
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಚಿತ್ತವಿನ್ನಲುಗದೆಂಬಾ ಜಂಬ ಬೇಡ!
ಚಿತ್ತ=ಮನಸ್ಸು, ಬುದ್ಧಿ. ಮನ ಮಂಗ ಬಲು ಚಂಚಲ. ಒಂದೆಡೆ ನಿಲ್ಲದು! ಸತ್ಯ ಅಸತ್ಯ, ಒಳಿತು ಕೆಡುಕುಗಳ ಸರಿ ತಿಳುವಳಿಕೆ, ತ್ಯಾಗ, ಒಳ ಹೊರ ಇಂದ್ರಿಯ ನಿಗ್ರಹ, ಪೂಜೆ ಧ್ಯಾನ ಜಪ ತಪ ತಪ ನಿಯಮ ಸತತ ಸಾಧನೆಗಳಿಂದ ಮನ ಗೆಲ್ಲಬಹುದು. ಅದು ಒಂದೆಡೆ ನಿಲ್ಲಬಹುದು. ಆದರದು ಎಂದಿಗೂ ಹಾಗೇ ಉಳಿವುದೆಂದು ಒಪ್ಪಲಾಗದು! ಮನಕೆ ರೂಪವಿಲ್ಲ. ಅದು ಸುತ್ತಲು ರಸ್ತೆ ವಾಹನ ಹಣ ಬೇಕಿಲ್ಲ! ತಡೆಗೋಡೆ ಅಡ್ಡಿ ತಡೆಯದು! ಈಗ ತೊಳೆದ ವಾಹನ ರಸ್ತೆಗೆ ನುಗ್ಗಲಿ ನುಗ್ಗದಿರಲಿ, ಕ್ಷಣ ಕ್ಷಣ ಕಳೆದಂತೆ ಕಣ ಕಣ ಮೆತ್ತುತ ಕೊಳೆಯಾದಂತೆ ಮನ ಮಲಿನ ಚಂಚಲ! ಆಶೆ ಬಿಟ್ಟೆ ಸತ್ತಿತು, ಸಿಟ್ಟು ತೊರೆದೆ, ಇಂದ್ರಿಯಗಳನ್ನು ಗೆದ್ದೆ! ಇನ್ನೇನು ಭಯ? ಎನ್ನಲಾಗದು, ಜಂಬ ಪಡಲಾಗದು! ತಂಪು ತಾಗಿದ ನೀರು ಮೋಜುಗಡ್ಡೆ! ಬಿಸಿ ತಾಗಲು ಮತ್ತೆ ನೀರು ನೀರು! ಬಿಸಿ ತಾಗಿದರೆ ಸಾಕು, ತುಪ್ಪ ಕರಗುವುದು! ಕರಗಬಾರದೆಂದಿದ್ದರೆ ಬಿಸಿ ತಾಗದಂತಿರಿಸಬೇಕು! ಕಸದ ಬೀಜ ಬಿತ್ತಬೇಕಿಲ್ಲ. ಎಲ್ಲಿಂದಲೋ ತಂದು ಪಕ್ಷಿ ಎಸೆದ, ಗಾಳಿ ತೂರಿಸಿ ತಂದ ಬೀಜ ಹುಟ್ಟುವುದು! ಯಾವುದೋ ನೋಟ ಮಾತು ವಾಸನೆ ಸ್ಪರ್ಶ ರಸಗಳು ಕಣ್ಣು ಕಿವಿ ಮೂಗು ಚರ್ಮ ನಾಲಿಗೆಗೆ ಸೋಂಕಿ ಮನವನು ಮೋಹ ಚೋಚಲಗೊಳಿಸುವವು!
ಜಂಬವ ತೊರೆಯೋಣ! ನಿತ್ಯ ಸಾಧನೆಗೈಯ್ಯೋಣ!!