ಮೀಸಲಾತಿಯನ್ನು ಇದುವರೆಗೆ ಅನುಭವಿಸಿರುವವರು ಇತರರಿಗೆ ದಾರಿ ಮಾಡಿಕೊಡುವ ಔದಾರ್ಯದ ನಡವಳಿಕೆಗೆ ಇಂದಲ್ಲ ನಾಳೆ ಚಾಲನೆ ದೊರೆಯಬೇಕಿದೆ. ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವುದು ಅಸಾಧ್ಯ. ಮೀಸಲಾತಿ ನೀತಿ ಜಾರಿಗೆ ಬಂದ ನಂತರದಲ್ಲಿ ಅದರ ಲಾಭ ಪಡೆದಿರುವ ಉದ್ಯೋಗಸ್ಥರು, ರಾಜಕಾರಣಿಗಳು, ಅಧಿಕಾರಿ ನೌಕರ ಸಮುದಾಯ ಇತ್ಯಾದಿ ಮೂರುಮೂರು ಪೀಳಿಗೆ ಜನ ತ್ಯಾಗಕ್ಕೆ ಮುಂದಾಗಬೇಕಿದೆ. ಮೀಸಲಾತಿಯಿಂದ ಅನುಕೂಲದ ಹಂತ ಏರಿದವರನ್ನು ಪಟ್ಟಿಯಿಂದ ತೆಗೆದುಹಾಕಿ ಅವಕಾಶ ವಂಚಿತರಿಗೆ ಜಾಗ ಕಲ್ಪಿಸಬೇಕೆಂಬ ಒತ್ತಾಯದ ಜನಾಂದೋಳನ ಹಿಂದೊಮ್ಮೆ ನಡೆದಿತ್ತು. ಅಂಥದೇ ಆಂದೋಲನಕ್ಕೆ ಜನ ಅಣಿಯಾಗಬೇಕಿದೆ.
ಮೀಸಲಾತಿ ನೀತಿಗೆ ಕಾಯಕಲ್ಪದ ಅಗತ್ಯ
ಯಾವ ಯಾವ ಸಮುದಾಯಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ಶಿಕ್ಷಣ, ಉದ್ಯೋಗ ಮತ್ತಿತರ ಮೀಸಲಾತಿ ನೀಡಬೇಕೆಂಬ ವಿಚಾರದ ಪರಮಾಧಿಕಾರವನ್ನು ರಾಜ್ಯಗಳಿಗೆ ಮತ್ತೆ ದಯಪಾಲಿಸಲಾಗಿದೆ. ಸಂಸತ್ ಅಧಿವೇಶನದ ಕೊನೆಯ ದಿವಸ ವಿರೋಧ ಮತ್ತು ಆಡಳಿತ ಪಕ್ಷಗಳ ಒಮ್ಮನಸ್ಸಿನ ಒಪ್ಪಿಗೆ ಮೇರೆಗೆ ಸಂಸತ್ನ ಉಭಯ ಸದನಗಳು ಯಾವುದೇ ತಕರಾರೂ ಕಿರಿಕಿರಿಯೂ ಇಲ್ಲದೆ ಅಂಗೀಕರಿಸಿರುವ ಸಂವಿಧಾನ ತಿದ್ದುಪಡಿ ಮಸೂದೆ ರಾಜ್ಯಗಳಿಗೆ ಅವು ಕಳೆದುಕೊಂಡಿದ್ದ ಅಧಿಕಾರವನ್ನು ಮರಳಿಸಿದೆ. ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಗೋಗರೆಯುವ ಅಥವಾ ಒತ್ತಡ ತಂತ್ರ ಹೇರಿ ಮಣಿಸುವ ಪ್ರಮೇಯದಿಂದ ರಾಜ್ಯಗಳು ಪಾರಾಗಿರುವುದು ಒಂದಾದರೆ, ಕೇಂದ್ರದತ್ತ ಕೈ ತೋರಿಸಿ ಹೊಣೆಯಿಂದ ನುಣುಚಿಕೊಳ್ಳುವ ರಾಜ್ಯಗಳ ಪ್ರವೃತ್ತಿಗೆ ಅಂತ್ಯ ಹಾಡಿರುವುದು ಮತ್ತೊಂದು.
ಇಂದಿರಾ ಸಾಹ್ನಿ ಹಾಗೂ ಕೇಂದ್ರ ಸರ್ಕಾರದ ನಡುವೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ಖಟ್ಲೆಯಲ್ಲಿ ಮೀಸಲಾತಿ ಪ್ರಮಾಣ ಯಾವುದೇ ಕಾರಣಕ್ಕೂ ಪ್ರತಿಶತ ಐವತ್ತನ್ನು ದಾಟಬಾರದೆಂಬ ಷರತ್ತು ವಿಧಿಸಲಾಗಿದೆ. ಹೀಗಿದ್ದೂ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ.೬೦ನ್ನು ದಾಟಿದೆ. ಮತ್ತು ಅದು ಸುಪ್ರೀಂ ಕೋರ್ಟ್ನ ಅಂಗಳದಲ್ಲಿ ವಿಚಾರಣೆಯನ್ನು ಎದುರಿಸುತ್ತಿದೆ. ತಮಿಳುನಾಡಿನ ಯಾವುದೇ ಪಕ್ಷವೂ ಮೀಸಲಾತಿ ಮೀರಿದೆ ಎಂದು ಕ್ಯಾತೆ ತೆಗೆದಿಲ್ಲ; ಅಂಥ ಧೈರ್ಯ ಮಾಡುವ ರಾಜಕೀಯ ಪಕ್ಷ ಅಥವಾ ರಾಜಕಾರಣಿ ಅಲ್ಲಿ ಕಾಣಿಸುತ್ತಿಲ್ಲ. ಎಲ್ಲ ರಾಜ್ಯಗಳದೂ ಇದೇ ಸ್ಥಿತಿ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಮೀಸಲಾತಿ ಕೊಡಬೇಕೆಂಬ ಮನವಿಯನ್ನು ಅಲ್ಲಿಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಬಹಳ ಹಿಂದಿನ ಘಟನೆಯೇನೂ ಅಲ್ಲ. ಪ್ರಸ್ತುತದ ತಿದ್ದುಪಡಿ ಕಾರಣವಾಗಿ ಆ ಮನವಿ ಈಗ ಅರ್ಥ ಕಳೆದುಕೊಂಡಿದೆ. ಚೆಂಡು ತನ್ನ ಅಂಗಳಕ್ಕೇ ಬಂದು ಬಿದ್ದಿರುವ ಕಾರಣ ಮಹಾರಾಷ್ಟ್ರ ಸರ್ಕಾರ, ಕೇಂದ್ರದತ್ತ ಕೈ ತೋರಿಸಿ ಕೂರುವುದಕ್ಕೆ ಅವಕಾಶ ಇಲ್ಲದಂತಾಗಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಕೈಯಲ್ಲಿ ಇರುವ ಅಧಿಕಾರವನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದು ಸರಿಯಲ್ಲ. ಮೀಸಲಾತಿಯ ನಿರ್ಧಾರವನ್ನು ಆಯಾ ರಾಜ್ಯದ ಜನತೆ ಹಾಗೂ ಅವರು ಆಯ್ಕೆ ಮಾಡಿಕೊಂಡಿರುವ ಸರ್ಕಾರದ ವಿವೇಚನೆಗೆ ಬಿಟ್ಟುಕೊಡುವುದೇ ಸೂಕ್ತ ಎಂಬ ನೆಲೆಯಲ್ಲಿ ಅಧಿಕಾರ ಯಾವ ಕೈಯಲ್ಲಿರಬೇಕೋ ಆ ಕೈಗೆ ಕೊಟ್ಟಿರುವ ತಿದ್ದುಪಡಿ ನಿಜಕ್ಕೂ ಸ್ವಾಗತಾರ್ಹ ನಿರ್ಧಾರ. ಮೀಸಲಾತಿ ಗರಿಷ್ಟ ಮಿತಿ ಪ್ರಮಾಣವನ್ನು ಬಹುತೇಕ ಎಲ್ಲ ರಾಜ್ಯಗಳೂ ಮುಟ್ಟಿದ್ದು ಮುಂದೇನು ಎಂಬ ಪ್ರಶ್ನೆಯನ್ನು ಎದುರಿಸುತ್ತಿವೆ. ತಮಿಳುನಾಡು ಮೀರಿರುವ ಮಿತಿಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮಿತಿಯನ್ನು ಮೀರುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಇಲ್ಲ; ಕೇಂದ್ರಕ್ಕೂ ಇಲ್ಲ ಎನ್ನುವುದು ಗೊತ್ತಿದ್ದೂ ಗೊತ್ತಿದ್ದೂ ಮೀರುವಂತೆ ಒತ್ತಡ ಸರ್ಕಾರಗಳ ಮೇಲೆ ಬರುತ್ತಿದೆ. ಮೀಸಲಾತಿ ಎಂದರೇನು ಎನ್ನುವುದೇ ಗೊತ್ತಿಲ್ಲದ ನೂರಾರು ಹಿಂದುಳಿದ ದಮನಿತ ಸಮುದಾಯಗಳು ಇದೇ ಸಮಯದಲ್ಲಿ ಜಾಗೃತವಾಗುತ್ತಿದ್ದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ಆಗಿರುವ ಅನ್ಯಾಯ ಸರಿಪಡಿಸಿಕೊಡಬೇಕೆಂಬ ಹಕ್ಕೊತ್ತಾಯ ಮಂಡಿಸುತ್ತಿವೆ.
ಹೊಟ್ಟೆಗೆ ಹಿಟ್ಟಿಲ್ಲದವರು ಅಳುವುದು ಸರಿ; ಹೊಟ್ಟೆ ತುಂಬಿದವರೂ ಅಳುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯ ಹಿನ್ನೆಲೆಯಲ್ಲಿ ಮೀಸಲಾತಿ ನೀತಿಯ ಸಾಧಕ ಬಾಧಕಗಳನ್ನು ಸಮಚಿತ್ತದಲ್ಲಿ ನೋಡಬೇಕಿದೆ. ಸಂವಿಧಾನ ಅಸ್ತಿತ್ವಕ್ಕೆ ಬರುವುದರೊಂದಿಗೆ ಬಂದ ಈ ಸೌಲಭ್ಯದ ಆಶಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಅಸಮಾನತೆಯನ್ನು ನಿವಾರಣೆ ಮಾಡುವುದು. ಕಳೆದ ಏಳೂವರೆ ದಶಕದ ಅವಧಿಯಲ್ಲಿ ಈ ಗುರಿ ಸಾಧನೆಯ ದಿಕ್ಕಿನಲ್ಲಿ ದೇಶ ಸಾಕಷ್ಟು ಮುಂದಕ್ಕೆ ಹೋಗಿದೆ. ಆದರೆ ಸವೆಸಿದ ದಾರಿಗಿಂತ ಕ್ರಮಿಸಬೇಕಿರುವ ದೂರ ಬಹಳ ದೀರ್ಘವಿದೆ. ಕಡ್ಡಾಯ ಮೀಸಲಾತಿ ಎಂಬ ನಿಯಮವಿದ್ದರೂ ಅದನ್ನು ಮುರಿಯುವ ಪ್ರವೃತ್ತಿ ಹೆಚ್ಚುತ್ತಿದ್ದು ಅಸಹನೆ ಹೆಚ್ಚುವುದಕ್ಕೂ ಕಾರಣವಾಗಿದೆ.ಮೀಸಲಾತಿ ಸೌಲಭ್ಯವನ್ನು ವಂಚಿಸುವುದು ಹೇಗೆಂಬ ವಿಚಾರ ರಫ್ತು ಮಾಡಬಹುದಾದ ಸಾಮಗ್ರಿಯಾದರೆ ಪ್ರಪಂಚಕ್ಕೆಲ್ಲ ಪೂರೈಸುವಷ್ಟು ಬಗೆಬಗೆಯ ವಂಚನೆ ನಮ್ಮಲ್ಲಿದೆ.
ಸುಖಿ ಸಮಾಜ, ಸಮೃದ್ಧ ಸಮಾಜ, ಸುಶಿಕ್ಷಿತ ಸಮಾಜ ಸುರಕ್ಷಿತ ಸಮಾಜವೂ ಆಗಿರುತ್ತದೆ. ಇವುಗಳಿಂದ ಸಂರಕ್ಷಿತವಾಗಿರುವ ದೇಶ ಯಾವ ದೃಷ್ಟಿಕೋನದಿಂದ ನೋಡಿದರೂ ಸಮೃದ್ಧವಾಗಿರುತ್ತದೆ. ಪ್ರಗತಿಯ ನಿಟ್ಟಿನಲ್ಲಿ ದಾಪುಗಾಲನ್ನಿಡುತ್ತದೆ. ಹಸಿವು, ನಿರಕ್ಷರತೆ ಮತ್ತು ನಿರುದ್ಯೋಗ ಎನ್ನುವುದು ಯಾವುದೇ ದೇಶಕ್ಕೂ ಶಾಪವೇ. ಈ ಮೂರು ಅನಿಷ್ಟ ಎಂದರೆ ಕಾಲಿಗೆ ಬಂಡೆಯನ್ನು ಕಟ್ಟಿಕೊಂಡು ಈಜಿದಂತೆ. ಮೀಸಲಾತಿ ಸದುದ್ದೇಶದ ಕಾರ್ಯಕ್ರಮವೇ ಹೌದು. ಆದರೆ ಅದರ ಅನುಷ್ಟಾನ ಸಮರ್ಪಕವಾಗಿ ಆಗದೇ ಇರುವುದಕ್ಕೆ ಕಾರಣವೇನು…? ಇರುವ ಮೀಸಲಾತಿಯನ್ನು ಹೆಚ್ಚಿಸುವಂತೆ, ಹೊಸ ಮೀಸಲಾತಿಯನ್ನು ನೀಡುವಂತೆ ಆಗ್ರಹಪಡಿಸುತ್ತಿರುವ ಮತ್ತು ಅವರ ಬೇಡಿಕೆಗೆ ಉತ್ತೇಜನ ಸಹಕಾರ ನೀಡಿರುವ ಸಮಾಜ ಶಾಸ್ತ್ರಜ್ಞರು ಇದಕ್ಕೆ ಉತ್ತರಿಸಬೇಕು. ಸ್ವಾತಂತ್ರ್ಯ ಬಂದಾಗ ನಮ್ಮ ಜನಸಂಖ್ಯೆ ೩೬ ಕೋಟಿ ಇತ್ತು. ಈಗ ಅದು ೧೩೬ ಕೋಟಿಯಾಗಿದೆ. ಉದ್ಯೋಗ ಬೇಡುವ ಕೈಗಳು ದಿನದಿನವೂ ಹೆಚ್ಚುತ್ತಿವೆ. ಯಾವುದೇ ಸರ್ಕಾರ ಈ ಬೇಡಿಕೆಯನ್ನು ಪೂರೈಸುವುದು ಆಗದ ಮಾತು. ಸ್ವಾತಂತ್ರ್ಯದ ಜೊತೆಯಲ್ಲಿ ಸ್ವಾವಲಂಬನೆ ಹೆಜ್ಜೆ ಹಾಕಬೇಕು. ರಾಜಕೀಯ ಸ್ವಾತಂತ್ರ್ಯ ಪೂರ್ಣಗೊಳ್ಳುವುದು ದೇಶದ ಜನತೆ ಆರ್ಥಿಕವಾಗಿಯೂ ಸ್ವತಂತ್ರರಾದಾಗ ಮಾತ್ರ ಎಂದು ಮಹಾತ್ಮ ಗಾಂಧಿ ಹೇಳಿದ್ದು ಇದೇ ಅರ್ಥದಲ್ಲಿ. ಆದರೆ ಗಾಂಧಿ ಕನಸು ಇನ್ನೂ ನನಸಾಗದೆ ಭ್ರೂಣಾವಸ್ಥೆಯಲ್ಲೇ ಇದೆ. ಆರ್ಥಿಕ ಸಾಮಾಜಿಕ ಸುಧಾರಣೆಗೆ ಮೀಸಲಾತಿ ನಿಶ್ಚಿತವಾಗಿಯೂ ಒಂದು ಮಾರ್ಗ.
ಭಾರತದ ಏರುಗತಿಯ ಜನಸಂಖ್ಯೆಯನ್ನು ನೋಡಿದರೆ ಮೀಸಲಾತಿ ಸೌಲಭ್ಯ ಅದನ್ನು ಅವಲಂಬಿಸಿರುವ ಸಮುದಾಯ, ಜಾತಿಗಳ ಎಲ್ಲರನ್ನೂ ದಡ ಸೇರಿಸಬಲ್ಲದೇ ಎಂಬ ಪ್ರಶ್ನೆ ಈ ಹಂತದಲ್ಲಂತೂ ಪ್ರಶ್ನೆಯಾಗೇ ಉಳಿದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ೧೫+೩=೧೮ ಪರ್ಸೆಂಟ್ ಮೀಸಲಾತಿ ಇದೆ. ದೇಶದ ಇತರ ಸಮುದಾಯಗಳ ಜನ ಸಂಖ್ಯೆಯಂತೆ ಈ ಸಮುದಾಯದ ಜನಸಂಖ್ಯೆಯೂ ಏರುಗತಿಯಲ್ಲಿದೆ. ಮಾತ್ರವಲ್ಲ, ಸ್ವಾತಂತ್ರ್ಯ ಸಿಕ್ಕ ತರುಣದಲ್ಲಿ ಆ ಸಮುದಾಯ ಅಕ್ಷರ ಲೋಕದಿಂದ ವಂಚಿತವಾಗಿತ್ತು. ಈಗ ವಿದ್ಯಾಭ್ಯಾಸ ಪಡೆದು ಉದ್ಯೋಗಕ್ಕೆ ಅವರು ಸಾಲುಗಟ್ಟಿದ್ದಾರೆ. ಮತ್ತು ಅವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಮೀಸಲಾತಿ ಆಧರಿತ ಉದ್ಯೋಗದ ಆಕಾಂಕ್ಷಿಗಳೇ ಆಗಿದ್ದಾರೆ. ಇನ್ನು ಇತರ ಹಿಂದುಳಿದ ವರ್ಗಗಳ ಬೇಡಿಕೆ ಕೂಡಾ ಅಗತ್ಯ ಮತ್ತು ಪೂರೈಕೆ ದೃಷ್ಟಿಯಿಂದ ಅಜಗಜಾಂತರ ಸ್ಥಿತಿಯಲ್ಲಿದೆ.
ದೇಶದಲ್ಲೇ ಮೊದಲಬಾರಿಗೆ ಮೀಸಲಾತಿ ಸೌಲಭ್ಯ ಬಂದುದು ಕರ್ನಾಟಕದಲ್ಲಿ; ಮೈಸೂರಿನ ಅರಸು ಕೃಷ್ಣರಾಜೇಂದ್ರ ಒಡೆಯರ್ ಕಾಲಾವಧಿಯಲ್ಲಿ. ಸ್ವಾತಂತ್ರ್ಯ ಬಂದ ಬಳಿಕವೂ ಸಂವಿಧಾನದಡಿಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಿದ ರಾಜ್ಯ ಕರ್ನಾಟಕ, ದೇವರಾಜ ಅರಸು ಆಡಳಿತಾವಧಿಯಲ್ಲಿ. ಎಲ್.ಜಿ.ಹಾವನೂರರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ಅರಸು ಸರ್ಕಾರ ರಚಿಸಿದ್ದು ಮಾತ್ರವೇ ಅಲ್ಲ ಆಯೋಗದ ಪ್ರಮುಖ ಶಿಫಾರಸುಗಳೆಲ್ಲವನ್ನೂ ಅನುಷ್ಟಾನಕ್ಕೆ ತಂದಿತು. ಆಗ ದೇವರಾಜ ಅರಸು ಸರ್ಕಾರದ ವಿರುದ್ಧ ಲಿಂಗಾಯತರು ಬಂಡೆದ್ದಿದ್ದರು. ಅರಸು ಕೇರ್ ಮಾಡಲಿಲ್ಲ. ಇವತ್ತು ಇಡೀ ದೇಶಕ್ಕೆ ದೇಶವೇ ಅರಸು ನಡೆದ ದಾರಿಯಲ್ಲಿ ಹೆಜ್ಜೆ ಹಾಕುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಆರ್ಥಿಕವಾಗಿ ರಾಜಕೀಯವಾಗಿ ಸಬಲರಾಗಿರುವ ಪಂಚಮಶಾಲೀ ಲಿಂಗಾಯತರೂ ಮೀಸಲಾತಿಗಾಗಿ ಬೇಡಿಕೆ ಮಂಡಿಸಿದ್ದಾರೆ. ಪ್ರಸ್ತುತ ಇತರ ಹಿಂದುಳಿದ ವರ್ಗದಲ್ಲಿದ್ದು ಮೀಸಲಾತಿ ಪಡೆಯುತ್ತಿರುವ ಕುರುಬ ಸಮುದಾಯದವರು ಇನ್ನಷ್ಟು ಮೀಸಲಾತಿಗಾಗಿ ಆಗ್ರಹಪಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯ ರಾಜಕೀಯವಾಗಿ ಅತ್ಯಂತ ಬಲವಾಗಿವೆ. ಅವರನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವುದು ಕಷ್ಟ ಎಂಬಷ್ಟರವರೆಗೆ ಅವರ ಪ್ರಭಾವಳಿ ಬೆಳೆದಿದೆ. ಪಂಚಮಶಾಲಿ ಲಿಂಗಾಯತ ಮತ್ತು ಕುರುಬ ಸಮುದಾಯದ ಮಠಗಳ ಆಶ್ರಯದಲ್ಲಿ ಬೆಂಗಳೂರು ರ್ಯಾಲಿ ನಡೆದುದು ಮೀಸಲಾತಿ ಉದ್ದೇಶಕ್ಕೇ. ಇನ್ನಷ್ಟು ಬೇಕು ಮತ್ತಷ್ಟು ಬೇಕು ಎಂಬ ವರಾತ ಇಂಥ ರ್ಯಾಲಿಗಳ ಹಿಂದಿರುತ್ತದೆ.ಸರ್ಕಾರವೂ ಇಂಥದಕ್ಕೆಲ್ಲ ಮಣೆ ಹಾಕುತ್ತದೆ.
ಹಿಂದುಳಿದ ವರ್ಗಗಳಿಗೆಂದೇ ಇರುವ ಹಿಂದುಳಿದ ಪ್ರವರ್ಗ ೨ಎ ಅಡಿ ತಮಗೆ ಮೀಸಲಾತಿ ಕಲ್ಪಿಬೇಕೆಂದು ಪಂಚಮಶಾಲಿಗಳು ಹಟ ಹಿಡಿದಿದ್ದಾರೆ. ಆ ಸಮುದಾಯದ ಕೆಲವು ನಾಯಕರು ತಮ್ಮ ರಾಜಕೀಯ ಅಜೆಂಡಾವಾಗಿ ಈ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಪಡಿಸುತ್ತಿದ್ದಾರೆ. ಆದರೆ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಈ ಬೇಡಿಕೆಗೆ ಯಾವುದೇ ಕಾರಣಕ್ಕೂ ಸರ್ಕಾರ ಮಣಿಯಕೂಡದೆಂದು ಎಚ್ಚರಿಸಿದೆ. ರಾಜ್ಯದಲ್ಲಿ ಮೀಸಲಾತಿ ಸೌಲಭ್ಯವನ್ನು ಇನ್ನೂ ಪಡೆಯದ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ನೂರಕ್ಕೂ ಅಧಿಕ ಜಾತಿಗಳಿವೆ. ಅಂಥ ಅಸಹಾಯಕರ ಕಲ್ಯಾಣ ಕಾರ್ಯಕ್ರಮಗಳತ್ತ ಸರ್ಕಾರ ಗಮನ ಹರಿಸಬೇಕೇ ವಿನಾ ಮುಂದುವರಿದವರಿಗೇ ಮತ್ತೆ ಮತ್ತೆ ಮಣೆ ಹಾಕುವುದಲ್ಲ ಎಂದಿದೆ. ಈ ಮಧ್ಯೆ ಸದಾಶಿವ ಆಯೋಗದ ಶಿಫಾರಸಿನ ಜಾರಿಗೆ ಸರ್ಕಾರದ ಮೇಲೆ ಒತ್ತಡ ಏರುತ್ತಿದೆ. ಪರಿಶಿಷ್ಟ ಜಾತಿಯಲ್ಲಿ ಮಾದಿಗರನ್ನು ತುಳಿದು ಹಾಕುವ ಯತ್ನ ಇಷ್ಟೂ ವರ್ಷಕಾಲ ನಡೆದಿದ್ದು ಅದಕ್ಕೆ ತಡೆ ಹಾಕಲು ಇದು ಸಕಾಲ ಎಂದು ಮಾದಿಗ ಸಮುದಾಯಕ್ಕೆ ಸೇರಿದ ಪರಿಶಿಷ್ಟರು ಧ್ವನಿ ಎತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಎಡಗೈಯವರನ್ನು ದೂರ ತಳ್ಳಿ ಬಲಗೈ ಪಂಗಡಕ್ಕೆ ಮಾತ್ರವೇ ಕಾಂಗ್ರೆಸ್ ಆದ್ಯತೆ ನೀಡಿರುವ ವಾಸ್ತವದ ಹಿನ್ನೆಲೆಯಲ್ಲಿ ವಿಚಾರ ಈಗ ರಾಜಕೀಯ ಮೇಲುಗೈ ಆಟಕ್ಕೂ ಕಾರಣವಾಗಿದೆ. ಸದಾಶಿವ ವರದಿಯನ್ನು ಒಪ್ಪಬಾರದೆಂದು ಬಲಗೈ ಸಮುದಾಯದ ನಾಯಕರು ಒತ್ತಾಯ ಮಾಡುತ್ತಿರುವುದನ್ನು ನೋಡಿದರೆ ಎಡಗೈ ಸಮುದಾಯದ ಆರೋಪದಲ್ಲಿ ನಿಜವಿರುವಂತೆ ಕಾಣಿಸುತ್ತಿದೆ. ಹಂಚಿಕೊಂಡು ತಿನ್ನಬೇಕು ಎನ್ನುವುದು ಒಂದು ಆದರ್ಶ. ಹಸಿದಿರುವವರಿಗೆ ಒಂದು ತುತ್ತು ಜಾಸ್ತಿ ನೀಡಬೇಕು ಎನ್ನುವುದು ಮತ್ತೊಂದು ಆದರ್ಶ. ಪಂಚಮಶಾಲಿಗಳು, ಕುರುಬ ಸಮುದಾಯದವರು, ಬಲಗೈ ಪರಿಶಿಷ್ಟರು ಈ ಆದರ್ಶಗಳನ್ನು ಮರೆಯಬಾರದು.
ಮೀಸಲಾತಿಯನ್ನು ಇದುವರೆಗೆ ಅನುಭವಿಸಿರುವವರು ಇತರರಿಗೆ ದಾರಿ ಮಾಡಿಕೊಡುವ ಔದಾರ್ಯದ ನಡವಳಿಕೆಗೆ ಇಂದಲ್ಲ ನಾಳೆ ಚಾಲನೆ ದೊರೆಯಬೇಕಿದೆ. ಈಗ ಇರುವ ಮೀಸಲಾತಿ ಪ್ರಮಾಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವುದು ಅಸಾಧ್ಯ. ಹಾಗಾಗಿ ಒಂದೆರಡು ಪೀಳಿಗೆ ಕಾಲ ಮೀಸಲಾತಿ ಸವಲತ್ತಿನ ಅನುಕೂಲ ಪಡೆದಿರುವ ಉದ್ಯೋಗಸ್ಥರು, ರಾಜಕಾರಣಿಗಳು, ಅಧಿಕಾರಿ ನೌಕರ ಸಮುದಾಯ ಈಗ ತ್ಯಾಗಕ್ಕೆ ಮುಂದೆ ಬರಬೇಕಿದೆ. ಮೀಸಲಾತಿ ಪಡೆದು ಅನುಕೂಲದ ಹಂತ ಏರಿದವರನ್ನು ಆ ಪಟ್ಟಿಯಿಂದ ತೆಗೆದುಹಾಕಬೇಕು; ಇನ್ನೂ ಅವಕಾಶ ಸಿಗದವರಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ದಶಕಗಳ ಹಿಂದೆ ಉತ್ತರ ಭಾರತದಲ್ಲಿ ಬಹಳ ದೊಡ್ಡ ಜನಾಂದೋಳನವೇ ನಡೆದಿತ್ತು. ಆದರೆ ಆಸಕ್ತ ಹಿತಗಳು ಚಳವಳಿಯನ್ನು ಸಾಯಿಸಿದರು. ಆಗ ಅದನ್ನು ಕ್ರೀಮಿ ಲೇಯರ್ ತೆಗೆಯುವುದು ಎಂದು ಕರೆಯಲಾಗಿತ್ತು.ಈಗ ಅಂಥದೇ ಆಂದೋಲನಕ್ಕೆ ಮುಹೂರ್ತ ಅಣಿಯಾಗಬೇಕಿದೆ.
ಕ್ರೀಮಿ ಲೇಯರ್ ಎಂದರೆ ಯಾರೆಲ್ಲ ಅದರಲ್ಲಿ ಬರುತ್ತಾರೆ ಎನ್ನುವುದಕ್ಕೆ ದೊಡ್ಡ ಸಂಶೋಧನೆಯ ಅಗತ್ಯವೇನೂ ಇಲ್ಲ. ಮೀಸಲಾತಿ ಸೌಲಭ್ಯ ಅನುಷ್ಟಾನಕ್ಕೆ ಬಂದ ಲಾಗಾಯ್ತಿನಿಂದಲೂ ಸವಲತ್ತನ್ನು ಪಡೆಯುತ್ತ ಬಂದಿರುವ ಜನರ, ಕುಟುಂಬಗಳ ಪಟ್ಟಿ ಸರ್ಕಾರದಲ್ಲಿ ಇದ್ದೇ ಇರುತ್ತದೆ. ಊರೂರುಗಳಲ್ಲಿಯೂ ಅಂಥವರನ್ನು ಜನ ಗುರುತಿಸುತ್ತಾರೆ. ಈಗಾಗಲೇ ಸಹಸ್ರಾರು ಕುಟುಂಬಗಳ ಮೂರನೇ ಪೀಳಿಗೆ ಈ ಅನುಕೂಲದಲ್ಲಿ ಸುಖ ನೆಮ್ಮದಿಯನ್ನು ಕಂಡಿವೆ. ಎಲ್ಲ ಹಂತದಲ್ಲಿಯೂ ಇವರು ಇವರ ಮಕ್ಕಳು, ಅಳಿಯ, ಸೊಸೆಯಂದಿರು, ಅಣ್ಣತಮ್ಮಂದಿರೇ ಸವಲತ್ತು ಪಡೆಯುತ್ತಿದ್ದು ಅವರನ್ನೆಲ್ಲ ಪಟ್ಟಿ ಮಾಡಿ ಅವರ ಬದಲಿಗೆ ಇನ್ನೂ ಸವಲತ್ತು ಪಡೆಯದವರನ್ನು ಹುರಿದುಂಬಿಸುವ ಕೆಲಸ ಆಗಬೇಕಿದೆ. ಮೀಸಲಾತಿ ಸೌಲಭ್ಯ ಪಡೆದವರು ಮತ್ತು ಪಡೆಯದೇ ಇರುವ ದಮನಿತರ ನಡುವೆ ಸಂಘರ್ಷಕ್ಕೆ ಎಡೆ ಇಲ್ಲದಂತೆ ನಾಜೂಕಾಗಿ ಈ ಕೆಲಸ ಮಾಡುವುದಕ್ಕೆ ಎಲ್ಲ ರಾಜ್ಯ/ ಕೇಂದ್ರ ಸರ್ಕಾರಗಳು ಮನಸ್ಸು ಮಾಡಬೇಕಿದೆ. ಮೀಸಲಾತಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೂ, ಅರಸು ಕಾಲದಲ್ಲಿಯೂ ಮಾದರಿಯಾದ ಕರ್ನಾಟಕ ಇದಕ್ಕೆ ಚಾಲನೆ ನೀಡುವಂತಾದರೆ ಸಾಮಾಜಿಕ ಸಾಮರಸ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಕರೀಟ ಕರ್ನಾಟಕದ್ದಾಗುತ್ತದೆ.