕಗಳಿಗೆ ಪ್ರವೇಶಧನ ಎಂದು ಒಂದು ಚಿಕ್ಕಾಸನ್ನೂ ಪ್ರೇಕ್ಷಕ ಮಹಾಶಯ ನೀಡುವ ಅವಶ್ಯಕತೆ ಬಂದಿರಲಿಲ್ಲ. ಊರಜನಕ್ಕೆ ಪುಕ್ಕಟೆ ಮನೋರಂಜನೆಯನ್ನು ಒದಗಿಸುತ್ತಿದ್ದ ಈ ಸಾಮಾಜಿಕ ಹಿನ್ನೆಲೆಯ ಚಿತ್ತಭಿತ್ತಿಗೆ ವೃತ್ತಿನಿರತ ನಾಟಕಸಂಘವಾದ ಸಂಗಮೇಶ್ವರ ನಾಟ್ಯ ಕಲಾಸಂಘ ತಾವಾಡುತ್ತಿದ್ದ ನಾಟಕಗಳಿಗೆ ಪ್ರವೇಶಧನವನ್ನು ವಿಧಿಸತೊಡಗಿದ್ದು ಶುರುಶುರುವಿನಲ್ಲಿ ಊರಜನಕ್ಕೆ ಒಂದು ಮಟ್ಟದ ಇರಸುಮುರಸನ್ನು ಉಂಟುಮಾಡಿದರೂ ಊರಲ್ಲಿ ಬೇರೆ ಮನೋರಂಜನೆಯ ತಾಣಗಳು ಇಲ್ಲದ ಕಾರಣಕ್ಕಾಗಿ ನಾಲ್ಕಾರು ವರ್ಷಗಳಿಂದ ನಿಂತೇ ಹೋಗಿದ್ದ ಜಯವಾಣಿ ಟೂರಿಂಗ್ ಟಾಕೀಸ್ ನ ಅಸ್ತಿಪಂಜರದ ಒಳಗೇ ಸುಸಜ್ಜಿತ ರಂಗಭೂಮಿ ಮತ್ತು ಅಗತ್ಯ ರಂಗಪರಿಕರಗಳೊಂದಿಗೆ ನಿರ್ಮಿತವಾದ ನಾಟಕಮಂಡಳಿಯ ನಿಲುವನ್ನು ನಿಧಾನವಾಗಿ ಅಂತರ್ಗತ ಮಾಡಿಕೊಂಡವರಾಗಿ ಗತ್ಯಂತರವಿಲ್ಲದೇ ಒಂದೂಕಾಲು, ಎರಡು ರೂಪಾಯಿ ಮತ್ತು ಮೂರು ರೂಪಾಯಿಗಳಷ್ಟಿದ್ದ ಪ್ರವೇಶಧನವನ್ನು ತಮ್ಮ ಶಕ್ತ್ಯಾನುಸಾರ ಖುಷಿಯಿಂದಲೇ ಕೊಟ್ಟು ನಾಟಕಗಳನ್ನು ನೋಡುವ ಅಭ್ಯಾಸವನ್ನ ಮೈಗೂಡಿಸಿಕೊಳ್ಳಹತ್ತಿದ್ದರು
. ಮೂರು ರೂಪಾಯಿ ಕೊಟ್ಟು ರಂಗದ ಮುಂಭಾಗದಲ್ಲಿ ಹಾಸಿದ ಮರದಬೆಂಚುಗಳಲ್ಲಿ ಆಸೀನರಾಗಿ ನಾಟಕದ ಸವಿಯನ್ನು ಸವಿಯುತ್ತಿದ್ದ ಬೆರಳೆಣಿಕೆಯಷ್ಟು ಉಳ್ಳ ಊರಮಂದಿಯ ತುಲನೆಯಲ್ಲಿ ಈ ವರ್ಗದ ಹಿಂದೆ ತುಸು ಎತ್ತರದ ಮಣ್ಣಿನ ದಿನ್ನೆಯ ಮೇಲೆ ಹಾಸಿದ ಈಚಲುಚಾಪೆಗಳ ಮೇಲೆ ಕುಳಿತು ನಾಟಕಗಳನ್ನು ಆನಂದಿಸುತ್ತಿದ್ದ ಮಧ್ಯಮವರ್ಗದ ಊರ ಮಂದಿಯೇ ಹೆಚ್ಚು. ಇನ್ನುಳಿದಂತೆ ಟಾಕೀಸ್ ನ ಪೂರ್ತಿ ಹಿಂಭಾಗದಲ್ಲಿ ಎಲ್ಲಕ್ಕಿಂತ ಎತ್ತರದವಾದ ಮಣ್ಣಿನ ದಿನ್ನೆಯ ಮೇಲೆ ತೆಳುವಾಗಿ ಹಾಸಿದ ಮರಳರಾಶಿ ಮೇಲೆ ಕುಳಿತು ನಾಟಕ ವೀಕ್ಷಿಸುತ್ತಿದ್ದ ಬಡವರ್ಗದ ಕಲಾಭಿಮಾನಿಗಳಿಗೂ ಕೊರತೆ ಇರಲಿಲ್ಲ. ನಾಟಕಮಂಡಳಿಯ ನಾಟಕಗಳ ಮಟ್ಟಿಗೆ ಇದು ‘ಗಾಂಧಿಕ್ಲಾಸ್’ ಎಂದೇ ಕರೆಸಿಕೊಳ್ಳುತ್ತಿತ್ತು. ನಾನೂ ಸಹ ಹಣಕಾಸಿನ ತೀವ್ರ ಮುಗ್ಗಟ್ಟಿನ ಕಾರಣದಿಂದಾಗಿ ಸಂಗಮೇಶ್ವರ ನಾಟ್ಯಸಂಘದ ಎಲ್ಲಾ ನಾಟಕಗಳ ಮಜಾವನ್ನೂ ಈ ಗಾಂಧಿಕ್ಲಾಸುವಾಸಿಯಾಗಿಯೆ ಅನುಭವಿಸಿದ್ದು.
ನಾಟ್ಯಮಂಡಳಿ ಅಂದಿನ ಹೆಸರಾಂತ ನಾಟಕಕಾರ ಹೆಚ್. ಎನ್. ಹೂಗಾರರ ಹಲವು ಬಹುಜನಪ್ರಿಯ ನಾಟಕಗಳನ್ನು ನನ್ನೂರಿನಲ್ಲಿ ಪ್ರದರ್ಶಿಸಿದ ನೆನಪು ನನ್ನಲ್ಲಿ ಗಾಢವಾಗಿದೆ. ‘ಗೌಡ್ರಗದ್ದಲ’, ‘ಮುದುಕನ ಮದುವೆ’, ‘ಹೂವಾಡಿಗರ ಹುಡುಗಿ’ ಮುಂತಾದ ಸಾಮಾಜಿಕ ರಂಗನಾಟಕಗಳು ಊರಮಂದಿಯ ಮನಸ್ಸನ್ನು ಕದ್ದ ಹೊತ್ತು ನಾಟಕಮಂಡಳಿ ಅಪರೂಪಕ್ಕೆ ಪ್ರದರ್ಶಿಸಿದ ಐತಿಹಾಸಿಕ ರಂಗಪ್ರದರ್ಶನ ‘ಶ್ರೀ ಬಸವೇಶ್ವರ’ ನಾಟಕ ಲಿಂಗಾಯಿತರ ಬಾಹುಳ್ಯವಿದ್ದ ಊರ ಮನಃಪಟಲದಲ್ಲಿ ಅನೂಹ್ಯವಾದ ಭಕ್ತಿತರಂಗಗಳನ್ನು ಸೃಷ್ಟಿಸಿತ್ತು. ಬಹುತೇಕ ನಾಟಕ ಮಂಡಳಿಯ ಎಲ್ಲಾ ನಾಟಕಗಳಲ್ಲಿ ನಾಯಕನಟನಾಗಿ ಪ್ರೇಕ್ಷಕರ “ವಾಹ್ ವಾಹ್ “ಗಳನ್ನ ದೊಡ್ಡಮಟ್ಟದಲ್ಲಿ ಸೂರೆಗೊಳ್ಳುತ್ತಿದ್ದ ಸವದತ್ತಿಯ ಪಾಟೀಲ್ ಎನ್ನುವ ತರುಣನ ಅಭಿನಯ ಕಲೆ, ದಶಕಗಳ ಹಿಂದೆ ದುರ್ಗದ ಎಸ್ ಎಲ್ ವಿ ರಂಗಮಂದಿರದಲ್ಲಿ ಗುಬ್ಬಿ ನಾಟಕಕಂಪನಿ ಪ್ರದರ್ಶಿಸುತ್ತಿದ್ದ ನಾಟಕಗಳಲ್ಲಿ ನಾಯಕ ನಟನಾಗಿ ಮಿಂಚುತ್ತಾ ಜನಮನವನ್ನು ಸೂರೆಗೊಂಡಿದ್ದ ‘ಮುತ್ತುರಾಜ್’ ಅವರ ನೆನಪನ್ನು ಊರ ಹಿರಿತಲೆಗಳಲ್ಲಿ ಉಜಾಲಗೊಳಿಸುತ್ತಿತ್ತು. ಮುಂದುವರೆದು ಮುತ್ತುರಾಜ್ ಕನ್ನಡದ ‘ಶ್ರೇಷ್ಠಮುತ್ತು’ ರಾಜ್ ಕುಮಾರ್ ಆಗಿ ಚಲನಚಿತ್ರರಂಗವನ್ನಷ್ಟೇ ಅಲ್ಲದೆ ಕನ್ನಡಿಗರ ಎರಡು ತಲೆಮಾರುಗಳ ಕೋಟಿಕೋಟಿ ಮನಸ್ಸುಗಳನ್ನು ಆಳಿದ ಕಥೆ ಕರ್ನಾಟಕದ ಎಂದೂ ಅಳಿಯದ ಚರಿತ್ರೆಯಾಗಿ ಪರಿವರ್ತನೆಯಾದ ಹೊತ್ತು ಪಾಟೀಲ್ ಅವರು ಚಲನಚಿತ್ರರಂಗದಲ್ಲಿ ಪರ್ಯಾಯ ಅವಕಾಶಗಳು ದೊರೆಯದೆ ನಿರಾಶೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದು ವಿಧಿಯ ವಿಕೋಪ ಎನ್ನದೆ ಗತ್ಯಂತರವಿಲ್ಲ. ಎಂತಹ ಅದ್ಭುತ ಕಲಾವಿದ ಎನಿಸಿದರೂ ಜನಪ್ರಿಯತೆಯ ಉತ್ತುಂಗಕ್ಕೆ ಏರುವ ಸದವಕಾಶ ಕೆಲವೇ ವ್ಯಕ್ತಿಗಳ ಹಣೆಬರಹವಾಗುವುದು ಸೋಜಿಗವೆನಿಸಿದರೂ ಸತ್ಯವೇ ಹೌದು.
ಸುಮಾರು ಮೂವತ್ತು ಮಂದಿ ಕಲಾವಿದರು ಮತ್ತು ತಂತ್ರಜ್ಞರಿದ್ದ ಸಂಗಮೇಶ್ವರ ನಾಟ್ಯ ಕಲಾಸಂಘದಲ್ಲಿ ನನ್ನನ್ನು ವಿಶೇಷವಾಗಿ ಸೆಳೆದ ವ್ಯಕ್ತಿ ಎಂದರೆ ಫಕೀರಪ್ಪ. ನಾಟಕ ಮಂಡಳಿಯಲ್ಲಿ ಸಣ್ಣಪುಟ್ಟ ಪೋಷಕ ಪಾತ್ರಗಳನ್ನು ನಿಭಾಯಿಸುತ್ತಿದ್ದ ಫಕೀರಪ್ಪ ನಾಟಕತಂಡದ ಎಲೆಕ್ಟ್ರಿಷಿಯನ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ. ಹೆಚ್ಚು ಓದಿಬರೆಯದ ಫಕೀರಪ್ಪ ಎಲೆಕ್ಟ್ರಿಕಲ್ ವಿಭಾಗದಲ್ಲಿ ಐಟಿಐ ತರಬೇತಿ ಸರ್ಟಿಫಿಕೇಟ್ ಪಡೆದಿದ್ದ. ನಾಟಕಮಂಡಳಿಯ ಪ್ರತಿಯೊಬ್ಬ ಕಲಾವಿದರ ಕಥೆಯೂ ಇದೇ. ಬಹುಮುಖ ಪ್ರತಿಭೆಗಳ ಒಡೆಯರಾಗಿದ್ದ ಬಹುತೇಕ ಸದಸ್ಯರು ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿಯನ್ನು ಸುಲಲಿತವಾಗಿ ನಿರ್ವಹಿಸಿ ಯಶಸ್ವಿ ಎನಿಸಿಕೊಳ್ಳುತ್ತಿದ್ದದ್ದು ಈಗಲೂ ನನ್ನ ಆಶ್ಚರ್ಯಕ್ಕೆ ಕಾರಣವಾಗಿದೆ. ಹಾಸ್ಯ ಪಾತ್ರಗಳಲ್ಲಿ ಜನರನ್ನು ರಂಜಿಸುತ್ತಿದ್ದ ಸುಧಾಮ ಬಡಿಗೇರ್ ಅವರು ಪಿಯಾನ್ ನ್ನು ಅದ್ಭುತವಾಗಿ ನುಡಿಸಬಲ್ಲವರಾಗಿದ್ದರು. ಸದಾ ವಯಸ್ಸಾದ ಪಾತ್ರಗಳನ್ನು ಪೋಷಿಸುತ್ತಿದ್ದ ಮಧುಸೂದನಕಟ್ಟಿಯವರು ನಾಟಕದ ಸೀನರಿಗಳನ್ನ ಬರೆಯುವುದರಲ್ಲಿ ನಿಸ್ಸೀಮರು. ನಾಯಕಿಯ ಪಾತ್ರದಲ್ಲಿ ಮಿಂಚುತ್ತಿದ್ದ ಲಲಿತಾಕುಮಾರಿ ವಡ್ಡರ ಇಡೀ ನಾಟಕತಂಡಕ್ಕೆ ರುಚಿಕಟ್ಟಾದ ಅಡುಗೆಯನ್ನು ಒದಗಿಸುವ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ನಾಟಕ ಪ್ರಾರಂಭವಾಗುವವರೆಗೆ ಟಾಕೀಸ್ ನ ಪ್ರವೇಶದ್ವಾರದಲ್ಲಿ ನಿಂತು ಟಿಕೆಟ್ ಚೆಕ್ ಮಾಡುತ್ತಿದ್ದ ರಘೋತ್ತಮ ಪುರಾಣಿಕರು ಯಾವ ಮಾಯೆಯಿಂದಲೋ ವಿನಾಯಕ ವಂದನೆಯ ನಾಂದಿ ಹಾಡಿನ ವೇಳೆಗಾಗಲೇ ತಬಲಾ ಪೆಟ್ಟಿಗೆಯ ಮುಂದೆ ಪ್ರತ್ಯಕ್ಷವಾಗಿರುತ್ತಿದ್ದರು. ಅತ್ತೆಯ ಪಾತ್ರಗಳನ್ನು ಅಮೋಘವಾಗಿ ನಿರ್ವಹಿಸುತ್ತಿದ್ದ ಸುಲೋಚನಾಬಾಯಿಯವರು ನಾಟಕಗಳಿಗೆ ಬೇಕಾದ ಎಲ್ಲಾ ವಸ್ತ್ರಉಡುಪುಗಳ ಮತ್ತು ರಂಗಪರಿಕರಗಳ ಮೇಲ್ವಿಚಾರಕರೂ ಆಗಿದ್ದರು. ಖಳನಾಯಕನಾಗಿ, ತನ್ನ ಮೀಟುಕಾಲುಗಳ ಮುಖೇನ ಸಾವಕಾಶವಾದ ರಂಗಚಲನೆಯನ್ನು ಮಾಡುತ್ತಾ, ಚಿಕ್ಕಮಕ್ಕಳ ಎದೆಯಲ್ಲಿ ವಿಕಟನಗೆಮಾತ್ರದಿಂದ ಭಯ ಸೃಷ್ಟಿಸುತ್ತಿದ್ದ ಶರದ್ ಹಂಚಿನಮನಿ ರಂಗಪೂಜೆ ಮತ್ತು ಇತರ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಮಾಡಬಲ್ಲವರಾಗಿದ್ದರು. ಅಂತಲೇ ಹಗಲಿನ ವೇಳೆಯಲ್ಲಿ ಊರ ಕೆಲಮನೆಗಳಿಗೆ ಪೌರತ್ಯದ ಕಾರಣಕ್ಕಾಗಿಯೂ ಭೇಟಿ ನೀಡುತ್ತಿದ್ದರು. ಹೀಗೆಯೇ ತಂಡದ ಪ್ರತಿಯೊಬ್ಬರೂ ನಾಟಕಗಳ ಯಶಸ್ಸಿನ ಸರ್ವತೋಮುಖ ಶಕ್ತಿಯಾಗಿ ಸುತ್ತಮುತ್ತಲ ಹತ್ತು ಹಳ್ಳಿಗಳಿಂದಲೂ ಬಂದು ನಾಟಕಗಳನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕದೇವರ ಮನೆಮಾತಾಗಿದ್ದರು.
ಐದು ಅಡಿಗಳನ್ನು ಮೀರಿ ಒಂದೆರೆಡು ಇಂಚುಗಳಷ್ಟು ಮಾತ್ರ ಎತ್ತರವಿದ್ದ, ಸಾಧಾರಣ ಮೈಕಟ್ಟಿನ, ಕಪ್ಪು ಎಂದೇ ಹೇಳಬೇಕಾದ ರಂಗಿನ ದೇಹದ ಫಕೀರಪ್ಪ ತನ್ನ ಓರೆಕಣ್ಣುಗಳನ್ನು ಒಂದರೆ ಘಳಿಗೆಯೂ ಒಂದೆಡೆ ಕೇಂದ್ರೀಕೃತಗೊಳಿಸದೆ ಆಚೀಚೆ ತಿರುವುತ್ತಾ ಸುತ್ತಲಿನ ಜಗತ್ತನ್ನು ತನ್ನ ಮುಖ್ಯ ಪಂಚೇಂದ್ರಿಯದ ಅರಿವಿನ ವಿಸ್ತಾರಕ್ಕೆ ಕುಗ್ಗಿಸಲು ಮಾಡುತ್ತಿದ್ದ ಅವಿರತಶ್ರಮ ಮಾತ್ರ ನನ್ನಲ್ಲಿ ವಿಚಿತ್ರವನ್ನು in ಹುಟ್ಟುಹಾಕುತ್ತಿತ್ತು. ತನ್ನ ಈ ದೈಹಿಕ ನ್ಯೂನತೆಯ ಅರಿವಿದ್ದಂತಿದ್ದ ಫಕೀರಪ್ಪ ಸದಾಕಾಲ ಕಪ್ಪುಕನ್ನಡಕದ ಗಾಜುಗಳ ಹಿಂದೆ ತಮ್ಮ ಅಮೂಲ್ಯ ಕಣ್ಣುಗಳನ್ನು ಅವಿತಿಟ್ಟುಕೊಂಡಿರುತ್ತಿದ್ದರು. ತಲೆಯ ಮೇಲೆ ತಮ್ಮ ಉಪಸ್ಥಿತಿಯ ಬಗ್ಗೆ ಅನುಮಾನವನ್ನು ಉಂಟು ಹಾಕುವಂತಿದ್ದ ಗಿಡ್ಡ ಗಂಗರು ಕೂದಲುಗಳ ಒಡೆಯನಾಗಿದ್ದ ಫಕೀರಪ್ಪ ಯಾವಾಗಲೂ ಬಿಳಿಜುಬ್ಬ ಹಾಗೂ ಬಿಳಿದೊಗಳೆ ಪೈಜಾಮವನ್ನು ಧರಿಸುತ್ತಿದ್ದ ಮತ್ತು ತನ್ನ ದಿರಿಸಿನ ಬಣ್ಣಕ್ಕೆ ವ್ಯತಿರಿಕ್ತ ಬಣ್ಣವಾದ ಕಡುಕಪ್ಪು ಶೂಗಳನ್ನೇ ಧರಿಸುತ್ತಿದ್ದ.
ಕೆಲ ತಿಂಗಳುಗಳ ಕಾಲ ಭರ್ಜರಿಯಾಗಿಯೇ ನಡೆದ ನಾಟ್ಯಸಂಘ ತನ್ನ ಹಿಂದಿನ ಕ್ಯಾಂಪ್ ವರ್ಕೆದೇವಪುರದಲ್ಲಿ ಆದ ನಷ್ಟವನ್ನು ಸರಿಸುಮಾರು ತುಂಬಿಕೊಂಡಿತ್ತು. ಮುಂದಿನ ಹಲವು ತಿಂಗಳುಗಳಲ್ಲಿ ನಮ್ಮೂರಿನ ಕ್ಯಾಂಪ್ ಇದೇ ರೀತಿ ನಡೆದಲ್ಲಿ ಸಾಕಷ್ಟು ಲಾಭವನ್ನು ನಿರೀಕ್ಷಿಸುತ್ತಿದ್ದ ಮಾಲೀಕ ಬಸವರಾಜ್ ಅವರಿಗೆ ಒಂದು ದಿನ ರಾತ್ರಿ ನಾಟಕದ ಪಾಳಿ ಮುಗಿದ ನಂತರದಲ್ಲಿ ಬಹುದೊಡ್ಡ ಶಾಕ್ ಕಾದಿತ್ತು. ತುಂಬಿದ ಸಭಾಂಗಣದಲ್ಲಿ ಯಶಸ್ವಿ ಶೋ ನಂತರ ಇಡೀ ನಾಟಕ ಮಂಡಳಿ ಗಾಢನಿದ್ರೆಗೆ ಜಾರಿದ ಹೊತ್ತು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಪೂರ್ಣ ಪ್ರಮಾಣದ ಅಗ್ನಿ ಅವಗಢವೊಂದು ಸಂಭವಿಸಿತ್ತು. ‘ಮುದುಕನ ಮದುವೆ’ ನಾಟಕದ ಸೆಟ್ ಪೂರ್ತಿಯಾಗಿ ಸುಟ್ಟು ಕರಕಲಾಗಿದ್ದಲ್ಲದೆ ಸಂಗೀತವಾದ್ಯಗಳೂ ಸೇರಿದಂತೆ ಎಲ್ಲಾ ರಂಗಪರಿಕರಗಳೂ ಬೆಂಕಿಗೆ ಆಹುತಿಯಾಗಿದ್ದವು. ಬರಸಿಡಿಲಿನಂತೆ ಬಂದೆರಗಿದ ಈ ಆಕಸ್ಮಾತ್ ದುರ್ಘಟನೆ ಮಾಲೀಕರ ಜಂಘಾಬಲವನ್ನೇ ಹುದುಗಿಸಿತ್ತು. ಮುಂದಿನ ಎರಡು ಮೂರು ವಾರಗಳು ನಾಟಕಗಳಿಲ್ಲದೇ ದಿನದೂಡಬೇಕಾದ ಕಾರಣ ಈ ಸಮಯ ಇಡೀ ನಾಟ್ಯಸಂಘದ ಪಾಲಿಗೆ ಅತ್ಯಂತ ನಿರ್ಣಾಯಕ ಘಟ್ಟವಾಗಿತ್ತು.
ಈ ಮಧ್ಯೆ ನಾಟಕಮಂಡಳಿಯನ್ನು ಇನ್ನು ನಡೆಸಲು ಅಸಾಧ್ಯ ಎನ್ನುವ ತೀರ್ಮಾನಕ್ಕೆ ಮಾಲೀಕ ಬಸವರಾಜ್ ಬಂದಾಗಿತ್ತು. ನಾಟಕಮಂಡಲಿಯ ಎಲ್ಲಾ ಸದಸ್ಯರ ಬಾಕಿ ಹಣವನ್ನು ಚುಕ್ತಾ ಮಾಡಿ ಸಂಗಮೇಶ್ವರ ನಾಟ್ಯ ಕಲಾಸಂಘವನ್ನು ಶಾಶ್ವತರೂಪದಲ್ಲಿ ಮುಚ್ಚಬೇಕು ಎನ್ನುವ ತಮ್ಮ ದೃಢನಿರ್ಧಾರಕ್ಕೆ ಅಂಟಿಕೊಂಡ ಮಾಲೀಕರು ಮಂಡಳಿಯ ಎಲ್ಲಾ ಸದಸ್ಯರಿಗೂ ಅವರವರಿಗೆ ಸಂದಾಯವಾಗಬೇಕಿದ್ದ ಬಾಕಿ ಹಣವನ್ನು ಒಂದು ಪೈಸೆಗೂ ಕಮ್ಮಿಯಾಗದಂತೆ ಹಂಚಿ, ಕಲಾವಿದರನ್ನು ಅವರವರ ಊರುಗಳಿಗೆ ಸಾಗುಹಾಕುವ ಕಾರ್ಯವನ್ನು ಯಾವ ಅಸಮಾಧಾನಗಳಿಗೂ ಎಡೆಗೊಡದ ರೀತಿಯಲ್ಲಿ ಸಂಪನ್ನಗೊಳಿಸಿದರು. ಇದಕ್ಕಾಗಿ ಬಸವರಾಜ್ ತಮ್ಮ ಸವಣೂರಿನ ಮನೆಹೊಲಗಳನ್ನು ಮಾರಿ ಅವಶ್ಯಕ ದುಡ್ಡನ್ನು ಸಂಗ್ರಹಿಸಿದರು ಎಂದು ಊರಿನ ಅನೇಕ ಜನ ಮಾತನಾಡುತ್ತಿದ್ದುದನ್ನು ನಾನೇ ಕಿವಿಯಾರೆ ಕೇಳಿಸಿಕೊಂಡಿದ್ದೇನೆ. ನಮ್ಮೂರಿನ ಜಡ್ಡುಗಟ್ಟಿದ ಸಾಂಸ್ಕೃತಿಕ ವಾತಾವರಣಕ್ಕೆ ಹೊಸತನದ ತಂಗಾಳಿಯನ್ನು ಭರಪೂರ ಎರೆದ ನಾಟಕಮಂಡಳಿ ಅಗ್ನಿದೇವನ ಅವಕೃಪೆಗೆ ತುತ್ತಾಗಿ ಶಾಶ್ವತವಾಗಿ ಮುಚ್ಚಬೇಕಾಗಿ ಬಂದ ಸಂಗತಿ ಮಾತ್ರ ಊರಿನ ಪ್ರಜ್ಞಾವಂತರ ಕರಳುಗಳನ್ನು ಬಹಳ ಸಮಯದವರೆಗೆ ಕಿವುಚುತ್ತಲೇ ಇದ್ದ ಸದ್ದು ನನ್ನ ಕರ್ಣದ್ವಯಗಳಲ್ಲಿ ಆಗಾಗ ಮಾರ್ದನಿಸುತ್ತಿತ್ತು.
ನಾಟ್ಯಸಂಘದ ಎಲ್ಲಾ ಕಲಾವಿದರೂ ಊರನ್ನು ತೊರೆದರಾದರೂ ತಬ್ಬಲಿಯಾದ ಫಕೀರಪ್ಪ ಮಾತ್ರ ನಮ್ಮೂರನ್ನು ತೊರೆಯಲಿಲ್ಲ. ಆ ಹೊತ್ತಿಗೆ ಇನ್ನೂ ಅವಿವಾಹಿತನಾಗಿಯೆ ಉಳಿದಿದ್ದ ಮೂವತ್ತೆರಡರ ಹರೆಯದ ಫಕೀರಪ್ಪ ತನ್ನ ಊರು ಗದಗದ ಸಮೀಪದ ಬಿಂಕದಕಟ್ಟೆಗೆ ಮರಳದೆ ತುರುವನೂರನ್ನೆ ತನ್ನ ಸ್ವಂತ ಊರನ್ನಾಗಿ ಆಯ್ಕೆ ಮಾಡಿಕೊಂಡ. ಈ ವೇಳೆಗಾಗಲೇ ಊರಿನ ಹತ್ತಾರು ಪ್ರಮುಖರ ಪರಿಚಯ ಚೆನ್ನಾಗಿಯೇ ಇದ್ದ ಫಕೀರಪ್ಪ ಊರಲ್ಲಿ ತಳಊರುವುದಕ್ಕೆ ಹೆಚ್ಚಿನ ಪರಿಶ್ರಮಪಡಬೇಕಾಗಲಿಲ್ಲ. ಕೋಟೆಯ ಬಳ್ಳಾರಿ ರುದ್ರಣ್ಣನವರ ಮನೆಯ ಹೊರಭಾಗದ ಒಂದು ರೂಮಿನ ಕೋಣೆಯಲ್ಲಿ ತನ್ನ ಸೂರನ್ನು ಕಂಡುಕೊಂಡ ಫಕೀರಪ್ಪ ಹೊಟ್ಟೆಪಾಡಿಗಾಗಿ ತಾನು ಕಲಿತ ಎಲೆಕ್ಟ್ರಿಕಲ್ ರಿಪೇರಿಯನ್ನ ನಂಬಿದ. ಹಳ್ಳಿಹಳ್ಳಿಗಳನ್ನು ಸುತ್ತಿ ರೈತರ ವಿದ್ಯುತ್ ಮೋಟಾರುಗಳನ್ನು ರಿಪೇರಿ ಮಾಡುವ ಕಾಯಕದೊಂದಿಗೆ ಊರಿನ ಯಾರ ಮನೆಯಲ್ಲಿಯಾದರೂ ವಿದ್ಯುತ್ ಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಿದರೆ ಊರಿನಲ್ಲಿಯೇ ಇದ್ದ ಕೆಇಬಿ ಉಪವಿಭಾಗದ ತಾಂತ್ರಿಕವರ್ಗಕ್ಕಿಂತಹ ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಫಕೀರಪ್ಪ ತನ್ನ ಶ್ರಮಕ್ಕೆ ಎಂದೂ ಬೆಲೆಕಟ್ಟಿದವನೇ ಅಲ್ಲ. ರಿಪೇರಿ ಮಾಡಿಸಿಕೊಂಡ ಮನೆಯವರು ಖುಷಿಯಿಂದ ಕೊಟ್ಟಷ್ಟು ಹಣ ಮಾತ್ರ ಪಡೆದು ದೂಸರ ಮಾತಿಲ್ಲದೆ ಅಲ್ಲಿಂದ ನಿರ್ಗಮಿಸುತ್ತಿದ್ದ ಫಕೀರಪ್ಪ ಅತ್ಯಲ್ಪ ಅವಧಿಯಲ್ಲಿ ವಿದ್ಯುತ್ ಕುರಿತಾದ ಊರಜನರ ತುರ್ತು ಅಗತ್ಯಗಳಿಗೆ ರಾಮಬಾಣವೆನಿಸಿದ. ಕೇವಲ ನಮ್ಮೂರಷ್ಟೆ ಅಲ್ಲದೆ ಸುತ್ತಮುತ್ತಲ ಹಳ್ಳಿಗಳಲ್ಲಿಯೂ ಫಕೀರಪ್ಪನಿಗೆ ಅಗಾಧ ಅನ್ನುವ ಮಟ್ಟದ ಬೇಡಿಕೆ ಸೃಷ್ಟಿಯಾಗತೊಡಗಿದ್ದ ಕಾಲಘಟ್ಟವದು. ಸಣ್ಣದಾಗಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ಫಕೀರಪ್ಪ ದಿನಗಳೆದಂತೆ ತನ್ನ ಕಾರ್ಯಬಾಹುಳ್ಯವನ್ನು ಯಾವ ಪರಿ ಹೆಚ್ಚಿಸಿಕೊಂಡ ಎಂದರೆ ಫಕೀರಪ್ಪನಿಲ್ಲದಿದ್ದರೆ ಊರ ಯಾವ ಮನೆಗಳಲ್ಲೂ ಮದುವೆ, ಮುಂಜಿ, ನಿಶ್ಚಯ, ಶೋಭನ, ನಾಮಕರಣ ಮತ್ತು ಬಸಿರೂಟವೇ ಮುಂತಾದ ಯಾವ ಶುಭಕಾರ್ಯಗಳೂ ನಡೆಯದಂತಹ ವಾತಾವರಣವೊಂದು ಹುಟ್ಟಿಕೊಂಡಿತ್ತು. ಎಲ್ಲಾ ಶುಭಕಾರ್ಯಗಳ ವಿದ್ಯುತ್ ದೀಪಾಲಂಕಾರಕ್ಕೆ ಫಕೀರಪ್ಪ ವಿದ್ಯುತ್ ನಷ್ಟೆ ಅತಿಬೇಡಿಕೆಯ ವಸ್ತುವಾಗಿ ಮಾರ್ಪಟ್ಟ. ಅಬಾಲವೃದ್ದರಾದಿಯಾಗಿ ಊರ ಸಕಲರಿಗೆ ಚಿರಪರಿಚಿತವೆ ಆಗಿಹೋದ ಫಕೀರಪ್ಪ ಆರ್ಥಿಕ ದೃಷ್ಟಿಯಿಂದ ಸಬಲ ಎನ್ನುವ ಹಂತವನ್ನು ತಲುಪತೊಡಗಿದ್ದ.
ಇಷ್ಟು ವೇಳೆಗಾಗಲೇ ಮೂವತೈದರ ಹರೆಯವನ್ನು ದಾಟಿದ್ದ ಪಕೀರಪ್ಪನಿಗೆ ತನ್ನ ತವರೂರು ಗುಸ್ಟಗುಮ್ಮಿಯಿಂದ ಒಂದು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆಯ ಶಾಸ್ತ್ರವನ್ನು ಮುಗಿಸುವುದರಲ್ಲಿ ಗಿಡ್ಡತಿಪ್ಪಣ್ಣ ಅವರ ಪತ್ನಿ ಅಕ್ಕನಾಗಮ್ಮ ಯಶಸ್ವಿಯಾದರು. ಊರ ಹೊರಗಿನ ಶ್ರೀ ರಾಮಲಿಂಗದೇವರ ಗುಡಿಯ ಬಳಿಯಲ್ಲಿ ತನ್ನ ಹೊಸತಾವನ್ನು ಕಟ್ಟಿಕೊಂಡ ಫಕೀರಪ್ಪ ಅನಿತರಲ್ಲಿಯೆ ಊರಿನ ಪ್ರತಿಷ್ಠವ್ಯಕ್ತಿಗಳ ಸಾಲಿನಲ್ಲಿ ರಾರಾಜಿಸತೊಡಗಿದ. ಕರ್ನಾಟಕ ರಾಜ್ಯ ಸರ್ಕಾರದ ಇಲೆಕ್ರಿಟಿಕಲ್ಸ್ ವಿಭಾಗದ ಟೆಂಡರ್ ಗಳನ್ನು ಹಾಕುವುದಕ್ಕೆ ಮೊದಲಾದ. ಮೂಲತಃ ಪರಿಶ್ರಮಿಯಾದ ಫಕೀರಪ್ಪ ಹೊಸದಾಗಿ ತೆಗೆದುಕೊಂಡ ರಾಯಲ್ ಎನ್ ಫೀಲ್ಡ್ ಬೈಕನ್ನು ಎತ್ತಿಕೊಂಡು ಊರೂರು ಸುತ್ತಿ ತನಗೆ ದೊರೆತ ಟೆಂಡರ್ ಕೆಲಸಗಳನ್ನು ಶ್ರದ್ದೆಯಿಂದ ಮಾಡಿದ ಪರಿಣಾಮ ನಿರೀಕ್ಷೆಗೂ ಮೀರಿದ ಲಾಭಾಂಶವನ್ನು ಪಡೆಯಲು ಆರಂಭಿಸಿದ.
ಈ ವೇಳೆಗೆ ತನ್ನ ಸರ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಸಂಗಮೇಶ್ವರ ನಾಟ್ಯ ಕಲಾಸಂಘದ ಮಾಜಿ ಮಾಲೀಕ ಬಸವರಾಜ್ ಯಾರ ಮುಖಾಂತರವೋ ಫಕೀರಪ್ಪನ ಬದಲಾದ ಆರ್ಥಿಕ ಸ್ಥಿತಿಗತಿಗಳನ್ನು ಅರಿತವನಾಗಿ ತುರುವನೂರಿಗೆ ಭೇಟಿ ಕೊಟ್ಟ. ರಂಗಭೂಮಿಯ ತನ್ನ ಗುರು ಮತ್ತು ಅನಾಥನಾದ ತನಗೆ ತುತ್ತು ಅನ್ನವನ್ನು ಕರುಣಿಸಿದ ಧಣಿ ಎನ್ನುವ ಕೃತಜ್ಞತಾಭಾವವನ್ನ ಬಸವರಾಜ್ ಅವರ ಬಗ್ಗೆ ತಳೆದಿದ್ದ ಫಕೀರಪ್ಪ, ಹಾವೇರಿಯಲ್ಲಿ ಸಂಗಮೇಶ್ವರ ನಾಟ್ಯ ಕಲಾಸಂಘದ ಪುನರುತ್ಥಾನದ ಯೋಜನೆಯನ್ನು ಮುಂದಿಟ್ಟ ಮತ್ತು ಅದಕ್ಕಾಗಿ ಆರ್ಥಿಕ ಸಹಾಯವನ್ನು ಕೇಳಿದ ಬಸವರಾಜ್ ಅವರ ಮಾತನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗಲಿಲ್ಲ. ಆದರೂ ಈ ವೇಳೆಗಾಗಲೇ ಪಳಗಿದ ವ್ಯವಹಾರಸ್ಥನಾದ ಫಕೀರಪ್ಪ ಬಸವರಾಜ್ ಗೆ ಷರತ್ತುರಹಿತ ಸಹಾಯಧನವನ್ನು ಕೊಡಲು ಒಪ್ಪದೇ ತನ್ನನ್ನೂ ಕೂಡ ನಾಟಕ ಮಂಡಳಿಯ ಸಮಪಾಲಿನ ಮಾಲೀಕನನ್ನಾಗಿಸಬೇಕೆಂಬ ಕೋರಿಕೆಯನ್ನು ಬಸವರಾಜ್ ಮುಂದಿಟ್ಟ. ಇದಕ್ಕೆ ಅರೆಮನಸ್ಸಿನಿಂದಲೆ ಒಪ್ಪಿಗೆ ಸೂಚಿಸಿದ ಬಸವರಾಜ್ ಫಕೀರಪ್ಪನ ಧನಬಲದ ಪರಿಣಾಮ ಅದ್ದೂರಿಯಾಗಿಯೆ ರಂಗಭೂಮಿಯ ತನ್ನ ನೂತನ ವಿಕ್ರಮವನ್ನ ಹಾವೇರಿಯ ಕಲೆಯಿಂದ ಕಾವೇರಿದ ಸಿರಿಎದೆಯಲ್ಲಿ ಶುರುಹಚ್ಚಿಕೊಂಡ. ಫಕೀರಪ್ಪ ತನ್ನ ಲಾಭದಾಯಕ ಎಲೆಕ್ಟ್ರಿಕಲ್ ಗುತ್ತಿಗೆದಾರಿಕೆಯನ್ನು ಬಿಟ್ಟು ಬೇರೆಡೆಗೆ ಬಂಡವಾಳ ಹೂಡುವುದು ಫಕೀರಪ್ಪನ ಹೆಂಡತಿ ದ್ಯಾಮಕ್ಕನಿಗೆ ಯಾವ ಕಾರಣಕ್ಕೂ ಇಷ್ಟವಿರಲಿಲ್ಲ. ಕಷ್ಟಕಾಲದಲ್ಲಿ ತಮ್ಮ ಕೈಹಿಡಿದ ಎಲೆಕ್ಟ್ರಿಕಲ್ ಕೆಲಸದಲ್ಲಿಯೇ ಗಂಡ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿ, ರಂಗಭೂಮಿಯ ಸಹವಾಸ ಬೇಡವೇ ಬೇಡ ಎನ್ನುವ ಹಠವನ್ನು ದ್ಯಾಮಕ್ಕ ತನ್ನ ಕೈಲಾದ ಮಟ್ಟಿಗೆ ಮಾಡಿದಳಾದರೂ ಕೈಬೀಸಿ ಕರೆಯುತ್ತಿದ್ದ ಕಲಾದೇವಿಯ ಮೋಹದ ಸೆಳೆತವನ್ನು ಮೀರಲಿಕ್ಕೆ ಫಕೀರಪ್ಪನಿಗೆ ಸಾಧ್ಯವಾಗದೆ ಹೋಯಿತು.
ಹಾವೇರಿಯ ನಾಟ್ಯಸಂಘದ ಸಂಪೂರ್ಣ ಜವಾಬ್ದಾರಿಯನ್ನು ಬಸವರಾಜ್ ಹೆಗಲಿಗೆ ಹಾಕಿ ತನ್ನ ಕಾಂಟ್ರ್ಯಾಕ್ಟ್ ಕೆಲಸಗಳಲ್ಲಿಯೇ ತಲ್ಲೀನನಾದ ಫಕೀರಪ್ಪನನ್ನು ಮಾತ್ರ ವಿಧಿ ಬೆನ್ನು ಬಿಡಲಿಲ್ಲ. ಹೊಸದಾಗಿ ಪ್ರಾರಂಭವಾದ ನಾಟಕಮಂಡಳಿ ಒಂದು ವರ್ಷ ಪೂರ್ಣಗೊಳಿಸುವುದರ ಒಳಗೇ ಪಾಲುದಾರ ಮಾಲೀಕ ಬಸವರಾಜ್ ಹೃದಯಾಘಾತದಿಂದಾಗಿ ಅಕಾಲ ಮೃತ್ಯುವಿಗೆ ತುತ್ತಾದ. ಈ ವೇಳೆಗಾಗಲೇ ಬೆವರುಹರಿಸಿ ಗುತ್ತಿಗೆ ಕೆಲಸಗಳಲ್ಲಿ ದುಡಿದ ಬಹುಪಾಲು ಹಣವನ್ನು ನಾಟಕ ಕಂಪನಿಗೆ ವಿನಿಯೋಗಿಸಿದ್ದ ಫಕೀರಪ್ಪನಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಯಿತು. ಹಿಂದುಮುಂದೆ ನೋಡದೆ ಬಸವರಾಜ್ ಕೇಳಿದಾಗಲೆಲ್ಲಾ ಹಣವನ್ನು ಪೂರೈಸುತ್ತಾ ಬಂದು ಅದಕ್ಕೆ ಸರಿಯಾದ ಲೆಕ್ಕವನ್ನೂ ಇಡದ ಫಕೀರಪ್ಪ ಅಕ್ಷರಶಃ ನಲುಗಿಹೋಗಿದ್ದ. ಬಸವರಾಜ್ ಮೇಲಿದ್ದ ಅಲುಗದ ಭರವಸೆಯ ಕಾರಣ ನಾಟಕ ಕಂಪನಿಗೆ ಹೇರಳವಾದ ಹಣದಹೊಳೆಯನ್ನು ಹರಿಸಿದ್ದ ಫಕೀರಪ್ಪ ಬಸವರಾಜ್ ಸಾವಿನ ನಂತರ ಕಂಪನಿಯ ಹಣಕಾಸಿನ ಪರಿಸ್ಥಿತಿ ನೋಡಿ ಮರ್ಮಾಘಾತಕ್ಕೆ ಒಳಗಾಗಿದ್ದ. ಯಾರನ್ನು ಸೋದರಸಮಾನ ಎಂದು ನಂಬಿ ತನ್ನ ದುಡಿಮೆಯ ಹಣವನ್ನು ಅವರ ಮೇಲೆ ವ್ಯಯಿಸಿದ್ದನೋ ಅಂತಹ ವ್ಯಕ್ತಿ ಹಣಕಾಸು ವಿಷಯದಲ್ಲಿ ಫಕೀರಪ್ಪನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದ. ಫಕೀರಪ್ಪಗನಿಗೆ ರಾಮಕೃಷ್ಣನ ಲೆಕ್ಕ ತೋರಿಸಿ ಲಕ್ಷಗಟ್ಟಲೆ ಹಣವನ್ನು ಲಪಟಾಯಿಸಿ ಸವಣೂರಿನ ತನ್ನ ಕೈಬಿಟ್ಟ ಆಸ್ತಿಯನ್ನು ಮರಳಿ ಗಳಿಸಿದ್ದ.
ಫಕೀರಪ್ಪ ಮತ್ತೊಮ್ಮೆ ಅತ್ಯಂತ ಇಕ್ಕಟ್ಟಿನ ಪರಿಸ್ಥಿತಿಯ ಶಿಶುವಾದ. ಒಂದೆಡೆ ಬೆವರುಹರಿಸಿ ಅಪಾರ ಹಣ, ಹೆಸರು ಗಳಿಸಿದ ಗುತ್ತಿಗೆ ಉದ್ಯಮ ಮತ್ತೊಂದೆಡೆ ಯಾವತ್ತೂ ತನ್ನ ಬದುಕಿನ ಮೊದಲನೇ ಆಯ್ಕೆಯಾಗಿಯೇ ಉಳಿದಿದ್ದ ಕಲಾವಂತಿಕೆಯ ಸೆಳೆವು, ಈ ಎರಡರ ನಡುವಿನ ಆಯ್ಕೆಯ ಕುರಿತು ಯೋಚಿಸಿ ಯೋಚಿಸಿ ಫಕೀರಪ್ಪ ಹೈರಾಣಾಗಿ ಹೋಗಿದ್ದ. ಕೊನೆಗೂ ಎರಡೂ ಉದ್ಯಮಗಳನ್ನು ಒಬ್ಬಂಟಿಗನಾಗಿ ನಿಭಾಯಿಸುವ ಕಷ್ಟಸಾಧ್ಯ ಎನ್ನಬಹುದಾದ ನಿರ್ಣಯಕ್ಕೆ ಫಕೀರಪ್ಪ ಬಂದ. ಬಸವರಾಜ್ ಮಾಡಿದ ದ್ರೋಹದಿಂದಾಗಿ ಸಂಬಂಧಗಳ ಮಧ್ಯದ ನಂಬಿಕೆಯ ನೆಲೆಗಟ್ಟನ್ನು ಸಾಕಷ್ಟು ಸಡಿಲಗೊಳಿಸಿಕೊಂಡಿದ್ದ ಫಕೀರಪ್ಪ ಹಾವೇರಿಯ ನಾಟ್ಯಸಂಘ ಹಾಗೂ ದುರ್ಗದ ಸುತ್ತಮುತ್ತಲ ವಿದ್ಯುತ್ ಗುತ್ತಿಗೆಗಳನ್ನು ಒಟ್ಟಿಗೇ ನಿಭಾಯಿಸಲು ಮೊದಲು ಮಾಡಿದ. ಪ್ರಾರಂಭದ ಕೆಲ ತಿಂಗಳುಗಳು ಪರವಾಗಿಲ್ಲ ಎನ್ನುವಂತೆ ಎರಡು ಉದ್ಯಮಗಳು ನಡೆದರೂ ತದನಂತರ ಫಕೀರಪ್ಪನಿಗೆ ಎರಡೂ ಕೆಲಸಗಳನ್ನು ಒಟ್ಟಿಗೇ ನಿರ್ವಹಿಸುವುದು ಅಸಾಧ್ಯ ಎನ್ನುವ ಪ್ರಾಯೋಗಿಕ ಅಂಶ ಮನವರಿಕೆಯಾಗಲು ದ್ಯಾಮಕ್ಕನ ಹರಿಯುವ ಕಣ್ಣೀರಿನ ಕೋಡಿಯ ನಡುವೆಯೂ ಗುತ್ತಿಗೆ ಕೆಲಸಕ್ಕೆ ವಿದಾಯ ಹೇಳಿ ಹಾವೇರಿಗೆ ತನ್ನ ಕಾರ್ಯಸ್ಥಾನವನ್ನು ಬದಲಾಯಿಸಿ ಪೂರ್ಣ ಪ್ರಮಾಣದಲ್ಲಿ ಸಂಗಮೇಶ್ವರ ನಾಟ್ಯ ಕಲಾಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ. ಗುತ್ತಿಗೆ ಕಾರ್ಯದಲ್ಲಿ ಇದ್ದಷ್ಟು ಹೆಚ್ಚಿನ ಪ್ರಮಾಣದ ಹಣ ರಂಗಭೂಮಿಯಲ್ಲಿ ಹರಿದು ಬರದೇ ಇದ್ದರೂ ನಲ್ವತ್ತಕ್ಕೆ ಮೀರಿದ ಕಲಾವಿದರು ಹಾಗೂ ಅವರ ಕುಟುಂಬಗಳಿಗೆ ಆಶ್ರಯದಾತನಾಗುವೆನಲ್ಲ ಎನ್ನುವ ಧಾವಂತದಲ್ಲಿ ತನ್ನ ಶಕ್ತಿ ಮೀರಿ ನಾಟಕ ಮಂಡಳಿಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ. ಹೆಚ್ಚಿನ ಕಲಾವಿದರು ತುರುವನೂರಿನಲ್ಲಿದ್ದ ನಾಟಕಮಂಡಲಿಯಲ್ಲಿ ಇದ್ದವರೇ ಆಗಿದ್ದ ಅಂಶ ಫಕೀರಪ್ಪನ ನೈತಿಕ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿತ್ತು.
ಆದರೆ ಈ ಬಾರಿಯ ಸಮಯ ಫಕೀರಪ್ಪನಿಗೆ ಪ್ರತಿಕೂಲವಾಗಿತ್ತು. ರಂಗಭೂಮಿಯ ತೊಟ್ಟಿಲೆಂದೇ ಹೆಸರಾದ ಹಾವೇರಿಯ ಗಂಡುಭೂಮಿಯಲ್ಲೂ ನಾಟಕಗಳನ್ನು ಕುರಿತಾಗಿ ಪ್ರೇಕ್ಷಕಪ್ರಭುವಿನಲ್ಲಿ ಒಂದು ತೆರನಾದ ಅಸಡ್ಡೆ ಮೂಡತೊಡಗಿತ್ತು. ವಾರಕ್ಕೆ ಒಂದೆರಡರಂತೆ ಬಿಡುಗಡೆ ಕಾಣುತ್ತಿದ್ದ ಕನ್ನಡ ಚಲನಚಿತ್ರಗಳು ಸಾಂಪ್ರದಾಯಿಕ ರಂಗಭೂಮಿಯ ಬೆನ್ನನ್ನು ಮುರಿದುಹಾಕಿದ್ದವು. ನಾಟಕ ನೋಡಲು ಬರುವ ರಂಗಾಭಿಮಾನಿಗಳು ಹಾಗೂ ಅವರ ಅಭಿರುಚಿಗಳು ಫಕೀರಪ್ಪನೇ ಗಾಬರಿಗೊಳ್ಳುವ ರೀತಿಯಲ್ಲಿ ಮಾರ್ಪಾಡುಹೊಂದಿದ್ದವು. ಹಾಗೂ, ಹೀಗೂ ಏಗಾಡುತ್ತಲೇ ರಂಗಭೂಮಿಯ ಚಕ್ಕಡಿಯನ್ನು ತನ್ನ ಕೈಲಾದ ದೂರಕ್ಕೆ ಎರಡು ವಸಂತಗಳ ಕಾಲ ಎಳೆದ ಫಕೀರಪ್ಪ ಒಂದು ಹಂತದ ದಿವಾಳಿಯ ನಂತರ ನಾಟ್ಯಸಂಘವನ್ನು ಮುಂದುವರೆಸುವ ಧೈರ್ಯ ತೋರಲಿಲ್ಲ. ಅಷ್ಟು ವೇಳೆಗಾಗಲೇ ಗುತ್ತಿಗೆ ಕೆಲಸದಿಂದ ಗಳಿಸಿದ ಹಣವನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ಕಳೆದುಕೊಂಡಿದ್ದ ಫಕೀರಪ್ಪ ಈ ಬಾರಿ ಎಂದೂ ತನ್ನನ್ನು ಕೈಬಿಡದ ಆತ್ಮವಿಶ್ವಾಸದಿಂದಲೆ ವಂಚನೆಗೆ ಒಳಗಾದವನಾಗಿದ್ದ. ಬಸವರಾಜ್ ಮಾಡಿದ ವಂಚನೆ ಬಾಹ್ಯಸ್ವರೂಪದ ವಂಚನೆಯಾದರೆ ತನ್ನದೇ ಆತ್ಮವಿಶ್ವಾಸ ಮಾಡಿದ ಅಂತರ್ಯವಂಚನೆಯಿಂದಾಗಿ ಫಕೀರಪ್ಪನ ಮೈಮನಗಳು ಇನ್ನಿಲ್ಲದಂತೆ ಘಾಸಿಗೊಂಡಿದ್ದವು.
ತನ್ಮಧ್ಯೆ ಫಕೀರಪ್ಪನ ಸಂಸಾರವೂ ಹಿಗ್ಗಿತ್ತು. ಹುಣ್ಣಿಮೆಯ ಚಂದ್ರನಂತೆ ಬೆಳೆಯುತ್ತಿದ್ದ ಒಂದು ಗಂಡು ಮತ್ತು ಎರಡು ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಸಹಜವಾಗಿಯೇ ಆತಂಕಕ್ಕೆ ಈಡಾಗಿದ್ದ ಫಕೀರಪ್ಪ ಎರಡನೇ ಬಾರಿಗೆ ಸಂಗಮೇಶ್ವರ ನಾಟ್ಯಸಂಘವನ್ನು ಶಾಶ್ವತವಾಗಿ ಮುಚ್ಚಿ ಮತ್ತೆ ತನ್ನ ವಿದ್ಯುತ್ ಗುತ್ತಿಗೆ ಕೆಲಸಕ್ಕೆ ಶರಣಾಗುವ ಬಹಳ ಕ್ಲಿಷ್ಟಸಾಧ್ಯ ತೀರ್ಮಾನವನ್ನು ಕೈಗೊಂಡ. ಆದರೆ ಅಲ್ಲಿಯೂ ವಿಧಿ ಹೋದ ಸಲದ ಹಾಗೆ ಫಕೀರಪ್ಪನ ಕೈ ಹಿಡಿಯಲಿಲ್ಲ. ಹೆಚ್ಚಾದ ಸ್ಪರ್ಧಾತ್ಮಕ ಗುತ್ತಿಗೆವಲಯದಲ್ಲಿ ಫಕೀರಪ್ಪ ತನ್ನ ಮೊದಲಿನ ಕಮಾಲ್ ಮಾಡಲಾಗಲಿಲ್ಲ. ಈ ಬೆಳವಣಿಗೆಗಳಿಂದ ನೊಂದ ಫಕೀರಪ್ಪ ಗದಗಕ್ಕೆ ಸ್ಥಳಾಂತರ ಮಾಡಿ ಅಲ್ಲಿನ ಮುಖ್ಯರಸ್ತೆಯಲ್ಲಿ ೧೦×೧೦ ಅಡಿಯ ವಿಸ್ತೀರ್ಣದ ಮಳಿಗೆಯೊಂದರಲ್ಲಿ ಒಂದು ಎಲೆಕ್ಟ್ರಿಕಲ್ ಉಪಕರಣಗಳ ರಿಪೇರಿ ಅಂಗಡಿಯನ್ನು ತೆರೆದು ಕೊನೆಗೂ ತನ್ನ ಉದ್ಯಮದಲ್ಲಿ ಸ್ಥಿರತೆಯನ್ನ ಕಂಡುಕೊಳ್ಳುವ ಪ್ರಾಮಾಣಿಕ ಕೆಲಸಕ್ಕೆ ಕೈಹಾಕಿದ. ಇಲ್ಲಿಂದ ಬರುವ ಆದಾಯ ಅಷ್ಟಕ್ಕಷ್ಟೇ ಇದ್ದ ಹೊತ್ತೂ ರಿಪೇರಿ ಕೆಲಸಗಳಿಂದ ಬರುವ ಹಣದಿಂದಲೇ ಜತನದಿಂದ ಕುಟುಂಬ ನಿರ್ವಹಣೆ ಮಾಡಿದ ದ್ಯಾಮಕ್ಕನ ಕಾರಣದಿಂದಾಗಿ ಸಂಸಾರನೌಕೆಯನ್ನು ಸುಸ್ಥಿರಗೊಳಿಸುವುದರಲ್ಲಿ ತಕ್ಕಮಟ್ಟಿಗಿನ ಯಶಸ್ಸನ್ನು ಕಂಡ.
ನನ್ನ ಮನೆ, ಸಂಬಂಧಿಕರು ಹೀಗೆ ಯಾರ ಮನೆಯ ಯಾವುದೇ ವಿದ್ಯುತ್ ಉಪಕರಣಗಳು ರಿಪೇರಿಗೆ ಬಂದ ವೇಳೆ ನಾನು ಅವುಗಳನ್ನು ಹಾಗೆಯೇ ಸಂಗ್ರಹಿಸಿಟ್ಟು ಗದಗದ ಕಡೆಗೆ ಹೋದಾಗೊಮ್ಮೆ ಅವುಗಳನ್ನು ಫಕೀರಪ್ಪನ ಕೈಯಲ್ಲಿಯೇ ಕೊಟ್ಟು ರಿಪೇರಿ ಮಾಡಿಸಿ ರಿಪೇರಿಯ ಹಣಕ್ಕೂ ದುಪ್ಪಟ್ಟಾದ ಹಣವನ್ನು ಕೊಡುವ ಕೆಲಸವನ್ನು ನಾನು ವಿದೇಶಕ್ಕೆ ತೆರಳುವವರೆಗೂ ತಪ್ಪದೇ ಮಾಡುತ್ತಿದ್ದೆ. ಬಾಲ್ಯದಲ್ಲಿ ನನಗೆ ನಾಟಕಗಳ ಕನಸಿನಲೋಕವನ್ನು ಪರಿಚಯಿಸಿದ ಫಕೀರಪ್ಪನಿಗೆ ಸಲ್ಲಬೇಕಾದ ಧನ್ಯವಾದದ ರೂಪವಾಗಿ ನನ್ನ ಈ ಕಾಯಕವನ್ನು ಗಣಿಸಿದ್ದೆ. ನನ್ನನ್ನು ಭೇಟಿಯಾದ ಪ್ರತೀಸಲ ತುರುವನೂರಿನ ತನ್ನ ಅತ್ಯಾಪ್ತ ಮತ್ತು ಪರಿಚಯಸ್ಥ ಮಂದಿಯ ಮತ್ತು ಅವರ ಕುಟುಂಬವರ್ಗದ ಆರೋಗ್ಯದ ಬಗ್ಗೆ ನನ್ನಿಂದ ಕೇಳಿಕೇಳಿ ತಿಳಿದುಕೊಳ್ಳುತ್ತಿದ್ದ ಫಕೀರಪ್ಪನ ಭಾವಭಿತ್ತಿಯಲ್ಲಿ ತುರುವನೂರು ಅಚ್ಚಳಿಯದೆ ಉಳಿದಿದ್ದು ನನಗೆ ಹೃದ್ಗೋಚರವಾಗಿತ್ತು.
೨೦೧೮ ಇಸವಿಯಲ್ಲಿ ಗದಗಕ್ಕೆ ಹೋದವನು ಫಕೀರಪ್ಪನ ಸಾವನ್ನು ಅವನ ಮಗ ವಿಶ್ವಾಸ್ ಬಾಯಲ್ಲಿ ಕೇಳಿ ಒಂದು ಕ್ಷಣ ಮರಗಟ್ಟಿ ಹೋಗಿದ್ದೆ. ಜೀವನವಿಡೀ ಕಲಾದೇವಿಯ ತಪಸ್ಸಿನಲ್ಲಿ ಲೀನವಾಗಿ ತನ್ನ ಬಾಳಿನೊಂದಿಗೆ ಅಕ್ಷರಶಃ ಜೂಜಾಟವಾಡಿದ ಫಕೀರಪ್ಪ ತನ್ನ ಕೊನೆಯ ದಿನಗಳಲ್ಲಿಯೂ ಗದಗಕ್ಕೆ ಅಪರೂಪಕ್ಕೊಮ್ಮೆ ಬರುತ್ತಿದ್ದ ನಾಟಕಮಂಡಳಿಗಳ ನಾಟಕಗಳನ್ನ ಒಮ್ಮೆಯಾದರೂ ನೋಡುತಿದ್ದ ವಿಷಯವನ್ನು ಅರಿತಾಗ ಕನ್ನಡ ರಂಗಭೂಮಿಯ ಸೆಳೆವಿನ ಅಗಾಧಶಕ್ತಿಯ ಗೋಚರವಾಗಿ ಫಕೀರಪ್ಪನ ಮತ್ತೊಂದು ವೃತ್ತಿಕ್ಷೇತ್ರವಾದ ವಿದ್ಯುತ್ ವಲಯದ ಶಾಕ್ ಹೊಡೆಸಿಕೊಂಡವಂತೆ ಪತರುಗುಟ್ಟಿದೆ.