ಬೆಂಗಳೂರು,ಆ,೧೮: ‘ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಕಡಿತ ಪ್ರಸ್ತಾಪ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೩ ತೆರಿಗೆ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಡಿತ ಮಾಡುವ ಚಿಂತನೆ ಇಲ್ಲ ಎಂದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕೋವಿಡ್ ತಪಾಸಣೆಯ ನೆಗೆಟಿವ್ ವರದಿ ಕೊಡುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಕಡೆ ಕೋವಿಡ್ ಪರೀಕ್ಷೆಯಲ್ಲಿ ದಂಧೆ ನಡೆಯುತ್ತಿದೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದೂ ಬೊಮ್ಮಾಯಿ ಹೇಳಿದರು.ಉನ್ನತ ಶಿಕ್ಷಣ, ಲೋಕೋಪಯೋಗಿ, ವಸತಿ ಈ ಮೂರು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಇಂದು ನಡೆಸುತ್ತೇನೆ’ ಎಂದೂ ಅವರು ತಿಳಿಸಿದರು.
ಹೆಬ್ಬಾಳ ಬಿಜೆಪಿ ಮುಖಂಡರಿಂದ ಸನ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಮಂಗಳವಾರ ಸನ್ಮಾನಿಸಿದರು. ಬೊಮ್ಮಾಯಿಗೆ ಶಾಲು ಹೊದಿಸಿ, ಕನ್ನಡ ಪುಸ್ತಕ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ‘ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರ. ಇತ್ತೀಚೆಗೆ ಪ್ರಧಾನಿ ಅವರನ್ನು ಭೇಟಿ ಮಾಡಿದಾಗ ಬೆಂಗಳೂರು ನಗರದ ಬಗ್ಗೆ ಚರ್ಚೆ ಆಗಿದೆ. ಪ್ರಧಾನಿ ಕೂಡ ಬೆಂಗಳೂರು ನಗರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ’ ಎಂದರು.ಹೆಬ್ಬಾಳ ಖ್ಯಾತಿ ಪ್ರತಿಷ್ಠಿತ ಕ್ಷೇತ್ರ. ಯಾಕೆಂದರೆ, ಈ ಕ್ಷೇತ್ರಕ್ಕೆ ಬರುವ ಇದೇ ರಸ್ತೆಯಲ್ಲಿ ಐದು ಜನ ಮುಖ್ಯಮಂತ್ರಿಗಳಾಗಿದ್ದಾರೆ. ಈ ಕ್ಷೇತ್ರ ಇತರ ಕ್ಷೇತ್ರಗಳಿಗೂ ಮಾದರಿ ಆಗಬೇಕು. ಹೆಬ್ಬಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಸಹಕಾರ ಕೊಡುತ್ತೇನೆ ಎಂದರು.ಬಿಬಿಎಂಪಿ ಚುನಾವಣೆ ಬರುತ್ತಿದೆ. ಹೆಬ್ಬಾಳ ಕ್ಷೇತ್ರದ ಎಲ್ಲ ವಾರ್ಡ್ಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ರೀತಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು. ನಾನು, ನಿಮಗೆ ಎಲ್ಲ ರೀತಿಯ ಬೆಂಬಲ ಕೊಡುತ್ತೇನೆ’ ಎಂದು ಬಿಜೆಪಿ ನಾಯಕರಿಗೆ ಬೊಮ್ಮಾಯಿ ಭರವಸೆ ನೀಡಿದರು.