
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?
ಹುಟ್ಟಿದಾಗ ಹೆಸರಿಲ್ಲ. ಆಮೇಲೆ ಹೆಸರು! ಈ ಹೆಸರಿಗಾಗಿ ಇಲ್ಲ ಸಲ್ಲದ ಕಸರತ್ತು. ಗಿನ್ನಿಸ್ ದಾಖಲೆ! ಇಡ್ಲಿ ಮುದ್ದೆ ಜಿರಲೆ ಹಾವು ತಿನ್ನುವ ಹಿಡಿವ, ಉಗುರು ಮೀಸೆ ಉದ್ದಾಗಿಸುವ ಪೈಪೋಟಿ! ಪ್ರಕೃತಿ ನೀಡಿದ ಅಂಗಾಂಗ ತಾನು ತನ್ನದೆಂಬ ಭ್ರಮೆಯಲಿ ಅರೆಬರೆ ವೇಷದಿ ದರ್ಶಿಸಿ ಖುಷಿಪಡಿಸಿ ಸೌಂದರ್ಯ ಪಟ್ಟ ಗಿಟ್ಟಿಸುವ ಚಪಲ! ಸೇವೆ ದಾನ ಸಹಾಯ ಮಾಡದೆಯೂ ಪತ್ರಿಕೆ ವೇದಿಕೆಯಲ್ಲಿ ಹೆಸರ ಬಯಸುವ ಆಧಿಕಾರಿಕ ದರ್ಪ ಗೀಳು! ಫ್ಯಾನ್ ಲೈಟ್ ಫಲಕ ಕಲ್ಲಿನ ಮೇಲೆ ದಪ್ಪ ದಪ್ಪ ಹೆಸರ ಕಾಣುವ ಹುಚ್ಚು! ಪ್ರಶಸ್ತಿಗಾಗಿ ಅರ್ಜಿ ಹಾಕಿ, ಹಣ ನೀಡಿ, ಸುತ್ತಿ ಸುಸ್ತಾದರೂ ಬಿಡದ ತವಕ! ಹಿರಿಯರ ಧಿಕ್ಕರಿಸಿ ಉದ್ಯೋಗ ಕಡೆಗಣಿಸಿ ಆಸ್ತಿ ಮಾರಿ ಸಾಲ ಮಾಡಿ ಹೆಂಡ ಕುಡಿಸಿ ಮಾಂಸ ತಿನಿಸಿ ಅಕ್ರಮ ನಡೆಸಿ ಓಟು ಗಿಟ್ಟಿಸಿ ನಾಯಕನಾ/ಳಾಗುವ ಸಾಹಸ! ಸಣ್ಣಕ್ಷರದ ಬಸ್ ತಂಗುದಾಣ! ಅದರ ಮೇಲೆ ದಪ್ಪಕ್ಷರದ ಚಿತ್ರ ಸಹಿತ ಜನಪ್ರತಿನಿಧಿಯ ಹೆಸರು! ಏನು ಎಂಥ ಗೀಳು ವ್ಯಾಮೋಹ ಹೆಸರಿನಲಿ! ಅದೇಕೆ ಹೀಗೆ? ಹೆಸರೇನು ಶಾಶ್ವತವೇ? ಅದು ಗಾಳಿ! ಬೀಸಿ ಕಣ್ಮರೆ! ಕಾಲ ಗತಿಸಿದಂತೆ ಎಂಥ ಹೆಸರೂ ತೆರೆಮರೆ! ಹೆಸರು ಮಾಡಿದವರೇ ಶ್ರೇಷ್ಠರೇ? ಪ್ರತಿ ವ್ಯಕ್ತಿ ವಸ್ತುವಿನಲ್ಲೂ ಹುದುಗಿದೆ ಪ್ರತಿಭೆ ಶ್ರೇಷ್ಠತೆ! ಅದು ದೈವಲೀಲೆ. ಹೆಸರಿನ ಬೆನ್ಹತ್ತದೇ ವಿನಮ್ರದಿ ದೈವಕ್ಕೆ ಬಾಗಿ, ಕಸಗುಡಿಸಿ ಸ್ವಚ್ಛಗೊಳಿಸಿ ಮೂಲೆ ಸೇರಿ ಕಾಣದಂತಿರುವ ಪೊರಕೆಯಂತೆ, ಶಿಶು ಹಸು ಸಸಿಯಂತಿರೋಣ! ಕಸದೊಳಗೆ ಕಸ, ಮಣ್ಣೊಳಗೆ ಮಣ್ಣು, ಸಾಗರದಿ ಬಿಂದು, ಅತಿ ಅಲ್ಪ ನಾವು!!