
ಮನೋರಂಜನೆಯ ಜಿಗಿತಗಳ ಹಿಂದೆ..
ಹಿಂದೆ ಬಯಲೆಂಬೋ ಪಾಠಶಾಲೆಯಂತಿದ್ದ ಹಳ್ಳಿಗಳ ಬಯಲಾಟಗಳು ಹಬ್ಬ ಬಂದಾಗ ಊರ ಎದೆಯ ಭಾಗದಲ್ಲಿ ಎಲ್ಲರಿಗೂ ಮೊದಲೆಂಬಂತೆ ಚಾಪೆಹಾಸಿ ಜಾಗ ಗೊತ್ತುಮಾಡಿಕೊಂಡು ಸಂಭ್ರಮ ಹಂಚಿಕೊಳ್ಳುತ್ತಿದ್ದ ನಮಗೆ ಮೆಲ್ಲಗೆ ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳೆಂಬ ಕಂಪನಿ ಟೆಂಟುಗಳು ಮನೋರಂಜನೆಯ ಮೂಲವಾಗತೊಡಗಿದವು.ಅಭಿನಯದ ದೃಷ್ಟಿಯಲ್ಲಿ ಬಯಲಾಟದ ನಟರು ಮಾಡುತಿದ್ದ ಮೋಡಿ ಯಾಕೋ ಏನೋ ಹಳ್ಳಿ ಒಳಗಿನ ಸಾಮಾಜಿಕ ನಾಟಕಗಳ ನಟರು ಮಾಡುತ್ತಿರಲಿಲ್ಲ.ಈ ನಾಟಕಗಳ ನಟರು ಉಡುಪಿಗೆ,ಮೇಕಪ್ಪಿಗೆ,ಸೆಟ್ ಗೆ ಮಹತ್ವ ನೀಡಿದಷ್ಟು ನಟನೆಯ ವೈವಿಧ್ಯಕ್ಕೆ ಮಹತ್ವ ನೀಡುತ್ತಿರಲಿಲ್ಲ.ಕೆಲವು ನಾಟಕಗಳ ನಟರಂತೂ ದೂರದ ರಂಗ ನಟಿಯರ ಚಲುವಿಗೇ ಬಲಿಯಾಗುವ ಕುರಿ ಕೋಳಿಗಳಂತೆ ವರ್ತಿಸುತಿದ್ದರು.

ರಂಜನೆಯೇ ಪ್ರಧಾನವಾದ ಕೆಲವು ನಾಟಕಗಳು ನೀತಿ ಬಿಟ್ಟು ಗಲೀಜು ಸಂಭಾಷಣೆಗಳ ಕಡೆಗೆ ಒಲವು ತೋರತೊಡಗಿದ್ದಕ್ಕೋ ಏನೋ ಪೋಷಕರು ಮೊದಲಿನಂತೆ ನಮ್ಮನ್ನ ಎಲ್ಲಾ ನಾಟಕಗಳಿಗೆ ಕಳಿಸುತ್ತಿರಲಿಲ್ಲ.ಬಾಲ್ಯದ ಉದ್ದಕ್ಕೂ ಬಸ್ಸೇ ಕಾಣದ ಊರಲ್ಲಿ ಬೆಳೆದ ನಮಗೆ ಆಗಾಗ ಊರಿಗೆ ಬರುತಿದ್ದ ಜಾಹಿರಾತುಗಳೆಂಬ ಮೂಕಿ ಜಾಹಿರಾತುಗಳೆಂಬ ತುಂಡು ಚಿತ್ರಣಗಳೇ ಸಿನಿಮಾ ಖುಷಿ ನೀಡುತಿದ್ದವು.ಒಕ್ಕಲ ಮನೆತನಗಳಿಗೆ ದೂರದ ತಾಲೂಕಿನೊಳಗಿದ್ದ ಸಿನಿಮಾ ಕಡೆ ಹೋಗುವುದು ವರ್ಷಕ್ಕೋ ಆರುತಿಂಗಳಿಗೋ ಒಮ್ಮೆ ಯಾಗಿತ್ತು. ಮನೋರಂಜನೆಗಾಗಿ ಊರಿಗೆ ಬರುತಿದ್ದ ಡೊಂಬರ ಆಟಗಳು,ಹಾವಾಡಿಗರು,ಕಾಡುಸಿದ್ದರು,ವೇಷಗಾರರು ಮೊದಲಾದ ಪುಟಾಣಿ ರಂಜನೆಗಳೇ ಹೋಳಿಗೆ ತುಪ್ಪಗಳಂತಹ ಸವಿ ನೀಡುತಿದ್ದವು.ಗೋಣಿ ಬಸಪ್ಪನ ತೇರಿನಲ್ಲಿ ಕಾಣುತಿದ್ದ ಡಬ್ಬ ಚಿತ್ರ ” ವಡ್ಡರ ನಾಗವ್ವ ಬಂದಾಳ ನೋಡು..” ಎನ್ನುವ ಹಾಡಿನೊಂದಿಗೆ ಆತನೇ ಕಾಣಿಸುತಿದ್ದ ರೀಲಿನ ಗೊಂಬೆಗಳ ಷೋ ಆಗ ನೋಡುವುದೇ ಒಂದು ಸೊಗಸು ಎನಿಸುತಿತ್ತು.
ಈ ನಡುವೆ ಮೊಹರಂ ಹಬ್ಬದ,ಹುಲಿ,ಅಳ್ಳಳ್ಳಿ, ಕರಡಿ,ವೇಷಗಳ ಕುಣಿತ, ಅಲಾಯಿ ಆಟ ದೇವರು ಹೊರಟಾಗ ನಡೆಯುತಿದ್ದ ಕತ್ತಿವರಸೆ, ಹೋದಲ್ಲಿ ಬಂದಲ್ಲಿ ಮನೋರಂಜನೆ ನೀಡುತಿದ್ದವು. ಹಳ್ಳಿಯ ಹಬ್ಬಗಳ ಕೋಲಾಟ,ಮಡಕೆ ಹೊಡೆಯುವ ಆಟ,ಹಗ್ಗ ಜಗ್ಗುವ ಆಟ ಮೊದಲಾದವು ಊರಿಗೆ ಊರನ್ನೇ ಕಲೆಸುವ ಸಮೂಹ ಮನೋರಂಜನೆ ನೀಡುವ ತಂತ್ರಗಳಂತೆ ಕಾಣುತಿದ್ದವು.ಜನರು ತಮ್ಮ ಬೇಸರಿಕೆ ದುಃಖ ಮರೆತು ಹಬ್ಬಗಳ ಆನಂದ ಆಚರಿಸುವ ಮಾದರಿಯಂತೆ ಕಾಣುತಿದ್ದವು.

ಊರು ಕಲೆಸುವ ಜಾಗದಿಂದ ಸಿನಿಮಾಗಳು ಮೆಲ್ಲಗೆ ಆಸಕ್ತರ ಗುಂಪು ಕಲೆಸುವ,ನೆರೆ ಹೊರೆಯವರ ಕಲೆಸುವ ಮನೋರಂಜನೆಯ ಸರಕಾಗಿ ಕಾಣಿಸಿಕೊಂಡವು.ಸಿನಿಮಾ ಮೆಲ್ಲಗೆ ಬಾಲ್ಯದ ಅನೇಕ ಆಸಕ್ತಿಗಳನ್ನ ಕಬಳಿಸುವ ಮಾಧ್ಯಮವಾಯಿತು.ಬಣ್ಣ ಬಣ್ಣದ ಪೋಸ್ಟರ್ ಗಳು,ಮುದ್ದಾದ ನೀಲಿ ಅಕ್ಷರದ ಗೋಡೆ ಬರಹಗಳು,ಪ್ರಚಾರಕ್ಕೆ ಹೊರಡುವ ಸಿನಿಮಾ ಬಂಡಿಯ ಅಲಂಕಾರ ಒಂದೆಡೆಯಾದರೆ ಸಿನಿಮಾ ಒಳಗೆ ಕಾಣುವ ಬಗೆ ಬಗೆಯ ಕುರ್ಚಿಗಳು,ಪ್ಯಾನುಗಳು ಬಿಳಿಯ ಪರದೆಯನ್ನ ತೋರಿಸಲೆಂದದೇ ಸರಿಯುವ ಬಣ್ಣದ ಪರದೆಯ ಚಲನೆ ಆ ಕಾಲಕ್ಕೆ ಬೆರಗು ಹುಟ್ಟಿಸುತಿದ್ದವು.ನಮೋ ವೆಂಕಟೇಶ ಹಾಡು,ವಾಷಿಂಗ್ ಪೌಡರ್ ನಿರ್ಮಾ,ಎವರಡಿ ಸೆಲ್,ಬರ್ಕಲಿ ಸಿಗರೇಟ್ ಮೊದಲಾದ ಜಾಹಿರಾತುಗಳು ಹಳ್ಳಿ ಜನರಿಗೆ ಈ ಅಡ್ವಟೇಜ್ ನಂತರವೇ ಸಿನಿಮಾ ಶುರು ಎಂಬ ಮಂತ್ರ ಕಲಿಸಿ ಬಿಟ್ಟಿದ್ದವು.ದೂರದ ಹಳ್ಳಿಯವರಾದ ನಾವು ಎಷ್ಟೋ ಸಲ ಅಡ್ವಟೈಸ್ ಗೂ ಮೊದಲು,ಸಿನಿಮಾ ಶುರುವಾದಾಗ ಬಂದದ್ದಿದೆ.ಟಿಕೀಟ್ ಕೊಡುವವನ್ನ ” ಅಣ್ಣಾ ಎಷ್ಟೊತ್ತಾಯಿತು ಸಿನಿಮಾ ಚಾಲೂವ್ ಆಗಿ?” ಅಂದಾಗ ” ಈಗೀನ್ನ ಸ್ವಲ್ಪತ್ತಾಗೇತಿ” ಎಂಬ ಆ ಉತ್ತರಕ್ಕೆ ಥ್ರಿಲ್ ಆಗಿ ಒಳಗೆ ಹೊರಟದ್ದಿದೆ.ಒಮ್ಮೆ ಆತನ ಮಾತು ನಂಬಿ ಒಳಗೆ ಹೋದ ಐದು ನಿಮಿಷಕ್ಕೇ ವಿರಾಮ ಬಿದ್ದದ್ದೂ ನೋಡಿ ನಮಗೆ ನಾವೇ ” ಈಗಿನ್ನ ಸ್ವಲ್ಪತ್ತಾಗೇತಿ” ಅಂದು ಬಿದ್ದು ಬಿದ್ದು ನಕ್ಕದ್ದಿದೆ.
ಆಗ ನಮಗೆಲ್ಲಾ ಊರು ದೊಡ್ಡದು ಅನಿಸುತಿದ್ದದ್ದು ಟಾಕೀಸುಗಳ ಮೇಲೆಯೇ ?ಹೀಗಾಗಿ ಬಳ್ಳಾರಿ ಹಲವು ಟಾಕೀಸುಗಳ ಡಿಲ್ಲಿ ಅನಿಸುತಿತ್ತು.ತೆಲುಗು ಸಿನಿಮಾಗಳ ಮುಂದೆ ನಿಲ್ಲುತಿದ್ದ ಜನರು ನಮ್ಮ ಕನ್ನಡಿಗರನ್ನೂ ಮೀರಿಸುವಂತಿದ್ದರು.ಎನ್.ಟಿ.ಆರ್. ರಾಜ್ ಕುಮಾರ್ ಪೈಪೋಟಿ ಜೊತೆಗೆ ಅಮಿತಾಬ್ ನ ಯಾರಾನಾ, ಕಾಲಿಯಾ,ಮುಖದ್ದರ್ಕಾ ಸಿಕಂದರ್,ಮೊದಲಾದುವು ಇಲ್ಲಿನ ದೇಶೀಯ ವಿಷ್ಣುವರ್ಧನ್ ರಾಜಕುಮಾರರ ಸಮರವನ್ನೂ ಮೀರಿಸುವಂತಿದ್ದವು.ವೇಟಗಾಡು,ಸರ್ಧಾರ್ ಪಾಪಾರಾಯುಡುವನ್ನ ನಮ್ಮ ರಾಜ್ ರ ವಸಂತಗೀತ,ಹಾವಿನ ಹೆಡೆಗಳು ಗಿಲ್ಲಿ ದಾಂಡು ಒಡೆದಂತೆ ಸೋಲಿಸಿದ್ದನ್ನ ನೋಡಿ ಆಗ ನಮಗೆ ಅದೆಷ್ಟೊಂದು ಖುಷಿಯಾಗುತಿತ್ತು.ಮುಂದೆ ಅಭಿಮಾನಿ ವಿರುದ್ದ ದೃವಗಳನ್ನ ದಾಟಿ ರಾಜ್ ಎನ್.ಟಿ.ಆರ್. ಸೋದರರಂತೆ ಜೊತೆಗೆ ನಿಂತು ನಕ್ಕ ಚಿತ್ರಗಳನ್ನ ಕಂಡು ಆಹಾ ಇದಪ್ಪ ಪ್ರೀತಿ ಅಂದದ್ದೂ ಇದೆ.ಅಮಿತಾಬ್ ಗಾಗಿ ರಾಜ್ ಪ್ರಾರ್ಥಿಸಿದ್ದು ನಮ್ಮೊಳಗೆ ನಟರ ಒಲವನ್ನೂ ಹೆಚ್ಚಾಗಿಸಿತು.ಗಡಿ ಸೀಮೆ ಸಿನಿಮಾಗಳು ಒಳಗೊಳಗೇ ನಮಗರಿವಿಲ್ಲದಂತೆ ಬಹು ಭಾಷಾ ಪ್ರೇಮವನ್ನೂ ಮೂಡಿಸಿದವು.

ಸಿನಿಮಾ ಜಗತ್ತಿನ ಕ್ಲಾಸ್ ಮಾಸ್ ಕಥೆಗಳು ಸಿನಿಮಾ ಅಭಿರುಚಿಯನ್ನೂ ಭಿನ್ನ ಭಿನ್ನಗೊಳಿಸಿದ್ದವು. ರಾಜ್,ವಿಷ್ಣು,ಶ್ರೀನಾಥ,ಅಂಬರೀಷ್,ಅನಂತನಾಗ್,ಲೋಕೇಶ್,ಎಂಬೆಲ್ಲಾ ಭಿನ್ನ ವರಸೆಗಳು ಖುಷಿಗೊಳಿಸುತಿದ್ದವು.ರಾಜ್ ರಿಂದ ಚಲಿಸಿ ಚಾರ್ಲಿ ಚಾಪ್ಲಿನ್ ಒಂದು ಕಡೆ ಖುಷಿ ನೀಡಿದರೆ,ಜಾಕಿ ಚಾನ್ ಮತ್ತೊಂದು ಬಗೆ ಖುಷಿ ನೀಡುತಿದ್ದ.ಮೋಡಿ ಮಾಡಿದ ಕಮಲ್,ಸ್ಟೈಲ್ ನಿಂದಲೇ ಸೆಳೆದ ರಜಿನಿ,ಮುಂದೆ ಇವಿಲ್ ಡೆಡ್ ನಿಂದ ಟೈಟಾನಿಕ್ತನಕ ಸಿನಿಮಾಗಳು ಮತ್ತೊಂದು ಖುಷಿ ತಂದಿದ್ದವು. ಈ ನಡುವೆ ತ್ರಿಡಿ ಸಿನಿಮಾ,ಶಂಕರ್ ನಾಗ್ ಸಿನಿಮಾಗಳು,ಉಪೇಂದ್ರರ ಹೊಸ ಬಗೆಯ ಸಾಹಸಗಳು ಖುಷಿ ನೀಡುವಲ್ಲಿ ಯಶಸ್ವಿಯಾದವು.ಓದುವ ಜವಾಬ್ದಾರಿ ನೆನಪಿಸುತಿದ್ದ ಅಪ್ಪಾ ರಾಜ್ ಸಿನಿಮಾಗಳಿಗೆ ದುಡ್ಡು ಕೊಟ್ಟು ಕಳಿಸುತಿದ್ದರು.ಆಗಾಗ ಬರುತಿದ್ದ ಚಿಕ್ಕಪ್ಪ ” ಹೂ ಸಿನಿಮಾ ಟಾಕೀಸ್ ನೊಳಗೇ ಇದ್ದು ಬಿಡು” ಅಂತ ಬೈಯುತಿದ್ದರು.ಹುಡುಗರಾದ ನಮನ್ನ ಕೆಲವು ಪೋಸ್ಟರ್ ಮುಂದೆ ನಿಂತರೂ ಬೈಯುವವರಿದ್ದರು.ಯಾವುದು ಊರ ಆನಂದವಾಗಿತ್ತೋ ಯಾವುದು ಊರ ಜನರ ಪಾಠವಾಗಿತ್ತೋ ಆ ಮನೋರಂಜನ ಮಾಧ್ಯಮ ಸಿನಿಮಾ ಹೆಸರಲ್ಲಿ ಗುಂಪು ಗುಂಪಾಗಿಸಿತು.ಅಭಿರುಚಿ ಬೆಳೆಸುವ ಅಭಿರುಚಿ ಹೀನವಾಗಿಸುವ,ಉದ್ದರಿಸುವ ಇಲ್ಲಸವೇ ಹಾಳಾಗಿಸುವ ಎರಡೂ ನೆಲೆಗಳ ಕತ್ತಿಯನ್ನೂ ಹುಡುಗರ ಮತ್ತು ದೊಡ್ಡವರ ಎದುರು ಝಳಪಿಸುತಿತ್ತು.ದೊಡ್ಡವರಿಗೆ ಈ ಮೊನಚುಗಳ ಅರಿವಿದ್ದರಿಂದ ಅವರೆಲ್ಲಾ ನಮ್ಮನ್ನ ಗಾಯಗೊಳ್ಳುವ ಮೊದಲು ನಿಯಂತ್ರಿಸಿತಿದ್ದರು.

ಹೊಸ ಹೀರೋಗಳು ಹಳೆಯ ಹೀರೋಗಳಂತೆ ನಟನೆಯ ಅಂತರಂಗ ಚಲುವಿಗೆ ಮಾನ್ಯತೆ ನೀಡದೆ ಸಿಕ್ಸ ಪ್ಯಾಕ್,ಅಂತ ಬಹಿರಂಗ ದೇಹ ಪ್ರದರ್ಶನಕ್ಕೆ ಮಾನ್ಯತೆ ನೀಡುತ್ತಿದ್ದಾರೆ.ಪಕ್ಕದ ಭಾಷೆಗಳ ನಮ್ಮ ಭಾಷೆಯ ಸರಳ ಸುಂದರ ಸಿನಿಮಾಗಳು ಇವರ ಕಣ್ಣಿಗೆ ಬೀಳದೇ ಸಿನಿಮಾವನ್ನ ಕೇವಲ ತಮ್ಮ ತಮ್ಮ ಈಗೋ ಪ್ರದರ್ಶನಕ್ಕೆ ಬಳಸುತ್ತಿರುವುದು ವಿಷಾದನೀಯ! ಹಿಂದೆ ರಾಜ್,ವಿಷ್ಣು,ಶ್ರೀನಾಥ್,ಲೋಕೇಶ್,ಅಂಬರೀಶ್,ಅನಂತನಾಗ್,ಪ್ರಭಾಕರ್,ಎಂಬ ಭಿನ್ನ ರೂಪಗಳ,ಭಿನ್ನ ವಸ್ತುಗಳ,ಭಿನ್ನ ಭಿನ್ನ ಅಭಿನಯಗಳು ಕಾಣುತಿದ್ದವು.ಈಗ ಬಹುತೇಕರ ಕಥಾವಸ್ತುಗಳು ತೆಳುವಾಗುತ್ತಿವೆ. ಸಾಮಾಜಿಕ ಚಿತ್ರ ಬಿಟ್ಟರೆ ಉಳಿದ ಅಭಿನಯ ಗಮನ ಸೆಳೆಯುವಂತಿಲ್ಲ. ಈ ನಡುವೆ ಇವರ ಸಮಾಜಮುಖಿ ನಡೆಗಳು ಹೆಚ್ಚು ಅರ್ಥಪೂರ್ಣ ಎನಿಸುವಂತಿವೆ ಎಂಬುದನ್ನ ಮರೆಯಬಾರದು.ಈಗೀಗ ದೊಡ್ಡ ಸಣ್ಣ ಪರದೆಗಳ ಗೆರೆಗಳೂ ಮಾಸುತ್ತಿವೆ.

ಟಿ.ವಿಗಳು ಮನೆ ಮನೆ ತಲುಪಿದಮೇಲೆ ಊರ ಪ್ರೇಮವನ್ನೂ,ಸರೀಕರ ಸಂಭ್ರಮವನ್ನೂ ಛಿದ್ರಗೊಳಿಸಿದವು.ಗಾಳಿ ಬಿಸಿಲು ಸವಿದು ಸರೀಕರ ಕೂಡ ನಾಲ್ಕು ಮಾತಾಡುತ್ತಾ ಕಲೆತು ಓಡಾಡುತಿದ್ದ ಮಧ್ಯಮ ವರ್ಗದ ಹೆಣ್ಣು ಮಕ್ಕಳನ್ನಂತೂ ಹೊಸ ಹೊಸ ಬಗೆಯ ಕೋಟೆಯೊಳಗೇ ನಿಯಂತ್ರಿಸಿಬಿಟ್ಟವು.ಅವರದೇ ಆಲೋಚನೆ ಅಭಿರುಚಿಗಳನ್ನ ಭಗ್ನಗೊಳಿಸಿಬಿಟ್ಟವು. ಆಗ ಓದುವಾಗಲೆಲ್ಲಾ ಊರುಗಳಲ್ಲಿನ ಸರ್ಕುಲೇಟಿಂಗ್ ಲೈಬ್ರರಿಗಳು ಬಹು ಜನರ ಅಕ್ಷರ ಆನಂದವನ್ನ ತಣಿಸುತಿದ್ದವು.ಟಿ.ವಿ.ಗಳು ಬಂದು ಅವರನ್ನ ಪೇಪರ್ಗಳಿಂದಲೂ ದೂರವಾಗಿಸಿಬಿಟ್ಟಿವೆ!. ಎಷ್ಟೋ ಜನರಿಗೆ ಧಾರವಾಹಿಗಳು ಅತ್ತೆ,ಸೊಸೆ,ಮಗ,ಹೆಂಡತಿ,ಒಳ್ಳೆಯವಳು,ಕೆಟ್ಟವಳು ಎಂಬ ಏಕ ರೂಪಗಳನ್ನೇ ಮತ್ತೆ ಮತ್ತೆ ಉಣಿಸುವಂತಿವೆ. ಹೆಣ್ಣು ಮಕ್ಕಳು ಎಷ್ಟು ಸಹನಾ ಶೀಲರೆಂದರೆ ಚಲನೆಯನ್ನೇ ಮರೆತ ಧಾರವಾಹಿಯನ್ನ ವರ್ಷಗಟ್ಟಲೇ ಯಾವ ಬಿಡೆ ಇಲ್ಲದೇ ಆಸ್ವಾದಿಸಬಲ್ಲರು.ಮಂಗಳ ಗೌರಿಗೆ ಗಂಡ ಸಿಗಲ್ಲ,ಕಮಲಿಯನ್ನ ಪ್ರೇಮಿ ಮದುವೆ ಆಗಲ್ಲ,ಪಾರ್ವತಿಯನ್ನ ಅತ್ತೆ ಸ್ವೀಕರಿಸಲ್ಲ! ಆದರೂ ಇವರು ನೋಡುವುದ ಬಿಡಲ್ಲ.
ಈ ನಡುವೆ ಬೆಳ್ ಬೆಳ್ಳಿಗೆ ಸಾಕ್ಷಾತ್ ದೇವರನ್ನೂ ಮೀರಿಸಿ ಕುಳಿತು ಕೊಳ್ಳುವ ಗುರುಜೀ ಗಳ ಮೆರವಣಿಗೆ! ” ಸ್ವಾಮಿಗಳೇ..ಮಗು ಆಗಿಲ್ಲ”,ಗುರೂಜಿ ವರ ಸಿಕ್ಕಿಲ್ಲ,ಗುರುಜೀ ನನ್ನ ಮಗ, ಮನೆಯವರು ಮಾತು ಕೇಳ್ತಿಲ್ಲ”,ಗುರುಜೀ ಮಗನಿಗೆ ನೌಕರಿ ಸಿಕ್ಕಿಲ್ಲ,ಗುರುಜೀ ನಮ್ಮ ಮನೆಯ ವಾಸ್ತು ಸರಿಯಿಲ್ಲ.ಅಮ್ಮ ನೀನು ಹೋಮಾ ಮಾಡಿಸು( ಗಣಪತಿ,ಸುದರ್ಶನ ಹೋಮ,ಮೃತ್ಯುಂಜಯ ಹೋಮ ಮಾಡಿಸು,)ಯಂತ್ರ ಉಪಯೋಗಿಸು ( ಕೂರ್ಮ ಯಂತ್ರ,ವಾಸ್ತು ಯಂತ್ರ,ಮತ್ಸಯಂತ್ರ) ಅಮ್ಮ ನೀನು ಗೋದಾನ,ವಸ್ತ್ರದಾನ,ಅನ್ನದಾನಗಳ ಮಾಡು,ಅಮ್ಮ ನೀನು ತುಪ್ಪದ ದೀಪ,ಹರಳೆಣ್ಣೆ ದೀಪ ಇತ್ಯಾದಿ.ಇತ್ಯಾದಿ.

ಬೆರಳ ತುದಿಗೇ ಬಂದ ಜಗತ್ತು ಎಂಬಂತೆ ಎಲ್ಲಾ ಆಗು ಹೋಗುಗಳನ್ನ,ಮನೋರಂಜನೆಗಳನ್ನ ತಂದು ನೀಡುವ ಮೊಬೈಲ್ ತನ್ನ ಮೆಸೇಜ್,ಈ ಮೇಲ್,ಫೇಸ್ ಬುಕ್,ಟ್ವಿಟ್ಟರ್,ಟೆಲಿಗ್ರಾಮ್ ಆಪ್ ಗಳಿಂದ,ವಿಡಿಯೋ,ಕ್ಯಾಮರಾ,ಬಗೆ ಬಗೆಯ ಗೇಮ್ ಗಳಿಂದ,ಮಾಹಿತಿಗಳಿಂದ ಪ್ರಯೋಜನ ನೀಡುತ್ತಿದೆ. ಜನರ ಸಂಪರ್ಕವನ್ನೇ ಕಡಿದು ಜನರನ್ನ ಒಬ್ಬಂಟಿಯಾಗಿಸುತ್ತಿದೆ. ಯಾರೋ ಕಳಿಸಿದ ವಿವರವೇ ಇವರ ಬಳಿ ಬಂದು ಬಿಡುತ್ತವೆ. ಮೈಲಾರನ ಕಾರಣೀಕ ನೋಡಿಯೇ ಆನಂದಿಸ ಬೇಕಿಲ್ಲ. ಜನ ಸಂಪರ್ಕಗಳು ಈ ಸಾಧನದಿಂದ ದೂರವಾಗುತ್ತಿವೆ.ಕೆಲವರು ಮೊಬೈಲ್ ಗಳಲ್ಲಿ ಮಾತಾಡಿದಷ್ಟು ಜನರ ಎದುರು ಮಾತಾಡದಂತಾಗಿದ್ದಾರೆ. ಹೌದು ಮೊಬೈಲ್ ನಿಂದ ಮಾರು ಕಟ್ಟೆಯ ಪ್ರಯೋಜನಗಳಿವೆ.ಆರೋಗ್ಯ ಮಾಹಿತಿಗಳಿವೆ,ಕಾಣದ ಪ್ರದೇಶಗಳನ್ನ ತೋರಿಸುವ ಗೂಗಲ್ ಮ್ಯಾಪ್ ನಂತಹ ಸೌಲಭ್ಯಗಳಿವೆ,ಓದಿನ ಅನೇಕ ಮಾಹಿತಿಯ ಮಹಾಪೂರವೇ ಇದೆ.ಅಷ್ಟೇ ದುರಂತವೆನಿಸುವಂತಹ ಮಾಹಿತಿ ಸೋರಿಕೆಯ ಅಪಾಯವಿದೆ.

ಹ್ಯಾಕರ್ ಗಳ ಕಾಟದಿಂದ ನಿವೃತ್ತ ಕಮಿಷನರ್ ಶಂಕರ್ ಬಿದರಿಯವರು ಹಣ ಕಳಕೊಂಡ ಮಾಹಿತಿಯೂ ಉಲ್ಲೇಖನೀಯ.ಕೆಲವು ಗೇಮ್ ಗಳಿಂದ ಅನೇಕರ ಪ್ರಾಣವೇ ಹೋದ ಉದಾಹರಣೆಗಳಿವೆ,ಓದ ಬೇಕಾದ ಹುಡುಗರು ಎಕ್ಕುಟ್ಟಿ ಹೋದ ಸಂಗತಿಗಳೂ ಜನಜನಿತವಾಗುತ್ತಿವೆ.ಸೆಲ್ಫಿಯಂತಹ ಹುಚ್ಚಿಗೆ ಬಿದ್ದು ಪ್ರಾಣ ಕಳಕೊಂಡ ವರದಿಗಳೂ ದಿನೇ ದಿನೇ ಹೆಚ್ಚುತ್ತಿವೆ.ಸದನದೊಳಗೂ ನೀಲಿ ಚಿತ್ರ ನೋಡಿ ಜನ ನಾಯಕರ ಮಾನ ತೆಗೆದ ಮಾನಗೇಡಿ ಮೊಬೈಲ್ ಕಥೆ ಒಂದಾ.. ಎರಡಾ..? ಮೊಬೈಲ್ ಇಲ್ಲದೇ ಉಣ್ಣದ ಮಕ್ಕಳ ಮುಂದೆ ಧಾರವಾಹಿ ಅಮ್ಮಂದಿರುವ ಪಡುವ ಪಡಿಪಾಟಲಂತೂ ಹೇಳತೀರದು.
ಮಾರ್ಟಿನ್ ಕೂಪರ್ ಕಂಡು ಹಿಡಿದ ಈ ಸಾಧನವು ತೃತೀಯ ಜಗತ್ತುಗಳಿಗೆ ಅನುಕೂಲ ಕಲ್ಪಿಸುವಂತೆಯೇ ಅನಾನುಕೂಲಗಳನ್ನೂ ಹೆಚ್ಚಿಸಿದೆ.ಹಾಗಾಗಿ ಮೊಬೈಲ್ ಬಳಕೆಯಿಂದ ಕೆಲವರು ತಲೆ ಎತ್ತಿ ಬಾಳಿದರೆ ಕೆಲವರು ತಲೆ ತಗ್ಗಿಸಿದವರು ಮತ್ತೆ ತಲೆ ಎತ್ತಲಾರದಂತಾಗಿದ್ದಾರೆ.
                                        
					
										
												
				