
ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ
ಇಂಥದ್ದೇ ಶ್ರಾವಣ ಮಾಸದ ಚುರುಕು ಬಿಸಿಲ ದಿನ ಒಂದರ ಉತ್ತರಾರ್ಧ ಅದು. ಮೂರ್ನಾಲ್ಕು ದಿನಗಳಿಂದ ‘ಧೋ’ ಎಂದು ಸುರಿದ ಮಳೆ ತನ್ನ ರೌದ್ರನರ್ತನಕ್ಕೆ ತಾತ್ಕಾಲಿಕ ವಿರಾಮ ನೀಡಿದಂತಿತ್ತು. ಅವತ್ತು ಬುಧವಾರದ ದಿನ ಇರಬೇಕು ಅನ್ನಿಸುತ್ತದೆ. ವೈ. ವೃಷಭೇಂದ್ರಯ್ಶ (YV) ಮೇಷ್ಟ್ರು ಎಂಟನೇ ತರಗತಿಯವರಾದ ನಮಗೆ ಸಾಯಂಕಾಲದ ಕೊನೆಯ ಪಿರಿಯಡ್ ನಲ್ಲಿ ಜೀವಶಾಸ್ತ್ರದ ಪಾಠ ಮಾಡುತ್ತಿದ್ದರು. ಅವರು ಅಂದು ಪಾಠಮಾಡುತ್ತಿದ್ದ ವಿಷಯ ಕೂಡಾ ನನಗೆ ಚೆನ್ನಾಗಿ ನೆನಪಿದೆ. ದ್ಯುತಿಸಂಶ್ಲೇಷಣಾ ಕ್ರಿಯೆ (photo synthesis) ಬಗೆಗೆ ನಡೆದಿದ್ದ ಅವರ ಪಾಠವನ್ನ ತರಗತಿಯ ಬಹುತೇಕ ವಿದ್ಯಾರ್ಥಿಗಳು ಕೇಳಿಸಿಕೊಳ್ಳುತ್ತಿರುವ ಹಾಗೆ ನನಗೆ ತೋರಿಬರುತ್ತಿರಲಿಲ್ಲ. ತರಗತಿಯ ಬಲಭಾಗಕ್ಕೆ ಬಾಗಿಲ ಪಕ್ಕದಲ್ಲಿಯೇ ಕುಳಿತ ಹುಡುಗರಾಗಲೀ, ಎಡಭಾಗದ ಕಿಟಕಿಯ ಪಕ್ಕ ಕುಳಿತ ಹುಡುಗಿಯರಾಗಲೀ YVಯವರ ಬೋಧನೆಯಲ್ಲಿ ಯಾವುದೇ ರೀತಿಯ ಆಸಕ್ತಿ ತಳೆಯದೆ ಕ್ಷಣಕ್ಕೊಮ್ಮೆ ಬಾಗಿಲ ಕಡೆ ದೃಷ್ಟಿ ಹಾಯಿಸುತ್ತಾ ಯಾವುದೋ ಒಂದು ಘಟನೆಯ ನಿರೀಕ್ಷೆಯಲ್ಲಿ ಇದ್ದಂತೆ ತೋರಿಬರುತ್ತಿತ್ತು. ತರಗತಿಯ ಅವಧಿ ಮುಗಿದು ಶಾಲೆ ಬಿಡುವುದಕ್ಕೆ ಇನ್ನೂ ಸುಮಾರು ಹದಿನೈದು ನಿಮಿಷಗಳು ಬಾಕಿ ಇತ್ತು ಅನ್ನಿಸುತ್ತದೆ, ಬಾಗಿಲಲ್ಲಿ ಜವಾನ ಬುಡೇನ್ ಸಾಬ್ ಪ್ರತ್ಯಕ್ಷನಾದ. ನಾವು “ಬುಡ್ಡಪ್ಪ” ಅಂತಲೇ ಕರೆಯುತ್ತಿದ್ದ ವ್ಯಕ್ತಿಯ ಆಗಮನವನ್ನೇ ತರಗತಿಯ ಸಹಪಾಠಿಗಳು ಅಷ್ಟೂ ಹೊತ್ತಿನಿಂದ ಎದುರು ನೋಡುತ್ತಿದ್ದದ್ದು ಎಂದು ನನಗೆ ತಟ್ಟನೆ ಅರಿವಾಯಿತು.

ಬುಡ್ಡಪ್ಪ ತನ್ನ ಮೋಟು ಕೈಯಲ್ಲಿ ಒಂದು ಸಣ್ಣ ನೋಟ್ ಬುಕ್ ಹಿಡಿದು ತರಗತಿಗೆ ಪ್ರವೇಶಿಸಿದ ಒಡನೆಯೇ ನನ್ನ ಸಹಪಾಠಿಗಳ ಉಸಿರಾಟ ತೀವ್ರಗೊಂಡಿತು. YV ಅವರಿಗೆ ನೋಟ್ ಬುಕ್ ತೋರಿಸಿ ಅವರ ಸಹಿಯನ್ನು ಪಡೆದ ಬುಡ್ದಪ್ಪ ಹೊರನಡೆಯುತ್ತಿದ್ದ ಹಾಗೆಯೇ ಗೆಳೆಯರ ಮುಖಗಳು ಅರಳಿದ ಕುಸುಮಗಳಾದವು. YVಯವರು ನಾಳೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮತ್ತು ನಾಡಿದ್ದು ಮೊಹರಂ ಪ್ರಯುಕ್ತ ರಜಾದಿನಗಳು ಅಂತ ಘೋಷಿಸುವುದರ ಒಟ್ಟಿಗೆ ಬರಲಿರುವ ಶನಿವಾರದ ಅರ್ಧದಿನವನ್ನೂ ಮುಂದುವರೆದ ರಜಾಪಟ್ಟಿಯ ಭಾಗವಾಗಿಸಿದರು. ಈ ಶನಿವಾರದ ಬದಲಿಗೆ ಮುಂದಿನ ತಿಂಗಳ ಮೂರನೇ ಶನಿವಾರವನ್ನ ಪೂರ್ಣ ಅವಧಿಯ ಶಾಲಾದಿನವನ್ನಾಗಿ ಆಚರಿಸುವುದಾಗಿಯೂ ತಿಳಿಸಿದರು. ಈ ಸಾಲು ರಜಾದಿನಗಳ ಕಾರಣ ಮುಂದಿನ ಸೋಮವಾರವೇ ಮತ್ತೆ ಶಾಲೆ ತೆರೆಯಲಿದೆ ಎಂದು YV ಘೋಷಿಸಿದ ಒಡನೆಯೆ ವಿದ್ಯಾರ್ಥಿಗಳ ಸಂತಸದ ಕೂಗು ಮೇಲ್ಛಾವಣಿಯ ಕೆಂಪು ಮಂಗಳೂರಿನ ಹಂಚುಗಳನ್ನೂ ಸೀಳಿ ದಿಗ್ದೆಸೆಗಳಲ್ಲಿ ಹರಡಿತ್ತು.
YV ಮೇಷ್ಟ್ರ ಉಳಿದ ಆರೆಂಟು ನಿಮಿಷದ ಪಾಠದ ಕಡೆ ಯಾರ ಗಮನವೂ ಹರಿಯದೇ ತಂತಮ್ಮ ಪುಸ್ತಕಗಳನ್ನು ಶಾಲಾಬ್ಯಾಗಿಗೆ ತುಂಬಿಕೊಳ್ಳುವುದರಲ್ಲಿಯೇ ವಿದ್ಯಾರ್ಥಿಮಿತ್ರರು ಮುಳುಗಿ ಹೋಗಿದ್ದರು. ಶಾಲೆಯ ಇನ್ನೊಬ್ಬ ಜವಾನ ಮಲ್ಲಪ್ಪ ಬಾರಿಸಿದ ಘಂಟೆಯ ಸದ್ದು ಕಿವಿಗೆ ಬೀಳುತ್ತಲೇ ಕಾಲುಗಳು ತರಗತಿಗೆ ಬುದ್ದಿ ಹೇಳಿ ಮನೆಗಳ ಕಡೆಗೆ ದೌಡಾಯಿಸಿದವು.
ಸ್ಕೂಲ್ನಲ್ಲಿ ಬುಡ್ಡಪ್ಪನ ಪ್ರಲಾಪ
ಇಂತಹ ನಮ್ಮ ಅನೇಕ ಸಂತಸಗಳಿಗೆ ಮೂಲಕಾರಣ ಎನಿಸಿದ್ದ ಬುಡ್ಡಪ್ಪ ವಿಶೇಷ ವ್ಯಕ್ತಿಯೇ ಸರಿ. ವೃತ್ತಿಯಲ್ಲಿ ಜವಾನನಾಗಿದ್ದಾರೂ ಗತ್ತಿನಲ್ಲಿ ಮುಖ್ಯೋಪಾಧ್ಯಾಯರಾದ ಆರ್. ನೀಲಕಂಠಪ್ಪ(RN)ನವರನ್ನು ಸರಿಗಟ್ಟುತ್ತಿದ್ದ ವ್ಯಕ್ತಿತ್ವದ ಧಣಿ ಆತ. ತುಂಬಾ ಗಡುಸಾಗಿ ಮತ್ತು ಮುಖಕ್ಕೆ ಹೊಡೆದ ಹಾಗೆ ಮಾತನಾಡುವ ಪಿಂಜಾರರ ಬುಡ್ಡಪ್ಪನನ್ನು ಕಂಡರೆ ಮಾತನಾಡಿಸುವುದಕ್ಕೆ ಶಾಲೆಯ ಅನೇಕ ಹಿರಿಯ ವಿದ್ಯಾರ್ಥಿಗಳೇ ಹಿಂದೆಮುಂದೆ ನೋಡುತ್ತಿದ್ದರು. ತಲೆಯ ಮೇಲೆ ತುಸುಚಿಕ್ಕದು ಎಂದು ಹೇಳಬಹುದಾದ ಬಿಳಿಮುಂಡಾಸು, ಪೂರ್ತಿ ತೋಳಿನ ಬಿಳಿಶರ್ಟ್ ಮತ್ತು ಬಿಳಿಲುಂಗಿ ಬುಡ್ಡಪ್ಪನ ನಿತ್ಯದ ದಿರಿಸು. ಕಾಲಿಗೆ ಹವಾಯಿ ಚಪ್ಪಲಿಯ ಮೆರಗು ಬೇರೆ. ಸ್ವಲ್ಪ ಕುಳ್ಳ ಎನ್ನುವಂತಹ ಎತ್ತರದ ಬುಡ್ಡಪ್ಪ ಸಾಕಷ್ಟು ದಢೂತಿ ಆಸಾಮಿ. ವಯಸ್ಸು ನಿವೃತ್ತಿಯ ಅಂಚಿನಲ್ಲಿತ್ತು. ಗಡದ್ದಾಗಿ ಬೆಳೆದ ಹೊಟ್ಟೆ ಜವಾನನ ನೌಕರಿ ಮಾಡುವುದಕ್ಕೆ ಸಾಕಷ್ಟು ಅಡ್ಡಿ ಎನಿಸಿದ್ದ ಕಾರಣದಿಂದ ಶಾಲೆಯ ಸ್ವಚ್ಛತೆ, ಶಾಲಾ ಒಳ ಆವರಣದ ಗಿಡಗಂಟೆಗಳ ಜೋಪಾನ ಇಂತಹುದ್ದೇ ಹಲವು ಕೆಲಸಗಳನ್ನು ಸಹೋದ್ಯೋಗಿ ಮಲ್ಲಪ್ಪನ ಪಾಲಾಗಿಸಿದ ಬುಡ್ಡಪ್ಪ ತೀರಾ ಹಗುರ ಎನ್ನಬಹುದಾದ ಮೇಲಿನ ಕೆಲಸಗಳನ್ನಷ್ಟೆ ಮಾಡಿಕೊಂಡು ದಿನಗಳನ್ನು ದೂಡುತ್ತಿದ್ದ. ಇಂತಹ ಹಗುರ ಕೆಲಸದ ಒಂದು ಭಾಗವೇ ಬುಡ್ಡಪ್ಪ ಪ್ರತೀ ತರಗತಿಗೆ ತರುತ್ತಿದ್ದ ಸುತ್ತೋಲೆಗಳು. ಆ ಹೊತ್ತಿಗೆ ಪ್ರತೀ ಕ್ಲಾಸಿಗೆ ಎರಡು ವಿಭಾಗದಂತೆ ಒಟ್ಟು ಆರು ತರಗತಿಗಳಿದ್ದವು. ಮೇಲಾಗಿ ಒಂದು ಕಚೇರಿ ಮತ್ತು ಉಪಾಧ್ಯಾಯರ ವಿಶ್ರಾಂತಿಗಾಗಿ ಮೀಸಲಾದ ಒಂದು ಕೊಠಡಿ ಇತ್ತು. RN ಕೊಠಡಿಯಿಂದ ಒಂದು ಸುತ್ತೋಲೆ ಹಿಡಿದು ಹೊರಟ ಬುಡ್ಡಪ್ಪ ಮತ್ತೆ ಮುಖ್ಯೋಪಾಧ್ಯಾಯರ ಕೊಠಡಿಗೆ ಮರಳಲಿಕ್ಕೆ ಬರೋಬ್ಬರಿ ಒಂದು ಗಂಟೆಯ ಸಮಯ ತೆಗೆದುಕೊಳ್ಳುತ್ತಿದ್ದ. ಹಾಗಾಗಿ, ಮುಂಚೆಯೇ ನಾಳೆ ಅಥವಾ ನಾಡಿದ್ದು ಶಾಲಾ ರಜಾ ಎಂದು ಬಹಳಷ್ಟು ವಿದ್ಯಾರ್ಥಿಗಳಿಗೆ ಗೊತ್ತಿದ್ದರೂ ಬುಡ್ಡಪ್ಪನ ಸುತ್ತೋಲೆ ತರಗತಿಗೆ ಬಾರದೇ ಇದ್ದರೆ ವಿದ್ಯಾರ್ಥಿವೃಂದ ನಿರಾಶರಾಗುತ್ತಿದ್ದದಂತೂ ಸತ್ಯ. ರಜಾ ಸರ್ಕಾರದವತಿಯಿಂದಲೇ ಕೊಡಲ್ಪಟ್ಟರೂ ಬುಡ್ಡಪ್ಪ ತರಗತಿಗೆ ರಜಾದ ಸುತ್ತೋಲೆ ಹಿಡಿದು ತರದೇಹೋದಲ್ಲಿ ನಾಳೆ ರಜಾ ಇದೆಯೋ ಇಲ್ಲವೋ ಎನ್ನುವಂತಹ ಅನುಮಾನ ಕೆಲವರಲ್ಲಿ ಮನೆಮಾಡಿತ್ತು.
ವೃತ್ತಿಯಲ್ಲಿ ಹೈಸ್ಕೂಲ್ ಜವಾನನಾದರೂ ಬುಡ್ಡಪ್ಪ ಭವ್ಯ ಇತಿಹಾಸವನ್ನು ಹೊಂದಿದ್ದವನು. ಆತನಿಗೆ ಒಬ್ಬ ಹೆಣ್ಣುಮಗಳು ಮತ್ತು ಇಬ್ಬರು ಗಂಡುಮಕ್ಕಳಿದ್ದರು. ಎಲ್ಲರಿಗಿಂತ ದೊಡ್ಡವಳಾದ ಮಗಳನ್ನು ಹಿರಿಯೂರು ಸಮೀಪದ ಹಳ್ಳಿಯೊಂದಕ್ಕೆ ವಿವಾಹ ಮಾಡಿಕೊಟ್ಟಿದ್ದ. ಬುಡ್ಡಪ್ಪನ ಕಿರಿಯ ಮಗ ಜಾಕೀರ್ ಹುಸೇನ್ ನನ್ನ ಸಹಪಾಠಿಯಾಗಿದ್ದ. ಜಾಕೀರ್ ಹುಸೇನ್ ನ ಅಣ್ಣ ಮೊಹಮ್ಮದ್ ರಫಿ ನಮಗಿಂತ ಐದು ವರ್ಷ ದೊಡ್ಡವನು. ಭದ್ರಾವತಿ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಡಿಪ್ಲೊಮಾ ಮಾಡಿ ಬಾಂಬೆಯ ಸಂಬಂಧಿಕರ ಫ್ಯಾಕ್ಟರಿ ಒಂದರಲ್ಲಿ ಕೆಲಸಕ್ಕೆ ಸೇರಿ ಒಂದು ವರ್ಷವಷ್ಟೇ ಕಳೆದಿತ್ತು. ಆದರೆ ಬುಡ್ಡಪ್ಪನ ವ್ಯಕ್ತಿತ್ವದ ಬಹಳ ದೊಡ್ಡ ಗುರುತು ಎಂದರೆ ಆತ ಸ್ವಾಂತಂತ್ರ್ಯ ಸೇನಾನಿ ಎನ್ನುವುದು. ತನ್ನ ಹದಿನಾರನೇ ವಯಸ್ಸಿನಲ್ಲಿಯೇ ತುರುವನೂರಿನ ಈಚಲು ಮರದ ಸತ್ಯಾಗ್ರಹ ಸಂದರ್ಭದಲ್ಲಿ ನಡೆದ ಬಂಧನದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಚಿತ್ರದುರ್ಗ ಸೆಂಟ್ರಲ್ ಜೈಲ್ ನ ಸೆರೆವಾಸ ಅನುಭವಿಸಿದ್ದು ಬುಡ್ಡಪ್ಪನ ಜೀವನದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆಯಬಹುದಾದ ಕಾಲಮಾನವಾಗಿತ್ತು. ಇನ್ನೂ ಸರಿಯಾಗಿ ಮೀಸೆ ಮೂಡದೇ ಇದ್ದ ಹದಿಹರೆಯದ ವಯಸ್ಸಿನಲ್ಲಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಬಹುದೊಡ್ಡ ಕೀರ್ತಿ ಬುಡ್ಡಪ್ಪನ ಪಾಲಿನದು.

1939ನೇ ಇಸವಿಯಲ್ಲಿ ಮಹಾತ್ಮರ ಅರಣ್ಯಸತ್ಯಾಗ್ರಹದ ಕರೆಯಿಂದ ಪ್ರೇರಿತರಾದ ನನ್ನೂರ ಮಂದಿ ಮುಂದಿನ ದಿನಮಾನದಲ್ಲಿ ದೇಶದ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿ, ಅವಿಭಜಿತ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳೂ ಆಗಿ ರಾಷ್ಟ್ರಮಟ್ಟದ ರಾಜಕೀಯ ವಲಯದಲ್ಲಿ ತಮ್ಮ ಛಾಪು ಮೂಡಿಸಿದ್ದ ಸಿದ್ದವ್ವನಹಳ್ಳಿ ನಿಜಲಿಂಗಪ್ಪ (SN) ನೇತೃತ್ವದಲ್ಲಿ ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ ಬಹಳ ದೊಡ್ಡ ಮಟ್ಟದ ಸತ್ಯಾಗ್ರಹ ಚಳುವಳಿಯನ್ನೇ ಹಮ್ಮಿಕೊಂಡಿದ್ದರು. ಅಲ್ಲಿಯವರೆಗೂ ಚಿತ್ರದುರ್ಗದಲ್ಲಿ ವಕೀಲಿ ವೃತ್ತಿಯನ್ನು ಮಾಡಿಕೊಂಡು ಹಣ ಮತ್ತು ಹೆಸರು ಎರಡನ್ನೂ ಧಾರಾಳವಾಗಿ ಪಡೆದಿದ್ದ SN ತುರುವನೂರಿನ ಈಚಲು ಸತ್ಯಾಗ್ರಹದ ಮೂಲಕವೇ ಭಾರತದ ಸ್ವಾತಂತ್ರ್ಯ ಆಂದೋಲನದ ದಳ್ಳುರಿಗೆ ಧುಮುಕಿದರು ಮತ್ತು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು ಎನ್ನುವುದು ಉಲ್ಲೇಖನೀಯ ಅಂಶ. SN ಈ ಮಾತನ್ನು ತಮ್ಮ ಜೀವಿತದ ಉದ್ದಕ್ಕೂ ಹತ್ತಾರು ಬಾರಿ ಸಾರ್ವಜನಿಕ ರೂಪದಲ್ಲಿ ಹೇಳಿದ್ದಿದೆ. ಈ ಚಳುವಳಿಯ ಭಾಗವಾಗಿ ಅಂದಿನ ಬ್ರಿಟಿಷ್ ರಾಜ್ಯದ ಅರಣ್ಯಸಂಬಂಧಿ ಕಾನೂನುಕಟ್ಟಳೆಗಳನ್ನು ಧಿಕ್ಕರಿಸಿ ಊರ ಹಳ್ಳಕೊಳ್ಳಗಳಲ್ಲಿ ಬೆಳೆದು ನಿಂತ ಈಚಲು ಮರಗಳನ್ನು ಕಡಿಯುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ ಬಾರಿಸಿದ್ದರು. ಹಿರಿಕಿರಿಯರೆನ್ನದೆ, ಸ್ತ್ರೀ ಪುರುಷರೆನ್ನದೆ ಅಬಾಲ ವೃದ್ಧರಾದಿಯಾಗಿ ಸರ್ವರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದ ಈ ಆಂದೋಲನದ ಭಾಗವಾಗಿಯೇ ಹೆಂಡದಂಗಂಡಿಗಳನ್ನು ಸುಡುವುದು, ಪೊಲೀಸ್ ಸಮವಸ್ತ್ರಗಳನ್ನು ಕದ್ದು ಸುಡುವುದು, ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸುವುದು, ಪೊಲೀಸ್ ಠಾಣೆಗಳಿಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿರುವುದು, ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುವುದು ಮುಂತಾದ ಇಂತಹುದೇ ಕಾರಣಗಳಿಗಾಗಿ ನೂರಾರು ಜನ ಸ್ವತಂತ್ರ್ಯಸೇನಾನಿಗಳನ್ನ ಬ್ರಿಟಿಷರು ಬಂಧಿಸಿ ಸೆರೆಮನೆಗೆ ಅಟ್ಟಿದ್ದರು.
ಈಚಲ ಮರದ ಚಳವಳಿಯಲ್ಲಿ ಬುಡ್ಡಪ್ಪನ ಪಾತ್ರ
ಊರಿನ ಸುಮಾರು ಮೂವತ್ತು ಮಂದಿ ಸರದಿಯಂತೆ ಕಡಿದ ಈಚಲು ಮರದ ಸತ್ಯಾಗ್ರಹದ ಕಾರಣದಿಂದಾಗಿ ಬಂಧಿಗಳಾಗಿದ್ದರೆ ಉಳಿದ ಅನೇಕ ಮಂದಿ ಬೇರೆಬೇರೆ ಕಾರಣಗಳಿಗಾಗಿ ಕೃಷ್ಣನ ಜನ್ಮಸ್ಥಳದ ದರ್ಶನವನ್ನು ಮಾಡಬೇಕಾಗಿ ಬಂದಿತು. SN ಅವರು ಈಚಲ ಮರಗಳನ್ನು ಕಡಿದ ಕಾರಣದಿಂದಾಗಿ ಚಳುವಳಿಯ ಮಾರನೇ ದಿನದ ಮುಂಜಾನೆಯಲ್ಲಿಯೇ ಆಂಗ್ಲರ ಅತಿಥಿಯಾದರೆ ದಿನಗಳೆದಂತೆ ವಿವಿಧ ಕಾರಣಗಳಿಗಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರೂ ಜೈಲು ಪಾಲಾಗುತ್ತಾ ನಡೆದರು. ಭಾರತದ ಸ್ವಾತಂತ್ರ್ಯ ಹೋರಾಟದ ಅವಿಸ್ಮರಣೀಯ ಘಟನೆಗಳಲ್ಲಿ ತುರುವನೂರಿನ ಈಚಲು ಮರದ ಸಂಗ್ರಾಮವೂ ಒಂದು ಎನ್ನುವುದನ್ನು ಸ್ವತಃ ಮಹಾತ್ಮರ ಆಪ್ತ ಸಹಾಯಕ ಮಹಾದೇವ ದೇಸಾಯಿಯವರೇ ದಾಖಲಿಸಿದ್ದಾರೆ. ಇಂತಹ ಒಂದು ಚಳುವಳಿಯ ಅಂಗವಾಗಿಯೇ ಸೆರೆವಾಸವನ್ನು ಅನುಭವಿಸಿದ ಬುಡ್ಡಪ್ಪ ಸಹಜವಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಪಾಲಿನ ಹೀರೋ ಆಗಿದ್ದ. ತರಗತಿಯ ಒಳಗಡೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಅವಧಿಯ ಚರಿತ್ರೆಯ ಪಾಠಗಳನ್ನು ಓದುವ ಹೊತ್ತು ಕೂಗಳತೆಯ ದೂರದಲ್ಲಿಯೇ ಇರುತ್ತಿದ್ದ ಬುಡ್ಡಪ್ಪ ಸಹಜವಾಗಿಯೆ ನಮ್ಮ ಕಣ್ಣೆದುರು ಸುಳಿಯುತ್ತಿದ್ದ. ಅನೇಕ ವರ್ಷಗಳ ಕಾಲ ಸ್ವಾತಂತ್ರ್ಯ ಚಳುವಳಿ ಎಂದೊಡನೆ ಬುಡ್ಡಪ್ಪನ ಆಕೃತಿ ಧುತ್ತನೆ ಬಂದು ನಮ್ಮೆದುರಿಗೆ ನಿಲ್ಲುತ್ತಿತ್ತು.
ನನ್ನ ತಂದೆಯೂ ನಾನು ಕಲಿಯುತ್ತಿದ್ದ ಹೈಸ್ಕೂಲಿನ ಶಿಕ್ಷಕರೇ ಆದ ಕಾರಣದಿಂದಲೋ ಏನೋ ನನಗೆ ಬುಡ್ಡಪ್ಪನ ಒಂದಿಗೆ ಬೇರೆಯವರಿಗೆ ಸಾಧ್ಯವಾಗದಂತಹ ಒಂದು ಸಂವಹನ ಸುಲಭದಲ್ಲಿ ಸಿದ್ಧಿಸಿತ್ತು. ನನ್ನ ರಜಾ ಮತ್ತು ವಿರಾಮದ ಬಹುತೇಕ ಸಮಯವನ್ನು ಹೈಸ್ಕೂಲ್ ಮೈದಾನದಲ್ಲಿ ಚಿಕ್ಕಂದಿನಿಂದಲೂ ಕ್ರಿಕೆಟ್ ಆಡುವುದರಲ್ಲಿ ಕಳೆಯುತ್ತಿದ್ದ ನನಗೆ ರಜಾದಿನಗಳಲ್ಲಿಯೂ ಶಾಲೆಗೆ ಬರುತ್ತಿದ್ದ ಬುಡ್ಡಪ್ಪ ಸಾಕಷ್ಟು ಪರಿಚಿತನಾಗಿದ್ದ.
ಜಾಕೀರನ ಜೊತೆಗೆ ಆಗೊಮ್ಮೆ ಈಗೊಮ್ಮೆ ಅವನ ಮನೆಗೆ ಎಡತಾಕುತ್ತಿದ್ದ ಪರಿಣಾಮವಾಗಿ ಇನ್ನೂ ತುಸು ಹೆಚ್ಚಿನ ರೀತಿಯಲ್ಲಿಯೇ ಬುಡ್ದಪ್ಪ ನನಗೆ ಹತ್ತಿರದವನಾದ. ಮತ್ತೊಂದು ವಿಶೇಷವೆಂದರೆ, ನಾವು ಹುಡುಗರಲ್ಲಿ ಯಾರಾದರೂ ಕಾಯಿಲೆ ಬಿದ್ದು ಸುಧಾರಿಸಿಕೊಳ್ಳುವ ಹಂತದಲ್ಲಿ ಇದ್ದರೆ ಅಂತಹ ಮಕ್ಕಳಿಗೆ ಸರಿಯಾದ ಮಾತ್ರದ ಪೌಷ್ಠಿಕಾಂಶ ಸಿಗಲಿ ಎನ್ನುವ ಕಾರಣಕ್ಕಾಗಿ ಬೆಳಗಿನ ಹೊತ್ತು ಹಸಿಹಾಲಿನ ಜೊತೆಗೆ ಹಸಿಕೋಳಿ ಮೊಟ್ಟೆಯನ್ನು ಬೆರೆಸಿ ಕೊಡುವ ಪದ್ಧತಿಯನ್ನು ನನ್ನ ಅವ್ವ ಅನುಸರಿಸುತ್ತಿದ್ದಳು. ಇದಕ್ಕಾಗಿ ಮೊಟ್ಟೆ ತರಲಿಕ್ಕೆ ನಾನು ಕುರುಬರ ಕೇರಿಯಲ್ಲಿದ್ದ ಬುಡ್ದಪ್ಪನ ಮನೆಗೆ ಆಗಾಗ ಹೋಗುತ್ತಲಿದ್ದೆ. ಬುಡ್ದಪ್ಪನನ್ನೂ ಸೇರಿದಂತೆ ಊರಲ್ಲಿ ನಾಲ್ಕಾರು ಮನೆಯವರು ಮಾತ್ರ ಕೋಳಿಗಳನ್ನು ಸಾಕುತ್ತಿದ್ದರು ಮತ್ತು ಮೊಟ್ಟೆಗಳನ್ನು ಮಾರುತ್ತಿದ್ದರು. ಮೊದಲಿಂದ ಬುಡ್ದಪ್ಪನ ಮನೆ ಪರಿಚಯವಾದ ಕಾರಣ ಒಂದು ರೂಪಾಯಿಗೆ ಮೂರರಂತೆ ಅವರ ಬಳಿ ದೊರೆಯುತ್ತಿದ್ದ ಕೋಳಿಮೊಟ್ಟೆಗಳನ್ನು ತಂದು ಮೂಗನ್ನು ಗಟ್ಟಿಯಾಗಿ ಮುಚ್ಚಿ ಹಸಿಹಾಲಿನ ಲೋಟಕ್ಕೆ ಒಡೆದ ಹಸಿಮೊಟ್ಟೆಯನ್ನು ಹಾಕಿ ಕಲೆಸಿ ಕುಡಿದು ಇನ್ನು ಶಕ್ತಿವಂತರಾದೆವು ಎಂದು ಬೀಗಿ ಶಾಲೆಗೆ ಓಡುತ್ತಿದ್ದ ಆ ದಿನಗಳ ನೆನಪು ಈಗಲೂ ಹಚ್ಚಹಸಿರಾಗಿದೆ.
ಬುಡ್ಡಪ್ಪನ ಜೊತೆಗಿನ ವಿಶ್ವಾಸ
ಚಿಕ್ಕಂದಿನಿಂದಲೂ ನನಗೆ ಒಂದು ಹವ್ಯಾಸ ಬೆಳೆದು ಬಂದಿತ್ತು. ಹಿರಿಯರನ್ನು, ವಯಸ್ಸಾದವರನ್ನು ಕಂಡರೆ ಅವರ ಬಳಿ ಮಾತಿಗೆ ಕೂರುತ್ತಿದ್ದೆ. ನಿಮ್ಮ ಕಾಲದಲ್ಲಿ ಐದು ಪೈಸಕ್ಕೆ ಏನೇನು ತಿಂಡಿ ಸಿಗುತ್ತಿತ್ತು? ಎನ್ನುವುದರಿಂದ ಹಿಡಿದು ಅವರ ತಲೆಮಾರಿನ ಸಾಕಷ್ಟು ವಿಷಯಗಳನ್ನು ಹೆಕ್ಕಿತೆಗೆಯುವ ಪ್ರಯತ್ನ ಮಾಡುತ್ತಿದ್ದೆ. ಇದರಿಂದ ನನಗೆ ಎಷ್ಟರಮಟ್ಟಿಗಿನ ಅನುಕೂಲವಾಯಿತೋ ತಿಳಿಯದು, ಆದರೆ ಹಿರಿಯಜೀವಗಳ ಜೊತೆ ಅವರ ಕಳೆದ ಬಾಲ್ಯದ, ಗತಜೀವನದ ಬಗ್ಗೆ ಮಾತನಾಡುವಾಗಲೆಲ್ಲಾ ಅವರ ಕಣ್ಣುಗಳಲ್ಲಿ ಗೋಚರಿಸುತ್ತಿದ್ದ ವಿಚಿತ್ರಕಾಂತಿ ಮತ್ತು ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ವಯಸ್ಸನ್ನೆ ಮರೆತು ತಮ್ಮ ಗತದಿನಗಳಿಗೆ ಮರಳಿ, ತಾತ್ಕಾಲಿಕವಾದರೂ ಸರಿ, ಅನುಭವಿಸುತ್ತಿದ್ದ ಆನಂದ ನನ್ನ ಇಂತಹ ಪ್ರಯತ್ನಗಳಿಗೆ ಇಂಬುಕೊಡುತ್ತಿತ್ತು ಅನ್ನಿಸುತ್ತದೆ.
ಹೇಳಿಕೊಳ್ಳುವಂತಹ ಗತವೈಭವ ಇಲ್ಲದ ಹಿರಿಯರೊಟ್ಟಿಗೆ ಅವರು ಕಳೆದ ದಿನಗಳ ಮೆಲಕು ಹಾಕುವಂತೆ ಮಾಡುವಲ್ಲಿ ಸಾಫಲ್ಯ ಹೊಂದುತ್ತಿದ್ದ ನಾನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಸೀಮ ಸೇನಾನಿಯಾದ ಬುಡ್ದಪ್ಪನನ್ನು ಸುಲಭದಲ್ಲಿ ಬಿಡುವುದು ಶಕ್ಯವೇ? ಸಮಯ ದೊರೆತಾಗಲೆಲ್ಲಾ ಬುಡ್ದಪ್ಪನನ್ನು ನಾನು ಆತನ ಸ್ವಾತಂತ್ರ್ಯ ಹೋರಾಟದ ವಿಷಯವಾಗಿ ಸಾಕಷ್ಟು ಗೋಳು ಹೊಯ್ದುಕೊಂಡಿದ್ದಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ನನ್ನ ಸಂವಾದಗಳಿಗೆ ಸುಲಭದಲ್ಲಿ ಮಣಿಯದೆ ಇರುತ್ತಿದ್ದ ಬುಡ್ದಪ್ಪ ಅದ್ಯಾವ ಕಾರಣಗಳಿಂದಾಗಿಯೋ ನಾನು ಹೈಸ್ಕೂಲ್ ಮೆಟ್ಟಿಲು ಏರಿದ ನಂತರದಲ್ಲಿ ನನ್ನ ಸವಾಲುಗಳಿಗೆ ಸುಲಭದಲ್ಲಿ ತೆರೆದುಕೊಳ್ಳುತ್ತಿದ್ದ. ಸಾಮಾನ್ಯವಾಗಿ ತನ್ನ ಹೋರಾಟದ ಕಥೆಗಳನ್ನು ಹಂಚಿಕೊಳ್ಳುವಲ್ಲಿ ಅಂತಹ ಹೆಚ್ಚಿನ ಆಸಕ್ತಿ ತೋರದ ಬುಡ್ಡಪ್ಪ ಯಾರಾದರೂ ಈ ವಿಷಯದಲ್ಲಿ ಮೂಗು ತೋರಿಸಹೊರಟರೆ ಕೆಂಡ ಉಗುಳುತ್ತಿದ್ದ. ರಜಾದಿನಗಳ ಅನೇಕ ಮಧ್ಯಾಹ್ನಗಳಲ್ಲಿ ನಾನು ಹೈಸ್ಕೂಲ್ ನ ಮುಖ್ಯಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಬುಡ್ದಪ್ಪನ ಜೊತೆ ಕುಳಿತು ಆತನ ಸ್ವಾತಂತ್ರ್ಯ ಹೋರಾಟದ ಅನೇಕ ಮಜಲುಗಳನ್ನು ಅತ್ಯಂತ ಸವಿಸ್ತಾರವಾಗಿ ಮೆದ್ದಿದ್ದಿದೆ; ಜೈಲು ಸೇರಲು ಬುಡ್ದಪ್ಪ ಮಾಡಿದ ಕ್ರಿಯಾತ್ಮಕ ಹರಕತ್ತಿನಿಂದ ಹಿಡಿದು ಆತನ ಸುಮಾರು ಎರಡು ಸಂವತ್ಸರಗಳ ಕಾಲದ ಜೈಲು ಜೀವನಕ್ಕೆ ನಾನು ಆತನದೇ ಆದ ಅಭಿವ್ಯಕ್ತಿಯ ಮೂಲಕ ಮೂಕ ಸಾಕ್ಷಿಯಾಗಿದ್ದೇನೆ.
ಸ್ವಾಂತಂತ್ರ್ಯ ಹೋರಾಟದ ವಿಷಯ ಬಂದರೆ 55-56 ವರುಷಗಳ ಇಳಿಪ್ರಾಯದಲ್ಲಿಯೂ ಬುಡ್ದಪ್ಪ ಹದಿನೈದು ಹದಿನಾರರ ಪೋರನಾಗಿ ಬಿಡುತ್ತಿದ್ದ. ತದನಂತರದಲ್ಲಿ ಕಾರಣಾಂತರಗಳಿಂದ ಆತ ರೂಢಿಸಿಕೊಂಡು ಬಂದಿದ್ದ ಗತ್ತು, ಗೈರತ್ತು ಮತ್ತು ಕೃತಕ ಹಮ್ಮುಬಿಮ್ಮುಗಳು ಹೇಳಹೆಸರಿಲ್ಲವಾಗಿ ಸುಮಾರು ನಾಲ್ಕು ದಶಕಗಳ ಹಿಂದಿನ ಕಾಲಚಕ್ರಕ್ಕೆ ಆತ ಅನಾಯಾಸವಾಗಿ ಮರಳುತ್ತಿದ್ದ. ಬೇರೆ ಸಮಯದಲ್ಲಿ ಬುಡ್ದಪ್ಪನ ಬಾಯಿತೆರೆಸಲೂ ಕಷ್ಟ ಎನ್ನುವಂತಹ ಪರಿಸ್ಥಿತಿ ಇದ್ದಲ್ಲಿ ಈಚಲಮರದ ಸತ್ಯಾಗ್ರಹದ ಒಂದು ಸಣ್ಣಪ್ರಸ್ತಾಪ ಮಾತ್ರದಿಂದ ಉದ್ದೀಪನಾಗಿ ಆತನು ಆಡಲು ಮೊದಲುಮಾಡುತ್ತಿದ್ದ ಎಂದರೆ ಆ ಮಾತುಗಳನ್ನು ಸ್ವಲ್ಪ ನಿಲ್ಲಿಸಲು ಹೇಳುವಂತಹ ಸನ್ನಿವೇಶವಗಳೂ ಕೆಲವು ಬಾರಿ ಸೃಷ್ಟಿಯಾಗುತ್ತಿದ್ದವು. ಅಷ್ಟರಮಟ್ಟಿಗೆ ಬುಡ್ದಪ್ಪ ಅಂದಿನ ಸ್ವಾತಂತ್ರ್ಯ ಹೋರಾಟ ಮತ್ತು ಅದರಲ್ಲಿ ತನ್ನ ಘನಪಾತ್ರದ ವಿವರಣೆಯಲ್ಲಿ ತಲ್ಲೀನನಾಗಿಬಿಡುತ್ತಿದ್ದ.

SN ಬಂಧಿತರಾದ ಮೂರೋ ಅಥವಾ ನಾಲ್ಕನೆಯ ದಿನವೋ ಅದಾಗಿರಬೇಕು. ಊರಿನ ಹಲವು ಸ್ವಾತಂತ್ರ್ಯ ಸೇನಾನಿಗಳ ಜೊತೆಗೂಡಿ ಹೊರದೇಶದ ವಸ್ತುಗಳಿಗೆ ಬಹಿಷ್ಕಾರ ಹಾಕುವ ಚಳುವಳಿಯನ್ನು ಬುಡ್ದಪ್ಪ ಹಮ್ಮಿಕೊಂಡಿದ್ದ. ಇದರ ಅಂಗವಾಗಿ ವಿದೇಶಿವಸ್ತ್ರಗಳೆ ಮೊದಲಾಗಿ ಹೊರದೇಶದಿಂದ ಆಮದಾದ ಹಲವಾರು ವಸ್ತುಗಳನ್ನು ಸಂಗ್ರಹಿಸಿದ ಬುಡ್ದಪ್ಪ ಮತ್ತು ಆತನ ಸಂಗಡಿಗರು ಊರ ಮಧ್ಯದ ಪೊಲೀಸ್ ಠಾಣೆಯ ಮುಂದೆ ಅವುಗಳನ್ನ ಗುಡ್ದೆಹಾಕಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು. ಊರಿನಲ್ಲಿ ಆ ಹೊತ್ತು ಇದ್ದ ಉದ್ವಿಗ್ನ ಪರಿಸ್ಥಿತಿಯ ಅರಿವಿದ್ದ ಪೊಲೀಸರು ಬುಡ್ದಪ್ಪ ಮತ್ತು ಆತನ ಸಂಗಾತಿಗಳನ್ನು ಸುಲಭದಲ್ಲಿ ಬಂಧಿಸಿ ಚಿತ್ರದುರ್ಗದ ಬಂಧೀಖಾನೆಯಲ್ಲಿ ಇರಿಸಿದರು. ಬುಡ್ದಪ್ಪ ಸಮೇತ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಮೇಲೂ ಕಠಿಣ ಕಾನೂನುಗಳನ್ನು ಹೇರುವ ಮೂಲಕ ಅವರು ಸುಲಭದಲ್ಲಿ ಬಿಡುಗಡೆಯಾಗದೆ ಇರುವಂತಹ ಷಡ್ಯಂತ್ರವನ್ನ ಹೂಡಿದರು.
ಬುಡ್ಡಪ್ಪ ಹೇಳಿಕೇಳಿ ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಬಂದವನು. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಕಿತ್ತು ತಿನ್ನುವಂತಹ ದಾರಿದ್ರ್ಯ ಇತ್ತು. ಇಂತಹುದರಲ್ಲಿ ಪ್ರಾಯಕ್ಕೆ ಬಂದು ಮನೆಗೆ ಆಸರೆಯಾಗುತ್ತಾನೆ ಎಂದುಕೊಂಡ ಒಬ್ಬನೇ ಮಗ ಜೈಲುಪಾಲಾಗಿದ್ದು ಬುಡ್ದಪ್ಪನ ತಾಯಿಗೆ ಬರಸಿಡಿಲಾಗಿ ಪರಿಣಮಿಸಿತ್ತು. ಇತ್ತ ವಯಸ್ಸಾದ ತಾಯಿಗೆ ಬಂದ ಕಷ್ಟವನ್ನು ನೆನೆದು ಬುಡ್ದಪ್ಪನೂ ಜೈಲಿನೊಳಗೆ ಕಣ್ಣೀರಿಡದ ದಿನಗಳೇ ಇಲ್ಲ ಎನ್ನಬಹುದು. ಆದರೆ ಬುಡ್ದಪ್ಪ ಎಂದೂ ತಾನು ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟವನೆ ಅಲ್ಲ. ದೇಶಾಭಿಮಾನದ ಕಿಚ್ಚಿನಲ್ಲಿ ತನ್ನನ್ನು ದಹಿಸಿಕೊಂಡ ರೀತಿಯನ್ನು ಆತ ಯಾವತ್ತೂ ಉಗ್ರಅಭಿಮಾನದ ನೆಲೆಯಲ್ಲಿಯೇ ಅರುಹುತ್ತಿದ್ದ. ಪರಿವಾರ ಮತ್ತು ದೇಶದ ಆಯ್ಕೆಯ ಪ್ರಶ್ನೆ ಬಂದಾಗ ನನ್ನ ಆಯ್ಕೆ ಸರಿಯಾಗಿಯೇ ಇತ್ತು ಎಂದು ಬುಡ್ದಪ್ಪ ಮನಸಾರೆ ನಂಬಿದ್ದ.

ಜೈಲಿನಲ್ಲಿ ಬುಡ್ದಪ್ಪನಿಗೆ ಅನೇಕ ಸ್ವಾತಂತ್ರ್ಯ ಸೇನಾನಿಗಳ ಪರಿಚಯವಾಯಿತು. ತನ್ನ ಊರಿನವರೇ ಆದ ಎಮ್. ರಾಮರೆಡ್ಡಿ, ಜಿ. ತಿಪ್ಪೇಸ್ವಾಮಿಗೌಡ, ಎಂ. ಶಿವಯ್ಯ, ಆರ್. ವಿರುಪಣ್ಣ, ಎನ್. ಸಿದ್ದಣ್ಣ, ಜಿ. ಎಸ್. ತಿಪ್ಪೇರುದ್ರಪ್ಪ, ಕುಂತಿ ಸಂಜೀವರೆಡ್ಡಿ, ಸಾದಾ ನಾರಾಯಣರೆಡ್ಡಿ, ಎಸ್. ಅನಂತರೆಡ್ಡಿ, ಟೈಲರ್ ಲಕ್ಷ್ಮಣರೆಡ್ಡಿ, ವೀರಣ್ಣರೆಡ್ಡಿ, ಎಂ. ಹನುಮಂತಪ್ಪ, ಕೆ. ನರಸಿಂಹರೆಡ್ಡಿ ಅಲ್ಲದೇ ಕರ್ನಾಟಕದ ಪರ ಊರುಗಳ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದುಮ್ಮಿ ಮುರಿಗೆಪ್ಪ, ಬಳ್ಳಾರಿ ಸಿದ್ದಮ್ಮ, ನಾಗರತ್ನಮ್ಮ ಮುಂತಾದ ಅನೇಕರ ಸ್ನೇಹ ಸಹಕಾರಗಳು ಲಭಿಸಿದವು. ಈ ಸ್ನೇಹ ಪರಿಚಯಗಳಿಗೆಲ್ಲಾ ಕಿರೀಟಪ್ರಾಯವಾಗಿ ಬುಡ್ದಪ್ಪನಿಗೆ ಸೆರೆಮನೆಯಲ್ಲಿ ದೊರೆತ ಅಮೂಲ್ಯನಿಧಿ ಎಂದರೆ SN ಅವರ ನಿಕಟಸಂಪರ್ಕ. SN ಅವರ ಮಗ್ಗುಲಿನ ಸೆಲ್ ನಲ್ಲಿಯೇ ಕೈದಿಯಾಗಿದ್ದ ಬುಡ್ದಪ್ಪ ಕಾಲಕ್ರಮೇಣ SN ಅವರಿಗೆ ಅತ್ಯಂತ ವಿಶ್ವಾಸಪಾತ್ರದ ಬಂಟನಾಗಿ ರೂಪುಗೊಂಡ. ಆ ವೇಳೆಗಾಗಲೇ ನಡುವಯ್ಯಸ್ಸಿನವರಾಗಿದ್ದ SN ಅವರ ಅನೇಕ ಕೆಲಸಕಾರ್ಯಗಳಿಗೆ ಬುಡ್ದಪ್ಪ ಊರುಗೋಲಾದ. ಜೈಲಿನೊಳಗೆ SN ಮತ್ತು ಬುಡ್ದಪ್ಪ ಪರಸ್ಪರ ಎಷ್ಟೊಂದು ಆತ್ಮೀಯರಾಗಿದ್ದರು ಎಂದರೆ SN ಬಿಡುಗಡೆಗೆ ಕೆಲವೇ ದಿನಗಳ ಮುಂಚೆ ಬಿಡುಗಡೆಯ ಭಾಗ್ಯ ಕಂಡಿದ್ದ ಬುಡೇನ್ ಸಾಬ್ ಸೆರೆಮನೆಯಿಂದ ಹೊರಬರುವ ಹೊತ್ತು ಅತಿಭಾವುಕನಾಗಿ SN ಅವರನ್ನು ತಬ್ಬಿಕೊಂಡು ಅರ್ಧಗಂಟೆಗಳ ಕಾಲ ಗಳಗಳನೆ ಅತ್ತಿದ್ದ. ಬುಡ್ದಪ್ಪನನ್ನು ಸಮಾಧಾನಪಡಿಸಲು SN ಬಹಳ ಶ್ರಮಪಡಬೇಕಾಯಿತು. “ಇನ್ನೇನು ಮುಂದಿನ ವಾರದಲ್ಲಿಯೇ ನಾನೂ ಹೊರಗೆ ಬರುವವನಿದ್ದೇನೆ” ಎನ್ನುವ SN ಅವರ ವಿಶ್ವಾಸದ ಮಾತುಗಳಿಗೆ ತುಸು ಸಮಾಧಾನ ಹೊಂದಿದವನಾಗಿ ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಹೊರಬರುವ ಮೊದಲು ಅಲ್ಲಿನ ಬ್ರಿಟಿಷ್ ಜೈಲರ್ ನ್ನ ಕಾಡಿಬೇಡಿ SN ಒಟ್ಟಿಗೆ ಒಂದು ಕಪ್ಪುಬಿಳುಪಿನ ಛಾಯಾಚಿತ್ರವನ್ನು ತೆಗೆಸಿಕೊಂಡು ಬಂದಿದ್ದ. ಆ ಫೋಟೋವನ್ನು ಯಾವಾಗಲೂ ತನ್ನ ಶರ್ಟಿನ ಜೇಬಿನಲ್ಲಿ ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದ. ಯಾರು ಎಷ್ಟೇ ಕೇಳಿದರೂ ಆ ಫೋಟೋವನ್ನು ಬುಡ್ದಪ್ಪ ಜೇಬಿನಿಂದ ಹೊರತೆಗೆಯುತ್ತಿರಲಿಲ್ಲ. ತನ್ನ ಬಳಿ ಅಂತದ್ದೇನೂ ಇಲ್ಲವೆಂದೇ ಖಡಾಖಂಡಿತವಾಗಿ ಹೇಳಿಬಿಡುತ್ತಿದ್ದ. ನಾನೂ ಮೊದಮೊದಲು ಬುಡ್ದಪ್ಪನೊಂದಿನ ಇಂತಹ ಪ್ರಯತ್ನಗಳಲ್ಲಿ ಹಲವಾರು ಬಾರಿ ಸೋತಿದ್ದಿದೆ. ಆದರೂ ಎಡಬಿಡದ ಸತತ ಪ್ರಯತ್ನಗಳಿಂದಾಗಿ ಒಂಬತ್ತನೇ ಕ್ಲಾಸಿನ ವರ್ಷದ ಕೊನೆಯ ಹೊತ್ತಿಗೆ ಬುಡ್ದಪ್ಪನ ಆ ಅಪರೂಪದ ಫೋಟೋವನ್ನು ನೋಡುವ ಸೌಭಾಗ್ಯ ದೊರಕಿಸಿಕೊಂಡೆ. ಅಲ್ಲಿಂದ ಮುಂದಕ್ಕೆ ಕನಿಷ್ಠ ಪಕ್ಷ ಐದಾರು ಸಲವಾದರೂ ಆ ಫೋಟೋವನ್ನು ನೋಡಿದ ನೆನಪಿದೆ. ನಾನು ಶಾಲೆ ಬಿಟ್ಟ ಅಂದರೆ ಹತ್ತನೇ ಇಯತ್ತೆಯನ್ನು ಪಾಸು ಮಾಡಿದ ವರ್ಷವೇ ಬುಡ್ದಪ್ಪನಿಗೆ ಸರ್ಕಾರಿಸೇವೆಯಿಂದ ನಿವೃತ್ತಿಯಾಯಿತು. ಈ ಘಟನೆಯ ನಂತರದಲ್ಲಿ, ಹತ್ತಾರು ವರ್ಷಗಳ ಬಳಿಕ ಊರಿಗೆ ಹೋದವನು ಬುಡ್ಡಪ್ಪನನ್ನು ನೋಡುವುದಕ್ಕಾಗಿಯೇ ದಾರಿಯಲ್ಲಿ ಆಕಸ್ಮಿಕವಾಗಿ ಸಿಕ್ಕ ಜಾಕೀರನ ಒಟ್ಟಿಗೆ ಆತನ ಮನೆಗೆ ಹೋಗಿದ್ದೆ. ಮುದಿತನ ಬುಡ್ಡಪ್ಪನ ದೇಹದ ಮೇಲೆ ಆಕ್ರಮಣ ಮಾಡುವಲ್ಲಿ ಯಶಸ್ವಿಯಾದಂತೆ ಕಂಡುಬಂದರೂ ಮಾನಸಿಕವಾಗಿ ಆತ ಆಂಗ್ಲರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಬಂಡಾಯದ ಬಾವುಟವನ್ನ ಮುಗಿಲೆತ್ತರಕ್ಕೆ ಏರಿಸಿ, ಹಾರಿಸಿದ ನಿಜವಾದ ಸೇನಾನಿಯೆ ಆಗಿದ್ದ. ಮಾತುಕತೆಗಳ ನಂತರ ಹೊರಟು ನಿಂತಿದ್ದ ನನ್ನನ್ನು ತಾನು ಹಾಸಿಕೊಂಡು ಮಲಗಿದ್ದ ಜಗುಳಿ ಮೇಲಿನ ಕಡ್ಡಿಚಾಪೆಯ ಮೇಲೆ ಕೂರಿಸಿಕೊಂಡು ಕೊನೆಯಬಾರಿ ಎಂಬಂತೆ ಆತನ ಜೇಬಿನಲ್ಲಿದ್ದ ಫೋಟೋ ತೆಗೆದು ತೋರಿಸಿದ್ದ.
SN ಅವರ ಬಗ್ಗೆ ಬುಡ್ಡಪ್ಪ ಅಗಾಧ ಎನ್ನುವಂತ ಸ್ವಾಮಿನಿಷ್ಠೆಯನ್ನು ಮಡುಗಿದ್ದ. SN ಅವರನ್ನು “ಅಪ್ಪಾಜಿ” ಎಂದೇ ಸಂಬೋಧಿಸುತ್ತಿದ್ದ. ತನ್ನ ಮತ್ತು SN ಮಧ್ಯೆ ಜೇಲಿನಲ್ಲಿ ನಡೆದ ಹಲವು ವೃತ್ತಾಂತಗಳ ವಿವರಣೆಯನ್ನ ಕೊಡುವುದು ಎಂದರೆ ಆತನಿಗೆ ಎಲ್ಲಿಲ್ಲದ ಹಿಗ್ಗಿನ ವಿಷಯವಾಗಿತ್ತು. ಆದರೂ ಕಂಡಕಂಡವರೊಟ್ಟಿಗೆ ಈ ಕುರಿತು ಮಾತನಾಡಲು ಬುಡ್ಡಪ್ಪ ಹಿಂಜರಿಯುತ್ತಿದ್ದ. ಆತನಿಗೆ ಈ ಹಿಂದೆ ಇದೇ ವಿಷಯದಲ್ಲಿ ಆದ ಕಹಿಘಟನೆಗಳು ಮನಸ್ಸಿಗೆ ಬಹು ದೊಡ್ಡಮಟ್ಟದ ಘಾಸಿಮಾಡಿದ್ದವು. SN ಮುಖ್ಯಮಂತ್ರಿಯಾದ ಹೊತ್ತು ಊರಿನ ಮರಿಪುಢಾರಿಗಳನೇಕರು SN ಮತ್ತು ಬುಡ್ಡಪ್ಪನ ನಡುವಣ ಸ್ನೇಹ ಮತ್ತು ವಿಶ್ವಾಸದ ಪ್ರಯೋಜನ ಪಡೆಯಲು ಯತ್ನಿಸಿದ್ದರು. ಬುಡ್ಡಪ್ಪ ಕೆಲಸ ಮಾಡುತ್ತಿದ್ದ ಹೈಸ್ಕೂಲಿನ ಸಹೋದ್ಯೋಗಿಗಳಲ್ಲಿ ಕೆಲವರು ವರ್ಗಾವಣೆ, ಬಡ್ತಿ ಇಂತವೇ ಮೊದಲಾದ ಕೆಲಸಗಳಲ್ಲಿ ಆತನ ಸಹಾಯ ಹಸ್ತವನ್ನು ಕೋರಿದ್ದರು. ಬುಡ್ಡಪ್ಪನನ್ನು ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೀಡಿಸುತ್ತಿದ್ದ ಯುವಕರ ಮತ್ತು ಅವರ ಮನೆಯವರ ಕಾಟವಂತೂ ಸಹಿಸಲಸಾಧ್ಯವಾಗಿತ್ತು. SN ಮತ್ತು ಬುಡ್ಡಪ್ಪ ಮಧ್ಯದ ಸ್ನೇಹವನ್ನ ಎಷ್ಟು ಮುಚ್ಚಿ ಹಾಕಬೇಕೆಂದರೂ ಅದು ಊರ ಸಾರ್ವಜನಿಕ ತಿಳುವಳಿಕೆಯ ಸ್ವತ್ತಾಗಿ ಮಾರ್ಪಾಡಾಗಿತ್ತು. ಅಷ್ಟೇಕೆ, ಸುತ್ತಮುತ್ತಲಿನ ಹತ್ತುಹಳ್ಳಿಯ ಜನವೂ ಇದರ ಬಗ್ಗೆ ಮಾಹಿತಿ ಹೊಂದಿದವರಾಗಿದ್ದದ್ದು ಬುಡ್ಡಪ್ಪನಿಗೆ ಸಹಿಸಲಾರದ ಮುಜುಗರವನ್ನು ಬಹಳ ದೊಡ್ಡ ಮಟ್ಟದಲ್ಲಿಯೇ ಉಂಟುಮಾಡುತ್ತಿತ್ತು. ಇದರಿಂದ ಬಹಳವೇ ಮನನೊಂದಿದ್ದ ಬುಡ್ಡಪ್ಪ ಈ ವಿಷಯದಲ್ಲಿ ಬಹಳ ನಿಷ್ಠುರ ಎನ್ನುವಂತಹ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದ. ತನ್ನ ಮತ್ತು SN ನಡುವಿನ ಸ್ನೇಹವನ್ನು ತನ್ನ ಪ್ರಾಣಕ್ಕಿಂತಲೂ ಒಂದು ಕೈ ಹೆಚ್ಚು ಎಂದೇ ಭಾವಿಸಿದ್ದ ಬುಡ್ಡಪ್ಪ ಅದನ್ನು ಎಂದೂ ತನ್ನ ಮತ್ತು ಇತರರ ಸ್ವಾರ್ಥ ಸಾಧನೆಗಾಗಿ ಬಳಸದೇ ಇರುವ ಭೀಷ್ಮಪ್ರತಿಜ್ಞೆಯನ್ನು ತನ್ನ ಜೀವನದ ಏಕೈಕ ವ್ರತವನ್ನಾಗಿಸಿದ್ದ.
SN ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದಾಗ ನಡೆದ ಒಂದು ಘಟನೆಯನ್ನು ಬುಡ್ಡಪ್ಪ ನನ್ನ ಬಳಿ ಯಾವಾಗಲೂ ಸ್ಮರಿಸುತ್ತಿದ್ದ. ಚಿತ್ರದುರ್ಗದಲ್ಲಿ SN ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಸೇನಾನಿಗಳನ್ನ ಸನ್ಮಾನ ಮಾಡುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರಂತೆ. ಈ ಸಮಾರಂಭದಲ್ಲಿ ಭಾಗಿಯಾಗಲು ಬುಡ್ಡಪ್ಪನಿಗೂ ಜಿಲ್ಲಾಡಳಿತ ಆಮಂತ್ರಣ ಕಳುಹಿಸಿತ್ತು. ಈ ವೇಳೆಗಾಗಲೇ ರಾಷ್ಟ್ರಮಟ್ಟದಲ್ಲಿ SN ಬಹುದೊಡ್ಡ ಮಟ್ಟದ ನಾಯಕರಾಗಿ ಬೆಳೆದಿದ್ದರು. ಅವಿಭಜಿತ ಅಖಿಲ ಭಾರತ ಕಾಂಗ್ರೆಸ್ ನ ಅಧ್ಯಕ್ಷ ಪದವಿಯನ್ನೇ ಅಲಂಕರಿಸಿದ್ದರು. ಬುಡ್ಡಪ್ಪನಿಗೂ SN ಭೇಟಿಯಾಗದೆ ಸುಮಾರು ಒಂದು ದಶಕಗಳಿಗೂ ಮೀರಿದ ಸಮಯವಾಗಿತ್ತು. SN ತನ್ನನ್ನು ಗುರುತಿಸಬಲ್ಲರೇ? ಗುರುತಿಸಿದರೂ ಮೊದಲಿನಂತೆ ಮಾತಾಡಿಸಬಲ್ಲರೆ? ಎನ್ನುವ ಸಣ್ಣ ಅನುಮಾನವೊಂದು ಬುಡ್ಡಪ್ಪನ ಮನಸ್ಸಿನಲ್ಲಿ ಮೊಳೆದಿತ್ತು. ತನ್ನ ಜೇಬಿನಲ್ಲಿ ಇದ್ದ ಫೋಟೋವನ್ನು ಒಮ್ಮೆ ಹೊರತೆಗೆದು ದೃಷ್ಟಿಸಿ ನೋಡಿದವನು ‘ಛೇ! ಹಾಗಾಗಲಿಕ್ಕಿಲ್ಲ’ ಎಂದು ತಮ್ಮಷ್ಟಕ್ಕೆ ತಾನೇ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ.
ನಿಜಲಿಂಗಪ್ಪನವರ ಜೊತೆಯಲ್ಲಿ ನಿಂತ ಬುಡ್ಡಪ್ಪ
ಸಂತೆಬೈಲಿನಲ್ಲಿ ಎಕರೆಗಟ್ಟಲೆ ಹಾಕಿದ್ದ ಪೆಂಡಾಲನ್ನು ನೋಡಿಯೇ ಸಮಾರಂಭದ ಸಲುವಾಗಿ ದುರ್ಗಕ್ಕೆ ಆಗಮಿಸಿದ್ದ ಬುಡೇನ್ ಸಾಬ್ ಅವಕ್ಕಾದರು. ಇನ್ನು ಜನಸಾಗರವೋ, ಹೇಳತೀರದು. ಕಣ್ಣುಹಾಯಿಸಿದಷ್ಟು ದೂರ ಬರೀ ತಲೆಗಳೇ ತಲೆಗಳು. ನಾನು ಯಾಕಾಗಿ ಈ ಸನ್ಮಾನ ಸಮಾರಂಭಕ್ಕೆ ಬಂದೆನೋ? ಎನ್ನುವ ಒಂದು ಸಣ್ಣ ಯೋಚನೆಯೂ ಬುಡ್ಡಪ್ಪನ ಮನದಲ್ಲಿ ಹಾದುಹೋಯಿತು. ಗಣಪತಿ ವಂದನಾ ಪ್ರಾರ್ಥನಾ ಗೀತೆಯೊಂದಿಗೆ ಶುರುವಾದ ಸಮಾರಂಭ ಸ್ವಾತಂತ್ರ್ಯ ಸೇನಾನಿಗಳನ್ನು ಸತ್ಕರಿಸಿ, ಸನ್ಮಾನಿಸುವ ಹಂತಕ್ಕೆ ಬಂದು ನಿಂತಿತ್ತು. ಸಮಾರಂಭದ ಆಯೋಜಕರು ಮೈಕಿನ ಮುಂದೆ ಬಂದು ಒಂದೊಂದಾಗಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಕೂಗುತ್ತಾ ಹೋಗುತ್ತಿದ್ದರೆ ಮುಖ್ಯಮಂತ್ರಿಗಳು ವೇದಿಕೆಯ ಮೇಲೆ ಬರುತ್ತಿದ್ದ ಆಯಾಯ ಹೋರಾಟಗಾರರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ಕೊಡುವ ಮೂಲಕ ಸನ್ಮಾನವನ್ನು ಮಾಡುತ್ತಾರೆ ಎನ್ನುವುದು ಈ ಮೊದಲೇ ನಿರ್ಧಾರವಾದ ಕಾರ್ಯಕ್ರಮದ ಪಟ್ಟಿಯಲ್ಲಿತ್ತು. ಈ ಸಂದರ್ಭದಲ್ಲಿ ಅಲ್ಲಿಯವರೆಗೂ ವೇದಿಕೆಯ ಮೇಲೆ ಆಸೀನರಾಗಿದ್ದ SN ಅಚಾನಕ್ ಆಗಿ ತಮ್ಮ ಆಸನದಿಂದ ಎದ್ದು ವೇದಿಕೆಯ ಮುಂಭಾಗದಲ್ಲಿ ಇದ್ದ ಮೈಕ್ ಬಳಿಗೆ ಎದ್ದು ಬಂದರು. ಮುಖ್ಯಮಂತ್ರಿಗಳ ಈ ನಡೆ ಸಹಜವಾಗಿಯೇ ಆಯೋಜಕರ ರಕ್ತದ ಒತ್ತಡವನ್ನು ಹೆಚ್ಚಿಸಿತು. SN ತಮ್ಮ ಎಂದಿನ ಗಡುಸು ಧ್ವನಿಯಲ್ಲಿ “ಇಲ್ಲಿ ತುರುವನೂರಿನ ಬುಡೇನ್ ಸಾಬ್ ಅವರು ಬಂದಿದ್ದರೆ ಸರ್ವಪ್ರಥಮ ವೇದಿಕೆಯ ಮೇಲೆ ಬಂದು ಸನ್ಮಾನವನ್ನು ಸ್ವೀಕರಿಸತಕ್ಕದ್ದು” ಎಂದು ಅನೌನ್ಸ್ ಮಾಡಿಯೇಬಿಟ್ಟರು. ಜನಜಂಗುಳಿಯ ಮಧ್ಯದೆಲ್ಲೆಲ್ಲೋ ಸಿಕ್ಕಿಹಾಕಿಕೊಂಡಿದ್ದ ಬುಡ್ಡಪ್ಪ ಸಾವಕಾಶವಾಗಿ ಜನಸಾಗರವನ್ನ ಸರಿಸುತ್ತಾ ವೇದಿಕೆಯೆಡೆಗೆ ಚಲಿಸುವುದಕ್ಕೆ ಮೊದಲಿಟ್ಟರು. ಯಾರು ಬುಡೇನ್ ಸಾಬ್? ಎಂದು ವೇದಿಕೆಯ ನಾಲ್ಕೂ ಬದಿಗೆ ಕಣ್ಣುಹಾಯಿಸಿ ನೋಡುತ್ತಿದ್ದ ಆಯೋಜಕರ ಕಣ್ಣಿಗೆ ಕಡೆಗೂ ಬುಡೇನ್ ಸಾಬ್ ಬಿದ್ದರು. ಆತುರಾತುರವಾಗಿ ಬುಡ್ಡಪ್ಪ ಅವರ ಬಳಿಸಾರಿದ ಆಯೋಜಕರು ಅವರನ್ನು ಸಾವಕಾಶವಾಗಿ ವೇದಿಕೆಯ ಮೇಲೆ ಕರೆತರಲು ಕೆಲವು ನಿಮಿಷಗಳೇ ಬೇಕಾದವು. ಅಲ್ಲಿಯವರೆಗೆ ವೇದಿಕೆಯ ಮೇಲೆ ನಿಂತೇ ತಮ್ಮ ಯುವಸಂಗಾತಿಯ ಬರುವಿಗಾಗಿ ಕಾಯುತ್ತಿದ್ದ SN ವೇದಿಕೆಯ ಮೇಲೆ ಕಾಲಿಡುತ್ತಿದ್ದ ಹಾಗೆಯೇ ಬುಡೇನ್ ಸಾಬ್ ರನ್ನು ಗಟ್ಟಿಯಾಗಿ ತಬ್ಬಿಕೊಂಡರು. ಭಾವಪರವಶರಾದ ಬುಡ್ಡಪ್ಪ ಮುಖ್ಯಮಂತ್ರಿಗಳ ಕಾಲಿಗೆಬಿದ್ದರು. ಕೆನ್ನೆಗಳ ಎರಡೂ ಬದಿಯಲ್ಲಿ ಕಣ್ಣೀರಿನ ಕೋಡಿ ಹರಿಯಲಿಕ್ಕೆ ಮೊದಲಾಗಿತ್ತು. ಒಂದೆರೆಡು ನಿಮಿಷ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡ ಜೈಲುಹಕ್ಕಿಗಳು ಎಂಥದ್ದೋ ಒಂದು ಸಮ್ಮೋಹಿನಿಗೆ ಒಳಗಾದವರಂತೆ ಇದ್ದರು. ಇವರಿಬ್ಬರ ಮಿಲನದ ಹಿನ್ನೆಲೆ ಅರಿಯದ ಅಲ್ಲಿದ್ದ ಜನಸಾಗರ ಅವರಲ್ಲಿದ್ದ ಮೈತ್ರಿಯನ್ನು ನೋಡಿ ಐದು ನಿಮಿಷಗಳಿಗೂ ಮೀರಿದ ಪ್ರಚಂಡ ಕರತಾಡನ ಗೈದಿತ್ತು. ನನ್ನ ಹಾಗೂ ಬುಡ್ಡಪ್ಪನ ನಡುವಿನ ಸಂವಾದದ ಅಂತ್ಯ ಈ ಘಟನೆಯ ಉಲ್ಲೇಖವಿಲ್ಲದೆ ಕೊನೆಯಾದದ್ದು ನನ್ನ ನೆನಪಿನಲ್ಲಿ ಇಲ್ಲವೇ ಇಲ್ಲ. ಒಂದು ಪಕ್ಷ ಬುಡ್ಡಪ್ಪ ಇದನ್ನು ಮರೆತರೂ ನಾನು ಆತನಿಗೆ ಇದನ್ನು ನೆನಪಿಸಿಕೊಟ್ಟು ಆತ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಈ ಘಟನೆಯನ್ನು ವಿವರಿಸುತ್ತಿದ್ದ ರೀತಿಯನ್ನು ಮನಸಾರೆ ಸವಿಯುತ್ತಿದ್ದೆ. ಈ ಘಟನೆಯನ್ನು ಅರುಹಿದ ಪ್ರತಿ ಬಾರಿಯೂ ಬುಡ್ಡಪ್ಪನ ಕಣ್ಣುಗಳಲ್ಲಿ ತೆಳುವಾದ ಕಣ್ಣೀರಿನ ಪರದೆಯನ್ನು ನಾನು ಕಂಡಿದ್ದೇನೆ. ಗಂಟಲು ಕಟ್ಟಿಬಂದಂತಾಗಿ ಗದ್ಗದಿತನಾಗುತ್ತಿದ್ದ ಬುಡ್ಡಪ್ಪ ಒಂದು ಗೊಟಕು ನೀರು ಕುಡಿದ ಸ್ವಲ್ಪ ಸಮಯದ ನಂತರವೇ ನಿಧಾನಗತಿಯಲ್ಲಿ ಸಾವರಿಸಿಕೊಳ್ಳುತ್ತಿದ್ದ.
ಅದು ತೊಂಬತ್ತರ ದಶಕದ ಮಧ್ಯಭಾಗ. ಆಫೀಸ್ ನಲ್ಲಿದ್ದೆ, ಗೆಳೆಯ ಜಾಕೀರ್ ಹುಸೇನ್ ಆ ಹೊತ್ತಿಗೆ ಚಿತ್ರದುರ್ಗದಲ್ಲಿ ತನ್ನ ಅಣ್ಣನೊಡಗೂಡಿ ಒಂದು ಫೈನಾನ್ಸ್ ಕಂಪನಿಯನ್ನು ನಡೆಸುತ್ತಿದ್ದ. ಮಧ್ಯಾಹ್ನ ಮೂರರ ವೇಳೆಗೆ ಜಾಕೀರ್ ನಿಂದ ನನ್ನ ಇಂಟರ್ ಕಾಮ್ ಗೆ ಒಂದು ಫೋನ್ ಕರೆ ಬಂದಿತ್ತು. ಜಾಕೀರ್ ದುಃಖತಪ್ತನಾದಂತೆ ಕಂಡ. ತುಂಬಾ ಕುಗ್ಗಿದ ದನಿಯಲ್ಲಿ ಬುಡೇನ್ ಸಾಬ್ ಬೆಳಿಗ್ಗೆ ಚಿತ್ರದುರ್ಗ ಜಿಲ್ಲಾ ಹಾಸ್ಪಿಟಲ್ ನಲ್ಲಿ ಅಲ್ಪಕಾಲದ ಅಸ್ವಸ್ಥತೆಯ ನಂತರ ವಿಧಿವಶರಾದ ಬಗ್ಗೆ ತಿಳಿಸಿದ. ಒಂದು ಕ್ಷಣ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಸ್ವಲ್ಪ ಸಾವರಿಸಿಕೊಂಡವನು “ಜಾಕೀರ್, ನೀನೊಂದು ಅರ್ಜೆಂಟ್ ಕೆಲಸ ಮಾಡು. ಬೇರೆ ಯಾರಾದರೂ ನಿನ್ನ ಅಪ್ಪನ ಜೇಬನ್ನು ಹುಡುಕುವ ಮೊದಲೇ ಆತನ ಶರ್ಟ್ ಜೇಬಿನಲ್ಲಿರುವ ಫೋಟೋ ತೆಗೆ. ಫೋಟೋವನ್ನು ಜೋಪಾನವಾಗಿ ಒಂದೆಡೆ ತೆಗೆದಿಡು. ಆಮೇಲೆ ನಾನು ನಿನಗೆ ಫೋಟೋವನ್ನು ಏನು ಮಾಡಬೇಕೆಂದು ಹೇಳುತ್ತೇನೆ” ಎಂದು ಫೋನನ್ನು ಕೆಳಗಿಟ್ಟೆ.
ಇದಾದ ಕೆಲವರ್ಷಗಳ ಬಳಿಕ ಊರಿಗೆ ಹೋದವನು, ಜಾಕೀರನ ಮನೆಗೂ ಹೋಗಿದ್ದೆ, ಗೋಡೆಯ ಮೇಲೆ ಅಚ್ಚುಕಟ್ಟಾದ ಫ್ರೇಮ್ ನಲ್ಲಿ ಕಂಗೊಳಿಸುತ್ತಿದ್ದ, ಬುಡ್ಡಪ್ಪನ ಜೇಬಿನಲ್ಲಿ ದಶಕಗಳ ಕಾಲ ಇದ್ದರೂ ಮುಕ್ಕಾಗದೆ ಉಳಿದ ಫೋಟೋ ನೋಡಿ ಸಮಾಧಾನದ ನಿಟ್ಟುಸಿರುಬಿಟ್ಟೆ. ಬುಡ್ಡಪ್ಪ ಮತ್ತೊಮ್ಮೆ ತನ್ನ ಜೇಬಿನಿಂದ ಜತನವಾಗಿ ಫೋಟೋವನ್ನು ಹೊರತೆಗೆದು ನನ್ನ ಮುಂದೆ ಹಿಡಿದ ಹಾಗಾಯ್ತು. ಯಾವತ್ತಿನಂತೆ ಇವತ್ತೂ ಸಹಾ ಫೋಟೋ ತೋರಿಸುವ ಹೊತ್ತು ಬುಡ್ಡಪ್ಪನ ಉಬ್ಬಿದ ಎದೆಯ ಉಪಸ್ಥಿತಿಯ ಭಾಸ ನನಗಾಯಿತು.