
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಏನು ಹಗೆ! ಏನು ಧಗೆ!
ಮಾನವ ಸರ್ವಶ್ರೇಷ್ಠ. ವಿಚಾರಪರತೆ ಹೊಣೆಗಾರಿಕೆ ಅತ್ಯದ್ಭುತ! ಆದರೇನು? ಕೆಲರ ವರ್ತನೆ ಅಮಾನುಷ! ಹೃದಯ ವಿದ್ರಾವಕ! ಹಸುಳೆ ವೃದ್ಧರ ಮೇಲೆ ಅತ್ಯಾಚಾರ! ಹಾಡಹಗಲು ನಡುರಸ್ತೆಯಲ್ಲಿ ಜನರೆದುರು ಜನರ ಕಗ್ಗೊಲೆ! ಚೆಂದದ ಬಾಳಿನಲಿ ಸುಳ್ಳು ವಿಷಬೀಜ ಬಿತ್ತಿ ದಾಂಪತ್ಯ ಕೌಟುಂಬಿಕ ಸ್ನೇಹ ಸಂಬಂಧಗಳ ಛಿದ್ರಗೊಳಿಪ ಪಿತೂರಿ! ಕಾಷಾಯ ವೇಷದಿ ದೇವರ ಪ್ರಸಾದದಿ ವಿಷವಿಕ್ಕಿ ಕೊಲ್ಲುವಿಕೆ! ನಂಬಿ ಬಳಿ ಬಂದ ನೊಂದವರ ಕತ್ತು ಸೀಳಿ ನುಂಗುವಿಕೆ! ಜನಸೇವಕ-ಪ್ರತಿನಿಧಿ ಅಧಿಕಾರಿ ಖಾಕಿ ಖಾದಿ ಕಪ್ಪು ಬಟ್ಟೆಯವರ ರಕ್ಷಣೆ ಹೆಸರಿನ ಭಕ್ಷಣೆ! ಗ್ರೀಕ್ ಪುರಾಣದ ಟ್ರೋಜನ್ ಯುದ್ಧದಿ ಹೆಲನ್ ಹೆಣ್ಣಿಗೆ ಸತ್ತದ್ದು ಕೋಟಿ! ರಾಮಾಯಣ ಮಹಾಭಾರತದ ಯುದ್ಧದಿ ಸತ್ತದ್ದು ಅಗಣಿತ! ಭಾರತ ಪಾಕ್ ರಷ್ಯಾ ಅಮೇರಿಕಾ ಚೀನಾ ಅಪ್ಘಾನಿಸ್ತಾನ ತಾಲಿಬಾನ್ ಗಳ ಸಂಘರ್ಷ! ವಿಶ್ವ ಮಹಾಯುದ್ಧ! ಎಂಥ ಶತ್ರುತ್ವ ದ್ವೇಷ ಒಳ ಒಳಗಿನ ಕ್ವಥ ಕ್ವಥ ಕುದಿತ ತಳಮಳ! ನೆಲೆ ನೀಡಿ ಬಾಳಿಸಿದ ಭೂ ತಾಯಿಯ ಅಂಗಳದಿ, ಕೃತಜ್ಞತೆ ಭಕ್ತಿ ಗೌರವ ಭಾವುಕದ ಕಣ್ಣೀರ ಧಾರೆಗೆ ಬದಲಾಗಿ ಹರಿದಿದೆ ರಕ್ತದ ಧಾರೆ! ಆರಾಧನೆಯ ದೇಗುಲವಿದು ಆಗಿದೆ ಕಟುಕನ ಪ್ರಾಣಿ ವಧೆಯ ಕಟ್ಟೆ! ಮಾನವನಾಗಿಹನಿಂದು ರಕ್ತ ಕುಡಿವ ರಾಕ್ಷಸ!
ಮಾನವರಾಗೋಣ, ದುಷ್ಟತನವನು ತೊರೆಯೋಣ!!