
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
ಗಿಡ ಮರದ ಸಸಿ. ಮರ ಬೆಳೆದ ಗಿಡ. ಗಿಡ ಬಾಗುವುದು, ಮುಖ ಬದಲಿಸಬಹುದು. ಮರ ಬಾಗದು,ಮುಖ ಬದಲಿಸಲಾಗದು. ಬಗ್ಗಿಸಿದರೆ ಮುರಿದು ಬೀಳುವುದು! ತಳಪಾಯ ಹಂತದಲಿ ಅದ ಬದಲಿಸಬಹುದಲ್ಲದೇ ಕಟ್ಟಡ ಕಟ್ಟಿದಮೇಲಲ್ಲ! ಸಿಮೆಂಟ್, ಅಂಟು ಹಸಿ ಇದ್ದಾಗ ತಿದ್ದ ಬಹುದು,ಕೀಳಬಹುದು, ಒಣಗಿದರಾಗದು!ಎಳೆಯದ್ದು ಬಾಗುವುದು, ಕಲಿಯುವುದು, ತಿದ್ದಿಕೊಳ್ಳುವುದು! ಮಕ್ಕಳ ದೇಹ ಮೃದು. ಬಾಗಿಸಿದಂತೆ ಬಾಗುವುದು.ದೈವಗುರುಹಿರಿ ಪೋಷಕರಿಗೆ ನಮಿಸುವುದನು, ಯೋಗ ಭಾರತೀಯ ನಾಟ್ಯವನು ಕಲಿಸಿ! ಕಂಠ ಮಧುರ. ಸಂಗೀತ ಸಂಸ್ಕೃತ ಕಲಿಸಿ! ಮನಸ್ಸು ಹಾಲಿನಂತೆ ಶುದ್ಧ! ಬುದ್ಧಿ ಕನ್ನಡಿಯಂತೆ ಸ್ವಚ್ಛ! ಕಲಿಸಿದ್ದನ್ನು ಕಲಿಯುತ್ತೆ. ಉತ್ತಮ ಸಂಸ್ಕಾರವನ್ನೇ ಕಲಿಸಿ! ಬರಿ ಮುದ್ದು ಮಾಡಿದರೆ, ಸಂಸ್ಕಾರ ಕಲಿಸದಿರೆ ಮುಂದೆ ಕಲಿಸಲಾರಿರಿ, ನಿರೀಕ್ಷಿಸಲಾಗದು! ಸಂಸ್ಕಾರ ಪಡೆಯದ ಮಕ್ಕಳು ಇಕ್ಕಳ! ಮುಂದೆ ಅವರೇ ಶತ್ರುಗಳು ಪ್ರಾಣಘಾತಕರು! ಮಗುವನು ಐದು ವರ್ಷ ಲಾಲಿಸಿ. ಮುಂದೆ ಹತ್ತು ವರ್ಷ ಹೆದರಿಸಿ ಹೊಡೆದು ಸಂಸ್ಕಾರ ವಿದ್ಯೆ ಬುದ್ಧಿ ಕಲಿಸಿ! ಕಲಿಸಿದ ನಂತರ , ಮಗುವಿನ ಹದಿನಾರು ವರ್ಷಗಳ ಬಳಿಕ ಮಗುವನು ಮಿತ್ರನಂತೆ ಕಾಣಿ!
ಒಳ್ಳೆಯ ಸಂಸ್ಕಾರ ಕಲಿಸೋಣ, ಗುರು ಹಿರಿ ಪೋಷಕರೆನಿಸೋಣ!!