ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .
ಪ್ರಾಚೀನ ಮಾನವನ ಜೀವನ ವಿಧಾನಗಳನ್ನು ತಿಳಿಸುವ ಮಹತ್ವದ ಕುರುಹುಗಳೆಂದರೆ ಅವಶೇಷಗಳು. ಅವುಗಳಲ್ಲಿ ಶಿಲಾಯುಧ, ಮಡಕೆ-ಕುಡಿಕೆ, ಶಿಲಾ ಸಮಾಧಿಗಳು; ಇತಿಹಾಸ ಕಾಲದ ಶಿಲಾಶಾಸನ, ಮೂರ್ತಿಶಿಲ್ಪ, ಉಬ್ಬುಶಿಲ್ಪ, ವೀರಗಲ್ಲು, ಮಾಸ್ತಿಗಲ್ಲು, ದೇವಾಲಯ, ಕೋಟೆ-ಕೊತ್ತಲ ಇತ್ಯಾದಿ ಸೇರಿವೆ. ಇವೆಲ್ಲವೂ ಪ್ರಾಚೀನರ ಚರಿತ್ರೆಯನ್ನು ಅರಿಯುವ ಮಹತ್ವದ ದಾಖಲೆಗಳೇ ಆಗಿವೆ. ಈ ಬಗೆಯ ಪ್ರಾಚೀನ ಅವಶೇಷಗಳ ಮೇಲೆ ಜನರು ಇಂದಿಗೂ ಇಟ್ಟುಕೊಂಡು ಆಚರಿಸುತ್ತಿರುವ ನಂಬಿಕೆ-ಆಚರಣೆಗಳು ವಿಶಿಷ್ಟವಾಗಿವೆ. ಈ ಬಗೆಯ ನಂಬಿಕೆಗಳಲ್ಲಿ ಅವಶೇಷಗಳ ರಕ್ಷಣೆಯ ತತ್ವವು ಒಂದೆಡೆಯಿದ್ದರೆ, ಅವು ಮೂಢನಂಬಿಕೆಗಳಾಗಿಯೂ ಮಾರ್ಪಟ್ಟಿರುವ ಸಂಗತಿ ತುಸು ಹೆಚ್ಚಾಗಿರುವುದನ್ನು ಕಾಣಬಹುದು. ಅಲ್ಲದೆ ಅವುಗಳಲ್ಲಿ ಪಾಪ-ಪುಣ್ಯ, ಸ್ವರ್ಗ-ನರಕ, ಪುನರ್ಜನ್ಮಗಳ ಕಲ್ಪನೆಗಳು ಹಾಸುಹೊಕ್ಕಿವೆ. ಇವು ಮೌಖಿಕವಾಗಿಯಷ್ಟೆ ಅಲ್ಲ. ಶಾಸನಸ್ಥ ಸಂಗತಿಗಳೂ ಆಗಿ ಒಡಮೂಡಿವೆ.
ಶಿಲಾಯುಗ ಮಾನವನ ನುಣುಪಾದ ಪ್ರಾಚೀನ ಶಿಲಾಯುಧಗಳನ್ನು ಗುಡಿಗುಂಡಾರ, ಮರಗಿಡಗಳ ಕೆಳಗೆ ಇಟ್ಟು ಆಯಾ ಪರಿಸರದ ದೇವರನ್ನಾಗಿಸಿ ಪೂಜಿಸುವ ಕಾರ್ಯ ನಿರಂತರವಾಗಿ ನಡೆದೇ ಇದೆ. ಇದು ಶಿಲಾಯುಗ ನೆಲೆಗಳಿರುವ ಸ್ಥಳಗಳಲ್ಲಿ ಸಾಮಾನ್ಯ ಸಂಗತಿ.
ಶಿಲಾಯುಧಗಳು ಅಂದು ಶಿಲಾಯುಗ ಮಾನವನ ಬದುಕಿನ ಭಾಗವಾಗಿದ್ದರೆ, ಇಂದು ದೈವಸ್ವರೂಪದ ಸಂಕೇತವಾಗಿ ರೂಪು ತಳೆದಿವೆ. ಹಾಗೆಯೇ ಬೃಹತ್ ಶಿಲಾಯುಗ ಸಂಸ್ಕೃತಿಯ ವಿಶೇಷ ಲಕ್ಷಣ ಸಮಾಧಿಗಳ ನಿರ್ಮಿತಿಯೇ ಆಗಿದ್ದು, ಈ ಸಮಾಧಿಗಳಲ್ಲಿ ಸುಟ್ಟ ಶವದ ಅಸ್ತಿಯನ್ನು ಮಡಕೆ-ಕುಡಿಕೆಗಳಲ್ಲಿ ಇಟ್ಟು ಹೂಳುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಆದರೆ ಇಂದು ಕೃಷಿ, ಕಾಮಗಾರಿಗಳ ಸಂದರ್ಭದಲ್ಲಿ ಮತ್ತು ನಿಧಿ ಇದೆಯೆಂಬ ದುರಾಸೆಯ ಹಿನ್ನೆಲೆಯಲ್ಲಿ ಶವದ ಅಸ್ತಿಯ ಇದ್ದಿಲು-ಬೂದಿಮಿಶ್ರಿತ ಅವಶೇಷಗಳು ಅನಾವರಣವಾಗುವುದು ಸಹಜವೇ. ಆದರೆ ಇಂತಹ ಇದ್ದಿಲು-ಬೂದಿಯನ್ನು ಕಂಡು ಪೂರ್ವಜರು ಇಟ್ಟ ಚಿನ್ನವು ಇದ್ದಿಲಾಗಿದೆಯೆಂದು ಭಾವಿಸುವುದು ರೂಢಿಯಾಗಿದೆ. ಇದು ಒಪ್ಪತಕ್ಕದ್ದಲ್ಲ್ಲವೆಂಬುದು ವೈಜ್ಞಾನಿಕವಾಗಿ ಸತ್ಯ. ಹಾಗೆಯೇ ನವಶಿಲಾಯುಗದ ಬೂದಿದಿಬ್ಬಗಳು ಪಶುಪಾಲಕನಾಗಿದ್ದ ಮಾನವ ಸಾಕಿದ ದನಗಳ ಸಗಣಿಯ ಸುಟ್ಟ ಭಾಗವೆಂಬುದು ಪ್ರಯೋಗಾತ್ಮಕವಾಗಿ ದೃಢಪಟ್ಟಿದೆ. ಆದರೆ ಈ ಬೂದಿದಿಬ್ಬಗಳು ಇಂದು ಜನರ ನಾಲಿಗೆಯ ಮೇಲೆ ಹರಿದಾಡುತ್ತಿರುವುದು ವಾಲಿ, ರಾವಣ, ಕುಂಬಕರ್ಣ, ಹಿಡಿಂಬ ಮೊದಲಾದವರನ್ನು ದಹಿಸಿದ ದಿಬ್ಬಗಳಾಗಿ. ಹಾಗೆಯೇ ಪ್ರಾಚೀನ ಶಿಲ್ಪ, ದೇಗುಲಗಳನ್ನು ಸಂಪತ್ತಿನ ಖಜಾನೆಗಳೆಂದು ನಂಬಿ ಅವುಗಳ ನಾಶಕ್ಕೆ ಕಾರಣವೂ ಆಗಿದ್ದಾರೆ. ದೇವಾಲಯಗಳನ್ನು ಗರ್ಭಗೃಹವಲ್ಲದೆ ಇಡೀ ಆವರಣ ಸಹಿತ ಅಗೆದುಹಾಕುವ ಮಟ್ಟಿಗೆ ಕೈಹಾಕಿರುವುದು ದುರದೃಷ್ಟಕರ ಸಂಗಿ. ಇದಕ್ಕೆ ಗಂಗಾವತಿ ಪರಿಸರದ ಹೇಮಗುಡ್ಡ, ವಿಪ್ರಗಳಲ್ಲದೆ ನಾಡಿನ ಅನೇಕ ದೇವಾಲಯಗಳನ್ನು ಉದಾಹರಿಸಬಹುದು.
ಶಿಲ್ಪಗಳಲ್ಲಿ ನಿಧಿಯನ್ನು ಅಡಗಿಸಿ ಇಟ್ಟಿದ್ದಾರೆಂಬ ಕಾರಣ ನೀಡಿ ಲೆಕ್ಕವಿಲ್ಲದಷ್ಟು ಶಿಲ್ಪಗಳು ಭಗ್ನಗೊಂಡಿವೆ. ಇದು ನಿತ್ಯವೂ ನಮ್ಮ ಜನರು ಪಾರಂಪರಿಕ ಕುರುಹುಗಳ ಮೇಲಿನ ದೌರ್ಜನ್ಯವೇ ಆಗಿದೆ. ಇನ್ನು ಶಾಸನಗಳು ಅಂದಂದಿನ ಘಟನಾವಳಿಗಳನ್ನು ಸಾರುವ ಪ್ರಾಚೀನ ದಾಖಲೆಗಳು. ಇಂತಹ ಶಿಲಾಶಾಸನಗಳ ಬಗೆಗೆ ಇರುವ ನಂಬಿಕೆ ವಿಭಿನ್ನವಾದದ್ದು. ಇಂದು ಹಳ್ಳಿಗಳ ದೇವಾಲಯ, ಕಟ್ಟೆಗಳ ಮೇಲಿರುವ ಶಾಸನಗಳನ್ನು ಸಂಶೋಧಕರಾಗಿ ನೋಡಲು ಹೋದರೆ, ಅಲ್ಲಿನ ಜನರು ಅದನ್ನು ಓದಬೇಡಿ, ಅದರಲ್ಲಿ ಇರುವುದು ಬ್ರಹ್ಮಲಿಪಿ, ಯಾರಿಂದಲೂ ಬ್ರಹ್ಮಲಿಪಿಯನ್ನು ಓದಲು ಸಾಧ್ಯವಿಲ್ಲ. ನಮ್ಮೂರಿನಲ್ಲಿ ಅಡಗಿಸಿ ಇಟ್ಟ ನಿಧಿಸಂಪತ್ತಿನ ಬಗ್ಗೆ ಈ ಶಾಸನದಲ್ಲಿ ಹೇಳಲಾಗಿದೆ. ಅದನ್ನು ಓದಲು ಹೋದರೆ ನಿಮ್ಮ ಕಣ್ಣುಗಳು ಇಂಗಿಹೋಗುತ್ತವೆ ಎಂದೆಲ್ಲಾ ಹೇಳುತ್ತಾರೆ. ಊರಿನ ಗುಡಿಗುಂಡಾರಗಳ ಬಳಿ ನಿಲ್ಲಿಸಲಾದ ವೀರಗಲ್ಲು ಮತ್ತು ಮಹಾಸತಿಗಲ್ಲುಗಳನ್ನು ಗ್ರಾಮದ ದೈವವಾಗಿ, ಮಾಸ್ತಮ್ಮ ಮೊದಲಾಗಿ ಕರೆದು ಗ್ರಾಮದೇವತೆ ಎಂದು ಭಾವಿಸಿ ಪೂಜಿಸುವುದು ರೂಢಿ. ಆಧುನಿಕ ಸಂದರ್ಭದಲ್ಲಿ ಈ ಸ್ಮಾರಕವಶೇಷಗಳು ವಿಶಿಷ್ಟವಾಗಿ ಬಳಕೆಗೊಂಡು ಅವು ಅಳಿವಿನ ಅಂಚನ್ನೂ ತಲುಪಿವೆ. ಕೆಲವು ಕಡೆ ಶಾಸನ ಕಲ್ಲು ಕುಡುಗೋಲು, ಕೊಡಲಿಗಳನ್ನು ಮಸೆಯುವ ಮಸಗಲ್ಲುಗಳಾಗಿ, ಕೆಲವೆಡೆ ದೇವಾಲಯಗಳು ದನಕರುಗಳನ್ನು ಕಟ್ಟಿಹಾಕುವ ದೊಡ್ಡಿಯಾಗಿ ಬಳಕೆಯಾಗುತ್ತಿವೆ.
ಕೆಲವು ಸ್ಮಾರಕಶಿಲ್ಪಗಳು ಮನುಷ್ಯನ ಮೈನೋವು ಮತ್ತು ಉಳುಕನ್ನು ನಿವಾರಿಸುವ ದೈವವೂ ಆಗಿ ರೂಪುಗೊಂಡು ಸವೆದು ಹೋಗುತ್ತಿವೆ. ನೋವಾದ ಭಾಗವನ್ನು ಶಾಸನಕಲ್ಲಿಗೆ ಉಜ್ಜಿದರೆ ನೋವು ವಾಸಿಯಾಗುವುದೆಂಬುದು ನಂಬಿಕೆ ಜನಜನಿತವಾಗಿರುವುದೇ ಇದಕ್ಕೆ ಕಾರಣ. ಗಜಲಕ್ಷ್ಮಿ ಶಿಲ್ಪಗಳು ಗ್ರಾಮದ ಗರ್ಭಿಣಿಯರಿಗೆ ಹೆರಿಗೆಯನ್ನು ಸುಸೂತ್ರವಾಗಿಸುವ ಬಾಣಂತಿ ಕಲ್ಲುಗಳಾಗಿ ಅಥವಾ ಹೆರಿಗೆ ದೈವಗಳಾಗಿ ಬಳಕೆಯಾಗುತ್ತಿವೆ. ಗಜಲಕ್ಷ್ಮಿ ಶಿಲ್ಪವನ್ನು ಹೆರಿಗೆಯ ಸಂದರ್ಭದಲ್ಲಿ ಮುಗುಚಿಹಾಕುವ ಈ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ಇಂದಿಗೂ ಜೀವಂತವಾಗಿದೆ. ಮಹಿಳೆಯರು ಲಜ್ಜಾಗೌರಿ, ಜಿನಶಿಲ್ಪಗಳನ್ನು ಪೂಜಿಸಿದರೆ ಮಕ್ಕಳಾಗುತ್ತಾರೆ ಎಂಬ ನಂಬಿಕೆಯಿಂದ ಅವುಗಳಿಗೆ ಹೊತ್ತಲ್ಲದ ಹೊತ್ತಿನಲ್ಲಿ ಪೂಜಿಸುವ ಮತ್ತು ನಿತ್ಯವೂ ಎಣ್ಣೆಯನ್ನು ಸುರಿದು ಪೂಜಿಸುವ ಪರಿಪಾಠವು ನಿರಂತರವಾಗಿ ಮುಂದುವರಿದೇ ಇದೆ. ಇನ್ನು ಕೆರೆಗಳ ಮೇಲಿನ ನಂಬಿಕೆಗಳೇ ಬೇರೆ. ಕೆರೆಯ ಕಟ್ಟೆ ಮತ್ತು ಕೋಡಿಗಳು ನಿಲ್ಲಲಿಲ್ಲವೆಂಬುದು. ಅದಕ್ಕೆ ಊರ ಗೌಡ ಅಥವಾ ಮುಖಂಡನ ಪತ್ನಿಯನ್ನೋ, ಸೊಸೆಯನ್ನೋ ಹಾರವಾಗಿಸಿದರೆಂಬ ವಾಡಿಕೆ ಎಲ್ಲ ಊರುಗಳ ಕೆರೆಗೂ ಅನ್ವಯಿಸಿ ಹೇಳುವ ಕೆರೆಗೆ ಹಾರವೇ ಆಗಿವೆ. ಹೀಗೆ ಪ್ರಾಚೀನ ಪರಂಪರೆಯ ಕುರುಹುಗಳಿಗೆ ಒಂದಲ್ಲಾ ಒಂದು ಬಗೆಯ ನಂಬಿಕೆಗಳನ್ನು ಅವುಗಳಿಗೆ ಆಚರಣೆಗಳನ್ನು ನಮ್ಮ ಜನ ಅನುಸರಿಸುತ್ತಲೇ ಬಂದಿದ್ದಾರೆ. ಇಂತಹ ನಂಬಿಕೆ ಹಿಂದಿನಿಂದಲೂ ಬಂದದ್ದಿದೆ. ಇದನ್ನು ಶಾಸನ, ತಾಳೆಗರಿ, ಕಡತಗಳಲ್ಲೂ ಕಾಣುತ್ತೇವೆ.
ಶಾಸನಗಳು ಅಂದಂದಿನ ದಾನದತ್ತಿ, ನಿರ್ಮಾಣ ಮೊದಲಾದವುಗಳನ್ನು ದಾಖಲಿಸುವ ಆಕರಗಳು. ದಾನದತ್ತಿಗಳನ್ನು ಮುಂದುವರಿಸಲು, ಕಾಪಾಡಲು, ರಕ್ಷಿಸಲು ಶಾಸನಗಳ ಕೊನೆಯಲ್ಲಿ ಶಾಪಾಶಯಗಳನ್ನು ಹಾಕುವ ಪರಿಕ್ರಮ ಇಂದು ನಿನ್ನೆಯದಲ್ಲ, ಅತಿ ಪ್ರಾಚೀನವಾದದ್ದು. ದಾನದತ್ತಿಗಳನ್ನು ನೀಡಿದ ವಿವರದ ಜೊತೆಗೆ ಕೊನೆಯ ಸಾಲುಗಳಲ್ಲಿ “ಆರೊಬ್ಬರು ತಪ್ಪಿದರೆ ವಾರಣಾಸಿಯನ್ನು ನಾಶಮಾಡಿದ ಪಾಪ ಬರಲಿ, “ಬ್ರಾಹ್ಮಣರನ್ನು ಕಾಶಿಯಲಿ ಕೊಂದ ಪಾಪಕ್ಕೆ ಹೋಹರು, “ಹಸುವನ್ನು ಕೊಂದ ಪಾಪಕ್ಕೆ ಹೋಗುವರು, “ತಂದೆ-ತಾಯಿಯರನ್ನು ಕೊಂದ ಪಾಪಕ್ಕೆ ಹೋಹರ, “ಬ್ರಹ್ಮಹತ್ಯೆ, ಗೋಹತ್ಯೆ, ಸ್ತ್ರೀಹತ್ಯೆ, ಬ್ರೂಣಹತ್ಯೆ, ಅಶ್ವಹತ್ಯೆ ಮೊದಲಾದ ಮಹಾಪಾತಕವ ಮಾಡಿದ ಪಾಪಕ್ಕೆ ಹೋಹರು, “ನರಕಕ್ಕೆ ಹೋಹರು, “ಸುರಾಪಾನ, ಶುನಕ ಮಾಂಸ ಸೇವಿಸಿದವರು, “ಯಿದಕೆ ಆರು ತಪ್ಪಿದವರು ರಾಮೇನಾಯಕನ ಲೆಂಕರು, “ಕಾಶಿಯಲಿ ಜಂಗಮನನು ಕೊಂದ ದೋಷಕೆ ಹೋಹರು, “ಯಿದಕೆ ತಪ್ಪಿದರೆ ಶಿವಾಲಯಕೆ ದ್ರೋಹ ಅಪ್ಪಿದವರು, “ಮುಂದಿನ ಜನ್ಮದಲಿ ಕ್ರಿಮಿಗಳಾಗಿ ಹುಟ್ಟುವರು, “ಅಳಿದ ದುರಾತ್ಮಕ ರೌರವಕ್ಕೆ ಗಳಗಳನಿಳಿಗುಂ ಎಂಂತಹ ವಿಭಿನ್ನ ಸಮುದಾಯ, ಧರ್ಮಗಳಿಗೆ ಅನುಗುಣವಾಗಿ ಖಂಡರಿಸಿದ್ದುದನ್ನು ಕಾಣುತ್ತೇವೆ. ಶಾಪಾಶಯ ಎಷ್ಟರಮಟ್ಟಿಗೆ ಅತಿರೇಕವಾಗಿತ್ತೆಂದರೆ “ಈ ಶಾಸನವನ್ನು ಪರಿಪಾಲಿಸದವರು ಕತ್ತೆಯ (ಮರ್ಮಾಂಗ) ಮತ್ತು ಕಲ್ಲುಪ್ಪು ಎನ್ನುವ ಮಟ್ಟಕ್ಕೆ ತೋರಿಸಿದ್ದಾರೆ. ಇನ್ನು ಮುಸ್ಲಿಂರು ಹಾಕಿಸಿದ ಶಾಸನಗಳಲ್ಲಿ “ಯಿದಕೆ ಯಾರು ತಪಿದರೆ ತುರುಕರಿಗೆ ಮುಸ್ತಾಪಿನ ಆಣೆ, ಹಿಂದುರಿಗೆ ಕಾಸಿಯಲಿ ಗೋಹತ್ಯೆ ಮಾಡಿದ ಪಾಪಕೆ ಹೋಹರು; “ಮುಸಲಮಾನರಿಗೆ ಮಖ(ಮಕ್ಕಾ)ದ ಆಣೆ ಎಂಬಂತಹ ಶಾಪ ತಟ್ಟುತ್ತದೆ. ಇದು ಅಂದಿನ ಆಣೆ, ಪ್ರಮಾಣಗಳೇ ಆಗಿವೆ.
ಶಾಸನ ಮತ್ತು ಅದನ್ನು ಪರಿಪಾಲಿಸಿದವರಿಗೆ ಪುಣ್ಯವೂ ಲಭಿಸುತ್ತದೆಂಬ ನಂಬಿಕೆಯನ್ನೂ ಇದೇ ಜನರಿಗೆ ಉಣಬಡಿಸುವುದೂ ಒಂದು ಆಚರಣೆಯೇ ಆಗಿತ್ತು.
ಇದಕ್ಕೆ “ಶಾಸ್ವಧರ್ಮದಿಂ ಪ್ರತಿಪಾಲಿಸಿದವರ್ಗೆ ವಾರಣಾಸಿ, ಅರ್ಘ್ಯತೀರ್ಥ ಕುರುಕ್ಷೇತ್ರದೊಳು ಸಾವಿರ ವೇದಪಾರಂಗತರಾದ ಬ್ರಾಹ್ಮಣರ್ಗೆ, ಸಾವಿರ ಕವಿಲೆಯಂ ಸುವರ್ಣ ಸ್ರಿಂಗಿಯಂ ರಜತ ಖುರಮುಂ ಕಾಂಸ ದೇ ಸಮಂನ್ವಿತಮಾಗಿ ಕೊಟ್ಟ ಫಲಮಂ ಪಡೆವರು, “ಬ್ರಾಹ್ಮಣರ್ಗೆ ಸಾವಿರ ಗೋವುಗಳಂ ಸದಕ್ಷಿಣೆ ಸಹಿತವಾಗಿ ಕೊಟ್ಟ ಫಲವಂ ಪಡೆವರು ಎಂಬಂತಹ ಪುರೋಹಿತಶಾಹಿ ಪ್ರೇರಿತ ಪಾಪಪುಣ್ಯಗಳನ್ನೂ ದಾಖಲಿಸಲಾಗಿದೆ. ಹೀಗೆ ಪ್ರಾಚೀನ ಕುರುಹುಗಳನ್ನು ಕುರಿತ ನಂಬಿಕೆ-ಆಚರಣೆಗಳು ವೈವಿಧ್ಯಮಯವಾಗಿದ್ದು ಶಾಪಾಶಯಗಳು ಜನರನ್ನು ಭಯಗ್ರಸ್ತರನ್ನಾಗಿಸಿ ರಕ್ಷಿಸುವುದು ಒಂದೆಡೆಯಾದರೆ, ಅವು ಇಂದು ನಂಬಿಕೆ, ಮೂಢನಂಬಿಕೆಗಳಾಗಿ ಮುಂದುವರೆದಿರುವುದು ವಿಪರ್ಯಾಸ.