ದೇವಸ್ಥಾನ, ಚರ್ಚು, ಗುರುದ್ವಾರ ಹೀಗೆ ಯಾವುದಕ್ಕೂ ಅವರವರ ಭಾವಕ್ಕೆ ಅನುಗುಣವಾಗಿ ಅದನ್ನು ಹೋಲಿಸಿಕೊಳ್ಳಬಹುದು. ಶಾಸಕ ಪಾಟೀಲರು ಈ ಬಗೆಯ ಭಾನಗಡಿಗಳನ್ನು ಮಾಡಿಕೊಳ್ಳುವುದಕ್ಕೆ ಹೊಸಬರೇನೂ ಅಲ್ಲ. ನಾನು ಬಾದಶಹಾ ಎಂಬ ಸಿನಿಮೀ ಶೈಲಿಯ ಡೈಲಾಗ್ನಲ್ಲಿ ಹೇಳಿರುವಂತೆ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಗೊತ್ತಿಲ್ಲದೇ ಇರುವುದು ಎಂದರೆ ತಾವು ಏನನ್ನು ಮಾಡಬಾರದು; ಏನನ್ನು ಹೇಳಬಾರದು ಎನ್ನುವುದು.
ಆಡಿದ ಮಾತೇ ತಿರುಗುಬಾಣ
ನಾನು ಬಾದಶಹಾ ಇದ್ದೀನಿ. ಕಾರ್ಪೊರೇಟರು, ಕೌನ್ಸಿಲರುಗಳು ಏನೂ ಅಲ್ಲ. ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿದೆ…. ಇದು ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲರ ಖಡಕ್ ಮಾತು. ಈ ಕ್ಷೇತ್ರದ ಇತಿಹಾಸದಲ್ಲಿ ಯಾರೊಬ್ಬರೂ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಿದರ್ಶನವಿಲ್ಲ. ಪಾಟೀಲರು ೨೦೧೩ರಲ್ಲಿ ಮೊದಲ ಬಾರಿ ಶಾಸಕರಾದರು. ೨೦೧೮ರಲ್ಲಿ ಎರಡನೇ ಬಾರಿಗೆ ಚುನಾಯಿತರಾದರು. ಮೂರನೇ ಬಾರಿಗೆ ಕ್ಷೇತ್ರವನ್ನು ಗೆದ್ದು ಹ್ಯಾಟ್ರಿಕ್ ವೀರ ಎನಿಸಿಕೊಳ್ಳುವ ಸಹಜ ಹಂಬಲ ಅವರಲ್ಲಿದೆ. ಆ ಹಂಬಲದ ಜೊತೆಯಲ್ಲಿ ತಮ್ಮನ್ನು ತಾವೇ ಬಾದಶಹಾ ಎಂದು ತಮಟೆ ಬಾರಿಕೊಳ್ಳುವ ಹುಂಬತನವೂ ಇದೆ. ನಾನು ಬಾದಶಹಾ ಎಂಬ ಅಹಮಿಕೆಯ ಅವರ ಮಾತುಳ್ಳ ವೀಡಿಯೊ ಇದೀಗ ಈಶಾನ್ಯ ಕರ್ನಾಟಕದಲ್ಲಿ ಮುಖ್ಯವಾಗಿ ರಾಯಚೂರು ಜಿಲ್ಲೆಯಲ್ಲಿ ಅದಕ್ಕಿಂತಲೂ ಮುಖ್ಯವಾಗಿ ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ವೈರಲ್ ಆಗಿದೆ. ಅವರ ಕ್ಷೇತ್ರದಲ್ಲಂತೂ ಜನರ ಚರ್ಚೆಗೆ ಸಧ್ಯಕ್ಕೆ ಅದೊಂದೇ ವಸ್ತು. ಹಾಗೆ ತಾವು ಹೇಳಿರುವುದಕ್ಕೆ ಶಾಸಕರಲ್ಲಿ ಪಶ್ಚಾತ್ತಾಪ ಮೂಡಿದ್ದು ವರದಿಯಾಗಿಲ್ಲ. ಜನ ಏನೆಂದುಕೊಂಡರೆ ನನಗೇನು, ನಾನು ಬಾದಶಹಾ ಎಂಬ ಧೋರಣೆ ಅವರ ವರ್ತನೆಯಲ್ಲಿದೆ.
ನಮಾಜ್ ಮಾಡುವುದಕ್ಕೆ ಹೋಗಿ ಕುತ್ತಿಗೆ ಮೇಲೆ ಮಸೀದಿ ಕೆಡವಿಕೊಂಡರು ಎಂಬ ಗಾದೆ ಪ್ರಚಲಿತದಲ್ಲಿದೆ. ದೇವಸ್ಥಾನ, ಚರ್ಚು, ಗುರುದ್ವಾರ ಹೀಗೆ ಯಾವುದಕ್ಕೂ ಅವರವರ ಭಾವಕ್ಕೆ ಅನುಗುಣವಾಗಿ ಅದನ್ನು ಹೋಲಿಸಿಕೊಳ್ಳಬಹುದು. ಶಾಸಕ ಪಾಟೀಲರು ಈ ಬಗೆಯ ಭಾನಗಡಿಗಳನ್ನು ಮಾಡಿಕೊಳ್ಳುವುದಕ್ಕೆ ಹೊಸಬರೇನೂ ಅಲ್ಲ. ನಾನು ಬಾದಶಹಾ ಎಂಬ ಸಿನಿಮೀ ಶೈಲಿಯ ಡೈಲಾಗ್ನಲ್ಲಿ ಹೇಳಿರುವಂತೆ ಅವರಿಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ. ಗೊತ್ತಿಲ್ಲದೇ ಇರುವುದು ಎಂದರೆ ತಾವು ಏನನ್ನು ಮಾಡಬಾರದು; ಏನನ್ನು ಹೇಳಬಾರದು ಎನ್ನುವುದು.
ಪಾಟೀಲರು ಶಾಸಕರಾಗಿ ಎಂಟನೇ ವರ್ಷದಲ್ಲಿದ್ದಾರೆ. ಮೊದಲಬಾರಿ ಶಾಸಕರಾದಾಗ ಮತ್ತು ಎರಡನೇ ಬಾರಿಗೆ ಅದೇ ಹುದ್ದೆ ವರವಾಗಿ ಒಲಿದಾಗ ಅವರ ಜಯಕ್ಕೆ ಕಾರಣವಾದುದು ಬಿಜೆಪಿ ಮತ ಬ್ಯಾಂಕ್ ಒಂದೇ ಅಲ್ಲ. ಕಾಂಗ್ರೆಸ್ನ ಅಭ್ಯರ್ಥಿ ಸೈಯದ್ ಯಾಸಿನ್ ಸೋಲಿಗೆ ಪಣತೊಟ್ಟಿದ್ದ ಕಾಂಗ್ರೆಸ್ನ ಒಂದು ಪಡೆ ಪಾಟೀಲರ ಜಯದಲ್ಲಿ ಯಾಸಿನ್ರ ಸೋಲನ್ನು ಸಂಭ್ರಮಿಸಿದ್ದು ಏಳು ವರ್ಷದ ಹಿಂದಿನಿಂದಲೂ ಇರುವ ಕಥೆ. ಅದೇ ಕಥೆ ಪುನರಾವರ್ತನೆಯಾದರೆ ೨೦೨೩ರಲ್ಲೂ ಪಾಟೀಲರು ಗೆಲ್ಲಬಹುದಿತ್ತೊ ಏನೋ. ಎರಡು ಬಾರಿ ಸತತ ಸೋತ ಯಾಸಿನ್ಗೆ ೨೦೨೩ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಟಿಕೆಟ್ ಸಿಗುವುದು ಈ ಕ್ಷಣದ ಅನುಮಾನ. ರಾಯಚೂರು ಕ್ಷೇತ್ರದಲ್ಲಿ ಪ್ರತಿಶತ ೩೦ರಷ್ಟು ಮುಸ್ಲಿಂ ಮತದಾರರಿದ್ದಾರೆ. ನಿಜ. ಆದರೆ ಎರಡು ಬಾರಿ ಯಾಸಿನ್ರನ್ನು ಅವರೇ ಸೋಲಿಸಿದ್ದಾರೆಂಬ ಅರ್ಥದ ದೂರು ಕೆಪಿಸಿಸಿ ಕಚೇರಿಯಲ್ಲಿದೆ. ಪಕ್ಷ ಮುಂದೆ ಯಾವ ತೀರ್ಮಾನಕ್ಕೆ ಬರುತ್ತದೋ, ಕಣಿ ಹೇಳಲಾಗದು. ಆದರೆ ಸದ್ಯ ಇಂಥದೊಂದು ಕೂಡಿಕಳೆಯುವ ಲೆಕ್ಕಾಚಾರ ನಡೆದಿದೆ. ಸದ್ಯಕ್ಕಂತೂ ಯಾಸಿನ್ರ ಬದಲಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ಮುಖಂಡರಲ್ಲಿ ಒಬ್ಬರಾಗಿರುವ ಎನ್. ಎಸ್.ಬೋಸರಾಜು ಆಯ್ಕೆಯಾಗುವ ದೂರದ ಸೂಚನೆಗಳು ಇಲ್ಲಿ ಬೆಂಗಳೂರಿನಲ್ಲಿ ಕಾಣಿಸುತ್ತಿವೆ. ಬೋಸರಾಜು ಅಭ್ಯರ್ಥಿಯಾದುದೆ ಹೌದಾದರೆ ಪಾಟೀಲರ ಹ್ಯಾಟ್ರಿಕ್ ಕನಸು ನನಸಾಗುವುದು ಕಷ್ಟ.
ಪಾಟೀಲರು ರಾಯಚೂರು ಶಾಸಕರಾಗಿದ್ದರೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಳವಣಿಗೆಯೆಲ್ಲವೂ ಗೊತ್ತಿದೆ. ತಾವು ಶಾಸಕ ಎನ್ನುವುದನ್ನು ರಾಯಚೂರು ಕ್ಷೇತ್ರದ ಜನರಿಗೆ ನೆನಪು ಮಾಡಿಕೊಡುವ ಕೆಲಸಕ್ಕೆ ಅವರೀಗ ಆದ್ಯತೆ ಕೊಡುತ್ತಿದ್ದಾರೆನ್ನುವುದು ಈ ಎಲ್ಲ ಬೆಳವಣಿಗೆಗಳ ಕಾರಣವಾಗಿ. ಇದೆಲ್ಲ ನಿತ್ಯ ಬರುತ್ತಿರುವ ಸುದ್ದಿಗಳಿಂದಲೂ ವೇದ್ಯ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ರಾಯಚೂರು ಅಭಿವೃದ್ಧಿ ಹಿನ್ನಡೆ ಕುರಿತಾದ ಆಕ್ರೋಶವನ್ನು ಶಾಸಕರು ಶಬ್ದ ನುಂಗದೆ ಹೊರ ಹಾಕಿದ್ದಾರೆ. ರಾಯಚೂರು ಅಭಿವೃದ್ಧಿ ಯಾವ ರಾಜಕೀಯ ಪಕ್ಷಕ್ಕೂ ಬೇಕಾಗಿಲ್ಲ, ಯಾವ ಪಕ್ಷದ ರಾಜಕರಣಿಗೂ ಬೇಕಾಗಿಲ್ಲ ಎನ್ನುವುದು ಹಳೆ ಸತ್ಯ. ರಾಯಚೂರಿನಲ್ಲಿ ಅಭಿವೃದ್ಧಿ ಹಿಮ್ಮುಖವಾಗಿದೆ ಎನ್ನುವುದು ಕ್ಷೇತ್ರದ ಶಾಸಕರಿಗೆ ಗೊತ್ತಾಗಲು ಅವರ ಎಂಎಲ್ಎಗಿರಿ ಎಂಟನೇ ವರ್ಷಕ್ಕೆ ಬರಬೇಕಾಯಿತು ಎನ್ನುವುದು ವಿಚಿತ್ರ ಆದರೂ ಸತ್ಯ.
ಪಾಟೀಲರು ಈಗ ಜನ ಸಂಪರ್ಕ ಸಭೆಗಳನ್ನು ಶುರು ಹಚ್ಚಿಕೊಂಡಿರುವುದಾಗಿಯೂ ಮಾಹಿತಿ ಹೇಳುತ್ತದೆ. ರಸ್ತೆ ಇಲ್ಲ, ಸೇತುವೆ ಇಲ್ಲ, ಶಾಲೆ, ಆಸ್ಪತ್ರೆ ಇಲ್ಲ, ಬಸ್ ಇಲ್ಲ, ವಿದ್ಯುತ್ ಇಲ್ಲ, ಕುಡಿಯುವ ನೀರಿಲ್ಲ, ಗಬ್ಬೆದ್ದು ನಾರುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವವರಿಲ್ಲ, ರಸ್ತೆಗುಂಡಿಗಳನ್ನು ಮುಚ್ಚುವವರಿಲ್ಲ, ಅಭಿವೃದ್ಧಿಯ ನೆಪದಲ್ಲಿ ವೆಚ್ಚ ಆಗುತ್ತಿರುವ ಖರ್ಚಿಗೆ ಲೆಕ್ಕ ಕೊಡುವವರಿಲ್ಲ. ಸಾರ್ವಜನಿಕರ ದೂರು ದುಮ್ಮಾನಗಳಿಗೆ ಕಿವಿ ಕೊಡುವವರಿಲ್ಲ…ಮುಂತಾದ ಇಲ್ಲ ಇಲ್ಲಗಳ ಪಟ್ಟಿಯನ್ನು ಶಾಸಕರು ಗಮನಿಸುವುದಕ್ಕೆ ಎಂಟು ವರ್ಷ ಬೇಕಾಯಿತು. ತಾವು ಹೊಣೆಯನ್ನು ನಿಭಾಯಿಸಬೇಕಿರುವ ಶಾಸಕ ಎನ್ನುವುದು ಅವರ ನೆನಪಿಗೆ ಬರುವುದಕ್ಕೂ ಎಂಟು ವರ್ಷ ಬೇಕಾಯಿತು. ಯಾಕೆ ಈ ದಿಢೀರ್ ಜ್ಞಾನೋದಯ…? ಅನುಮಾನ ಬೇಡವೇ ಬೇಡ. ಈ ಬಾರಿ ಕಾಂಗ್ರೆಸ್ ಬೆಂಬಲ ಅವರಿಗೆ ಸಿಗುವುದಿಲ್ಲ. ಗೆಲ್ಲುವುದಕ್ಕೆ ಅದೊಂದೇ ಒಳಮೈತ್ರಿ ರಾಜಕೀಯ ಮಾತ್ರವೇ ಸಾಕಾಗುವುದಿಲ್ಲ. ಜನ ಬೆಂಬಲ ಅಗತ್ಯವಿರುವುದರಿಂದ ಜನರ ನಡುವೆ ಓಡಾಡುವ ಕೆಲಸವಾಗಿ ಜನ ಸಂಪರ್ಕ ಸಭೆಗಳನ್ನು ಅವರು ಶುರು ಮಾಡಿಕೊಂಡಿದ್ದಾರೆ. ಇಂಥ ಪ್ರಹಸನಗಳನ್ನು ಹೆಚ್ಚೂ ಕಡಿಮೆ ಎಲ್ಲ ರಾಜಕಾರಣಿಗಳೂ ಮಾಡುತ್ತಾರೆ. ಅಂತವರಲ್ಲಿ ಪಾಟೀಲರು ಒಬ್ಬರು.
ಕೆಲವು ದಿವಸಗಳ ಹಿಂದೆ ಕ್ಷೇತ್ರದಲ್ಲಿ ನಡೆದ ಸಭೆಯೊಂದರಲ್ಲಿ ಅಭಿವೃದ್ಧಿ ಕುರಿತ ಆಕ್ರೋಶವನ್ನು ಶಾಸಕರು ಹೊರಕ್ಕೆ ಹಾಕುವ ಭರದಲ್ಲಿ ರಾಯಚೂರನ್ನು ತೆಲಂಗಾಣಾ ರಾಜ್ಯಕ್ಕೆ ಸೇರಿಸಿಬಿಡ್ರಿ ಎಂದು ಹೇಳಿದ್ದು ಜನರ ತರಾಟೆಗೆ ಒಳಗಾಗಿದೆ. ತಾವು ಹಾಗೆ ಹೇಳಿದ್ದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಅವರು ಕೋಲಾಹಲದ ಬಳಿಕ ಹೇಳಿದ್ದಾರೆ. ಈ ಕ್ಷಮಾಯಾಚನೆ ಷರತ್ತಿನದು ಎನ್ನುವುದನ್ನು ಗಮನಿಸಬೇಕು. ಮಾತಾಡುವ ಭರದಲ್ಲಿ ಈ ಮಾತುಗಳನ್ನು ಆಡಿಬಿಟ್ಟೆ, ಇದರಿಂದ ನನಗೂ ನೋವಾಗಿದೆ ಸಾರ್ವಜನಿಕರಿಗೂ ನೋವಾಗಿದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಹೇಳುವುದಕ್ಕೂ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವೆ ಎನ್ನುವುದಕ್ಕೂ ವ್ಯತ್ಯಾಸವಿದೆ. ರಾಯಚೂರನ್ನು ತೆಲಂಗಾಣಾಕ್ಕೆ ಸೇರಿಸಿ ಎಂದು ಪಕ್ಕದಲ್ಲಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣರಿಗೆ ಹೇಳಿದ್ದಕ್ಕಾಗಿ ಶಾಸಕರಲ್ಲಿ ಪಶ್ಚಾತ್ತಾಪಭಾವವೇನೂ ಮೂಡಿಲ್ಲ. ಜನರ ಆಕ್ರೋಶವನ್ನು ತಣಿಸುವುದಕ್ಕೆ ಲಾಲಿಪಾಪ್ ಕೊಡುವ ಹೇಳಿಕೆ ಅವರದು.
ಹಾಗೆ ನೋಡಿದರೆ ಪಾಟೀಲರು ಹೇಳಿದ್ದರಲ್ಲಿ ತಪ್ಪು ಹುಡುಕುವಂಥದ್ದೇನೂ ಇಲ್ಲ. ಅವರ ಪ್ರಕಾರ ಈಶಾನ್ಯ ಕರ್ನಾಟಕಕ್ಕೆ ಯಾವುದೇ ಅಭಿವೃದ್ಧಿ ಯೋಜನೆ ಬಂದರೂ ಅದು ಮೊದಲಿಗೆ ಹೋಗುವುದು ಕಲಬುರ್ಗಿಗೆ. ಆ ಜಿಲ್ಲೆಗೆ ಬೇವಾದ ಸಣ್ಣಪುಟ್ಟ ಯೋಜನೆಗಳು ಪ್ರದೇಶದ ಇತರ ಐದು ಜಿಲ್ಲೆಗಳಿಗೆ ಬಂದಾವು. ಬರುತ್ತದಂಬ ಭರವಸೆಯೇನೂ ಇಲ್ಲ. ಈ ಮಾತನ್ನು ಪಾಟೀಲರು ಮಾತ್ರವೇ ಆಡಿದ್ದಲ್ಲ, ಅದು ವಾಸ್ತವ ಸಂಗತಿ ಕೂಡಾ. ಮುಂಬೈ ಕರ್ನಾಟಕವೆಂದರೆ ಯೋಜನೆಗಳು ಹುಬ್ಬಳ್ಳ-ಧಾರವಾಡ; ಬೆಳಗಾವಿ ಪಾಲಾಗುತ್ತವೆ. ಇಡೀ ರಾಜ್ಯವನ್ನು ಸಮತೋಲನದಲ್ಲಿ ಒಯ್ಯುವುದಕ್ಕೆ ಈಗ ಇರುವ ನೀತಿ ಅಡ್ಡಿಯಾಗುತ್ತದೆನ್ನುವುದು ಪಾಟೀಲರ ಮಾತಿನ ಒಳಮರ್ಮ. ಆದರೆ ಯಾವುದನ್ನು ಹೇಗೆ ಹೇಳಬೇಕೆನ್ನುವುದು ಅವರಿಗೆ ಗೊತ್ತಾಗಲಿಲ್ಲ. ಇದೇ ಮಾತನ್ನು ಅವರು ವಿಧಾನ ಸಭೆಯಲ್ಲಿ ಹೇಳಿದ್ದರೆ ಅದೊಂದು ಬಗೆಯ ರಾಜಕೀಯ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ದುರಂತ ಎಂದರೆ ಆಡಳಿತ ಪಕ್ಷದ ಯಾವುದೇ ಶಾಸಕರು ಸತ್ಯ ಹೇಳಲು ಹಿಂದೆಮುಂದೆ ನೋಡುತ್ತಾರೆ. ಇಂಥ ಸಮಾರಂಭಗಳಲ್ಲಿ ಆಡಿದರೆ ಮೈಮೇಲೆ ಬರುತ್ತದೆ.
ಇಷ್ಟೆ ಅಲ್ಲ. ಅವರು ಯಡಬಿಡಂಗಿ ಹೇಳಿಕೆ ನೀಡಿದ್ದರ ಅಡ್ಡಪರಿಣಾಮ ಬಿಜೆಪಿಗೂ ತಲೆ ಬಿಸಿ ಮಾಡುವಂತಿದೆ. ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣಾ ಸರ್ಕಾರ ಬಹಳ ಮುಂದಿದೆ, ಪಕ್ಕದ ರಾಜ್ಯದ ಬಿಜೆಪಿ ಶಾಸಕರೇ ಶಹಬ್ಬಾಸ್ ಎನ್ನುತ್ತಿದ್ದಾರೆಂದು ಆ ರಾಜ್ಯದ ಆಡಳಿತ ಪಕ್ಷ ತೆಲಂಗಾಣಾ ರಾಷ್ಟ್ರ ಸಮಿತಿಯ ಕೆಲವು ಶಾಸಕರು, ರಾಯಚೂರು ಬಿಜೆಪಿ ಶಾಸಕರ ಹೇಳಿಕೆಯ ಲಾಭ ಪಡೆಯುವ ಯತ್ನವನ್ನು ನಡೆಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ, ರಾಜಕೀಯ ಎಂದರೆ ಇದೇನೇ. ತೆಲಂಗಾಣಾ ಸರ್ಕಾರದ ಕಾರ್ಯ ವೈಖರಿಯನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವ ತೆಲಂಗಾಣಾ ಬಿಜೆಪಿ ನಾಯಕರ ಬಾಯಿಗೆ ಬೀಗ ಹಾಕುವ ಹೇಳಿಕೆ ಪಾಟೀಲರದಾಗಿದೆ. ಇಲ್ಲಿ ಸ್ಥಳೀಯವಾಗಿಯೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ. ವಿವಿಧ ಜನಪರ ಸಂಘಟನೆಗಳು ಪಾಟೀಲರ ಹೇಳಿಕೆ ವಿರುದ್ಧ ಸಿಟ್ಟು ಅಸಮಾಧಾನ, ಅನುಮಾನ ಮುಂತಾದವುಗಳನ್ನು ಹೊರಹಾಕಿವೆ. ಪಾಟೀಲರು ಮಾಡಿರುವ ಹೇಳಿಕೆ ಅಥವಾ ಅದರ ವಿರುದ್ಧ ಎದ್ದಿರುವ ಅಸಮಾಧಾನ ೨೦೨೩ರ ಚುನಾವಣಾ ಸೋಲು ಗೆಲುವನ್ನು ನಿರ್ಣಯಿಸುವುದಿಲ್ಲ ಎನ್ನುವುದು ನಿಜವೇನೋ ಹೌದು. ಆದರೆ ಪಕ್ಷದ ಓಟಕ್ಕೆ ಡ್ಯಾಮೇಜ್ ಮಾಡಲು ಪಾಟೀಲರ ಹೇಳಿಕೆ ಧಂಡಿಯಾಗಿ ಸಾಕು.
ನಮ್ಮ ರಾಜಕಾರಣಿಗಳಿಗೆ ಅಭಿವೃದ್ಧಿ ಎನ್ನುವುದು ಆಗಾಗ ಬರುವ ಫಿಟ್ಸ್ನಂತೆ ಕೆಲಸ ಮಾಡುತ್ತದೆ. ತಮಗೆ ರಾಜಕೀಯವಾಗಿ ಅನುಕೂಲವಾಗುವ ಸಂದರ್ಭ ಸನ್ನಿವೇಶಗಳಲ್ಲೆಲ್ಲ ಅವರು ಅಭಿವೃದ್ಧಿಯ ಜಪ ಮಾಡುತ್ತಾರೆ. ಈಶಾನ್ಯ ಕರ್ನಾಟಕ ಎಂದು ಇನ್ನೂ ನಾಮಕರಣವಾಗಿರದ ಹೈದರಾಬಾದ್ ಕರ್ನಾಟಕ ಪ್ರದೇಶವಾಗಿದ್ದ ಸಮಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ವೈಜನಾಥ ಪಾಟೀಲರು ಆಗಾಗ ಪ್ರತ್ಯೇಕ ರಾಜ್ಯದ ಮಾತನ್ನಾಡುತ್ತಿದ್ದರು. ಅದೊಂದು ರೀತಿಯಲ್ಲಿ ಸಾಂಕ್ರಾಮಿಕ. ಹೈಕ ಪ್ರದೇಶದ ಬೇರೆ ಬೇರೆ ಜಿಲ್ಲೆಗಳಲ್ಲೂ ವೈಜನಾಥ ಪಾಟೀಲರ ಮಾತಿಗೆ ಪ್ರತಿಧ್ವನಿ ಸೇರಿಕೊಂಡಿತ್ತು. ಸರ್ಕಾರದ ಯೋಜನೆಗಳು ವಿಫಲವಾದ ಸಂದರ್ಭದಲ್ಲಿ ಪ್ರಬಲವಾದ ಜನಧ್ವನಿಯೊಂದರ ಅಗತ್ಯವಿದೆ ಎಂಬ ವಿಚಾರದಲ್ಲಿ ಎರಡು ಅಭಿಪ್ರಾಯ ಇರುವುದಿಲ್ಲ. ಆದರೆ ಬಹುತೇಕ ಸಂದರ್ಭಗಳಲ್ಲಿ ಹೇಳಿಕೆಗಳ ಮೂಲ ರಾಜಕಾರಣವಾಗಿರುತ್ತದೆಯೇ ಹೊರತೂ ಜನ ಕಾಳಜಿ ಅಲ್ಲ ಎನ್ನವುದು ಸ್ವತಃ ಹೇಳಿಕೆ ನೀಡುವವರಿಗೂ ಗೊತ್ತೇ ಇರುತ್ತದೆ.
ಮುಂಬೈ ಕರ್ನಾಟಕ ಯಾನೆ ಬೆಳಗಾವಿ ಪ್ರದೇಶದ ಉಮೇಶ ಕತ್ತಿ ಇಂಥ ವರಸೆ ಹೇಳಿಕೆಯ ಶೂರರಲ್ಲಿ ಮತ್ತೊಬ್ಬ ನಾಯಕರು. ಅವರು ಪ್ರಸ್ತುತದಲ್ಲಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅರಣ್ಯ ಸಚಿವರು. ಅಷ್ಟೇನೂ ಸಮಾಧಾನ ಅವರಿಗೆ ಇಲ್ಲ, ಜನರ ಸೇವೆಗೆ ಅವರು ಬಯಸಿದ ಖಾತೆ ಸಿಕ್ಕಿಲ್ಲ ಎನ್ನುವುದು ಅಸಮಾಧಾನಕ್ಕೆ ಕಾರಣ. ಇಂದಲ್ಲ ನಾಳೆ ಸಂಪುಟ ಪುನರ್ರಚನೆಯಾದಾಗ ತಮ್ಮ ಇಷ್ಟದ ಖಾತೆ ತಮಗೆ ಸಿಕ್ಕೀತೆಂಬ ಆಸೆಯಲ್ಲಿರುವ ಕತ್ತಿ, ಅದೇ ಕಾರಣಕ್ಕಾಗಿಯೋ ಎಂಬಂತೆ ಪ್ರತ್ಯೇಕ ರಾಜ್ಯದ ಮಾತನ್ನು ಹಲವು ತಿಂಗಳುಗಳಿಂದ ಆಡಿಲ್ಲ. ರಾಜಕಾರಣಿಗಳ ವರಸೆ ಹೇಗಿರುತ್ತದೆಂದರೆ ತಮಗೆ ಬೇಸರವಾದಾಗ ಜನರಿಗೆ ಬೇಸರವಾಗಿದೆ ಎಂಬ ಹುಯಿಲನ್ನೆಬ್ಬಿಸುವುದು. ಈ ಮಾತಿಗೆ ರಾಯಚೂರು ಶಾಸಕ ಶಿವರಾಜ ಪಾಟೀಲರು ಅಪವಾದವಲ್ಲ.