ಯಾದಗಿರಿ.ಅ.9: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ. ಶ್ರೀರಾಮುಲು ಅವರು ತಿಳಿಸಿದರು.
ಯಾದಗಿರಿಯಲ್ಲಿಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಮತ್ತು ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ದವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡಲಾಗುವುದು. 371ಜೆ ಅಡಿಯಲ್ಲಿ ಜಾರಿಗೊಳಿಸಲಾದ ಆದೇಶಗಳ ಅನುಷ್ಠಾನ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪಸಮಿತಿಯು ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಯಶಸ್ಬಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಭಿವೃದ್ಧಿ ಯೋಜನೆ ಹಾಗೂ ಜನಪರ ಆಡಳಿತವನ್ನು ಕೊಂಡೊಯ್ಯುವುದೇ ನಮ್ಮ ಕಾರ್ಯಕ್ರಮಗಳ ಉದ್ದೇಶ.
ಪರಿಶಿಷ್ಟ ಪಂಗಡಗಳ ಸಮಗ್ರ ಕಲ್ಯಾಣಕ್ಕೆ ಈ ಸಾಲಿನಲ್ಲಿ 1435 ಕೋಟಿ ರೂ. ಅನುದಾನವನ್ನು ಮಿಸಲಿಡಲಾಗಿದ್ದು, ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ರಾಜ್ಯದಲ್ಲಿ 404 ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿದ್ದು 36,335 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ 12 ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳಿಗೆ ಒಟ್ಟು 1860 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾಗಿ ನೆರವು ನೀಡಲಾಗುತ್ತಿದೆ. ಪ್ರತಿ ವರ್ಷ 6 ಲಕ್ಷ ವಿದ್ಯಾರ್ಥಿಗಳಿಗೆ 209 ಕೋಟಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ 524 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಸಮುದಾಯದ ಸಬಲೀಕರಣಕ್ಕಾಗಿ ತಲಾ ತಲಾಂತರದಿಂದ ಅರಣ್ಯಗಳಲ್ಲಿ ವಾಸಿಸುತ್ತಿರುವ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಇದುವರೆಗೂ 15,741 ಹಕ್ಕುಪತ್ರಗಳನ್ನು ನೀಡಲಾಗಿದೆ.
ಹಾಗೆಯೇ ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದಲ್ಲಿ 7,477 ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಲು ಕ್ರಮವಹಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 112 ಗುರಿ ಹೊಂದಲಾಗಿದ್ದು, ಶೀಘ್ರವೇ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸಲಾಗುತ್ತಿದೆ.
ಭೂ ಒಡೆತನ ಯೋಜನೆಯಡಿ ರಾಜ್ಯದಲ್ಲಿ 1069 ಪರಿಶಿಷ್ಟ ವರ್ಗಗಳ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 41 ಪರಿಶಿಷ್ಟ ವರ್ಗಗಳ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ಖರೀದಿಸಿ ಮಾಲಿಕ ರನ್ನಾಗಿ ಮಾಡಲಾಗಿದೆ.
ಉದ್ಯಮಶೀಲ ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 1,884 ಫಲಾನುಭವಿಗಳಿಗೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 41 ಫಲಾನುಭವಿಗಳಿಗೆ ಟಗರು ಸಾಕಾಣಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆಗೆ ನೆರವು ನೀಡಲಾಗುತ್ತಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ರಾಜ್ಯದಲ್ಲಿ 3,056 ಮತ್ತು ಯಾದಗಿರಿ ಜಿಲ್ಲೆಯಲ್ಲಿ 263 ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ.
2018-19 ನೇ ಸಾಲಿನಲ್ಲಿ ಸಮೃದ್ಧಿ ಯೋಜನೆಯಡಿ ರಾಜ್ಯದಲ್ಲಿ 447 ಫಲಾನುಭವಿಗಳಿಗೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 14 ಫಲಾನುಭವಿಗಳಿಗೆ ಸ್ವಾವಲಂಭಿಗಳಾಗಿ ಜೀವನ ನಡೆಸಲು ಸಹಾಯಧನ ನೀಡಲಾಗಿದೆ.2019-20 ಹಾಗೂ 2020-21 ನೆ ಸಾಲಿನಲ್ಲಿ ಒಟ್ಟು 8,210 ಅಲೆಮಾರಿ, ಅರೆ ಅಲೆಮಾರಿ ಹಾಗೂ ಅರಣ್ಯಾಧಾರಿತ ಆದಿವಾಸಿ ಸಮುದಾಯದ ಫಲಾನುಭವಿಗಳಿಗೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 109 ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು.
ಇದೀಗ ಭಾರತ ಸಂವಿಧಾನ ಅನುಚ್ಛೇದ 371 J ಅಡಿಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಅಡಿಯಲ್ಲಿ ಹೊರಡಿಸಲಾಗಿರುವ ಆದೇಶಗಳ – ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಗೆ – ಇತ್ತೀಚಿಗೆ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲಾಗಿದ್ದು, ಉಪಸಮಿತಿಯ ಅಧ್ಯಕ್ಷನ ಜವಾಬ್ದಾರಿ ನನಗೆ ನೀಡಲಾಗಿದೆ. ಈ ಭಾಗದ ಜನರಿಗೆ ಸೇವೆ ಸಲ್ಲಿಸಲು ಸಿಕ್ಕಿರುವ ಈ ಅವಕಾಶ ನನ್ನ ಸೌಭಾಗ್ಯ ಎಂದರೆ ತಪ್ಪಾಗಲ್ಲ.
ಈ ಮೂಲಕ ಈ ಭಾಗದ ಜನರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುವುದಾಗಿ ಸಚಿವರು ತಿಳಿದರು.
ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದ ಸಾವಿರ 1500 ಎಕರೆ ಭೂಮಿಯಲ್ಲಿ 1478 ಕೋಟಿ ರೂ ವೆಚ್ಚದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಶ್ವದರ್ಜೆಯ ಮೂಲಭೂತ ಸೌಕರ್ಯವುಳ್ಳ “ಬಲ್ಕ್ ಡ್ರಗ್ ಪಾರ್ಕ್” ಅಭಿವೃದ್ಧಿಪಡಿಸುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಈ ಭಾಗದ ಯುವಕರಿಗೆ ಇದು ಸಾಕಷ್ಟು ಉದ್ಯೋಗ ಅವಕಾಶ ಕಲ್ಪಿಸಲಿದೆ ಎಂದರು.
ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಪಿ.ಎಸ್. ಕಾಂತರಾಜು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಕೆಳಗೇರಿ, ನಾಗಾಜ, ರವೀಂದ್ರ ಬೇತೂರು , ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕವಿತ ವಾರಂಗಲ್, ನಿಗಮದ ವಿವಿಧ ನಿರ್ದೇಶಕರುಗಳು, ನಿಗಮದ ಮಹಾವ್ಯವಸ್ಥಾಪಕರಾದ ರಾಜು, ಉಪನಿರ್ದೇಶಕರಾದ ಸುರೇಶ ರೆಡ್ಡಿ, ರಾಜಶೇಖರ ಶ್ರೀ ಶ್ರೀ ಚೆನ್ನಬಸವ ಮತ್ತಿತರರು ಉಪಸ್ಥಿತರಿದ್ದರು. ಉಪನಿರ್ದೇಶಕರಾದ ಶ್ರೀ ರಾಜಕುಮಾರ್ ಸ್ವಾಗತಿಸಿದರು.