ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿ ಯ ದಿಟ್ಟ ಹೋರಾಟದ ನೆನಪು!
“ತಮ್ಮಾ, ನಿನ್ನ ಎಮ್ಮೆ ಹೊಲಕ್ಕೆ ನುಗ್ಗಿದೆ, ಜಲ್ದಿ ಹೋಗಿ ಹೊರಕ್ಕೆ ಓಡಿಸು, ಮಲ್ಲಣ್ಣ ನೋಡಿದರೆ ಅವಾಂತರವಾದೀತು” ಎನ್ನುವ ಹನುಮಕ್ಕಜ್ಜಿಯ ಕೂಗು ಆಕೆಯೇ ಮಾತುಗಳಲ್ಲಿ ಸೃಷ್ಟಿಸಿದ್ದ ಮೈಸೂರು ದಸರಾದ ಮಾಯದ ಮತ್ತು ಮಾದಕಲೋಕದ ಗುಂಗಿನಿಂದ ನನ್ನನ್ನು ಹೊರತಂದಿತ್ತು. ನೆಲದ ಮೇಲಿದ್ದ ಬಾರುಕೋಲನ್ನು ಎತ್ತಿಕೊಂಡವನು ಓಡಿ ಹೋಗಿ ಬಳ್ಳಾರಿ ರುದ್ರಣ್ಣನವರ ಹೊಲ ಹೊಕ್ಕು ಬೆಳೆದು ನಿಂತಿದ್ದ ಎಳೆಯ ಜೋಳದ ಪೈರುಗಳಿಗೆ ಬಾಯಿ ಹಾಕಿದ್ದ ನನ್ನ ಎಮ್ಮೆಯ ಮೈಮೇಲೆ ಜೋರಾಗಿ ಒಂದು ಹೊಡೆತವನ್ನು ಕೊಟ್ಟೆ. ಬಾರುಕೋಲಿನ ಹೊಡೆತಕ್ಕೆ ಜಗ್ಗದ ಎಮ್ಮೆಯ ಮುಂದೆ ಹೋಗಿ ಅದರ ಎರಡೂ ಕೋಡುಗಳನ್ನು ಹಿಡಿದು ಹೊಲದಿಂದ ಹೊರಕ್ಕೆ ತಂದು ಬದುವಿನ ಹುಲ್ಲನ್ನು ಮೇಯುವುದಕ್ಕೆ ಬಿಟ್ಟು ಮತ್ತೆ ಮರದ ನೆರಳಿಗೆ ಮರಳಿದೆ.
ಹನುಮಕ್ಕಜ್ಜಿ ಮರದ ನೆರಳಲ್ಲಿಯೇ ಕೂತು ತನ್ನ ಎರಡು ಹಸುಗಳು ಗೌಡರ ಹೊಲಕ್ಕೆ ನುಗ್ಗದ ಹಾಗೆ ನಿಗಾವಹಿಸಿದ್ದಳು. “ಅಜ್ಜೀ, ನೀವು ವಿಶ್ವೇಶ್ವರಯ್ಯ ಅವರನ್ನು ದಸರಾ ಸಂದರ್ಭದಲ್ಲಿ ನೋಡಿದ್ದಿದೆಯಾ?” ಎನ್ನುವ ನನ್ನ ಪ್ರಶ್ನೆಗೆ ಸಣ್ಣದಾದ ಒಂದು ನಿಟ್ಟುಸಿರಿನ ನಂತರ ಅಜ್ಜಿ ತನ್ನ ದಸರಾ ಪ್ರಸಂಗಗಳ ನೆನಪಿನ ಬುತ್ತಿಯನ್ನು ಮತ್ತೆ ಬಿಚ್ಚತೊಡಗಿದಳು.
“ಹೌದು ತಮ್ಮಾ, ವಿಶ್ವೇಶ್ವರಯ್ಯ ಅವರನ್ನು ಮೂರ್ನಾಲ್ಕು ದಸರಾಗಳಲ್ಲಿ ನೋಡಿದ್ದೇನೆ. ಉದ್ದ ಮೂಗಿನ, ಮೈಸೂರು ಪೇಟ ತೊಟ್ಟ, ಕರಿಕೋಟು ಧರಿಸಿದ ಅವರು ಇಂಗ್ಲೀಷರ ಮೈಬಣ್ಣದಷ್ಟೆ ಕೆಂಪಾಗಿ ಕಾಣಿಸುತ್ತಿದ್ದರು. ಮಹಾರಾಜರ ದರ್ಬಾರಿನಲ್ಲಿ ಬಲಸಾಲಿನ ಎರಡನೇ ಆಸನದಲ್ಲಿ ಕೂರುತ್ತಿದ್ದ ವಿಶ್ವೇಶ್ವರಯ್ಯ ಅವರು ಮಾತನಾಡುವುದನ್ನು ನಾನು ಕೇಳಿದ್ದೇನೆ, ಅವರು ಮಂಡಿಸುತ್ತಿದ್ದ ಆಯವ್ಯಯ ವರದಿಗಳನ್ನೂ ಕೇಳಿದ್ದೇನೆ” ಎಂದ ಹನುಮಕ್ಕಜ್ಜಿ “ವಿಶ್ವೇಶ್ವರಯ್ಯ ಅವರು ಮಾತನಾಡಲು ಎದ್ದರೆ ಇಡೀ ಪ್ರಜಾಪ್ರತಿನಿಧಿಸಭೆ ಸೂಜಿಬಿದ್ದರೂ ಕೇಳಿಸುವಷ್ಟು ಮೌನಧಾರಣೆಯನ್ನು ಮಾಡುತ್ತಿತ್ತು. ಇಂಗ್ಲೀಷ್ ನಲ್ಲಿಯೇ ಪಟಪಟನೆ ಹರಳು ಹುರಿದಂತೆ ಮಾತನಾಡುತ್ತಿದ್ದ ವಿಶ್ವೇಶ್ವರಯ್ಯ ಅವರ ಮಾತುಗಳು ನನಗೆ ಅರ್ಥವಾಗುತ್ತಿರಲಿಲ್ಲ.
ಆದರೆ ನನ್ನ ಸುತ್ತಮುತ್ತ ಕುಳಿತು ಅವರ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಇಂಗ್ಲೀಷ್ ಬಲ್ಲ ಕೆಲಸದಸ್ಯರ ಮುಖಗಳ ಹಾವಭಾವದಿಂದ ಆತ ಬಹಳ ಗಹನವಾದ ಮತ್ತು ಮೈಸೂರು ಪ್ರಾಂತ್ಯದ ಹಿತವನ್ನು ಕುರಿತಾದ ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು ಎಂದು ನನಗೆ ಅನ್ನಿಸುತ್ತಿತ್ತು. ಆತ ಬಹಳ ಬುದ್ಧಿವಂತನೆಂದು ನಮ್ಮ ಅನೇಕ ಸದಸ್ಯರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದದ್ದನ್ನು ನಾನು ಕೇಳಿದ್ದೇನೆ” ಎಂದು ಹೇಳುತ್ತಿದ್ದರೆ ದಸರಾ ರಜೆಗಿಂತ ಮೊದಲು ಶಾಲೆಯಲ್ಲಿ ಓದಿದ ವಿಶ್ವೇಶ್ವರಯ್ಯ ಅವರ ಕುರಿತಾದ ಕನ್ನಡ ಪುಸ್ತಕದ ಹಾಳೆಗಳಿಂದ ವಿಶ್ವೇಶ್ವರಯ್ಯ ಅವರೇ ಎದ್ದು ಬಂದು ನನ್ನ ಮುಂದೆ ನಿಂತಂತಹ ಪುಳಕ ಬಾಲಕನಾದ ನನ್ನ ಮೈಮನಗಳನ್ನು ರೋಮಾಂಚನಗೊಳಿಸುತ್ತಿತ್ತು. “ಅಜ್ಜೀ, ಮೈಸೂರಿನಲ್ಲಿ ಮತ್ತಿನ್ನೇನು ಮಾಡುತ್ತಿದ್ದಿ? ನೀನು ಇರುತ್ತಿದ್ದ ಐದು ದಿನಗಳೂ ನಿನಗೆ ಯಾವ ರೀತಿಯ ರಾಜ ಮರ್ಯಾದೆ, ಮನ್ನಣೆ ದೊರಕುತ್ತಿತ್ತು?” ಎನ್ನುವ ನನ್ನ ಪ್ರಶ್ನೆಗೆ ನೆರೆತು ಸಂಪೂರ್ಣ ಬಿಳಿದಾದ ಮತ್ತು ಸಣ್ಣ ಈರುಳ್ಳಿ ಗಾತ್ರಮಾತ್ರವಿದ್ದ ತನ್ನ ತುರುಬನ್ನು ಸರಿಪಡಿಸಿಕೊಂಡು, ಸೆರಗನ್ನು ತಲೆಯ ಮೇಲೆ ಹೊದ್ದು ಬೇವಿನ ಮರದ ಬುಡಕ್ಕೆ ತುಸು ಒರಗಿದ ಅಜ್ಜಿ ತಮ್ಮ ಮೈಸೂರು ದಸರಾದ ವೈಭೋಗದ ವರ್ಣನೆಯನ್ನು ಶುರುವಿಟ್ಟುಕೊಂಡರೆ ಹುಲ್ಲು ಮೇಯುತ್ತಿದ್ದ ತುಡುಗು ಎಮ್ಮೆ, ಆಕಳುಗಳು ಹೊಲ ಹೊಕ್ಕರೂ ನನಗೆ ತಿಳಿಯುತ್ತಿರಲಿಲ್ಲ. ದಸರಾ ಕಥಾಪ್ರಸಂಗವನ್ನು ಅರುಹುತ್ತಲೇ ದನಗಳ ಮೇಲೆ ಒಂದು ಕಣ್ಣಿನ ನಿಗಾ ಇಡುತ್ತಿದ್ದ ಅಜ್ಜಿಯ ಕೂಗು ನನ್ನನ್ನು ಮತ್ತೆ ಈ ಲೋಕಕ್ಕೆ ಕರೆತರುತ್ತಿತ್ತು. ನಲ್ವತ್ತನೇ ದಶಕದ ಹಲವಾರು ಮೈಸೂರು ದಸರಾಗಳಿಗೆ ಪ್ರಜಾಪ್ರತಿನಿಧಿಸಭೆಯ ಸದಸ್ಯೆಯ ರೂಪದಲ್ಲಿ ಹಾಜರಾದ ಅಜ್ಜಿಯ ನೆನಪಿನ ಭಂಡಾರದಲ್ಲಿ ಅಂದಿನ ಮೈಸೂರು ಅರಸರ ಖಜಾನೆಯಲ್ಲಿ ಇದ್ದ ವಜ್ರವೈಢೂರ್ಯಗಳ ಸಂಪತ್ತಿಗಿಂತ ತುಸು ಹೆಚ್ಚೆನ್ನಬಹುದಾದ ನೆನಪಿನ ಭಂಡಾರದ ಸಂಪತ್ತಿನಿಂದ ತುಂಬಿತುಳುಕುತ್ತಿದ್ದ ಅನುಭವ ನನ್ನ ಪಾಲಿಗಾಗುತ್ತಿತ್ತು. “ಅಜ್ಜೀ, ನಾಳೆ ನೀನು ನನಗೆ ಜಟ್ಟಿಕಾಳಗದ ಪ್ರಸಂಗವನ್ನು ಹೇಳಲೇಬೇಕು” ಎಂದು ಮುಸ್ಸಂಜೆಯಲ್ಲಿ ದನಗಳನ್ನು ಮನೆಗೆ ಹೊಡೆದುಕೊಂಡು ಹೋಗುವಾಗ ಹೇಳಿದ ಮಾತುಗಳು ಇಡೀ ರಾತ್ರಿ ಮೈಸೂರು ದಸರಾದಲ್ಲಿ ಜಗಜಟ್ಟಿಗಳ ಕಾಳಗದ ಕನಸುಗಳಾಗಿ ನನ್ನನ್ನು ಕಾಡುತ್ತಿದ್ದದುಂಟು.
ಐದು ಆಡಿಗಿಂತ ಒಂದೆರೆಡು ಅಂಗುಲ ಚಿಕ್ಕದಾದ ದೇಹಾಕೃತಿ, ಅರವತ್ತು- ಅರವತ್ತೈದು ವರ್ಷ ಮೀರಿದ ಕೃಶ ಶರೀರ, ಮೈಗೆ, ಪಾದಗಳಿಗಿಂತ ಸ್ವಲ್ಪ ಮೇಲೆಯೇ ಇರುವಂತೆ, ಸುತ್ತಿಕೊಳ್ಳುತ್ತಿದ್ದ ಆರು ಮೊಳದ ಹಸಿರು ಬಣ್ಣದ ದಪ್ಪನಾದ ಖಾದಿ ಸೀರೆ, ಮೊಣಕೈನಿಂದ ಕೆಳಗೆ ಬರುವಂತೆ ಇರುತ್ತಿದ್ದ ಬಿಳಿಬಣ್ಣದ ರವಿಕೆ, ನೀಟಾಗಿ ಬಾಚಿ ತುರುಬು ಕಟ್ಟಿದ ನೆರೆತ ಬಿಳಿಕೂದಲು, ಬದುಕಿನ ಕಷ್ಟಗಳು ಮುಖದ ಮೇಲೆ ಛಾಪಿಸಿದಂತಿದ್ದ ಕೆನ್ನೆಗಳ ಮೇಲಿನ ಸಣ್ಣಸಣ್ಣ ತೂತುಗಳು, ಕಾಂತಿಯುಕ್ತವಾಗಿ ಬೆಳಗುತ್ತಿದ್ದ ಜೋಡಿಕಣ್ಣುಗಳು, ನೆರಿಗೆಯುಕ್ತವಾದ ಭಸ್ಮಭರಿತ ಅಗಲ ಹಣೆ, ಸುಕ್ಕುಸುಕ್ಕಾಗಿ ಜೋತುಬಿದ್ದಿದ್ದ ಗಂಟಲಿನ ಚರ್ಮ ಇವು ನನಗೆ ಈಗ ನೆನಪಿರುವ ಗೌಡರ ಹನುಮ್ಮಜ್ಜಿಯ ಬಾಹ್ಯ ಆಕಾರದ ನೆನಪುಗಳು. ಮೃದುವಾದ ಆದರೆ ದೃಢವಾದ ಸ್ವರದಲ್ಲಿ ತನ್ನ ಗತಕಾಲದ ಅನುಭವವನ್ನು ಬಿಚ್ಚಿಡುವ ಹೊತ್ತು ಅಜ್ಜಿ ಥೇಟ್ ಹದಿನಾರರ ಪೋರಿಯಾಗಿಬಿಡುತ್ತಿದ್ದಳು. ಬಾಲ್ಯಸಹಜವಾದ ನನ್ನ ಅನೇಕ ಅಸಂಬದ್ಧ ಮತ್ತು ಅಪ್ರಬುದ್ಧ ಪ್ರಶ್ನೆಗಳಿಗೆ ಎಂದೂ ಕೋಪ ಮಾಡಿಕೊಳ್ಳದೆ ನಗುನಗುತ್ತಲೇ ಉತ್ತರಿಸುತ್ತಿದ್ದ ಗೌಡರ ಹನುಮಕ್ಕ ನನ್ನ ಅವ್ವ ಗೌರಮ್ಮನಷ್ಟೇ ನನಗೆ ಪ್ರೀತಿಪಾತ್ರವಾದವಳು. ಸ್ವಲ್ಪ ಅಧಿಕ ಎನ್ನುವ ರೀತಿಯ ಮಾತೃ ಹೃದಯವಂತಿಕೆಯ ಧಣಿಯಾದ ಅಜ್ಜಿ ಎಂದೂ ತಾನು ತರುತ್ತಿದ್ದ ಮೊಸರನ್ನದ ಬುತ್ತಿ, ಕೆಂಪು ಚಟ್ನಿಯ ಮಧ್ಯಾಹ್ನದ ಊಟವನ್ನು ನನ್ನೊಡನೆ ಹಂಚಿಕೊಳ್ಳದೇ ಇರುತ್ತಿರಲಿಲ್ಲ. ಜೊತೆಗೆ ಅಜ್ಜಿ ತರುತ್ತಿದ್ದ ಈರುಳ್ಳಿಯನ್ನು ಜಜ್ಜಿ, ಹಸಿಮೆಣಸಿನಕಾಯಿಯೊಟ್ಟಿಗೆ ಭೋಜನ ಸವಿದವನಿಗೆ ಸ್ವರ್ಗ ಮೂರೇ ಗೇಣು ಉಳಿದಿರುತ್ತಿತ್ತು. ಹನುಮಕ್ಕಜ್ಜಿಯೊಡನೆ ನನ್ನ ದಸರಾ ಹಾಗೂ ಬೇಸಗೆಯ ರಜಾಗಳಲ್ಲಿ ದನಗಳನ್ನು ಮೇಯಿಸಲು ಹೋಗುತ್ತಿದ್ದ ನೆನಪುಗಳು ನನ್ನ ಬಾಲ್ಯ ಕಾಲಘಟ್ಟದ ಮರೆಯದ ಪವಿತ್ರ ಸ್ನಾನಘಟ್ಟಗಳು. ಹಣದ ವಿಷಯದಲ್ಲಿ ತುಸು ಹೆಚ್ಚಿನ ಮಟ್ಟದ ಜಿಪುಣತನವನ್ನು ಪ್ರದರ್ಶಿಸುತ್ತಿದ್ದ ನನ್ನ ಅವ್ವ ನನ್ನ ಶಾಲೆಯ ದಸರಾ ಮತ್ತು ಬೇಸಗೆಯ ದೀರ್ಘ ರಜಾದಿನಗಳ ಒಂದೆರಡು ತಿಂಗಳುಗಳ ಅವಧಿಯ ಮಟ್ಟಿಗೆ ವರ್ಷದ ಉಳಿದ ಕಾಲದಲ್ಲಿ ನಮ್ಮ ದನಕರುಗಳನ್ನು ಮೇಯಿಸುತ್ತಿದ್ದ ನಾಯಕರ ಪಾಲಕ್ಕನನ್ನು ಬಿಡಿಸಿ ದನಕಾಯುವ ಜವಾಬ್ದಾರಿಯನ್ನು ನನ್ನ ಹೆಗಲಿಗೆ ವರ್ಗಾಯಿಸುತ್ತಿದ್ದಳು. ಅದರಿಂದ ನನ್ನ ಅವ್ವನಿಗೆ ಎಷ್ಟರಮಟ್ಟಿಗಿನ ಉಳಿತಾಯವಾಯಿತೋ ತಿಳಿಯೆ, ಆದರೆ ದನಗಾಹಿಯಾಗಿ ಹನುಮಕ್ಕಜ್ಜಿಯ ಒಡನಾಟಕ್ಕೆ ಬಂದ ನಾನು ಅವರ ನೆನಪಿನ ಕಿಂಡಿಯ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಅತ್ಯಮೂಲ್ಯ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದು ಮಾತ್ರ ನನ್ನ ಜೀವಿತದಲ್ಲಿ ಎಂದೂ ಜತನದಿಂದ ಕಾಪಾಡಿಕೊಂಡು ಸಾಗಬೇಕಾದ ಅಮೂಲ್ಯನಿಧಿಯೇ ಹೌದು. ಈ ಒಂದು ದುರ್ಲಭ ಒಳನೋಟ ಮುಂದಿನ ದಿನಮಾನದಲ್ಲಿ ಸ್ವಾತಂತ್ರ್ಯ ಆಂದೋಲನ ಕುರಿತ ನನ್ನ ಅಭಿಪ್ರಾಯವನ್ನು ಘನೀಕರಿಸುವುದರಲ್ಲಿ ಬಹಳ ದೊಡ್ಡದಾದ ಕೊಡುಗೆಯನ್ನು ಕೊಟ್ಟಿದೆ.
ಗ್ರಾಮೀಣ ಪರಿಸರದಲ್ಲಿ ಹುಟ್ಟಿ, ಮೂಲಶಿಕ್ಷಣದಿಂದ ವಂಚಿತಳಾಗಿ, ಬಡತನದ ಬೆಂಕಿಯಲ್ಲಿ ಅರಳಿ, ಚಿಕ್ಕವಯಸ್ಸಿನಲ್ಲಿಯೇ ವಿಧವೆಯಾಗಿ, ಸಂಸಾರಚಕ್ರವನ್ನು ಬಹಳ ದೂರಕ್ಕೆ ಒಂಟಿ ಎತ್ತಾಗಿಯೇ ಎಳೆಯುತ್ತಾ ಬಂದ ಅಜ್ಜಿಯಲ್ಲಿ ತಾನು ಸಾಧಿಸಿದ ಕಾರ್ಯಗಳ ಬಗ್ಗೆ ಮತ್ತು ತಾನು ಏರಿದ ಎತ್ತರದ ಬಗ್ಗೆ ಸಹಜವಾಗಿಯೇ ಆತ್ಮಾಭಿಮಾನ ತುಂಬಿ ತುಳುಕುತ್ತಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಯ ಸಂದರ್ಭ ಹನುಮಕ್ಕನ ಬದುಕಿನಲ್ಲಿ ಊಹಿಸಲೂ ಆಗದ ಸುವರ್ಣಾವಕಾಶಗಳಿಗೆ ಹೆಬ್ಬಾಗಿಲಾಗಿತ್ತು.
“ಹೋಗಲೇ ಭಾಡ್ಕೊವ್, ಹೆಣ ಬೀಳಿಸ್ತಾನಂತೆ ಹೆಣ. ಇಂಗ್ಲೀಷರಿಗೆ ಸಲಾಮು ಹೊಡ್ಕೊಂಡಿರೋ ಗುಲಾಮ್ ನನ್ನ ಮಕ್ಕಳಾ, ನಮಗೆ ಹೆದುರಿಸ್ತಿರೆನ್ರೋ, ತುರುವನೂರಿಗೆ ಹೋಗ್ತಿದೀವಿ, ಮತ್ತೆ ಬರ್ತೀವೋ ಇಲ್ವೋ ಅಂತ ಮನೆಯ ಹೆಂಡ್ರು ಮಕ್ಕಳಿಗೆ ಹೇಳಿ ಬಂದಿದ್ದೀರೋ ಇಲ್ವೋ?” ಎನ್ನುವ ಸಿಂಹಿಣಿಘರ್ಜನೆಯನ್ನು ತಮ್ಮ ಮನೆಯ ಮಾಳಿಗೆ ಮೇಲಿಂದ ಕೂಗಳತೆಯ ದೂರದಲ್ಲಿದ್ದ ಅಂದಿನ ಪೊಲೀಸ್ ಠಾಣೆಯ ಪೇದೆಗಳನ್ನು ಉದ್ದೇಶಿಸಿ ಗೌಡರ ಹನುಮಕ್ಕ ಮಾಡಿದ ರಣಘೋಷಣೆ ಹತ್ತಾರು ಸಾವಿರ ಸಂಖ್ಯೆಯಲ್ಲಿ ಠಾಣೆಯ ಮುಂದೆ ಅಬಾಲವೃದ್ದರಾಗಿ ಜಮಾಯಿಸಿದ್ದ ಊರಜನರ ಹೋರಾಟದ ಘೋಷಣಾವಾಕ್ಯವಾಗಿ ಮೊಳಗಿದ್ದು ನನ್ನ ಊರಿನ ಸ್ವಾತಂತ್ರ್ಯಸಂಗ್ರಾಮದ ಅತ್ಯಂತ ಮಹತ್ತರದ ಕ್ಷಣಗಳಲ್ಲಿ ಒಂದು ಎಂದೇ ದಾಖಲಿಸಬೇಕಾಗುತ್ತದೆ.
ಬ್ರಿಟಿಷ್ ಅರಸೊತ್ತಿಗೆಯ ವಿರುದ್ಧ ಎದೆಯಲ್ಲಿ ಹೆಪ್ಪುಗಟ್ಟಿದ್ದ ಸಾತ್ವಿಕ ಆಕ್ರೋಶ ಗ್ರಾಮೀಣ ಮಹಿಳೆಯ ಬಾಯಿಂದ ಆ ಹೊತ್ತು ಸ್ಫೋಟಿಸಿದ ರೀತಿಯ ಈ ಘಟನೆಗೆ ಭಾರತದ ಇಡೀ ಸ್ವಾತಂತ್ರ್ಯ ಆಂದೋಲನದಲ್ಲಿಯೆ ಬಹಳ ಕಡಿಮೆ ಸಂಖ್ಯೆಯ ಹೋಲಿಕೆಗಳಿದ್ದಾವು.
ಭಾರತದ ಅಜಾದಿಗೆ ಹೋರಾಡಿದ ಜನರಲ್ಲಿ ಅಂದಿನ ಮಹಿಳೆಯರ ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರ ಕೊಡುಗೆ ಅಪಾರವಾದದ್ದು. ಪುರುಷಪ್ರಧಾನ ಭಾರತೀಯ ಸಮಾಜ ಎಂದಿನಂತೆ ಅಂದೂ ಸಹಾ ಗ್ರಾಮೀಣ ಸ್ತ್ರೀಯರ ಸ್ವಾತಂತ್ರ್ಯ ಕುರಿತಾದ ಕೊಡುಗೆಯನ್ನು ಅಲಕ್ಷಿಸಿದ್ದಾರೆಂದೇ ನನಗನ್ನಿಸುತ್ತದೆ. ನಗರವಾಸಿಗಳಾದ ಬಹಳಷ್ಟು ಮಹಿಳೆಯರ ಕೊಡುಗೆಯ ಪ್ರಸ್ತಾವಗಳು ನಮ್ಮ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆಯಾದರೂ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಮಹಿಳೆಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾಡಿದ ತ್ಯಾಗಗಳ ಸರಿಯಾದ ಉಲ್ಲೇಖ ಆಗಿಲ್ಲ. ಮನೆಯ ದುಡಿಯುವ ಗಂಡುಹೈಕಳು ಗಾಂಧೀಜಿ ಹೆಸರು ಹೇಳಿಕೊಂಡು, ಗಾಂಧಿ ಟೋಪಿಯನ್ನು ತಲೆಗೇರಿಸಿ, ತ್ರಿವರ್ಣ ಧ್ವಜವನ್ನು ಹೆಗಲಿಗೇರಿಸಿಕೊಂಡು “ಬೋಲೋ ಭಾರತ್ ಮಾತಾಕಿ ಜೈ” ಎನ್ನುವ ಘೋಷಣೆಗಳೊಂದಿಗೆ ವರ್ಷಗಟ್ಟಲೆ ಜೈಲು ಪಾಲಾಗಿ ಜೈಲಿನ ಮುದ್ದೆ ಮುರಿಯುವ ಹೊತ್ತು ಸಂಸಾರಕ್ಕೆ ದುಡಿಮೆಯ ಏಕೈಕ ಆಸರೆಯಾದ ಈ ಗಂಡುಮಕ್ಕಳು ಹಿಂದೆ ಬಿಟ್ಟುಹೋದ ಹೊಲ, ಮನೆ, ಮಕ್ಕಳು, ಹಿರಿಯರು, ವೃದ್ಧರು ಇವರೆಲ್ಲರ ಜವಾಬ್ದಾರಿ ಹೊರಬೇಕಾಗಿ ಬಂದ ಮನೆಯ ಪ್ರಾಯದ ಹೆಣ್ಣುಮಕ್ಕಳು ಪಟ್ಟ ಪಾಡಿನ ಅರಿವು ಎಷ್ಟು ಜನಕ್ಕೆ ಇದ್ದೀತು? ಈ ಹೊತ್ತು ಸ್ವಾತಂತ್ರ್ಯ ಸಂಗ್ರಾಮದ ಚರ್ಚೆಗಳು ನಡೆಯುವ ಸಂದರ್ಭಗಳಲ್ಲಿ ಕೇವಲ ಕೆಲವೇ ಕೆಲವು ನಾಯಕರ ಹೆಸರುಗಳ ಪ್ರಸ್ತಾವವಾಗುತ್ತದೆಯೆ ಹೊರತು ಸ್ವಾತಂತ್ರ್ಯ ಸಂಗ್ರಾಮದ ಯಜ್ಞಕುಂಡಕ್ಕೆ ತಮ್ಮ ಜೀವಿತದ ಪ್ರಮುಖ ಘಟ್ಟವನ್ನು ಹವಿಸ್ಸಾಗಿ ಅರ್ಪಿಸಿದ ಗ್ರಾಮೀಣ ಮಹಿಳೆಯರ ಪ್ರಸ್ತಾಪ ಏಕಾಗುವುದಿಲ್ಲ? ಇಡೀ ಆಂದೋಲನದ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ ಮಾನವತೆಯ ಅರ್ಧವನ್ನು ಪೂರ್ತಿಯಾಗಿ ಅಲಕ್ಷಿಸುವ ಪರಿಪಾಠ ನಿಲ್ಲುವುದಾದರೂ ಯಾವಾಗ? ಇತಿಹಾಸವನ್ನು ಭಿನ್ನರೀತಿಯಿಂದ ಅರ್ಥೈಸಿಕೊಳ್ಳಬೇಕು ಎನ್ನುವ ಹೊಸಕೂಗು ಮತ್ತು ಕಳಕಳಿಯ ಹಿಂದೆ ಈ ಗ್ರಾಮೀಣ ಮಹಿಳೆಯರೂ ಒತ್ತಾಸೆಯಾಗಿ ನಿಲ್ಲಬಲ್ಲರೆ?
ತನ್ನ ಎಲ್ಲಾ ಮಿತಿಗಳನ್ನೂ ಮೀರಿ ನಿಂತು, ಸ್ವಾತಂತ್ರ್ಯ ಆಂದೋಲನಕ್ಕೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕೊಡುಗೆ ಕೊಟ್ಟು, ತನ್ನ ಕಾಣಿಕೆಗೆ ಎಂದೂ ಪ್ರತಿಫಲವನ್ನು ಅಪೇಕ್ಷಿಸದೆ ಎಲೆಯಮರೆಯ ಕಾಯಿಯಂತೆ ಜೀವನವನ್ನು ವ್ಯಥಿಸಿದ ಗೌಡರ ಹನುಮಕ್ಕ ಇಡೀ ನಾರಿಕುಲದ ಮಾನಮರ್ಯಾದೆಯನ್ನು ವರ್ಧಿಸಿದ ರೀತಿ ಆದರ್ಶಪ್ರಾಯವಾದದ್ದು. ಮೈಸೂರು ಪ್ರಜಾಪ್ರತಿನಿಧಿಸಭೆಯಲ್ಲಿ ತನ್ನ ಹೆಗಲಿಗೆ ಹೆಗಲಾಗಿ ಕುಳಿತ ನಾಡಿನ ಅನೇಕ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳಾಗಿ ಅಧಿಕಾರದ ರುಚಿಯನ್ನು ತುಸು ಹೆಚ್ಚು ಎನ್ನುವ ರೀತಿಯಲ್ಲಿ ಸವಿದ ಹೊತ್ತು ‘ತಾನಾಯಿತು, ತನ್ನ ಕೆಲಸವಾಯಿತು’ ಎನ್ನುವಂತೆ ತಾನು ಹುಟ್ಟಿಬೆಳೆದ ಗ್ರಾಮೀಣ ಪರಿಸರದಲ್ಲಿಯೇ ಉಳಿದು, ವಯಸ್ಸಾದ ಬಳಿಕ ಮಗ ಈಶ್ವರಪ್ಪನಿಗೆ ಮನೆಯ ಸಕಲ ಜವಾಬ್ದಾರಿಗಳನ್ನು ವಯಿಸಿಕೊಟ್ಟು ಮನೆಯ ದನಕರುಗಳನ್ನು ಮೇಯಿಸುವ ಕಾಯಕದಲ್ಲಿ ಬಾಳಿನ ಸಂತೋಷವನ್ನು ಅರಸಿದ ಹನುಮಕ್ಕಜ್ಜಿ ಕೇವಲ ಮಾದರಿ ಸ್ವಾತಂತ್ರ್ಯ ಹೋರಾಟಗಾರಳಷ್ಟೇ ಅನ್ನಿಸದೆ ಅಧಿಕಾರದ ಮೋಹದಿಂದ ದೂರ ಉಳಿದ ತಪಸ್ವಿನಿಯಂತೆ ನನಗೆ ತೋರಿಬರುತ್ತಾಳೆ. ಬಯಸಿದ್ದರೆ ಬೇಕಾದ ಎಲ್ಲಾ ಅಧಿಕಾರಯುತ ಸ್ಥಾನಗಳನ್ನೂ ಅನಾಯಾಸವಾಗಿ ಆಕ್ರಮಿಸುವ ಅವಕಾಶಗಳಿದ್ದಾಗ್ಯೂ ‘ದೇಶಸೇವೆ ಅಧಿಕಾರದ ಮೋಹಕ್ಕೆ ಇರುವ ರಹದಾರಿಯಲ್ಲ’ ಎನ್ನುವುದನ್ನು ತನ್ನ ಸೀಮಿತ ಜ್ಞಾನದ ಬೆಳಕಿನಲ್ಲಿ ಅರ್ಥೈಸಿಕೊಂಡ ಗೌಡರ ಹನುಮಕ್ಕಜ್ಜಿ ನಮ್ಮ ಅನೇಕ ಆಷಾಢಭೂತಿ ಪ್ರಭೂತಿಗಳಿಗೆ ಅನುಕರುಣಿಸಲು ಅಸಾಧ್ಯವಾದಂತಹ ಮೇಲ್ಪಂಕ್ತಿಯೊಂದನ್ನು ಹುಟ್ಟುಹಾಕಿ ಕೊಟ್ಟಿರುವುದು ನಿಜವಲ್ಲವೇ?
ನನ್ನ ನೆಲ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಅವಿಭಜಿತ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಶ್ರೀಮಾನ್ ನಿಜಲಿಂಗಪ್ಪನಂತಹವರ ದೇಶಸೇವೆಗೆ ಸಮರ್ಪಣಭೂಮಿಯಾಗಿ ಕೆಲಸ ಮಾಡಿದ ಹೊತ್ತೂ, ಅಗಣಿತ ಸೇವಾಧುರೀಣರು ತಾಯಿ ಭಾರತಿಗೆ ತಮ್ಮನ್ನು ಮುಡುಪಾಗಿಸಿಕೊಂಡ ಹೊತ್ತೂ ಯಾವ ಕಾರಣಕ್ಕೋ ಅವರೆಲ್ಲರ ಮಧ್ಯೆ ಮಣ್ಣಿನಮಗಳಾಗಿ, ರೈತಮಹಿಳೆಯಾಗಿ ಗಟ್ಟಿಗಿತ್ತಿ, ಗಂಡೆದೆಯ ಗೌಡರ ಹನುಮಕ್ಕ ನನ್ನ ಚಿತ್ತಭಿತ್ತಿಯನ್ನು ಕಲಕುತ್ತಲೇ ಸಾಗಿದ್ದಾಳೆ. ತನ್ನ ದೈದೇಪ್ಯಮಾನವಾದ ಸ್ವಾತಂತ್ರ್ಯದ ಕಾಣಿಕೆಗೆ ಸುತ್ತಮುತ್ತಲ ಹತ್ತೂರುಗಳಲ್ಲಿ ಗುರುತಿಕೊಂಡ ಹೊತ್ತಿನಲ್ಲಿಯೇ ಅದು ತಂದುಕೊಡಬಹುದಾದ ಎಲ್ಲಾ ಐಹಿಕಭೋಗಳನ್ನೂ ತುಚ್ಚಿಕರಿಸಿ ನಿರ್ಲಿಪ್ತ ಜೀವನಡೆದೆಗೆ ಆಕೆ ಮುಖ ಮಾಡಿದ್ದು ಅವಳನ್ನು ಭಾರತದ ಸ್ವಾತಂತ್ರ್ಯ ಆಂದೋಲನದ ಆತ್ಮದ ನಿಜವಾದ ವಾರಸುದಾರಳನ್ನಾಗಿ ಮಾಡುತ್ತದೆ. ಆ ಸಮಯದ ಶ್ರದ್ಧೆ, ದೇಶಭಕ್ತಿಗಳನ್ನ ಅತ್ಯಂತ ಸಮಂಜಸವಾಗಿ ಅಭಿವ್ಯಕ್ತಿಸಿದ ಕೆಲವೇ ಕೆಲವು ಗಾಂಧಿವಾದಿಗಳಲ್ಲಿ ಪ್ರಮುಖರಾಗಿ ತೋರಿಬರುತ್ತಾಳೆ. ಎದೆಯಲ್ಲಿ ದೇಶದ ಬಗ್ಗೆ ನಿಷ್ಕಳಂಕ ಪ್ರೇಮ, ಸ್ವಾರ್ಥರಹಿತ ಸೇವಾಕಾಂಕ್ಷೆಯನ್ನು ಹೊತ್ತ ಗ್ರಾಮೀಣ ರೈತಮಹಿಳೆಯೊಬ್ಬರು ಸ್ವಾತಂತ್ರ್ಯ ಆಂದೋಲನದ ಆಡೊಂಬಲದಲ್ಲಿ ತನ್ನನ್ನು ತಾನೇ ಸಮರ್ಪಿಸಿಕೊಂಡ ಈ ಯಶೋಗಾಥೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೆಯ ಪ್ರತಿ ಉಸಿರಿನಲ್ಲೂ ಬೆರೆತಿರುತ್ತದೆ. ಗಾಂಧಿ ಅನುಯಾಯಿಗಳ ಜೀವನಗಾಥೆಗೆ ಹೊಸಭಾಷ್ಯವನ್ನೇ ಬರೆದ ಗೌಡರ ಹನುಮಕ್ಕಜ್ಜಿಯ ಒಡನಾಡಿಯಾಗಿ ಕಳೆದ ನನ್ನ ಬಾಲ್ಯ ಜೀವನದ ಅಮೂಲ್ಯ ಕ್ಷಣಗಳನ್ನು ಪ್ರತೀ ಸ್ವಾತಂತ್ರ್ಯ ದಿನಾಚರಣೆಯ ದಿನದಂದೂ ತಪ್ಪದೇ ನೆನೆದು ನಾನು ಗದ್ಗತಿತನಾಗುತ್ತೇನೆ. ನನ್ನ ಮಟ್ಟಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪರ್ಯಾಯ ಪದವೇ ಗೌಡರ ಹನುಮಕ್ಕ. ತ್ರಿವರ್ಣಧ್ವಜ ಆತಂಕಮುಕ್ತವಾಗಿ ಗಗನದಲ್ಲಿ ಬಾನಾಡಿಗಳೊಂದಿಗೆ ವಿಹರಿಸುತ್ತಿರುವ ವಿಹಂಗಮ ದೃಶ್ಯ ತನ್ನೊಟ್ಟಿಗೇ ಹನುಮಕ್ಕನ ನೆನಪುಗಳ ದಾಸ್ತಾನನ್ನು ನನ್ನ ಮಂಡೆಯಲ್ಲಿ ಬಿಚ್ಚುತ್ತಾ ಹೋಗುವ ಕೌತುಕ ಒಂದು ಪವಾಡದಷ್ಟೆ ದಿಟ.
ಈ ಪವಾಡ ಪ್ರತೀ ಸ್ವಾತಂತ್ರ್ಯ ದಿನಾಚರಣೆಯ ದಿನ ಘಟಿಸುತ್ತಾ ನನ್ನ ಮೈಮನಗಳನ್ನು ಆವರಿಸಿಕೊಂಡು ಆ ದಿನ ಪೂರ್ತಿ ನನ್ನನ್ನು ಅನ್ಯಮನಸ್ಕನನ್ನಾಗಿಸಿ ಬೇರೆ ಯಾವುದೋ ಲೋಕವಾಸಿಯನ್ನಾಗಿ ಮಾಡುತ್ತದೆ ಎನ್ನುವುದೂ ಅಷ್ಟೇ ಸತ್ಯವಾದ ವಿದ್ಯಮಾನ.