ಚಿದಂಬರ ಜೋಶಿ,ಚಿಕಾಗೂ.
ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ. ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರೆ
ನಿರುದ್ಯೋಗ ಸಮಸ್ಯೆಗೆ ಮನೋಸ್ಥಿತಿಯೂ ಕಾರಣ.!
ಈ ದಿನ ನಾನು, ಭಾರತದಲ್ಲಿ ಬೆಳೆಯುತ್ತಿರುವ ಒಂದು ಅಗಾಧ ಸಮಸ್ಯೆ, ಒಂದು ವಿಷಮ ಪರಿಸ್ಥಿತಿ ಬಗ್ಗೆ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ. ಇದು ನಿನ್ನೆ ಮೊನ್ನೆ ಅಥವಾ ಕಳೆದ ದಶಕದಲ್ಲಿ ನಿರ್ಮಾಣವಾಗಿರುವ ಸಮಸ್ಯೆಯಲ್ಲ. ಬ್ರಿಟಿಷರು ಬಿತ್ತಿದ ಹಲವಾರು ಸಮಾಜನಾಶಕ ಬೀಜಗಳಲ್ಲಿ ಒಂದು ಬೀಜದ ಫಲ ಇದು.
ಈ ಸಮಸ್ಯೆ ಯಾವುದು ಅಂತೀರಾ? ನಿರುದ್ಯೋಗ – ಈ ಸಮಸ್ಯೆಯನ್ನು ಅದರ ಬುಡ ಸಮೇತ ಕಿತ್ತೆಸೆಯದಿದ್ದರೆ, ಮಹಾದುರಂತದಲ್ಲಿ ಕೊನೆಯಾಗುವದರಲ್ಲಿ ಯಾವುದೇ ಸಂಶಯವಿಲ್ಲ. ಈ ಮಾತನ್ನು ಒಪ್ಪುತ್ತೀರಾ?
ಇದನ್ನು ಸ್ವಲ್ಪ ಆಳವಾಗಿ, ವಿವರವಾಗಿ, ಹತ್ತಿರದಿಂದ ತಿಳಿದುಕೊಳೋಣ.
ಹಲವಾರು ಮೂಲಗಳಿಂದ ಈ ಒಂದು ಅಂಕಿ-ಅಂಶ ನೋಡಿ. ಪ್ರತಿವರ್ಷ ಭಾರತದಲ್ಲಿ ಸರಿಸುಮಾರು ೫೦ ಲಕ್ಷ ವಿದ್ಯಾರ್ಥಿಗಳು ಪದವಿ ಪರೀಕ್ಷೆ ಮುಗಿಸಿ ಉದ್ಯೋಗೊನ್ಮುಖರಾಗುತ್ತಾರೆ. ಇದರಲ್ಲಿ, ಸ್ನಾತಕೋತ್ತರ ಪದವೀಧರರಾಗಲಿ, ಓದು ಬಿಟ್ಟವರಾಗಲಿ ಸೇರಿಲ್ಲ. ಇದನ್ನು ನಂಬುತ್ತೀರಾ? ನಂಬಲು ಕಷ್ಟವಾದರೂ ಇದು ಸತ್ಯ ಸಂಗತಿ, ಸ್ವಲ್ಪ ಯೋಚಿಸಿ. ಇವರೆಲ್ಲರಿಗೂ.ಯಾವುದೇ ತತ್ಕಾಲೀನ ಸರ್ಕಾರ ತಕ್ಕ ಉದ್ಯೋಗ ಕೊಡಬಲ್ಲದೇ? ಕೊಡಬಹುದು ಅಂತಾ ಕೇವಲ ಅರೆನಿದ್ದೆಯಲ್ಲಿರುವವರಾಗಲಿ, ಅಥವಾ ಕನಸು ಕಾಣುತ್ತಿರುವವರು ಮಾತ್ರ ಹೇಳಬಹುದು.
ಹಾಗಾದರೆ ಇದಕ್ಕೆ ಮೂಲ ಕಾರಣವೇನೆಂದು ನಿಮ್ಮ ಅಭಿಪ್ರಾಯ?
ನನ್ನ ಪ್ರಕಾರ ಇದಕ್ಕೆ ಕೇವಲ ನಮ್ಮ ಯೋಚನಾ ವೈಖರಿ ಹಾಗು ಮನಸ್ಥಿತಿ ಒಂದೇ ಕಾರಣ, ಓದು ಮುಗಿಸಿದ ತಕ್ಷಣ ನಮಗೋಸ್ಕರ ಯಾರಾದರೂ ಉದ್ಯೋಗ ಕೊಡಲು ಕಾಯುತ್ತಿರುತ್ತಾರೆ, ಸಿಕ್ಕೇಬಿಡುತ್ತದೆ ಎಂಬ ಆಧಾರಹೀನ ಮನೋಭಾವ ಹಾಗು ನಂಬಿಕೆ. ದಿನಗಳೆಂದಂತೆ, ಈ ನಂಬಿಕೆ ಹುಸಿಯಾಗಿ, ನಿರಾಸೆ, ಹತಾಶೆಯಲ್ಲಿ ಬದಲಾಗುವದನ್ನು ನಾವೆಲ್ಲರೂ ನೋಡಿಲ್ಲವೇ? ನೋಡುತ್ತಿಲ್ಲವೇ? ಪ್ರಸ್ತುತ ವ್ಯವಸ್ಥೆ, ಹೀಗೆ ಮುಂದುವರೆದರೆ, ಹೊಸ ಹೊಸತಾದ, ಅನುಕೂಲಕರ, ಹಿತವಾದ ಪರಿಣಾಮಗಳನ್ನು ನಿರೀಕ್ಷೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ಕೇವಲ ಮೂರ್ಖರು ಮಾತ್ರ ಹೀಗೆ ಮಾಡಬಲ್ಲರು. ಹೌದಾ?
ಈ ಮನಸ್ಥಿತಿಯ, ಯೋಚನಾವೈಖರಿ ನಿರ್ಮಾಣವಾಗಿದ್ದು, ಆಗುತ್ತಾ ಇರುವುದು ಹೇಗೆ? ಉತ್ತರ ಬಹಳ ಸರಳ, ನಮ್ಮ ಮುಂದೆಯೇ ಇದೆ. ಎಚ್ಚೆತ್ತುಕೊಂಡು ನೋಡಬೇಕಷ್ಟೆ.
ನಾವು ನಿರಂತರವಾಗಿ,ಅದೇ ವ್ಯವಸ್ಥೆಯಲ್ಲಿದ್ದುಕೊಂಡೇ, ಅದೇ ವ್ಯವಸ್ಥೆಯ ದೃಷ್ಟಿಕೋಣದಿಂದಲೇ. ನೋಡುತ್ತಿರುವ ಜೀವನ ಶೈಲಿ, ಪರಿಸರ, ಓದುವ ಸುದ್ದಿಗಳು, ಕೇಳುವ ಉಪದೇಶಗಳು, ಅನುಭವಿಸುತ್ತಿರುವ ಜೀವನ, ನಮ್ಮನ್ನು ಕೂಪ ಮಂಡೂಕದಂತೆ, ಅಸಹಾಯಕರಾಗಿ ಯೋಚಿಸಿ, ವರ್ತಿಸಿ, ಸ್ಪಂದಿಸುವಂತೆ ಮಾಡುತ್ತಿವೆ.
ಇರುವ ವ್ಯವಸ್ಥೆಗೆ ತೇಪೆ ಹಚ್ಚುತ್ತಾ, ಇರುವ ನಿಷ್ಪರಿಣಾಮಕಾರಿ ವ್ಯವಸ್ಥೆಯನ್ನೇ ಸಬಲಗೊಳುಸುವುದನ್ನೇ ಒಂದು ಕ್ರಾಂತಿಕಾರಿ ಯೋಚನೆ ಅನ್ನುವಷ್ಟು ನಮ್ಮ ಯೋಚನಾಶಕ್ತಿ ಕುಂಠಿತ ಹಾಗೂ ನಿಷ್ಪ್ರಯೋಜಕವಾಗಿದೆ. ಹೌದು. ಇದರಲ್ಲಿ ಸಂಶಯವೇ ಇಲ್ಲ. ವ್ಯವಸ್ಥೆಯ ಹೊರತಾಗಿ ಯೋಚನೆ ಮಾಡಿದಿರೋ? – ನಮಗೆ ಜೀವನ ಮಾಡುವ ಕಲೆ ಇಲ್ಲದವರು, ಮಂದಬುದ್ಧಿಗಳು, ಬಿಟ್ಟರೆ ಹುಚ್ಚನೆಂದೇ ಪಟ್ಟಕಟ್ಟುವುದು ಈ ನಮ್ಮ ವ್ಯವಸ್ಥೆ, ಇಲ್ಲ ಅಂತೀರಾ?
ಇನ್ನೊಂದು ಸಲ ಯೋಚ್ನೆ ಮಾಡಿ ನೋಡಿ.
ಬಹುತೇಕ ಪೋಷಕರು, ತಂದೆ ತಾಯಿಯರಾಗಿ ನಮ್ಮ ಮಕ್ಕಳಿಗೆ ಏನು ಸಾಧಿಸೋಕ್ಕೆ ಪ್ರೋತ್ಸಾಹ ಪ್ರೇರಣೆಯನ್ನ ಕೊಡುತ್ತ್ತೇವೆ? ಏನು ಹೇಳಿಕೊಡುತ್ತೇವೆ? ಎಲ್ಲದಕ್ಕೂ ಅಪವಾದಗಳಿರುತ್ತವೆ, ನೆನಪಿರಲಿ.
ನಮ್ಮ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಯಾವ ರೀತಿ, ಯಾವ ಕಾರಣಕ್ಕೋಸ್ಕರ ತರಬೇತಿ ಕೊಡುತ್ತಾರೆ? ಸ್ವಲ್ಪ ಗಂಭೀರವಾಗಿ ಯೋಚಿಸಿ, ಹೇಳಿ.
ನಮ್ಮ ಜೀವನದಲ್ಲಿ ಯಾವುದು, ಮಹತ್ವದ್ದು, ಬೆಲೆಬಾಳುವಂಥದ್ದು?
ನಮ್ಮಲ್ಲಿ ಎಷ್ಟು ಜನ, ವ್ಯವಸ್ಥೆಯಾಚೆ ಯೋಚಿಸುವ ಸಾಮರ್ಥ್ಯ ಹೊಂದಿದ್ದಾರೆ?
ನಮ್ಮಲ್ಲಿ ಎಷ್ಟು ಜನರಿಗೆ, ಮುಂದಿನ ೧೦, ೨೦, ೪೦, ೬೦, ೮೦ ಹೀಗೆ ಮುಂಬರುವ ವರ್ಷಗಳಲ್ಲಿ ಏನಾಗಬಹುದು ಎಂಬ ಚಿಂತೆ, ಪರಿವೆ ಅಥವಾ ಕನಿಷ್ಠ ಜ್ನ್ಯಾನ ಇದೆ?
ಸಾಮಾಜಿಕ, ಪರಿಸರ ಒತ್ತಡಗಳು ಹೇಗೆ ಬದಲಾಗಬಹುದು, ಯಾರ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ಜಿಜ್ಞಾಸೆ ಎಷ್ಟು ಜನಗಳಲ್ಲಿದೆ?
ಹೌದು, ನಾನೇಕೆ ಈ ಪ್ರಶ್ನೆಗಳನ್ನು ಕೇಳುತ್ತಿದ್ದೀನಿ? ಈ ಪ್ರಶ್ನೆಗಳಿಗೂ ನಿರುದ್ಯೋಗ ಸಮಸ್ಯೆಗೂ ಏನು ಸಂಬಂಧ? ನಿಮ್ಮಲ್ಲಿ ಈಗಾಗಲೇ ಈ ಪ್ರಶ್ನೆ ಮೂಡಿದ್ದಲ್ಲಿ, ನಾನು ಬರೀತಾ ಇರೋದು ಸಾರ್ಥಕವಾಯ್ತು. ಹೇಳುತ್ತೇನೆ. ಒಂದೊಂದಾಗಿ ಹೇಳುತ್ತೇನೆ. ತಾಳ್ಮೆ ಇರಲಿ.
ಈಗ ಹೇಳಿ, ವಸ್ತುಗಳು ಕೆಲಸ ಮಾಡುತ್ತಿಲ್ಲ ಎಂದು ಗೊತ್ತಿದ್ದರೆ ಮಾತ್ರ ತಾನೇ, ನಾವದನ್ನು ಸರಿಪಡಿಸುವುದು?
ಏನು, ಯಾಕೆ ಕೆಲಸ ಮಾಡುತ್ತಿಲ್ಲ ಎನ್ನುವ ನಿಖರ ಜ್ಞಾನ ಇಲ್ಲದೆಯೇ ಏನನ್ನು ಸರಿಪಡಿಸುವುದು?
ಸಮಸ್ಯೆಯ ಮೂಲ ಕಾರಣಗಳನ್ನ ಗುರುತಿಸಿ, ಅವುಗಳನ್ನು ಸರಿಪಡಿಸುವುದೋ? ಇಲ್ಲಾ ಸಮಸ್ಯೆಯ ಪರಿಣಾಮಗಳ ಲಕ್ಷಣಗಳನ್ನು ಸರಿಪಡಿಸುವುದೋ?
ಅಂದರೆ, ಈ ನಿರುದ್ಯೋಗ ಸಮಸ್ಯೆಯೇ ಮೂಲ ಕಾರಣವೋ ಅಥವಾ ಇದು ಕೇವಲ ಸಮಸ್ಯೆ ಇರೋ ಲಕ್ಷಣವೋ? ನಿಮಗೇನನ್ನಿಸುತ್ತದೆ?
ಈ ಸಮಸ್ಯೆಗೆ ಪರಿಹಾರವಿದೆಯೋ?
ಈ ಸಮಸ್ಯೆಗೆ, ತಾತ್ಕಾಲಿಕ, ಅಲ್ಪಾವಧಿಯ, ತುರ್ತು ಪರಿಹಾರ ಬೇಕೋ?
ಈ ಸಮಸ್ಯೆಗೆ ದೀರ್ಘಕಾಲೀನ, ಶಾಶ್ವತ ಪರಿಹಾರ ಬೇಕೋ?
ಈ ಸಮಸ್ಯೆಗೆ ಏನು ಪರಿಹಾರ ಎಂದು ನನಗೆ ಗೊತ್ತಿದ್ಯೋ?
ಈ ಹಿಂದಿನ ನಾಲ್ಕು ಪ್ರಶ್ನೆಗಳಿಗೆ ಉತ್ತರ ಒಂದೇ – ಖಂಡಿತ ಹೌದು.
ಹಾಗಾದರೆ ಸಮಸ್ಯೆಗೆ ಸಮಾಧಾನ ಯಾಕೆ ಹೇಳ್ತಿಲ್ಲ ಅಂತಾ ಕೇಳ್ತೀರಾ?
ಹೇಳ್ತೀನಿ. ಮುಂದೆ ಬರುವ ಸಮಯದಲ್ಲಿ, ವಿಸ್ತಾರವಾಗಿ, ಹಂತ-ಹಂತವಾಗಿ, ಸಮಸ್ಯೆಯ ಪದರುಗಳನ್ನ ಒಂದೊಂದಾಗಿ ಬಿಡಿಸುತ್ತಾ ಹೇಳುತ್ತಾ ಹೋಗುತ್ತೇನೆ.
ಅಲ್ಲಿಯವರೆಗೆ, ನೀವು ನನ್ನ ಸಂಪರ್ಕದಲ್ಲಿ ಇರಲು ನನ್ನ ಈ email ನ್ನು ಬಳಸಿ – AnswerGuy001@gmail.com