
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ದೀಪದ ಕೆಳಗೆ ಕತ್ತಲು.
ಸೀಮೆ ಎಣ್ಣೆಯ ಚಿಮಣಿ ಕಾಲದ ಮಾತಿದು. ದೀಪ ಕತ್ತಲೆ ಸರಿಸಿ ಬೆಳಗುವುದು. ಆದರೂ ದೀಪದ ಕೆಳಗೆ / ಹಿಂದೆ ಕತ್ತಲು! ಮುಂದೆ ಬೆಳಗುವ ದೀಪ, ಹಿಂದೆ ಬೆಳಗದು!ಎಲ್ಲರ ಬೆನ್ನು ನೋಡುವ ಕಣ್ಣು, ತನ್ನದೇ ಬೆನ್ನು ನೋಡದು! ವೈದ್ಯರೆಲ್ಲರೂ ತಮ್ಮೆಲ್ಲ ರೋಗ ತಿಳಿಯರು! ಪರರ ಆಡಿಕೊಳ್ಳುವವ, ತನ್ನ ನೋಡಿಕೊಳ್ಳಲಾರ! ಎಲ್ಲ ತಿಳಿದೆ ಎನ್ನುವವ, ತನ್ನನ್ನೇ ತಿಳಿದಿರಲಾರ! ಅವರಿವರ ಅನ್ಯಾಯ ಸರಿಪಡಿಸುವವ, ತನ್ನ ಅನ್ಯಾಯ ಬಚ್ಚಿಟ್ಟು ನಡೆವ! ಆಡಳಿತ ಪಕ್ಷದ ಪ್ರತಿ ಲೋಪ ಕೆದಕುವ ರಾಜಕೀಯ ಪಕ್ಷ, ಆಡಳಿತಕ್ಕೇರುತಲೇ ಮಾಡುವುದು ಅದನ್ನೇ! ಕನ್ನಡ ಕನ್ನಡ ಎನ್ನುವರು ಕೆಲರು, ಮಕ್ಕಳ ಓದು ಇಂಗ್ಲೆಂಡ್ ನಲ್ಲಿ! ಸಂಸ್ಕೃತ ಸಂಸ್ಕೃತ ಎನ್ನುವರು ಕೆಲರು, ಸ್ವಾರ್ಥದ ಬೇಳೆಗಾಗಿ ಕಲ್ಲು ಹಾಕುವರು ಅದರ ಅಭಿವೃದ್ಧಿಗೆ! ಪರಿಪೂರ್ಣರಾರೂ ಈ ಜಗದಿ ಇಲ್ಲ. ಪರಿಪೂರ್ಣ ಒಂದೇ ಪರಬ್ರಹ್ಮ ತತ್ತ್ವ! ಅದಕ್ಕೇ ಗೀತೆ ಸಾರಿತು “ನಿರ್ದೋಷಂ ಹಿ ಸಮಂ ಬ್ರಹ್ಮ =ಪರಬ್ರಹ್ಮ ಮಾತ್ರ ದೋಷವಿಲ್ಲದ ಪೂರ್ಣ ವಸ್ತು”.
ನಮ್ಮಯ ಸೀಮೆಯನರಿಯೋಣ, ಗರ್ವವ ತೊರೆದು ಬಾಳೋಣ!!