ಈರುಳ್ಳಿ ಬೆಲೆ ಮತ್ತುಆರ್ಥಿಕ ಪರಿಸ್ಥಿತಿಯ ಸಂದರ್ಭ
೧೯೭೫ನೆ ಇಸವಿ ಅನೇಕ ಕಾರಣಗಳಿಂದಾಗಿ ನನ್ನ ನೆನಪಿನ ಪಟಲದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದುಬಿಟ್ಟಿದೆ. ನಾನು ಸರಕಾರಿ ಮಾಧ್ಯಮಿಕ ಶಾಲೆಯ ಆರನೇ ಇಯತ್ತೆಯಲ್ಲಿ ಓದುತ್ತಿದ್ದ ಆ ವರ್ಷದಲ್ಲಿ ನನ್ನೂರಿನಲ್ಲಿ ‘ಪ್ರಥಮ’ ಎನ್ನಬಹುದಾದ ಅನೇಕ ಸಂಗತಿಗಳು ಜರುಗಿದವು. ಈ ಸಾಲಿನಲ್ಲಿ ಮೊಟ್ಟಮೊದಲನೆಯದಾಗಿ ನಿಲ್ಲುವಂತಹುದು ಮತ್ತು ಮುಂಬರುವ ಎಲ್ಲಾ ಪ್ರಥಮಗಳಿಗೆ ನಾಂದಿ ಹಾಡಿದ್ದು ನನ್ನೂರಿನ ರೈತರನ್ನು ಕುರಿತಾದದ್ದು. ಹಿಂದೆಂದೂ ಕಂಡು ಕೇಳರಿಯದ ಮಟ್ಟದ ಹಣ ಆ ವರ್ಷ ರೈತಾಪಿವರ್ಗದ ಕೈಸೇರಿತ್ತು. ಅನೇಕ ವರುಷಗಳಿಂದ ಈರುಳ್ಳಿ ಬೆಳೆಯುವ ರೂಢಿ ನಮ್ಮ ಭಾಗದ ರೈತರಲ್ಲಿ ಇದ್ದರೂ, ಬೆಳೆಯ ಇಳುವರಿ ಎಂದೂ ಸುಮಾರು ಎನ್ನುವ ಮಟ್ಟವನ್ನು ತಲುಪಿರಲಿಲ್ಲವಾದರೂ ‘ಅಷ್ಟಕ್ಕಷ್ಟೆ’ ಎನ್ನುವ ವರಮಾನವನ್ನು ತಂದ ವರ್ಷಗಳೇ ಹೆಚ್ಚು. ಇದಕ್ಕೆ ಮುಖ್ಯಕಾರಣ ಎಂದರೆ ರೈತರ ಬೆಳೆ ಮಾರುಕಟ್ಟೆಗೆ ಸಾಗಿಸುವ ವೇಳೆ ಈರುಳ್ಳಿ ಬೆಲೆ ದಿಢೀರನೆ ಕುಸಿದು ಪಾತಾಳ ಸೇರುತ್ತಿತ್ತು. ಕೆಲವರ್ಷಗಳಲ್ಲಂತೂ ಬೆಲೆ ಯಾವ ಮಟ್ಟಕ್ಕೆ ಕುಸಿಯುತ್ತಿತ್ತು ಎಂದರೆ ಬೆಳೆ ಬಂದ ಹೊತ್ತಿನಲ್ಲಿ, ಇಟ್ಟ ಖರ್ಚಿಗೂ ಸಾಲದೆ, ರೈತರ ಬತ್ತಿದ ಕಣ್ಣುಗಳಲ್ಲಿ ಕಷ್ಟಪಟ್ಟು ತಡೆಹಿಡಿದರೂ ಉಕ್ಕುವ ಮಟ್ಟಕ್ಕೆ ನೀರು ತರುತ್ತಿದ್ದ ಈರುಳ್ಳಿ ಬೆಳೆ ೧೯೭೫ನೆಯ ವರ್ಷ ರೈತರ ಕೈಯನ್ನ ತುಸುಹೆಚ್ಚೇ ಎನ್ನುವ ರೀತಿಯಲ್ಲಿ ಭದ್ರವಾಗಿ ಹಿಡಿದಿತ್ತು.
ದೇಶದಾದ್ಯಂತ ಈರುಳ್ಳಿ ಫಸಲಿನ ಇಳುವರಿಯಲ್ಲಿ ಭಾರೀ ಪ್ರಮಾಣದ ಕುಸಿತವಾದ ಕಾರಣದಿಂದಾಗಿ ಗಗನಕ್ಕೇರಿದ ಬೆಲೆಯ ಲಾಭ ಸಾಕಷ್ಟು ಚೆನ್ನಾಗಿಯೇ ಈರುಳ್ಳಿ ಫಸಲನ್ನು ಬೆಳೆದ ನನ್ನೂರಿನ ಮತ್ತು ಸುತ್ತಮುತ್ತಲಿನ ಹಳ್ಳಿಗಳ ರೈತರ ಪಾಲಾಗಿತ್ತು. ಉಳ್ಳಾಗಡ್ಡೆ ಬೆಳೆ ಇಂತಹ ಒಂದು ಲಾಭವನ್ನೂ ರೈತರಿಗೆ ತಂದುಕೊಡಬಲ್ಲದೆ? ಎಂದು ರೈತಾಪಿವರ್ಗವೇ ಮೂಗಿನ ಮೇಲೆ ಬೆರಳಿಡುವ ಮಟ್ಟಿಗಿನ ಹಣವನ್ನು ನನ್ನ ಹಿರಿಯರು ಜೀವಮಾನದಲ್ಲಿಯೆ ಮೊದಲಬಾರಿ ಕಂಡರು. ಊರಿನ ಬಹಳಷ್ಟು ರೈತವರ್ಗದ ಮನೆಗಳಲ್ಲಿ ಭಾಗ್ಯದಲಕ್ಷ್ಮಿ ತನ್ನ ಝಣಝಣ ನೃತ್ಯವನ್ನ ಪ್ರದರ್ಶಿಸಿದಾಗ ಉಂಟಾದ ಕಾಲ್ಗೆಜ್ಜೆಗಳ ನಿನಾದ ಈಗಲೂ ನನ್ನ ಕಿವಿಗಳಲ್ಲಿ ಗುಯ್ ಗುಟ್ಟುತ್ತಿದೆ.
ನೂರರ ನೋಟನ್ನೂ ಕಾಣಲು ಹಪಿತಪಿಸುತ್ತಿದ್ದ ಮಣ್ಣಿನಮಕ್ಕಳು ಬೆಳಗಾಗುವುದರೊಳಗೆ ಸಾವಿರ, ಲಕ್ಷಗಳ ಒಡೆಯರಾಗಿದ್ದು ಶ್ರೀಕ್ಷೇತ್ರ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ “ಮಾಡಿದಷ್ಟು ನೀಡು ಭಿಕ್ಷೆ” ಪವಾಡವನ್ನು ಅಕ್ಷರಶಃ ಹೋಲುವಂತಿತ್ತು.
ರೈತರಿಗೆ ಆರ್ಥಿಕ ಬಲತುಂಬಿದ ಈರುಳ್ಳಿ ಊರಿನ ಆರ್ಥಿಕ ಚಟುವಟಿಕೆಗಳಲ್ಲಿ ಹೊಸತನವನ್ನು, ತೀವ್ರತರವಾದ ಚುರುಕನ್ನು ತಂದಿತ್ತು. ಊರ ಜನಸಾಮಾನ್ಯರು ಹೊಸ ಹುರುಪಿನಲ್ಲಿ, ಹೆಚ್ಚಿದ ಆತ್ಮವಿಶ್ವಾಸದ ಬಲದಲ್ಲಿ ಹೊಸ ಲಾಲಿತ್ಯದೊಂದಿಗೆ ನಡೆದಾಡುವಂತೆ ಬಾಸವಾಗುತ್ತಿತ್ತು. ಅವರ ನಡೆ, ನುಡಿ, ದಿರಿಸು, ಹಾವಭಾವಗಳಲ್ಲಿ ‘ಜೀವನದಲ್ಲಿ ಒಮ್ಮೆಯಾದರೂ ಗೆದ್ದೆವಲ್ಲಾ’ ಎನ್ನುವ ಆತ್ಮಗತ ಸಂತೋಷ ಕಂಡೂ ಕಾಣದ ರೀತಿ ಇಣುಕಿಹಾಕುತ್ತಿತ್ತು. ಹೊಸದಾಗಿ ಬಂದ ಆರ್ಥಿಕಬಲ ದಸರೆಯ ರಜಾವೇಳೆಯಲ್ಲಿ ಮಾಧ್ಯಮಿಕ ಶಾಲೆಯ ವತಿಯಿಂದ ಐದು ದಿನಗಳ ಉತ್ತರ ಕರ್ನಾಟಕ ಪ್ರವಾಸವನ್ನು ಹಮ್ಮಿಕೊಳ್ಳಲು ಶಿಕ್ಷಕವರ್ಗಕ್ಕೆ ಪ್ರೇರಣೆಯ ಶೋತೃವಾಯಿತು. ಹಿಂದಿನ ಕೆಲವರ್ಷಗಳಲ್ಲಿ ಇಂತಹ ಪ್ರವಾಸಗಳನ್ನು ಹಮ್ಮಿಕೊಂಡಿದ್ದಾಗ್ಯು ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಬರಲಿಲ್ಲ ಎನ್ನುವ ಕಾರಣಕ್ಕಾಗಿ ಪ್ರವಾಸಗಳನ್ನು ಕೊನೇಘಳಿಗೆಯಲ್ಲಿ ರದ್ದುಮಾಡಬೇಕಾಗಿ ಬಂದಿದ್ದರೆ ಹೇಗೋ ಮಾಡಿ ಪ್ರವಾಸಗಳನ್ನ ಕೈಗೊಂಡ ವರ್ಷಗಳಲ್ಲಿ ಹಣಕಾಸಿನ ವಿಷಯದಲ್ಲಿ ಶಾಲೆಯ ಶಿಕ್ಷಕವರ್ಗ ಕೈಸುಟ್ಟುಕೊಂಡಿದ್ದೂ ಇತ್ತು. ಆದರೆ ೧೯೭೫ನೆ ಸಾಲಿನ ಶಾಲೆಯ ಶೈಕ್ಷಣಿಕ ಪ್ರವಾಸದ ಪ್ರಕಟಣೆ ಮಾತ್ರವೇ ಬಹಳ ದೊಡ್ಡಮಟ್ಟದ ಯಶಸ್ಸನ್ನು ಕಂಡಿತ್ತು. ‘ಗೀತಾ’ ಬಸ್ಸಿನ ತುಂಬ ತುಂಬಬಹುದಾದಷ್ಟು ಸಂಖ್ಯೆಯ ಮಕ್ಕಳ ನೊಂದಾಣಿಕೆಯು ಕೇವಲ ಮೂರೇ ದಿನಗಳಲ್ಲಿ ಖಾತ್ರಿಯಾದ ಕಾರಣದಿಂದಾಗಿ ಕೊನೇಘಳಿಗೆಯಲ್ಲಿ ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲು ಬಯಸಿದ ಪೋಷಕರು ತೀವ್ರತರವಾದ ನಿರಾಸೆಯನ್ನು ಎದುರಿಸಬೇಕಾಯಿತು. ತಾವು ಪ್ರವಾಸ ಮಾಡಲಾಗುತ್ತಿಲ್ಲವಲ್ಲ ಎನ್ನುವ ಕಾರಣದಿಂದಾಗಿ ಕಣ್ಣುಗಳಲ್ಲಿ ಗಂಗೆ ಭಾಗೀರಥಿಯರನ್ನು ಮುಕ್ತಮನಸ್ಸಿನಿಂದ ಹರಿಯಬಿಟ್ಟ ಬಾಲಕ ಬಾಲಕಿಯರ ಗೋಳನ್ನು ನೋಡಲಾಗದೆ ಶಾಲೆಯ ಮುಖ್ಯೋಪಾಧ್ಯಾಯಿನಿ, ಮೃದುಹೃದಯಿ, ವಿನುತಮೇಡಂ ಥಳಾಸದ ಬಸ್ ಏಜೆಂಟ್ ಈಶಣ್ಣಗೌಡ ಅವರನ್ನು ಪುಸಲಾಯಿಸಿ ಚಿತ್ರದುರ್ಗದಿಂದ ದಾವಣಗೆರೆಗೆ ನಮ್ಮೂರಿನ ಮೇಲೆ ಓಡಾಡುತ್ತಿದ್ದ ಲೈನ್ ಬಸ್ ‘ಮಹಾದೇವಿ’ ಯನ್ನ, ಲೈನ್ ಸರ್ವೀಸ್ ನ್ನು ಐದು ದಿನಗಳ ಮಟ್ಟಿಗೆ ರದ್ದುಗೊಳಿಸುವ ಮೂಲಕ, ಪ್ರವಾಸಕ್ಕೆಂದು ನಿಯೋಗಿಸುವುದರಲ್ಲಿ ಯಶಸ್ವಿಯಾದರು.
ಇದರ ಕಾರಣ ಮಕ್ಕಳ ಮುಖಗಳಲ್ಲಿ ಮೂಡಿದ ನಗುವಿನ ಬೆಳಕಿನಲ್ಲಿ ಮಾತಾಪಿತೃಗಳು ಧನ್ಯತೆಯ ಭಾವವನ್ನ ಅನುಭವಿಸಿದರು. ಉತ್ತರಕರ್ನಾಟಕದ ಅಷ್ಟೂ ಚಾರಿತ್ರಿಕ ಮತ್ತು ಐತಿಹಾಸಿಕ ಸ್ಥಳದರ್ಶನವನ್ನ ಮಕ್ಕಳಿಗೆ ಮಾಡಿಸಿದ ಈ ಪ್ರವಾಸ ಅತ್ಯಂತ ಯಶಸ್ವಿ ಶೈಕ್ಷಣಿಕ ಪ್ರವಾಸವೆಂದೇ ಊರ ಆಸಕ್ತವಲಯಗಳಲ್ಲಿ ಜನಜನಿತವಾಯಿತು.
ಊರಿನ ಆರ್ಥಿಕ ಸಬಲತೆ ತನ್ನ ಮತ್ತೆರಡು ರೂಪಗಳಲ್ಲಿ ಗೋಚರಿಸಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಗಾಂಧಿಕೋಟೆಯ ಪಕ್ಕದ ಊರದೇವತೆ ಮಾರಮ್ಮನ ಗುಡಿಗೆ ತಾಕಿಕೊಂಡ ಹಾಗೆಯೇ ಇದ್ದ ಬಯಲಲ್ಲಿ ನಮ್ಮೂರಿನ ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ‘ಗೋಂಚಿ’ಯವರು ಪ್ರತೀದಿನ ಸಾಯಂಕಾಲ ಮೂರರಿಂದ ಎಂಟು ಗಂಟೆಗಳವರೆಗೆ ಉಪ್ಪುಜೀರಿಗೆ ತುಂಬಿದ ಹಿಟ್ಟುಹಚ್ಚಿದ ಮೆಣಸಿನಕಾಯಿಗಳನ್ನ ತಯಾರುಮಾಡಿ ಮಾರಾಟ ಮಾಡುವ ಒಂದು ಚಿಕ್ಕವ್ಯಾಪಾರವನ್ನು ತೆರೆದಿದ್ದು ಮತ್ತು ನಮ್ಮ ಊರಿಗೆ ಆರು ಕಿಮೀ ದೂರದ, ಸಾಕಷ್ಟು ತೋಟಗಳಿಂದ ಕೂಡಿದ,
ಹುಣಸೇಕಟ್ಟೆ ಗ್ರಾಮದ ಗಾದಿಲಿಂಗೆಪ್ಪ ಎನ್ನುವವರು ಪ್ರತಿನಿತ್ಯ ದುರ್ಗದಿಂದ ನಮ್ಮ ಊರ ಮೇಲೆ ಬಳ್ಳಾರಿಗೆ ಹೋಗುತ್ತಿದ್ದ ‘ಮೃತ್ಯುಂಜಯ’ ಬಸ್ ನಲ್ಲಿ ನೂರಾರು ತೆಂಗಿನಕಾಯಿ ಎಳನೀರುಗಳನ್ನ ತಂದು ಹಳೇಬಸ್ ಸ್ಟಾಂಡ್ ನ ಜಿವ್ವೆ ಮರದ ಕೆಳಗೆ ಇಟ್ಟು ಮಾರಾಟ ಮಾಡತೊಡಗಿದ್ದು. ಬಹಳ ಸಣ್ಣ ವಿಷಯಗಳಂತೆ ಓದುಗರಿಗೆ ತೋರಬಹುದಾದ ಮೇಲಿನ ಎರಡೂ ಘಟನೆಗಳು ನನ್ನೂರಿನ ಆರ್ಥಿಕ ಪರಿಸ್ಥಿತಿಯ ದೃಷ್ಟಿಕೋನದಿಂದ ೧೯೯೧ರಲ್ಲಿ ಆ ಹೊತ್ತಿನ ಭಾರತದ ಹಣಕಾಸುಮಂತ್ರಿ ಮನಮೋಹನ್ ಸಿಂಗ್ ಅವರು ತಂದ ರಾಷ್ಟ್ರವ್ಯಾಪಿ ಆರ್ಥಿಕ ಸುಧಾರಣೆಗಳ ಪರಿಣಾಮಗಳಷ್ಟೆ ಮಹತ್ವವನ್ನು ಹೊಂದಿದ್ದವು.
ಆರ್ಥಿಕ ಮಟ್ಟದಲ್ಲಿ ಈರುಳ್ಳಿ ಬಂಪರ್ ಬೆಲೆಯ ಮೂಲಕ ಅಸಾಧ್ಯ ಚೇತರಿಕೆ ಕಂಡ ಊರಿನ ಅಂದಿನ ಪರಿಸ್ಥಿತಿ ಇಂದು ಪ್ರಧಾನಿ ಮೋದಿಯವರು ಹೇಳುತ್ತಿರುವ ಹಾಗೆ ನಿರುದ್ಯೋಗಿ ‘ಗೋಂಚಿ’ಯಲ್ಲಿ ಬೋಂಡಾಬಜ್ಜಿಗಳನ್ನ ಮಾಡಿ ಮಾರುವ ಉದ್ಯಮಶೀಲತೆಯೊಂದನ್ನ ಹುಟ್ಟುಹಾಕಿದ್ದರೆ ಪಕ್ಕದ ಹತ್ತೂ ಹಲವು ಹಳ್ಳಿಗಳು ನನ್ನೂರನ್ನು ಒಂದು ಪ್ರಬಲ ಮಾರುಕಟ್ಟೆಯ ರೂಪದಲ್ಲಿ ನೋಡತೊಡಗಿದ್ದು ಹುಣಸೇಕಟ್ಟೆಯ ಗಾದಿಲಿಂಗೆಪ್ಪನ ಮೂಲಕ ಅನಾವರಣಗೊಂಡ ಪರಿ ತೀರಾ ಸಣ್ಣ ಸಂಗತಿಗಳೇನಲ್ಲ. ಎಲ್ಲಾ ಆರ್ಥಿಕ ಉದಾರೀಕರಣಗಳ ಹಿಂದೆ ಇರಬಹುದಾದ ಮೂಲ ಉದ್ದೇಶ ಇದೇ ಅಲ್ಲವೇ? ಕೈಯಲ್ಲಿ ಯಥೇಚ್ಚವಾಗಿ ಹಣ ಓಡಿಯಾಡುತ್ತಿದ್ದ ಕಾರಣಕ್ಕಾಗಿ ‘ಗೋಂಚಿ’ಯ ಹಿಟ್ಟುಹಚ್ಚಿದ ಮೆಣಸಿನಕಾಯಿ ಅಂಗಡಿಯಲ್ಲಿ ಮತ್ತು ಗಾದಿಲಿಂಗೆಪ್ಪ ಅವರ ಎಳನೀರು ಅಂಗಡಿಗಳಲ್ಲಿ ಅವು ತೆರೆದಿರುವಷ್ಟೂ ಸಮಯ ಭರ್ಜರಿ ಜನವೋ ಜನ. ಮನೆಗಳಲ್ಲಿ ಸರಿಯಾಗಿ ಊಟ ಮಾಡದೆ ಗೋಂಚಿ ಬೋಂಡಾ ಅಂಗಡಿ ತೆರೆಯುವ ಸಮಯವನ್ನೇ ನಿರೀಕ್ಷಿಸುತ್ತಾ ಕುಳಿತಿರುತ್ತಿದ್ದ ರೈತಾಪಿವರ್ಗ ಒಂದೆಡೆಯಾದರೆ ನೀರಿಗಿಂತ ಗಾದಿಲಿಂಗೆಪ್ಪನ ಎಳನೀರನ್ನೇ ಹೆಚ್ಚಾಗಿ ಕುಡಿದು ದಿನದೂಡುತ್ತಿದ್ದ ನೇಗಿಲಯೋಗಿಗಳೂ ಊರ ತುಂಬಾ ಕಾಣಸಿಗುತ್ತಿದ್ದರು.
ಉಳಿದಂತೆ ಊರಿನ ಅಂಗಡಿಮುಂಗಟ್ಟು ಮೊದಲುಗೊಂಡಂತೆ ಇದ್ದ ಎಲ್ಲಾ ವಾಣಿಜ್ಯ ವ್ಯವಹಾರಗಳೂ ಹಿಂದೆಂದೂ ಕಾಣದ ಮಟ್ಟಿಗಿನ ವ್ಯಾಪಾರವಹಿವಾಟನ್ನು ಕಾಣತೊಡಗಿದವು. ಕುರಬಗೇರಿ ಅಂಚಿನಲ್ಲಿ ಪೊಲೀಸ್ ಸ್ಟೇಶನ್ ಎದುರಿಗೇ ಇದ್ದ ಭದ್ರಪ್ಪಶೆಟ್ಟಿ ಅಂಗಡಿಯಲ್ಲಿ ಅವರ ಇಬ್ಬರು ಮಕ್ಕಳೂ ಸೇರಿದಂತೆ ಇದ್ದ ಮೂವರಿಂದಲೂ ಗ್ರಾಹಕರ ಸಂದಣಿ ಇರುತ್ತಿದ್ದ ಬೆಳಗುಬೈಗುಗಳಲ್ಲಿ ಸಾಮಾನುಗಳನ್ನು ಕ್ಲುಪ್ತಸಮಯದಲ್ಲಿ ಕೊಡಲಾಗುತ್ತಿರಲಿಲ್ಲ. ಇದರ ಕಾರಣವಾಗಿ ಶೆಟ್ಟರ ಮನೆಯಲ್ಲಿದ್ದು ಹೈಸ್ಕೂಲಿನಲ್ಲಿ ಓದುತ್ತಿದ್ದ ಅವರ ಮೊಮ್ಮಗ ಗುಂಡಾರ್ತಿ ಶಿವಾನಂದನೂ ಬಿಡುವಿನ ವೇಳೆಯಲ್ಲಿ ಇವರೊಟ್ಟಿಗೆ ಕೈಜೋಡಿಸಬೇಕಿತ್ತು. ಇದೇ ಪರಿಸ್ಥಿತಿ ಅನಂತಶೆಟ್ಟಿ, ಸುಬ್ಬಣ್ಣಶೆಟ್ಟಿ, ರಾಮಪ್ಪಶೆಟ್ಟಿ ಮತ್ತು ನಾಗಪ್ಪಶೆಟ್ಟಿಯವರ ಅಂಗಡಿಗಳಲ್ಲಿ ಇರುತ್ತಿತ್ತು. ಇದ್ದುದರಲ್ಲಿ ಸಾಂಬಶಿವಶೆಟ್ಟಿ ಮತ್ತು ಬುಕೀಟ್ಲ ಭೀಮಣ್ಣ ಇವರ ಅಂಗಡಿಗಳು ಮಾತ್ರ ಸ್ವಲ್ಪ ಖಾಲಿಯಾಗಿರುವಂತೆ ತೋರಿಬರುತ್ತಿದ್ದವು. ಬುಕೀಟ್ಲರ ಅಂಗಡಿಯಲ್ಲಿ ದಿನಸಿ ಸಾಮಾನುಗಳನ್ನು ಮಾರದೇ ಇರುವ ಕಾರಣ ಮತ್ತು ಸಾಂಬಶಿವಶೆಟ್ಟಿ ಸ್ವಲ್ಪ ತಿಕ್ಕಲು ಸ್ವಭಾವದಿಂದ ಕೂಡಿದ ಕಾರಣ ಈ ಎರಡೂ ಅಂಗಡಿಗಳ ವ್ಯವಹಾರದಲ್ಲಿ ಅಂತಹ ಹೇಳಿಕೊಳ್ಳುವ ಏಳಿಗೆಯೇನೂ ಕಂಡುಬಂದಿರಲಿಲ್ಲ. ಇನ್ನು ಹಳೇ ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ಬಸಣ್ಣನ ಹೋಟೆಲ್ ಆಗಲೀ, ಕುಂಬಾರರ ಜಯ್ಯಣ್ಣನ ಹೋಟೆಲ್ ಆಗಲೀ, ಮಸ್ಟೂರ್ ಬ್ರಾಹ್ಮಣರ ಹೋಟೆಲ್ ಆಗಲೀ ಸದಾಕಾಲ ಗ್ರಾಹಕರ ಜನಸಂದಣಿಯಿಂದ ಉಸಿರುಗಟ್ಟಿಸುವ ಹಾಗಿದ್ದವು.
ಊರಿನ ಆರ್ಥಿಕ ಪರಿಸ್ಥಿತಿಯ ಉತ್ಥಾನ ಪ್ರತೀ ಮಂಗಳವಾರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಬಯಲಲ್ಲಿ ನಡೆಯುವ ಊರಸಂತೆಯಲ್ಲೂ ತನ್ನ ಪ್ರಭಾವ ಬೀರಿತ್ತು. ಅಲ್ಲಿಯವರೆಗೂ ಊರಿನ ತರಕಾರಿ ಮತ್ತು ದಿನಸಿಗಳ ಅವಶ್ಯಕತೆಗಳನ್ನಷ್ಟೆ ಪೂರೈಸಲು ಶಕ್ತವೆನಿಸಿದ್ದ ಸಂತೆ ವಿಧವಿಧದ ಸರಕುಸಾಮಾನುಗಳ ಮಾರಾಟಕ್ಕೆ ಮುಕ್ತ ಮನಸ್ಸಿನಿಂದ ತೆರೆದುಕೊಂಡಿತು. ನಮ್ಮ ಜಿಲ್ಲಾಕೇಂದ್ರವಾದ ಚಿತ್ರದುರ್ಗದಲ್ಲಿ ಪ್ರತೀ ಸೋಮವಾರ ಸಂತೆ ನಡೆಯುತ್ತದೆ. ಬಹಳ ದೊಡ್ಡ ಮಟ್ಟದಲ್ಲಿ ಸಂತೆಬೈಲಿನಲ್ಲಿ ನಡೆಯುತ್ತಿದ್ದ ಈ ಸಂತೆಗೆ ಸುತ್ತಮುತ್ತಲ ಜಿಲ್ಲೆಗಳಾದ ಬಳ್ಳಾರಿ, ಶಿವಮೊಗ್ಗ, ತುಮಕೂರು ಮುಂತಾದ ಕಡೆಗಳಿಂದಲೂ ವರ್ತಕರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಬರುತ್ತಿದ್ದರು. ದುರ್ಗದ ಸಂತೆಯ ಮಾರನೇ ದಿನವೇ ಕೂಡುತ್ತಿದ್ದ ತುರುವನೂರಿನ ಸಂತೆಯ ಮೇಲೂ ಈ ವರ್ತಕರಲ್ಲಿ ಹಲವರ ಕಣ್ಣು ಬಿದ್ದಿತು. ದುರ್ಗದ ಸಂತೆಯಲ್ಲಿ ಮಾರಾಟವಾಗದೇ ಉಳಿದ ಪದಾರ್ಥಗಳಿಗೆ ನನ್ನೂರಿನ ಸಂತೆ ಸಿದ್ಧವಾದ ಮಾರುಕಟ್ಟೆಯ ರೂಪದಲ್ಲಿ ಅವರ ಕಣ್ಣುಕುಕ್ಕಿತು. ಬಹಳಷ್ಟು ವರ್ಷಗಳಿಂದ ನಡೆಯುತ್ತಿದ್ದ ಊರಿನ ಸಂತೆ ಇಲ್ಲಿಯವರೆಗೂ ದುರ್ಗದ ಸಂತೆಯ ವರ್ತಕರ ಗಮನವನ್ನು ಸೆಳೆದಿರಲಿಲ್ಲ. ಆದರೆ ಬದಲಾದ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದುರ್ಗದ ಸಂತೆಯ ನಂತರ ಮೊಳಕಾಲ್ಮೂರು, ರಾಂಪುರ, ಬಳ್ಳಾರಿ ಹೀಗೆ ಬೇರೆ ಸ್ಥಳಗಳನ್ನು ಅರಸಿ ಹೋಗುತ್ತಿದ್ದ ವ್ಯಾಪಾರಿಗಳು ನಮ್ಮೂರು ದುರ್ಗಕ್ಕೆ ಸಮೀಪ ಎನ್ನುವ ಕಾರಣದಿಂದಾಗಿ ಹೊಸಬಗೆಯ ವಸ್ತುಗಳ ಮಾರಾಟ ಕೇಂದ್ರವಾಗಿ ಗುರುತಿಸತೊಡಗಿದರು.
ಅಲ್ಲಿಯವರೆಗೂ ಕಾಣಿಸದ ಹಲವು ವಿಲಕ್ಷಣ ವಿದ್ಯಮಾನಗಳಿಗೆ ಊರಸಂತೆ ಸಾಕ್ಷಿಯಾಯಿತು. ಆ ಹೊತ್ತಿನ ಜನಪ್ರಿಯ ಹಿಂದಿ ಚಲನಚಿತ್ರಗಳ ಹಾಡುಗಳನ್ನು ಧ್ವನಿವರ್ಧಕದ ಮೂಲಕ ನುಡಿಸುತ್ತಾ ‘ಗಣೇಶ’ ಮತ್ತು ‘ಮೂವತ್ತು ಮಾರ್ಕಿ’ನ ಬೀಡಿಗಳನ್ನು ಮಾರುವ ಎರಡು ವ್ಯಾನ್ ಗಳು ಪ್ರತೀವಾರದ ಆಕರ್ಷಣೆಯ ಕೇಂದ್ರಗಳು ಎನಿಸಿದರೆ
ಚಳ್ಳಕೆರೆಯ ‘ಜಾನಾ ಟೆಕ್ಸ್ ಟೈಲ್ಸ್’ ಮಹಿಳೆಯರಿಗಾಗಿ ತರಹಾವರಿ ಸೀರೆಗಳನ್ನು ಮತ್ತು ಒಳಉಡುಪುಗಳನ್ನು ಮಾರುವ ಅಂಗಡಿಯನ್ನ ಸ್ಥಾಪಿಸಿತು.
ದುರ್ಗದ ರಾಘವೇಂದ್ರ ಸ್ಟೀಲ್ ಅಂಗಡಿ ಸಂತೆಯಲ್ಲಿ ಇದ್ದ ಏಕೈಕ ಪಾತ್ರೆಪಗಡಿಗಳ ಅಂಗಡಿಯನ್ನ ತೆರೆದಲ್ಲಿ ಅವಿಷ್ಕಾರದ ವಿಷಯದಲ್ಲಿ ನಾನು ಯಾರಿಗೆ ಕಡಿಮೆ? ಎನ್ನುವಂತೆ ಜಗಳೂರಿನ ಸಲೀಂಸಾಹೇಬರು ತರಕಾರಿಗಳನ್ನು ಗುಂಪು ಗುಂಪಾಗಿಟ್ಟು ಮಾರುವ ಮೂಲಕ ಸಂತೆಗೆ ಸೀಮಿತ ಅರ್ಥದ ‘ಹೋಲ್ ಸೇಲ್’ ತಂತ್ರವನ್ನು ಪ್ರಥಮವಾಗಿ ಪರಿಚಯಿಸಿದರು. ಅಲ್ಲಿಯವರೆಗೂ ಸಂತೆಯಲ್ಲಿ ಕೆಲವೇ ತಿಂಡಿಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದ ರಾಮಪ್ಪಶೆಟ್ಟರ ಧರ್ಮಪತ್ನಿ ಸೀತಮ್ಮ ಹಾಗೂ ನಾಗಪ್ಪಶೆಟ್ಟರ ತಾಯಿ ಪಾರ್ವತಮ್ಮ ತಮ್ಮ ಅಂಗಡಿಗಳಲ್ಲಿನ ತಿಂಡಿಗಳ ಶ್ರೇಣಿಯನ್ನು ಸಾಕಷ್ಟು ಹೆಚ್ಚಿಸಿದರು. ಸೀತಮ್ಮನ ಒಗ್ಗರಣೆ ಕೊಟ್ಟ ಕಾರಬೂಂದಿ, ಕರಿದು ಉಪ್ಪುಕಾರ ಹಚ್ಚಿದ ಶೇಂಗಾಬೀಜ ಮತ್ತು ಪಾರ್ವತಮ್ಮನ ಬುಗ್ಗೆಉಂಡೆ, ಮೆತ್ತನೆಯ ಅತಿಕಾಯಿಗಳು ತಿಂಡಿ ಅಂಗಡಿಗಳ ಶೋಭೆಯನ್ನು ತನ್ಮೂಲಕ ಇಡೀ ಸಂತೆಯ ಗುಣಮಟ್ಟವನ್ನು ಹೆಚ್ಚಿಸಿದ್ದಲ್ಲದೆ ನನ್ನಂತಹ ಬಾಲಕರ ಬಾಯಲ್ಲಿ ನೀರೂರುವಂತೆ ಮಾಡಿದವು. ಅಪಾರ ಜನಪ್ರಿಯತೆ ಗಳಿಸಿದ ಈ ಹೊಸತಳಿಯ ತಿಂಡಿಗಳು ವಾರದಸಂತೆಗಷ್ಟೇ ಸೀಮಿತಗೊಳ್ಳದೆ ಪ್ರತಿನಿತ್ಯವೂ ಸೀತಮ್ಮ ಮತ್ತು ಪಾರ್ವತಮ್ಮ ಅವರ ಮನೆಅಂಗಡಿಗಳಲ್ಲೂ ಕಾಣಸಿಗುವಂತಾಗಿದ್ದು ಊರಿನ ಆರ್ಥಿಕತೆಯ ಕಾರಣ ಒಡಮೂಡಿದ ಹೊಸ ಆತ್ಮವಿಶ್ವಾಸದ ಪ್ರತೀಕದಂತೆ ತೋರಿಬರುತ್ತಿತ್ತು. ಬಾಲಕನಾದ ನನ್ನ ಮಟ್ಟಿಗೆ ಆರ್ಥಿಕ ಉನ್ನತಿಯ ಮಟ್ಟವನ್ನು ಅಳೆಯುವ ಅಳತೆಗೋಲಾಗಿ ಪರಿಣಮಿಸಿದ್ದು ಮಾತ್ರ ಸಂತೆಯಲ್ಲಿ ಹೊಸದಾಗಿ ಸಿಗಲು ಪ್ರಾರಂಭಿಸಿದ್ದ ಐಸ್ ಕ್ಯಾಂಡಿ ಬಾರ್ ಗಳು. ಅಲ್ಲಿಯವರೆಗೂ ನಮ್ಮ ಊರಿನ ಮಟ್ಟಿಗೆ ದುರ್ಲಭ ಎನಿಸಿದ್ದ ಐಸ್ ಕ್ಯಾಂಡಿ ಬಾರ್ ಗಳು ತನ್ನ ವಿವಿಧ ಆಕಾರಗಳಲ್ಲಿ, ಪ್ಯಾಕೇಜ್ ಗಳಲ್ಲಿ ಸಂತೆಯ ದಿನ ಲಭ್ಯವಾಗತೊಡಗಿದ್ದು ನನ್ನನ್ನೂ ಆರ್ಥಿಕ ಸಬಲತೆ ಪರೋಕ್ಷ ಫಲಾನುಭವಿಯನ್ನಾಗಿಸಿತ್ತು.
ಊರಿನ ಹೊಸ ಆರ್ಥಿಕ ಚೈತನ್ಯ ಏಕಮುಖವಾದದ್ದೆ? ಇಲ್ಲ, ಊರಿನ ಹಣ ಊರ ಹೊರಗೂ ಹರಿಯಲು ಆರಂಭಿಸಿತ್ತು. ಇಪ್ಪತ್ತು ಕಿಮೀ ದೂರದ ದುರ್ಗಕ್ಕೆ ಹೋಗಿ ಬರುವ ಜನಗಳ ಸಂಖ್ಯೆ ಏಕಾಏಕಿ ದ್ವಿಗುಣಗೊಂಡಿತ್ತು. ಬೆಳಗಿನ ಒಂಬತ್ತರ ‘ತಿಪ್ಪೇಸ್ವಾಮಿ’, ಹತ್ತರ ‘ಮೃತ್ಯುಂಜಯ’ ಮತ್ತು ಹನ್ನೊಂದರ ‘ಜೈಹಿಂದ್’ ಬಸ್ಸುಗಳು ಕಿಕ್ಕಿರಿದ ಪ್ರಯಾಣಿಕರನ್ನು ಹೊತ್ತುಕೊಂಡು ದುರ್ಗ ಸೇರಿಸುತ್ತಿದ್ದವು. ಮುಕ್ಕಾಲು ಗಂಟೆಯ ಹಾದಿಯಲ್ಲಿ ಕುಳಿತು ಪ್ರಯಾಣಿಸುವರ ಸಂಖ್ಯೆಗಿಂತ ನಿಂತುಕೊಂಡು, ಬಸ್ಸಿನ ಮೇಲ್ಛಾವಣಿಗೆ ಹಾಕಿದ ಚರ್ಮದ ಬೆಲ್ಟ್ ಗಳನ್ನ ಹಿಡಿದುಕೊಂಡು ವಾಲಾಡುತ್ತಾ, ನೇತಾಡುತ್ತಾ, ಒಬ್ಬರ ಮೋಲೊಬ್ಬರಂತೆ ಬೀಳುತ್ತಾ, ಏಳುತ್ತಾ, ತಿಕ್ಕಾಡುತ್ತಾ, ತಿಣಕುತ್ತಾ, ಬೈದಾಡುತ್ತಾ, ಮೈಗೆ ಮೈ ಉಜ್ಜುತ್ತಾ, ಕೈಕೈ ಮಿಲಾಯಿಸುತ್ತಾ ಪ್ರಯಾಣಿಸುವವರ ಸಂಖ್ಯೆಯೇ ಒಂದು ಕೈ ಹೆಚ್ಚಾಗಿತ್ತು. ಕೆಲವಷ್ಟು ಪ್ರಯಾಣಿಕರು ಬಸ್ ಮೇಲ್ಛಾವಣಿಯ ಮೇಲೆ ಕುಳಿತು ಪ್ರಯಾಣಿಸುವ ಅತೀ ಅಪಾಯಕಾರಿ ಪ್ರವೃತ್ತಿಗೂ ನಾಂಡಿಹಾಡಿದ್ದ ದಿನಗಳವು. ಗಂಡಸರಿಗಿಂತ ನಾವೇನು ಕಮ್ಮಿ? ಎನ್ನುವಂತೆ ಹೆಚ್ಚಿನ ಸಂಖ್ಯೆಯ ಹೆಂಗಸರೂ ತಮ್ಮ ಗಂಡರೊಂದಿಗೆ, ಸಂಬಂಧಿಕರೊಂದಿಗೆ, ಸಖಿಯರೊಂದಿಗೆ ದುರ್ಗಕ್ಕೆ ಹೋಗಿ ಬರುವ ಪರಿಪಾಠ ಮೊದಲಾಯಿತು. ಕೆಲವರು ಸ್ವಂತಕ್ಕೆ, ಮತ್ತೆ ಕೆಲವರು ಮದುವೆಮುಂಜಿಗಳಿಗೆ ಬಟ್ಟೆಬರೆ ಖರೀದಿಸುವ ನೆಪದಲ್ಲೋ, ಆಭರಣಗಳ ಖರೀದಿಗಾಗಿಯೋ ದುರ್ಗಕ್ಕೆ ಎಡತಾಕಿದರೆ ಇನ್ನೂ ಕೆಲವರಿಗೆ ತಮ್ಮ ಹಳೆಯ ವಾಸಿಯಾಗದ ಕಾಯಿಲೆಗಳು ಧುತ್ತೆಂದು ಪ್ರತ್ಯಕ್ಷವಾದ ಕಾರಣದಿಂದಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೋ, ಸುಲೋಚನಮ್ಮನ ನರ್ಸಿಂಗ್ ಹೋಮ್ ಗೋ ಭೇಟಿಕೊಡುತ್ತಿದ್ದರು. ಹಲವರಿಗೆ ಬಹಳ ವರ್ಷಗಳಿಂದ ಇದ್ದ ಹಲ್ಲುನೋವುಗಳು ಇದ್ದಕ್ಕಿದ್ದಂತೆ ಉಲ್ಬಣವೆನಿಸಿ ಹೆಚ್ಚೂ ಕಡಿಮೆ ಮರೆತೇ ಹೋದಂತಿದ್ದ ‘ಹಲ್ಲು ಕೀಳುವ ಡಾಕ್ಟರ್ ‘ ಚೆನ್ನಬಸಪ್ಪ ಅವರ ಕ್ಲಿನಿಕ್ ಗೆ ಧಾವಿಸುತ್ತಿದ್ದರು. ಆದರೂ ಬಹಳಷ್ಟು ಸಂಖ್ಯೆಯ ಗಂಡಸರು ಮಾತ್ರ ಯಾವ ಘನಉದ್ದೇಶಗಳ ಹೊರತಾಗಿಯೂ ಊರಲ್ಲಿ ‘ಟೈಮ್ ಪಾಸ್’ ಆಗದು ಎನ್ನುವ ಕಾರಣಕ್ಕೆ ದಿನಾಲು ಚಿತ್ರದುರ್ಗದ ಮಣ್ಣನ್ನು ಸ್ಪರ್ಶಿಸುವ ದಿವಿನಾದ ಅಭ್ಯಾಸವೊಂದನ್ನು ಮೈಗೂಡಿಸಿಕೊಂಡಿದ್ದರು. ಬಿಳಿಲುಂಗಿ, ಶರ್ಟ್ ಮತ್ತು ಹೆಗಲ ಮೇಲೆ ಒಂದು ಬಣ್ಣದ ಟವೆಲ್ ಹೊತ್ತ ಗಂಡಸರ ದುರ್ಗದ ಚೈತ್ರಯಾತ್ರೆಯ ವೈಭವವನ್ನು ಬಸ್ ಸ್ಟ್ಯಾಂಡ್ ನಲ್ಲಿಯೇ ಇದ್ದ ನನ್ನ ಮನೆಯ ಕಿಟಕಿಗಳಿಂದ ನೋಡಿ ತಣಿದ ನೆನಪು ನನ್ನಲ್ಲಿ ಇನ್ನೂ ಗಾಢವಾಗಿದೆ. ತಮ್ಮ ಇದ್ದ,ಇಲ್ಲದ ಕೆಲಸಗಳು ಮುಗಿದ ಅಥವಾ ಮುಗಿದಿವೆ ಎನ್ನುವ ಭಾವನೆ ಬಂದ ಹೊತ್ತು ಹೆಂಗಸು ಗಂಡಸರೆಲ್ಲರಿಗೂ ಯಾವುದೇ ಲಿಂಗಬೇಧವಿಲ್ಲದೆ ಆನೆಬಾಗಿಲಿನ ‘ಲಕ್ಷ್ಮಿ ಟಿಫಿನ್ ರೂಂ’ ಅಥವಾ ಹೈಸ್ಕೂಲು ಮೈದಾನದ ಪಕ್ಕದ ‘ಜನತಾ ಹೋಟೆಲ್ ‘ನ ಮಸಾಲೆದೋಸೆ ನೆನಪಾಗುತ್ತಿದ್ದವು. ದೋಸೆ, ಕಾಫಿಯ ಸಮಾರಾಧನೆ ನಂತರ ‘ರೂಪವಾಣಿ’, ‘ಬಸವೇಶ್ವರ’, ‘ಯೂನಿಯನ್’ ಅಥವಾ ‘ಶಂಕರ’ ಟಾಕೀಸ್ ಗಳು ಕೈಬೀಸಿ ಕರೆಯುತ್ತಿದ್ದದ್ದು ಯಾಂತ್ರಿಕತೆಯ ರೂಪಾಧಾರಣೆ ಮಾಡಿತ್ತು. ಅಣ್ಣಾನವರ ಚಲನಚಿತ್ರವನ್ನು ನೋಡಿ ಅದರ ಬಗ್ಗೆಯೇ ಏರಿದ ಧ್ವನಿಯಲ್ಲಿ ಚರ್ಚಿಸುತ್ತಾ ರಾತ್ರಿಯ ಬಸ್ಸುಗಳಲ್ಲಿ ಊರಿಗೆ ವಾಪಸ್ಸಾಗುತ್ತಿದ್ದ ಊರಮಂದಿಯ ಸದ್ದುಗದ್ದಲಕ್ಕೆ ಬೇಸಗೆಯ ದಿನಗಳಲ್ಲಿ ಮನೆಬಾಗಿಲ ಮುಂದೆ ಮಲಗುತ್ತಿದ್ದ ನನಗೆ ಮಧ್ಯರಾತ್ರಿಯಾದರೂ ನಿದ್ರೆಯೇ ಬರುತ್ತಿರಲಿಲ್ಲ.
೧೯೭೫ರ ವರ್ಷಕಾಲ ನನ್ನ ಊರಮಟ್ಟಿಗೆ ಮತ್ತೊಂದು ಸಾರ್ವಕಾಲಿಕ ದಾಖಲೆಯನ್ನು ಬರೆಯಿತು. ಪ್ರತೀ ವರ್ಷ ಇಪ್ಪತ್ತೋ ಇಪ್ಪತ್ತೈದೋ ಮೀರದಂತಿದ್ದ ಊರ ಮದುವೆಗಳ ಸಂಖ್ಯೆ ಈ ವರ್ಷ ದಿಢೀರನೆ ನೂರೈವತ್ತರ ಗಡಿ ದಾಟಿತ್ತು. ಇದರಲ್ಲಿ ಕೆಲವು ಬಾಲ್ಯ ವಿವಾಹಗಳೂ ಸಮ್ಮಿಳಿತವಾಗಿದ್ದವು ಎನ್ನುವುದು ಗುಟ್ಟಿನ ವಿಷಯವೇನಾಗಿರಲಿಲ್ಲ. ನನ್ನ ಸಹಪಾಠಿ ವನಜ ಈ ಅವಧಿಯಲ್ಲಿಯೇ ಸಂಸಾರ ಬಂಧನಕ್ಕೆ ಒಳಗಾಗಿದ್ದು ನನ್ನ ಅರಿವಿಗೆ ಆಗಲೇ ಬಂದಿದ್ದ ಸಂಗತಿಯಾಗಿತ್ತು.
ಇನ್ನು ಊರ ಆರ್ಥಿಕ ಚೇತರಿಕೆ ದುರ್ಗವೂ ಸೇರಿದಂತೆ ಪರಊರುಗಳಲ್ಲಿ ಓದುತ್ತಿದ್ದ ಊರಹುಡುಗರ ಅದೃಷ್ಟವನ್ನು ಖುಲಾಯಿಸಿತು ಎಂದು ಹೇಳಬೇಕು. ಅಲ್ಲಿಯವರೆಗೂ ಪೋಷಕರಿಂದ ಹಣ ವಸೂಲು ಮಾಡಲು ವಾರದ ಎಲ್ಲಾ ದಿನಗಳ ಆಂಗ್ಲ ಹೆಸರುಗಳಲ್ಲಿ ಫೀಸ್ ಮತ್ತು ವರ್ಷದ ಎಲ್ಲಾ ತಿಂಗಳುಗಳ ಹೆಸರಿನಲ್ಲಿ ಫೀಸ್ ಪೀಕಿಪೀಕಿ ಸುಸ್ತಾಗಿ ಹೊಸ ಐಡಿಯಾಗಳ ಸತತ ಅನ್ವೇಷಣೆಯಲ್ಲಿದ್ದ ವಿದ್ಯಾರ್ಥಿಮಿತ್ರರ ತೊಂದರೆ ಬಹಳಮಟ್ಟಿಗೆ ದೂರಾಯಿತು.
ಮಕ್ಕಳು ಕೇಳುವ ಮೊದಲೇ ತಿಂಗಳ ಹಣವನ್ನು ಸ್ವಲ್ಪ ಹೆಚ್ಚಾಗಿಯೇ ಸಂದಾಯ ಮಾಡುತ್ತಿದ್ದ ತಂದೆತಾಯಿಗಳ ವರ್ತನೆಗೆ ಸಮರ್ಪಕವಾಗಿ ಸ್ಪಂದಿಸುತ್ತಿದ್ದ ಕೆಲ ಹುಡುಗರು ರಸ್ತೆಗಳಲ್ಲಿಯೆ ಇರಲಿ, ಹೋಟೆಲ್ ಗಳಲ್ಲಿಯೆ ಇರಲಿ ಅಥವಾ ಮಾರುಕಟ್ಟೆಯಲ್ಲಿಯೆ ಇರಲಿ, ಉಲ್ಲಾಗಡ್ಡೆ ದರ್ಶನವಾದ ಪ್ರತೀ ಹೊತ್ತೂ ಭಾವುಕರಾಗಿ ಕಣ್ಣೀರನ್ನು ಹರಿಸುತ್ತಾ ನಮಸ್ಕರಿಸಿದ ಉದಾಹರಣೆಗಳೂ ಇವೆ. ಇದ್ದುದರಲ್ಲಿಯೇ ಅನುಕೂಲಸ್ತ ಮನೆತನದ ಕುಡಿಗಳು ತಾವು ಅಲ್ಲಿಯವರೆಗೂ ತಂಗಿದ್ದ, ಉಚಿತವಾಗಿ ಊಟ ಮತ್ತು ವಸತಿಯನ್ನು ದಯಪಾಲಿಸುತ್ತಿದ್ದ ರಂಗಯ್ಯನ ಬಾಗಿಲಿನ ಹತ್ತಿರದ ‘ಉಜ್ಜಯಿನಿ ಹಾಸ್ಟೆಲ್ ‘ಮತ್ತು ‘ಜಯದೇವ ಹಾಸ್ಟೆಲ್’ ಗಳನ್ನ ತೊರೆದು ಕಾಲೇಜ್ ಹಾಸ್ಟೆಲ್ ಗಳಿಗೊ ಅಥವಾ ಬಾಡಿಗೆ ರೂಂಗಳಿಗೋ ಸ್ಥಳಾಂತರಗೊಳ್ಳತೊಡಗಿದರು.
ಈ ಆರ್ಥಿಕ ಸಾಫಲ್ಯ ಕೇವಲ ಒಳ್ಳೆಯ ಅಂಶಗಳನ್ನಷ್ಟೆ ತನ್ನ ಒಡಲಲ್ಲಿ ತುಂಬಿತಂದಿತೆ? ‘ಋಣಾತ್ಮಕ’ ಎನ್ನಬಹುದಾದ ಯಾವ ಅಂಶವೂ ಈ ಆರ್ಥಿಕ ಚೇತರಿಕೆಯ ಭಾಗವಾಗಿರಲಿಲ್ಲವೆ? ಊರು ಅಂದ ಮೇಲೆ ಹೊಲಗೇರಿ ಇಲ್ಲದಿರುತ್ತದೆಯೆ? ರೈತವರ್ಗದ ಈ ಹೊಸ ಆರ್ಥಿಕ ಚೈತನ್ಯ ರೈತಾಪಿ ಜನತೆಯ ಕೆಲ ಸಂಕಷ್ಟಗಳಿಗೂ ಕಾರಣವಾಯಿತು. ಅಲ್ಲಿಯವರೆಗೆ ಕದ್ದೋ ಮುಚ್ಚಿಯೋ ಹೊಲಗಳ ಮರದ ಕೆಳಗೆ ನಡೆಯುತ್ತಿದ್ದ ಇಸ್ಪೀಟ್ ಆಟ ಊರ ಹೃದಯಭಾಗದ ಚಂದ್ರಮೌಳೇಶ್ವರ ಗುಡಿಯ ಆವರಣ ತಲುಪುವ ಮಟ್ಟಿಗಿನ ಬೆಳವಣಿಗೆಯನ್ನು ದಾಖಲಿಸಿತು, ಎದೆಗಾರಿಕೆಯನ್ನು ಪ್ರದರ್ಶಿಸಿತು. ಬೆರಳೆಣಿಕೆಯಷ್ಟಿದ್ದ ಜೂಜುಕೋರರ ಸಂಖ್ಯೆಯಲ್ಲಿ ಬಹಳ ದೊಡ್ಡಮಟ್ಟದ ವೃದ್ಧಿಯಾಯಿತು. ಸೆರೆ ಕುಡಿಯುವವರ ಅಂಕಿಅಂಶದಲ್ಲೂ ಗಣನೀಯ ಪ್ರಮಾಣದ ಪ್ರಗತಿ ಕಂಡು ಬಂದಿತು. ಊರಿನ ಹೆಂಡದಂಗಡಿಗಳಿಗೂ ಆರ್ಥಿಕ ಅಭಿವೃದ್ದಿಯ ಬಿಸಿತಾಕಿತು. ಸೇಂದಿ ಕುಡಿದು ಊರ ಚರಂಡಿಗಳಲ್ಲಿ ಬೀಳುವವರ ಏರಿದ ಸಂಖ್ಯೆಯೊಟ್ಟಿಗೆ ಮಾನಮರ್ಯಾದೆಗೆ ಅಂಜಿಯೋ ಅಥವಾ ತಮ್ಮ ಆರ್ಥಿಕ ಸೌಲತ್ತಿನ ಕಾರಣದಿಂದಲೋ ದುರ್ಗದ ಬಾರುಗಳಿಗೆ ಶರಣಾದವರು ತಡರಾತ್ರಿಯ ಕೊನೆಯ ಬಸ್ಸುನ್ನು ಹಿಡಿದು ಊರಿಗೆ ಮರಳಿ ನಶೆಯ ದೆಸೆಯಿಂದ ತೂರಾಡುತ್ತಾ ಆಯತಪ್ಪಿ ಊರಿನ ಚರಂಡಿಗಳ ಪಾಲಾಗುತ್ತಿದ್ದದ್ದು ದುರ್ಭಾಗ್ಯ ಎಂದೇ ಒಕ್ಕಣಿಸತಕ್ಕದ್ದು. ಕುಡಿದರೂ ಊರ ಚರಂಡಿಗಳ ಪಾಲಾಗಿ ಹೋಗಿ ಮಾನವನ್ನು ಕಳೆದುಕೊಳ್ಳಬಾರದು ಎನ್ನುವ ಅಂಜಿಕೆಯಿಂದ ದುರ್ಗ ಸೇರಿ ಅಲ್ಲಿನ ಮದಿರಾಪಾನದ ನಂತರವೂ ಊರಿನಲ್ಲಿಯೇ ಕಳ್ಳು ಸೇವಿಸಿದ ಗೆಳೆಯರ ಬಳಗದ ಒಟ್ಟಿಗೇ ಚರಂಡಿಗಳಲ್ಲಿ ರಾತ್ರಿಗಳನ್ನ ಹಂಚಿಕೊಳ್ಳಬೇಕಾಗಿ ಬಂದ ಇಂತಹವರ ಪಾಡನ್ನು ಬೇರೆ ಯಾವ ಮಾತುಗಳಲ್ಲಿ ವರ್ಣಿಸಬೇಕು? ಇದ್ದುದರಲ್ಲಿ ಕೆಲವೇ ಕೆಲವು ತುಂಬಾ ಅನುಕೂಲಸ್ತ ಮನೆತನದ ಮಕ್ಕಳು ಮಾತ್ರ ಸದೂರದ ಬೆಂಗಳೂರಿಗೆ ಹೋಗಿ ತಮ್ಮ ಸದ್ಗುಣಗಳನ್ನ ಮೆರೆಯುವ ಹುನ್ನಾರದಲ್ಲಿ ಯಶಸ್ವಿಯಾದರೆಂದೆ ಗಣಿಸಬೇಕು. ವಾರಗಟ್ಟಲೆ ಬೆಂಗಳೂರಿನ ಹೋಟೆಲುಗಳಲ್ಲಿ ಉಳಿದು ಕುಡಿದು, ತಿಂದು, ಆಡಿದ ಇವರುಗಳು ತಮ್ಮ ಮಾನಮರ್ಯಾದೆಗಳನ್ನು ಒಂದು ಮಟ್ಟಕ್ಕೆ ಕಾಯ್ದುಕೊಂಡಿದ್ದಂತೂ ನಿಜ.
ಈ ಅವಧಿಯಲ್ಲಿ ಶಿಕ್ಷಣದ ವಿಷಯದಲ್ಲಿಯೂ ಊರಿನ ಸುಧಾರಿಸಿದ ಹಣಕಾಸಿನ ಪರಿಸ್ಥಿತಿ ತನ್ನ ಪ್ರಭಾವವನ್ನು ಬೀರಿತ್ತು. ನಾನು ಗುರುತ್ರಯರೆಂದೇ ಹೆಸರಿಸುವ ಅಂಬಳಿಗೆ ರುದ್ರಪ್ಪ ಮಾಸ್ಟರ್, ನಿಂಗಪ್ಪ ಮಾಸ್ಟರ್ ಮತ್ತು ಗಾಣಿಗರ ಗುರುಮಲ್ಲಪ್ಪ ಮಾಸ್ಟರ್ ಜಂಟಿಯಾಗಿ ಆ ವರ್ಷ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಮನೆಪಾಠದ ತರಗತಿಗಳನ್ನು ಕೋಟೆಯಲ್ಲಿರುವ ‘ಹೋಳಿಗೆ’ಯವರ ಬಾಡಿಗೆ ಮನೆಯಲ್ಲಿ ಪ್ರಾರಂಭಿಸಿದರು. ಪ್ರತೀದಿನ ಸಂಜೆ ಆರರಿಂದ ಒಂಬತ್ತು ಗಂಟೆಯವರೆಗೆ ನಡೆಯುತ್ತಿದ್ದ ಈ ಶಾಲೆಗಳು ನನ್ನನ್ನೂ ಸೇರಿದಂತೆ ಅನೇಕ ಬಾಲಕ ಬಾಲಕಿಯರಿಗೆ ಶಾಲೆಯಲ್ಲಿ ಸುಲಭವಾಗಿ ಅರ್ಥವಾಗದೆ ಇದ್ದ ಅನೇಕ ಪಠ್ಯದ ವಿಷಯಗಳನ್ನು ಅದರಲ್ಲೂ ಪ್ರಮುಖವಾಗಿ ಗಣಿತದ ವಿಷಯವನ್ನು ಮನದಟ್ಟು ಮಾಡಿಕೊಡುವಲ್ಲಿ ನೆರವಾದವು. ಐದನೇ ತರಗತಿಗೆ ನಿಂಗಪ್ಪ ಮೇಷ್ಟ್ರು, ಆರನೇ ತರಗತಿಗೆ ರುದ್ರಪ್ಪ ಮೇಷ್ಟ್ರು ಮತ್ತು ಏಳನೇ ತರಗತಿಗೆ ಗುರುಮಲ್ಲಪ್ಪ ಮೇಷ್ಟ್ರು ‘ಅದ್ಭುತ’ ಎಂದು ಉಲ್ಲೇಖಿಸಲಷ್ಟೆ ಅರ್ಹವಾದ ಮನೆಪಾಠವನ್ನು ಹೇಳಿಕೊಡುತ್ತಿದ್ದರು. ಎಸ್ಸೆಸ್ಸೆಲ್ಸಿಯ ನಂತರ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ವಿದ್ಯೆಯನ್ನು ಮುಂದುವರೆಸಲು ಆಗದ ಊರಿನ ಕೆಲವು ಯುವಕ ಯುವತಿಯರ ಅದೃಷ್ಟವೂ ಈರುಳ್ಳಿ ಬೆಳೆ ಮತ್ತು ಬೆಲೆಯ ಕಾರಣದಿಂದಾಗಿ ಖುಲಾಯಿಸಿತು. ಪೂರಕ ಹಣಕಾಸಿನ ಪ್ರಾಪ್ತಿಯ ನಂತರದಲ್ಲಿ ಮಕ್ಕಳ ಭವಿಷ್ಯದ ಕಡೆಗೆ ಗಮನ ಕೊಟ್ಟ ಊರ ಹತ್ತಾರು ಪೋಷಕರು, ಮಕ್ಕಳ ವಿದ್ಯಾಭ್ಯಾಸ ಮೊಟುಕಾದ ಐದಾರು ವರ್ಷಗಳ ನಂತರವೂ ತಮ್ಮ ಮಕ್ಕಳನ್ನು ದುರ್ಗವೇ ಸೇರಿದಂತೆ ಕೆಲ ಪಟ್ಟಣಗಳ ಕಾಲೇಜುಗಳಿಗೆ ಸೇರಿಸಿದರು.
ತ್ರಿಮೂರ್ತಿಗಳ ಮೂರ್ತ ಸ್ವರೂಪರಾದ, ಮೇಲೆ ಉಲ್ಲೇಖಿಸಲಾದ ಗುರುವರ್ಯರು, ಮತ್ತೊಂದು ಬಹಳ ದೊಡ್ಡದಾದ, ಮುಂಬರುವ ಅನೇಕ ವರ್ಷಗಳ ಕಾಲ ಊರಿನ ಸಾಂಸ್ಕೃತಿಕರಂಗದ ನೇಪಥ್ಯದಲ್ಲಿ ಕಿಚ್ಚನ್ನೆ ಹಚ್ಚಿದ ಒಂದು ಮಹತ್ಕಾರ್ಯಕ್ಕೆ ಮುನ್ನುಡಿ ಬರೆದಿದ್ದೂ ೧೯೭೫ರ ಇಸವಿಯಲ್ಲಿಯೇ ಎನ್ನುವುದು ವಿಶೇಷವಾಗಿ ಉಲ್ಲೇಖಿಸುವಂತದ್ದು. ಸಾರ್ವಜನಿಕ ಗಣೇಶೋತ್ಸವದ ಕಲ್ಪನೆಯನ್ನು ಮಾಡಿ, ಸಮಾನಮನಸ್ಕರಾದ ಊರ ಯುವಜನತೆಯನ್ನು ಒಗ್ಗೂಡಿಸಿ ‘ಗೋಂಚಿ’ ಮೆಣಸಿನಕಾಯಿ ಮಾಡುತ್ತಿದ್ದ ಜಾಗಕ್ಕೆ ತಾಗಿದ ಹಾಗೆಯೇ ಇದ್ದ ದೊಡ್ಡದಾದ ಖಾಲಿಜಾಗದಲ್ಲಿ ಇದೇ ವರ್ಷದಿಂದ ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವದ ನೆನಹು ಮಾತ್ರವೆ ಮೈನವಿರೇಳಿಸುವಂತಹುದು.
ಊರ ಸುಧಾರಿಸಿದ ಹಣಕಾಸಿನ ಪರಿಸ್ಥಿತಿ ಇಂತಹ ವಿಕ್ರಮವನ್ನು ಗುರುಗಳ ಮುಖೇನ ಮಾಡಿಸಿತು ಎನ್ನುವುದು ನಿರ್ವಿವಾದವಾದ ಸಂಗತಿ. ಜೇಬು, ತಿಜೋರಿಗಳ (ಗ್ರಾಮೀಣ ಭಾಗಗಳಲ್ಲಿ ಬ್ಯಾಂಕುಗಳ ವಹಿವಾಟು ಪೂರ್ಣಪ್ರಮಾಣದಲ್ಲಿ ಪ್ರಾರಂಭಗೊಳ್ಳದ ದಿನಗಳು ಅವು) ತುಂಬಾ ಹಣ ತುಂಬಿಕೊಂಡಿದ್ದ ಊರಬಾಂಧವರು ಸಿದ್ದಿವಿನಾಯಕನ ಸಾರ್ವಜನಿಕ ಉತ್ಸವಕ್ಕೆ ಧಾರಾಳವಾಗಿ ಆರ್ಥಿಕ ಸಹಾಯಹಸ್ತವನ್ನ ಚಾಚಿದರು ಎಂತಲೇ ಈ ವರ್ಷ ಸಂಗ್ರಹವಾದ ಹಣಕಾಸು ಮುಂದಿನ ಒಂದೂವರೆ ದಶಕಗಳಿಗೂ ಮೀರಿದ ಗಣೇಶೋತ್ಸವವನ್ನ ಅದ್ದೂರಿಯಾಗಿ ನಡೆಸಲು ಅನುವುಮಾಡಿಕೊಟ್ಟಿತು ಎನ್ನುವುದು ಸಣ್ಣ ವಿಷಯವೇನಲ್ಲ. ಊರ ಬಾಲಕ ಬಾಲಕಿಯರ ಪ್ರತಿಭೆಗಳಿಗೆ ರಂಗಪ್ರವೇಶವನ್ನು ಒದಗಿಸಿದ ಈ ವೇದಿಕೆ ಅಕ್ಕಪಕ್ಕದ ಹಳ್ಳಿಗಳ ಅಪರೂಪದ ಜಾನಪದ ಕಲಾವಿದರಿಗೂ ಅಲ್ಲಿಯವರೆಗೂ ಅಲಭ್ಯವಾದ ವೇದಿಕೆಯೊಂದನ್ನು ಒದಗಿಸಿಕೊಟ್ಟಿತು ಎನ್ನುವುದು ಸತ್ಯವಾದ ಮಾತು. ಊರಿನ ಅನೇಕ ಅಜ್ಞಾತ ಆದರೆ ಅಭಿಜಾತ ಪ್ರತಿಭೆಗಳು ಅರಳಿದ್ದು, ಸಾರ್ವಜನಿಕ ರೂಪದಲ್ಲಿ ಬೆಳಕಿಗೆ ಬಂದಿದ್ದು ಇದೇ ವೇದಿಕೆಯ ಸಹಾಯದಿಂದ ಎನ್ನುವುದು ಅತ್ಯಂತ ಅಭಿಮಾನದ ವಿಷಯವಾಗಿ ಉಳಿಯುತ್ತದೆ. ನಮ್ಮೂರಿನ ಅಜ್ಞಾತ ಪ್ರತಿಭೆಗಳ ಅನಾವರಣ ಎನ್ನುವ ಹೊತ್ತು ಮೂಲಂಗಿ ಹೇಮಣ್ಣನ ಕೊಳಲುವಾದನ ನನ್ನ ಕಿವಿಗಳನ್ನ ತುಂಬುತ್ತಿದೆ. ಹೊಲಗದ್ದೆಗಳ ಬದುವಿನಲ್ಲಿಯೋ, ಮರಗಳ ನೆರಳಿನ ಆಸರೆಯಲ್ಲಿಯೋ ಹವ್ಯಾಸರೂಪದಲ್ಲಿ ಮೊದಲಿಟ್ಟ ವೇಣುವಾದನವನ್ನ ಹೇಮಣ್ಣ ಮುಂದಿನ ದಿನಗಳಲ್ಲಿ ಮುರಳಿಯ ಮೋಹಕಗಾನದೆತ್ತರಕ್ಕೆ ಕೊಂಡೊಯ್ದಿದ್ದ. ಸಾರ್ವಜನಿಕ ಗಣೇಶೋತ್ಸವದ ವೇದಿಕೆಯ ಮುಖಾಂತರ ಊರ ಜೀವಗಳನ್ನು ಆರ್ದವಾಗಿಸಿದ ಹೇಮಣ್ಣನ ವ್ಯಕ್ತಿತ್ವದ ಛಾಪು ಅಂದಿನಿಂದ ಸಂಪೂರ್ಣ ಬದಲಾಗಿ ಹೋಯಿತು ಮತ್ತು ಪರಿಪಕ್ವತೆಯ ರೂಪಾಂತರಕ್ಕೆ ಒಳಪಟ್ಟಿತು. ಪಕ್ಕದ ಊರುಗಳ ಸಮಾರಂಭಗಳಲ್ಲಿ ಅಲ್ಲದೇ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತನ್ನ ಕೊಳಲನಾದವನ್ನು ಮನಮೋಹಕ ವಿಜೃಂಭಣೆಗೆ ಒಳಪಡಿಸಿದ ಹೇಮಣ್ಣನ ಶೋಧದ ಕೀರ್ತಿ ನಮ್ಮ ಗುರುತ್ರಯರು ಕಲ್ಪಿಸಿ, ಸಿದ್ದಿಸಿದ ಸಾರ್ವಜನಿಕ ಗಣೇಶನ ಹಬ್ಬಕ್ಕೇ ಸಲ್ಲಬೇಕು. ಇಂತಹುದೇ ಹಲವು ಹತ್ತು ಪ್ರತಿಭೆಗಳ ಅನಾವರಣ ಮತ್ತು ಲೋಕಾರ್ಪಣೆಗಳ ಮೂಲಕವೇ ಊರಿನ ಸಾರ್ವಜನಿಕ ಗಣೇಶೋತ್ಸವ ತನ್ನ ಸಾರ್ಥಕತೆಯನ್ನು ಮೆರೆಯಿತು.
೧೯೭೫ ಮರೆಯಬಾರದ ಕಹಿಘಳಿಗೆಗಳನ್ನೇನಾದರೂ ಬಿಟ್ಟು ಹೋಗಿದೆಯೇ? ಹೌದು, ರಾಷ್ಟ್ರವ್ಯಾಪಿ ಜಾರಿಯಾದ ತುರ್ತುಪರಿಸ್ಥಿತಿಯ ಕರಾಳನೆನಪು ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಮಷ್ಟಿ ಮಟ್ಟದಲ್ಲಿ ನನ್ನ ಮೇಲೂ ಆಗಿದೆ. ಗಣೇಶೋತ್ಸವದ ತಯಾರಿ ಕಾರ್ಯದಲ್ಲಿ ಗುರುತ್ರಯರ ಹೆಗಲುಗಲಿಗೆ ಹೆಗಲಾಗಿ ಹಗಲುರಾತ್ರಿ ಶ್ರಮಿಸಿದ ಯುವಪಡೆಯ ಬಹುತೇಕ ಸದಸ್ಯಗಣ ಹಬ್ಬಕ್ಕೂ ಸ್ವಲ್ಪ ದಿನ ಮೊದಲು ಚಿತ್ರದುರ್ಗದ ಬೀದಿಗಳಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ಕೂಗಿದ ಘೋಷಣೆಗಳು ಅಂದಿನ ಅತ್ಯಂತ ಪ್ರಮಾದ ಮತ್ತು ಗುರುತರವಾದ ಅಪರಾಧದವೆಂದೇ ಪರಿಗಣಿತವಾದ ಕಾರಣ ಅಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಮುಂದಿನ ಒಂಬತ್ತು ತಿಂಗಳುಗಳವರೆಗೆ ರಾಜಕೀಯ ಖೈದಿಗಳ ರೂಪದಲ್ಲಿ ಬಂಧಿಗಳಾಗಬೇಕಾಗಿ ಬಂದಿದ್ದು ಸಮೂಹ ಮಟ್ಟದಲ್ಲಿ ನನ್ನ ಊರಿನ ಮಾನಸಿಕತೆಯನ್ನು ಗಾಢವಾಗಿ ಕಲಕಿದ ಹೊತ್ತು ಈ ಯುವಕರ ಗುಂಪಿನಲ್ಲಿ ನನ್ನ ಸೋದರಮಾವ ಜಡಿಯಪ್ಪನೂ ಶಾಮೀಲಾಗಿದ್ದು ವೈಯಕ್ತಿಕ ನೆಲೆಯಲ್ಲಿ ನನಗಾದ ದೊಡ್ಡಮಟ್ಟದ ನೋವು. ಪ್ರಥಮ ಸಾರ್ವಜನಿಕ ಗಣೇಶೋತ್ಸವದ ಸಡಗರವನ್ನು ಬಹುಪಾಲು ಹತ್ತಿಕ್ಕಿದ ಈ ಘಟನೆ ಉತ್ಸವದ ಆಯೋಜಕರ ಜಂಘಾಬಲವನ್ನೇ ಉಡುಗಿಸಿದ್ದಂತೂ ನಿಜ.
ಗ್ರಾಮೀಣ ಪ್ರದೇಶದಲ್ಲಿ ಅಪರೂಪಕ್ಕೆ ಎನ್ನುವಂತೆ ಒಂದೊಂದು ಸಲ ಆಗುವ ಒಳ್ಳೆಯ ಮಳೆ, ಅದರಿಂದ ಹುಲುಸಾಗಿ ಬೆಳೆಯುವ ಒಂದು ವಾಣಿಜ್ಯ ಬೆಳೆ, ಆ ಬೆಳೆಗೆ ಸಿಗುವ ಸಮರ್ಪಕ ಬೆಲೆ ಹೇಗೆ ಆ ಪ್ರದೇಶದ ಆರ್ಥಿಕ ಚಿತ್ರಣವನ್ನೇ ಬದಲಾಯಿಸಿ ಬಿಡಬಲ್ಲದು ಎನ್ನುವುದನ್ನು ಯೋಚಿಸಿದಾಗ ಆಶ್ಚರ್ಯವಾಗುತ್ತದೆ. ೧೯೭೫ರ ಸುಭಿಕ್ಷ ಸುಗ್ಗಿ ಕಾಲ ನನ್ನೂರಿನ ಉದ್ಯಮಶೀಲತೆ, ಮಾರುಕಟ್ಟೆ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ, ಮನೋರಂಜನೆ, ಪ್ರವಾಸ, ಸಾಂಸ್ಕೃತಿಕ, ರಾಜಕೀಯವೇ ಮುಂತಾದ ಇತರೆ ರಂಗಗಳ ಅಭೂತಪೂರ್ವ ಏಳಿಗೆಗೆ ಹೇಗೆಲ್ಲಾ ಸಹಕಾರಿಯಾಯಿತು ಎನ್ನುವುದನ್ನು ಕುರಿತು ಯೋಚಿಸುವಾಗ ನೂರಾರು ಕಾಮನಬಿಲ್ಲುಗಳು ಮನದಲ್ಲಿ ಮೂಡಿ ಮರೆಯಾಗುತ್ತವೆ. ಸುಭಿಕ್ಷವಾದ ಊರು ತಾನೊಂದೆ ಉದ್ದಾರವಾಗದೆ ತನ್ನ ಸುತ್ತಮುತ್ತಲಿನ, ನಗರ ಪ್ರದೇಶಗಳೂ ಸೇರಿದಂತೆ ಇರುವ ಪರಿಸರವನ್ನು ಹೇಗೆ ಆರ್ಥಿಕ ದೃಷ್ಟಿಯಿಂದ ಧನಾತ್ಮಕವಾಗಿ ಪರಿವರ್ತಿಸಬಲ್ಲವು ಎನ್ನುವುದು ಇಂದಿನ ಆರ್ಥಿಕತಜ್ಞರು ಗಮನಿಸಬೇಕಾದ ವಿಷಯವಾಗುತ್ತದೆ.
ಊರಿನ ಸಾರ್ವಜನಿಕ ಗಣೇಶೋತ್ಸವದ ನನ್ನ ನೆನಪಿನ ಬುತ್ತಿಯನ್ನು ನಿಮಗಾಗಿ ಬಿಚ್ಚುವ ಪ್ರಯತ್ನವನ್ನು ಮುಂದಿನ ವಾರದ ಬರವಣಿಗೆಯಲ್ಲಿ ಮಾಡುತ್ತೇನೆ.
(ಮುಂದುವರೆಯುವುದು)