ಮೈಸೂರು ದಸರಾ ಉತ್ಸವ; ಗಜ ಪಯಣಕ್ಕೆ ಚಾಲನೆ

Share

ಮೈಸೂರು ಪ್ರತಿನಿಧಿ: ಬಾಲು .ಡಿ.

ಮೈಸೂರು, ಸೆ, ೧೩:ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಡಿನಿಂದ ನಾಡಿಗೆ ಹೊರಟ ಗಜಪಡೆ ಸಾರಥಿ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.
ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ದಸರಾ ಆನೆಗಳಿಗೆ ಸ್ವಾಗತ ನೀಡಿದ ಅರಣ್ಯಾಧಿಕಾರಿಗಳು, ದಸರಾಗೆ ಆಯ್ಕೆಯಾಗಿರುವ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ೯:೩೦ರ ಶುಭ ಮುಹೂರ್ತದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ವಿವಿಧ ಶಿಬಿರಗಳಿಂದ ಆಗಮಿಸಿರುವ ಆನೆಗಳನ್ನು ಮೈಸೂರಿನತ್ತ ಬೀಳ್ಕೊಡಲಾಯಿತು. ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳ ಕುಟುಂಬ ಸದಸ್ಯರು, ಮೈಸೂರಿಗೆ ಹೊರಟರು.
ನಂತರ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಬಿಡುಬಿಡಲಿವೆ. ಇದಾದ ಕೆಲವು ದಿನಗಳ ಕಾಲ ನಗರದ ವಾತಾವರಣಕ್ಕೆ ಹೊಂದಿಕೊಂಡ ನಂತರ ಸಾಂಪ್ರದಾಯಿಕವಾಗಿ ಪೂಜೆಯೊಂದಿಗೆ ಸೆಪ್ಟೆಂಬರ್ ೧೬ರಂದು ಎಲ್ಲಾ ಆನೆಗಳು ಅರಮನೆ ಪ್ರವೇಶಿಸಲಿವೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ೫ ಗಂಡಾನೆ, ೩ ಹೆಣ್ಣಾನೆ ಸೇರಿ ಒಟ್ಟು ೮ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಮಹಾಮಾರಿ ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಈ ವರ್ಷವೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ದಸರಾ ಗಜಪಡೆಯಲ್ಲಿ ಅಂಬಾರಿ ಹೊರಲಿರುವ ಗಜಪಡೆ ಸಾರಥಿ ೫೬ ವರ್ಷದ ಅಭಿಮನ್ಯು ನೇತೃತ್ವದಲ್ಲಿ ೫೮ ವರ್ಷದ ವಿಕ್ರಮ, ೪೩ ವರ್ಷದ ಧನಂಜಯ, ೪೪ ವರ್ಷದ ಕಾವೇರಿ, ೪೮ ವರ್ಷದ ಚೈತ್ರ, ೨೦ ವರ್ಷದ ಲಕ್ಷ್ಮಿ ಹಾಗೂ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ೩೪ ವರ್ಷದ ಅಶ್ವತ್ಥಾಮ ಆನೆಗಳು ಮೈಸೂರಿಗೆ ಆಗಮಿಸಲಿವೆ. ವೀರನಹೊಸಹಳ್ಳಿಯಲ್ಲಿ ನಡೆದ ದಸರಾ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅನುಪಸ್ಥಿತಿಯಲ್ಲಿ ಸಂಸದ ಪ್ರತಾಪ್ ಸಿಂಹ, ಸ್ಥಳೀಯ ಶಾಸಕ ಎಚ್. ಪಿ. ಮಂಜುನಾಥ್, ಮೇಯರ್ ಸುನಂದಾ ಪಾಲನೇತ್ರ ಸಾಂಕೇತಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

Girl in a jacket
error: Content is protected !!