
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಬಡವನ ಸಿಟ್ಟು ದವಡೆಗೆ ಮೂಲ.
ಬಡವ= ಹಣ ಅಧಿಕಾರ ಶಕ್ತಿ ಬೆಂಬಲ ಇಲ್ಲದವ, ದುಡಿಯುವವ. ಸಿರಿವಂತ ತದ್ವಿರುದ್ಧ. ಬಡವ ಸಿರಿವಂತ ಪ್ರವಾಹದ ವಿರುದ್ಧ ಸಿಟ್ಟಾಗಿ ತಿರುಗಿಬಿದ್ದರೆ, ಸಿರಿವಂತನು ಬಡವನ ವಿರುದ್ಧ ಕೋಪದಿ ದವಡೆಹಲ್ಲ ಕಡಿಯುವನು. ಬಡವನ ಸೋಲು ಖಚಿತ. ಬಡವ ಸಿಟ್ಟಾಗದೇ ದೌರ್ಜನ್ಯ ಸಹಿಸಬೇಕೆಂದಿಲ್ಲ. ದೌರ್ಬಲ್ಯವನ್ನು ಕಿತ್ತೆಸೆಯಬೇಕು. ಬಲಿಷ್ಠರಾಗಬೇಕು, ಅಲ್ಲಿಯವರೆಗೆ ತಾಳಬೇಕು. ಸಿಟ್ಟು ಉತ್ತಮ ಫಲ ನೀಡುವಂತೆ ಸಜ್ಜಾಗಬೇಕು. ಬುದ್ಧಿಶಕ್ತಿ ಹಣ ಅಧಿಕಾರ ಜನಬಲ ಗಳಿಸಬೇಕು. ವ್ಯಕ್ತಿಗಿಂತ ಸಂಘ ಪ್ರಬಲ. ಸಂಘೇ ಶಕ್ತಿಃ ಕಲೌ ಯುಗೇ =ಕಲಿಗಾಲದಲ್ಲಿ ಸಂಘದಲ್ಲಿ ಶಕ್ತಿ! ಹಿಂಡಿನಲ್ಲಿನ ಕಾಡಾನೆಯ ಮುಟ್ಟಲಾಗದು! ಒಂಟಿಸಲಗವನು ಬಂಧಿಸಬಹುದು! ಸಂಘವಷ್ಟೇ ಸಾಲದು. ನಿಪುಣ ತಂತ್ರಗಾರಿಕೆ ಇರಬೇಕು! ಕೃಷ್ಣ ಹೇಳಿದ:ಪ್ರಕರ್ಷತಂತ್ರಾ ಹಿ ರಣೇ ಜಯಶ್ರೀಃ=ಉತ್ತಮ ತಂತ್ರಗಾರಿಕೆ ರಣಾಂಗದಲ್ಲಿ ಜಯ ನೀಡುವುದು! ಕೌರವರ ಸೇನೆ ಅಪಾರ. ಪಾಂಡವರು ಸಮರ್ಥರು! ಆದರೂ ಅರ್ಜುನ ಪಾಶುಪತಾಸ್ತ್ರ ತಂದ! ಕಾಡಿನಲ್ಲಿ ಸಿಂಹ ಸುರಕ್ಷಿತ. ತಪ್ಪಿಸಿಕೊಳ್ಳುವ ತಂತ್ರ ಅದಕೆ!ಬಯಲಿಗೆ ಬಿದ್ದರೆ ಬೋನು ಗತಿ! ಅದನ್ನು ಹಿಡಿಯುವ ತಂತ್ರ ಮನುಷ್ಯನಿಗೆ! ನೆನಪಿರಲಿ, ಬಡವ ಸಿರಿವಂತ ಶತ್ರುಗಳಲ್ಲ.
ಬಡವ ತಾಳ್ಮೆ ನಿನಗಿರಲಿ, ಬೆಳೆದು ಶಕ್ತನು ನೀನಾಗು!!