ದೆಹಲಿ ರೌಡಿಗಳ ಆಳ್ವಿಕೆಗೆ ಗ್ಯಾಂಗ್ ಸ್ಟರ್ ಸಿಂಡಿಕೇಟ್..!!
Writing;ಪರಶಿವ ಧನಗೂರು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೌಡಿಗಳ ಗ್ಯಾಂಗ್ ಹಾವಳಿ ಜಾಸ್ತಿಯಾಗಿದ್ದು, ದಶಕಗಳಿಂದಲೂ ಅಂಡರ್ ವರ್ಲ್ಡ್ ಗ್ಯಾಂಗ್ ಸ್ಟರ್ ಗಳು ರಕ್ತದ ಹಸಿವು ಹತ್ತಿಸಿಕೊಂಡು ದೆಹಲಿಯ ಬೀದಿಗಳಲ್ಲಿ ರಕ್ತದ ಕಾಲುವೆ ನಿರ್ಮಾಣ ಮಾಡಿ ಪ್ರತೀಕಾರದ ಹೆಸರಲ್ಲಿ ನಗರವನ್ನು ನರಕಕ ಮಾಡಿಬಿಟ್ಟಿದ್ದಾರೆ! ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ನ್ಯಾಯಾದೀಶರೆದುರು ರೌಡಿಯೊಬ್ಬನನ್ನು ವಿಚಾರಣೆ ನಡೆಸುವಾಗ ಗುಂಡಿಟ್ಟು ಕೊಂದಿರುವ ದಾಖಲೆಯೇ ಬರೆದಿರುವ ನರಹಂತಕ ನಟೋರಿಯಸ್ ದಿಲ್ಲಿಯ ಮಾಫಿಯಾ ಡಾನ್ ಗಳು ಇಡೀ ದೇಶದ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕಿದ್ದಾರೆ! ಹಿಂದೆ ಬೆಂಗಳೂರಿನಲ್ಲಿ ಭೂಗತ ಜಗತ್ತಿನ ಡಾನ್ ಆಗಿದ್ದ ಜಯರಾಜ್ ನ್ಯಾಯಾಲಯದಲ್ಲಿ ಬೆಂಗಳೂರಿನ ಕೋರ್ಟ್ ಒಳಗೇ ನ್ಯಾಯಾಧೀಶರೆದುರು ತಿಗಳರಪೇಟೆ ಪೈಲ್ವಾನ್ ಗೋಪಿಎಂಬುವರನ್ನು ಮಚ್ಚಿನಿಂದ ಕತ್ತರಿಸಿ ಕೊಲೆಯತ್ನದ ಕೇಸಿನಲ್ಲಿ ಸಜಾ ಶಿಕ್ಷೆ ಅನುಭವಿಸಿದ್ದನ್ನು ಕೇಳಿದ್ದ ನಮಗೇ, ಈಗ ದೆಹಲಿಯಲ್ಲಿ ನಡೆದಿರುವ ನ್ಯಾಯಾಧೀಶರೆದುರಿನ ಶೂಟೌಟ್ ಗ್ಯಾಂಗ್ ವಾರ್ ಹತ್ಯೆ ಪ್ರಕರಣ ನ್ಯಾಯಾಲಯದಲ್ಲಿನ ರಕ್ಷಣಾ ವ್ಯವಸ್ಥೆಗೆ ಕಳಂಕ ಮೆತ್ತಿದ್ದು ಭಾರತೀಯ ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಿಯಾಗಿ ಸೆಕ್ಯೂರಿಟಿ ವ್ಯವಸ್ಥೆ ಮಾಡುವುದರ ಜೊತೆಗೆ, ನ್ಯಾಯಾಲಯದ ಬಾಗಿಲಲ್ಲೇ ಬಾಂಬು-ಗನ್ನುಗಳನ್ನು ಬೇಗನೆ ಕಂಡುಹಿಡಿಯಲು ತಾಂತ್ರಿಕ ಸಲಕರಣೆಗಳನ್ನು ಹೊಂದುವ ತುರ್ತಿನ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಮತ್ತು ದೇಶಾದ್ಯಂತ ಪದೇ ಪದೇ ರೌಡಿಗಳು, ಅಪರಾಧಿಗಳು ವಕೀಲರ ವೇಷದಾರಿಗಳಾಗಿ ನ್ಯಾಯಾಲಯದ ಆವರಣ ಪ್ರವೇಶಿಸಿ ದುಷ್ಕೃತ್ಯ ನಡೆಸುತ್ತಿರುವುದು ಆತಂಕದ ವಿಷಯವಾಗಿದೆ! ಏಷ್ಯಾದ ಅತಿದೊಡ್ಡ ಹೈಟೆಕ್ ಜೈಲು, ಸುರಕ್ಷಿತ ಬಂದೀಖಾನೆ ಎನಿಸಿಕೊಂಡಿರುವ ದೆಹಲಿಯ ತಿಹಾರ್ ಜೈಲಿನಲ್ಲಿ ಇಂದು 9ಕ್ಕೂ ಹೆಚ್ಚಿನ ಡ್ರಗ್ಸ್ ಸೇವನೆಯ ಖೈದಿಗಳ ಸಾವು! ಇಂಟರ್ ನೆಟ್ ಕಾಲಿಂಗ್ ಬೆದರಿಕೆ ಕರೆಗಳು! ಜೈಲಿನೊಳಗೇ ರೌಡಿಗಳ ಗ್ಯಾಂಗ್ ವಾರ್ ನಲ್ಲಿ ಎಂಟುಜನ ರೌಡಿಗಳ ಕೊಲೆ! ನಡೆಯುತ್ತಿರುವುದು ಏನನ್ನೂ ತೋರಿಸುತ್ತಿದೆ!?
ದೇಶದ ಜೈಲುಗಳಲ್ಲಿ ಅಕ್ರಮ ಚಟುವಟಿಕೆ
ತಿಹಾರ್ ಜೈಲೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ಹಲವಾರು ಜೈಲುಗಳಲ್ಲಿಯೂ ಇದೇ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬುದು ಸದ್ಯಕ್ಕೆ ಎಲ್ಲರಿಗೂ ಗೊತ್ತಿರುವ ಸತ್ಯ ಸಂಗತಿ. ಅಂಡರ್ ವರ್ಲ್ಡ್ ಆಪರೇಟಿಂಗ್ ಹೌಸ್ ನಂತಾಗಿರುವ ಜೈಲುಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆಯೂ ನಶೆಯ ನೆಟ್ವರ್ಕ್, ಮದ್ಯಪಾನದ ಪಾರ್ಟಿಗಳು, ಲ್ಯಾಪ್ ಟಾಪ್, ಹೈಪ್ಯಾಡುಗಳ ಐಷಾರಾಮಿ ಜೀವನ ಶೈಲಿ ಸೋಶಿಯಲ್ ಮೀಡಿಯಾ ಸಹವಾಸದಿಂದ ಹೊರಜಗತ್ತಿಗೆ ಪರಿಚಯವಾಗುತ್ತಿದೆ! ಸರಳುಗಳ ಸಂದಿಯಲ್ಲೇ ಶತ್ರುಗಳ ಸಾವಿನ ಸ್ಕೆಚ್ಚು ಬರೆಯುತ್ತಾ, ಬಿಸಿನೆಸ್ ಮ್ಯಾನ್ ಗಳನ್ನು ಹೆದರಿಸಿ ಕೋಟ್ಯಂತರ ರೂಪಾಯಿ ದುಡ್ಡು ತರಿಸಿಕೊಂಡು, ನೂರಾರು ಮಂದಿ ಶಾರ್ಪ್ ಶೂಟರ್ ಗಳಿಂದ ಮಾಫಿಯಾ ಜಾಲವನ್ನು ವಿಸ್ತರಣೆ ಮಾಡಿಕೊಂಡು ಮೆರೆಯುತ್ತಿರುವ ರೌಡಿಗಳ ಗ್ಯಾಂಗ್ ಲೀಡರ್ ಗಳನ್ನು ಸರಿದಾರಿಗೆ ತರದಿದ್ದರೇ ಕರ್ನಾಟಕದಲ್ಲೂ ದೆಹಲಿಯಲ್ಲಿ ನಡೆದಿರುವ ಶೂಟೌಟ್, ಗ್ಯಾಂಗ್ ವಾರ್, ಸುಫಾರಿ ಕಿಲ್ಲಿಂಗ್ ಗಳು ಪ್ರಾರಂಭವಾಗುವ ದಿನಗಳು ದೂರವಿಲ್ಲ! ಈಗಾಗಲೇ ಇಲ್ಲಿಯೂ ಕಿಡ್ನಾಪ್ ಮಾಡಿ ಹಫ್ತಾ ವಸೂಲಿ ಮಾಡಿರುವ, ಭೂಗತ ಜಗತ್ತಿನ ಡಾನ್ ಗಳು ಭೂಮಾಫಿಯಾ ನಡೆಸುತ್ತಿರುವ, ಸುಫಾರಿ ಕಿಲ್ಲಿಂಗ್ ಮಾಡಿರುವ ಹಲವಾರು ಪ್ರಕರಣಗಳು ಹಲವಾರು ಠಾಣೆಗಳಲ್ಲಿ ದಾಖಲಾಗಿವೆ. ಬೆಂಗಳೂರಿನಲ್ಲಿ ನಡೆದ ಹಲವಾರು ಕೊಲೆಗಳಲ್ಲಿ ಆರೋಪಿಗಳು ವಕೀಲರ ವೇಶದರಿಸಿ ನ್ಯಾಯಾಲಯಕ್ಕೆ ಹಾಜರಾಗಿರುವ ಪ್ರಕರಣಗಳೂ ಜರುಗಿವೆ! ಕರ್ನಾಟಕದಲ್ಲಿಯೂ ದೆಹಲಿಯ ರೀತಿಯಲ್ಲಿ ಹಲವಾರು ರೌಡಿಗಳ ಗ್ಯಾಂಗ್ ಲೀಡರ್ ಗಳು ಕ್ರೈಂ ಸಿಂಡಿಕೇಟ್ ರಚಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ವಿಚಾರ ಸಿಸಿಬಿ ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಬೆಂಗಳೂರಿನ ಇತ್ತೀಚಿನ ಕ್ರೈಂ ರೇಟ್ ಹಿಸ್ಟರಿ ಯನ್ನು ನೋಡುತ್ತಿದ್ದರೇ ಇಲ್ಲಿಯೂ ರೌಡಿಗಳ ಬೀದೀ ಕಾಳಗ, ರಿವೇಂಜ್ ಕಿಲ್ಲಿಂಗ್ ಹೆಸರಲ್ಲಿ, ಭೂಗತ ಸಾಮ್ರಾಜ್ಯ ವಿಸ್ತರಣೆ ನೆಪದಲ್ಲಿ ನಡೆಯುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ! ನಾವೂ ಕೂಡ ನ್ಯಾಯಾಲಯದ ಸೆಕ್ಯೂರಿಟಿ ಗೇಟುಗಳಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಿ ಕೊಳ್ಳದಿದ್ದರೇ ದೆಹಲಿಯಲ್ಲಿ ನಡೆದಂತೇ ಶೂಟೌಟ್ ಕೊಲೆಗಳು ನ್ಯಾಯಾಧೀಶರೆದುರೇ ನಡೆಯಲೂಬಹುದು! ಏಕೆಂದರೇ ಈ ರೌಡಿಗಳ ಉದ್ದೇಶ ತಮ್ಮ ಶತ್ರುವನ್ನು ಕೈಗೆ ಸಿಕ್ಕಿದ ತಕ್ಷಣ ಎಲ್ಲಾದರೂ ಸರೀ ಹೇಗಾದರೂ ಮಾಡಿ ಸಾಯಿಸಲೇಬೇಕೆಂಬ ಉಮ್ಮೇದಿ ಇರುತ್ತದೆ! ಆದ್ದರಿಂದಲೇ ದೆಹಲಿಯಲ್ಲಿಯೂ ಕೂಡ ಶತ್ರುಗಳ ಕೈಗೆ ಸಿಗದೇ ಜೈಲಿನಲ್ಲಿ ಸೇಫಾಗಿದ್ದ, ಗೂಗಿ ಅಲಿಯಾಸ್ ಜಿತೇಂದರ್ ಎಂಬ ಹರಿಯಾಣ ಮೂಲದ ಕುಖ್ಯಾತ ದೆಹಲಿ ಗ್ಯಾಂಗ್ ಸ್ಟರ್ ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವ ಮಾಹಿತಿ ತಿಳಿದು ಸ್ಕೆಚ್ ಹಾಕಿ ಫೈರ್ ಮಾಡಿ ಕೊಂದಿದ್ದಾರೆ! ಇದರಿಂದಾಗಿ ನಿದ್ರೆ ಬಿಟ್ಟು ತಲೆಕೆಡಿಸಿಕೊಂಡಿರುವ ದೆಹಲಿ ಸ್ಪೆಷಲ್ ಪೊಲೀಸ್ ಶೆಲ್ ಮತ್ತು ಕ್ರೈಂ ಬ್ರಾಂಚ್ ಪೊಲೀಸರು ಈ ದೆಹಲಿಯ ಮೋಸ್ಟ್ ನಟೋರಿಯಸ್ ಅಂಡರ್ ವರ್ಲ್ಡ್ ಡಾನ್ ಗಳ ಹುಟ್ಟಡಗಿಸಲು ತಂತ್ರರೂಪಿಸುತಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಪ್ರತಿ ಕೊಲೆಯಾದಾಗಲೂ ಪೊಲೀಸರಿಂದ ರೌಡಿಗಳ ಎನ್ ಕೌಂಟರ್ ನಡೆಯುತ್ತಿದೆ! ಆದರೂ ಹೆದರದೆ ತಮ್ಮ ಚಾಳಿ ಮುಂದುವರಿಸಿರುವ ಈ ದೆಹಲಿಯ ಗ್ಯಾಂಗ್ ಸ್ಟರ್ ಗಳು ಈಗ ಎರಡು ಪ್ರಬಲ ಕ್ರೈಂ ಸಿಂಡಿಕೇಟ್ ಗಳಾಗಿ ಇಬ್ಭಾಗ ವಾಗಿದ್ದು ಪರಸ್ಪರ ಕೊಲೆಗೆ ಪ್ರತೀಕಾರದ ಹೆಸರಲ್ಲಿ ದೆಹಲಿ ನಗರವನ್ನು ರಕ್ತಮಯ ಮಾಡಲು ಹೊರಟಿದ್ದಾರೆ! ಹತ್ತಕ್ಕೂ ಹೆಚ್ಚಿನ ರೌಡಿ ಗುಂಪುಗಳಿಂದ ಕೂಡಿದ್ದ ಉತ್ತರ ಭಾರತದ ಭೂಗತ ಜಗತ್ತು ದೆಹಲಿಯನ್ನು ಕೇಂದ್ರೀಕರಿಸಿ ಕೊಂಡು ಮಾಫಿಯಾ ನಡೆಸುತ್ತಿತ್ತು. ದೇಶದ ರಾಜಧಾನಿ ದೆಹಲಿಯಲ್ಲಿ ಯಾರು ಮೋಸ್ಟ್ ನಟೋರಿಯಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುತ್ತಾರೋ ಅವರೇ ಉತ್ತರ ಭಾರತದ ಐದಾರು ರಾಜ್ಯದಲ್ಲಿ ಸಕ್ರಿಯವಾಗಿ ತಮ್ಮ ಅಂಡರ್ ವರ್ಲ್ಡ್ ಜಾಲವನ್ನು ಕಟ್ಟಲು ಸಮರ್ಥರಾಗಿರುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಈಗ ಎಲ್ಲಾ ಸಣ್ಣ ಪುಟ್ಟ ರೌಡಿಗಳ ಗ್ಯಾಂಗ್ ಲೀಡರ್ ಗಳು ಒಗ್ಗಟ್ಟಿನಿಂದ ಸಿಂಡಿಕೇಟ್ ರೌಡಿಸಂ ಸುರುಮಾಡಿದ್ದಾರೆ! ಈಗ ಸದ್ಯಕ್ಕೆ ದೆಹಲಿಯ ಬಾಫ್! ಹರಿಯಾಣದ ಬಾಪ್! ಎಂದು ಕರೆದುಕೊಳ್ಳುತ್ತಿದ್ದ ಗ್ಯಾಂಗ್ ಸ್ಟರ್ ಗೂಗಿಯ ಹತ್ಯೆ ಯೊಂದಿಗೆ ಮತ್ತೊಬ್ಬ ಗ್ಯಾಂಗ್ ಸ್ಟರ್ ಕಾಲಾ ಜತೇಡಿ ಅಲಿಯಾಸ್ ಸೋನು ಅಲಿಯಾಸ್ ಸಂದೀಪ್ ಎಂಬ ನಟೋರಿಯಸ್ ರೌಡಿಯ ನೇತೃತ್ವದಲ್ಲಿ ಒಂದು ಕ್ರೈಂ ಸಿಂಡಿಕೇಟ್ ನಿಂತಿದೆ! ಇವರ ಗ್ಯಾಂಗಿನಲ್ಲಿ ದೆಹಲಿಯ ಲಾರೆನ್ಸ್ ವಿಷ್ನೋಯಿ , ಸಂಪತ್ ನೆಹ್ರಾ, ಅಶೋಕ್ ಪ್ರಧಾನ್, ಹಸೀಂ ಬಾಬಾ ಗ್ಯಾಂಗ್ ಗಳು ಸಾತ್ ನೀಡುತ್ತಿವೆ! ಐದಾರು ರಾಜ್ಯದಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಕಾಲಾ ಜತೇರಿ ಮತ್ತು ಪಂಜಾಬ್ ಮೂಲದ ವಿಷ್ನೋಯಿ ಜೊತೆಯಲ್ಲಿ 600ಕ್ಕೂ ಅಧಿಕ ಶಾರ್ಪ್ ಶೂಟರ್ ಗಳು ಕೆಲಸ ಮಾಡುತ್ತಾರೆ ಎಂಬ ವದಂತಿಗಳಿವೆ! ಮತ್ತೊಂದೆಡೆ ದೆಹಲಿಯ ನ್ಯಾಯಾಲಯದೊಳಗೆ ಗ್ಯಾಂಗ್ ಸ್ಟರ್ ಜಿತೇಂದರ್ ಗೂಗೀ ಮಾನ ನನ್ನು ಶೂಟ್ ಮಾಡಿಸಿದ ಟಿಲ್ಲು ತಾಜ್ ಪೋರಿಯಾ ಎಂಬ ಮತ್ತೊಬ್ಬ ಗ್ಯಾಂಗ್ ಸ್ಟರ್ ಹಿಂದೆ ದೆಹಲಿಯ ದಾವೂದ್ ಎಂದು ಕರೆಸಿಕೊಳ್ಳುವ ನಟೋರಿಯಸ್ ಗ್ಯಾಂಗ್ ಸ್ಟರ್ ನೀರಜ್ ಭವಾನಾ ಎಂಬ ಕುಖ್ಯಾತ ಪಾತಕಿ ಇದ್ದಾನೆ! ಆತನ ಕ್ರೈಂ ಸಿಂಡಿಕೇಟ್ ನಲ್ಲಿ ನವೀನ್ ಬಾಲೀ ಗ್ಯಾಂಗ್, ಸುನಿಲ್ ರಾಟೀ ಗ್ಯಾಂಗ್, ನಾಸಿರ್ ಗ್ಯಾಂಗ್, ದೇವಿಂಧರ್ ಬಂಬಿಯಾ ಗ್ಯಾಂಗ್ ಗಳು ನಿಂತಿವೆ! ಒಟ್ಟಾರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ಯಾಂಗ್ ಸ್ಟರ್ ಗೂಗಿ ಕೊಲೆಯ ನಂತರ ಜೈಲಿನೊಳಗಿಂದಲೇ ಸಿಂಡಿಕೇಟ್ ವಾರ್ ಸುರುಮಾಡಿರುವ ಎರಡು ಕ್ರೈಂ ಸಿಂಡಿಕೇಟ್ ಗ್ಯಾಂಗ್ ಗಳು ದೆಹಲಿಯಲ್ಲಿ ಜೈಲಿನ ಒಳಗೇ ಅಥವಾ ಹೊರಗೆ ದೆಹಲಿ ಬೀದಿಗಳಲ್ಲಿ ರಕ್ತದ ಹೊಳೆ ಹರಿಸಲು ಹೊಂಚುಹಾಕಿ ಹವಣಿಸುತ್ತಿರುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಸ್ಟೇಟಸ್ ವಾರ್ ರೀತಿ ಬಿತ್ತರವಾಗುತ್ತಿವೆ! ಇಂಟರ್ ನೆಟ್ ದುನಿಯಾದಲ್ಲಿ ಸೈಲೆಂಟ್ ವಾರ್ ಘೋಷಿಸಿರುವ ಗ್ಯಾಂಗ್ ಸ್ಟರ್ ಗಳು ತಮ್ಮ ತಮ್ಮ ಗ್ಯಾಂಗಿನ ಬಗ್ಗೆ ಗೂಗಿಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಫೇಸ್ಬುಕ್ ಇನ್ಸ್ಟಾಗ್ರಾಂಗಳಲ್ಲಿ ಪರಸ್ಪರ ಧಮ್ಕಿ ನೀಡುತ್ತಾ ನಕಲೀ ಅಕೌಂಟ್ ಓಪನ್ ಮಾಡೀ ಆವಾಜ್ ಬಿಡುತ್ತಾ ಘರ್ಜಿಸುತಿದ್ದಾರೆ! ‘ನಾವು ಸುಮ್ಮನೆ ಕುಳಿತಿದ್ದೇವೆಂದರೇ..ಸತ್ತಿದ್ದೇವೆ ಅಂತ ಅಲ್ಲ ..!
ಶೀಘ್ರದಲ್ಲೇ ಆರಂಭಗೊಳ್ಳಲಿದೆ ಹೊಸ ಕಾಳಗ..!’ ಎಂದು ಗೂಗೀ ಗ್ಯಾಂಗ್ ಅಪ್ಡೇಟ್ ಸ್ಟೇಟಸ್ ಹಾಕುತಿದ್ದರೇ ಅದಕ್ಕೆ ಪ್ರತಿಯಾಗಿ ವಿರೋಧಿ ಬಣದ ಟಿಲ್ಲೂ ಗ್ಯಾಂಗಿನವರು ‘ವೀ ಆರ್ ವೇಟಿಂಗ್ ಫರ್ ಹಂಟಿಂಗ್..!’ ಎಂದು ಟಕ್ಕರ್ ಕೊಡುತ್ತಾ ಗ್ಯಾಂಗ್ ವಾರ್ ಗೆ ಆಹ್ವಾನ ನೀಡುತ್ತಿದ್ದಾರೆ! ದಿಲ್ಲಿ ಈ ಎರಡು ರೌಡಿ ಕ್ರೈಂ ಸಿಂಡಿಕೇಟ್ ಗಳ ಹಾವಳಿಯಿಂದ ರಣರಂಗ ವಾಗುವ ಲಕ್ಷಣಗಳನ್ನರಿತ ದಿಲ್ಲಿ ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಎಲ್ಲಾ ಗ್ಯಾಂಗ್ ಸ್ಟರ್ ಗಳ ಮೇಲೂ ಹದ್ದಿನ ಕಣ್ಣಿಟ್ಟು ಗಮನಿಸುತ್ತಾ, ತಿಹಾರ್ ಜೈಲಿನಿಂದ ವಿರೋಧಿ ಸಿಂಡಿಕೇಟ್ ಬಣದ ರೌಡಿಗಳನ್ನು ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಿಸಿ, ನಗರದಲ್ಲಿ ದೆಹಲಿ ಪೊಲೀಸರು ಹೈ ಅಲರ್ಟ್ ನಲ್ಲಿರುವಂತೆ ಆದೇಶಿಸಿ ದ್ದಾರೆ! ಜೈಲಿನ ಒಳಗಾಗಲೀ ಹೊರಗಾಗಲೀ ಯಾವುದೇ ಗ್ಯಾಂಗ್ ವಾರ್ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆದರೂ
ವಿದೇಶಗಳಲ್ಲೂ ಇರುವ ಎರಡೂ ಕ್ರೈಂ ಸಿಂಡಿಕೇಟ್ ಗ್ಯಾಂಗಿನ ಗ್ಯಾಂಗಿನ ಫಾಲೋವರ್ಸ್ ಗಳು ಎಲ್ಲೊ ಕುಳಿತು ತಮ್ಮ ತಮ್ಮ ಗ್ಯಾಂಗಿನ ಪರವಾಗಿ ಸ್ಟೇಟಸ್ ಅಪ್ಡೇಟ್ ಮಾಡುತ್ತಾ ಕ್ರೈಂ ಜಗತ್ತಿಗೇ ಕಿಚ್ಚು ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ತಿಹಾರ್ ಜೈಲಿನಿಂದ ಮ್ರತ ಗೂಗಿ ಗ್ಯಾಂಗಿನ ಐವರು ಗ್ಯಾಂಗ್ ಸ್ಟರ್ ಗಳು ಜೈಲ್ ಬ್ರೇಕ್ ಮಾಡೀ ಅಥವಾ ಕೋರ್ಟಿಗೆ ಬಂದಾಗ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿ ಪ್ರತೀಕಾರ ತೀರಿಸಿಕೊಳ್ಳುವ ಸನ್ನಾಹದಲ್ಲಿದ್ದಾರೆನ್ನುವ ಗುಲ್ಲೆದ್ದಿದೆ! ದೆಹಲಿಯ ಮಂಡೋಲಿ ಜೈಲು, ತಿಹಾರ್ ಜೈಲು, ರೋಹಿಣಿ ಜೈಲುಗಳಲ್ಲಿ ತಣ್ಣಗೆ ಕುಳಿತು ಇಂಟರ್ ನೆಟ್ ಕಾಲಿಂಗ್ ಮೂಲಕವೇ ಕಿಲ್ಲಿಂಗ್ ನಡೆಸುತ್ತಿರುವ ಗ್ಯಾಂಗ್ ಸ್ಟರ್ ಗಳು ಸಿಸಿಟಿವಿಯ ನೆರಳಲ್ಲೇ ಸಾವಿನ ಸ್ಕ್ರಿಪ್ಟ್ ಬರೆಯುತ್ತಾ, ಕಿಡ್ನಾಪ್, ಧಮ್ಕಿ, ಹಫ್ತಾ ವಸೂಲಿ ಮಾಡುತ್ತಾ ಹಾರ್ಡ್ ಕೋರ್ ಕ್ರಿಮಿನಲ್ ಗಳಾಗಿ ಪರಿವರ್ತಿತ ರಾಗಿದ್ದಾರೆ! ಪ್ರತೀ ಗ್ಯಾಂಗಿನಲ್ಲೂ ಶಾರ್ಪ್ ಶೂಟರ್ ಗಳು ಇರುವುದರಿಂದ, ದೆಹಲಿಯ ಗ್ಯಾಂಗ್ ಸ್ಟರ್ ಗಳಿಗೆ ಗನ್ನುಗಳು ಆಟದ ಸಾಮಾನುಗಳ ರೀತಿ ಸಿಗುತ್ತಿರುವುದರಿಂದ ದೆಹಲಿಯಲ್ಲಿ ರೌಡಿಗಳ ಕಧನ ಕುತೂಹಲ ಕೆರಳಿಸಿ ಸಾಮಾನ್ಯ ಜನರನ್ನು ಕಂಗೆಡಿಸಿದೆ.
ದೆಹಲಿಯಲ್ಲಿ ಕ್ರೈಮ್ ಸಿಂಡಿಕೇಟ್ ಸದ್ದು;
ಈಗ ರಾಜಧಾನಿ ದೆಹಲಿಯಲ್ಲಿ ಕ್ರೈಂ ಸಿಂಡಿಕೇಟ್ ಸದ್ದು ಜೋರಾಗಿಯೇ ಕೇಳಿಸುತ್ತಿದ್ದು ಪಂಜಾಬ್, ಹರಿಯಾಣ, ರಾಜಸ್ಥಾನ, ಯು.ಪಿ(ಉತ್ತರ ಪ್ರದೇಶ) ಗ್ಯಾಂಗ್ ಸ್ಟರ್ ಗಳು ದಿಲ್ಲಿಯ ಮಾಫಿಯಾ ಡಾನ್ ಗಳ ಜೊತೆ ಸೇರಿಕೊಂಡು ಲೂಟಿ, ಹಣಕೊಡದವರ ಹತ್ಯೆ, ಕಿಡ್ನಾಪ್ ಮಾಡಿಸಿಕೊಂಡು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಈ ದೇಶದ ಕಾನೂನು ಸುವ್ಯವಸ್ಥೆ-ಪೊಲೀಸ್ ಬಲವನ್ನು ಅಣಕಿಸುತಿದ್ದಾರೆ! ಕೊಲೆ ಮಾಡಿದ ನಂತರ ರೌಡಿಗಳು ಫೇಸ್ಬುಕ್ ಲೈವ್ ಕೊಡುತ್ತಾ ಪೊಲೀಸರಿಗೆ ಸೆರೆಂಡರ್ ಆಗುತ್ತಿರುವುದೂ, ದೆಹಲಿಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೊಲೀಸರಿಗೆ ಹೊಡೆದು ಪರಾರಿಯಾಗುವುದೂ, ಜೈಲಿನಲ್ಲಿ ಸೇಫಾಗಿ ಕುಳಿತು ತಮ್ಮ ಫೇಸ್ಬುಕ್, ಯೂಟ್ಯೂಬ್ ಗಳಿಗೆ ವೀಡಿಯೋ ಅಪ್ಲೋಡ್ ಮಾಡಿ ಲೈಕ್ಸ್ ಶೇರ್ ಮಾಡಿಸುತ್ತಾ ಸಮಾಜದೆದುರು ಹೀರೋಗಳ ರೀತಿ ಬಿಂಬಿತವಾಗುತ್ತಿರುವುದು
ನಾಚಿಕೆಗೇಡಿನ ಸಂಗತಿಯಾಗಿದೆ. ದೆಹಲಿಯ
ಪೊಲೀಸರಿಗೆ ಫೈರ್ ಮಾಡೀ ಪರಾರಿಯಾಗಿರುವ ಗ್ಯಾಂಗ್ ಸ್ಟರ್ ಗಳ ತಲೆಗೆ ಲಕ್ಷಾಂತರ ರೂಪಾಯಿ ಇನಾಮು ಘೋಷಿಸಿ ಸುಮ್ಮನಿರುವ ಪೊಲೀಸರು ರೌಡಿಗಳು ಸಿಕ್ಕಿದಾಗ ಸುಮ್ಮನೆ ಹಿಡಿದು ತಂದು ತಿಹಾರ್ ಜೈಲಿನಲ್ಲಿಟ್ಟು ಐಷಾರಾಮಿ ಸೌಲಭ್ಯ ಕೊಟ್ಟು ಸೇಫಾಗಿ ಸಾಕುತ್ತಿದ್ದಾರೆ! ಈಗ ನ್ಯಾಯಾಲಯ ದೊಳಗೇ ಕೊಲೆಯಾಗಿರುವ ಗ್ಯಾಂಗ್ ಸ್ಟರ್ ಗೂಗಿ ಮೂರು ಬಾರಿ ಪೊಲೀಸರಿಗೆ ಹೊಡೆದು ಕಸ್ಟಡಿಯಿಂದ ಪರಾರಿಯಾಗಿದ್ದ! ಈಗ ದೆಹಲಿಯ ದಾವೂದ್ ಎಂದು ಕರೆಸಿಕೊಳ್ಳುವ ಡಾನ್ ನೀರಜ್ ಭವಾನಾ ಕೋರ್ಟಿಗೆ ಬಂದಾಗ ಪೊಲೀಸರಿಗೇ ಫೈರಿಂಗ್ ಮಾಡೀ ಆವರ ಬಳಿಯಿದ್ದ ಏಕೆ47 ಬಂದೂಕು ಎತ್ತಿಕೊಂಡು ಪರಾರಿಯಾಗಿದ್ದ!! ಗ್ಯಾಂಗ್ ಸ್ಟರ್ ಕಾಲಾ ಜತೇಡಿ ಕೂಡ ಪೊಲೀಸರು ಕರೆದೊಯ್ಯುವಾಗ ತನ್ನ ಗ್ಯಾಂಗ್ ಕರೆಸಿ ಪೊಲೀಸರಿಗೆ ಹೊಡೆಸಿ ಎಸ್ಕೇಪ್ ಆಗಿ ದುಬೈ ಸೇರಿದ್ದ! ಗ್ಯಾಂಗ್ ಸ್ಟರ್ ಲಾರೆನ್ಸ್ ವಿಷ್ನೋಹಿ ಜೈಲಲ್ಲಿ ಕುಳಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆಗೆ ಸ್ಕೆಚ್ ಹಾಕಿ ಫೈರ್ ಮಾಡಲು ಸುಫಾರಿ ಕಿಲ್ಲರ್ ಗಳನ್ನ ಕಳಿಸಿದ್ದೆ! ಈಗ ಇವರೆಲ್ಲಾ ಹೈ ಸೆಕ್ಯೂರಿಟಿ ಜೈಲಾದ ತಿಹಾರ್ ಜೈಲಿನಿಂದ ದೆಹಲಿಯ ಬಿಲ್ಡರ್ ಗಳಿಗೆ, ಬಿಸಿನೆಸ್ ಮ್ಯಾನ್ ಗಳಿಗೆ ಐಪಿ ಅಡ್ರೆಸ್ ಮರೆಮಾಚಿ ಇಂಟರ್ ನೆಟ್ ಕಾಲಿಂಗ್ ಮಾಡಿ ಕೋಟಿಗಟ್ಟಲೆ ಹಣ ಸುಲಿಗೆ ಮಾಡ್ತಾರೆ, ಹಣ ಕೊಡದಿದ್ದರೇ ಕೊಲ್ಲಿಸ್ತಾರೇ!! ಇದು ಇವತ್ತಿನ ರಾಜಧಾನಿ ಇಂಡಿಯಾದ ಸ್ಥಿತಿ!! ಭಾರತೀಯ ಒಲಿಂಪಿಕ್ಸ್ ವೀರ ಕುಸ್ತಿ ಪಟು ಸುಶೀಲ್ ಕುಮಾರ್ ಕೂಡ ಈಗ ದೆಹಲಿಯ ಟಾಪ್ ಗ್ಯಾಂಗ್ ಸ್ಟರ್ ನೀರಜ್ ಭವಾನಾ ಸುಪರ್ದಿಯಲ್ಲಿದ್ದಾನೆ! ಗ್ಯಾಂಗ್ ಸ್ಟರ್ ಕಾಲಾ ಜತೇಡಿ ಮತ್ತು ವೀಷ್ನೋಹಿ ಸುಶೀಲ್ ಕುಮಾರ್ ಗೆ ಜೈಲಿನಲ್ಲೇ ಕೊಲ್ಲುವ ಧಮ್ಕಿ ಹಾಕಿದ್ದರು! ಅಂದಿನಿಂದಲೂ ತಿಹಾರ್ ಜೈಲಿನಲ್ಲಿ ಗಡಗಡ ನಡುಗುತ್ತಾ ಇದ್ದ ಕುಸ್ತಿ ಪೈಲ್ವಾನ್ ಸುಶೀಲ್ ಕುಮಾರ್ ಗೆ ಗ್ಯಾಂಗ್ ಸ್ಟರ್ ಗೂಗಿ ಹತ್ಯೆಯಿಂದ ಸಮಾಧಾನ ವಾಗಿರವ ಸಾಧ್ಯತೆ ಇದೆ! ಏಕೆಂದರೆ ಗೂಗಿ ಕೂಡ ಸುಶೀಲ್ ಕುಮಾರ್ ವಿರೋಧಿ ಸಿಂಡಿಕೇಟ್ ನಲ್ಲಿದ್ದ! ಗ್ಯಾಂಗ್ ಸ್ಟರ್ ಟಿಲ್ಲೂ ತಾಜ್ ಪೂರಿಯಾ ಮತ್ತು ಜಿತೇಂದ್ರ ಗೂಗಿ ಕಾಲೇಜು ದಿನಗಳಲ್ಲಿ ಸ್ನೇಹಿತರೇ ಆಗಿದ್ದರೂ ಕೂಡ ದೋಸ್ತಿ ಯಿಂದ ದುಷ್ಮನ್ ಆಗುವುದು ಅಂಡರ್ ವರ್ಲ್ಡ್ ನಲ್ಲಿ ಕಾಮನ್. ಇವೊತ್ತಿನ ದಿಲ್ಲಿ ಡಾನ್ ನೀರಜ್ ಭವಾನಾ ಹಿಂದೆ ದೆಹಲಿಯ ಟಾಪ್ ಗ್ಯಾಂಗ್ ಸ್ಟರ್ ನೀತೂ ದಾಬೋಡಿಯಾ ಗರಡಿಯಲ್ಲೆ ಪಳಗಿ ಅವನಿಗೇ ದುಷ್ಮನ್ ಆದ ಕತೆ ದೆಹಲಿಗೇ ತಿಳಿದಿದೆಯಲ್ಲ! ಒಲಿಂಪಿಕ್ಸ್ ಮೆಡಲ್ ವೀರ ಪೈಲ್ವಾನ್ ಸುಶೀಲ್ ಕುಮಾರ್ ಕೂಡ ಹಿಂದೆ ಕಾಲಾ ಜತೇಡಿ, ಲಾರೆನ್ಸ್ ವಿಷ್ನೋಯಿ ಸ್ನೇಹಿತನಾಗಿದ್ದವನೇ! ಈಗ ಗ್ಯಾಂಗ್ ಸ್ಟರ್ ನೀರಜ್ ಭವಾನಾ ನ ಖಾಸಾ ಭಂಟ! ದೆಹಲಿಯ ಸ್ಟೂಡೆಂಟ್ ಪೊಲಿಟಿಕ್ಸ್ ನಿಂದಲೂ ಕೆಲವು ದೆಹಲಿಯ ಗ್ಯಾಂಗ್ ಸ್ಟರ್ ಗಳು ಹುಟ್ಟಿ ಬಂದಿದ್ದಾರೆ! ಕಾಲೇಜು ದಿನಗಳಲ್ಲಿ ಸ್ನೇಹಿತರಾಗಿದ್ದ ಟಿಲ್ಲೂ ಮತ್ತು ಗೂಗಿಯ ದಶಕಗಳ ದೂಷ್ಮನಿಗೆ ರೋಹಿಣಿ ಕೋರ್ಟ್ ಶೂಟೌಟ್ ಅಂತ್ಯಹಾಡಿದೆ. ಹತ್ತು ವರ್ಷಗಳ ಇವರ ಗ್ಯಾಂಗ್ ವಾರ್ ನಲ್ಲಿ ಇದುವರೆಗೂ 50ಕ್ಕೂ ಹೆಚ್ಚಿನ ಯುವಕರು ಬಲಿಯಾಗಿದ್ದರು!! ಸಂಚು, ಕೊಲೆ, ಸೇಡು, ಪ್ರತೀಕಾರ, ಅಂಡರ್ ವರ್ಲ್ಡ್ ನ ಹಿಡಿತ ಸಾಧಿಸಲು ತಂತ್ರ..ನಾನೇ ಗೆಲ್ಲಬೇಕೆನ್ನುವ ಡಾನ್ ಇಮೇಜ್ ನ ಈಗೋ ನ್ಯಾಯಾಧೀಶರನ್ನೂ ಲೆಕ್ಕಿಸದೇ ರಕ್ತಹರಿಸಿದೆ!
ಯಾಮಾರಿದರೇ ತಮ್ಮವರೂ ಪೊಲೀಸರ ಗುಂಡೇಟಿಗೆ ಎನ್ ಕೌಂಟರ್ ಆಗುತ್ತಾರೆ ಎಂಬ ಆರಿವಿದ್ದರೂ ಪ್ರಾಣದ ಹಂಗು ತೊರೆದು ಈ ಮುಳ್ಳಿನ ಕಿರೀಟದ ಅಂಡರ್ ವರ್ಲ್ಡ್ ನ ಅಧಿಪತ್ಯಕ್ಕೆ ಹಪಹಪಿಸುವುದು ಎಂತಾ ವಿಚಿತ್ರವೆನ್ನಿಸುತ್ತದೆ! ಹಿಂದೆ ಇದೆ ರೋಹಿಣಿ ಕೋರ್ಟ್ ಹೋರಗೆ ಸಣ್ಣ ಪುಟ್ಟ ರೌಡಿಗಳ ಗ್ಯಾಂಗ್ ವಾರ್ ಫೈರಿಂಗ್ ನಡೆದಿದೆಯಾದರೂ ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ನ್ಯಾಯಾದೀಶರೆದುರು ರೌಡಿಯೊಬ್ಬನನ್ನು ವಿಚಾರಣೆ ನಡೆಸುವಾಗ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಮಟ್ಟಿನ ಧಿಮಾಕು, ದುರಹಾಂಕಾರ ಕಾನೂನಿನ ಮೇಲೆ ಅಗೌರವ ಇರುವುದರಿಂದಲೋ ಏನೋ ದೆಹಲಿಯ ಗ್ಯಾಂಗ್ ಸ್ಟರ್ ಗಳಿಗೆ ಸೋಷಿಯಲ್ ಮೀಡಿಯಾ ಪೇಜ್ ಗಳಿವೆ! ಕೆಲವರಿಗೆ ಸಾವಿರಾರು, ಡಾನ್ಗಳಿಗೆ ಲಕ್ಷಾಂತರ ಜನ ಫಾಲೋವರ್ಸ್ ಗಳಿದ್ದಾರೆ! ಯೂಟ್ಯೂಬ್ ನಲ್ಲಿ ದೆಹಲಿಯ ರೌಡಿಗಳನ್ನು ಸ್ತುತಿಸಿ ಹಾಡಿಹೊಗಳುವ, ಜಿಂದಾಬಾದ್ ಕೂಗುವ, ರ್ಯಾಫ್ ಸಾಂಗ್ಸ್, ಮ್ಯೂಸಿಕಲ್ ಹಾಡುಗಳನ್ನು ವೀಡಿಯೋ-ಫೋಟೋಗಳೊಂದಿಗೆ ಜೋಡಿಸಿ ಹರಿಯಬಿಡಲಾಗಿದೆ! ಜೈಲಿನಲ್ಲಿ ಕುಳಿತೇ ರೌಡಿಗಳು ಟಿಕ್ ಟಾಕ್ ರೀತಿಯ ವೀಡಿಯೋ ಚಿತ್ರೀಕರಿಸಿ ತಮ್ಮ ಸೋಷಿಯಲ್ ಮೀಡಿಯಾ ನೆಟ್ವರ್ಕ್ ಗಳ ಜೊತೆಗೆ ಹಂಚಿಕೊಂಡು ಛೇಲಾಗಳನ್ನು ಹುಟ್ಟುಹಾಕುತ್ತಿದ್ದಾರೆ! ಇತ್ತೀಚೆಗೆ ಕರ್ನಾಟಕ ದಲ್ಲೂ ಕೆಲವು ರೌಡಿಗಳ, ಗ್ಯಾಂಗ್ ಲೀಡರ್ ಗಳ ಸೋಷಿಯಲ್ ಮೀಡಿಯಾ ಪೇಜ್ ಗಳು ಆಕ್ಟಿವ್ ಆಗಿವೆ.
ಗ್ರಾಫಿಕ್ಸ್-ಸಾಂಗ್ಸ್ ನಲ್ಲಿ ಇಲ್ಲಿನ ರೌಡಿಗಳೂ ಮಿಂಚುತಿದ್ದಾರೆ! ಹದ್ದಿನ ಕಣ್ಣಿರುವ ಸೈಬರ್ ಪೋಲೀಸರು ಮಾತ್ರ ತಮಗೇನು ಸಂಬಂಧವಿಲ್ಲದಂತೆ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ! ಇಂತಹ ಕೀಳು ಸಂಸ್ಕೃತಿಯನ್ನು ಬೆಳೆಸುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಯುವಕರೇ ಅಡ್ಡಿಯಾಗುವುದನ್ನು ನೋಡುತ್ತಿದ್ದೇವೆ! ಮತ್ತು ಯುವಜನರು ಹೆಚ್ಚಾಗಿ ಕ್ರೈಂ ಜಗತ್ತಿನ ಕಡೆ ರೌಡಿಸಂ ಗೀಳಿಗೆ ಬಲಿಯಾಗಿ ಬೀದಿ ಹೆಣವಾಗುವುದನ್ನು ನೋಡುತ್ತಿದ್ದೇವೆ. ಇತ್ತೀಚೆಗೆ ಸಿನಿಮಾಗಳೂ ರೌಡಿಗಳನ್ನು ವೈಭವೀಕರಿಸಿ, ಹಣ-ಹೆಸರು ಮಾಡಲು ಇದೇ ತತ್ ಕ್ಷಣದ ಸುಲಭ ಮಾರ್ಗವೆಂಬಂತೆ ಯುವಕರನ್ನು ಮತ್ತಷ್ಟು ದಾರಿತಪ್ಪಿಸುತ್ತಿವೆ. ನಾನೇ ಡಾನ್ ಎಂದು ಮೆರೆದವರೆಲ್ಲಾ ಏನಾದರೂ ಎಂಬುದನ್ನು ಇತಿಹಾಸದ ಪುಟಗಳು ಪಾಠ ಹೇಳಿತ್ತಿವೆ. ಆದರೇ ದೇಶಕ್ಕೆ ಮಾದರಿ ಯಾಗಬೇಕಿದ್ದ ಭಾರತದ ರಾಜಧಾನಿ ದೆಹಲಿಯೇ ಹೀಗೇ ಭೂಗತ ಜಗತ್ತಿನ ಮಾಫಿಯಾ ಡಾನ್ ಗಳ, ಗ್ಯಾಂಗ್ ಸ್ಟರ್ ಗಳ ಕೊಂಪೆಯಂತಾದರೇ, ಸಾಮಾನ್ಯ ಜನರು ರೌಡಿಗಳ ಅಕ್ರಮ ಪಿಸ್ತೂಲುಗಳ ಸದ್ಧಿಗೆ ಬೆದರಿ ಮನೆಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ನ್ಯಾಯಾಲಯದಲ್ಲಿ ನ್ಯಾಯಾಧೀಶರೆದುರೇ ರೌಡಿಗಳು ಮತ್ತೊಬ್ಬ ರೌಡಿ ಶೀಟರ್ ನನ್ನು ಗುಂಡಿಕ್ಕಿ ಸಾಯಿಸಿ ವಿಕ್ರತಿ ಮೆರೆಯುತ್ತಾರೆಂದರೇ.. ಕಾನೂನಿನ ಬಗ್ಗೆ .. ನ್ಯಾಯಾಲಯದ ಬಗ್ಗೆ ಗೌರವ.. ವಿಶ್ವಾಸ ಉಳಿಯುವುದೇ??