ನ 1ರಿಂದ ಟಾಟಾ ಸಹಯೋಗದಲ್ಲಿ ಆಧುನಿಕ ಕೋರ್ಸ್ ಗಳ ತರಬೇತಿ ಆರಂಭ: ಅಶ್ವತ್ಥ ನಾರಾಯಣ

Share

ಬೆಂಗಳೂರು,ಅ,21: ‘ಉದ್ಯೋಗ’ ಕಾರ್ಯಕ್ರಮದಡಿ ಟಾಟಾ ಕಂಪನಿಯ ಸಹಯೋಗದಲ್ಲಿ ರೂ 4,636 ಕೋಟಿ  ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ 150 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಟಿ) ಇನ್ನೆರಡು ವಾರದಲ್ಲಿ ಉದ್ಘಾಟನೆಯಾಗಲಿದ್ದು, ಆಧುನಿಕ ಕೋರ್ಸ್ ಗಳನ್ನು ಒಳಗೊಂಡ ತರಬೇತಿಯು ಈ ಕೇಂದ್ರಗಳಲ್ಲಿ ನ.1ರಿಂದ ಆರಂಭವಾಗಲಿದೆ ಎಂದು ಕೌಶಾಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಗುರುವಾರ ಹೇಳಿದರು.

ಇಲ್ಲಿನ ಪೀಣ್ಯದಲ್ಲಿ ಮೇಲ್ದರ್ಜೆಗೇರಿಸಿರುವ ಸರ್ಕಾರಿ ಐಟಿಐ ಕೇಂದ್ರವನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೊಸ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಉದ್ಯಮಗಳ ಈಗಿನ ಬೇಡಿಕೆಗೆ ತಕ್ಕಂತೆ ಹೊಸ ಪಠ್ಯಕ್ರಮ ರೂಪಿಸಲಾಗಿದೆ. ಅಡ್ವಾನ್ಸ್ಡ್ ಸಿ.ಎನ್.ಸಿ. ಮಷೀನಿಂಗ್, ಬೇಸಿಕ್ಸ್ ಆಫ್ ಡಿಜೈನ್ ಅಂಡ್ ವರ್ಚ್ಯುಯಲ್ ವೆರಿಫಿಕೇಷನ್, ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಅಂಡ್ ಆಟೋಮೇಷನ್ ಮತ್ತು ಮೆಕ್ಯಾನಿಕ್ ಎಲೆಕ್ಟ್ರಿಕ್  ವೆಹಿಕಲ್ ಇವುಗಳಲ್ಲಿ ಸೇರಿವೆ ಎಂದು ಸಚಿವರು ವಿವರಿಸಿದರು.

ಈ ಸಂಸ್ಥೆಗಳಲ್ಲಿ ಜೆಟಿಒ ಗಳಿಗೆ ಹೊಸ ತಾಂತ್ರಿಕತೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ 20,000 ಜೆಟಿಒ ಗಳಿಗೆ ಅನುಕೂಲವಾಗುತ್ತದೆ. ಇದರ ಜೊತೆಗೆ ಐಟಿಐ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರಯೋಜನವಾಗುತ್ತದೆ ಎಂದರು.
ಟಾಟಾ ಕಂಪನಿಯೊಂದಿಗೆ ದೀರ್ಘಾವಧಿ ಸಹಭಾಗಿತ್ವ ಹೊಂದುವ ಉದ್ದೇಶವಿದ್ದು ಮೊದಲ ಎರಡು ವರ್ಷಗಳಿಗಾಗಿ 300 ಹಾಗೂ ಮೂರನೇ ವರ್ಷಕ್ಕಾಗಿ 150 ವಿಷಯ ಪರಿಣತರನ್ನು ನಿಯೋಜಿಸಲಾಗುತ್ತದೆ. ಇದರಿಂದ ಜೆಟಿಒ ಗಳಿಗೆ ಹಾಗೂ ಐಟಿಐ ಬೋಧಕ ಸಿಬ್ಬಂದಿಗೆ ಹೊಸ ರೀತಿಯ ತರಬೇತಿಗಳ ಬಗ್ಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.

ಯಂತ್ರೋಪಕರಣಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸುವುದಕ್ಕಾಗಿ 5 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಇದು ಒಳಗೊಂಡಿದೆ. ಅಗತ್ಯಬಿದ್ದರೆ ಇದನ್ನು ಇನ್ನೂ 5 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ. ಹಾಗೆಯೇ ಈ 150 ಸಂಸ್ಥೆಗಳಿಗೆ ಅಳವಡಿಸಿರುವ 11 ದೀರ್ಘಾವಧಿ ತರಬೇತಿ ಹಾಗೂ 23 ಅಲ್ಪಾವಧಿ ತರಬೇತಿ ಕೋರ್ಸ್ ಗಳನ್ನು ಕ್ರಮೇಣ ಎಲ್ಲಾ ಐ.ಟಿ.ಐ.ಗಳಿಗೆ ವಿಸ್ತರಿಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಸಚಿವರು ಸಂಸ್ಥೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಪ್ರಯೋಗಾಲಯವನ್ನು ವೀಕ್ಷಿಸಿದರು. ಎಲೆಕ್ಟ್ರಿಕ್ ವಾಹನವನ್ನು ನೋಡಿದ್ದಷ್ಟೇ ಅಲ್ಲದೆ ಅದರ ಚಾಲನೆಯನ್ನೂ ಮಾಡಿದರು. ಆಧುನಿಕ ವೆಲ್ಡಿಂಗ್ ವಿಧಾನದ ಬಗ್ಗೆ ಖುದ್ದು ವೀಕ್ಷಿಸಿ ಮಾಹಿತಿ ಪಡೆದರು. ಇದೇ ವೇಳೆ, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಜತೆ ಸಂವಾದ ನಡೆಸಿದರು.

ಒಟ್ಟು 4,636 ಕೋಟಿ ಯೋಜನಾ ವೆಚ್ಚದ ಪೈಕಿ ಕರ್ನಾಟಕ ಸರ್ಕಾರ ಶೇ 12ರಷ್ಟನ್ನು ಹಾಗೂ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಶೇ 88ರಷ್ಟನ್ನು ಭರಿಸುತ್ತಿವೆ. ಜೊತೆಗೆ ರಾಜ್ಯ ಸರ್ಕಾರವು ಭೌತಿಕ ಮೂಲಸೌಕರ್ಯಗಳಿಗಾಗಿ 220 ಕೋಟಿ ವೆಚ್ಚ ಮಾಡುತ್ತಿದೆ. ತಾಂತ್ರಿಕ ಉನ್ನತೀಕರಣಕ್ಕಾಗಿ ಆಧುನಿಕ ಸಿ.ಎನ್.ಸಿ. ಯಂತ್ರ, ಲೇಸರ್ ಕಟಿಂಗ್ ಯಂತ್ರ, ಆಡಿಟೀವ್ ಮ್ಯಾನುಫ್ಯಾಕ್ಟರಿಂಗ್, 3 ಡಿ ಪ್ರಿಂಟಿಂಗ್ ಮಷೀನ್, ಕೈಗಾರಿಕಾ ರೊಬೋಟ್, ವಿನೂತನ ತಂತ್ರಾಂಶಗಳು ಐಟಿಐ ಗಳಿಗೆ ಸೇರ್ಪಡೆಯಾಗಲಿವೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಹರೀಶ ಕುಮಾರ ಇದ್ದರು.

Girl in a jacket
error: Content is protected !!