ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಎತ್ತಿನ ಬಂಡಿ ಚಲೋ

Share

ಬೆಂಗಳೂರು,ಸೆ,೧೩: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಚೊಚ್ಚಲ ಅಧಿವೇಶನಕ್ಕೆ ಪ್ರತಿಭನೆ,ಧರಣಿ ಎದುರಿಸುವಂತಾಗಿದೆ.
ಉಭಯ ಸದನ ಆರಂಭವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತೈಲ ಬೆಲೆ ಏರಿಕೆ,ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿದೆ. ಅಲ್ಲದೆ ಎತ್ತಿನ ಗಾಡಿ ಚಲೋ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ವಿಧಾನಸೌಧಕ್ಕೆ ಆಗಮಿಸಲು ಯತ್ನಿಸಿದಾಗ ಅವರನ್ನು ತಡೆಯಲಾಯಿತು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್ ಮೊದಲಾದವರು ಎತ್ತಿನ ಬಂಡಿ ಚಲೋದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ದೇಶದ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಪ್ರತಿದಿನ ಜನರ ಪಿಕ್ಪಾಕೆಟ್ ಮಾಡುತ್ತಿದೆ ಎಂದು ಹೇಳಿದರು.

ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ಸರ್ಕಾರ ಕೆಳಗಿಳಿಸುವವರೆಗೂ ನಾವು ಹೋರಾಡುತ್ತೇವೆ ಎಂದು ಹೇಳಿಕೆ ನೀಡಿದ ಡಿಕೆಶಿ, ಪೆಟ್ರೋಲ್, ಡೀಸೆಲ್ ದರ ೭೫ ರೂ.ಗೆ ಇಳಿಕೆಯಾಗಬೇಕು ಎಂದರು.
ಬೆಲೆ ಏರಿಕೆಯಿಂದ ಭವಿಷ್ಯದಲ್ಲಿ ಎತ್ತಿನಗಾಡಿಯೇ ಗಟ್ಟಿ ಎಂಬ ಸಂದೇಶವನ್ನು ರವಾನಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎತ್ತಿನಗಾಡಿಯನ್ನು ಏರಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಅಧಿಕೃತ ನಿವಾಸದಿಂದ ವಿಧಾನಸೌಧದತ್ತ ತೆರಳಿದ ಸಿದ್ದರಾಮಯ್ಯಗೆ ಎಸ್.ಆರ್.ಪಾಟೀಲ್. ಎಂ.ಬಿ.ಪಾಟೀಲ್ ಮತ್ತು ಪರಿಷತ್ ಸದಸ್ಯ ನಜಿರ್ ಅಹಮದ್ ಸಾಥ್ ನೀಡುತ್ತಿದ್ದಾರೆ.
ಪ್ರತಿಭಟನಾಕಾರರನ್ನು ತಡೆದ ಪೊಲೀಸರು
ನಾಲ್ಕು ಎತ್ತಿನ ಗಾಡಿ ಸಹಿತ ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಪೊಲೀಸರು ತಡೆದು, ಬ್ಯಾರಿಕೆಡ್ ಹಾಕಿ ಬಂದ್ ಮಾಡಿದ್ದಾರೆ. ಜೊತೆಗೆ ಚಾಲುಕ್ಯ ಸರ್ಕಲ್ ಬಳಿ ಎತ್ತಿನ ಗಾಡಿಯನ್ನು ತಡೆದ ಪೋಲಿಸರು ಬ್ಯಾರಿಕೆಡ್ ಹಾಕಿದ್ದಾರೆ.
ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಿಡಿ
ವಿಧಾನಸೌಧದ ಆವರಣಕ್ಕೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತೆ? ಆಕಾಶ ಬಿದ್ದು ಹೋಗುತ್ತಾ ಎಂದು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಸೌಧದ ಗೇಟ್ ನಂಬರ್ ೧ರ ಬಳಿ ಎತ್ತಿನಗಾಡಿ ಹೋಗಲು ಬಿಡಿ, ಇಲ್ಲ ಅಂದ್ರೆ ಮೇಲೆ ಓಡಿಸುತ್ತೇವೆ ಎಂದು ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಹಿಂದಿನ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂದು ಹೇಳುತ್ತಾರೆ. ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. ೭ ವರ್ಷದಲ್ಲಿ ೨೪ ಲಕ್ಷ ಕೋಟಿ ರೂ. ಆದಾಯ ಬಂದಿದೆ. ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Girl in a jacket
error: Content is protected !!