ಜೈನ ಜಿನಾಲಯಗಳು ದೇವಾಲಯಗಳಾದದ್ದು. . .
ಹಿಂದಿನ ಸಂಚಿಕೆಯಿಂದ
ಕೊಪ್ಪಳ ಜಿಲ್ಲೆಯಲ್ಲಿ ದೇವಾಲಯಗಳಾಗಿ ಪರಿವರ್ತನೆ ಹೊಂದಿದ ಜಿನಾಲಯಗಳು
ಕೊಪ್ಪಳವು ಪ್ರಾಚೀನ ಕಾಲದಲ್ಲಿ ಮಹಾಕೊಪಣಾಚಲವಾಗಿದ್ದು, ಇದು ಜೈನರ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿದ್ದಿತು. ಇಲ್ಲಿ ಅನೇಕ ಬಸದಿಗಳು ನೂರಾರು ಶಾಸನಗಳು ಕಂಡುಬಂದಿವೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಕೊಪ್ಪಳದಲ್ಲಿ ೭೭೨ ಜೈನ ಬಸದಿಗಳಿದ್ದವೆಂಬುದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ ಶಾಸನಗಳಲ್ಲಿ ಜಿನಬಸದಿಗಳ ಉಲ್ಲೇಖವಿದ್ದು ಅವುಗಳಲ್ಲಿ ಜಯಧೀರ ಜಿನಾಲಯ, ಪುಷ್ಪದಂತ ತೀರ್ಥಂಕರ ಸೌಧ, ಕುಶ ಜಿನಾಲಯ, ಸಾಂತಲದೇವಿ, ಚಂದ್ರನಾಥ, ನೇಮಿನಾಥ, ಶಾಂತಿನಾಥ, ಕಲ್ಯಾಣಕೀರ್ತಿ, ಸಿಂಹನಂದಿ, ತಿಮ್ಮಂಬರಸಿ, ತೆಂಕಲರಸಿ ಹಾಗೂ ತೀರ್ಥದ ಬಸದಿಗಳು ಕೊಪ್ಪಳದಲ್ಲಿ ಇದ್ದವೆಂಬುದು ದಾಖಲಾದ ಸಂಗತಿ. ಅಲ್ಲದೆ ಇಂದಿಗೂ ಜೀವಂತವಾಗಿರುವ ಪಾರ್ಶ್ವನಾಥ ಬಸದಿಯು ಜೈನಧರ್ಮದ ಪ್ರಾಚೀನತೆಯನ್ನು ಮೈದುಂಬಿಕೊಂಡು ಮುನ್ನಡೆದಿರುವುದು ಗಮನಾರ್ಹವಾದುದು. ಕೊಪ್ಪಳದ ಅನೇಕ ಬಸದಿಗಳು ಹಾಳಾಗಿದ್ದು ಮತ್ತೆ ಕೆಲವು ದೇವಾಲಯಗಳಾಗಿ ಮಾರ್ಪಾಟು ಹೊಂದಿರುವುದನ್ನು ಕಾಣಬಹುದು. ಅವುಗಳಲ್ಲಿ ವೆಂಕಟರಮಣ, ಕೃಷ್ಣ, ಗವಿಮಠ, ಅಮೃತೇಶ್ವರ ದೇವಾಲಯಗಳು ಮೂಲತಃ ಜಿನಾಲಯಗಳೆಂಬುದನ್ನು ದೇವಾಲಯಗಳಲ್ಲಿರುವ ಜೈನ ಕುರುಹುಗಳಿಂದ ಸ್ಪಷ್ಟವಾಗುತ್ತದೆ.
೧. ವೆಂಕಟರಮಣಸ್ವಾಮಿ ದೇವಾಲಯ: ಈ ದೇವಾಲಯವನ್ನು ಶಾಸನದಲ್ಲಿ ಚನ್ನಕೇಶವ ಎಂದು ಕರೆಯಲಾಗಿದೆ. ಬ್ರಾಹ್ಮಣ ಕೇರಿಯಲ್ಲಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ತೆರೆದ ಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಎರಡು ಅಡಿ ಎತ್ತರದ ಜೈನ ಸಿಂಹ ಪೀಠವಿದ್ದು, ಇದರ ಮೇಲೆ ವಿಜಯನಗರ ಕಾಲದಲ್ಲಿ ಪ್ರತಿಷ್ಟಾಪಿಸಲಾದ ವೆಂಕಟರಮಣ ಅಥವಾ ಶಾಸನದಲ್ಲಿ ಹೇಳಲಾದ ಚನ್ನಕೇಶವನ ಮೂರ್ತಿಶಿಲ್ಪವನ್ನು ಪ್ರತಿಷ್ಟಾಪಿಸಿದ್ದಾರೆ. ಇಲ್ಲಿನ ಸಿಂಹಪೀಠ ಮತ್ತು ಹೊರಬದಿಯ ಜೈನ ಅವಶೇಷಗಳ ಹಿನ್ನೆಲೆಯಲ್ಲಿ ಇದು ಜೈನ ಬಸದಿಯಾಗಿತ್ತೆಂಬುದು ದೃಢವಾಗುತ್ತದೆ. ಅಲ್ಲದೆ ಈ ಜಿನಾಲಯವನ್ನು ಕ್ರಿ.ಶ. ೧೫೨೧ರ ಹೊತ್ತಿಗೆ ದೇವಾಲಯವನ್ನಾಗಿ ಪರಿವರ್ತಿಸಲಾಗಿತ್ತೆಂಬುದು ಸ್ಪಷ್ಟವಾಗುತ್ತದೆ.೩ ಕೃಷ್ಣದೇವರಾಯನ ಕಾಲದ ಈ ಶಾಸನದಲ್ಲಿ ಕೊಪಣದ ಚನ್ನಕೇಶವ ದೇವರ ಅಮೃತಪಡಿ ಅಂಗರಂಗವೈಭೋಗ ಮಾಸೋಚ್ಛಾಹ ಮುಂತಾದ ಸೇವೆಗೆ ಹಿರಿಯ ಸಿಂದೋಗಿ ಗ್ರಾಮವನ್ನು ಭಂಡಾರದ ತಿಮ್ಮಪ್ಪಯ್ಯನವರು ಸಮರ್ಪಿಸಿದೆವೆಂದು ಹೇಳಿದೆ. ಅಂದರೆ ಈ ಹೊತ್ತಿಗಾಗಲೆ ಜಿನಾಲಯವು ಚನ್ನಕೇಶವ ದೇವಾಲಯವಾಗಿತ್ತೆಂಬುದು ದೃಢವಾಗುತ್ತದೆ. ಇದರಿಂದ ಕೊಪ್ಪಳದಲ್ಲಿ ಜೈನಧರ್ಮವು ವಿಜಯನಗರ ಕಾಲಕ್ಕೆ ಅವನತಿ ಹೊಂದಿದ್ದು, ಜಿನಾಲಯಗಳನ್ನು ದೇವಾಲಯಗಳನ್ನಾಗಿ ಪರಿವರ್ತಿಸುವ ಪರಿಪಾಠ ಈ ಹೊತ್ತಿಗಾಗಲೇ ಆರಂಭವಾಗಿದ್ದುದನ್ನು ಕಾಣಬಹುದು.
೨. ಬಾಲಕೃಷ್ಣ ದೇವಾಲಯ: ಕೊಪ್ಪಳದ ಡಣಕನಬಾವಿಯ ದಂಡೆಯ ಮೇಲಿರುವ ಪ್ರಾಚೀನ ದೇವಾಲಯವಿದು. ಈ ದೇವಾಲಯವು ಗರ್ಭಗೃಹ ಮತ್ತು ಅಂತರಾಳಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಒಂದೂವರೆ ಅಡಿ ಎತ್ತರದ ಜೈನ ಸಿಂಹಪೀಠದ ಮೇಲೆ ಎರಡು ಅಡಿ ಎತ್ತರದ ಕಾಳಿಂಗಮರ್ಧನ ಕೃಷ್ಣನ ಶಿಲ್ಪವನ್ನು ಪ್ರತಿಸ್ಟಾಪಿಸಲಾಗಿದ್ದಿತು. ಆದರೆ ಈ ಶಿಲ್ಪವು ಸದ್ಯ ಕನ್ನಡ ವಿಶ್ವವಿದ್ಯಾಲಯದ ವಸ್ತಸಂಗ್ರಹಾಲಯದಲ್ಲಿದೆ. ಈ ದೇವಾಲಯವು ಕೂಡ ಇಲ್ಲಿನ ಶಿಲ್ಪ ಮತ್ತಿತರ ಲಕ್ಷಣಗಳಿಂದ ವಿಜಯನಗರ ಕಾಲಕ್ಕೆ ಜಿನಾಲಯವಾಗಿದ್ದ ಬಸದಿಯನ್ನು ಕೃಷ್ಣ ದೇವಾಲಯವನ್ನಾಗಿ ಪರಿವರ್ತಿಸಿರುವುದನ್ನು ಕಾಣಬಹುದು.
೩. ಗವಿಮಠ: ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಗವಿಮಠವೂ ಒಂದು. ಈ ಪ್ರದೇಶದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವನ್ನು ಈ ಮಠವು ನಿರ್ವಹಿಸುತ್ತಾ ಬಂದಿದೆ. ಈ ಮಠದ ಪರಿಸರವು ಮೂಲತಃ ಬೆಟ್ಟವಾಗಿದ್ದು, ಇದು ಪ್ರಾಚೀನ ನೆಲೆಯಾಗಿದೆ. ನೈಸರ್ಗಿಕ ಗುಹೆಗಳನ್ನೂ ಇದು ಒಳಗೊಂಡಿದೆ. ಅಲ್ಲದೆ ಇದು ಮೌರ್ಯ ಅಶೋಕ ಚಕ್ರವರ್ತಿಯ ಕಾಲಕ್ಕೆ ಬೌದ್ದ ನೆಲೆಯಾಗಿದ್ದುದೂ ಇಲ್ಲಿನ ಬ್ರಾಹ್ಮಿಲಿಪಿಯ ಬಂಡೆಗಲ್ಲು ಶಾಸನದಿಂದ ಸ್ಪಷ್ಟವಾಗುತ್ತದೆ. ಅದರೆ ೯ನೆಯ ಶತಮಾನದ ಹೊತ್ತಿಗೆ ಈ ಭಾಗದ ಪ್ರಮುಖ ಜೈನ ನೆಲೆಯಾಗಿ ಇದು ಹೊರಹೊಮ್ಮಿದ್ದಿತು. ಇದು ಕ್ರಿ.ಶ. ೧೨ನೆಯ ಶತಮಾನದವರೆಗೂ ಜೈನರ ಬಹುದೊಡ್ಡ ಆರಾಧನಾ ಕೇಂದ್ರವೂ ಆಗಿದ್ದಿತು. ಇದಕ್ಕೆ ಇಲ್ಲಿನ ಶಿಲಾಶಾಸನ, ಮೂರ್ತಿಶಿಲ್ಪ ಮತ್ತಿತರ ಅವಶೇಷಗಳು ಸಾಕ್ಷ್ಯಗಳಾಗಿವೆ. ಕ್ರಿ.ಶ. ೧೭-೧೮ನೆಯ ಶತಮಾನದ ಹೊತ್ತಿಗೆ ಜೈನಧರ್ಮ ಸಂಪೂರ್ಣ ಅವನತಿಯನ್ನು ಹೊಂದಿದ್ದುದರಿಂದ ಜೈನ ಕೇಂದ್ರವಾಗಿದ್ದ ಈ ಪರಿಸರವನ್ನು ವೀರಶೈವ ಮಠವನ್ನಾಗಿ ಪರಿವರ್ತಿಸಲಾಗಿದೆ. ಗವಮಠದ ಶಿಲಾಶಾಸನವೊಂದರಲ್ಲಿ ಹಂಪಯ್ಯನೆಂಬ ವ್ಯಕ್ತಿ ಗವಿಮಠದ ಗುಹೆಯ ಮುಂದಿನ ಭಾಗವನ್ನು ಕಟ್ಟಿಸಿಕೊಟ್ಟನೆಂಬುದಾಗಿ ಹೇಳುತ್ತದೆ. ಈ ಮಠದ ಮೂಲಕರ್ತೃಗಳಾದ ರುದ್ರಮುನಿ ಶಿವಾಚಾರ್ಯರು ಮಠವನ್ನು ಸ್ಥಾಪಿಸದರೆಂಬುದಾಗಿಯೂ ತಿಳಿದುಬರುತ್ತದೆ. ಈ ಮೇಲಿನ ಅವಶೇಷಗಳ ಹಿನ್ನೆಲೆಯಲ್ಲಿ ಗವಿಮಠವು ಮೂಲತಃ ಬೌದ್ದ ಧರ್ಮದ ನೆಲೆಯಾಗಿದ್ದು, ಕ್ರಿ.ಶ. ೯ನೆಯ ಶತಮಾನದ ಹೊತ್ತಿಗೆ ಜೈನರ ನೆಲೆವೀಡಾಗಿ ವಿಜಯನಗರೋತ್ತರ ಕಾಲಕ್ಕೆ ವೀರಶೈವ ಮಠವಾಗಿ ರೂಪಾಂತರ ಹೊಂದಿದ್ದುದು ಗಮನಾರ್ಹ ಸಂಗತಿಯಾಗಿದೆ.
೪. ಅಮೃತೇಶ್ವರ ಗುಹಾಲಯ: ಗವಿಮಠದ ನೈರುತ್ಯಕ್ಕೆ ಅದೇ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಸ್ವಾಭಾವಿಕ ಗುಹೆಯುಳ್ಳ ಆಲಯವೇ ಅಮೃತೇಶ್ವರ ಗುಹಾಲಯ. ಇದು ಕೂಡ ಬೌದ್ದಧರ್ಮದ ಕೇಂದ್ರವಾಗಿದ್ದು, ನಂತರ ಕ್ರಿ.ಶ. ೯-೧೦ನೆಯ ಶತಮಾನದಲ್ಲಿ ಜೈನ ಗುಹಾಲಯವಾಯಿತೆಂಬುದು, ಇದರ ಮುಂಬದಿಯ ವಿಶಾಲವಾದ ಬಂಡೆಗಲ್ಲುಗಳ ಮೇಲಿನ ಪರ್ಯಂಕಾಸನದಲ್ಲಿ ಕುಳಿತ ಒಂದು ತೀರ್ಥಂಕರ ಹಾಗೂ ಸಮಭಂಗಿಯಲ್ಲಿ ನಿಂತ ಎರಡು ತೀರ್ಥಂಕರರ ಉಬ್ಬುಶಿಲ್ಪಗಳಿಂದ ಸ್ಪಷ್ಟವಾಗುತ್ತದೆ. ಸದ್ಯ ಗುಹಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಗಿದ್ದು, ಇದೂ ಕೂಡ ೧೭-೧೮ನೆಯ ಶತಮಾನದ ನಂತರದ್ದೆಂಬುದು ಗೊತ್ತಾಗುತ್ತದೆ.
೫. ಯಲಬುರ್ಗಾದ ಸಂಗಮೇಶ್ವರ ದೇವಾಲಯ: ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ಈ ದೇವಾಲಯವು ಶಾಸನದ ಹಿನ್ನೆಲೆಯಲ್ಲಿ ಹೇಳುವುದಾದರೆ ಪಾರ್ಶ್ವನಾಥ ಜಿನಾಲಯವಾಗಿದ್ದಿತು. ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿರುವ ಈ ದೇವಾಲಯದಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಗಿದೆ. ಗರ್ಭಗೃಹದ ಬಾಗಿಲುವಾಡದಲ್ಲಿ ಅರೆಗಂಬ ಮತ್ತು ಪೂರ್ಣಕುಂಭಗಳ ಅಲಂಕರಣೆಗಳಿವೆ. ಲಲಾಟದಲ್ಲಿ ಮೂಲತಃ ಜಿನಬಿಂಬವಿದ್ದು, ಜಿನಬಿಂಬವನ್ನು ಶಿವಲಿಂಗವನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಪಾರ್ಶ್ವನಾಥ ಬಸದಿಯು ಕಾಲಾನಂತರದಲ್ಲಿ ಶೈವ ದೇವಾಲಯವಾಗಿ ಮಾರ್ಪಾಟಾಗಿದೆ.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿರುವ ಶಿಲಾಶಾಸನ, ಜಿನಾಲಯ, ತೀರ್ಥಂಕರ, ಯಕ್ಷ, ಯಕ್ಷಿ, ನಿಸಿದಿಕಲ್ಲು ಮೊದಲಾದ ಅವಶೇಷಗಳು ಹಾಗೂ ಈ ಭಾಗದ ರಾಜಕೀಯ ಚರಿತ್ರೆಯನ್ನು ಆಧರಿಸಿ ಹೇಳುವುದಾದರೆ, ಜೈನಧರ್ಮವು ಕ್ರಿ.ಶ.೯-೧೦ನೆಯ ಶತಮಾನಗಳವರೆಗೆ ಈ ಎರಡೂ ಜಿಲ್ಲೆಗಳಲ್ಲಿ ಉಚ್ರಾಯ ಸ್ಥಿತಿಯಲ್ಲಿತ್ತೆಂಬುದು ಸ್ಪಷ್ಟವಾಗುತ್ತದೆ. ಆದರೆ ಕ್ರಿಶ. ೧೩ನೆಯ ಶತಮಾನದಲ್ಲಿ ಈ ಪರಿಸರವನ್ನು ಆಳಿದ ಕುಮ್ಮಟದ ಆರಸ ಅವಧಿಯಲ್ಲಿ ಜೈನಧರ್ಮವು ಅವನತಿಯತ್ತ ಸಾಗಿದ್ದುದನ್ನು ಶಾಸನ ಮತ್ತು ಸಾಹಿತ್ಯ ಕೃತಿಗಳು ದಾಖಲಿಸುತ್ತವೆ. ಇದಕ್ಕೆ ಯಲಬುರ್ಗಾದ ಪಾರ್ಶ್ವನಾಥ ತೀರ್ಥಂಕರನ ಪೀಠದ ಮೇಲಿನ ಶಾಸನವು ಹೇಳುವ ಮಾಹಿತಿಯನ್ನು ಗಮನಿಸಬೇಕಾಗಿದೆ.
ಶಾಸನದಲ್ಲಿ, “ಕುಂತಣ ದೇಶಕ್ಕುನ್ನತನಾಚಾರ್ಯ ವರ್ಯ ರಾಯಾಚಾರ್ಯ್ಯಂ|| ಎರಂಬರಗೆಯ ಧರ್ಮ್ಮಮಂ ಮುಮ್ಮಡಿಸಿಂಗನ ಬಾಧೆಯಿಂದ ಕೆಟ್ಟಡೆ ಮತ್ತಂ ವರಮುನಿ ಬಾಳೆಂದುದ್ದರಿಸಿದನಾಚಾರ್ಯರಾಯನಗಳಿತ ಮಹಿಮಂ|| ಸ್ವಸ್ತಿಶ್ರೀಮೂಲಸಂಘ ದೇಸೀಯಗಣ ಪುಸ್ತಕಗಚ್ಚ ಕುಂದಕುಂದಾನ್ವಯ ರೋಣಸಂಬಂದ ಎರಂಬರಗೆಯ ನಗರ ಜಿನಾಲಯಕ್ಕೆ ಜೀಣ್ನೋದ್ಧಾರವಾಗಿ ಮಿಂಡಗುದಲಿಯ ಕಕೇತಿಸೆಟ್ಟಿಯರ ಮಗ ಮಲ್ಲಿಸೆಟ್ಟಿಯರು ಶ್ರೀಪಾರ್ಶ್ವದೇವರ ಮಾಡಿಸಿದ” ಎಂದಿದೆ. ರಾಯಾಚಾರ್ಯನೆಂಬುವನು ಮುಮ್ಮಡಿ ಸಿಂಗನ ಬಾಧೆಯಿಂದ ಎರಂಬರಿಗೆಯಲ್ಲಿ ಹಾಳಾದ ಜೈನಧರ್ಮವನ್ನು ಪುನಃ ಸ್ಥಾಪಿಸಿದನೆಂಬುದಾಗಿ ಈ ಶಾಸನದಿಂದ ತಿಳಿಯುತ್ತದೆ. ಅಂದರೆ ಕುಮ್ಮಟದ ಮುಮ್ಮಡಿಸಿಂಗನು ಜೈನಧರ್ಮದ ವಿರೋಧಿಯಾಗಿದ್ದನೆಂಬುದು ಶಾಸನದಿಂದ ತಿಳಿಯುತ್ತದೆ. ಹಾಗೆಯೇ ಇವನ ಮೊಮ್ಮಗನಾದ ಕುಮಾರರಾಮನೂ ಕುಮ್ಮಟದಲ್ಲಿ ನೆಲಸಿದ್ದ ಜೈನರನ್ನು ಹೊರಹಾಕಿದನೆಂಬ ಸಂಗತಿ ಕಾವ್ಯಗಳಲ್ಲಿ ವ್ಯಕ್ತವಾಗಿದೆ. ಹೊಸಕುಮಾರರಾಮನ ಸಾಂಗತ್ಯದಲ್ಲಿ ದಾಖಲಾದಂತೆ, ಕುಮಾರರಾಮನು ಮೊದಲಬಾರಿಗೆ ಬಂದಾಗ, “ಜೈನರು ಕುಮ್ಮಟದುರ್ಗದಿಂದಲಿ ಮತ್ತೆ ಚೆನ್ನರಾಮನ ಬಳಿಗೈದಿ ಚೆನ್ನಾಗಿ ಉಲುಪಿಯ ತಂದು ಕಾಣಿಕೆಯಿಟ್ಟು ಇನ್ನು ರಾಮನ ಕರೆದೊಯಿದು ನಿಲ್ಲದೆ ಕಾಲ್ಮೊಗದೊಳೆದು ಗದ್ದುಗೆ ಹಾಕಿ ನಿಲ್ಲದೆ ಬಾಳೆಯೆಲೆಗಳನು ಹಾಸಿಯೆ ಅಲ್ಲಿ ಜೈನರು ಭೋಜನಗಳ ಕರಿದ ಗಾರಿಗೆ ಮಂಡಗೆ ಕ್ಷೀರ ಸಕ್ಕರೆ ಹುರಿದ ಭಕ್ಷಗಳ ಅನ್ನಗಳ ಪರಿಪರಿ ಹಪ್ಪಳ ಸಂಡಿಗುಪ್ಪಿನಕಾಯಿ ಇರದೆ ಭೋಜನವ ಮಾಡಿದರು” ಎಂದು ಕುಮಾರರಾಮನಿಗೆ ಊಟಕ್ಕೆ ನೀಡಿದ ಬಗೆಯನ್ನು ತಿಳಿಸುತ್ತದೆ. ಅಲ್ಲದೆ ಊಟವಾದ ಬಳಿಕ ಕುಮಾರರಾಮನು ಹೊರಟು ಬೆಟ್ಟವನ್ನು ಇಳಿಯುತ್ತಾನೆ. ಆದರೆ ಅವನು ಊಟಮಾಡಿದ ಜಾಗದಲ್ಲಿ ತನ್ನ ಕಂಜರ ಬಾಕನ್ನು ಮರೆತು ಬಂದಿರುತ್ತಾನೆ. ಅದನ್ನು ತರಲು ತನ್ನ ಸೈನಿಕನನ್ನು ಕಳುಹಿಸುತ್ತಾನೆ. ಸೈನಿಕನು ಕುಮಾರರಾಮ ಊಟ ಮಾಡಿದ ಜಾಗವನ್ನು ಜೈನರು ಸಾರಣೆ ಮಾಡುತ್ತಿದ್ದುದನ್ನು ಕಾಣುತ್ತಾನೆ. ಅದನ್ನು ಕುಮಾರರಾಮನಿಗೆ ಹೇಳುತ್ತಾ, ತೊಂಡ ಜೈನರು ನೋಡೆನಲು ಉಂಡ ಠಾವನುಯೆತಿ ಸಾರಣೆ ಮಾಡಿಯೆ ಭಂಡರ ನೋಡಿಯೆಂದೆನಲು ಕೇಳಿದ ಕೋಪವ ತಾಳಿದ ರಾಮಯ್ಯ ಭಾಳಾಕ್ಷ ಕೊಟ್ಟನೆಂದೆನುತ ಕೇಳಿ ಕುಮ್ಮಟದೊಳಗಿದ್ದ ಬಸ್ತಿಗಳಿಗೆ ಸೀಳಿಸಿ ಕುರಿಕೋಳಿಗಳನು ತಡೆಯದೆ ಕುರಿಕೋಣ ಕಡಿದು ಬಲಿಯನಿಕ್ಕಿ ಸುಡಿಸಿದ ಕುರಿಕೋಳಿಗಳನು ತಡೆಯದೆ ಖೂಳರಿವರೆಂದು ಬಿಡದಾಗ ಹೊರಡೆ ಕುಮ್ಮಟವ ಬಿಟ್ಟರು ಕುಮ್ಮಟವನು ಕೊಪ್ಪಳಕಾಗ” ಎಂಬ ಸಂಗತಿಗಳು ಇಲ್ಲಿನ ಪದ್ಯಗಳಿಂದ ವ್ಯಕ್ತವಾಗುತ್ತದೆ.
ಇದನ್ನು ಕೈಫಿಯತ್ತು ಮೊದಲಾದವುಗಳಲ್ಲೂ ಕಾಣಬಹುದು. ಇದರಿಂದ ಮುಮ್ಮಡಿ ಸಿಂಗನ ಕಾಲದಲ್ಲಿ ಜೈನಧರ್ಮವು ಅವನತಿಯ ಹಾದಿಯನ್ನು ಹಿಡಿದರೆ ಕುಮಾರರಾಮನ ಕಾಲಕ್ಕೆ ಜೈನಧರ್ಮವು ಬೇರೆ ಬೇರೆ ಕಡೆಗೆ ಸ್ಥಳಾಂತರ ಹೊಂದುವ ಪ್ರಕ್ರಿಯೆ ಆರಂಭವಾಗಿದ್ದುದನ್ನು ಕಾಣುತ್ತೇವೆ. ಇದು ವಿಜಯನಗರ ಕಾಲಕ್ಕೆ ಕೊಪ್ಪಳ ಪರಿಸರ ಜೈನಧರ್ಮವು ಸಂಪೂರ್ಣ ಅವನತಿಯನ್ನು ಹೊಂದಿ ಜಿನಾಲಯಗಳು ಆರಾಧನೆಗೊಳಪಡದೆ ಬರಿದಾದವು. ಮುಂದೆ ಇದೇ ಜಿನಾಲಯಗಳನ್ನು ಶೈವ ಮತ್ತು ವೈಷ್ಣವ ದೇವಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅಂದರೆ ಕ್ರಿ.ಶ. ೧೩ನೆಯ ಶತಮಾನದಲ್ಲಿ ಮುಮ್ಮಡಿ ಸಿಂಗನಿಂದ ಜೈನಧರ್ಮವು ಅವನತಿಯತ್ತ ಹೊರಳಿದುದು, ಕುಮಾರರಾಮನ ಕಾಲಕ್ಕೆ ಕೊಪ್ಪಳಕ್ಕೆ ಸ್ಥಳಾಂತರ ಹೊಂದಿದ್ದುದು, ವಿಜಯನಗರ ಕಾಲಕ್ಕೆ ಪ್ರೋತ್ಸಾಹ ಸಿಗದೆ ಜಿನಾಲಯಗಳು ಶಿವಲಿಂಗ, ಚನ್ನಕೇಶವ ಮತ್ತು ಬಾಲಕೃಷ್ಣ ಮೂರ್ತಿಶಿಲ್ಪಗಳನ್ನು ಪ್ರತಿಷ್ಟಾಪಿಸುವ ಮೂಲಕ ಶೈವ ಮತ್ತು ವೈಷ್ಣವ ದೇವಾಲಯ ಹಾಗೂ ಮಠಗಳಾಗಿ ಪರಿವರ್ತನೆ ಹೊಂದಿರುವುದನ್ನು ಉಳಿದುಬಂದ ಅವಶೇಷಗಳ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.