ಬಣ್ಣದ ಬುಗರಿ
ಹೊರಾಂಗಣದ ಆಟಗಳಲ್ಲಿ ಗೋಲಿ, ಬಗರಿ, ಲಗೋರಿ ಇವು ಸಣ್ಣ ಸಣ್ಣ ಮಕ್ಕಳು ಇಷ್ಟ ಪಡುವ ಅತ್ಯಂತ ಸರಳ ಆಟಗಳು. ನಾವೂ ಸಹ ಬಾಲ್ಯದಲ್ಲಿ ಇವನ್ನು ಆಟವಾಡಿಯೇ ಬೆಳೆದೆವು. ಇವು ಗಂಡು ಮಕ್ಕಳ ಆಟಗಳೆಂದು ಗೊತ್ತಿದ್ದರೂ ಕೆಲವೊಮ್ಮೆ ಆಟ ಆಡುತ್ತಿದ್ದೆವು. ಹೆಣ್ಣುಮಕ್ಕಳ ಆಟಗಳಾದ ಕುಂಟುಬಿಲ್ಲೆ, ಮತ್ತು ಬೆಟ್ಟ ಹತ್ತುವ ಆಟಗಳು ಪರಿಕರಗಳೇನೂ ಇಲ್ಲದೆ ಆಡುವ ಆಟಗಳಾಗಿದ್ದವು.
ನಮ್ಮ ಮನೆಯು ಶಾಲೆಯ ಪಕ್ಕದಲ್ಲೇ ಇದ್ದ ಕಾರಣ ಸದಾ ಮಕ್ಕಳ ಕಲರವ ಇರುತ್ತಿತ್ತು. ಅದರೊಂದಿಗೆ ಆಟ ಪಾಠಗಳೂ ಇರುತ್ತಿದ್ದವು. ನಮ್ಮ ಮನೆಯಲ್ಲಿ ನಮ್ಮ ತಂದೆಯವರಿಗೆ ಬುಗುರು ಆಟವೆಂದರೆ ಇಷ್ಟವಾಗುತ್ತಿರಲಿಲ್ಲ. ಗೋಲಿ ಆಡಿದರೆ ಏನೂ ಅನ್ನುತ್ತಿರಲಿಲ್ಲ. ಸ್ವಾಭಾವಿಕವಾಗಿ ಎಲ್ಲ ಮಕ್ಕಳಿಗೂ ಇಷ್ಟವಾಗುವಂತೆ ನನಗಿಂತ ಹಿರಿಯನಾದ ನನ್ನಣ್ಣನಿಗೆ ಬಣ್ಣ ಹಚ್ಚಿದ ರಂಗುರಂಗಿನ ಬುಗುರಿ ಎಂದರೆ ತುಂಬಾ ಇಷ್ಟವಾಗುತ್ತಿತ್ತು. ಅದನ್ನು ಅಂಗಡಿಯಲ್ಲಿ ಕೊಂಡು ತಂದು ಚಾಟಿಯೊಂದಿಗೆ ಸುತ್ತಿ ಬೀಸಿದರೆ ಅದು ಗಿರ್ ..ಗುಯ್.. ಎಂದು ಸುತ್ತುವ ಪರಿ ನಿಜಕ್ಕೂ ಸೋಜಿಗವೆನಿಸುತ್ತಿತ್ತು. ಗಾರೆ ನೆಲದ ಮೇಲೆ `ಚರ್..’ ಎಂದು ಶಬ್ದ ಮಾಡುತ್ತಾ ಸುತ್ತಿ ಸುತ್ತಿ… ಸುಸ್ತಾಗುವ ಬುಗುರಿಯನ್ನು ನೋಡುವುದೇ ಒಂದು ಮಜವಿತ್ತು.
ನಾವು ಅಪ್ಪನಿಗೆ ಕಾಣದಂತೆ ಅದನ್ನು ಜೋಪಾನಮಾಡಿ ಬಚ್ಚಿಡುತ್ತಿದ್ದೆವು. ನಮ್ಮ ತಂದೆಗೆ ಅದ್ಯಾಕೆ ಬುಗುರಿ ಅಂದರೆ ಇಷ್ಟವಾಗುತ್ತಿರಲಿಲ್ಲವೋ ಏನೋ ಬಹುಶಃ ` ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ’ ಎಂಬ ಹಂಸಲೇಖರ ಹಾಡಿನ ಮರ್ಮ ಅವರಿಗೆ ಗೊತ್ತಿತ್ತೇನೋ..!
ಒಮ್ಮೆ ಅಪ್ಪಾಜಿ ರೇಷ್ಮೆ ಗೂಡನ್ನು ಮಾರಲು ಮಾರುಕಟ್ಟೆಗೆ ಹೋಗಿದ್ದರು. ಬರುವುದು ಸಂಜೆಯಾಗುತ್ತದೆ ಎಂಬುದು ನಮಗೆ ತಿಳಿದ ವಿಷಯವಾಗಿತ್ತು.
ಇದೇ ಸಮಯ ನೋಡಿ ನಾನು ಮತ್ತು ಅಣ್ಣ ಬುಗುರಿ ಆಗಲು ಹೋಗಿದ್ದೆವು. ಶಾಲೆಯ ಹಿಂಬಾಗದಲ್ಲಿ ದೊಡ್ಡ ಮೈದಾನವಿತ್ತು. ಅಲ್ಲಿ ಎಲ್ಲ ಮಕ್ಕಳೂ ಕೂಡಿ ಆಡುತ್ತಿದ್ದೆವು. ಮಧ್ಯಾಹ್ನ ಮನೆಗೆ ಹೋದೆವೋ ಇಲ್ಲವೋ, ಊಟ ಮಾಡಿದೆವೋ ಇಲ್ಲವೋ ತಿಳಿಯದು.. ನೆನಪಿಲ್ಲ. ಆದರೆ ಸಂಜೆ ಅಪ್ಪ ಬರುವ ದಾರಿ ಆಕಡೆಯೇ ಇತ್ತು. ಬುಗುರಿಯಾಟದ ಮಕ್ಕಳೊಡನೆ ನಾವೂ ಇದ್ದೆವು. ಆಟವಾಡುವಾಗ ಇತರ ಮಕ್ಕಳು ದಾರಿಯೆಡೆ ನೋಡಿ ಅಪ್ಪ ಕಂಡದ್ದನ್ನು ನಮಗೆ ಹೇಳಿದರು. ನಾವು ಅಪ್ಪ ನೋಡಲಿಲ್ಲ ಸದ್ಯ’ ಎಂದು ಶಾಲೆಯ ಕಂಪೌಂಡ್ ಜಿಗಿದು ಮನೆಯ ಕಾಂಪೌಂಡ್ ಹಾರಿ ಮನೆ ಸೇರಿದ್ದೆವು. ಅಪ್ಪ ಬಂದು ಕೈಕಾಲು ತೊಳೆದುಕೊಂಡು ಅಣ್ಣನನ್ನು ಕರೆದರು ಅವನು ಹೋಗಿ ಮುಂದೆ ನಿಂತ. ಬುಗುರಿ ತಗೊಂಡ್ ಬಾ’ ಎಂದರು. ಅವನು ಅವಾಕ್ಕಾದ ನಾನು ಒಳಗೊಳಗೇ ನಡುಗಿಹೋದೆ. `ತಗೊಂಡ್ ಬಾ’ ಎಂದು ಒತ್ತಿ ಜೋರಾಗಿ ಹೇಳಿದರು. ಅವನು ಒಳಗೆ ಬಂದು ಬುರುಗಿ ಕೊಂಡುಹೋದ. `ಕರಿ ನಿನ್ನ ಜೊತೇಲಿದ್ದ ತಂಗಿಗೆ’ ಎಂದರು. ನಾನು ನಡುಗುತ್ತಾ ಆಚೆ ಬಂದೆ.. ಇಬ್ಬರ ಮುಂಗೈಗಳನ್ನು ಟೇಬಲ್ಲಿನ ಮೇಲೆ ಇಡಲು ಹೇಳಿದರು. `ಇನ್ನೊಮ್ಮೆ ಆಟ ಆಡೆವು’ ಎಂದು ಬೇಡಿಕೊಂಡರೂ ಕ್ಷಮಿಸದೆ `ಟೇಬಲ್ ಮೇಲೆ ಕೈಗಳನ್ನು ಇಡಿಸಿ ಬುಗುರಿಯಲ್ಲಿ’ ದಡ್ ದಡ್ ದಡ್ ಎಂದು ಗುದ್ದಿದರು. ನಾವು ನೋವಿನಿಂದ ಚೀರಿದೆವು. ಬುಗುರಿ ವಾಪಸ್ ಕೊಟ್ಟು `ಹೋಗು ಇನ್ನು ಎಷ್ಟು ಬುಗುರಿ ಇವೆ ಅವು ತನ್ನಿ’ ಎಂದು ಒಳಗಿದ್ದ ಇನ್ನೊಂದು ಬುಗುರಿ ಸಮೇತ ಅದನ್ನು ನಮ್ಮ ಕೈಯಲ್ಲೇ `ನೀರೊಲೆಗೆ” ಹಾಕಿಸಿದ್ದರು. ಅದು ಉರಿಯುವುದನ್ನೇ ನೋಡಿ ನಾವೂ ತಣ್ಣಗಾಗಿದ್ದೆವು.
ಆ ಕಾಲ ಕಳೆದುಹೋಗಿ ಎಷ್ಟೋ ವರ್ಷಗಳು ಕಳೆದಿವೆ. ಆದರೆ ಬುಗುರಿಯನ್ನು ಕಂಡಾಗಲೆಲ್ಲಾ ಮುಂಗೈಯನ್ನು ನೋಡಿಕೊಂಡು ನಗುತ್ತೇನೆ. ಆದರೆ ಈಗಲೂ ಬುಗುರಿಯೆಂದರೆ ಅಷ್ಟೇ ಪ್ರೀತಿ ನನಗೆ. ಶಾಲೆಯಲ್ಲಿ ಮಕ್ಕಳು ತಂದು ಆಡುವಾಗ `ಶಾಲೆಗೆ ಇವಲ್ಲಾ ತರಬಾರದು’ ಎಂದು ಹೇಳಿ `ಕೊಡು ಇಲ್ಲಿ’ ಎಂದು ಬುಗುರಿ ಮೊಳೆಗೆ ಚಾಟಿ ಸುತ್ತಿ ಒಮ್ಮೆ ಸುತ್ತಿಸಿಯೇ’ ವಾಪಸ್ ಕೊಡುತ್ತೇನೆ. ಮಕ್ಕಳಿಗೂ ಖುಷಿ ` ಏಯ್ ಮಿಸ್ ಗೂ ಆಟ ಆಡಲು ಬರುತ್ತದೆ’ ಎಂದು ಮಕ್ಕಳು ತಮ್ಮೊಳಗೇ ಗುಸುಗುಸು ಮಾತನಾಡುವಾಗ `ಅಪ್ಪ ನೆನಪಾಗಿ.. ನಿಟ್ಟುಸಿರೊಂದು ಹಾದುಹೋಗುತ್ತದೆ.