ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ…

Share

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ…

ಅವಳು ಹುಡುಗಿ.
ಅವಳು ಕೈಲಾಗದವಳು !
ಮದುವೆಯಾಗಿ ಮನೆಯೊಳಗೇ ಇರಬೇಕಾದವಳು !!
ಎಂಬ ಸಾಂಪ್ರದಾಯಿಕ ಹೇಳಿಕೆಗಳನ್ನ ತನ್ನ ಜೀವನ ಸಂಘರ್ಷಗಳಿಂದಲೇ ಮಣಿಸಿ ಹರ್ಷ ಕಂಡವಳು ಮೇರಿ ಕೋಮ್.
ಎಲ್ಲರಂತೆ ಸಾಮಾನ್ಯ ಕನಸುಗಳನ್ನ ಕಾಣದೆ ತನ್ನ ಹರೆಯದ ವಾಂಛೆಗಳನ್ನ ಬಾಕ್ಸಿಂಗ್ ರಿಂಗ್ ನೊಳಗೇ ಕೂಡಿ ಹಾಕಿದವಳು.
ಬ್ಯಾಕ್ಸಿಂಗ್…ಬಾಕ್ಸಿಂಗ್..ಬಾಕ್ಸಿಂಗ್!!! ಎಂದು ನಿದ್ದೆ ಎಚ್ಚರಗಳಲ್ಲೂ ಧ್ಯಾನಿಸಿದವಳು ಮೇರಿ ಕೋಮ್.
” ಏನೇ ನೀನು ಬರು ಬರುತ್ತಾ ಹುಡುಗನಂತೆ ಆಡುತ್ತಿದ್ದೀಯ?, ನಿನ್ನ ಮುಖಕ್ಕೆ ಏಟು ಬಿದ್ದರೆ ನಿನ್ನನ್ನ ಯಾರು ಬಂದು ಮದುವೆಯಾಗುತ್ತಾರೆ!?” ಎಂಬ ಅಪ್ಪನ ಉರಿವ ಪ್ರಶ್ನೆಯನ್ನ.
” ನೀನು ಮನೆಯಿಂದಲೇ ಹೊರ ಹೋಗಬೇಡ” ಎಂಬ ತಾಕೀತನ್ನ
ಚಾಲಾಕಿ ಹುಡುಗಿಯಂತೆಯೇ ಮೂರು ವರ್ಷದ ತನಕ ಬಾಕ್ಸಿಂಗ್ ಆಟ ಮುಚ್ಚಿಟ್ಟು ಮೆಡಲ್ ಗೆದ್ದು ಅಪ್ಪನ ಒಲವನ್ನೂ ತೊಟ್ಟು ನಕ್ಕವಳು ಮೇರಿ ಕೋಮ್.
ಮುಂದೆ ಪುಟ್ ಬಾಲ್ ಆಟಗಾರ ಕುರಹಿಂಗ್ ಓವೂರ್ ಅವರನ್ನ ಮದುವೆ ಆಗಿ ಮೂರು ಮಕ್ಕಳನ್ನೂ ಪಡೆದು 7 ವಿಶ್ವ ಚಾಂಪಿಯನ್ ಶಿಪ್, ಅಂತರಾಷ್ಟ್ರೀಯ ಮಹಿಳಾ ಅಮೆಚ್ಯೂರ್ ನ ವಿಶ್ವದ ನಂಬರ್ ಒನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಏಕೈಕ ಬಾಕ್ಸರ್ ಮೇರಿ ಕೋಮ್.


ಪದ್ಮ ವಿಭೂಷಣ, ಪದ್ಮಭೂಷಣ,ಪದ್ಮಶ್ರೀ ಸಿಕ್ಕಮೇಲೆಯೂ ” ಯಶಸ್ಸು ಸಿಗುವುದಿಲ್ಲ ನಿನಗೆ ಯಶಸ್ಸು ಸಿಗುವುದಿಲ್ಲ ” ಎಂಬ ಹೇಳಿಕೆಯನ್ನೇ ತಟ್ಟಿ ನಿಂತವಳು ಮೇರಿ ಕೋಮ್.
***
ಮಣಿಪುರದ ಚುರ ಚಂದಾಪುರ ಜಿಲ್ಲೆಯ ಕಂಗತೀ ಗ್ರಾಮದ ಕೇವಲ ಐವತ್ತು ಮನೆಗಳ ಇನ್ನೂರ ಐವತ್ತು ಜನಗಳ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಕೋಮ್ ಮೂಲತಹ ರೈತನ ಮಗಳು.” ಹುಡುಗಿಯರಿಗೆ ಸರಿಯಾದ ಬೆಂಬಲ ಸಿಕ್ಕರೆ ಕ್ರೀಡೆ ಮಾತ್ರವಲ್ಲ ಎಲ್ಲಾ ವಿಷಯಗಳಲ್ಲೂ ನಂಬರ್ ಒನ್ ಆಗಿ ನಿಲ್ಲ ಬಲ್ಲರು” ಎಂಬ ಮಾತಿನಂತೆಯೇ ಆಕೆಯ ಜೀವನವಿದೆ.
ಮೇರಿ ಕೋಮ್ ತಂದೆ ಮಾಂಗ್ ಟೆ ಟೋಡಾ ಕುಸ್ತಿ ಪಟು! ಆತನ ಮೂರು ಮಕ್ಕಳಲ್ಲಿ ಕೋಮ್ ಹಿರಿಯಳು. ಮನೆಯ ಹಿರಿಯರಂತೆಯೇ ಜವಾಬ್ದಾರಿ ಆಕೆ ಮೇಲಿದಿದ್ದರಿಂದ ಆಕೆ ಅಪ್ಪನಿಗೆ ಅಮ್ಮನಿಗೆ ಹೊಲ ಮನೆಯಲ್ಲಿ ಸಹಾಯ ಮಾಡುತ್ತಾ ಹಳ್ಳಿಯಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿದಳು.
ತನ್ನ ಎಂಟನೇ ತರಗತಿಯಿಂದ ಅಥ್ಲೆಟಿಕ್ಸ ಕಡೆಗೆ ಗಮನ ನೀಡಿದ ಮೇರಿ ವಾಲಿಬಾಲ್,ಪುಟ್ ಬಾಲ್ ಗಳಲ್ಲಿ ತೊಡಗಿಕೊಂಡಿದ್ದಳು.2000 ದಲ್ಲಿ ಆಕೆ ಅಥ್ಲೆಟಿಕ್ಸ ಬಿಟ್ಟು ಬಾಕ್ಸಿಂಗ್ ಕಡೆಗೆ ಮುಖಮಾಡಲು ಮೂಲ ಪ್ರೇರಣೆ ಮಣಿ ಪುರದ ಬಾಕ್ಸರ್ ಡಿಕೊಸಿಂಗ್.
ಮೊದ ಮೊದಲು ಬಾಕ್ಸಿಂಗ್ ರಿಂಗ್ ಪ್ರವೇಶಿಸಿದಾಗ ” ಇದು ಹುಡುಗಿಯರ ಕಿಚನ್” ಅಂದುಕೊಂಡೆಯಾ! ಎಂದವರಿಗೆ ತನ್ನ ದಾರಿ ದುರ್ಗಮದ್ದಾದರೂ ಕಾಠಿಣ್ಯವೇ ಅದನ್ನ ಗೆಲ್ಲಿಸುತ್ತದೆ ಎಂಬುದನ್ನ ಅರಿತೇ ಸತತ ಪರಿಶ್ರಮದಿಂದ ಮುನ್ನೆಡೆದಳು.

 


ಮದುವೆಯಾದರೆ ಹೆಣ್ಣುಮಕ್ಕಳ ಸಾಧನೆಯ ಹಾದಿ ಮುಗಿದಂತಯೇ!
ತಾನೇ ಕಂಡ ಕನಸು ಕಮರಿದಂತೆಯೇ!!
ತನ್ನ ಒಳಗಿನ ಗುರಿ ಬತ್ತಿದಂತೆಯೇ!!!
ಎನ್ನುವ ಸಾಮಾಜಿಕ ಹೇಳಿಕೆಗಳಂತೆಯೇ.. ಎಷ್ಟೋ ಹೆಣ್ಣುಮಕ್ಕಳ ಜೀವನವೂ ಕಣ್ಣ ಹನಿಗಳಲ್ಲಿ ಮುಗಿಯುತ್ತದೆ,
ಗಂಡನ ಮನೆಯ ಕಿಟಕಿ ಸರಳುಗಳಲ್ಲೇ ಕಂಡ ಕನಸು ಕೈಗೆಟುಕದ ನಕ್ಷತ್ರವಾಗಿ ಬಿಡುತ್ತದೆ.
ಸಾದ್ವಿ ಎಂದು ,ಗೃಹಿಣಿ ಎಂದು ಮನೆಯೊಡತಿ ಎಂದು ಬೇಲಿ ಹಾಕುವ ಅಲ್ಲಿಂದಲೇ ಗಗನ ತೋರಿಸುವ ಕುಟುಂಬಗಳ ನಡುವೆ ಸಾಧನೆಯ ಹಠ ಹೊತ್ತು ಹೊಸಿಲಿಂದ ಹೊರ ಬಂದು ಹೊಸ ಸಾಧನೆಯ ಇತಿಹಾಸ ಬರೆದವಳು ಮೇರಿಕೋಮ್.
“ಸ್ಟ್ರಗಲ್ ಮೇಕ್ಸ ಯು ಸ್ಟ್ರಾಂಗ್” ಎಂಬಂತೆ ಮೇರಿ ಕೋಮ್ ಮೂರು ಬಾರಿ ವಲ್ರ್ಡ ಚಾಂಪಿಯನ್ನ ಆದ ನಂತರ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಬಾಕ್ಸಿಂಗ್ ಅಸಾಧ್ಯ ಎನ್ನುವ ಆ ಕಾಲದ ನಿರ್ಧಾರವನ್ನ ಸೀಳಿ ಡೈನಾಮೇಟ್ ನಂತೆ ಮತ್ತೆ ಮತ್ತೆ ಸಿಡಿದು ಸುದ್ದಿ ಮಾಡಿದವಳೇ ಮೇರಿ ಕೋಮ್.
ಹೆಣ್ಣು ಸಾಧಿಸಲು ಆಕೆಯ ಹಠದಂತೆಯೇ ಆಕೆಯ ಕುಟುಂಬದ ಸಹಕಾರವೂ ಅಗತ್ಯ, ಕೋಮ್’ಳ ಕನಸಿನ ಬಳ್ಳಿಗೆ ನೀರು ಬೆಳಕಿನಂತೆ ಆಸರೆಯಾದವರು ಆಕೆಯ ಪತಿ ಆಕೆಯ ತರಬೇತುದಾರ ನರಜಿತ್ ಸಿಂಗ್,ಚಾರ್ಲ ಅಟ್ಕಿನ್ಸನ್.
ಭಾರತೀಯ ಬಾಕ್ಸಿಂಗ್ ಎಂಬ ಆಯ್ಕೆ ಸಮಿತಿಯ ಕಪ್ಪು ಬಿಳುಪಿನ ಮುಖಗಳನ್ನೂ ಕಲ್ಲು ಮುಳ್ಳುಗಳ ಕಾಡು ಹಾದಿಯನ್ನೂ ದಾಟಿದವಳು ಕೋಮ್.
” ಒಬ್ಬ ಹೆಣ್ಣು ತಾಯಿ ಆದ ನಂತರ ಮತ್ತಷ್ಟೂ ಶಕ್ತಿ ಪಡೆಯುತ್ತಾಳೆ ಅವಳೊಮ್ಮೆ ಎದ್ದು ನಿಂತರೆ ಆಕೆಯ ಶಕ್ತಿ ಡಬಲ್ ಆಗುತ್ತದೆ” ಎಂಬಂತೆ ಮತ್ತೆ ನಾಲ್ಕು ಚಿನ್ನದ ಪದಕಗಳನ್ನ ಭಾರತಕ್ಕೆ ತಂದು ಕೊಟ್ಟಳು.
2006 ರ ಹ್ಯಾಟ್ರಿಕ್ ವಿಶ್ವ ಚಾಂಪಿಯನ್ ಶಿಪ್, 2006′ ರ ಪದ್ಮಶ್ರೀ,2009 ರ ಧ್ಯಾನ್ ಚಂದ್ ಖೇಲ್ ಪ್ರಶಸ್ತಿ,2013ರ ಪದ್ಮಭೂಷಣ ಪ್ರಶಸ್ತಿ,2020ರ ಪದ್ಮ ವಿಭೂಷಣ ಪ್ರಶಸ್ತಿ,ಅಲ್ಲದೇ ಗೌರವ ಡಾಕ್ಟರೇಟ್,ಅರ್ಜುನ್ ಪ್ರಶಸ್ತಿ,ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗಳು ಆಕೆಯ ಗೌರವ ಹೆಚ್ಚಿಸಿದರೂ “ಯಶಸ್ಸಿಗೆ ಯಾವುದೇ ಮಂತ್ರವಿಲ್ಲ ಕಷ್ಟ ಪಟ್ಟು ಕೆಲಸ ಮಾಡಿ” ಎಂದಳು.

 


ಬದುಕಿನುದ್ದಕ್ಕೂ “ಷಿ ಇಸ್ ದ ರಿಯಲ್ ಲವರ್ ಆಫ್ ಬಾಕ್ಸಿಂಗ್..ಬಾಕ್ಸಿಂಗ್..ಬಾಕ್ಸಿಂಗ್!ಎಂಬುದನ್ನೇ ಸಾಧಿಸಿದಳು. “ಸಮಾಜಕ್ಕಾಗಿ ಗೆಲ್ಲು ನಿನಗಾಗಿ ಗೆಲ್ಲಬೇಡ” ಎಂದ ತನ್ನ ಗುರುಗಳ ಮಂತ್ರವನ್ನೇ ಜೀವನದ ಹಾದಿ ಮಾಡಿಕೊಂಡ ಮೇರಿ ಕೋಮ್ ತನ್ನ ಹಠದಿಂದಲೇ ಗುಡಿಸಲಿನಿಂದ ಬಂಗಲೆಗೆ ಬಂದಳು.ಬಸ್ಸು,ಲಾರಿಗಳೂ ಬಾರದ ಕಗ್ಗಾಡು ಹಳ್ಳಿಯಲ್ಲಿ ಬೆಳೆದ ಹುಡುಗಿ ನಗರದ ಚಲುವಿನಲ್ಲಿ ಬಾಳುವಂತಾದಳು.ಯಾವುದೇ ಸೌಲಭ್ಯ,ಯಾವ ಗೈಡ್,ಯಾವುದೇ ಸಪೋರ್ಟಗಳಿಲ್ಲದ ಹುಡುಗಿ ತನ್ನ ಪ್ಯಾಷನ್ ನಿಂದಲೇ ಅವನ್ನ ಗಳಿಸಿಕೊಂಡಳು. ಕೋಮ್ ಹಳೆಯ ಸರ್ಕಾರಿ ಶಾಲೆಯಲ್ಲಿ ಮರೆಯಾಗಲಿದ್ದ ತನ್ನ ಹೆಸರನ್ನ ಲಿಮ್ಕ ಬುಕ್ ಆಫ್ ರೆಕಾರ್ಡ ನಲ್ಲಿ ಬರೆಸುವಂತಾದಳು.
ಮೇರಿ ಕೋಮ್ ಬಾಕ್ಸಿಂಗ್ ಬದುಕನ್ನ 2004ಕ್ಕೂ ಮೊದಲು,2013 ರ ನಂತರ ಮತ್ತು 2019ರ ನಂತರ ಎಂದು ಏರಿಳಿತಗಳಲ್ಲಿ ಗುರುತಿಸ ಬಹುದು.
ಇತ್ತೀಚಿನ ಟೋಕಿಯೋ ಒಲಂಪಿಕ್ಸನ ಕ್ರೀಡಾಂಗನದೊಳಗೆ ಹಾಕಿ ನಾಯಕ ಪ್ರೀತಂ ಸಿಂಗ್ ಜೊತೆಗೆ ಭಾರತದ ರಾಯಭಾರಿಯಾಗಿ ಭಾವಹಿಸಿದ ಕೋಮ್ ಪ್ರೀ ಕ್ವಾಟ್ರಸ್ ಫೈನಲ್ ನಲ್ಲಿ 3 ನೇ ಶ್ರೇಯಾಂಕದ ಕೊಲಂಬಿಯಾದ ಇಂಗ್ರಿಟ್ ವೆಲಿನ್ಸಿಯಾ ವಿರುದ್ದ ಯಾವ ಕ್ರೀಡಾ ಪ್ರೇಮಿಗಳು ಒಪ್ಪಲಾಗದಂತಹ ಸೋಲನ್ನ ಪಡೆದಳು.

 


ಮೇರಿ ಕೋಮ್ ಸೋಲನ್ನ ಕುರಿತಂತೆ ಸುಮಾರು ನಾಲ್ಕುನೂರಾ ಅರವತ್ತಕ್ಕೂ ಹೆಚ್ಚು ನೆಟ್ಟಿಗರ ಕಾಮೆಂಟ್ ಗಳು ಆಕೆಯೇ ಹೇಳಿದ ” ಇಲ್ಲಿನ ರೆಫರಿಗಳು ನನಗೆ ಡ್ರೆಸ್ ನಿಂದ ಹಿಡಿದು ಜಜ್ಡಮೆಂಟ್ ತನಕ ಮೆಂಟಲ್ ಹೆರಾಸ್ ಮೆಂಟ್ ನೀಡಿದರು.ಮ್ಯಾನುಪಲೇಟ್ ಮಾಡಿದರು.ನನಗೆ ಈಗಲೂ ಸೋತಿರುವುದನ್ನ ನಂಬಲಾಗುತ್ತಿಲ್ಲ” ಎಂಬುದಕ್ಕೆ ಪೂರಕವಾಗಿವೆ. ಹದಿನಾರು ಲಕ್ಷ ಸಾವಿರಕ್ಕೂ ಹೆಚ್ಚು ಮೆಚುಗ್ಚೆಗಳು ಬಂದಿವೆ.
ಜನ ಮಾತು:
1. ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ಒಲಂಪಿಕ್ಸ ಕ್ರೀಡೆ ಪಕ್ಷಪಾತಿಯಂತೆ ಕಂಡಿದೆ.
2. ಮೇರಿ ಆರು ಬಾರಿ ವಿಶ್ವ ಚಾಂಪಿಯನ್, ಕಾಮನ್ ವೆಲ್ತ್ ಮತ್ತು ಏಷ್ಯನ್ ಆಟಗಳಲ್ಲಿ ಚಿನ್ನ ಗೆದ್ದಿದ್ದಾರೆ.2012 ರ ಒಲಪಿಕ್ ನಲ್ಲಿ ಪದಕ ಗೆದ್ದಿದ್ದಾರೆ.ಇಷ್ಟು ಸುಲಭವಾಗಿ ಹೇಗೆ ಸೋಲುತ್ತಾರೆ?.
3. ಕೋಮ್ 2/3 ಸುತ್ತು ಗೆದ್ದವರು ಹೇಗೆ ಸೋತರು?
4. ಮೇರಿ ಕೋಮ್ ಒಬ್ಬ ಉರಿಯುತ್ತಿರುವ ಮಹಿಳೆ ಆಕೆ ಯಾವಾಗಲೂ ನಿಜವಾದ ಯೋಧಳು.ನಿಯಮ ಉಲ್ಲಂಘಿಸದ,ಅಪರಾಧ ಎಸಗದ ಅಪ್ಪಟ ಕ್ರೀಡಾ ಸ್ಫೂರ್ತಿ ಅವರಿಗೆ ಆಕೆಯನ್ನ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
5.ಮೇರಿ ನೀವು ಸೋತಿಲ್ಲ.ಶತಕೋಟಿ ಹೃದಯ ಗೆದ್ದವರು.ಕಣ್ಣೀರಿಡಬೇಡಿ ಖಾಲಿ ಕೈ ನಿಮ್ಮದಲ್ಲ.
6.ಚಿಂತಿಸ ಬೇಡಿ ಮುಂದೆಯೂ ನೀವು ಚಾಂಪಿಯನ್! ನಿಮ್ಮ ವಿದ್ಯಾರ್ಥಿಗಳಿಗೆ ತಯಾರು ಮಾಡಿ ಯಾರಿಗೂ ಬಿಡದೆ ಒಲಪಿಂಕ್ ನಲ್ಲಿ ಪದಕ ಗೆಲ್ಲಿಸಿ ಸೇಡು ತೀರಿಸಿಕೊಳ್ಳಿ.
ಕೊನೆಮಾತು:
ಕ್ರೀಡೆ ಎಂಬುದೊಂದು ಸಂಘಟಿತ ಕ್ರಿಯೆ,ಸ್ಪರ್ಧಾತ್ಮಕ ಹಾಗೂ ಕೌಶಲ್ಯಗಳಿಂದ ಕೂಡಿದ ದೈಹಿಕ ಚಟುವಟಿಕೆ.ಇದಕ್ಕೆ ನ್ಯಾಯ ಹಾಗೂ ಬಧ್ದತೆಗಳ ಅಗತ್ಯವಿದೆ.ಇಲ್ಲಿ ಸೋಲು ಮತ್ತು ಗೆಲುವನ್ನ ನಿರ್ಧರಿಸುವಾಗ ದೈಹಿಕ ಸಾಮಥ್ರ್ಯಗಳೂ ಮುಖ್ಯವೆನಿಸುತ್ತವೆ. ಉರಿದು ಉರಿದು ಧಣಿದಂತೆ ಕಾಣುವ ಮೇರಿ ಕೋಮ್’ಳ ಸೋಲು ಭಾರತದ ಆಯ್ಕೆಯ ರೀತಿಯತ್ತಲೂ ಬೆಳಕು ಬೀರುವಂತಿದೆ.
ಕ್ರೀಡಾ ಶೋಧನೆ ಭಾರತದ ಮೂಲೆ ಮೂಲೆಯತ್ತ ಧಾವಿಸ ಬೇಕಿದೆ.ಧಣಿದವರ ಜೊತೆ ಯುವಕರನ್ನೂ ಉತ್ತೇಜಿಸುವ ಕೆಲಸ ನಿರ್ವಹಿಸಬೇಕಿದೆ.ಭಾರತದಲ್ಲಿ ಮ್ಯಾನ್ ಪವರ್ ಗೆ ಕೊರತೆ ಇಲ್ಲ.ಆದರೆ ಭಾರತದ ಕ್ರೀಡೆಗೆ ಮ್ಯಾನ್ ಪವರ್ ಬಳಸಿಕೊಳ್ಳುವ ಚಾಣಾಕ್ಷತನದ ಕೊರತೆ ಇದೆ,ಕ್ರೀಡಾಳುಗಳನ್ನ ಪಕ್ಷಪಾತವಿಲ್ಲದೇ ಶೋಧಿಸುವ, ಉಳಿಸಿಕೊಳ್ಳುವ ಉಮೇದಿನ ಕೊರತೆ ಎದ್ದು ಕಾಣುತ್ತಿದೆ.
ಕ್ಯೂಬಾ,ಹಂಗೇರಿ,ದಕ್ಷಿಣ ಕೋರಿಯಾ,ಕಿನ್ಯಾ ತರದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಪದಕ ಸಾಧನೆ ತೀರಾ ಹೀನಾಯವಾಗಿದೆ.ಎತ್ತರದ ಕ್ರಮಾಂಕದಲ್ಲಿ ಈ ಸಣ್ಣ ರಾಷ್ಟ್ರಗಳಿದ್ದರೆ ಭಾರತ ನಲವತ್ತೆಂಟನೇ ಸ್ಥಾನದಲ್ಲಿ ನಿಂತು ಅಲವತ್ತುಕೊಳ್ಳುತ್ತಿರುವುದನ್ನ ನೋಡಿದರೆ ಇಲ್ಲಿಯ ಕ್ರೀಡಾ ಪ್ರೋತ್ಸಹ ಮತ್ತು ಕ್ರೀಡಾ ತರಬೇತಿಯಂತೆಯೇ ಕ್ರೀಡಾಳುಗಳ ಆಯ್ಕೆಯ ಎಡವಟ್ಟುಗಳತ್ತಲೇ ಬೆರಳು ತೋರುವಂತಿದೆ.ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಭಾರತದ ಕ್ರೀಡಾ ಪ್ರೊತ್ಸಾಹ ನಿರೀಕ್ಷಿತ ಮಟ್ಟದಲ್ಲಿ ಪಾರದರ್ಶಕವಾಗಿಲ್ಲ ಎಂಬುದನ್ನೇ ನಮ್ಮ ಸೋಲುಗಳು ಹೇಳುತ್ತಿವೆ ಎಂಬ ಕಹಿ ಸತ್ಯವನ್ನ ಒಪ್ಪಲೇ ಬೇಕಿದೆ.

ಭಾರತದಲ್ಲಿ ಕ್ರಿಕೆಟ್ ಗೆ ಸಿಕ್ಕಷ್ಟು ಮಾನ್ಯತೆ ಬೇರೆ ಕ್ರೀಡೆಗಳಿಗೆ ಸಿಗುತ್ತಿಲ್ಲ.ಪ್ರತಿಭಾನ್ವಿತ ಕ್ರೀಡಾ ಪಟುಗಳು ಹಳ್ಳಿ ಹಳ್ಳಿಯ,ನಗರ ನಗರಗಳ ಮೂಲೆ ಮೂಲೆಗಳಲ್ಲಿ ಹಣಕಾಸಿನ ನೆರವಿಲ್ಲದೆ ಪ್ರೋತ್ಸಾಹಗಳ ಬೆಳಕಿಲ್ಲದೆ ಕಮರುತಿದ್ದಾರೆ. ಸರ್ಕಾಗಳು ಮತ್ತು ಸ್ಪಾನ್ಸರ್ ಮಾಡುವ ಕಂಪನಿಗಳು ಇನ್ನಾದರೂ ಬಹುಮುಖಿ ಕ್ರೀಡೆಗಳತ್ತ ಒಲವು ತೋರಿ ಭಾರತದ ಕಳಪೆಯ ಚಿತ್ರವನ್ನ ಸೋಲಿನ ಕಣ್ಣೀರನ್ನ ಮುಂದಿನ ದಿನಗಳಲ್ಲಾದರೂ ಕಡಿಮೆಗೊಳಿಸುವಂತಾಗಲಿ.

Girl in a jacket
error: Content is protected !!