ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .
ನಮ್ಮ ಹಳ್ಳಿಗಳಲ್ಲಿ ಒಂದು ನಾಣ್ಣುಡಿ ಸಾಮಾನ್ಯವಾಗಿದೆ. ಅದೆಂದರೆ “ಧರ್ಮದ ಊರಿನ ಮುಂದೆ ಮಳೆ ಬಂದರೆ, ಕರ್ಮದ ಊರಿನ ಮುಂದೆ ಹಳ್ಳ ಹರಿಯಿತು ಎಂಬುದು. ಕಳೆದ ಇಪ್ಪತ್ತೆಂಟು ವರ್ಷಗಳ ನನ್ನ ಅನುಭವದಲ್ಲಿ ೨೦೦೯ನ್ನು ಹೊರತುಪಡಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಸುರಿದದ್ದು ತೀರ ಅಪರೂಪವೇ. ಆದರೆ ಇಲ್ಲಿನ ತುಂಗಭದ್ರೆ ಮಾತ್ರ ಪ್ರತಿವರ್ಷವೂ ಮೈದುಂಬಿ ಹರಿದು ತನ್ನ ಕಬಂದಬಾಹುಗಳಿಂದ ಪ್ರವಾಹವನ್ನು ನಿರಂತರವಾಗಿ ಸೃಷ್ಟಿಸುತ್ತಾ ಬಂದಿದ್ದಾಳೆ. ಬಿಸಿಲ ಬೇಗೆ ಮತ್ತು ಬರದ ಛಾಯೆಯನ್ನು ಹೊತ್ತೇ ಮುನ್ನಡೆಯುತ್ತಿರುವ ಪ್ರದೇಶ ಬಳ್ಳಾರಿ ಜಿಲ್ಲೆಯದು. ಇದಕ್ಕೆ ಕೊಪ್ಪಳ, ರಾಯಚೂರು ಜಿಲ್ಲೆಗಳೂ ಹೊರತಾಗಿಲ್ಲ. ಮಲೆನಾಡಿನ ಸಹ್ಯಾದ್ರಿ ಬೆಟ್ಟಶ್ರೇಣಿಗಳಲ್ಲಿ ಎಡೆಬಿಡದೆ ಸುರಿಯುವ ಮಳೆಯ ನೀರನ್ನು ಹೊತ್ತು ರಮ್ಯರಮಣೀಯವಾಗಿ ಹರಿದುಬರುವ ತುಂಗಭದ್ರಾ ನದಿ ಈ ಜಿಲ್ಲೆಗಳಿಗೆ ವರದಾನವೇ ಸರಿ. ಇದು ಒಂದು ಬಗೆಯಲ್ಲಿ ಈಜಿಫ್ಟಿನ ನೈಲ್ ನದಿಯಂತೆ, ಮರಳುಗಾಡಿನ ಓಯಸಿಸ್ ಎಂಬಂತೆ ಈ ಭಾಗದ ಜೀವಜಲವಾಗಿದೆ. ಮಳೆಗಾಲದಲ್ಲಂತೂ ತುಂಗಭದ್ರೆಯು ಹಂಪೆ ಪರಿಸರದ ಬೆಟ್ಟಗುಡ್ಡ, ಕಲ್ಲುಬಂಡೆಗಳನ್ನು ಸೀಳಿ ಹರಿಯುವ ಆ ನೋಟ ನೋಡಲು ಚಂದ ಮತ್ತು ಮಹದಾನಂದ. ಇದನ್ನು ಪಂಪಾ, ಹಂಪಿಹೊಳೆ, ತುಂಗಭದ್ರೆ ಎಂದೆಲ್ಲಾ ಕರೆಯಲಾಗಿದೆ. ಈ ನದಿ ಹರಿಯುವುದು ಈ ಮೇಲೆ ಹೇಳಿದ ಬಿಸಿಲನಾಡಿನಲ್ಲಿ ಆಗಿರುವುದರಿಂದ ಮೇಲಿನ ನಾಣ್ಣುಡಿ ಸರಿಹೊಂದುತ್ತದೆ. ಬಿಸಿಲ ನಾಡಿನಲ್ಲಿ ಹರಿಯುವ ಈ ನದಿಯ ನೀರನ್ನು ಪ್ರಾಚೀನ ಕಾಲದಿಂದಲೂ ವಿವಿಧ ವಿಧಾನಗಳನ್ನು ಅಳವಡಿಸಿಕೊಂಡು ಬಳಸಿಕೊಳ್ಳುವ ಪ್ರಯತ್ನವನ್ನು ನಮ್ಮ ಪೂರ್ವಜರು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದರು. ಅದು ಇಂದು ಎಷ್ಟರಮಟ್ಟಿಗೆ ಎಂದರೆ ತುಂಗಭದ್ರಾ ಮಧ್ಯಕರ್ನಾಟಕದ ಜನರ ಬಹುಮುಖ್ಯ ಜೀವಸೆಲೆಗಳಲ್ಲಿ ಒಂದಾಗಿ ಬೆರೆತುಹೋಗಿದೆ. ಅಷ್ಟೇ ಅಲ್ಲ, ಅದು ದಕ್ಷಿಣ ಭಾರತದಲ್ಲೇ ದೊಡ್ಡ ಸಾಮ್ರಾಜ್ಯವೊಂದರ ಆಶ್ರಯ ತಾಣವಾಗಿದ್ದುದು ಗಮನಾರ್ಹ. ವಿಜಯನಗರವೆಂಬ ವಿಶಾಲ ಸಾಮ್ರಾಜ್ಯದ ರಾಜಧಾನಿಗೆ ಜೀವಸೆಲೆಯಾದ್ದದ್ದು ಈ ತುಂಗಭದ್ರಾ ನದಿಯೇ ಆಗಿದೆ.
ಸುಮಾರು ೨೫೦ ವರ್ಷಗಳ ಸುದೀರ್ಘ ಆಳ್ವಿಕೆಗೆ ಜೀವಜಲವಾಗಿ ಹಂಪೆ-ವಿಜಯನಗರ ರಾಜಧಾನಿ ಮತ್ತು ಅದರ ಸರ್ವತೋಮುಖ ಬೆಳವಣಿಗೆಗೆ, ಅಲ್ಲಿನ ಪರಿಸರಕ್ಕೆ ಜೀವಂತಿಕೆಯನ್ನು ಮೈದುಂಬಿದುದು ಈ ನದಿಯೆಂದರೆ ಅತಿಶಯೋಕ್ತಿಯೇನಲ್ಲ. ವಿಜಯನಗರದ ರಾಜಧಾನಿಯಾದ ಬಳಿಕ ಹಂಪೆ ಪರಿಸರವು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಯಿತು. ನಗರವು ಸುಮಾರು ೨೫ ಚ.ಕಿ.ಮೀ. ವಿಸ್ತಾರವಾಗಿ ಬೆಳೆಯಲು ತುಂಗಭದ್ರಾ ನದಿಪರಿಸರವೇ ಕಾರಣ. ಇಂದಿನ ಶಿವಮೊಗ್ಗ, ಹರಿಹರ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ಕೊಪ್ಪಳ, ರಾಯಚೂರು ಮುಂತಾದ ನಗರಗಳು ವಿಸ್ತಾರಗೊಂಡಿರುವುದಕ್ಕೆ ಈ ನದಿಯೇ ಮುಖ್ಯ ಆಧಾರವಾಗಿದೆ.
ವಿಜಯನಗರ ಕಾಲದಲ್ಲಿ ಮಳೆನೀರನ್ನು, ನದಿ-ಹಳ್ಳ-ಕೊಳ್ಳಗಳನ್ನು ಅತ್ಯಂತ ವ್ಯವಸ್ಥಿತವಾದ ಮತ್ತು ಸರಳ ಮಾದರಿಯ ಹಾಗೂ ಪರಿಸರಸ್ನೇಹಿಯಾದ ವಿಧಾನ ಮತ್ತು ಪರಿಕರಗಳ ಮೂಲಕ ಸಂಗ್ರಹಿಸಿ ಸಂರಕ್ಷಿಸಿ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಂಡಿದ್ದುದು ಗಮನಿಸಬೇಕಾದ ಸಂಗತಿ. ಇದಕ್ಕೆ ಸಾಮ್ರಾಜ್ಯದಾದ್ಯಂತ ಅಂದು ನಿರ್ಮಾಣವಾದ ಅಣೆಕಟ್ಟೆ, ಕಾಲುವೆ ಮತ್ತು ಸಾವಿರಾರು ಕೆರೆಗಳು ಇಂದಿಗೂ ಜೀವಂತ ಸಾಕ್ಷ್ಯಗಳಾಗಿವೆ. ವರ್ಷಪೂರ್ತಿ ತುಂಬಿ ಹರಿಯುತ್ತಿದ್ದ ನದಿ ಮತ್ತು ಅವುಗಳ ಪ್ರವಾಹಗಳನ್ನು ತಡೆಯುವ, ಇಲ್ಲವೆ ತಗ್ಗಿಸುವ ಪ್ರಯತ್ನಕ್ಕೂ ಕೈಹಾಕಿದ್ದರು. ಕುಡಿಯಲು ಮಾತ್ರವಲ್ಲದೆ ಕೃಷಿ ಬಳಕೆಗೂ ನೆರವಾಗುವಂತೆ ವ್ಯವಸ್ಥೆಗೊಳಿಸಿದ್ದರು. ವಿಜಯನಗರವು ತನ್ನ ಸಾಮ್ರಾಜ್ಯದ ವಿಸ್ತಾರವನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿದ ಹಿನ್ನೆಲೆಯಲ್ಲಿ ಅದರ ವ್ಯಾಪ್ತಿಯೊಳಗೆ ಬರುವ ಅನೇಕ ನದಿಗಳು, ಹಳ್ಳ-ಕೊಳ್ಳಗಳಿಗೆ ಅಣೆಕಟ್ಟೆ, ಕೆರೆಕಟ್ಟೆಗಳನ್ನು ಕಟ್ಟುವ ಮೂಲಕ ನೀರಿನ ಸದ್ಭಳಕೆಗೆ ಹೆಚ್ಚು ಒತ್ತು ನೀಡಿದ್ದರು. ಕೃಷ್ಣಾ, ತುಂಗಭದ್ರಾ, ಕಾವೇರಿ ಮೊದಲಾದ ನದಿ, ಹಳ್ಳಕೊಳ್ಳಗಳಿಗೆ ಅಣೆಕಟ್ಟೆಗಳನ್ನು ಕಟ್ಟುವ, ಕಾಲುವೆಗಳನ್ನು ತೋಡುವ ಮೂಲಕ ಕೃಷಿಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಅದರಲ್ಲೂ ರಾಜಧಾನಿ ಹಂಪೆ-ವಿಜಯನಗರದ ಮಗ್ಗುಲಲ್ಲಿ ಹರಿಯುವ ತುಂಗಭದ್ರಾ ನದಿ ಮತ್ತು ಅದರ ನೀರನ್ನು ಅತ್ಯಂತ ಉತ್ಕೃಷ್ಟ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಂಡಿರುವುದು ಗಮನೀಯ ಸಂಗತಿ. ಇದಕ್ಕೆ ವಿಸ್ತಾರವಾಗಿ ಬೆಳೆಯುತ್ತಿದ್ದ ರಾಜಧಾನಿ, ಅದರ ನಗರೀಕರಣ, ಜನಸಂಖ್ಯಾ ಸಾಂದ್ರತೆ, ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆಯೂ ಮುಖ್ಯವಾಗಿದ್ದಿತು. ಈ ಹಿನ್ನೆಲೆಯಲ್ಲಿ ತುಂಗಭದ್ರೆಗೆ ಅಡ್ಡಲಾಗಿ ಅನೇಕ ಅಣೆಕಟ್ಟುಗಳನ್ನು ಈ ಅವಧಿಯಲ್ಲಿ ಕಟ್ಟಿ, ಕಾಲುವೆಗಳನ್ನು ತೋಡಿಸಿ, ಕೃಷಿಯ ಜೊತೆಗೆ ನಗರಕ್ಕೂ ಅನುಕೂಲ ಕಲ್ಪಿಸಿದ್ದುದು ಗಮನಾರ್ಹ. ಇದಕ್ಕೆ ಅವರು ಬಳಸಿದ ಸರಳ ಮತ್ತು ಪರಿಸರಸ್ನೇಹಿ ತಂತ್ರಜ್ಞಾನಗಳು ಅತಿ ಮುಖ್ಯವಾಗಿವೆ. ಇಂದಿನ ಆಧುನಿಕ ಯುಗದಲ್ಲಿ ನದಿಗಳನ್ನು ಬಳಸಿಕೊಳ್ಳುವ ಕ್ರಮಕ್ಕೂ, ಹಿಂದಿನವರ ವಿಧಾನಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇಂದು ಕಟ್ಟಲಾದ ಅಣೆಕಟ್ಟೆಗಳು ನದಿಯನ್ನು ಹರಿಯಗೊಡದೆ, ನದಿಪಾತ್ರವನ್ನೇ ಮುಚ್ಚಿಹಾಕುವ, ನದಿಮುಖಜ ಪರಿಸರವನ್ನೇ ನಾಶಮಾಡುವತ್ತ ಸಾಗಿವೆ. ವರ್ಷಪೂರ್ತಿ ಹರಿಯುತ್ತಿದ್ದ ನದಿಗಳು ಈ ಆಧುನಿಕ ಅಣೆಕಟ್ಟೆಗಳಿಂದ ಬೇಸಿಗೆಯಲ್ಲಿ ಬರಿದಾಗಿ ಒಣಗಿ ಅಲ್ಲಿನ ಸಸ್ಯ, ಪ್ರಾಣಿ ಸಂಕುಲವನ್ನೇ ವಿನಾಶಕ್ಕೆ ದೂಡಿವೆ. ಆದರೆ ಹಿಂದಿನವರ ಜಾಣ್ಮೆ ಎಲ್ಲವನ್ನೂ ಆಪೋಷನ ಮಾಡುವುದಲ್ಲ. ತನಗೆಷ್ಟು ಬೇಕೆಂಬುದನ್ನು ಅರಿತು ಇತರರ ಅಗತ್ಯವನ್ನೂ ಚಾಚೂತಪ್ಪದೆ ಪಾಲಿಸುವಂತಿತ್ತು. ಅದು ತಾನು ಬದುಕಿ, ಇತರರ ಬದುಕಿಗೂ ನೆರವಾಗುವಂತಿದ್ದುದೇ ಆಗಿತ್ತು. ಇದಕ್ಕೆ ಅಂದಿನ ನೀರಿನ ಬಳಕೆಯ ಕ್ರಮ, ವಿಧಾನಗಳು ಅನುಸರಣೀಯ.
ತುಂಗಭದ್ರಾ ನದಿಗೆ ಕಟ್ಟಲಾದ ಅಂತಹ ಅಣೆಕಟ್ಟೆಗಳಲ್ಲಿ ವಲ್ಲಭಾಪುರ ಅಣೆಕಟ್ಟು ಅತ್ಯಂತ ಮಹತ್ವದ್ದು. ಇದು ಇಂದಿನ ತುಂಗಭದ್ರಾ ಅಣೆಕಟ್ಟೆಯಲ್ಲಿ ಲೀನವಾಗಿದೆ. ಅದು ಅಂದಿನ ಮಟ್ಟಿಗೆ ದೊಡ್ಡ ನೀರಿನ ಸಂಗ್ರಹಾಗಾರವೇ. ಈ ಅಣೆಕಟ್ಟೆಯೂ ಇಂದಿನಂತೆ ಬಲ ಮತ್ತು ಎಡದಂಡೆಗಳಲ್ಲಿ ಬಸವಣ್ಣ ಮತ್ತು ಕೋರಗಲ್ ಕಾಲುವೆಗಳನ್ನು ಹೊಂದುವ ಮೂಲಕ ಎರಡೂ ದಂಡೆಗಳ ಜನರಿಗೆ ನೆರವಾಗಿದ್ದವು. ಬಲದಂಡೆಯ ಮೇಲಿನ ಬಸವಣ್ಣ ಕಾಲುವೆ ಇಂದಿಗೂ ಹೊಸಪೇಟೆಯನ್ನು ಸೀಳಿಕೊಂಡು ಕಮಲಾಪುರ ಕೆರೆಯಲ್ಲಿ ಕೊನೆಗೊಳ್ಳುತ್ತದೆ. ಆ ಮೂಲಕ ಕಮಲಾಪುರ ಕೆರೆಯನ್ನು ವರ್ಷಪೂರ್ತಿ ಜೀವಂತವಾಗಿಟ್ಟಿತ್ತು. ಆ ಮೂಲಕ ವಿಜಯನಗರ ಪಟ್ಟಣಕ್ಕೂ ನೆರವಾಗಿತ್ತು. ಈ ಅಣೆಕಟ್ಟೆ ಮತ್ತು ಕಾಲುವೆಗಳನ್ನು ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿಸಲಾಗಿತ್ತೆಂಬುದು ದಾಖಲೆಗಳಿಂದ ತಿಳಿಯುತ್ತದೆ. ಆದರೆ ಅಲ್ಲಿಯವರೆಗೆ ಮಳೆಯಾಶ್ರಿತ ಕಮಲಾಪುರ ಕೆರೆ ಪಟ್ಟಣದ ಜನರು ಮತ್ತು ಕೃಷಿಗೆ ಸಾಕಾಗುತ್ತಿತ್ತು. ಆದರೆ ಕೃಷ್ಣದೇವರಾಯನ ಕಾಲದ ಹೊತ್ತಿಗೆ ವಿಜಯನಗರ ಪಟ್ಟಣದ ವಿಸ್ತೀರ್ಣ ಮತ್ತು ಜನಸಾಂದ್ರತೆಯಿಂದ ನೀರಿನ ಕೊರತೆ ಕಂಡುಬಂದು ತುಂಗಭದ್ರೆಗೆ ಅಣೆಕಟ್ಟೆ ಕಟ್ಟುವ ಮತ್ತು ಕಾಲುವೆಗಳನ್ನು ತೋಡುವ ಪ್ರಮೇಯ ಬಂದದ್ದನ್ನು ಗಮನಿಸಬಹುದು. ಆದರೆ ಮುಖ್ಯ ಪಟ್ಟಣದ ಹೊರಭಾಗದ ಉಪಪಟ್ಟಣಗಳಾಗಿ ವಿಸ್ತಾರಗೊಂಡ ವಿರೂಪಾಕ್ಷಪುರ, ಕೃಷ್ಣಾಪುರ, ಅಚ್ಯುತಾಪುರ ಮತ್ತು ವಿಠಲಾಪುರಗಳಿಗೆ ಬುಕ್ಕರಾಯನ ಕಾಲದಲ್ಲಿ ನಿರ್ಮಾಣವಾದ ತುರ್ತು ಅಣೆಕಟ್ಟೆಯು ನೀರನ್ನು ಒದಗಿಸಲು ಅನುವಾಗಿದ್ದುದು ಗಮನಾರ್ಹ. ಕಮಲಾಪುರ ಕೆರೆಯು ತುಂಗಭದ್ರೆಯಿಂದ ಕಾಲುವೆಗಳ ಮೂಲಕ ನೀರನ್ನು ಪಡೆಯುವ ಮೂಲಕ ವಿಜಯನಗರ ಪಟ್ಟಣ(ಇಂದಿನ ಹಾಳುಪಟ್ಟಣ)ದ ಜೀವನಾಡಿಯಾಗಿತ್ತು. ಆದರೆ ತುಂಗಭದ್ರಾ ನದಿಗೆ ಕಟ್ಟಲಾದ ವಲ್ಲಭಾಪುರ ಅಣೆಕಟ್ಟೆಯು ನದಿಯ ಇಡೀ ನೀರನ್ನು ಕೂಡಿಹಾಕಿಕೊಳ್ಳುತ್ತಿರಲಿಲ್ಲ.
ಇದರ ವಿಶೇಷತೆಯೆಂದರೆ ಕಾಲುವೆಗೆ ಸಾಕಾಗುವ ಮತ್ತು ಸುರಕ್ಷಿತವಾಗಿ ಹರಿಯುವಷ್ಟು ಮಾತ್ರವಾಗಿತ್ತು. ಅಂತೆಯೇ ಇದೇ ರೀತಿಯ ಅನೇಕ ಅಣೆಕಟ್ಟೆಗಳನ್ನು ಕೃಷಿ ಮತ್ತಿತರ ಚಟುವಟಿಕೆಗಳಿಗೆ ತುಂಗಭದ್ರಾ ನದಿಯುದ್ದಕ್ಕೂ ನಿರ್ಮಿಸಲಾಗಿತ್ತು. ಸಿ.ಟಿ.ಎಂ. ಕೊಟ್ರಯ್ಯ ಅವರ ಪ್ರಕಾರ ನದಿಯ ಎಡ ಮತ್ತು ಬಲಭಾಗದಲ್ಲಿ ೧೮ಕ್ಕೂ ಹೆಚ್ಚು ಅಣೆಕಟ್ಟೆಗಳನ್ನು ವಿಜಯನಗರ ಅರಸರು ನಿರ್ಮಿಸಿದ್ದರು. ಅವುಗಳೆಂದರೆ ವಲ್ಲಭಾಪುರವಲ್ಲದೆ ರಾಮಣ್ಣ, ಕುರುದಗಡ್ಡ್ಡೆ(ಹೊಸಕೋಟೆ), ಹೊಸೂರು, ತುರ್ತು ಅಣೆಕಟ್ಟು, ರಾಮಸಾಗರ, ಸಣಾಪುರ, ಹಿರೇಜಂತಕಲ್ಲು, ಕಂಪಲಿ, ಚಿಕ್ಕಜಂತಕಲ್ಲು, ಕೆಂಚನಗುಡ್ಡ, ದೇಶನೂರು ಅಣೆಕಟ್ಟೆಗಳು. ವಲ್ಲಭಾಪುರ ಅಣೆಕಟ್ಟೆಯ ಮೇಲ್ಭಾಗದಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿತ್ತು. ಅದು ಈ ಭಾಗದಲ್ಲಿ ಬರುವ ಮೊದಲ ಅಣೆಕಟ್ಟೆಯಾದುದರಿಂದ ಅದು ಮೊದಲಕಟ್ಟೆಯಾಗಿತ್ತು.
ಅದು ಇಂದಿಗೂ ಮದಲಗಟ್ಟವಾಗಿ ಹೆಸರಾಗಿದೆ. ವಿಜಯನಗರ ಕಾಲದಲ್ಲಿ ಕಟ್ಟಲಾದ ಅಣೆಕಟ್ಟೆಗಳಲ್ಲಿ ಅತ್ಯಂತ ಹಳೆಯದು ತುರ್ತು ಅಣೆಕಟ್ಟು. ಇದನ್ನು ಬುಕ್ಕರಾಯನ ಕಾಲದಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗುತ್ತದೆ. ಅಲ್ಲದೆ ಶಾಸನವೊಂದು ಚಿಂತಾಯಕ ದೇವಣ್ಣನು ಈ ಅಣೆಕಟ್ಟೆಯನ್ನು ಮತ್ತು ಬೊಮ್ಮೋಜ ಎಂಬುವನು ತುರ್ತು ಕಾಲುವೆ(ಶಾಸನಗಳಲ್ಲಿ ಹಿರಿಯ ಕಾಲುವೆ)ಯನ್ನು ಕಟ್ಟಿಸಿದರೆಂದು ಹೇಳಿದೆ. ಈ ಅಣೆಕಟ್ಟು ಹಂಪಿಯಿಂದ ಪಶ್ಚಿಮಕ್ಕೆ ಸುಮಾರು ಎರಡು ಕಿ.ಮೀ. ದೂರದಲ್ಲಿದೆ.
ಮುಂದುವರಿಯುವುದು . . .