
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹೀಗಿರಲಿ ವಿದ್ಯೆ ಸೇವೆಗೆ ಮನ್ನಣೆ!
ಬಹುತೇಕರು ನಾವು ಹೆಚ್ಚು ಬೆಲೆ ಕೊಡುವುದು ಹಣ ಆಸ್ತಿಗೆ. ಸುಳ್ಳು ಮೋಸ ಅಕ್ರಮದಿಂದ ಗಳಿಸುವೆವು! ಆದರ್ಶ ಮೌಲ್ಯ ಸಂಸ್ಕೃತಿ ಭಾವಗಳ ಕಡೆಗಣಿಸುವೆವು! ಸರಿದಾರಿಯಲಿ ಇಲ್ಲದಿದ್ದರೂ ಹಣ ಆಸ್ತಿಗರನು ಗೌರವಿಸುವೆವು,ಹಿಂಬಾಲಿಸುವೆವು! ಆದರ್ಶ ವಿದ್ಯೆ ಸಂಸ್ಕಾರವುಳ್ಳವರನು ನಿರ್ಲಕ್ಷ್ಯಿಸುವೆವು, ಅವಮಾನಿಸುವೆವು, ಗೌರವಿಸೆವು, ಪ್ರೋತ್ಸಾಹಿಸೆವು! ಪರಿಣಾಮ ಸಮಾಜದ ಮೇಲೆ ಕರಿ ನೆರಳು! ಮನೆ ಮನೆಯಲಿ ಹಣ ಆಸ್ತಿ ಲೆಕ್ಕಾಧಾರದ ಸಂಬಂಧ! ಕೆಟ್ಟ ಮೇಲೆ ಬುದ್ಧಿ! ಆಗ ಹಿರಿಯರು ಕಿರಿಯರಿಗೆ ಎನ್ನುವರು “ಹಾಗಿರಬೇಕು! ಹೀಗಿರಬೇಕು!” ಆದರ್ಶ ಬದುಕುವುದು ನಡೆಯಿಂದ, ನುಡಿಯಿಂದಲ್ಲ! ಹಿರಿಯರೇ ಪಾಲಿಸದದಿರೆ ಅದು ಕಿರಿಯರಿಗೆಂತು? ಆದರ್ಶದ ಕಣ್ತೆರೆಸುವ ಲೀಲೆ ನಿನ್ನೆ ಜರುಗಿದೆ ಮುದ್ದೇಬಿಹಾಳದಲ್ಲಿ! ಜ್ಞಾನಭಾರತಿ ಶಾಲೆಯಲ್ಲಿ ಶಿಕ್ಷಕಿಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿಯೂ ಸೇವೆ ಮುಂದುವರೆಸಿರುವ ಕುಮಾರಿ ಶಾಂತಾ ಭಟ್ ಕುಮಾರಿ ಲೀಲಾ ಭಟ್ ಅವರಿಗೆ ಅವರ ಹಿಂದಿನ ವಿದ್ಯಾರ್ಥಿಗಳು ಸಲ್ಲಿಸಿದ ಗುರುವಂದನೆ ಮಾದರಿ!ಐವತ್ತು ಅರವತ್ತರ ಆಸುಪಾಸಿನ ವಯೋಮಾನದ ಆ ಹಿರಿಯ ಶಿಷ್ಯವೃಂದ ಇಂದು ವಿವಿಧ ರಂಗಗಳ ಉನ್ನತೋನ್ನತ ಹುದ್ದೆ ಅಲಂಕರಿಸಿದೆ! ಅವರೆಲ್ಲ ಮಕ್ಕಳು ಮೊಮ್ಮಕ್ಕಳು ಸಮೇತ ಭಾಗಿ! ಸಾರೋಟದಲ್ಲಿ ಮೆರವಣಿಗೆ! ಶಾಂತಲೀಲಾ ಗ್ರಂಥಾಲಯ ಸಮರ್ಪಣೆ!ಸಂಭ್ರಮದ ಸತ್ಕಾರ! ಸಭಿಕರಾರೂ ಕುರ್ಚಿಯಲ್ಲಿ ಕೂಡ್ರಲಿಲ್ಲ! ಮಕ್ಕಳಂತೆ ಕುಳಿತರು ನೆಲಹಾಸಿಗೆಯಲ್ಲಿ! ಇದು ನೋಡುಗರು ಕೇಳುಗರು ಓದುಗರು ಭಾವ ಕಂಬನಿ ಮಿಡಿವ ವಿಶಿಷ್ಟ ಸನ್ನಿವೇಶ! ಹೆಣ್ಣು ಗುರು ಶಿಷ್ಯ ವಿದ್ಯೆ ಸೇವೆ ಶ್ರಮ ಸಂಸ್ಕೃತಿ ಸಮಾಜಕ್ಕೆ ಸಂದ ಮನ್ನಣೆ!!