
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಇಳೆಗಾಗದಿರು ಭಾರ.
ಭೂಮಿಗೆ ಭಾರವಾಗಿರಬೇಡ! ಬದುಕು ಅಸ್ಥಿರ ಅಲ್ಪವಾದರೂ ಅದು ಅನಂತ ಸಂಬಂಧಗಳ ಹೆಣಿಕೆ! ಇರಲು ತಿರುಗಲು ಭೂಮಿ ನೆಲೆ! ಅದು ಆಹಾರ ನೀಡಿದೆ, ಗಿಡಮರಗಳ ಮೂಲಕ ಶುದ್ಧ ಆಮ್ಲಜನಕ ಪೂರೈಸಿದೆ. ನೀರು ಗಾಳಿ ಬೆಳಕು ಅಗ್ನಿಗಳು ನೆರವಿತ್ತಿವೆ! ಕುಟುಂಬ ಬಂಧು ಮಿತ್ರ ಸರ್ಕಾರ ಸಮಾಜ ಸಹಕರಿಸಿವೆ! ಪ್ರಕೃತಿ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಉಪಕರಿಸಿವೆ. ಇಷ್ಟೊಂದು ಪಡೆದ ಮನಸ್ಸು ಕೃತಜ್ಞತೆ ದಯೆ ಪ್ರೀತಿ ವಿಶ್ವಾಸ ಉತ್ಸಾಹ ಕ್ಷಮೆ ತಾಳ್ಮೆ ಸಮಾಜಸೇವಾಪರ ಗುಣಸಾಗರವಾಗಿ ತುಂಬಿ ತುಳುಕಬೇಕು! ಬದಲಾಗಿ ಅದು ಭಾವ ಶೂನ್ಯ ಬರಡಾದರೆ ತಡಮಾಡದೇ ಮನೆ ತೊರೆದು ತೊಲಗುವುದು ಮೇಲು! ಋಣ ಉಂಡು ಬೆಳೆದು, ಸಮಾಜದ ಕೊಳೆ ತೊಳೆಯಲು ಕೈ ಮುಂದಾಗದಿರೆ ಪ್ರಪಂಚವನ್ನೇ ತೊರೆದು ಬಲು ದೂರ ಸಾಗುವುದು ಉಚಿತ! ಪರರಿಗೆ ಎಳ್ಳಷ್ಟೂ ಉಪಕಾರಿಯಾಗದೇ ಬರೀ ಎಲ್ಲರಿಂದ ಕಿತ್ತು ತಿನ್ನುವ ರಕ್ತ ಹೀರುವ ಉಣ್ಣೆಯಂತಾದರೆ ಬದುಕು ನಿರರ್ಥಕ! ಭುವಿಗೆ ಭಾರ! ಅಂಥವರು ತೊಲಗಿದರೆ, ಖಾಲಿಮಾಡಿದರೆ, ಮರೆಯಾದರೆ ಅರ್ಹರಿಗೆ ಅವಕಾಶ!
ಜಗಪ್ರೇಮಿಗಳಾಗೋಣ, ಜಗದ ಸೇವೆಯಗೈಯ್ಯೋಣ!!