ಊಟ ಊಟಗಳನ್ನ ಸುತ್ತಿ…

Share

ಊಟ ಊಟಗಳನ್ನ ಸುತ್ತಿ…

 

ಹಸಿವೆಂಬ ಹೆಬ್ಬಾವು ಬಸಿರ ಹಿಡಿದರೆ
ವಿಷವೇರಿತ್ತಯ್ಯ ಆಪಾದ ಮಸ್ತಕಕೆ
ಹಸಿವಿಗನ್ನವನಿಕ್ಕಿ
ವಿಷವನಿಳಿಸಬಲ್ಲಡೆ ವಸುಧೆಯೊಳಗೆ
ಆತನೇ ಗಾರುಡಿಗ ಕಾಣಾ ರಾಮನಾಥ.

ಚುಮು ಚುಮು ಬೆಳಕರಿದು ನೆಲಕೆ ಮುಗಿಲ ಕಣ್ಣೀರು ಇಬ್ಬನಿಯಾಗಿ ಬೀಳುವಾಗಲೇ ತಿರುಕವ್ವ, ಬಸವ್ವ,ಚೌಡವ್ವರೆಂಬ ಧರೆಯ ಹಳ್ಳಿ ಮನೆಗಳ ಹೊಲೆ ಹೊತ್ತಿ ರೊಟ್ಟಿಯ ಸಪ್ಪುಳವು ಮೊಳಗುತಿತ್ತು. ಮನೆ ಮುಂದೆ ಇಂಡಿ ದುಂಡಿಯ ನಾದ ಬಳೆಗಳೊಂದಿಗೆ ತೂಗುತಿತ್ತು.ಅಂಗಳದ ಕೋಳಿ ಪುಟ್ಟಿಯಲ್ಲಿ ಹುಂಜಗಳು ಬೆಳಕಾತ್ರಲೇ… ಎಂದು ಕೂಗುತ್ತಲೇ ಈಚಲ ಚಾಪೆಗಳಲ್ಲಿ ಅಡ್ಡಾದ ಮಕ್ಕಳು ಅವ್ವನ ಕೂಗಿಗೆ ಎದ್ದು ಆಕಳಿಸಿ ಪುಟ್ಟಿ ಎತ್ತಿದೊಡನೇ ಕೋಳಿಗಳು ಪಟ ಪಟ ರೆಕ್ಕೆ ಬಡಿಯುತ್ತಾ ಕೊಕ್ ಕೊಕ್‌ಎಂದು ಮರಿಗೊಳಿಂದಿಗೆ ಕಲ್ಲು ಮಣ್ಣು ತಿಪ್ಪಗಳಲ್ಲಿ ತಿನ್ನಲು ಗಾರಾಡುತ್ತಿದ್ದವು.
ರಾಸುಗಳಿಗೆ ಮೇವು ಹಾಕಿ ಅಂಗಳದ ರಜ ಹೊಡೆಯಿತಿರಲು ರೊಟ್ಟಿ ವಾಸನೆಗೆ ರಟ್ಟೆ ಜೋರಾಗುತಿತ್ತು. ಅಪ್ಪ, ಅಜ್ಜ, ಮಾವಂದಿರೆಲ್ಲಾ ಕೆರೆ ನೀರಲ್ಲಿ ಮುಳುಗಿ ಹಣೆಗೆ ವಿಭೂತಿ ಬಳಿದುಕೊಂಡು ಸೂರ್ಯಪ್ಪನತ್ತ ನಮಸ್ಕರಿಸಿ ಈರಣ್ಣನಿಗೋ,ಬಸಂದೇವರಿಗೋ,ಚೌಡಮ್ಮ ದುರುಗಮ್ಮರಿಗೋ ನಮಸ್ಕರಿಸಲು ಅಡ್ಡಣಿಗೆ ಮೇಲೆ ಊಟದ ಘಮಲು ಕರೆಯುತಿತ್ತು.
ಹಡೆದು ಜೋಲಿಗೆ ಹಾಕಿದ ತಾಯಂದಿರ ಜೋಗುಳ ಪದಗಳು,ನೆರೆಯವರ ಬೀಸುವ ಪದಗಳು,ಅಂಗಳಕ್ಕಿಳಿದ ಜೋಗಪ್ಪನ ” ಆಹಾ ನೋಡು ಪಾಂಡವರ ಪಾಡು ಅಡವಿ ಆರಣ್ಯದಾಗ…” ಹಾಡು,ಜೋಗತಿಯ ” ಎಲ್ಲಿ ಕಾಣೆ ಎಲ್ಲಿ ಕಾಣೆ ಎಲ್ಲಮ್ಮನಂತಾಕಿ ..” ಗ್ವಾರಪ್ಪನ ಡಮರಲ್ಲಿ ಮೊಳಗುವ “ಏಳು ಕೋಟಿ ಏಳು ಕೋಟಿಗ್ಯಾ”,ಕೊಡೆಯಿಡಿದು ನಡೆವ ಕಾಲಜ್ಞಾನಿಯ ” ಮುತ್ತಿನ ತೆನಿವಡೆದು ಕಲ್ಲು ಕೋಳಿ ಕೂಗುತಾವೋ!ಆಡೋ ಮಕ್ಕಳ ನೆತ್ತಿ ಸುಟ್ಟು ದೇವರಿಗೇರಿಸಿದ ಹಾರ ಬಾಡುತಾವೋ..!” ಎಂಬ ವಾಕ್ಷ,ಸ್ವಾಮಿಗಳ ಕಂತೇ ಬಿಕ್ಷೆ ಎಷ್ಟೊಂದು ಸೊಲ್ಲುಗಳು ಊಟದ ಹಿಂದೆ!?


ಗೇಣುದ್ದ ಮಕ್ಕಳು ಬಿಸಿ ರೊಟ್ಟಿ ಸುತ್ತಿಕೊಂಡು ಅಂಗಳದ ತುಂಬಾ ಮೇಕೆಯಂತೆ ಅರಚುತ್ತಿರಲು ಸೇದೋ ಬಾವಿಗೆ ನೀರಿನ ಕೊಡಗಳು ತರ‍್ಯಾಡುತ್ತಿದ್ದವು.ಕಟ್ಟೆಗೆ ಕುಂತ ಯಜಮಾನರ ಕಂಡು ಊರ ಜನ “ಶರಣರ್ರೀ ಅಜ್ಜರಾ.., “ಏನ ಮಾವ ಎದ್ದ್ಯಾ?”, “ನಮಸ್ಕಾರ ಸಣಪಾ ಎದ್ರ್ಯಾ?” ಅಂತ ತರತರಗಳ ಗಡಿಬಿಡಿಯ ಓಡಾಟಗಳು.
ಅಂಗಡಿ ಮನೆಗೋ, ಚಾದಂಗಡಿ ಕಡೆಗೋ ನಡೆವ ಕೆಲವರಿಗೆ ಅವೂ ಒಪ್ಪತ್ತಿನ ಅನ್ನದ ಕೇಂದ್ರಗಳೇ. ಒಲೆಯ ಅಗ್ನಿಯನ್ನೇ ನೆನಪಿಸೋ ಸೂರ್ಯ ಮೆಲಕ್ಕೇರಲು ಕೆರೆತುಂಬಾ ಮೀನು ಮರಿಗಳ ಕುಣಿದಾಟ. ಕೆರೆ ಏರಿ ಮೇಲೆ ಬುತ್ತಿ ಗಂಟೊತ್ತು ಕುರ್ಚಿಗಿ ಕುಡುಗೋಲು ಹಿಡಿದವರ ಸಾಲುಗಳೂ ರೊಟ್ಟಿಗಳನ್ನ ಅಂಗೈಗಿಳಿಸಲು ಗುರಾಳ ಪುಡಿ ಮೊಸರು,ಈರುಳ್ಳಿ ಮೆಣಸಿನ ಕಾಯಿ,ಕೈ ಇಂಡಿ ಒಳ್ಳೆಣ್ಣೆ ,ಕಡ್ಲಿ ಪುಡಿ ಮೊಸರು,ಹೀಗೇ… ಈರುಳ್ಳಿ ಸೊಪ್ಪು,ಮೆಂತೆ ಸೊಪ್ಪು, ಕೆಲವರ ಕೈಲಿ ಕಟುಕ ರೊಟ್ಟಿ ಬೆಳ್ಳುಳ್ಳಿ ಉಪ್ಪು ಸಾಗುತಿತ್ತು.
ರೊಟ್ಟಿ ಸಂತೆಯ ಸಾಲು ಸಾಗಿದಂತೆ ಮದ್ಯಾನ್ಹಕ್ಕೆ ಗೌಡರ ಮನೆಯ ಸೆಜ್ಜಿ ರೊಟ್ಟಿ ಎಣಗಾಯಿ ಸಾರು, ಮೊಸರನ್ನದ ಉಂಡೆಗಳು,ಉದುಕಾ ಮುದ್ದೆ ಸೊಪ್ಪಿನ ಬುತ್ತಿ,ಮಜ್ಜಿಗೆ ಹಂಡೆ,ಉಪ್ಪನ ಕಾಯಿ,ಬಗೆ ಬಗೆಯ ಪಲ್ಯಗಳು ಕೂಲಿ ಆಳುಗಳ ಕೈಗೆ ಗತ್ತು ಮೂಡಿಸುವಂತಿದ್ದವು.


ಅತ್ತ ಶನಿವಾರ ಸಂತೆಯ ಸೀಗಡಿ ಮತ್ತು ಒಣ ಮೀನುಗಳ ಇಂಡಿ,ಕೆರೆ ಕೋಡಿ ಒಡೆದಾಗ ಅಜ್ಜಿ ತಯಾರಿಸುತ್ತಿದ್ದ ಏಡಿ ಸಾರು,ಅಣಬಿ ಸಾರು ಬಗೆ ಬಗೆಯ ಮೀನು ಮೊಟ್ಟುಗಳ ಸಾರು ಮರೆಯುವುದುಂಟೆ?
ರಸ್ತೆ ಕೆಲಸದ ವೇಳೆ,ಮನೆ ತಾರಸಿ ಹಕುವಾಗ,ಬೆಳೆ ಕೊಯ್ಯುವಾಗ,ಕಡೆ ಸೋಮವಾರಕ್ಕೆ ಮಲ್ಲಪ್ಪನ ಗುಡ್ಡಕ್ಕೆ ಹೊರಟಾಗ,ಕಾರ್ತೀಕದಲ್ಲಿ ದೊಡ್ಡೋರು ನಡೆಸುವ ಗೋಧಿ ಹುಗ್ಗಿ ಪರುವು,ಗುಳೆ ಲಕ್ಕವ್ವನ ಹಬ್ಬದಲ್ಲಿ ಕಾಡಲ್ಲೇ ಮೂಡುವ ಸಿಹಿಜೊತೆಗೆ ಮೊಳಕೆ ಕಾಳು ರೊಟ್ಟಿ, ಮಧ್ಯಾನ ಸುಳಿವ ಕೋಳಿ ಸಾರು..
ಮಂಡಿ ದುರುಗಮ್ಮನ ಜಾತ್ರೆ ನಡೆವಾಗ ಬಂಡೆ ಬಂಡೆಗಳ ಮೇಲಿನ ಕಪ್ಪಾಳು ಜನರ ಕುರಿ ಕೋಳಿ ಮೇಕೆಗಳ ಸಾರು…
ಕೊಟ್ರಯ್ಯನ ಪಾದ ಯಾತ್ರೆ ಹೊರಟಾಗ ಕಂಡ ಕಂಡ ಭಕ್ತರು ನೀಡುವ ಬಗೆ ಬಗೆಯ ಭಕ್ತಿಯ ಪ್ರಸಾದ ,ಮಠದ ನಿತ್ಯ ಪ್ರಸಾದಗಳ ಭಿನ್ನ ಭಿನ್ನ ರುಚಿಗಳನ್ನ ಪದಗಳಲ್ಲಿ ಹುಟ್ಟಿಸಲಾದೀತೇ!?
ಹಳ್ಳಿಗಳಲ್ಲಿ ಕೇಜಿ ಉಪ್ಪಿಟ್ಟು ಚಿಕ್ಕ ಡಬರಿ ಮೊಸರು,ಬಟ್ಟಲ ಕಡ್ಲಿ ಪುಡಿ ಹಾಕಿಕೊಂಡು ತಿಂಡಿ ಎಂದು ತೇಗುವ ಮಂದಿ ಅನೇಕ.ಕುಸ್ತಿ ಆಡುವವರಿಗೆ ಗುಂಡೆತ್ತುವವರಿಗೆ ದೊಡ್ಡ ದೊಡ್ಡ ಕಮತ ಮಾಡುವ ಆಳು ಮಕ್ಕಳಿಗೆ ಊಟ ಹಾಕಲಾಗದೇ ಹೆಂಡತಿಯರು ತೌರು ಸೇರಿದ ತಿರುಪಿರದ ಸಣ್ಣ ಕಥೆಗಳೂ ಹಳ್ಳಿ ಓಣಿಗಳಲ್ಲಿ ಹರಿದಾಡುತ್ತವೆ.
ಮಗನ ಸಾಕಲಾಗದೇ ಗೌಡರ ಹಟ್ಟಿಗೆ ಗದುಮಿದ ಕೈಫಿಯತ್ತುಗಳಲ್ಲಿ ಮಾದರ ಚಂದ್ರ,ಹೊಲೆಯರ ಹನುಮ,ಬ್ಯಾಡರ ಅಂಜಿನಿಗಳಂತಹ ಅನೇಕರು ದನ ಕಾಯುತ್ತಲೋ ಕುರಿ ಕಾಯುತ್ತಲೋ ನೆಲೆ ನಿಂತ ಕಥನಗಳಿನ್ನೂ ಬೆಳಕಿಗೆ ಬಾರದೇ ಕಾಯುತ್ತಿವೆ.ಇವರ ಬುತ್ತಿಯ ನೆಲುವಿಗೆ ಕಣ್ಣಾಕಿದರೆ ಅಚ್ವರಿ ಮೂಡದಿರದು.ಉಪ್ಪು,ಹುಳಿ,ಖಾರ ಹಾಕಿದರೆ ಹೆಚ್ಚು ತಿಂದಾನೆಂದು ಬರಿ ಮುದ್ದೆಗಳನ್ನೋ..ರೊಟ್ಟಿಗಳನ್ನೋ ಕಳಿಸುವ ಗೌಡತಿಯರು ಜಾತ್ರೆಗಳಲ್ಲಿ ಮಾತ್ರ ಬಣ್ಣದ ಊಟ ಕಳಿಸುತ್ತಾರೆ.ಈ ಮನೆ ಮಕ್ಕಳೂ ಅಷ್ಟೇ ಬೆಲ್ಲದಚ್ಚನ್ನೋ.. ಹಿಡಿ ಉಪ್ಪನ್ನೋ .. ಇಟ್ಟುಕೊಂಡು ದಾರಿಲಿ ಸಿಕ್ಕ ಟಮೋಟೋ ಮೆಣಸಿನ ಕಾಯಿಗಳಿಂದಲೇ ನೆಲುವಿಗೆ ಸಿಕ್ಕ ಹದಿನಾರು ಇಪ್ಪತ್ತು ರೊಟ್ಟಿಗಳನ್ನ ಹೊಲದ ನಡುವೆ ಕುಕ್ಕುರು ಕುಂತು ಡಬರಿ ತುಂಬಾ ಕುರಿಯ, ಆಕಳ,ಮೇಕೆಯ ಹಾಲುಗಳನ್ನ ಹಿಂಡಿಕೊಂಡು ಬೆಲ್ಲದೊಂದಿಗೆ ಕಲಸಿ ಕಿವುಚಿ ಕುಡಿದು ಮೆಣಸಿನ ಕಾಯಿ ಉಪ್ಪು ಚಪ್ಪರಿಸಿ ಕೇಕೆ ಹಾಕಬಲ್ಲರು.

ಹಬ್ಬ ಬಂದಾಗ ಓಣಿ ಕಡೆ ತಲೆ ಹಾಕುತಿದ್ದ ಕಳ್ಳಪ್ಪರ ಗೋಣೆಪ್ಪ ಡಬರಿ ಡಬರಿ ಮಾದಲಿ ಹಾಲು ತಿಂದು ಏಬ್ ಎನ್ನುತಿದ್ದ.ದೊಡ್ಡ ಸೋರೆಯಲ್ಲಿ ಕುರಿ ಮಾಂಸ ಕುದಿಯುತ್ತಿರಲು ತಿನ್ನಲೆಂದೇ ತೋಟಪ್ಪ ಹದಿನಾರು ಕೊಡದ ಹಂಡೆ ಎತ್ತಿ ನೀರಿಗೆ ಹೊರಡುತಿದ್ದ.ಮಿಲಿಟರಿಯಿಂದ ಬಂದ ಮಲ್ಲಪ್ಪ ಪೀಸುಗಳ ರಾಶಿಯಲ್ಲಿ ಎಂಟು ಮುದ್ದೆ ತಿನ್ನುವುದನ್ನ ಹೆಣ್ಣು ಮಕ್ಕಳು ಕದ್ದು ನೋಡಿ ಮುಸಿ ಮುಸಿ ನಗುತಿದ್ದವು.ರಕ್ತ ರಾತ್ರಿಗೆ ನಾ ರೆಡಿ ನಾ ರೆಡಿ ಎಂದು ಸಂಗಪ್ಪ ಹನುಮಪ್ಪ ತಟ್ಟೆಗೇ ಕಿರೀಟ ಇಟ್ಟವರಂತೆ ಪಟ್ಟಾಗಿ ಕೂಡುತಿದ್ದರು. ಬಿಕ್ಷೆಗೆ ಬರುತಿದ್ದ ಅಜಾನು ಬಾಹು ಲಮಾಣಿ ಜೋಮಲ್ಯಾ ಅದೆಷ್ಟು ಮನೆಯ ಮಾಂಸದ ಊಟ ಅರಗಿಸಿಕೊಳ್ಳುತಿದ್ದನೋ ಲೆಕ್ಕವಿಟ್ಟವರಾರು?


ಮಾಂಸ ಕೊಯ್ಯುವಾಗಲೇ ಗಿಂಡಿಯಲ್ಲಿ ಕದ್ದು ಒಯ್ಯುತಿದ್ದ ನಾಗವ್ವ,ಸಾರಿನ ನಾತ ಹಿಡಿದೇ ಬಟ್ಟಲಿಡಿದು ಬರುವ ಮೂಲಿ ಮನಿ ಸಂಗಕ್ಕ, ಬುಗುರಿಯಂತೆ ಸೋರೆ ಮುಂದೆ ಸುತ್ತುತಿದ್ದ ಗಿಣಿ ಮಕ್ಕಳು, ಸುಟ್ಟ ಮಾಸದ ಕಡ್ಡಿಗೆ ಕಾಯೋ ಕತ್ಲಜ್ಜ, ಅರ್ಧ ಕುಡಿದು ಕಳ್ಳು ಪಚ್ಚಿ ರುಚಿಗೆ ಹಿಂದೂಸ್ಥಾನಿ ಗಾಯಕನಂತೆ ತಲೆದೂಗುವ ರಾಟಿ ಮಾವ,ತಿನ್ನದ ಜಾತಿಯಿಂದ ತಿನ್ನಲೆಂದೇ ಪಕ್ಷಾಂತರ ಮಾಡಿದ ಗೆಣೆಕಾರರು.ಸಾರು ಮುಗಿದರೂ ತಲೆ ಮಾಸ ತಿಂದೇ ಜಾಗ ಬಿಡುವೆವೆಂದು ನಿಂತ ಬೀಗರು,ಮುರುಗಿ ಮಾಸವನ್ನೂ ಬಿಡದ ಕಳ್ಳು ಬಳ್ಳಿಗಳು ಕರೆಯದಿದ್ದರೂ ಬರುವ ನಿಟ್ಟೂರು ಬೀಗರಂತೂ “ಊಟ ಆಯ್ತವ್ವ” ಅನ್ನುತ್ತಲೇ ಏಳು ಮನೆಗಳಲ್ಲೂ ಒಂದೇ ತರ ಉಣ್ಣುತಿದ್ದರು. ಬೇಲಿಯ ಯಾವುದೋ ತೊಪ್ಪಲನ್ನ ತಿಂದು ಬಂದರೆ ಎಷ್ಟು ಉಂಡರೂ ಏನೂ ಆಗುವುದಿಲ್ಲ ಎಂಬ ನಿಟ್ಟೂರಜ್ಜನ ರಹಸ್ಯವನ್ನ ಅವರೆಂದೂ ಬಯಲಾಗಿಸಲೇ ಇಲ್ಲ.
ಬೀಗರ ಮನೆಗೆ ಬಂದವರು ” ಹೆಂಗಪಾ ಮಳಿ ಯಂಗಾತು” ಎನ್ನುವ ಪದ ಊಟಕ್ಕೇ ಸಂಬಂಧಿಸಿತ್ತು.ಜುಬ್ಬು,ನರಿಮಳಿ,ಘನಮಳಿ ಎಂಬ ಪದಗಳು ಕಡಿಮೆ ನೀಡುವ,ಒಂದು ಸಲ ಹಾಕಿ ಮರೆಯಾಗಿ ಬಿಡುವ,ಸಾಕು ಸಾಕು ಅನ್ನುವಷ್ಟು ನೀಡುವ ಪರಿಪಾಠವನ್ನೇ ತಿಳಿಸುತ್ತವೆ.

ಹಳ್ಳಿಗಳಲ್ಲಿ ಅನ್ನವೇ ದೇವರು ಅಥಿತಿಯೇ ದೈವ ಎನ್ನುವವರು ಈಗಲೂ ಊಟಕ್ಕೆ ಕರೆವ ಬಿನ್ನದ ಪದ್ದತಿಗಳಿವೆ, ಹೀಗೇ ಊಟ ಮಾಡಬೇಕು ಹೀಗೇ ತಿನ್ನಬೇಕು ಎಂಬ ಶಿಷ್ಟಾಚಾರಗಳಿವೆ.” ಯಪಾ ಮೊದ್ಲು ಕೊಡ್ರೋ..” ಅನ್ನೋ ಕ್ರಾಂತಿಕಾರಿ ಕೂಗುಗಳಿವೆ. ಊಟಕ್ಕೂ ಮೊದಲು ಒಂದು ತುತ್ತನ್ನ ಭೂತಾಯಿಗೆ ಅರ್ಪಿಸುವ,ಮಾಳಿಗೆ ಮೇಲೆ ಎರಚುವ,ಊರ ಉಳಿವಿಗಾಗಿ ಚರಗಾ ಹೊಡೆವ,ಬೆಳೆಯ ರಕ್ಷಣೆಗಾಗಿ ಹೊಲದಲ್ಲಿ ಪಾಂಡವರನ್ನ ಮಾಡಿ ನೈವೇದ್ಯ ಅರ್ಪಿಸುವ,ಬೆಳಸಿಯಲ್ಲಿ ಸ್ವಲ್ಪ ಭಾಗವನ್ನ ಹಕ್ಕಿ ಪಕ್ಷಿಗೆ ಬಿಡುವ,ಕಣದ ಸುಗ್ಗಿ ರಾಶಿಯಲ್ಲಿ ಊರ ಆಯಗಾರರಿಗೆ ಮತ್ತು ಜಂಗಮಯ್ಯರಿಗೆ ದಾನ ನೀಡುವ ಪದ್ದತಿಗಳಿವೆ.
ಹಿಂದೆ ಬರಗಾಲ ಬಂದಾಗ ದೊಡ್ಡವರು ತಮ್ಮ ಹಗೇವಿನಿಂದ, ವಡೇವಿನಿಂದ,ಅಡಕಲಿಗಳಿಂದ ಹಸಿದವರಿಗೆ ಜೋಳ,ಕಾಳುಗಳು,ಹಿಟ್ಟು ನೀಡುತಿದ್ದ ಊಟದ ಪ್ರಾದೇಶಿಕ ಕಥೆಗಳು ಜನ ಸಂಸ್ಕೃತಿಯ ಪ್ರತೀಕದಂತೆಯೇ ಕಾಣುತ್ತವೆ.
ಒಪ್ಪೊತ್ತು ಊಟಕ್ಕೆಂದೇ ತನ್ನ ತಿಪ್ಪೆಬಳಿ ಕಾಳು ಹಾಕಿ ಕೋಳಿ ಬೇಟೆ ಒಡ್ಡುತಿದ್ದ ತಿರುಕಪ್ಪ,ಕುರಿಗಳನ್ನ ತೊಳೆಯಲು ಕೆರೆಗೆ ಬಿಟ್ಟಾಗ ಇಣುಕೋ ಕೊರಚರ ನಾಗಪ್ಪ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಲೇ ಯಾವುದೋ ಮಾಯದಲ್ಲಿ ಕೆಸರಿನೊಳಗೆ ಕುರಿಯನ್ನ ಅದುಮಿ ಬಿಡುತಿದ್ದ.


ಹಲಗೆ ಮತ್ತು ಸನಾಯಿ ಮೇಳದವರು ಬಿದಿರು ಪುಟ್ಟಿ ಹಿಡಿದು ಜಾತ್ರೆಗಳಲ್ಲಿ ದೊಡ್ಡೋರ ಮನೆಗಳಿಂದ ತರುತಿದ್ದ ಬಗೆ ಬಗೆಯ ರುಚಿಗಳು.ನಗರದ ಹೋಟೆಲ್‌ನ ಮಸಾಲೆ ದೋಸೆ,ಇಡ್ಲಿ,ಪೂರಿಗಳ ರುಚಿಗಾಗಿ ಹಳ್ಳಿಯವರು ಸಂತೆಯನ್ನ ಕಡಿಮೇ ಮಾಡಿದ್ದು.. ಬಸ್ಸು ಬಿಟ್ಟು ನಡೆದೇ ಬಂದದ್ದೂ.
ಗೌರಿ ಹುಣ್ಣಿಮೆಯ ಕೊಂತಿ ಬಸಪ್ಪನ ಪೂಜೆಯಲ್ಲಿ ಓಣಿ ಹೆಣ್ಣು ಮಕ್ಕಳು ನಡೆಸುವ ಬೆಳದಿಂಗಳ ಊಟ. ಕಥೆ ಹೇಳುತ್ತಾ ಕೈ ತುತ್ತು ನೀಡುವ ಅಜ್ಜಿಯ ಊಟ.ಪಾದ ಸೇವೆಯ ದಾರಿ ಊಟ,ಯಾತ್ರೆಯ ಮಠದ ಊಟ,ಸಮೂಹಗಳ ಹಾಸ್ಟಲ್ ಊಟ ಶಾಸ್ತ್ರದೂಟ,ನಿಶ್ಚಿತಾರ್ಥದ ಊಟ,ಬೀಗರೂಟ,ಬೀಜ ಬುತ್ತಿ,ಮದುವೆ ಊಟ,ಬಸುರಿಯ ಬವಕೆಯೂಟ,ಸತ್ತವರ ವಿಷಬಾಯಿ ತೊಳೆಯೋ ನೆಂಟರೂಟ,ಮೂರು ದಿನದ ಹಿಂಡೇ ಕೂಳು, ತಿಥಿಯೂಟ,ಹೀಗೆ ಊಟ ಬಗೆ ಬಗೆಯಲ್ಲಿ ಸಾಂಸ್ಕೃತಿಕ ಸಂಗತಿಗಳನ್ನ ವಿಸ್ತರಿಸುತ್ತದೆ.ಅನ್ನ ಕೊಟ್ಟ ಮನೆಗೆ ಎರಡು ಗೆಯಬಾರದು ಎಂಬ ಮಾತು ಇಲ್ಲಿನ ಜೋಳವಾಳಿಗಳನ್ನ ನೆನಪಿಸಿದರೆ, ಬಡವರ ಮನೆ ಊಟ ಚಂದ ಶ್ರೀಮಂತರ ಮನೆಯ ಮಾತು ಚಂದ ಎನ್ನೋ ಗಾದೆ ಮಾತು.”ಅನ್ನಂ ಬ್ರಹ್ಮೇತಿ” ಎಂದು ವೇದಗಳು “ಪರ ಬ್ರಹ್ಮ ಸ್ವರೂ” ಎಂದು ಪೂಜಾರಿಗಳು,”ಅನ್ನವೇ ದೈವ ” ಎಂದು ಸರ್ವಜ್ಞ ಕರೆದರೂ ಯಾಕೆ ? ಜಗತ್ತಿನ ಹಂಗರ್ ಸೂಚ್ಯಾಂಕದಲ್ಲಿ ಭಾರvವು ನೇಪಾಳ ಮತ್ತು ಬಾಂಗ್ಲಾ ದೇಶಗಳಿಗಿಂತಲೂ ಕೆಳಗಿದೆ ಎಂಬುದೇ ಅಚ್ಚರಿ ಅಲ್ಲವೇ!?

Girl in a jacket
error: Content is protected !!