ಇಂದಿನಿಂದ ಶಾಲಾ- ಕಾಲೇಜು ಆರಂಭ

Share

ಬೆಂಗಳೂರು,ಆ23: ರಾಜ್ಯದಲ್ಲಿ ಕೋವಿಡ್ ದೃಢ ಪ್ರಮಾಣ ಶೇ 2ಕ್ಕಿಂತ ಹೆಚ್ಚಿರುವ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 9 ರಿಂದ 12 ರವರೆಗಿನ ಭೌತಿಕ ತರಗತಿಗಳು ಇಂದಿನಿಂದ ಆರಂಭವಾಗಲಿವೆ.

ಶಾಲಾ–ಕಾಲೇಜುಗಳಲ್ಲಿ ಭೌತಿಕ ತರಗತಿಗಳ ಆರಂಭಕ್ಕೆ ಜಿಲ್ಲಾ ಆಡಳಿತಗಳು ಸಕಲ ತಯಾರಿ ನಡೆಸಿವೆ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2ಕ್ಕಿಂತಲೂ ಹೆಚ್ಚು ಇದೆ. ಈ ಐದು ಜಿಲ್ಲೆಗಳಲ್ಲಿ ಶಾಲೆ–ಪದವಿ ಪೂರ್ವ ಕಾಲೇಜು ಆರಂಭಿಸುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಶಾಲಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿ ಆಗಲಿದ್ದು, ಸಚಿವ ನಾಗೇಶ್‌ ಜೊತೆ ಇಂದು ಅವರು ಮಲ್ಲೇಶ್ವರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ನಿರ್ಮಲಾರಾಣಿ ಅನುದಾನಿತ ಪ್ರೌಢಶಾಲೆಗೆ ಭೇಟಿ ನೀಡಲಿದ್ದಾರೆ.

ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್‌ ಸೋಂಕಿನ ಲಕ್ಷಣಗಳು ಇಲ್ಲ ಎಂಬುದನ್ನು ದೃಢೀಕರಿಸಬೇಕು. ತರಗತಿಗೆ ಮಕ್ಕಳ ಹಾಜರಾತಿ ಕಡ್ಡಾಯ ಅಲ್ಲ. ಆನ್‌ಲೈನ್‌ ಮೂಲಕವೂ ಶಿಕ್ಷಣ ಪಡೆಯಬಹುದು. ಈ ಆಯ್ಕೆಯನ್ನು ಪೋಷಕರಿಗೆ ಬಿಡಲಾಗಿದೆ.

ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರತ್ಯೇಕ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಹೊರಡಿಸಿದೆ. ಅದರ ಅನ್ವಯ, 9 ಮತ್ತು 10ನೇ ತರಗತಿ ಬೆಳಗಿನ ಅವಧಿಯಲ್ಲಿ ಅರ್ಧ ದಿನ ನಡೆಯಲಿದೆ. ಶಾಲಾ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯಲ್ಲಿ ತಂಡಗಳಾಗಿ ಮಾಡಿ ತರಗತಿ ನಡೆಸಲಾಗುವುದು.

ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಏಕಕಾಲದಲ್ಲಿ ನಡೆಯಲಿದೆ. ಪ್ರತಿ ತರಗತಿಯ ಶೇಕಡ 50ರಷ್ಟು ವಿದ್ಯಾರ್ಥಿಗಳು ಮೊದಲ 3 ದಿನ (ಸೋಮವಾರ, ಮಂಗಳವಾರ, ಬುಧವಾರ), ಉಳಿದ ಶೇಕಡ 50ರಷ್ಟು ವಿದ್ಯಾರ್ಥಿಗಳು ನಂತರದ ಮೂರು ದಿನ (ಗುರುವಾರ, ಶುಕ್ರವಾರ, ಶನಿವಾರ) ತರಗತಿಗಳಿಗೆ ಹಾಜರಾಗಬೇಕು. ತರಗತಿಗೆ ಹಾಜರಾಗದ ದಿನಗಳಲ್ಲಿ ಆನ್‌ಲೈನ್‌ ತರಗತಿಗೆ ಹಾಜರಾಗಬೇಕು. ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆ ಇದ್ದು, ವಿಶಾಲವಾದ ಕೊಠಡಿ ಇದ್ದರೆ, ಎಲ್ಲ ವಿದ್ಯಾರ್ಥಿಗಳಿಗೆ ವಾರ ಪೂರ್ತಿ ತರಗತಿ ನಡೆಸಲು ಅವಕಾಶ ನೀಡಲಾಗಿದೆ.

ಸದ್ಯಕ್ಕೆ 9ನೇ ತರಗತಿಯಿಂದ ತರಗತಿ: ‘ಕೋವಿಡ್ ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಹೇಳಿದ್ದು ನಿಜ. ಇದು ಮಹಾರಾಷ್ಟ್ರ, ಕೇರಳ ರಾಜ್ಯ ಹೊರತುಪಡಿಸಿದರೆ ಬೇರೆಡೆ ಕಂಡುಬಂದಿಲ್ಲ. ಮಕ್ಕಳ ತಜ್ಞರು ಹೇಳುವ ಪ್ರಕಾರ, ಕೊರೊನಾ ಸೋಂಕು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ತುಂಬಾ ಕಡಿಮೆ. 1ನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿತ್ತು. ಆದರೂ, ಸದ್ಯಕ್ಕೆ 9ನೇ ತರಗತಿಯಿಂದ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಸಚಿವ ನಾಗೇಶ್‌ ತಿಳಿಸಿದರು.

Girl in a jacket
error: Content is protected !!