ಪಂಚಭಾಷಾ ತಾರೆ, ನಿರ್ಮಾಪಕಿ ಪಂಡರಿಬಾಯಿ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ೧೯೨೮ರ ಸೆಪ್ಟೆಂಬರ್ ೧೮ರಂದು ಜನಿಸಿದ ಪಂಡರಿಬಾಯಿಯವರ ತಂದೆ ರಂಗರಾವ್ ಖ್ಯಾತ ಕೀರ್ತನಕಾರರು. ಜನಿಸಿದಾಗ ಗೀತಾ ಎಂದು ಹೆಸರು ಇರಿಸಿದ್ದರಾದರೂ, ಪಂಡರಾಪುರಕ್ಕೆ ಹೋಗಿ ಬಂದ ನಂತರ ಮಗಳ ಹೆಸರನ್ನು ಪಂಡರಿಬಾಯಿ ಎಂದು ಬದಲಿಸಿದರು. ತಾಯಿ ಕಾವೇರಿಬಾಯಿ ಭಟ್ಕಳದಲ್ಲಿ ಶಾಲಾ ಶಿಕ್ಷಕಿ. ಸಹೋದರ ವಿಮಲಾನಂದದಾಸ್ ಬಾಲ್ಯದಲ್ಲೇ ಹರಿಕಥಾ ವಿದ್ವಾಂಸರಾಗಿ ಖ್ಯಾತಗೊಂಡಿದ್ದರು. ನಾಟಕಗಳಲ್ಲಿ ಸಹ ಅಭಿನಯಿಸಿದವರು. ವಿಮಲಾನಂದದಾಸ್ ಮುಂದೆ ಕೆಲವು ಕನ್ನಡ ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಪಂಡರಿಬಾಯಿ ತಮ್ಮ ಆರನೆ ವಯಸ್ಸಿನಿಂದಲೇ ಹರಿಕಥೆ ಮಾಡುವ ಹವ್ಯಾಸ ಬೆಳೆಸಿಕೊಂಡರು. ಚಿಕ್ಕ ವಯಸ್ಸಿಗೆ ‘ಕೀರ್ತನ ಕೋಕಿಲಾ‘ ಎಂಬ ಬಿರುದು ದೊರೆಯಿತು.
ಪಂಡರಿಬಾಯಿಯವರ ಸಹೋದರ ವಿಮಲಾನಂದದಾಸ್ ಕಟ್ಟಿದ ಆದರ್ಶ ಕನ್ನಡ ನಾಟಕ ಸಭಾದಲ್ಲಿ ನಾಟಕಗಳನ್ನು ನೋಡುತ್ತಾ ಪಂಡರಿಬಾಯಿ ಕುಳಿತಿರುತ್ತಿದ್ದರು. ಒಂದು ದಿವಸ ನಾಯಕಿ ಪಾತ್ರಧಾರಿಣಿ ಗೈರು ಹಾಜರಾದ್ದರಿಂದ ಪಂಡರಿಬಾಯಿಯವರಿಂದಲೇ ಪಾತ್ರ ಮಾಡಿಸಲಾಯಿತು. ಇವರ ಅಭಿನಯ ಚಾತುರ್ಯವನ್ನು ಕಂಡ ಖ್ಯಾತ ನಾಟಕಕಾರ ಹಿರಣ್ಣಯ್ಯ ಹಾಗೂ ಪ್ರಖ್ಯಾತ ವೀಣಾವಾದಕ ಟಿ.ಚೌಡಯ್ಯನವರು ತಮ್ಮ ವಾಣಿ (೧೯೪೩) ಚಿತ್ರದಲ್ಲಿ ಗುರುಪುತ್ರಿಯ ಪಾತ್ರ ನೀಡಿದರು. ಶ್ರೀ ಕೃಷ್ಣ ಚೈತನ್ಯ ಸಭಾ ಎಂಬ ನಾಟಕ ಸಂಸ್ಥೆಯನ್ನು ತಾವೇ ರೂಪಿಸಿ, ರಾಜ್ಯದಾದ್ಯಂತ ನಾಟಕ ಪ್ರದರ್ಶನ ನೀಡಿದರು.
ಎ.ವಿ.ಎಂ.ಸ್ಟುಡಿಯೋ ಮಾಲೀಕ ಖ್ಯಾತ ನಿರ್ಮಾಪಕ ಮೇಯಪ್ಪಚೆಟ್ಟಿಯಾರ್ ಇವರಲ್ಲಿನ ಕಲಾ ಪ್ರೌಢಿಮೆಯನ್ನು ಕಂಡು ತಮ್ಮ ಸಂಸ್ಥೆಗೆ ಬರಮಾಡಿಕೊಂಡು ಮಾಸಿಕ ೩೦೦ ರೂ. ವೇತನ ನಿಗದಿಪಡಿಸಿದರು. ಒಂದೆರಡು ತಮಿಳು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ರಂಗಭೂಮಿ ನಟ-ನಿರ್ದೇಶಕ ಎಚ್.ಎಲ್.ಎನ್.ಸಿಂಹ ನಿರ್ದೇಶಿಸಿದ ಗುಣಸಾಗರಿ (೧೯೫೩) ಚಿತ್ರದಲ್ಲಿ ಹೊನ್ನಪ್ಪ ಭಾಗವತರ್ ಎದುರು ನಾಯಕಿಯಾಗಿ ನಟಿಸಿದರು. ರಾಜಕುಮಾರ್ ಮೊದಲ ಚಿತ್ರ ‘ಬೇಡರ ಕಣ್ಣಪ್ಪ‘ದಲ್ಲಿ ನಾಯಕಿ ಪಾತ್ರವನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾದ ಪಂಡರಿಬಾಯಿ ತಮಿಳಿನಲ್ಲೂ ಶಿವಾಜಿಗಣೇಶನ್ ಅಭಿನಯದ ಮೊದಲ ಚಿತ್ರ ‘ಪರಾಶಕ್ತಿ‘ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದರು. ವೈಜಯಂತಿಮಾಲ ಬಾಲಿ ಅಭಿನಯದ ಮೊದಲ ಹಿಂದಿ ಚಿತ್ರ ಬಾಹರ್ ಚಿತ್ರದಲ್ಲಿಯೂ ಅಭಿನಯಿಸಿದ್ದರು.
‘ಪಾಂಡುರಂಗಾ ಪ್ರೊಡಕ್ಷನ್‘ ಸಂಸ್ಥೆ ಮೂಲಕ ಕಟ್ಟಿ ‘ಸಂತಸಕ್ಕು‘ (೧೯೫೫) ಚಿತ್ರವನ್ನು ನಿರ್ಮಿಸಿದರು. ‘ರಾಯರ ಸೊಸೆ‘ (೧೯೫೭) ಈ ಸಂಸ್ಥೆ ತಯಾರಿಸಿದ ಎರಡನೆಯ ಚಿತ್ರ. ನಂತರ ಅನ್ನಪೂರ್ಣ, ಅನುರಾಧ ಚಿತ್ರಗಳನ್ನು ಪಂಡರಿಬಾಯಿ ನಿರ್ಮಿಸಿದರು. ತೆಲುಗಿನಲ್ಲಿ ಪಂಡರಿಬಾಯಿ ‘ಕೋಟೀಶ್ವರಿಡು‘ ಚಿತ್ರ ನಿರ್ಮಿಸಿ ಎ.ನಾಗೇಶ್ವರರಾವ್ ಅವರೊಂದಿಗೆ ಅಭಿನಯಿಸಿದರು. ತಮಿಳಿನ ಕುಲದೈವಂ ಚಿತ್ರದ ಇವರ ಪಾತ್ರ ದಕ್ಷಿಣ ಭಾರತಾದ್ಯಂತ ಹೆಸರು ಮಾಡಿದರೆ ಹಿಂದಿಯ ‘ಬಾಬ್ಬಿ‘ ಅಖಿಲ ಭಾರತ ಮಟ್ಟದಲ್ಲೂ ಇವರಿಗೆ ಖ್ಯಾತಿ ತಂದುಕೊಟ್ಟಿತು. ಸುಮಾರು ೫೦೦ಕ್ಕೂ ಹೆಚ್ಚು ಕನ್ನಡ, ದಕ್ಷಿಣ ಭಾರತದ ಇತರ ಭಾಷೆಗಳು ಮತ್ತು ಹಿಂದಿ ಚಿತ್ರಗಳಲ್ಲಿ ಪಂಡರಿಬಾಯಿ ಅಭಿನಯಿಸಿದ್ದಾರೆ.
ತಮ್ಮ ೫೦ನೆಯ ವಯಸ್ಸಿನಲ್ಲಿ ಮಂಡ್ಯದ ಕಲಾರಾಧಕ ಪಿ.ಎಚ್.ರಾಮರಾವ್ ಅವರನ್ನು ವಿವಾಹವಾಗಿ ಮದರಾಸಿನಲ್ಲಿ ನೆಲೆಸಿದರು. ಮದರಾಸಿನ ತಮ್ಮ ಮನೆಯ ಆವರಣದಲ್ಲೇ ಪಾಂಡುರಂಗನ ದೇವಸ್ಥಾನವನ್ನು ನಿರ್ಮಿಸಿದರು. ನಟಿ ಮೈನಾವತಿ ಇವರ ಸಹೋದರಿ, ೧೯೯೪ರ ಡಿಸೆಂಬರ್ ೧೮ರಂದು ಮದರಾಸಿನಿಂದ ಬೆಂಗಳೂರಿಗೆ ಬರುವಾಗ ಅಪಘಾತಕ್ಕೀಡಾಗಿ ಮರುಹುಟ್ಟು ಪಡೆದ ಪಂಡರಿಬಾಯಿ ತಮ್ಮ ಎಡಗೈಯನ್ನು ಕಳೆದುಕೊಂದರು. ಚೇತರಿಸಿಕೊಂಡ ನಂತರವೂ ಚಲನಚಿತ್ರ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದರು.
‘ಸತ್ಯಹರಿಶ್ಚಂದ್ರ‘ ಚಿತ್ರದಲ್ಲಿನ ಅಭಿನಯಕ್ಕಾಗಿ ಇವರಿಗೆ ಭಾರತ ಸರ್ಕಾರ ಕಲೈಮಾಮಣಿ (೧೯೬೫) ಪ್ರಶಸ್ತಿ ನೀಡಿದೆ. ‘ಬೆಳ್ಳಿಮೋಡ‘ ಹಾಗೂ ‘ನಮ್ಮ ಮಕ್ಕಳು‘ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ (೧೯೯೧) ನೀಡಿ ಗೌರವಿಸಿದೆ. ಕನ್ನಡ ಚಲನಚಿತ್ರ ನಿರ್ಮಾಕಿಯಾಗಿ, ಕಲಾವಿದರಿಗೆ ಚಿತ್ರರಂಗದ ಸರ್ವತೀಮುಖ ಬೆಳವಣಿಗೆಗಾಗಿ ಕೊಡುಗೆ ನೀಡಿದ ಇವರಿಗೆ ಡಾ.ರಾಜಕುಮಾರ್ ಪ್ರಶಸಿಯನ್ನು (೧೯೯೪-೯೫) ನೀಡಿ ಸತ್ಕರಿಸಿದೆ. ಪುಸ್ತಕ ಪ್ರೇಮಿಯಾದ ಪಂಡರಿಬಾಯಿಯವರು ಉತ್ತಮ ಆಧ್ಯಾತ್ಮಿಕ ಗ್ರಂಥಗಳ ಸಂಗ್ರಾಹಿಕಿ. ಸಾಹಿತಿಯಾಗಿ ಗುರು ರಂಗವಿಠಲ ಅಂಕಿತನಾಮದಲ್ಲಿ ನೂರಾರು ಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ಕೆಲವು ಕಥನ ಕವನಗಳನ್ನು ಬರೆದಿದ್ದಾರೆ. ತಮಿಳಿನ ‘ಜ್ಞಾನೇಶ್ವರಿ‘ ಇವರಿಂದ ಕನ್ನಡಕ್ಕೆ ಭಾಷಾಂತರಗೊಂಡಿದೆ. ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕಾಣಿಕೆ ನೀಡಿದ ಪಂಡರಿಬಾಯಿ ೨೦೦೩ ಜನವರಿ ೨೯ರಂದು ನಿಧನರಾದರು.